ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಜನೇಯಸ್ವಾಮಿ ಸಂಭ್ರಮದ ರಥೋತ್ಸವ

ಚಿಕ್ಕಜಾಜೂರು, ಹೊಸದುರ್ಗದಲ್ಲಿ ಉತ್ಸವ
Last Updated 10 ಏಪ್ರಿಲ್ 2014, 5:33 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಸಾವಿರಾರು ಭಕ್ತರು ಬುಧವಾರ ಆಂಜನೇಯ ಸ್ವಾಮಿ ರಥವನ್ನು ಎಳೆದು ಸಂಭ್ರಮಿಸಿ, ಭಕ್ತಿ ಸಮರ್ಪಿಸಿದರು.

ಹೂ, ತಳಿರುಗಳಿಂದ ಸುಂದರವಾಗಿ ಅಲಂಕರಿಸಿದ್ದ ರಥದಲ್ಲಿ ಆಂಜನೇಯಸ್ವಾಮಿ ಹಾಗೂ ಲಕ್ಷ್ಮೀನರಸಿಂಹ ಸ್ವಾಮಿ ಉತ್ಸವ ಮೂರ್ತಿಗಳನ್ನು ರಥೋತ್ಸವದಲ್ಲಿ ಕೂರಿಸಿ, ರಥಕ್ಕೆ ದೊಡ್ಡೆಡೆ ಸೇವೆಯನ್ನು ನಡೆಸಲಾಯಿತು. ಮಹಾಮಂಗಳಾರತಿ ನಂತರ ನಾದಸ್ವರ, ಡೋಲು, ತಮಟೆಗಳ ವಾದ್ಯಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು.

ರಥವನ್ನು ಪುನಃ ದೇವಸ್ಥಾನದ ಬಳಿ ಕರೆತಂದು ರಥದ ಮೇಲಿನ ಬಾವುಟ ಹಾಗೂ ಹೂವಿನ ಹಾರ ಹರಾಜು ಹಾಕಲಾಯಿತು.

ಪವಾಡ ಪ್ರದರ್ಶನ: ಮಧ್ಯಾಹ್ನ ನಡೆದ ಮುಳ್ಳು ಪಲ್ಲಕ್ಕಿ ಹಾಗೂ ಎದುರುಗತ್ತಿ ಪವಾಡಗಳು ಭಕ್ತರನ್ನು ಆಕರ್ಷಿಸಿದವು. ದಾಸಯ್ಯರಾದ ಪಲ್ಲಕ್ಕಿ ಬಸವರಾಜ್‌ ಹಾಗೂ ಗೊಂಚಿಗಾರ ಕಾಂತರಾಜ್‌ ಅವರನ್ನು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕರೆ ತರಲಾಯಿತು. ದೇವಸ್ಥಾನದ ಆವರಣದಲ್ಲಿ ಮಣೆವು ಆಡಿದ ದಾಸಯ್ಯರು ಪವಾಡ ದೃಶ್ಯ ನಡೆಸಿದರು.

ರಥೋತ್ಸವ ಅಂಗವಾಗಿ ಸುಮಾರು 4000ಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ವಿವಿಧ ಯುವ ಸಂಘಟನೆಗಳು ಹಾಗೂ ಭಕ್ತರು ರಥೋತ್ಸವಕ್ಕೆ ಬಂದ ಭಕ್ತರಿಗೆ ಮಜ್ಜಿಗೆ, ಪಾನಕ ವ್ಯವಸ್ಥೆಯನ್ನು ಮಾಡಲಾಗಿತ್ತು.

ಗಮನ ಸೆಳೆದ ಮುಳ್ಳಿನ ಪವಾಡ
ಹೊಸದುರ್ಗ:
ತಾಲ್ಲೂಕಿನ ಬುರುಡೇಕಟ್ಟೆ ಬಳ್ಳೇಕೆರೆಯ ಆಂಜನೇಯಸ್ವಾಮಿ ಬ್ರಹ್ಮ ರಥೋತ್ಸವವು ಸಹಸ್ರಾರು ಭಕ್ತರ ನೇತೃತ್ವದಲ್ಲಿ ಬುಧವಾರ ಸಂಭ್ರಮದಿಂದ ನಡೆಯಿತು.

ಹಸಿರು ತೋರಣ, ಬಣ್ಣ ಬಣ್ಣದ ಬಟ್ಟೆ ಹಾಗೂ ದೊಡ್ಡ ಹೂ ಮಾಲೆಗಳಿಂದ ಸಿಂಗಾರಗೊಂಡಿದ್ದ ರಥಕ್ಕೆ ಅಲಂಕೃತ ಆಂಜನೇಯಸ್ವಾಮಿ, ಚೌಡೇಶ್ವರಿ ದೇವಿಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನಂತರ ಹಿಡುಗಾಯಿ ಸೇವೆ, ಬಲಿ ಅನ್ನ ಪೂಜೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ನಡೆದ ನಂತರ ಭಕ್ತರು ತೇರನ್ನು ಎಳೆದರು. ದೇವಸ್ಥಾನದ ಆವರಣದಿಂದ ಆರಂಭಗೊಂಡ ಮೆರವಣಿಗೆ ಕೋಟೆಯ ಮುಖ್ಯ ಬೀದಿಗಳಲ್ಲಿ ಸಾಗಿತು. ಭಕ್ತರು ತೇರಿಗೆ ಬಾಳೆ ಹಣ್ಣು ಎಸೆದು ಇಷ್ಟಾರ್ಥಸಿದ್ದಿಗೆ ಬೇಡಿಕೊಂಡರು.

ರಥೋತ್ಸವದ ಅಂಗವಾಗಿ ಹಲವು ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಟಿ.ದಾಸರಹಳ್ಳಿ ಮಹಿಳೆಯರು ಪ್ರದರ್ಶಿಸಿದ ವೀರಗಾಸೆ ನೃತ್ಯ, ಪರೇವು ಸೇವೆ ಗಮನ ಸೆಳೆಯಿತು. ರಥೋತ್ಸವದ ನಂತರ ಸಂಜೆ 5ಕ್ಕೆ ಮುಳ್ಳಿನ ಪವಾಡ ನಡೆಯಿತು. ಸುಮಾರು 3ರಿಂದ 4ಅಡಿ ಎತ್ತರದವರೆಗಿನ ಮುಳ್ಳಿನ ರಾಶಿ ಹಾಕಿ, ವಿಶೇಷ ಪೂಜೆ ಸಲ್ಲಿಸಿದ ನಂತರ ದೇವರನ್ನು ಹೊತ್ತವರು, ಪುರೋಹಿತರು ಹಾಗೂ ಭಕ್ತರು ಮುಳ್ಳಿನ ಮೇಲೆ ಬಿದ್ದು ಭಕ್ತಿ ಅರ್ಪಿಸಿದರು.

ವೀರಭದ್ರಸ್ವಾಮಿ ಕೆಂಡೋತ್ಸವ
ಭರಮಸಾಗರ:
ಸಮೀಪದ ಕೊಳಹಾಳ್ ಗ್ರಾಮದಲ್ಲಿ ಜಾತ್ರೆ ಅಂಗವಾಗಿ ಬುಧವಾರ ವೀರಭದ್ರಸ್ವಾಮಿ ಕೆಂಡಾರ್ಚನೆ ಜರುಗಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ನಂತರ ದೇವರ ವಿಗ್ರಹವನ್ನು ಅಲಂಕೃತ ಹೂವಿನಪಲ್ಲಕಿಯಲ್ಲಿ ಪ್ರತಿಷ್ಠಾಪಿಸಿ ಅಗ್ನಿಕುಂಡದ ಬಳಿ ಕರೆತಂದು ಸಾಂಪ್ರದಾಯಿಕ ಪೂಜಾವಿಧಿಗಳನ್ನು ನೆರವೇರಿಸಲಾಯಿತು.

ಮಡಿಯುಟ್ಟ ಭಕ್ತರು ದೇವರ ಪಲ್ಲಕ್ಕಿ ಹೊತ್ತು ಮೂರು ಬಾರಿ ಕೆಂಡಹಾಯ್ದರು. ನಂತರ ಅನ್ನಸಂತರ್ಪಣೆ ನೆರವೇರಿಸಲಾಯಿತು. ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT