ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಮಿತೆ ಪ್ರಶ್ನೆ ಮುಂದೆ ಮಾಡಿ...

Last Updated 8 ಅಕ್ಟೋಬರ್ 2014, 20:09 IST
ಅಕ್ಷರ ಗಾತ್ರ

ಮುಂಬೈ: ದೇಶದ ಆರ್ಥಿಕ ರಾಜಧಾನಿ­ ಎ­ನಿಸಿದ ಮುಂಬೈ ಮಹಾನಗರದ ಮತ­ದಾ­ರರು ಗಲಿಬಿಲಿಗೆ ಒಳಗಾ­ಗಿ­ದ್ದಾರೆ. ಮುಖಂಡರ ಅಡ್ಡಾದಿಡ್ಡಿ ಮಾತು ಅವರನ್ನು ಗೊಂದಲಕ್ಕೆ ದೂಡಿದೆ. ಹಿಂದುತ್ವದ ತತ್ವದಡಿ ಒಂದಾಗಿದ್ದವರು ದಿಢೀರನೆ ಬೇರೆಯಾಗಿ ಪರಸ್ಪರ ವಾಗ್ದಾಳಿಗೆ ಇಳಿದಿ­ರುವುದು ಅವರನ್ನು ತಬ್ಬಿಬ್ಬುಗೊಳಿಸಿದೆ.

ಕಾಂಗ್ರೆಸ್‌– ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಮೈತ್ರಿಕೂಟದ ಸತತ ಮೂರು ಅವಧಿಗಳ ಆಡಳಿತ ಜನರಲ್ಲಿ ರೇಜಿಗೆ ಮೂಡಿಸಿದೆ. ‘ಮುಂಬೈಗೆ ಅವರಿಂದ ಏನೂ ಒಳಿತಾಗಿಲ್ಲ’ ಎನ್ನುವ ಭಾವನೆ ಹೆಚ್ಚಿನವರಲ್ಲಿದೆ. ಈಗ ಆ ಪಕ್ಷಗಳೂ ಬೇರೆಯಾಗಿವೆ.
ಪರ್ಯಾಯ ಎಂದು ಭಾವಿಸಿದ್ದ ಬಿಜೆಪಿ– ಶಿವಸೇನಾ ಮೈತ್ರಿ­ಕೂಟ, 25 ವರ್ಷಗಳ ಸ್ನೇಹ ತುಂಡರಿಸಿಕೊಂಡಿದೆ.

ಕೂಟಭಂಗ ವಿಶೇಷವಾಗಿ ಬಿಜೆಪಿ ಹಾಗೂ ಸೇನಾ ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿದೆ. ಜನರನ್ನು ಮತಗಟ್ಟೆವರೆಗೂ ಕರೆತರು­ವಂಥ ಕಾರ್ಯ­ಕರ್ತರು ಬೇಸರಕ್ಕೆ ಒಳಗಾ-­ಗಿದ್ದರೆ, ಮತದಾರರ ಮನಸು ಗೊಂದ­ಲಕ್ಕೆ ಸಿಲುಕಿದೆ. ಬಿಜೆಪಿಯ ಮಾತಿಗೆ ಓಗೊಡಬೇಕೊ ಅಥವಾ ‘ಆ ಮಾತಿನ ಹಿಂದೆ ರಾಜ್ಯವನ್ನು ಒಡೆಯುವ ಹುನ್ನಾರ ಅಡಗಿದೆ’ ಎಂಬ ಶಿವಸೇನಾ ಟೀಕೆಗೆ ಕಿವಿಗೊಡಬೇಕೊ ಎಂಬುದು ತಿಳಿಯದೆ ಕೆಲವರಾದರೂ ವಿಚಲಿತರಾ­ಗಿರುವುದು ದಿಟ.

ಶಿವಸೇನಾ ಚಳವಳಿಗೆ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಸಂಘಟನೆಯ ಶಿಸ್ತು ಎಂದೂ ಇರಲಿಲ್ಲ ಎಂಬುದು ಅದು ನಡೆದುಬಂದ ಹಾದಿಯತ್ತ ನೋಡಿದ ಯಾರಿಗಾದರೂ ಮನವರಿಕೆ­ಯಾಗು­ತ್ತದೆ. ದಕ್ಷಿಣ ಭಾರತೀಯರನ್ನು ಮುಂಬೈ ಮಣ್ಣಿನ ಮಕ್ಕಳ ‘ಶತ್ರು’ಗಳೆಂದು ಬಿಂಬಿಸಿ ಸಂಘಟನೆ ಬಲಪಡಿಸಿದ್ದರು ಬಾಳ ಠಾಕ್ರೆ. 

ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಿಂದ ಬಂದಿರುವ ಜನರನ್ನು ಶತ್ರುಗಳಂತೆ ತೋರಿಸಿ ಮರಾಠಿಗರಲ್ಲಿ ಅಭದ್ರತೆ, ಅಸೂಯೆ ಮೂಡಿಸಿದ್ದರು ಠಾಕ್ರೆ. ಅದೇ ವೇಳೆ ದಕ್ಷಿಣ ಭಾರತೀಯ­ರಲ್ಲಿ ಭೀತಿ ಹುಟ್ಟಿಸಿದ್ದರು.

ಆದರೆ, ಇಲ್ಲಿನ ಜನಸಂಖ್ಯೆಯಲ್ಲಿ ಶೇ 19ರಷ್ಟಿರುವ ಗುಜರಾತಿಗರ ತಂಟೆಗೆ ಹೋಗಿ­ರಲಿಲ್ಲ. ಮುಂಬೈ ವ್ಯಾಪಾರಿ ಜಗತ್ತಿನ ಮೇಲೆ ಸಂಪೂರ್ಣ ಹಿಡಿತ ಹೊಂದಿರುವ ಅವರ ಬಗ್ಗೆ ಬಾಳ ಠಾಕ್ರೆ ಮೃದು ಧೋರಣೆ ತಳೆದಿದ್ದರು ಎಂಬ ಮಾತಿದೆ. ಈಗ ಅವರಿಲ್ಲ. ಅವರ ಪುತ್ರ ಉದ್ಧವ್‌ ಠಾಕ್ರೆ ಸೇನಾ ಸಾರಥ್ಯ ವಹಿಸಿ­ಕೊಂಡಿ­ದ್ದಾರೆ. ಬಿಜೆಪಿ ಜತೆ ಮೈತ್ರಿ ತುಂಡ­ರಿಸಿ­­ರುವುದು ಮತ್ತು ಆ ಪಕ್ಷದ ಮೇಲೆ ಗುಜರಾತಿನವರಾದ ನರೇಂದ್ರ ಮೋದಿ ಸಂಪೂರ್ಣ ಹಿಡಿತ ಸಾಧಿಸಿ­ರು­ವು­ದ­ರಿಂದಲೋ ಏನೊ ಸೇನಾ ಟೀಕಾಸ್ತ್ರ­ಗಳು ಈಗ ಗುಜರಾತಿಗರ ಕಡೆ ತಿರುಗಿವೆ.

ಮೊದಲ ಶತ್ರು: ಶಿವಸೇನಾ ಮುಖಂಡರ ಟೀಕಾ­ಪ್ರಹಾರ ನೋಡಿದರೆ, ಆ ಪಕ್ಷ ಬಿಜೆಪಿ­ಯನ್ನು ತನ್ನ ಮೊದಲು ಶತ್ರು ಎಂದು ಪರಿಗಣಿಸಿದಂತಿದೆ. ಈ ಸಿಟ್ಟಿನ ಹಿಂದೆ ಅಸ್ತಿತ್ವದ ಪ್ರಶ್ನೆಯೂ ಅಡಗಿರ­ಬಹುದು. ‘ಬಿಜೆಪಿ ಬಲಗೊಂಡಷ್ಟೂ ಸೇನಾ ಅಸ್ತಿ­ತ್ವಕ್ಕೆ ಅಪಾಯ ಹೆಚ್ಚು. ಅದಕ್ಕೇ ಅಷ್ಟು ಜೋರಾಗಿ ಅಬ್ಬರಿಸುತ್ತಿದೆ’ ಎಂದು ಬ್ಯಾಂಕ್‌ ಉದ್ಯೋಗಿ ಶಿಶಿರ್‌ ಮೋಹಿತೆ ವ್ಯಾಖ್ಯಾನಿಸಿದರು. ಅವರ ಮಾತಲ್ಲಿ ಸತ್ಯಾಂಶ ಇಲ್ಲದೇ ಇಲ್ಲ.

ಹುಯಿಲು:‘ಮಹಾರಾಷ್ಟ್ರ ವಿಭಜನೆಗೆ ಬಿಜೆಪಿ ಷಡ್ಯಂತ್ರ ರೂಪಿಸಿದೆ’ ಎಂದು ಸೇನಾ ಮುಖಂಡರು ಹುಯಿಲೆಬ್ಬಿಸಿದ್ದಾರೆ. ‘ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಒಂದೆರಡು ಪ್ರಮುಖ ವಿಭಾಗಗಳನ್ನು ಮುಂಬೈಯಿಂದ ದೆಹಲಿಗೆ ಸ್ಥಳಾಂತರಿ­ಸಲಾಗಿದೆ. ಇದು ಇಲ್ಲಿಗೇ ನಿಲ್ಲುವುದಿಲ್ಲ. ಮುಂಬೈ ಪ್ರಾಮುಖ್ಯ ಕುಗ್ಗಿಸುವ ಕಾರ್ಯಸೂಚಿಯನ್ನು ಅದು ಹೊಂದಿದೆ’ ಎಂದು ವಾಗ್ದಾಳಿ ನಡೆಸುವ ಮೂಲಕ ಜನಸಾಮಾನ್ಯರಲ್ಲಿ ಗುಮಾನಿ ಮೂಡಿಸಿ­ದ್ದಾರೆ.

ಮರಾಠ ಅಸ್ಮಿತೆಯ ಪ್ರಶ್ನೆ: ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಮುಖಂಡ ರಾಜ್‌ ಠಾಕ್ರೆ ಅವರೂ ಬಿಜೆಪಿ ವಿರುದ್ಧ ಇದೇ ಧಾಟಿಯಲ್ಲಿ ದನಿ ಎತ್ತರಿಸಿದ್ದಾರೆ. ಬಿಜೆಪಿಯ ಅಭಿವೃದ್ಧಿ ಮಂತ್ರದ ಎದುರು ಈ ಎರಡೂ ಪಕ್ಷಗಳು ಮರಾಠ ಅಸ್ಮಿ­ತೆಯ ಪ್ರಶ್ನೆಯನ್ನು ಇಟ್ಟಿವೆ. ಮಹಾರಾಷ್ಟ್ರ ವಿಭಜನೆ ಉದ್ದೇಶ ಸಾಕಾರಗೊಳ್ಳಲು ಬಿಡುವು­ದಿಲ್ಲ ಎಂದೂ ಸಾರಿವೆ.

ಮುಂಬೈ ಮಹಾನಗರ ಒಟ್ಟು 36 ವಿಧಾನ­ಸಭಾ ಕ್ಷೇತ್ರಗಳನ್ನು ಒಳ­ಗೊಂಡಿದೆ. ವಿಧಾನ­ಸಭೆಗೆ 2009ರಲ್ಲಿ ನಡೆದ ಚುನಾ­ವಣೆಯಲ್ಲಿ ಕಾಂಗ್ರೆಸ್‌ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಉಳಿದ ಪಕ್ಷಗಳನ್ನು ಹಿಂದಿಕ್ಕಿತ್ತು. ಬಿಜೆಪಿ–ಸೇನಾ ಮೈತ್ರಿಕೂಟದ ಮತಬುಟ್ಟಿಗೆ ಎಂಎನ್‌ಎಸ್‌ ಕನ್ನ ಹಾಕಿದ್ದರಿಂದ ತಕ್ಕಡಿ ಏರು­ಪೇರಾ­ಗಿತ್ತು. ಇತರ ಪಕ್ಷಗಳು ಇನ್ನುಳಿದ ಸ್ಥಾನ ಹಂಚಿಕೊಂಡಿದ್ದವು.

ವಿಧಾನಸಭೆಗೆ ಈಗ ನಡೆಯುತ್ತಿರುವ ಚುನಾವಣೆಯಲ್ಲಿ (ಅ. 15ಕ್ಕೆ ಮತ­ದಾನ) ಐದು ಪ್ರಮುಖ ಪಕ್ಷಗಳು ಮೈತ್ರಿಯಿಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಿ ಪ್ರತಿಷ್ಠೆಯನ್ನು ಪಣಕ್ಕೆ ಒಡ್ಡಿವೆ. ಆದರೆ, ಮತದಾರ ಮಗುಂ ಆಗಿದ್ದಾನೆ. ‘ಲೋಕಸಭಾ ಚುನಾವಣೆ ಸಂದರ್ಭ­ದಲ್ಲಿ ಹಾದಿ– ಬೀದಿ, ರೈಲಿನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಬಿಸಿ ಬಿಸಿ ಚರ್ಚೆ ಆಗುತ್ತಿತ್ತು. ಈಗ ಯಾರೊ­ಬ್ಬರೂ ಬಾಯಿ ಬಿಡುತ್ತಿಲ್ಲ’ ಎಂದು ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ಸಾವಂತ್‌ ದಳವಿ ಹೇಳಿದರು. ‘ಭಯ ಬಿತ್ತಿ ಬೆಳೆ ತೆಗೆಯುವ’ ಶಿವಸೇನಾ ಪ್ರಭಾವ ಇದ್ದಿರಬಹುದೆ?

ವಸತಿ ಸಮಸ್ಯೆ ಮುಂಬೈ ನಗರದಲ್ಲಿ­ರುವಷ್ಟು ಬೇರೆಲ್ಲೂ ಇದ್ದಿರಲಾರದು. ಅರ್ಧದಷ್ಟು ಜನ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಸಂಚಾರ ದಟ್ಟಣೆ ಬಗ್ಗೆ ಹೇಳುವಂತೆಯೇ ಇಲ್ಲ. ಮೂಲ ಸೌಕ­ರ್ಯಗಳ ಕೊರತೆಯೂ ಕಾಡುತ್ತಿದೆ. ಅಪರಾಧ ಚಟುವಟಿಕೆಗಳು ದಿನೇ ದಿನೇ ಏರುತ್ತಲೇ ಇವೆ ಎಂದು ನಿವಾಸಿಗಳು ಗೊಣಗುತ್ತಾರೆ. ಇದರ ಬಗ್ಗೆ ಗಂಭೀರ­ವಾಗಿ ಸ್ಪಂದಿಸುವ ನಾಯಕರೇ ಇಲ್ಲ ಎಂಬಂತಾಗಿದೆ ಸ್ಥಿತಿ. ಇವು ಚುನಾವಣಾ ವಿಷಯವೂ ಆಗಿಲ್ಲ. ದೇಶದ ಅತ್ಯಂತ ಶ್ರೀಮಂತ ನಗರಪಾಲಿಕೆ ಮೇಲೆ ದಶಕ­ಗಳಿಂದ ಹಿಡಿತ ಹೊಂದಿರುವ ಶಿವ­ಸೇನಾಗೆ ಅಭಿವೃದ್ಧಿ ಕಾರ್ಯಗಳಿಗಿಂತ ಅನ್ಯಭಾಷಿಕರಲ್ಲಿ ಭಯ ಮೂಡಿಸುವ ಕೆಲಸವೇ ಅತ್ಯಂತ ಪ್ರಿಯ.

‘ಮರಾಠಿ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆ ಬಗ್ಗೆ ಸೇನಾ ಮುಖಂಡರು ಮಾತಾಡುತ್ತಲೇ ಇದ್ದಾರೆ. ಆದರೆ, ಮುಂಬೈನಲ್ಲಿ ಮರಾಠಿ ಮಾಧ್ಯಮದ ಶಾಲೆಗಳು ಮುಚ್ಚಿ, ಅವುಗಳ ಸ್ಥಾನದಲ್ಲಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ತಲೆ ಎತ್ತತೊಡಗಿವೆ. ಅದರ ಬಗ್ಗೆ ಏಕೆ ಕಾಳಜಿ ತೋರುತ್ತಿಲ್ಲ’ ಎಂದು ಪ್ರಶ್ನಿಸಿದ ಕರ್ನಾಟಕ ಮೂಲದ ರವಿ ಕುಲಕರ್ಣಿ, ‘ಏಕೆಂದರೆ, ಅದರಿಂದ ವೋಟು ಉದುರು­ವುದಿಲ್ಲ’ ಎಂದು ಅರೆಬರೆ ಕನ್ನಡದಲ್ಲಿ ತಾವೇ ಉತ್ತರಿಸಿದರು.

ತಾತನ ಕಾಲದಲ್ಲಿ ಇಲ್ಲಿಗೆ ಬಂದಿರು­ವು­ದರಿಂದ ಅವರೂ ಮರಾಠಿಗರೇ ಆಗಿದ್ದಾರೆ. ಇವರಂತೆ ಲಕ್ಷಾಂತರ ಅನ್ಯಭಾಷಿಕರು ಅನ್ನ ಅರಸಿ ಮುಂಬೈಗೆ ಬಂದು ಈ ನಗರದ ಜೀವನಾಡಿಯೇ ಆಗಿದ್ದಾರೆ. ಅವರಲ್ಲಿ ಭೇದವೆ­ಣಿಸುವುದು ವಿಕೃತಿಯೇ ಸರಿ. ಕೂಡಾವಳಿ ಮಾಡಿಕೊಂಡು ಬೀಗು­ತ್ತಿದ್ದ ಪಕ್ಷಗಳಿಗೆ ಈ ಸಲದ ಚುನಾವಣೆ ನಿಜವಾದ ಪರೀಕ್ಷೆ. ಯಾರು ಹಿತ ಅಂತ ‘ಗುಣಶೋಧ’ ಮಾಡಿ ಮುಂಬೈಗೆ ಮೆರುಗು ತುಂಬಲ್ಲ ಸಮರ್ಥರನ್ನು ಗೆಲ್ಲಿಸುವುದು ಮತದಾರನಿಗೂ ಸವಾ­ಲಿನ ಕೆಲಸ.
(ಮುಂದುವರೆಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT