ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಶೈಲಿಯ ಬಗೆಬಗೆ ಖಾದ್ಯ

ರಸಾಸ್ವಾದ
Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ಊತನ್ನಿಚ್ಛೆ , ನೋಟ ಪರರ ಇಚ್ಛೆ ಎಂಬ ಮಾತಿದೆ. ಎಷ್ಟು ಉಜ್ಜಿದರೂ ಕ್ಲೀಷೆ ಅಂತ ಅನ್ನಿಸದ ಈ ನಾಣ್ಣುಡಿ ಆಹಾರಪ್ರಿಯರ ಊಟದ ಬಗೆಗಿನ ವೈಶಿಷ್ಟ್ಯ ಮತ್ತು ವೈವಿಧ್ಯದ ಬಗ್ಗೆ ಹೇಳುತ್ತದೆ. ಮಂಡ್ಯ, ಹಾಸನ ಭಾಗದ ಕಿಕ್ಕೇರಿಸುವ ಮಸಾಲೆಮಿಶ್ರಿತ ಮಾಂಸದ ಸಾರು ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಅವುಗಳಿಗಿಂತಲೂ ಹೆಚ್ಚಿನ ಖದರು ಆಂಧ್ರಶೈಲಿಯ ಆಹಾರ ಪದಾರ್ಥಗಳಿಗಿದೆ. ಅಪ್ಪಟ ಆಂಧ್ರ ಹದದಲ್ಲಿ ತಯಾರಾಗುವ ಚಿಲ್ಲಿ ಚಿಕನ್‌, ನಾಟಿ ಶೈಲಿಯ ಬಿರಿಯಾನಿಗೆ ಸೂಪರ್‌ ಕಾಂಬಿನೇಷನ್‌. ಮದ್ಯ ಸೇವನೆ ಮಾಡುವವರಿಗೆ ಇದು ಡಬಲ್‌ಕಿಕ್‌ ನೀಡುತ್ತದೆ.

‘ಆಂಧ್ರ ಶೈಲಿಯೇ ನಮ್ಮ ಸ್ಟ್ರೆಂಥ್‌’ ಎನ್ನುವ ನಂದನ ಪ್ಯಾಲೇಸ್ ಗಮ್ಮತ್ತಿನ ಆಂಧ್ರ ಊಟಕ್ಕೆ ಫೇಮಸ್ಸು. ಇಲ್ಲಿ ಸಿಗುವ ಚಿಕನ್‌ ಮತ್ತು ಮಟನ್‌ ಬಿರಿಯಾನಿ ರುಚಿಗಳು ರೆಸ್ಟೋರೆಂಟ್‌ನವರು ಹೇಳುವ ಮಾತಿಗೆ ಒಪ್ಪಿಗೆಯ ಮುದ್ರೆ ಒತ್ತುತ್ತವೆ. ವಾರದಲ್ಲಿ ಮೂರು ದಿನ ಮಾತ್ರ ಲಭ್ಯವಿರುವ ಪುದೀನಾ ಸ್ವಾದದಲ್ಲಿ ತಯಾರಿಸುವ ನಾಟಿಕೋಳಿ ಬಿರಿಯಾನಿ ರುಚಿಯಂತೂ ಬೊಂಬಾಟ್‌. ಅಪ್ಪಟ ಆಂಧ್ರ ಶೈಲಿಯಲ್ಲಿ ತಯಾರಿಸುವ ಈ ನಾಟಿ ಬಿರಿಯಾನಿ ಗೌಡ್ರು ಶೈಲಿಯನ್ನೇ ಹೋಲುತ್ತದೆ. ಈ ಬಿರಿಯಾನಿಗೆ ಚಿಕನ್‌ ಚಿಲ್ಲಿ ಕಿಲ್ಲಿಂಗ್‌ ಕಾಂಬಿನೇಷನ್‌. ವೆಜ್‌ ಮತ್ತು ನಾನ್‌ವೆಜ್‌ಪ್ರಿಯರಿಬ್ಬರಿಗೂ ಇಷ್ಟವಾಗುವ ಕ್ಯಾರೆಟ್‌ 65, ಮಶ್ರೂಮ್‌ ಕರ್ರಿಲೀಫ್‌ ಡ್ರೈ ಇಲ್ಲಿನ ಬಾಣಸಿಗರ ಹೊಸ ಆವಿಷ್ಕಾರಗಳು. ಇವೆರಡೂ ಬೆಂಗಳೂರಿನ ಆಹಾರಪ್ರಿಯರು ಟೇಸ್ಟ್‌ ಮಾಡಲೇಬೇಕಾದ ಹೊಸ ರುಚಿಗಳು.

‘ವಿವಿಧ ಬಗೆಯ ಬಿರಿಯಾನಿಗಳೇ ನಮ್ಮ ರೆಸ್ಟೋರೆಂಟ್‌ನ ಸಿಗ್ನೇಚರ್‌ ಡಿಷ್‌ಗಳು. ಆಂಧ್ರ ಶೈಲಿಯ ಚಿಕನ್‌, ಮಟನ್‌ ಬಿರಿಯಾನಿ ಹಾಗೂ ವಾರಕ್ಕೆ ಮೂರು ದಿನ ಮಾತ್ರ ತಯಾರಿಸುವ ನಾಟಿ ಕೋಳಿ ಬಿರಿಯಾನಿ ರುಚಿ ಆಂಧ್ರ ಶೈಲಿ ಗ್ರಾಹಕರ ಮನಗೆದ್ದಿವೆ. ಸಾಂಪ್ರದಾಯಿಕ ಶೈಲಿಯಲ್ಲಿ ಕುಟ್ಟಿ, ಪುಡಿ ಮಾಡಿಟ್ಟುಕೊಂಡ ಮಸಾಲಾ ಪದಾರ್ಥಗಳ ಬಳಕೆಯಿಂದಾಗಿ ನಮ್ಮ ಬಿರಿಯಾನಿಗಳು ಅದ್ಭುತ ರುಚಿ ಹೊಂದಿವೆ.

ಡ್ರೈ ಐಟಂಗಳಲ್ಲಿ ಚಿಕನ್‌ ಕ್ಷತ್ರಿಯ ನಮ್ಮ ಸ್ಪೆಷಾಲಿಟಿ. ಆಂಧ್ರ ಶೈಲಿಯಲ್ಲಿ ತಯಾರಿಸುವ ಈ ಖಾದ್ಯ ಬೆಂಗಳೂರಿನ ಯಾವ ರೆಸ್ಟೋರೆಂಟ್‌ನಲ್ಲೂ ಸಿಗುವುದಿಲ್ಲ. ಖಾರ ಖಾರವಾದ ಆಂಧ್ರ ಮಸಾಲೆಯನ್ನು ತುಂಬಿಟ್ಟುಕೊಂಡು ತಯಾರಾಗುವ ಈ ಡ್ರೈನಲ್ಲಿ ಮೂರು ಲೆಗ್‌ ಪೀಸ್‌ಗಳಿರುತ್ತವೆ. ಹಾಗೆಯೇ, ಆಂಧ್ರದ ರೆಡ್‌ಚಿಲ್ಲಿ ಬಳಸಿ ತಯಾರಿಸುವ ಚಿಲ್ಲಿ ಚಿಕನ್‌ ರುಚಿಯನ್ನು ತಿಂದೇ ಅನುಭವಿಸಬೇಕು.

ಸಿಕ್ಕಾಪಟ್ಟೆ ಖಾರವಿರುವ ಚಿಲ್ಲಿ ಚಿಕನ್‌ ಊಟ ಮತ್ತು ಬಿರಿಯಾನಿಗೆ ಒಳ್ಳೆ ಕಾಂಬಿನೇಷನ್‌. ಉಳಿದಂತೆ, ಮಟನ್‌ ಚಾಪ್ಸ್‌ , ಚಿಕನ್‌ 65, ನಂದನ ಚಿಕನ್‌ ರೋಸ್ಟ್‌ ಕೂಡ ಚೆನ್ನಾಗಿರುತ್ತದೆ’ ಎನ್ನುತ್ತಾರೆ ನಂದನ ಪ್ಯಾಲೇಸ್‌ನ ಮಾಲೀಕ ರವಿಚಂದರ್‌.
 
ವೆಜ್ ವೈವಿಧ್ಯ
ನಂದನ ರೆಸ್ಟೋರೆಂಟ್‌ ಬರೀ ಮಾಂಸಾಹಾರದ ತಿನಿಸುಗಳಿಗಷ್ಟೇ ಅಲ್ಲ; ರುಚಿಕಟ್ಟಾದ ವೆಜ್‌ ತಿನಿಸುಗಳಿಗೂ ಪ್ರಸಿದ್ಧಿಯಾಗಿದೆ. ಇಲ್ಲಿ ಸಿಗುವ ಕ್ಯಾರೆಟ್‌ 65, ಗೋಬಿ ಶೋಲೆ ಕಬಾಬ್‌, ಮಶ್ರೂಮ್‌ ಶೋಲೆ ಕಬಾಬ್‌, ನಂದನ ಪನ್ನೀರ್‌ ಸ್ಟಾರ್ಟರ್‌ಗಳ ರುಚಿ ಸೂಪರ್‌ ಆಗಿರುತ್ತದೆ.

ಪ್ರತಿದಿನ ಸಂಜೆ ಇಲ್ಲಿ ಟಿಫನ್‌ ಕಾಂಬೋ ಲಭ್ಯವಿದೆ. ಗರಿಗರಿಯಾದ ದೋಸಾ ಚಿಕನ್‌ ಕರಿ, ದೋಸಾ ಮಟನ್‌ ಕರಿ, ದೋಸಾ ಫಿಶ್‌ ಕರಿ ಸಿಗುತ್ತವೆ. ಡಿನ್ನರ್‌ಗೆ ಆಂಧ್ರ ಮೀಲ್‌ ಲಭ್ಯವಿದೆ. ಆಂಧ್ರ ಪಪ್ಪು, ವೇಪುಡು, ಗೊಂಗುರ ಚಟ್ನಿ, ಮಜ್ಜಿಗೆ ಹುಳಿ. ಪಚಡಿ, ಗನ್್ ಪೌಡರ್‌ ಇವೆಲ್ಲವೂ ಸಸ್ಯಾಹಾರದ ಊಟದಲ್ಲಿ ಲಭ್ಯ. ಸಸ್ಯಾಹಾರಪ್ರಿಯರು ಖಾರವಾದ ಚಟ್ನಿ ಮತ್ತು ತುಪ್ಪವನ್ನು ಅನ್ನಕ್ಕೆ ಕಲಸಿಕೊಂಡು ಒಂದು ತುತ್ತು ಹೆಚ್ಚೇ ತಿನ್ನಬಹುದು. ಇದರ ಬೆಲೆ ₹ 145.

ಅ ಲಾ ಕಾರ್ಟ್‌ ಮೆನು ಇಷ್ಟಪಡದವರಿಗೆ ಮಾಂಸಾಹಾರದ ಮೀಲ್ಸ್‌ ಇದೆ. ಇದರಲ್ಲಿ ಚಿಕನ್‌ ಬಿರಿಯಾನಿ, ಚಿಲ್ಲಿ ಚಿಕನ್‌, ಫಿಶ್‌ ಫ್ರೈ, ಕಬಾಬ್‌, ವೈಟ್‌ರೈಸ್‌, ರಸಂ, ಸ್ವೀಟ್‌ ಕೊಡುತ್ತಾರೆ. ನಾನ್‌ವೆಜ್‌ ಥಾಲಿ ಬೆಲೆ ₹ 399. ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತು ಲಭ್ಯವಿದೆ.

ಬೇರೆ ರೆಸ್ಟೋರೆಂಟ್‌ಗಳಿಗಿಂತಲೂ ನಮ್ಮ ರೆಸ್ಟೋರೆಂಟ್‌ನ ಖಾದ್ಯಗಳ ರುಚಿ ಭಿನ್ನ ಎನ್ನುವ ರವಿಚಂದರ್‌ ಅದನ್ನು ವ್ಯಾಖ್ಯಾನಿಸುವುದು ಹೀಗೆ: ‘ನಮ್ಮ ರೆಸ್ಟೋರೆಂಟ್‌ನಲ್ಲಿರುವ ಬಾಣಸಿಗರು ಕಳೆದ 15 ವರ್ಷಗಳಿಂದಲೂ ನಮ್ಮಲ್ಲೇ ಇದ್ದಾರೆ. ಇಲ್ಲಿ ನಾವು ಬಳಸುವ ಮಸಾಲಾ ಪದಾರ್ಥಗಳೆಲ್ಲವೂ ಅಪ್ಪಟ ಆಂಧ್ರದವೇ ಆಗಿರುತ್ತವೆ. ಅದೇ ಶೈಲಿ, ಅದೇ ರುಚಿ ನಮ್ಮ ರೆಸ್ಟೋರೆಂಟ್‌ನ ಹೆಗ್ಗುರುತು. ರುಚಿ ಬರಲಿ ಎಂದು ಸಪ್ಲಿಮೆಂಟ್ಸ್‌ ಬಳಸುವುದಿಲ್ಲ.

ಪ್ರತಿ ತಿಂಗಳೂ ನಮ್ಮ ಪ್ರೊಡಕ್ಷನ್‌ ಟೀಂನ ಜೊತೆ ಮೀಟಿಂಗ್‌ ನಡೆಸುತ್ತೇವೆ. ಆ ವೇಳೆ ಅವರಿಂದ ಐಡಿಯಾ ಕೇಳುತ್ತೇವೆ. ಡಿಫರೆಂಟ್‌ ಕಟಿಂಗ್‌ ಸ್ಟೈಲ್‌, ರೆಸಿಪಿಗಳ ಬಗ್ಗೆ ಚರ್ಚಿಸುತ್ತೇವೆ. ಹೀಗೆ ಅನುಭವಿ ಬಾಣಸಿಗರ ಹೊಸ ಅನ್ವೇಷಣೆಯಿಂದಲೇ ಕ್ಯಾರೆಟ್‌ 65ನಂತಹ ವಿಶೇಷ ಸವಿರುಚಿಗಳು ಜನ್ಮತಳೆದಿವೆ. ಕ್ಯಾರೆಟ್‌ ಅಂದರೆ ಎಲ್ಲರೂ ಸ್ವೀಟ್‌ ಎಂದುಕೊಳ್ಳುತ್ತಾರೆ. ಆದರೆ, ನಮ್ಮ ಕ್ಯಾರೆಟ್‌ 65 ಸ್ವಲ್ಪ ಖಾರವಾಗಿರುತ್ತದೆ.

ನಾವು ಮಶ್ರೂಮ್‌ನಲ್ಲಿ 50ಕ್ಕೂ ಅಧಿಕ ಬಗೆಯ ತಿನಿಸುಗಳನ್ನು ಕೊಡುತ್ತಿದ್ದೇವೆ’. ಆಂಧ್ರ ಶೈಲಿಯ ಊಟ, ತಿನಿಸುಗಳನ್ನು ಇಷ್ಟಪಡುವವರು ಭೇಟಿ ನೀಡಬಹುದಾದ ರೆಸ್ಟೋರೆಂಟ್‌ ಇದು. ಕೊಟ್ಟ ಹಣಕ್ಕಿಂತಲೂ ಹೆಚ್ಚಿನ ರುಚಿ ಸಿಗುತ್ತದೆ ಎಂಬ ಭರವಸೆಯೂ ಇಲ್ಲಿದೆ.

ರೆಸ್ಟೋರೆಂಟ್‌: ನಂದನ ಪ್ಯಾಲೇಸ್‌
ಶೈಲಿ: ಆಂಧ್ರ
ಸಿಗ್ನೇಚರ್ ತಿನಿಸುಗಳು: ಬಿರಿಯಾನಿ, ಚಿಕನ್ ಚಿಲ್ಲಿ, ಕ್ಯಾರೆಟ್‌ 65
ಹೋಂ ಡೆಲಿವರಿ: ಇದೆ         
ಬಾರ್‌: ಇಲ್ಲ
₹ 800 ಇಬ್ಬರಿಗೆ ತಗಲುವ ವೆಚ್ಚ
ಟೇಬಲ್‌ ಕಾಯ್ದಿರಿಸಲು  98453 59983
ಸ್ಥಳ: ನಂ.8 ಎ, ಬನ್ನೇರುಘಟ್ಟ ಮುಖ್ಯರಸ್ತೆ, ಬಿಟಿಎಂ 2ನೇ ಹಂತ, ಎನ್‌.ಎಸ್‌.ಪಾಳ್ಯ, ಶಾಪರ್‌್ಸ ಸ್ಟಾಪ್‌ ಹತ್ತಿರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT