ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಂಕ್ಷಿಗಳ ಸಮಾಧಾನಕ್ಕೆ ಕಸರತ್ತು

ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಿರ್ಧಾರ
Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿ­ಗಳ ಒತ್ತಡದ ಭಾರ ತಡೆದು­ಕೊಳ್ಳಲು ಐವರು ಸಂಸದೀಯ ಕಾರ್ಯ­ದರ್ಶಿಗಳ ಹುದ್ದೆಗಳನ್ನು ಸೃಷ್ಟಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆ ಸೃಷ್ಟಿಗೂ ತೀರ್ಮಾನಿಸಲಾಗಿದೆ.

ಸಚಿವ ಸಂಪುಟ ಪುನರ್‌ರಚನೆ ಪ್ರಸ್ತಾವವನ್ನು ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ಸ್ಪಷ್ಟವಾಗಿ ನಿರಾಕರಿ­ಸಿದ್ದಾರೆ. ಈಗ ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಲು ಅವರು ನಿರ್ಧರಿಸಿ­ದ್ದಾರೆ. ಆದರೆ, ಸಂಪುಟ ಸೇರಲು ಪ್ರಯತ್ನಿಸುತ್ತಿರುವವರ ಸಂಖ್ಯೆ 50ಕ್ಕೂ ಹೆಚ್ಚಿದೆ. ಸಂಸದೀಯ, ರಾಜಕೀಯ ಕಾರ್ಯದರ್ಶಿಗಳ ಹುದ್ದೆ ಸೃಷ್ಟಿಸಿ ಆಕಾಂಕ್ಷಿ­ಗಳನ್ನು ಸಮಾಧಾನ ಪಡಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಸಂಪುಟ ವಿಸ್ತರಣೆ, ನಿಗಮ ಹಾಗೂ ಮಂಡಳಿಗಳ ನೇಮಕ ಕುರಿತು ಇತ್ತೀಚೆಗೆ ಸಮಾಲೋಚನೆ ನಡೆಸಿದ್ದಾರೆ. ಸಂಸ­ದೀಯ ಕಾರ್ಯದರ್ಶಿಗಳು ಹಾಗೂ ರಾಜಕೀಯ ಕಾರ್ಯದರ್ಶಿ ಹುದ್ದೆ ಸೃಷ್ಟಿಗೆ ಈ ಸಂದರ್ಭದಲ್ಲಿ ಒಮ್ಮತಕ್ಕೆ ಬರಲಾಗಿದೆ. ಸಂಪುಟ ವಿಸ್ತರಣೆಯ ಬೆನ್ನಲ್ಲೇ ಈ ನೇಮಕಾತಿ ನಡೆಯುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಒಕ್ಕಲಿಗರು, ಲಿಂಗಾಯತರು, ಅಲ್ಪ­ಸಂಖ್ಯಾತರು, ದಲಿತರು ಮತ್ತು ಹಿಂದು­ಳಿದ ವರ್ಗಗಳ ತಲಾ ಒಬ್ಬರನ್ನು ಸಂಸ­ದೀಯ ಕಾರ್ಯದರ್ಶಿ ಹುದ್ದೆಗೆ ನೇಮಿಸುವ ಯೋಚನೆ ಕಾಂಗ್ರೆಸ್‌ ನಾಯಕರಲ್ಲಿದೆ. ಯುವ ಶಾಸಕರನ್ನೇ ಈ ಹುದ್ದೆಗೆ ನೇಮಿಸಬೇಕು ಎಂದು ತೀರ್ಮಾನಿಸಲಾಗಿದೆ.

ಎ.ಮಂಜು, ರಾಜಶೇಖರಗೌಡ ಸೇರಿದಂತೆ ಹಲವು ಶಾಸಕರ ಹೆಸರು ಪರಿಶೀಲನೆ­ಯಲ್ಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಯಾರನ್ನು ನೇಮಿಸಬೇಕು ಎಂಬುದನ್ನು ಸಿದ್ದ­ರಾಮಯ್ಯ ಅವರೇ ನಿರ್ಧರಿಸ­ಲಿದ್ದಾರೆ. ಈ ವಿಷಯವನ್ನು ಅವರ ನಿರ್ಧಾರಕ್ಕೆ ಬಿಡುವ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿಪಕ್ಷಗಳ ಟೀಕೆ ಮತ್ತು ವಾಗ್ದಾಳಿ­ಗಳಿಗೆ ಸಮರ್ಥ ಉತ್ತರ ನೀಡಬಲ್ಲ ಒಬ್ಬ­ರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಸಂಸದೀಯ ಕಾರ್ಯದರ್ಶಿಗಳು ಮತ್ತು ರಾಜಕೀಯ ಕಾರ್ಯದರ್ಶಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡುವ ಸಂಭವವಿದೆ. ಸಂಪುಟ ವಿಸ್ತರಣೆ ಕುರಿತು ಸಮಾಲೋಚನೆ ನಡೆಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ನೇಮಕಾತಿಗಳ ಬಗ್ಗೆಯೂ ಸಿದ್ದರಾಮಯ್ಯ ಮತ್ತು ಪರಮೇಶ್ವರ್‌ ಪ್ರಸ್ತಾಪಿಸಲಿದ್ದಾರೆ. ವರಿಷ್ಠರ ಅನುಮತಿ ಪಡೆದು ನೇಮಕಾತಿ ಅಂತಿಮಗೊಳಿಸಲಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT