ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತೆ ಸವರ್ಣೀಯರ ಸಮಸ್ಯೆ

Last Updated 2 ಮೇ 2016, 19:54 IST
ಅಕ್ಷರ ಗಾತ್ರ

ಅಸ್ಪೃಶ್ಯತೆಯಿಂದ ಆಂತರಿಕ ನಾಗರಿಕ ಯುದ್ಧ ಉಂಟಾಗಬಹುದೆಂಬ ಗಾಂಧೀಜಿಯವರ ಆತಂಕ ನಿಜವಾಗುತ್ತಿರುವುದನ್ನು ದಿನಬೆಳಗಾದರೆ ಕಾಣುತ್ತಿದ್ದೇವೆ

‘ಅಸ್ಪೃಶ್ಯತೆಯನ್ನು ಯಾರು ಆಚರಿಸುತ್ತಾರೋ ಅದು ಅವರ ಸಮಸ್ಯೆ ಎಂಬ ದೃಷ್ಟಿಯಿಂದ ನೋಡಿದಾಗ, ಅಸ್ಪೃಶ್ಯತೆ ಆಚರಿಸುವವರನ್ನು ಸಂವೇದನಾಶೀಲರನ್ನಾಗಿ ಮಾಡುವ ಕಾರ್ಯಕ್ರಮ ಹಾಕಿಕೊಳ್ಳಲು ಸಾಧ್ಯ’ ಎಂಬ ಮಾತನ್ನು ಸಿಗರನಹಳ್ಳಿಯಲ್ಲಿ ಇತ್ತೀಚೆಗೆ ಸವರ್ಣೀಯರು ಮತ್ತು ದಲಿತರ ಮಧ್ಯೆ ನಡೆದ ಘರ್ಷಣೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಹೇಳಿದ್ದಾರೆ (ಪ್ರ.ವಾ. ಏ. 23).

ಇದೇ ರೀತಿಯ ಅಭಿಪ್ರಾಯವನ್ನು ಗಾಂಧೀಜಿ 84 ವರ್ಷಗಳ ಹಿಂದೆ 1932ರಲ್ಲಿ ಲಂಡನ್‌ನಲ್ಲಿ ನಡೆದ ಎರಡನೆಯ ದುಂಡುಮೇಜಿನ ಪರಿಷತ್‌ನಲ್ಲಿ ಹೇಳಿದ್ದರು.

ಅಸ್ಪೃಶ್ಯತೆಯನ್ನು ಆಚರಿಸುವ ಪ್ರತಿ ಸಮುದಾಯದಲ್ಲೂ ಸಂವೇದನಾಶೀಲ ವ್ಯಕ್ತಿಗಳು ಇರುತ್ತಾರೆ. ಅಂಥ ವ್ಯಕ್ತಿಗಳ ಪ್ರಯತ್ನದಿಂದಾಗಿ ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕೆಂಬುದೇ ಗಾಂಧೀಜಿಯವರ ಬಲವಾದ ಅಭಿಪ್ರಾಯವಾಗಿತ್ತು. ಅಲ್ಲಿ ಗಾಂಧೀಜಿ ಈ ರೀತಿ ಹೇಳಿದ್ದರು.

‘ಈ ದುಂಡುಮೇಜಿನ ಪರಿಷತ್‌ಗೆ ಮತ್ತು ಇಡೀ ಜಗತ್ತಿಗೆ ಗೊತ್ತಾಗಬೇಕಾದ ಸಂಗತಿ ಏನೆಂದರೆ, ಅಸ್ಪೃಶ್ಯತೆ ಅಸ್ಪೃಶ್ಯರಿಗೆ ನಾಚಿಕೆ ಉಂಟುಮಾಡುವ ಸಂಗತಿಯಾಗಿರದೆ ಸುಧಾರಣೆಯ ಪರವಾಗಿರುವ ಹಿಂದೂ ಸಮಾಜ ಸುಧಾರಕರಿಗೆ ನಾಚಿಕೆಯ ವಿಷಯವಾಗಿದೆ.

ಆದ್ದರಿಂದ ಅಸ್ಪೃಶ್ಯತೆಯ ಈ ಕಳಂಕವನ್ನು ಹಿಂದೂ ಧರ್ಮದಿಂದ ತೊಡೆದುಹಾಕಲು ಸುಧಾರಣೆಯ ಪ್ರತಿಪಾದಕರು ಶಪಥ ಮಾಡಿದ್ದಾರೆ. ಅಸ್ಪೃಶ್ಯತೆ ಜೀವಂತವಾಗಿರುವುದಕ್ಕಿಂತಲೂ ಹಿಂದೂ ಧರ್ಮ ಸತ್ತುಹೋಗುವುದನ್ನು ಬಯಸುತ್ತೇನೆ. ಅಸ್ಪೃಶ್ಯರು ಮುಸ್ಲಿಂ ಧರ್ಮಕ್ಕಾಗಲಿ ಅಥವಾ ಕ್ರಿಶ್ಚಿಯನ್ ಧರ್ಮಕ್ಕಾಗಲಿ ಮತಾಂತರಗೊಳ್ಳುವುದಕ್ಕೆ ನನ್ನ ಅಭ್ಯಂತರವಿಲ್ಲ.

ಆದರೆ ದೇಶದಲ್ಲಿ ಉಂಟಾಗುವ ಆಂತರಿಕ ನಾಗರಿಕ ಯುದ್ಧ ಮತ್ತು ಹಿಂದೂ ಧರ್ಮದಲ್ಲಿ ಉಂಟಾಗುವ ಆಘಾತವನ್ನು ಸಹಿಸಲಾರೆ. ಅದರಿಂದ ಹಿಂದೂ ಧರ್ಮಕ್ಕಾಗಲಿ ಅಥವಾ ಶೋಷಿತ ವರ್ಗಕ್ಕಾಗಲಿ ಒಳ್ಳೆಯದಾಗುವುದಿಲ್ಲ’.

ಗಾಂಧೀಜಿಯವರ ಈ ಭಯ ನಿಜವಾಗುತ್ತಿರುವುದನ್ನು ನಾವು ದಿನಬೆಳಗಾದರೆ ಕಾಣುತ್ತಿದ್ದೇವೆ. ಭಾರತದೆಲ್ಲೆಡೆಯಲ್ಲಿ ಜಾತಿ ಸಂಘರ್ಷಗಳಾಗುತ್ತಿವೆ. ಸಿಗರನಹಳ್ಳಿಯಲ್ಲಿ ನಡೆದ ಅಂಥ ಅಮಾನುಷ ಘಟನೆ ಇತ್ತೀಚೆಗಿನ ಉದಾಹರಣೆಯಷ್ಟೆ.

ಯಾರಿಂದಲೂ ಯಾವ ಧರ್ಮವನ್ನೂ ಸಾಯಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಯಾವ ಧರ್ಮವೂ ಪರಿಪೂರ್ಣವಾಗಿಲ್ಲ. ಪರಿಪೂರ್ಣವಾಗಿದ್ದರೆ ಅವುಗಳನ್ನು ಆಚರಿಸುವುದು ಸಾಮಾನ್ಯನಿಗೆ ಕಷ್ಟ ಸಾಧ್ಯವೇ ಸರಿ.

ಆದ್ದರಿಂದ ಧರ್ಮಗಳಲ್ಲಿರಬಹುದಾದ ದೋಷಗಳನ್ನು ಆಯಾ ಧರ್ಮೀಯರು ನಿವಾರಿಸಬೇಕೇ ಹೊರತು ಧರ್ಮವನ್ನೇ ನಾಶ ಮಾಡುವ ವಿಚಾರ ಅಸಾಧ್ಯವಾದುದು. ಆದ್ದರಿಂದಲೇ ಗಾಂಧೀಜಿ ಹಿಂದೂ ಧರ್ಮದಲ್ಲಿಯ ದೋಷಗಳನ್ನು ನಿವಾರಿಸಿ ಅದೊಂದು ಉತ್ಕೃಷ್ಟ ಧರ್ಮವಾಗಬೇಕೆಂದು ಬಯಸಿದ್ದರು.

ಇಸ್ಲಾಂ ಮತ್ತು ಇಸಾಯಿ ಧರ್ಮಗಳು ಅಸ್ಪೃಶ್ಯತೆ  ಆಚರಿಸದೇ ಇರುವಾಗ ಹಿಂದೂ ಧರ್ಮ ಅಸ್ಪೃಶ್ಯತೆ ಆಚರಿಸುವುದೆಂದರೆ ಮನುಷ್ಯತ್ವದಿಂದ ವಿಮುಖವಾದಂತೆ. ಆದ್ದರಿಂದ ಗಾಂಧೀಜಿ ತಮ್ಮ ಜೀವಿತದ ಕೊನೆಯ ದಿನದವರೆಗೂ ಹಿಂದೂ ಧರ್ಮದಲ್ಲಿರಬಹುದಾದ ದೋಷಗಳನ್ನು ನಿವಾರಿಸಲು ಪ್ರಯತ್ನಿಸಿದರು. ಆ ಉದ್ದೇಶಕ್ಕಾಗಿ ಸಹೃದಯಿ ಸವರ್ಣೀಯರನ್ನು ಪ್ರೇರೇಪಿಸಿದರು.

ಗಾಂಧೀಜಿಯವರ ಕರೆಗೆ ಮನ್ನಣೆ ಕೊಟ್ಟು ದೇಶದಲ್ಲಿರುವ ಎಲ್ಲ ದೇವಸ್ಥಾನಗಳು ಮತ್ತು ಸಾರ್ವಜನಿಕ ಸ್ಥಳಗಳು, ಕೆರೆಕುಂಟೆಗಳನ್ನು ಅಸ್ಪೃಶ್ಯರಿಗೆ ತೆರೆಯಲಾಯಿತು. ಗಾಂಧೀಜಿ ಕೈಗೊಂಡಿದ್ದ ಆಮರಣ ಉಪವಾಸದ ಕಾರಣದಿಂದಾಗಿ ಹಿಂದೂ ಧರ್ಮ ತನ್ನನ್ನು ಒಮ್ಮೆಲೇ  ಬದಲಾಯಿಸಿಕೊಂಡಿತು, ಯುಗಧರ್ಮಕ್ಕೆ ಅನುಸಾರವಾಗಿ ತೆರೆದುಕೊಂಡಿತು.

ಅಸ್ಪೃಶ್ಯತೆಯನ್ನು ಹಿಂದೂ ಧರ್ಮದಿಂದ ಹೋಗಲಾಡಿಸಲು ನೂರಾರು ವರ್ಷಗಳೇ ಬೇಕಾಗಿದ್ದವು. ಆದರೆ 63 ವರ್ಷದ ಗಾಂಧೀಜಿಯವರ ಆಮರಣ ಉಪವಾಸದ ತೀರ್ಮಾನ ಸವರ್ಣೀಯ ಹಿಂದೂಗಳಲ್ಲಿ, ಸವರ್ಣೀಯೇತರ ಜನರಲ್ಲಿ ಅಸ್ಪೃಶ್ಯತೆ ವಿನಾಶದ ಜರೂರಿನ ಬಗ್ಗೆ ಜಾಗೃತಿ ಉಂಟುಮಾಡಿತು. ಇದು ಕೇವಲ ಆರು ದಿನ ಐದು ತಾಸಿನ ಉಪವಾಸದ ಅವಧಿಯಲ್ಲಿ ಸಾಧ್ಯವಾಯಿತು. ಅಸ್ಪೃಶ್ಯತೆಯನ್ನು ಬುಡಸಮೇತ ಕಿತ್ತುಹಾಕುವ ಯತ್ನಕ್ಕೆ ನಾಂದಿ ಹಾಡಿತು.

ಪೂನಾ ಒಪ್ಪಂದದ ಸಮಯದಲ್ಲಿ ಡಾ. ಅಂಬೇಡ್ಕರ್‌ ಅವರು ಗಾಂಧೀಜಿಯವರಿಂದ ನಿರ್ದಿಷ್ಟವಾದ ಸಲಹೆಗಳಿಗಾಗಿ ಒತ್ತಾಯಿಸಿದರಾದರೂ ಅದಕ್ಕಾಗಿ ಹಟ ಮಾಡದೆ ಒಪ್ಪಂದಕ್ಕೆ ಸಂಬಂಧಿಸಿದ ಸಲಹೆಗಳನ್ನು ಪರಿಶೀಲಿಸುವುದಾಗಿ ಹೇಳಿದರು.

ಅದೇ ವೇಳೆಗೆ ತಾವು ಹಿಂದೂ ಧರ್ಮೀಯರಿಗೆ ಶರಣಾಗುವುದನ್ನು ನಿರೀಕ್ಷಿಸಕೂಡದೆಂದು ಡಾ. ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದರು. ಆಗ ಘನಶ್ಯಾಮದಾಸ ಬಿರ್ಲಾರವರು ಮಧ್ಯ ಪ್ರವೇಶಿಸುತ್ತಾ, ಹಿಂದೂಗಳೇ ಅವರಿಗೆ ಶರಣಾಗತರಾಗಲು ಬಯಸುತ್ತಿದ್ದಾರೆ ಎಂದು ಹೇಳಿದರು.

ಗಾಂಧೀಜಿಯವರ ಉಪವಾಸ ಮುಗಿಯುವ ಹೊತ್ತಿಗೆ ಸಹೃದಯಿ ಮತ್ತು ಸಂವೇದನಾಶೀಲ ಹಿಂದೂಗಳಲ್ಲಿ ಮನಪರಿವರ್ತನೆಯಾಗಿ, ಅಸ್ಪೃಶ್ಯತೆ ಆಚರಿಸುವುದು ಅಮಾನವೀಯ, ಅಸ್ಪೃಶ್ಯತೆಯ ಸಮಸ್ಯೆ ನಿಜವಾಗಿ ಇರುವುದು ಅಸ್ಪೃಶ್ಯರದಲ್ಲ ಸವರ್ಣೀಯ ಹಿಂದೂಗಳದೇ ಎಂಬ ಭಾವನೆ ಅವರಲ್ಲಿ ಮೂಡಿತು.

ಶಾಸಕಾಂಗ ಮಾಡಲಾರದ ಜಾದೂವನ್ನು ಗಾಂಧೀಜಿಯವರ ಆತ್ಮಕ್ಲೇಶದ ತೀರ್ಮಾನ ಮಾಡಿತು. ತತ್‌ಪರಿಣಾಮವಾಗಿ ಇಂದು ಸಂವೇದನಾಶೀಲ ಸರ್ವಣೀಯರಲ್ಲಿ ಅಸ್ಪೃಶ್ಯತಾಚರಣೆ ಇಲ್ಲವೆಂದೇ ಹೇಳಬಹುದು. ಒಂದುವೇಳೆ ಅದು ಇನ್ನೂ ಅಲ್ಲಲ್ಲಿ ಉಳಿದಿದ್ದರೆ ದೇವನೂರರು ಹೇಳುವಂತೆ ಅಸ್ಪೃಶ್ಯತೆ ಆಚರಿಸುವ ವ್ಯಕ್ತಿಗಳನ್ನು ಸಂವೇದನಾಶೀಲರನ್ನಾಗಿ ಮಾಡುವ ಕಾರ್ಯಕ್ರಮ ಹಾಕಿಕೊಳ್ಳಬೇಕು.

ಸಿಗರನಹಳ್ಳಿಯಲ್ಲಿರುವ ಸ್ವಸಹಾಯ ಸಂಘಗಳ ಎಲ್ಲ ಕೋಮಿನ ಮಹಿಳೆಯರೆಲ್ಲರೂ ಸೇರಿ ಪ್ರಯತ್ನಿಸಿದಲ್ಲಿ ಆ ಹಳ್ಳಿಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಹೂ ಬಿಡಿಸಿದಂತೆ ಬಗೆಹರಿಸಬಹುದೆಂದು ಕವಿ ಸುಬ್ಬು ಹೊಲೆಯಾರ್ ಅವರು ಹೇಳಿರುವ ಮಾತು ಇದೇ ಧಾಟಿಯಲ್ಲಿದೆ.

1932ರ ಸೆಪ್ಟೆಂಬರ್ 17ರಂದು ಮುಂಬೈಯಲ್ಲಿದ್ದ ಹಿಂದೂ ಮಹಿಳೆಯರು ಕಮಲಾ ನೆಹರೂ ಅವರಂಥವರನ್ನು ಒಳಗೊಂಡ ಸಭೆ ನಡೆಸಿ, ಹಿಂದೂ ಧರ್ಮದಲ್ಲಿಯ ಅಸ್ಪೃಶ್ಯತೆಯನ್ನು ಆಮೂಲಾಗ್ರವಾಗಿ ಕಿತ್ತುಹಾಕುವುದಾಗಿ ಘೋಷಿಸಿದ್ದು ಜ್ಞಾಪಕಕ್ಕೆ ಬರುತ್ತದೆ.

ಗಾಂಧೀಜಿ ಆಮರಣ ಉಪವಾಸ ಪ್ರಾರಂಭಿಸಿದಾಗ ಪತ್ರಿಕಾ ಸಂದರ್ಶನ ಕೊಡುತ್ತಾ ‘ಅಸ್ಪೃಶ್ಯತೆ ವಿರುದ್ಧದ ನನ್ನ ಹೋರಾಟ ಮಾನವ ಧರ್ಮದಲ್ಲಿರುವ ಕೊಳೆಯ ವಿರುದ್ಧ ಮತ್ತು ಅಸ್ಪೃಶ್ಯತಾ ನಿವಾರಣೆಯಾದ ನಂತರ ಸ್ವರಾಜ್ಯ’ ಎಂದಿದ್ದರು.

ಆದ್ದರಿಂದ ಮನುಷ್ಯನ ಭಾವನೆ ಮತ್ತು ವಿಚಾರಗಳಲ್ಲಿ ಇರುವ ಅಸ್ಪೃಶ್ಯತೆಯ ದುರ್ಗಂಧವನ್ನು ಹೋಗಲಾಡಿಸಲು ಸಾಮಾಜಿಕ ಪ್ರಯತ್ನವೇ ಆಗಬೇಕು. ದ್ವೇಷ, ಅಸೂಯೆ ಬದಲಿಗೆ ಸ್ನೇಹ, ಪ್ರೇಮದ ವಾತಾವರಣ ಎಲ್ಲೆಲ್ಲೂ ಹರಡಬೇಕು. ಅಂಬೇಡ್ಕರ್‌ ಮತ್ತು ಗಾಂಧೀಜಿಯವರ ಅಸ್ಪೃಶ್ಯತಾ ನಿವಾರಣೆ ಮಾರ್ಗಗಳು ಭಿನ್ನವಾಗಿದ್ದಿರಬಹುದು. ಆದರೆ ಅವರ ಗುರಿ ಒಂದೇ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT