ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶದಲ್ಲಿ ಸರಸ ಸಮುದ್ರದಲ್ಲಿ ವಿರಸ

Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ದೂರದಲ್ಲಿ ಇನ್ನೇನು ಬಾನಿನ ಹೊಟ್ಟೆಯನ್ನು ಹರಿದು ಬರಬೇಕು ಎನ್ನುವ ಸೂರ್ಯ. ಆತ ಬಾನಿನ ಹೊಟ್ಟೆಯನ್ನು ಹರಿದು ಹೊರಗೆ ಬರುವುದಕ್ಕಿಂತ ಮುಂಚೆ ದಿಗಂತದ ಅಂಚಿನಲ್ಲಿ ರಕ್ತದ ಸಿಂಚನ. ನೆಲದ ಮೇಲೆ ಚುಮು ಚುಮು ಬೆಳಕು. ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ ನಗರದ ಹೊರವಲಯದ ದೊಡ್ಡ ಹೊಲವೊಂದರಲ್ಲಿ ಜಗತ್ತಿನ ವಿವಿಧ ಕಡೆಗಳಿಂದ ಬಂದಿದ್ದ ಪ್ರವಾಸಿಗರನ್ನು ಕರೆದುಕೊಂಡು ಬಂದ ಮೂರು ಬಸ್‌ಗಳು ಹೊಲದ ಅಂಚಿನಲ್ಲಿ ನಿಂತವು. ಬಸ್ಸಿನಲ್ಲಿ ಇದ್ದ ನಾವೆಲ್ಲ ಆಕಾಶಕ್ಕೆ ಲಗ್ಗೆ ಹಾಕಲು ಬಂದಿದ್ದೆವು.

ಅದು ಮನುಷ್ಯನ ಅನಾದಿ ಆಸೆ. ಮುಗಿಲುಗಳ ನಡುವೆ, ಮೋಡಗಳ ಮೇಲೆ ಹಕ್ಕಿಯ ಹಾಗೆ ಹಾರಬೇಕು ಎಂದು ಮನುಷ್ಯ ಕನಸು ಕಂಡುದಕ್ಕೆ ದೊಡ್ಡ ಇತಿಹಾಸವೇ ಇದೆ. ನಾವೂ ಅದೇ ಆಸೆ ಹೊತ್ತು, ಉಗಿ ಗಾಳಿ ತುಂಬಿದ ಮೂರು ಭಾರಿ ಬಲೂನಿನಲ್ಲಿ ಕುಳಿತು ಹಾರಲು ಅಲ್ಲಿಗೆ ಬಂದಿದ್ದೆವು.

 

ಇನ್ನೇನು ಹಾರಲು ಸಿದ್ಧ ಉಗಿಗಾಳಿ ಬಲೂನ್

ದೊಡ್ಡ ಆನೆಯ ಹಾಗೆ ನೆಲದ ಮೇಲೆ ಬಿದ್ದಿದ್ದ ಬಲೂನಿನ ಹೊಟ್ಟೆಯಲ್ಲಿ ಬಿಸಿ ಹೀಲಿಯಂ ಅನಿಲವನ್ನು ಆಗಲೇ ನಮ್ಮ ಪೈಲಟ್‌ ತುಂಬುತ್ತಿದ್ದ. ಅದು ಮೂವತ್ತು ಮೀಟರ್‌ ಉದ್ದ, ಇಪ್ಪತ್ತು ಮೀಟರ್‌ ಅಗಲದ ಭಾರಿ ಗಾತ್ರದ ಹಳದಿ ಬಲೂನು. ಬೆಂಕಿ ಉಗುಳಿನ ಜತೆಗೆ ಭರ್ರ ಎಂದು ಸದ್ದು ಮಾಡುತ್ತ ಚಿಮ್ಮಿ ಬರುತ್ತಿದ್ದ ಅನಿಲ ಒಳಗೆ ಹೋದಂತೆಲ್ಲ ಬಲೂನು ನಿಧಾನವಾಗಿ ಮೇಲೆ ಏಳತೊಡಗಿತು. ಅದಕ್ಕೆ ಕಟ್ಟಿದ್ದ ತೊಟ್ಟಿಲಿನಂಥ ಆಯತಾಕಾರದ ಬುಟ್ಟಿಯಲ್ಲಿ ನಾವು 15–20 ಜನ ಹತ್ತಿ ನಿಂತೆವು. ನೆಲದ  ಮೇಲೆ ನಿಂತಿದ್ದ ಟಾಟಾ ಸುಮೊದಂಥ ಒಂದು ಜೀಪಿಗೆ ಕಟ್ಟಿದ್ದ ಹಗ್ಗಗಳನ್ನು ಬಿಚ್ಚಿದ ಕೂಡಲೇ ನಿಧಾನವಾಗಿ ಬಲೂನು ಆಕಾಶದ ಕಡೆಗೆ ತೇಲುತ್ತ ಹಾರತೊಡಗಿತು.

ನಮ್ಮ ಬಲೂನಿಗಿಂತ ಮುಂಚೆಯೇ ಇನ್ನೂ ಎರಡು ದೊಡ್ಡ ಬಲೂನುಗಳು ಆಗಲೇ ಆಕಾಶಕ್ಕೆ ಲಗ್ಗೆ ಇಟ್ಟಿದ್ದುವು. ಅವುಗಳ ಪೈಲಟ್‌ಗಳ ಜತೆಗೆ ನಿಸ್ತಂತು ಸಂದೇಶದ ಮೂಲಕ ಮಾತನಾಡುತ್ತ ನಮ್ಮ ಪೈಲಟ್‌ ಗಾಳಿಯ ಚಲನೆಯನ್ನು ನೋಡಿಕೊಂಡು ನಾಲ್ಕು ಸಾವಿರ ಅಡಿ ಮೇಲಕ್ಕೆ ನಮ್ಮ ಬಲೂನನ್ನು ತೆಗೆದುಕೊಂಡು ಹೋದ. ಕೈಗೆ ತಾಕುವಂತೆ ಇದ್ದ ಅರಳೆಯ ಹಾಗೆ ಚದುರಿದ ಮೋಡಗಳ ಮೇಲೆ ಬಲೂನು ಹಾಯಾಗಿ ಹಾರುತ್ತಿದ್ದರೆ ಪೌರಾಣಿಕ ಸಿನಿಮಾಗಳಲ್ಲಿ ದೇವತೆಗಳ ವೇಷ ಧರಿಸಿದ ನಟ ನಟಿಯರು ಗಂಧರ್ವ ಲೋಕದಲ್ಲಿ, ವಿಚಿತ್ರ ವಿಮಾನಗಳಲ್ಲಿ ವಿಹರಿಸುವಾಗ ಹೀಗೆಯೇ ಅಲ್ಲವೇ ಮೋಡಗಳು ಅವರ ಕಾಲ ತುದಿಯಲ್ಲಿ ತೇಲುವುದು ಎನ್ನುವಂಥ ಭಾವನೆ. ಪಕ್ಕದಲ್ಲಿ ಊರ್ವಶಿ, ರಂಭೆಯರು ಇರಲಿಲ್ಲ ಎನ್ನುವುದೊಂದೇ ಕೊರತೆ!

ಇದಕ್ಕೆ ಉಗಿ ಗಾಳಿ ಬಲೂನು ಹಾರಾಟ ಎಂದು ಹೆಸರು. ಬಲೂನಿನ ಒಳಗೆ ನೂರು ಡಿಗ್ರಿ ಸೆಲ್ಷಿಯಸ್‌ನಷ್ಟು ಬಿಸಿ ಗಾಳಿ ತುಂಬಿಕೊಂಡಿರುತ್ತದೆ. ಗಾಳಿಯ ಪ್ರಮಾಣ ಕಡಿಮೆ ಆಗದಂತೆ ಅಗಾಗ ಅದನ್ನು ಪೈಲಟ್‌ ತುಂಬುತ್ತಲೇ ಇರುತ್ತಾನೆ. ಗೋಲ್ಡ್‌ ಕೋಸ್ಟ್‌ ನಗರ ಅದಕ್ಕೆ ಹೆಸರುವಾಸಿ. ನಮ್ಮ ಹೋಟೆಲಿನಿಂದ ಬೆಳಿಗ್ಗೆ 3.55ಕ್ಕೆಲ್ಲ ನಮ್ಮನ್ನು 60–70 ಕಿಲೋ ಮೀಟರ್‌ ದೂರದ ಈ ಹಳ್ಳಿಗಾಡಿಗೆ ಕರೆದುಕೊಂಡು ಬಂದಿದ್ದರು. ಸೂರ್ಯ ಉದಯ ಆಗುವುದಕ್ಕಿಂತ ಮುಂಚೆಯೇ ಬಲೂನು ಹಾರಾಟ ಮಾಡಬೇಕು. ಆಗಲೇ ಗಾಳಿಯ ಚಲನೆ ಬಲೂನು ಹಾರಾಟಕ್ಕೆ ಅನುಕೂಲವಾಗಿರುತ್ತದೆ. ಮನುಷ್ಯ ಎಷ್ಟೆಲ್ಲ ಹಾರಾಡಿದರೂ ನಿಸರ್ಗದ ಕೃಪೆಯನ್ನು ಮೀರಲು ಆಗುವುದಿಲ್ಲ. ಗಾಳಿಯ ಅವಕೃಪೆ ಇದ್ದರೆ ಹಾರಾಟವನ್ನು ರದ್ದು ಮಾಡಿ ಕಟ್ಟಿದ ಹಣವನ್ನು ವಾಪಸು ಕೊಟ್ಟು ಕಳುಹಿಸುತ್ತಾರೆ.

ಉಗಿ ಗಾಳಿ ಬಲೂನಿನ ಪೈಲಟ್‌ಗೆ ವಿಮಾನಯಾನದ ಪೈಲಟ್‌ಗೆ ಅನ್ವಯಿಸುವ ನಿಯಮಗಳೇ ಅನ್ವಯಿಸುತ್ತವೆ. 500 ಗಂಟೆ ಕಾಲ ಬಲೂನು ಹಾರಾಟ ನಡೆಸಿದ ಪೈಲಟ್‌ಗೆ ವಾಣಿಜ್ಯ ಪೈಲಟ್‌ ಲೈಸೆನ್ಸ್‌ ಸಿಗುತ್ತದೆ. ನಾವೇನೋ ಅರ್ಧ ಗಂಟೆ, ಒಂದು ಗಂಟೆಯ ಪ್ರಯಾಣಕ್ಕೆ ಹಣ ಪಾವತಿ ಮಾಡಿದ್ದೆವು. ಆದರೆ, ಇಂಥ ಬಲೂನಿನಲ್ಲಿ ಇಡೀ ಜಗತ್ತನ್ನೇ ಸುತ್ತಿ ದಾಖಲೆ ಮಾಡಿದವರೂ ಇದ್ದಾರೆ. ಆಕಾಶದಲ್ಲಿ ತೇಲುತ್ತ ಮದುವೆ ನಿಶ್ಚಿತಾರ್ಥ ಮಾಡಿಕೊಂಡವರೂ ಇದ್ದಾರೆ. ನಾವು ಹಾರಿದ ಬಲೂನುಗಳಲ್ಲಿ 55 ಜೋಡಿಗಳು ಮದುವೆಯಾಗಿವೆ. ಒಂದು ಜೋಡಿ ಮಾತ್ರ ಮದುವೆ ಮಾಡಿಕೊಳ್ಳಬೇಕು ಎಂಬ ಗಡಿಬಿಡಿಯಲ್ಲಿ ಉಂಗುರವನ್ನೇ ಮರೆತು ಬಂದಿತ್ತಂತೆ!

ಮನುಷ್ಯನೇ ಹಾಗೆ. ಆತ ಸಾಹಸವನ್ನು ಬಯಸುತ್ತಾನೆ. ಸಮುದ್ರ ತಟದ ಗೋಲ್ಡ್‌ ಕೋಸ್ಟ್ ಪಟ್ಟಣ ‘ಸರ್ಫರ್ಸ್‌ ಸ್ವರ್ಗ’ ಎಂದೇ ಹೆಸರು ಮಾಡಿದೆ. ‘ಸರ್ಫ್ ಬೋರ್ಡ್’ಗಳನ್ನು ಕಾಲಿನ ಅಡಿ ಇಟ್ಟುಕೊಂಡು ನುಗ್ಗಿ ಬರುವ ತೆರೆಗಳ ಮೇಲೆ ಏರಿ ಹೋಗಿ ಕೆಳಗೆ ಬಿದ್ದು, ಮತ್ತೆ ಮೇಲೆ ಎದ್ದು ಆಟ ಆಡುವುದೂ ಒಂದು ಸಾಹಸವೇ. ಅಷ್ಟು ದೊಡ್ಡ ಸಮುದ್ರದಲ್ಲಿ ನುಗ್ಗಿ ಬರುವ ತೆರೆಗಳ ಎದುರು ಮನುಷ್ಯ ಒಂದು ಇರುವೆಗೂ ಸಮನಲ್ಲ. ಆದರೂ ಆತನಿಗೆ ಜೀವದ ಜತೆಗೆ ಚೆಲ್ಲಾಟ ಆಡುವ ಹುಕಿ. ಗೋಲ್ಡ್‌ಕೋಸ್ಟ್‌ ನಗರದಲ್ಲಿ ಬಂದು ಇಳಿದ ಕೂಡಲೇ ನಾವೂ ಇಂಥದೇ ಒಂದು ಸಾಹಸ ಮಾಡಿದೆವು. ಅದು ಸಮುದ್ರದಲ್ಲಿ ಜೆಟ್‌ ಬೋಟ್‌ ರೈಡಿಂಗ್ ಸಾಹಸ.

10–12 ಮಂದಿ ಕುಳಿತುಕೊಳ್ಳುವ ಒಂದು ಪುಟ್ಟ ಬೋಟಿನಲ್ಲಿ ನಮ್ಮನ್ನೆಲ್ಲ ಕೂಡ್ರಿಸಿಕೊಂಡು ಇಂಗ್ಲಿಷ್‌ ಸಿನಿಮಾದ ಒರಟನಂತೆ ಇದ್ದ ಒಬ್ಬ ಚಾಲಕ ಆಳ ಸಮುದ್ರಕ್ಕೆ ಕರೆದುಕೊಂಡು ಹೋದ. ಹಾಗೆಯೇ ಸುಮ್ಮನೇ ನಿಧಾನವಾಗಿ ತೇಲಿಕೊಂಡು ಹೋದನೇ? ಮೊದಲೆ ಹೇಳಿದೆನಲ್ಲ, ಆತ ಒಬ್ಬ ಒರಟ. ನಲವತ್ತು ಕಿಲೋ ಮೀಟರ್‌ ವೇಗದಿಂದ ಸಮುದ್ರದ ಮೇಲೆ ಬೋಟ್‌ ಬಿಟ್ಟುಕೊಂಡು ಹೊರಟ. ಸುಮ್ಮನೇ ಹೋದನೇ? ಸಮುದ್ರದ ಮಧ್ಯದಲ್ಲಿ ನೆಟ್ಟಿದ್ದ, ಅದು ಹೇಗೆ ನೆಟ್ಟಿದ್ದರೋ, ಒಂದು ಕಬ್ಬಿಣದ ಗುರುತು ಕಂಬಕ್ಕೆ ಇನ್ನೇನು ಡಿಕ್ಕಿ ಹೊಡೆದೇ ಬಿಟ್ಟ ಎನ್ನುವಂತೆ ತೀರಾ ಹತ್ತಿರಕ್ಕೆ ತೆಗೆದುಕೊಂಡು ಹೋಗಿ ಗರಕ್ಕನೇ ಬೋಟನ್ನು ತಿರುಗಿಸಿದ. ತಿರುಗಿಸಿದ ವೇಗಕ್ಕೆ ಬೋಟು ಒಂದು ಸಾರಿ ಎಡಕ್ಕೆ, ಇನ್ನೊಂದು ಸಾರಿ ಬಲಕ್ಕೆ ಬಾಗಿ ಇನ್ನೇನು ತಲೆ ಕೆಳಗೆ ಆಗಿ ಬಿಡುತ್ತದೆ ಎನ್ನುವ ಹಾಗೆ ವಾಲಿತು. ಸಮುದ್ರದ ನೀರೆಲ್ಲ ಮೇಲೆ ಚಿಮ್ಮಿ ಬೋಟಿನ ಒಳಗೆ ಬಿತ್ತು. ಮೈಯೆಲ್ಲ ಒದ್ದೆ.

ಸುಮಾರು ಒಂದು ಗಂಟೆ ಕಾಲ ಹೀಗೆ ಬೋಟಿನಲ್ಲಿ ಸುತ್ತಿಸಿದ ಆತ, ತನ್ನ ಕೈಯನ್ನು ಸುದರ್ಶನ ಚಕ್ರದ ಹಾಗೆ ತನ್ನ ತಲೆಯ ಮೇಲೆ ಸುತ್ತಿಸಿದ. ಅಂದರೆ  ಬೋಟನ್ನು ಮುನ್ನೂರಾ ಅರವತ್ತು ಡಿಗ್ರಿ ತಿರುಗಿಸುತ್ತಾನೆ ಎಂದು ಅರ್ಥ. ಸೀಟಿನಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದ ನಾವೆಲ್ಲ ‘ಓ’ ಎಂದು ಕಿರುಚುತ್ತಿರುವಾಗಲೇ ಬೋಟು ತನ್ನ ಸುತ್ತ ಗರ್ರನೇ ತಿರುಗಿ ನಿಂತಿತು. ಆತ ಒಂದು ಸಾಹಸ ಮಾಡಿದನೇ, ಎರಡು ಮಾಡಿದನೇ? ಬೋಟನ್ನು ನೀರಿನ ಮೇಲೆ ಕುಕ್ಕಿದಂತೆ ಮಾಡುತ್ತಿದ್ದ. ಮೊರವನ್ನು ಕೇರಿದಂತೆ ಮಾಡುತ್ತಿದ್ದ.

ನಾವೆಲ್ಲ ಒದ್ದೆಯಾಗುವುದು ಆತನಿಗೆ ಬೇಕಿತ್ತು. ನಮ್ಮ ಹಿಂದೆ ಮೂರು ಸೀಟು ಬಿಟ್ಟು ಕುಳಿತಿದ್ದ ಚೀನಾದ ದಂಪತಿ ಗಾಬರಿಯಾಗಿ ಅಳತೊಡಗಿದರು. ಅವರು ಅಳುತ್ತಿದ್ದಾರೆ ಎಂದು ತಿಳಿದು ಅವರ ಮಗನೂ ಜೋರಾಗಿ ಅಳತೊಡಗಿದ. ಆದರೆ, ನಮ್ಮ ಚಾಲಕನಿಗೆ ಕರುಣೆಯೇನೂ ಇರಲಿಲ್ಲ. ನಮ್ಮ ಇಡೀ ಮೈ ಒದ್ದೆಯಾದಂತೆ, ನನ್ನ ಪೃಷ್ಟ ಭಾಗ ಒದ್ದೆಯಾದಂತೆ ನನಗೆ ಆತಂಕ ಶುರುವಾಯಿತು. ನನ್ನ ಜತೆಗೆ ಒಯ್ದಿದ್ದ ಡಾಲರ್‌ಗಳೆಲ್ಲ ತೋಯ್ದು ತಪ್ಪಡಿಯಾಗಿ ಬಿಟ್ಟಿದ್ದವು.

ಬೋಟಿನಿಂದ ಇಳಿದು ಹೊರಗೆ ಬರುವ ವೇಳೆಗೆ ಬಟ್ಟೆಗಳ ಮೇಲಿನಿಂದ ನೀರು ನೆಲಕ್ಕೆ ಹರಿಯತೊಡಗಿತ್ತು. ಆ ಚಾಲಕ ಒರಟನಾಗಿರಲಿಲ್ಲ. ಆತನಿಗೆ ನಮ್ಮನ್ನು ರಂಜಿಸುವ ಕೆಲಸ ವಹಿಸಲಾಗಿತ್ತು. ಅದನ್ನು ಆತ ತುಂಬ ಸೊಗಸಾಗಿ ನಿರ್ವಹಿಸಿದ್ದ. (ಆದರೆ, ಆತ ಹಾಗೆ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆಸಲು ಹೋಗಿ ತಪ್ಪಿಸುವಾಗ ಬೋಟಿನ ಸ್ಟಿಯರಿಂಗ್‌ ಕೈ ಕೊಟ್ಟರೆ ಏನು ಎಂಬ ಭಯ ಈಗಲೂ ನನ್ನನ್ನು ಕಾಡುತ್ತಿದೆ). ಆತನ ಕೈಲಿ ನಮ್ಮ ಜೀವವಿತ್ತು. ಆತ ಪ್ರೀತಿ ತುಂಬಿದ ಮನುಷ್ಯನಾಗಿದ್ದ. ಇಲ್ಲವಾದರೆ ಆತ ನಮ್ಮನ್ನು ದಡಕ್ಕೆ ತಂದು ಮುಟ್ಟಿಸುತ್ತಿರಲಿಲ್ಲ. ಸಮುದ್ರ ದೇವನ ಒಡಲಿಗೆ ಒಪ್ಪಿಸಿ ಬರುತ್ತಿದ್ದ!

ಬೋಟು ಇಳಿದು ಬಂದ ಮೇಲೆ ಅಲ್ಲಿ ಬಟ್ಟೆ ಬದಲಿಸಿಕೊಳ್ಳಲೂ ಜಾಗ ಇರಲಿಲ್ಲ. ಯಾವುದೋ ಟಾಯ್ಲೆಟ್‌ಗೆ ನುಗ್ಗಿ ಬಟ್ಟೆ ಬದಲಿಸಿಕೊಂಡು ನಾರ್ಥಕ್ಲಿಫ್‌ ಸರ್ಫ್ ಲೈಫ್‌ ಸೇವಿಂಗ್‌ ಕ್ಲಬ್ಬಿಗೆ ಬಂದು ಊಟಕ್ಕೆ ಕುಳಿತೆವು. ನನ್ನ ಪಾಕೀಟನ್ನು ತೆಗೆದು ಅದರಲ್ಲಿ ಇದ್ದ ಎಲ್ಲ ಡಾಲರ್‌ಗಳನ್ನು ಟೇಬಲ್‌ ಮೇಲೆ ಹರವಿ ಲ್ಯಾಮಿನೇಟೆಡ್‌ ಮೆನು ಕಾರ್ಡಿನಿಂದ ಗಾಳಿ ಹಾಕಲು ಶುರು ಮಾಡಿದೆ. ನಾನು ಹಾಗೆ ಹಣ ಹರವಿಕೊಂಡು ಕುಳಿತುದನ್ನು ನೋಡಿ, ಊಟ ಬಡಿಸಲು ಬಂದ ಹುಡುಗಿ ಆಸೆಕಣ್ಣುಗಳಿಂದ ನನ್ನನ್ನೇ ನೋಡಲು ತೊಡಗಿದಳು. ಅಥವಾ ನನಗೆ ಹಾಗೆ ಅನಿಸಿತು!

ಗೋಲ್ಡ್‌ಕೋಸ್ಟ್‌ ನಗರ ಜೂಜು ಅಡ್ಡೆಗಳಿಗೂ ಪ್ರಸಿದ್ಧ. ನಾನು ಒಬ್ಬ ಭಾರಿ ಶ್ರೀಮಂತ, ಜೂಜು ಆಡಲು ಬಂದವನು ಇರಬೇಕು ಎಂದು ಸುತ್ತಮುತ್ತ ಇದ್ದವರು ಅಂದುಕೊಂಡರೋ ಏನೋ? ನಾನೇನೋ ನೋಟುಗಳನ್ನು ಇಲ್ಲಿ ಸ್ವಲ್ಪ ಒಣಗಿಸಿಕೊಂಡು ರೂಮಿಗೆ ಹೋಗಿ ಹೇರ್‌ ಡ್ರೈಯರ್‌ ಯಂತ್ರ ಬಳಸಿ ಮತ್ತಷ್ಟು ಒಣಗಿಸಿಕೊಂಡೆ. ನನ್ನ ಜತೆಗೆ ಬಂದಿದ್ದವರೊಬ್ಬರು ತಮ್ಮ ಪಾಸ್‌ಪೋರ್ಟ್‌ ಅನ್ನೂ ಜೇಬಿನಲ್ಲಿ ಇಟ್ಟುಕೊಂಡಿದ್ದರು. ಅವರಿಗೆ  ಯಾರೋ ಹೇಳಿದ್ದರಂತೆ: ಎಲ್ಲಿಗೆ ಹೋದರೂ ಪಾಸ್‌ ಪೋರ್ಟ್‌ ಅನ್ನು ಮಾತ್ರ ಜತೆಯಲ್ಲಿಯೇ ಇಟ್ಟುಕೊಳ್ಳಿ ಎಂದು! ಅವರ ಅದೃಷ್ಟಕ್ಕೆ ಪಾಸ್‌ಪೋರ್ಟ್‌ ಅದು ಹೇಗೋ ಒದ್ದೆಯಾಗಿರಲಿಲ್ಲ.

ನನ್ನ ಹೆಂಡತಿಗೆ ನನ್ನ ಬಗ್ಗೆ ಯಾವಾಗಲೂ ಅನುಮಾನ. ಅಪನಂಬಿಕೆ. ಆಸ್ಟ್ರೇಲಿಯಾಕ್ಕೆ ಹೋಗಿ ಏನೇನು ಮಾಡುತ್ತೀರಿ ಎಂದು ಆಕೆ ಎಷ್ಟು ಕೇಳಿದ್ದರೂ ‘ನೋಡೋಣ’, ‘ಗೊತ್ತಿಲ್ಲ’ ಎಂದು ಮಗುಂ ಆಗಿ ಹೇಳಿದ್ದೆನೇ ಹೊರತು ಏನೆಲ್ಲ ಮಾಡುತ್ತೇನೆ ಎಂದು ಹೇಳಿರಲಿಲ್ಲ. ನನ್ನ ಮಗನಿಗೆ ಮಾತ್ರ ನನ್ನ ಪ್ರಯಾಣದ ವಿವರದ ಮೇಲ್‌ ಕಳಿಸಿದ್ದೆ. ಅವನೂ ತಾಯಿಯ ಎದುರು ಬಾಯಿ ಬಿಟ್ಟಿರಲಿಲ್ಲ. ನನ್ನ ಬಾಯಿ ಬಿಡಿಸಲು ಪ್ರಯತ್ನಿಸಿ ಸುಸ್ತಾದ ಆಕೆ, ಕೊನೆಗೆ ಹೋಗುವಾಗ, ‘ಅಲ್ಲಿ ಹೋಗಿ ಏನೇನೋ ಹುಚ್ಚುಚ್ಚಾರ ಮಾಡಬೇಡಿ’ ಎಂದು ತಾಕೀತು ಮಾಡಿದಳು.

ಆಕೆಗೆ ಗೊತ್ತು : ಈ ಗಂಡಸರನ್ನು ಸುಧಾರಿಸುವುದು ಕಷ್ಟ ಎಂದು! ಗೋಲ್ಡ್‌ಕೋಸ್ಟ್‌ಗೆ ಬಂದು ಇಂಥ ಹುಚ್ಚುಚ್ಚಾರಗಳನ್ನೆಲ್ಲ ಮಾಡುವುದಕ್ಕಿಂತ ಮುಂಚೆಯೇ ಸಿಡ್ನಿಯಲ್ಲಿ ಇನ್ನೊಂದು ಹುಚ್ಚುಚ್ಚಾರ ಕೆಲಸವನ್ನೇ ನಾನು ಮಾಡಿದೆ. ಸಿಡ್ನಿ ತಟದ ಪೆಸಿಫಿಕ್‌ ಸಾಗರದ ಮೇಲೆ 134 ಮೀಟರ್‌ ಎತ್ತರದ ಭಾರಿ ಗಾತ್ರದ ಸೇತುವೆಯನ್ನು ಯಾರೋ ಮಹಾನುಭಾವ 1930ರಲ್ಲಿಯೇ ನಿರ್ಮಿಸಿದ್ದಾನೆ. ಸಿಡ್ನಿಯ ಬಂದರು ಸೇತುವೆ ಎಂದು ಹೆಸರಾಗಿರುವ ಈ ಸೇತುವೆ ಕೆಳಗೆ ಭಾರಿ ಗಾತ್ರದ ಹಡಗುಗಳು ನಿರಾತಂಕವಾಗಿ ಚಲಿಸುತ್ತವೆ ಎಂದರೆ ಅದು ಎಷ್ಟು ಎತ್ತರ ಇರಬಹುದು ಎಂದು ಊಹೆ ಮಾಡಬಹುದು. ಅಂಥ ಸೇತುವೆಯ ಮೇಲೆ ತಂಡಗಳಲ್ಲಿ ಜನರನ್ನು ಕರೆದುಕೊಂಡು ಹೋಗುತ್ತಾರೆ.

ಹೋಗುವುದಕ್ಕಿಂತ ಮುಂಚೆ ಗುಂಡು ಹಾಕಿದ್ದೀರಾ ಎಂದು ನಿಮ್ಮ ಉಸಿರು ತಪಾಸು ಮಾಡುತ್ತಾರೆ. ನಿಮ್ಮ ಬಟ್ಟೆಗಳನ್ನೆಲ್ಲ (ಕನಿಷ್ಠ ಉಡುಪು ಬಿಟ್ಟು) ತೆಗೆಸಿ ಬೇರೆ ಬಗೆಯ ಸಮವಸ್ತ್ರಗಳನ್ನು ತೊಡಿಸುತ್ತಾರೆ. ಹೊಟ್ಟೆಗೆ ಒಂದು ಬೆಲ್ಟ್‌ ಕಟ್ಟುತ್ತಾರೆ. ಅದಕ್ಕೆ ಒಂದು ಸರಕಣಿಯನ್ನು ಸಿಕ್ಕಿಸುತ್ತಾರೆ. ಆ ಸರಕಣಿಯನ್ನು ಸೇತುವೆ ಹತ್ತುವ ಮೆಟ್ಟಿಲುಗಳ ಪಕ್ಕದ ತಂತಿಗೆ ತಗುಲಿಸುತ್ತಾರೆ. ತಲೆಗೆ ಒಂದು ಹಿಯರಿಂಗ್‌ ಏಡ್‌ ಸಿಕ್ಕಿಸುತ್ತಾರೆ.

ನಮ್ಮ ತಂಡದ ನಾಯಕನೂ ಆದ ಮಾರ್ಗದರ್ಶಿ ವಿವರಣೆ ಕೊಡುತ್ತ ಹೋಗುವುದನ್ನು ಕೇಳಲು ಅದು ನೆರವಾಗುತ್ತದೆ. ಒಬ್ಬೊಬ್ಬರೇ ಮಾತ್ರ ಸಾಗಬಹುದಾದ 432 ಮೆಟ್ಟಿಲುಗಳ ಈ ಸೇತುವೆ ಏರುವಾಗ ಅನೇಕ ಸಾರಿ ಕೆಳಗಿನ ಸಮುದ್ರ ನೋಡಿ ನಾವು ಸತ್ತು ಹೋಗಿ ಬಿಡಬಹುದು ಎಂದು ಭಯವಾಗುತ್ತದೆ. ತೊಳ್ಳೆ ನಡುಗಿದಂತೆ ಆಗುತ್ತದೆ. ನಮ್ಮ ಊರಿನಲ್ಲಿ  ಮಾಳಿಗೆ ಏರಲು ಇಟ್ಟ ಏಣಿಯನ್ನು ಕೂಡ ನಾನು ಎಂದೂ ಹತ್ತಿದವನು ಅಲ್ಲ. ಏಣಿಯಿಂದ ಇಳಿಯುವಾಗ ಕೆಳಗೆ ಬಿದ್ದು ಬಿಡುತ್ತೇನೆ ಎಂಬ ಭಯ ನನಗೆ ಯಾವಾಗಲೂ ಕಾಡುತ್ತಿತ್ತು. ಮುಂದೆ ಮುಖ ಮಾಡಿ ಇಳಿಯಬೇಕೇ? ಹಿಂದೆ ಮುಖ ಮಾಡಿ ಇಳಿಯಬೇಕೇ ಎಂದು ಗೊಂದಲ. ಹೇಗೆ ಇಳಿದರೂ ಕೆಳಗಿನ ನೆಲ ಕಾಣುತ್ತಿತ್ತು. ಅನೇಕ ಸಾರಿ ಇಳಿಯಲು ಹೆದರಿ ಮತ್ತೆ ಮಾಳಿಗೆಯ ಮೇಲೆಯೇ ಹೋಗಿ ಕುಳಿತು ಬಿಡುತ್ತಿದ್ದೆ! ನನಗೆ ಎತ್ತರದ ಭಯ!

ಸೇತುವೆ ಹತ್ತುವಾಗ ಕೆಳಗೆ ನೋಡಬಾರದು ಎಂದು ಎಷ್ಟೇ ಅಂದುಕೊಂಡರೂ ಮೊರೆಯುವ ಸಮುದ್ರ, ಕೆಳಗೆ ಭರ್‌ ಎಂದು ಹರಿದು ಹೋಗುವ ಬಸ್ಸುಗಳು, ಗಳಿಗೆಗೆ ಒಂದರಂತೆ ಬರುತ್ತಿದ್ದ ರೈಲು ಎಲ್ಲವೂ ಎದೆಯ ಢವ ಢವವನ್ನು ಇನ್ನಷ್ಟು ಹೆಚ್ಚು ಮಾಡುತ್ತಿದ್ದವೇ ಹೊರತು, ನೆಲಕ್ಕೆ ಹತ್ತಿರ ಇದ್ದೇನೆ ಎಂಬ ಭಾವ ಮೂಡಿಸುತ್ತಿರಲಿಲ್ಲ! ಒಂದು ಸಾರಿ ಮೇಲೆ ಏರಿದ ಮೇಲೂ ಕೆಳಗೆ ನೋಡಲು ಭಯ. ಭಾರಿ ಧೈರ್ಯಸ್ಥನ ಹಾಗೆ ಎದುರುಗಡೆ ಮಾತ್ರ ನೋಡುತ್ತ ನಿಂತಿದ್ದೆ! ಆ ಕಡೆ ಕಣ್ಣು ಹಾಯಿಸಿದಷ್ಟು ದೂರ ಕಾಣುವ ನಿವಾಂತ ಸಮುದ್ರ. ಬೆಟ್ಟ ಸಾಲು. ಈ ಕಡೆ, ಸಿಡ್ನಿಯ ಪ್ರವಾಸಿ ಆಕರ್ಷಣೆಯ ಶಿಖರದಂತೆ ಇರುವ ಅಪೆರಾ ಹೌಸ್‌. ಇಂಥ ಸೇತುವೆಯ 134 ಮಿಟರ್‌ ಎತ್ತರದ ಜಾಗದ ಮೇಲೆ ಇದುವರೆಗೆ ಮೂವತ್ತು ಲಕ್ಷ ಮಂದಿ ಬಂದು ನಿಂತಿದ್ದಾರೆ.

1930ರಲ್ಲಿ ಈ ಸೇತುವೆಯನ್ನು ನಿರ್ಮಿಸಿದರೂ ಅದರ ಮೇಲೆ ಹತ್ತಲು ಶುರು ಮಾಡಿದ್ದು 1989ರಲ್ಲಿ. ಪಾಲ್‌ ಕೇವ್‌ ಎಂಬುವ ಇದನ್ನು ಶುರು ಮಾಡಿದ. ಈ ಸೇತುವೆ ಹತ್ತುವುದು ಎಂಥ ಹುಚ್ಚು ಎಂದರೆ ಮ್ಯಾಂಚೆಸ್ಟರ್‌ನ ಕಾರ್ಲ್‌ ಕೂಕರ್‌ ಎಂಬಾತ 17,000 ಕಿಲೋ ಮೀಟರ್‌ ದೂರ ಕ್ರಮಿಸಿ ಸೇತುವೆಯನ್ನು ಹತ್ತಿ ಮತ್ತೆ ಒಂದೇ ದಿನದಲ್ಲಿ ತನ್ನ ದೇಶಕ್ಕೆ ಹೋಗಿದ್ದ. ಅಂದರೆ ಬರಲು ಮತ್ತು ಹೋಗಲು ಆತ ಕ್ರಮಿಸಿದ್ದು 34,000 ಕಿಲೋ ಮೀಟರ್‌ ದಾರಿ. ಜಗತ್ತಿನ ಅತಿ ದೊಡ್ಡದಾದ ಈ ಸೇತುವೆಯನ್ನು ಕಟ್ಟಲು 52,800 ಟನ್‌ ಕಬ್ಬಿಣ ಬಳಸಿದ್ದಾರೆ. ಕಬ್ಬಿಣದ ಬೀಮುಗಳನ್ನು ಜೋಡಿಸಲು 60 ಲಕ್ಷ ರಿವೆಟ್‌ಗಳನ್ನು ಬಳಸಿದ್ದಾರೆ. ಒಂದು ಸಾರಿ ಈ ಸೇತುವೆಗೆ ಕಪ್ಪು ಮಿಶ್ರಿತ ಹಸಿರು ಬಣ್ಣ ಬಳಿಯಬೇಕು ಎಂದರೆ 2.72 ಲಕ್ಷ ಲೀಟರ್‌ ಬಣ್ಣ ಬೇಕಾಗುತ್ತದೆ.

ಮನುಷ್ಯ ಇಂಥ ಎಷ್ಟೆಲ್ಲ ‘ಹುಚ್ಚುಚ್ಚಾರ’ ಸೃಷ್ಟಿಗಳನ್ನು ಮಾಡಿದ್ದಾನೆಯೋ? ಕೆಲಸಗಳನ್ನು ಮಾಡಿದ್ದಾನೆಯೋ? ಆಸ್ಟ್ರೇಲಿಯಾದಲ್ಲಿ ಪ್ರವಾಸ ಮಾಡುತ್ತಿದ್ದಾಗಲೆಲ್ಲ ಎರಡು ಮೂರು ವರ್ಷಗಳ ಹಿಂದೆ ನಾನು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾಗ ಆ ದೇಶದ ಕೇಪ್‌ಟೌನ್‌ನ ಟೇಬಲ್‌ ಟಾಪ್‌ ಬೆಟ್ಟದ ತುದಿಗೆ ಕೊಕ್ಕೆ ಹಾಕಿ  ಭಾರಿ ಕೊರಕಲೊಂದರಿಂದ ಹಗ್ಗ ಹಿಡಿದು ಮೇಲೆ ಏರಿ ಬರುತ್ತಿದ್ದ ಮನುಷ್ಯ ಮತ್ತೆ ಮತ್ತೆ ನನಗೆ ನೆನಪಾಗುತ್ತಿದ್ದ.

ಲೇಖಕರು ನ್ಯೂ ಸೌತ್‌ ವೇಲ್ಸ್‌ ಮತ್ತು ಗೋಲ್ಡ್‌ಕೋಸ್ಟ್‌ನ ಪ್ರವಾಸೋದ್ಯಮ ಇಲಾಖೆಯ ಆಮಂತ್ರಣದ ಮೇಲೆ ಅಲ್ಲಿ ಪ್ರವಾಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT