ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.15ಕ್ಕೆ ಮಹಾರಾಷ್ಟ್ರ,ಹರಿಯಾಣ ಚುನಾವಣೆ

Last Updated 12 ಸೆಪ್ಟೆಂಬರ್ 2014, 14:31 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಹಾರಾಷ್ಟ್ರ ವಿಧಾನಸಭೆಯ 288 ಹಾಗೂ ಹರಿಯಾಣ ವಿಧಾನಸಭೆಯ 90 ಸ್ಥಾನಗಳಿಗೆ ಅಕ್ಟೋಬರ್‌ 15 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್‌ 19ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಅವರು ಮಹಾರಾಷ್ಟ್ರ ಹಾಗೂ ಹರಿಯಾಣ ಮಾತ್ರವಲ್ಲದೇ ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್‌, ಉತ್ತರಪ್ರದೇಶ ಹಾಗೂ ಗುಜರಾತ್‌ ರಾಜ್ಯದ ತಲಾ ಒಂದೊಂದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಮಹಾರಾಷ್ಟ್ರದ ಬೀಡ್‌ ಹಾಗೂ ಓಡಿಶಾದ  ಕಂಧಾಮಲ್‌ ಲೋಕಸಭಾ ಕ್ಷೇತ್ರಗಳಲ್ಲಿಯೂ ಅಕ್ಟೋಬರ್ 15ರಂದೇ ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಹೊರ ಬೀಳಲಿದೆ.

ಚುನಾವಣೆ ನಡೆಯುವ ಎಲ್ಲಾ ಕ್ಷೇತ್ರಗಳಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದೂ ಸಂಪತ್‌ ಅವರು ತಿಳಿಸಿದರು.

ಓಡಿಶಾದ ಕಂಧಾಮಲ್‌ ಲೋಕಸಭಾ ಕ್ಷೇತ್ರ ಹೊರತು ಪಡಿಸಿ ಉಳಿದೆಡೆ ಸೆಪ್ಟಂಬರ್ 20ರಂದು ಅಧಿಸೂಚನೆ ಹೊರಬೀಳಲಿದ್ದು, ಸೆಪ್ಟೆಂಬರ್ 27 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಕಂಧಾಮಲ್‌ನಲ್ಲಿ ಸೆಪ್ಟೆಂಬರ್ 19ರಂದು ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಸುವ ಕೊನೆಯ ದಿನ ಸೆಪ್ಟೆಂಬರ್  26.

ಭೀಕರ ಪ್ರವಾಹಕ್ಕೆ ತುತ್ತಾಗಿರುವ ಜಮ್ಮು ಮತ್ತು ಕಾಶ್ಮೀರ ಚುನಾವಣೆಗೆ ಸಂಬಂಧಿತ ಪಶ್ನೆಗೆ, ‘ಆಯೋಗವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು’ ಎಂದು ಸಂಪತ್‌ ಅವರು ಪ್ರತಿಕ್ರಿಯಿಸಿದರು.

ಇದೇ ವೇಳೆ,  ಹರಿಯಾಣ ವಿಧಾನಸಭೆಯ ಅವಧಿಯು ಅಕ್ಟೋಬರ್ 27ರಂದು ಹಾಗೂ ಮಹಾರಾಷ್ಟ್ರ ವಿಧಾನಸಭೆಯ ಅವಧಿಯು  ನವೆಂಬರ್ 8ರಂದು ಅಂತ್ಯಗೊಳ್ಳಲಿದೆ. ಜಮ್ಮು–ಕಾಶ್ಮೀರ ಮತ್ತು ಜಾರ್ಖಂಡ್‌ ವಿಧಾನಸಭೆಗಳ ಅವಧಿ ಪೂರ್ಣಗೊಳ್ಳಲು ಇನ್ನೂ ಸ್ವಲ್ಪ ಸಮಯವಿದೆ ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT