ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.10ರೊಳಗೆ ಮಾಹಿತಿ ನೀಡಿ: ‘ಸುಪ್ರೀಂ’

ದೆಹಲಿಯಲ್ಲಿ ಸರ್ಕಾರ ರಚನೆ
Last Updated 9 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಸರ್ಕಾರ ರಚನೆ ಕುರಿತು ಅಕ್ಟೋಬರ್‌ 10ರ ಒಳಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸರ್ಕಾರ ರಚನೆ ಸಾಧ್ಯತೆ ಸಂಬಂಧ ಲೆಫ್ಟಿನೆಂಟ್‌ ಗವರ್ನರ್‌ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದಲ್ಲಿ ರಾಷ್ಟ್ರಪತಿಗಳು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ವಿವರ ನೀಡುವಂತೆ ಕೇಂದ್ರಕ್ಕೆ ಸೂಚಿಸಿದ ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು, ಈ ವಿಷಯವನ್ನು ಸುದೀರ್ಘ ಅವಧಿವರೆಗೆ ಬಗೆಹರಿಸದೆ ಉಳಿಸುವಂತಿಲ್ಲ ಎಂದು ಹೇಳಿತು.

‘ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ರಾಷ್ಟ್ರಪತಿಗಳಿಗೆ ಎಷ್ಟು ಸಮಯ ಬೇಕಾಗಬಹುದು?’ ಎಂದು ಪೀಠ ಕೇಂದ್ರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಪಿ.ಎಸ್‌. ನರಸಿಂಹ ಅವರನ್ನು ಪ್ರಶ್ನಿಸಿತು.

ದೆಹಲಿಯಲ್ಲಿ ಸರ್ಕಾರ ರಚನೆ ಕುರಿತು ಸೆಪ್ಟೆಂಬರ್‌ 4ರಂದು ಲೆಫ್ಟಿನೆಂಟ್‌ ಗವರ್ನರ್‌ ನಜೀಬ್ ಜಂಗ್‌ ಅವರು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಪತ್ರ ಬರೆದಿರುವುದನ್ನು ಪ್ರಸ್ತಾಪಿಸಿದ ಎಎಸ್‌ಜಿ, ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಾಜಕೀಯ ಚಟುವಟಿಕೆಗಳು ಪ್ರಾರಂಭವಾಗಿವೆ ಎಂದು ವಿವರಿಸಿದರು.

‘ಎಲ್ಲಾ ಪಕ್ಷಗಳೊಂದಿಗೆ ಆಮ್‌ ಆದ್ಮಿ ಸಂಪರ್ಕ’
ಗಾಜಿಯಾಬಾದ್‌ (ಪಿಟಿಐ): ಅಡ್ಡ­ದಾರಿಯ ಮೂಲಕ ದೆಹಲಿಯಲ್ಲಿ ಬಿಜೆಪಿ ಅಧಿ­ಕಾರಕ್ಕೆ ಬಾರದಂತೆ ತಡೆ­ಯಲು ಕಾಂಗ್ರೆಸ್‌, ಜೆಡಿ (ಯು) ಮತ್ತು ಬಿಜೆಪಿಯ ಕೆಲ ಪ್ರಾಮಾಣಿಕ ಶಾಸಕರೊಂದಿಗೆ ಸಂಪರ್ಕದಲ್ಲಿರು­ವು­ದಾಗಿ ಆಮ್‌ ಆದ್ಮಿ ಪಕ್ಷ ಹೇಳಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌, ಬಿಜೆಪಿಯ 15 ಶಾಸಕರು ತಮ್ಮೊಂದಿಗೆ ಸಂಪರ್ಕ­ದಲ್ಲಿದ್ದಾರೆ. ಅಗತ್ಯ ಬಿದ್ದರೆ ಸ್ಟಿಂಗ್‌ ಆಪರೇಷನ್‌ನ ಇನ್ನೂ ಹಲವು ಟೇಪ್‌­­ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.

ಆಪ್‌ಗೆ ಅಧಿಕಾರದ ದಾಹ: ಬಿಜೆಪಿ ಟೀಕೆ
ನವದೆಹಲಿ (ಪಿಟಿಐ):
ಬಿಜೆಪಿಗೆ ಯಾವ ಕಾರಣಕ್ಕೂ ಸರ್ಕಾರ ರಚಿಸಲು ಬಿಡುವುದಿಲ್ಲ ಎಂದು ಹೇಳಿರುವ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ಗೆ ತಿರುಗೇಟು ನೀಡಿರುವ ಬಿಜೆಪಿ, ‘ಇದು ಅವರ ಹತಾಶೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಟೀಕಿಸಿದೆ ಮತ್ತು ಅವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ಆರೋಪಿಸಿದೆ.

ದೆಹಲಿ ವಿಧಾನಸಭೆಯಲ್ಲಿ ಬಹುಮತಕ್ಕೆ ಕೊರತೆಯಿದ್ದರೂ ಏಕೈಕ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಲು ಅನುಮತಿ ನೀಡುವಂತೆ ಅವರು ಪತ್ರದಲ್ಲಿ ಕೋರಿದ್ದರು. ಸರ್ಕಾರ ರಚನೆಗೆ ಅಗತ್ಯವಾದ ಸದಸ್ಯರನ್ನು ಹೊಂದಲು ಬಿಜೆಪಿ  ಶಾಸಕರ ಖರೀದಿಗೆ ಯತ್ನಿಸುತ್ತಿದೆ ಎಂದು ಆಮ್‌ ಆದ್ಮಿ ಪಕ್ಷದ ಪರ ಹಾಜರಾದ ಹಿರಿಯ ವಕೀಲ ಫಾಲಿ ಎಸ್‌ ನಾರಿಮನ್‌ ಮತ್ತು ವಕೀಲ ಪ್ರಶಾಂತ್‌ ಭೂಷಣ್‌ ಆರೋಪಿಸಿದರು.

ಎಎಪಿ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್‌ ದಾಖಲೆಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದ ಪೀಠ, ಅ.10ರವರೆಗೆ ಕಾಯುವಂತೆ ನಾರಿಮನ್‌ ಅವರಿಗೆ ಸೂಚಿಸಿತು.

ವಿಧಾನಸಭೆಯ ವಿಸರ್ಜನೆಗೆ ಕೋರಿ ಎಎಪಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಪೀಠ, ಕಳೆದ ಐದು ತಿಂಗಳಿನಲ್ಲಿ ಸರ್ಕಾರ ರಚನೆಗೆ ಕೇಂದ್ರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಳಿತು. ಇದೇ ವರ್ಷ ನಾಲ್ಕು ರಾಜ್ಯಗಳಲ್ಲಿ ನಡೆಯುವ ಚುನಾವಣೆಯ ವೇಳೆಯೇ ದೆಹಲಿಯಲ್ಲಿಯೂ ಚುನಾವಣೆ ನಡೆಸುವಂತೆ ಆದೇಶಿಸಬೇಕು ಎನ್ನುವ ಎಎಪಿ ಮನವಿಯನ್ನು ಅದು ತಿರಸ್ಕರಿಸಿತು.
ವಿಧಾನಸಭೆಯನ್ನು ವಿಸರ್ಜನೆ ಮಾಡಲು ಲೆಫ್ಟಿನೆಂಟ್‌ ಗವರ್ನರ್ ಅವರಿಗೆ ನಿರ್ದೇಶಿಸುವಂತೆ ಕೋರಿ ಎಎಪಿ ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT