ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶವೇಕೆ ನೀಲಿಯಾಗಿದೆ?

Last Updated 27 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

‘ಆಕಾಶವೇಕೆ ನೀಲಿಯಾಗಿದೆ?’ ಎಂಬುದು ಅಹಮದಾಬಾದಿನ ಸಮುದಾಯ ವಿಜ್ಞಾನ ಕೇಂದ್ರಕ್ಕೆ ಅಡಿಪಾಯ ಹಾಕುವ ಸಂದರ್ಭದಲ್ಲಿ (ಡಿಸೆಂಬರ್ 22, 1968) ಅವರು ನೀಡಿದ ಉಪನ್ಯಾಸ. ವಿಜ್ಞಾನವನ್ನು ಹೇಗೆ ಸರಳವಾಗಿ, ಪರಿಣಾಮಕಾರಿಯಾಗಿ ಹೇಳಬಹುದು ಎಂಬುದಕ್ಕೆ ಈ ಉಪನ್ಯಾಸ ಮಾದರಿಯಾಗಿದೆ. ಮೂಲ ಉಪನ್ಯಾಸದ ಸಾರ ಸಂಗ್ರಹ ಮಾಡಿಕೊಟ್ಟಿದ್ದಾರೆ ಹಿರಿಯ ಲೇಖಕ
ಟಿ.ಆರ್. ಅನಂತರಾಮು.
ಎಲ್ಲ ವಿದ್ಯಾರ್ಥಿಗಳೂ ಶಿಕ್ಷಕರೂ ಓದಬೇಕಾದ ಬರಹವಿದು.

ನಾನು ವಿಜ್ಞಾನದ ಯಾವ ವಿಚಾರವಾಗಿ ಉಪನ್ಯಾಸ ಕೊಡಬೇಕು ಎಂಬುದನ್ನು ನನಗೇ ಬಿಟ್ಟಾಗ ನಾನು ಆಯ್ಕೆ ಮಾಡಿಕೊಂಡದ್ದು ‘ಆಕಾಶವೇಕೆ ನೀಲಿಯಾಗಿದೆ?’ ಎಂಬ ವಿಷಯ. ನಿಸರ್ಗ ಈ ದಿನ ಕರುಣೆ ತೋರಿದೆ; ಆಕಾಶ ನೀಲಿಯಾಗಿದೆ. ಆದರೆ ಎಲ್ಲೆಡೆಯೂ ಅಲ್ಲ. ಬಹಳಷ್ಟು ಭಾಗದಲ್ಲಿ ಮೋಡಗಳಿವೆ. ಈ ವಿಷಯ ಆಯ್ಕೆಮಾಡಿಕೊಂಡದ್ದು ಏಕೆ ಎಂದರೆ ಇದನ್ನು ನೋಡಲು ಪ್ರಯೋಗಾಲಯಕ್ಕೇನೂ ಹೋಗಬೇಕಾಗಿಲ್ಲ; ತಲೆಯೆತ್ತಿ ಮೇಲೆ ನೋಡಿದರೆ ಸಾಕು. ಅಷ್ಟೇ ಅಲ್ಲ, ಇದರಲ್ಲಿ ವಿಜ್ಞಾನದ ಚೈತನ್ಯವಿದೆ.

ಕಣ್ಣು ಬಿಟ್ಟು, ತೆರೆದ ಕಿವಿಗಳಿಂದ ಆಲಿಸಿ ಸುತ್ತಣ ಜಗತ್ತನ್ನು ನೋಡಿದರೆ ಅದೇ ವಿಜ್ಞಾನದ ಕಲಿಕೆ. ನನ್ನ ಮಟ್ಟಿಗೆ ವಿಜ್ಞಾನ ಕೊಟ್ಟಿರುವ ಸ್ಫೂರ್ತಿಯೆಂದರೆ ಪ್ರಕೃತಿಯ ಬಗೆಗಿನ ಪ್ರೀತಿ. ನೀವು ಜಗತ್ತನ್ನು ಎಲ್ಲೇ ನೋಡಲಿ, ಪ್ರಕೃತಿಯಲ್ಲಿ ಎಲ್ಲ ಬಗೆಯ ಚಮತ್ಕಾರಗಳನ್ನೂ ಕಾಣುತ್ತೀರಿ. ನನಗೆ ಅವು ಸದಾ ಚೋದ್ಯವುಂಟುಮಾಡಿವೆ. ಸಾಮಾನ್ಯವಾಗಿ ಅದೆಲ್ಲ ಹಾಗೆಯೇ ಎನ್ನುವ ಮನೋಭಾವ ನಮ್ಮದು. ವೈಜ್ಞಾನಿಕ ಚೈತನ್ಯದ ಹೂರಣವೆಂದರೆ ಹಿಂತಿರುಗಿ ನೋಡಬೇಕು, ಮುನ್ನೋಟ ಹರಿಸಬೇಕು. ನಮ್ಮೆದುರಿಗಿರುವುದು ಎಂಥ ಅದ್ಭುತ ಜಗತ್ತು ಎನ್ನುವುದನ್ನು ನಮ್ಮ ಒಳಮನಸ್ಸಿಗೆ ತಂದುಕೊಳ್ಳಬೇಕು. ನಾವು ನೋಡುವುದೆಲ್ಲ ಬರಿ ವಿಸ್ಮಯಕಾರಿಯಾಗಿರುವುದಿಲ್ಲ, ಬದಲು ಮನುಷ್ಯನಿಗೆ ಸವಾಲೆಸೆಯುತ್ತವೆ. ನಮ್ಮ ಸುತ್ತ ಆವರಿಸಿರುವ ದೊಡ್ಡ ನಿಗೂಢವನ್ನು ಬೆದಕಲು ಪ್ರೇರೇಪಿಸುತ್ತವೆ.

ಇಂಥ ಸವಾಲನ್ನು ‘ವಿಜ್ಞಾನ ಸಮುದಾಯ’ ಸವಾಲೆಂದೇ ಸ್ವೀಕರಿಸುತ್ತದೆ, ಪರಿಹಾರ ಹುಡುಕಲು ಪ್ರಯತ್ನಿಸುತ್ತದೆ. ಡಾ. ವಿಕ್ರಂ ಸಾರಾಭಾಯಿ ಅವರು ಈಗಾಗಲೇ ನುಡಿದಂತೆ– ನಮ್ಮ ದೇಶದ ಯುವ ಜನಾಂಗ ಇಂಥ ಸವಾಲನ್ನು ಸ್ವೀಕರಿಸಲು ಯಾವ ರೀತಿಯಲ್ಲಿ ಸಿದ್ಧವಾಗಿದೆ? ಅವರನ್ನು ಎಚ್ಚರಿಸುವುದು ಹೇಗೆ? ಮತ್ತೆ ಭಾರತವನ್ನು ಜ್ಞಾನಕೇಂದ್ರವಾಗಿ ಬೆಳಗಬೇಕಲ್ಲ! ಈಗ ಮೊದಲು ಎತ್ತಿದ ಪ್ರಶ್ನೆಗೆ ಮರಳುತ್ತೇನೆ.

ಆಕಾಶವೇಕೆ ನೀಲಿಯಾಗಿದೆ? ಕುತೂಹಲಕಾರಿ ಅಂಶವೆಂದರೆ ಈ ಪ್ರಶ್ನೆಗೆ ಉಡಾಫೆಯ ಉತ್ತರ ಕೊಡುವುದು ಸುಲಭ. ಬೇಕಾದರೆ ‘ಎಲೆಗಳೇಕೆ ಹಸಿರಾಗಿವೆ?’ ಎಂದು ಸಸ್ಯ ವಿಜ್ಞಾನಿಯನ್ನು ಕೇಳಿ, ಆತ ಗೊಣಗುತ್ತ ‘ಕ್ಲೋರೋಫಿಲ್‌ನಿಂದ’ ಎಂಬ ಚುಟಕು ಉತ್ತರಕೊಟ್ಟು ತೆಪ್ಪಗಾಗುತ್ತಾನೆ. ಎಲ್ಲ ವೈಜ್ಞಾನಿಕ ಪ್ರಶ್ನೆಗಳಿಗೂ ಇದೇ ಧಾಟಿಯಲ್ಲಿ ಎರಡು ಮೂರು ಪದಗಳಲ್ಲಿ ಉತ್ತರಕೊಟ್ಟು ಕೈ ತೊಳೆದುಕೊಳ್ಳುವುದಕ್ಕೆ ಆಗುವುದಿಲ್ಲ. ಇಂಥ ಉತ್ತರದಿಂದ ಪರೀಕ್ಷೆಯಲ್ಲಿ ಪಾಸಾಗಬಹುದು ನಿಜ. ಆದರೆ ಅದು ಸಮರ್ಪಕ ಉತ್ತರ ಅಲ್ಲ.ನಿಸರ್ಗ ಎಸೆಯುವ ವೈಜ್ಞಾನಿಕ ಸವಾಲೆಂದರೆ ಅದಕ್ಕೆ ಉತ್ತರವಾಗಿ ಬರಿ ಆವಿಷ್ಕಾರ ಮಾಡುವುದಲ್ಲ, ಮತ್ತೆ ಮತ್ತೆ ಸುದೀರ್ಘವಾಗಿ ಚಿಂತನೆ ಮಾಡುತ್ತಿರುವುದು, ನಿಗೂಢವನ್ನು ಒಡೆಯಲು ಗಾಢವಾಗಿ ತೊಡಗುವುದು.

‘ಆಕಾಶವೇಕೆ ನೀಲಿ’ ಎಂಬುದು ಕುತೂಹಲಕರ ಪ್ರಶ್ನೆ. ಇದರಲ್ಲಿ ಎರಡು ಅಂಶಗಳಿವೆ. ಅಲ್ಲಿ ಆಕಾಶವಿದೆ– ಇಲ್ಲಿ ನಾನಿದ್ದೇನೆ. ನನಗೆ ಅದು ಕಾಣುವುದು ನೀಲಿಯಾಗಿ. ಮನುಷ್ಯನ ಮಿದುಳು ಮತ್ತು ಮನಸ್ಸು ಎರಡರ ಪಾತ್ರವೂ ಇದರಲ್ಲಿದೆ. ಹಿಂದೆ ಯಾರೂ ತಲೆ ಕೆಡಿಸಿಕೊಂಡಿರದ ಪ್ರಶ್ನೆ ಇದೆಂದು ಭಾವಿಸಿ, ನಿಮಗೆ ನೀವೇ ಈ ಪ್ರಶ್ನೆ ಹಾಕಿಕೊಳ್ಳಿ. ಆಗ ಅದೊಂದು ಭಾವೋದ್ರೇಕಗೊಳಿಸುವ ಪ್ರಶ್ನೆ ಎಂದು ನಿಮಗೆ ಅನ್ನಿಸುತ್ತದೆ. ಅದಕ್ಕೆ ಸ್ವತಃ ನೀವೇ ಉತ್ತರಿಸಬಹುದೇ ನೋಡಿ.

ನಿರಭ್ರ ರಾತ್ರಿಯಲ್ಲಿ ನಕ್ಷತ್ರಗಳು ಮಿನುಗುವುದನ್ನು ಕಾಣುತ್ತೇವೆ. ಹಾಗಿದ್ದಲ್ಲಿ, ಹಗಲು ಹೊತ್ತಿನಲ್ಲೇಕೆ ಮಿನುಗುವುದು ಕಾಣುವುದಿಲ್ಲ? ಪ್ರಶ್ನಿಸಿಕೊಳ್ಳಿ. ಉತ್ತರ ಕಂಡ ಹಾಗೇ ಇದೆ. ಭೂದೇವಿ ಪರದೆಯ ಹಿಂದೆ ಬಚ್ಚಿಟ್ಟುಕೊಂಡಿದ್ದಾಳೆ. ಈ ಪರದೆ ಬೇರೆ ಯಾವುದೂ ಅಲ್ಲ, ವಾಯುಗೋಳ. ತಿಳಿರಾತ್ರಿಯಲ್ಲಿ ನಾವು ಕ್ಷೀಣವಾಗಿ ಕಾಣುವ ನಕ್ಷತ್ರವನ್ನು, ಕ್ಷೀರಪಥವನ್ನು ಅದೇ ವಾಯುಗೋಳದಲ್ಲಿ ಕಾಣುತ್ತೇವಲ್ಲ. ಆಕಾಶ ನಿಜಕ್ಕೂ ನೀಲಿ ಆಗಿರಬೇಕೆಂದರೆ ಅಲ್ಲಿ ಮೋಡಗಳಿರಬಾರದು, ದೂಳಿನ ಕಣಗಳು ಇರಬಾರದು.

ವಾಯುಗೋಳದ ಸ್ಥಿತಿ ಆಧರಿಸಿ, ಕೆಲವೊಮ್ಮೆ ಆಕಾಶ ನೀಲಿಯಾಗಿ ಕಾಣುತ್ತದೆ, ಕೆಲವೊಮ್ಮೆ ನೀಲಿ ಇರುವುದಿಲ್ಲ. ನೋಡಿದ ಮಾತ್ರಕ್ಕೇ ಇದನ್ನು ಹೇಳಬಹುದು. ಆಕಾಶ ಮತ್ತು ವಾಯುಗೋಳ ಸೂರ್ಯನ ಬೆಳಕಿನಲ್ಲಿ ಝಗಮಗಿಸುತ್ತವೆ. ಬೆಳಕು ವಾಯುವಿನಿಂದ ಕೂಡಿರುವ ದಟ್ಟ ವಾಯುಗೋಳದ ಪದರದ ಮೂಲಕವೇ ಹಾಯ್ದುಬರಬೇಕು. ಕೆಲವೊಮ್ಮೆ ಅದು ಪಾರದರ್ಶಕ, ಇರುಳಿನಲ್ಲಿ ಗೋಚರಿಸುವುದಿಲ್ಲ. ಎಂದಾದರೂ ಪೂರ್ಣ ಚಂದ್ರ ಇರುವ ರಾತ್ರಿಯನ್ನು ಕುತೂಹಲಕಾರಿಯಾಗಿ ನೀವು ಗಮನಿಸಿದ್ದೀರಾ? ಚಂದ್ರನ ಮೇಲೆ ಸೂರ್ಯನ ಬೆಳಕು ವಿಸರಣವಾದರೆ (ಡಿಫ್ಯೂಸ್) ಅಥವಾ ಪ್ರತಿಫಲಿಸಿದರೆ ಅದೇ ನಾವು ಕಾಣುವ ಬೆಳದಿಂಗಳು.

ಬೆಳದಿಂಗಳ ರಾತ್ರಿಯಲ್ಲಿ ಆಕಾಶವೇನೂ ನೀಲಿಯಾಗಿರುವುದಿಲ್ಲ. ಪೇಲವ ಬಣ್ಣ, ಸ್ವಲ್ಪ ಬೆಳಕಿರುತ್ತದೆ. ಪೂರ್ಣಚಂದ್ರನ ರಾತ್ರಿಯಲ್ಲೂ ಮಿನುಗುವ ನಕ್ಷತ್ರಗಳನ್ನು ನೋಡಬಹುದು. ಹಗಲಿನಲ್ಲಿ ಪ್ರಕಾಶವಿದ್ದಾಗ, ಆಕಾಶ ನೀಲಿಯಾಗಿ ಕಾಣುತ್ತದೆ, ಬೆಳದಿಂಗಳ ದಿನಗಳಲ್ಲಿ ಏಕಿಲ್ಲ? ಕಾರಣವಿಷ್ಟೇ, ಬೆಳದಿಂಗಳು ಶಕ್ತಿಯುತವಾದದ್ದಲ್ಲ. ಇದನ್ನು ಅರ್ಥಮಾಡಿಕೊಳ್ಳಲು ನೀವು ದೊಡ್ಡ ಗಣಿತ ವಿಶಾರದರಾಗಬೇಕಾಗಿಲ್ಲ. ಯಾರಾದರೂ ಉತ್ಸಾಹಿ ತರುಣರು ಲೆಕ್ಕಹಾಕಬಹುದು. ಬೆಳದಿಂಗಳ ಬೆಳಕೆಂದರೆ ಸೂರ್ಯನ ಪ್ರಜ್ವಲತೆಯ ದಶಲಕ್ಷದ ಒಂದು ಭಾಗ. ಅಬ್ಬಬ್ಬಾ, ಅಷ್ಟು ಕಡಿಮೆಯೇ ಎಂದು ನೀವು ಉದ್ಗಾರ ತೆಗೆಯಬಹುದು.

ಆದರೂ ಬೆಳದಿಂಗಳು ಉಜ್ವಲವಾಗಿಯೇ ಕಾಣುತ್ತದೆ. ಎಲ್ಲ ತಾರೆಗಳನ್ನು ಅದು ಮಸುಕುಗೊಳಿಸುವಷ್ಟಲ್ಲ, ಆಕಾಶವಂತೂ ಆಗ ನೀಲಿಯಾಗಿರುವುದಿಲ್ಲ. ಮನುಷ್ಯನ ದೃಷ್ಟಿ ಇಲ್ಲಿ ಕೆಲಸ ಮಾಡುತ್ತದೆ. ಬಣ್ಣ ನಿಚ್ಚಳವಾಗಿ ನಮಗೆ ಕಾಣಬೇಕೆಂದರೆ ದೀಪ್ತಿ ಹೆಚ್ಚಿನ ಮಟ್ಟದಲ್ಲಿರಬೇಕು. ಆಕಾಶ ನೀಲಿಯಾಗಿ ಕಾಣುತ್ತದೆ ಏಕೆಂದರೆ ಸೂರ್ಯನ ಬೆಳಕು ಹೆಚ್ಚು ಪ್ರಖರ. ಬೆಳದಿಂಗಳ ಬೆಳಕು ಅಷ್ಟು ತೀಕ್ಷ್ಣವಲ್ಲ. ನಮ್ಮ ಮಿದುಳು ಈ ಬಣ್ಣವನ್ನು ಗ್ರಹಿಸದು. ಬೆಳಕಿನ ಪ್ರಖರತೆ ಕಡಿಮೆಯಾದಷ್ಟೂ ನಾವು ಬಣ್ಣವನ್ನು ಗ್ರಹಿಸುವುದು ಕಷ್ಟವಾಗಿ ಕೊನೆಗೆ ಶೂನ್ಯವನ್ನು ಕಾಣುತ್ತೇವೆ.

ಒಂದು ಪುಟ್ಟ ದೂರದರ್ಶಕವನ್ನು ಬಳಸಿ ನಕ್ಷತ್ರಗಳನ್ನೋ ಅಥವಾ ‘ಮಹಾವ್ಯಾಧ’ ನೀಹಾರಿಕೆಯನ್ನೋ ವೀಕ್ಷಿಸಿ. ನಾನು ಮತ್ತೆ ಮತ್ತೆ ಹೇಳುವುದಿಷ್ಟು. ಖಗೋಳವಿಜ್ಞಾನದಂತಹ ಭವ್ಯವಿಜ್ಞಾನ ಬೇರೊಂದಿಲ್ಲ. ಮನಸ್ಸನ್ನು ಪುಟಿಸುತ್ತದೆ. ಎಷ್ಟು ಮಂದಿ ಮೇಲುಸ್ತರದವರು ದೂರದರ್ಶಕ ಬಳಸಿದ್ದಾರೋ ತಿಳಿಯದು. ಅಂತಹವರಿಗೆ ಹೇಳುವುದಿಷ್ಟು. ಒಂದು ಜೊತೆ ಬೈನಾಕ್ಯುಲರ್ ಬಳಸಿ ಆಕಾಶವನ್ನು ವೀಕ್ಷಿಸಿ. ಅದು ನಿಮ್ಮ ಅಧ್ಯಯನಕ್ಕೆ ನೆಲೆಯಾಗುತ್ತದೆ. ಬೈನಾಕ್ಯುಲರ್ ಬಳಸದ ವಿದ್ಯಾವಂತರನ್ನು ನಾನು ಒಪ್ಪಲಾರೆ. ನಾವು ಬಾಳುತ್ತಿರುವ ವಿಶ್ವದ ಅತ್ಯದ್ಭುತದಿಂದ ಅಂತಹವರು ವಂಚಿತರಾಗುತ್ತಾರೆ.

ಆಗಸದ ಸ್ವಲ್ಪ ಭಾಗವನ್ನು ವೀಕ್ಷಿಸಿದರೂ ಸಾಕು, ಸಂತೋಷದ ಔನ್ನತ್ಯಕ್ಕೆ ಅದು ನಮ್ಮನ್ನು ಒಯ್ಯುತ್ತದೆ. ಈಗ ಒಂದು ಕಠಿಣ ಪ್ರಶ್ನೆ ಹಾಕುತ್ತೇನೆ. ಏಕೆ ಬೆಳಕು ಪ್ರಖರವಾಗಿದ್ದಾಗ ಮಾತ್ರ ಆಕಾಶ ನೀಲಿಯಾಗಿ ಕಾಣುತ್ತದೆ? ಬಿಳಿ ಬೆಳಕಿನಲ್ಲಿ ರೋಹಿತದ (spectrum) ಎಲ್ಲ ಬೆಳಕೂ ಅಡಕವಾಗಿರುತ್ತದೆ. ಬಣ್ಣವನ್ನು ಪ್ರತ್ಯೇಕಿಸುತ್ತ ಹೋಗಿ, ಗಾಢ ಕೆಂಪಿನಿಂದ ನೇರಿಳೆಯವರೆಗೆ ಅದರ ವ್ಯಾಪ್ತಿ ಉಂಟು. ಆಕಾಶ ನೋಡಿದಾಗ ನನಗೆ ಬರಿ ನೀಲಿ ಬಣ್ಣ ಮಾತ್ರ ಏಕೆ ಕಾಣಬೇಕು? ರೋಹಿತದ ಉಳಿದ ಬಣ್ಣಗಳೇನಾದವು? ಇದು ಅತ್ಯಂತ ಮೂಲ ಪ್ರಶ್ನೆ. ರೋಹಿತದಲ್ಲಿ ಎಲ್ಲಕ್ಕಿಂತ ಕಡಿಮೆ ತೀವ್ರತೆಯದೆಂದರೆ ಅದು ನೀಲಿ.
ಬೆಳಕಿನ ಉಜ್ವಲತೆಯ ೪೦ರಲ್ಲಿ ಒಂದು ಭಾಗದಷ್ಟು. ನೀಲಿ ಆಕಾಶದಲ್ಲಿ ಉಳಿದ ಬಣ್ಣಗಳನ್ನು ತುಸು ಶ್ರಮದಿಂದಲೇ ಗುರುತಿಸಬೇಕಾಗುತ್ತದೆ.

ಇದರರ್ಥ ರೋಹಿತದ ಉಳಿದ ಬಣ್ಣಗಳನ್ನು ನೀಲಿ ಮಸುಕುಗೊಳಿಸುತ್ತದೆ. ನೀಲಿ ಆಕಾಶ, ಅದರ ಮಧ್ಯೆ ತೇಲುವ ಕುಂತಲ ಮೋಡಗಳು (ಕ್ಯುಮುಲಸ್) ಎಂಥ ಮನಮೋಹಕ ದೃಶ್ಯ ನೀಡುತ್ತವೆ. ಅದರಲ್ಲೂ ಮೋಡಗಳು ಚಲಿಸುತ್ತಿದ್ದರೆ ಆಕಾಶ ಇನ್ನಷ್ಟು ನೀಲಿಯಾಗಿ ಕಾಣುತ್ತದೆ. ನಾನು ಎಷ್ಟೋ ಕಾಲ ತನ್ಮಯನಾಗಿ ವೀಕ್ಷಣೆ ಮಾಡಿ ಆನಂದಿಸಿದ್ದೇನೆ. ವಿಚಾರವೇನೆಂದರೆ ಈ ಕುಂತಲ ಮೋಡಗಳು ಹುಟ್ಟುವಾಗ ಸುತ್ತಲಿನ ದೂಳನ್ನೆಲ್ಲ ಬಾಚಿಕೊಳ್ಳುತ್ತವೆ.

ಇದೆಲ್ಲ ಸರ್ವಸಾಮಾನ್ಯ ಎಂದು ನೀವು ಅಂದುಕೊಂಡರೆ ಇವೆಲ್ಲ ನಿಮ್ಮ ಗಮನಕ್ಕೆ ಬರದೇ ಹೋಗಬಹುದು. ಅದು ಸರಿ, ಸ್ವಚ್ಛತೆಯಾಗುವುದು ಹೇಗೆ? ಕೆಲವೊಮ್ಮೆ ನಾನು ತರುಣರನ್ನು ‘ಮೋಡ ಎಂದರೆ ಏನು’ ಎಂದು ಕೇಳುತ್ತೇನೆ. ‘ಅದಾ ಸರ್, ಅದು ಹಬೆಯ ಸಾಂದ್ರೀಕರಣ’ ಎಂದುಬಿಡುತ್ತಾರೆ.

ನಿಜವಾಗಲೂ ಅಂಥದ್ದು ಏನೂ ಇಲ್ಲ. ಮೋಡವೆಂದರೆ ಕಣಗಳ ದೊಡ್ಡ ರಾಶಿ. ಬಿಳಿ ಮೋಡವೆಂದರೆ ನೀರ ಹನಿಗಳ ಸಂಗ್ರಹ. ನೀರು ಭಾರ ತಾನೆ? ಹಾಗಿದ್ದರೆ ಮೋಡಗಳು ಏಕೆ ಕುಸಿದುಬೀಳುವುದಿಲ್ಲ? ಈ ಪ್ರಶ್ನೆ ಎತ್ತಿಕೊಂಡರೆ ಅದು ನಮ್ಮನ್ನು ಇನ್ನೆಲ್ಲಿಗೋ ಒಯ್ಯುತ್ತದೆ. ಇಷ್ಟಂತೂ ನಿಜ. ಕಣಗಳು ಇರಲೇಬೇಕು ಬೀಜದಂತೆ. ಅದರ ಸುತ್ತ ಮೋಡ ಕಟ್ಟುತ್ತದೆ. ದೂಳು ಕಣಗಳು ಇಲ್ಲವೆಂದಾಗ ವಾಯುಗೋಳ ಸ್ವಚ್ಛವಾಗುತ್ತದೆ, ಅಂದರೆ ಆಕಾಶ ನೀಲಿಯಾಗುತ್ತದೆ.

ಸೂರ್ಯನ ಬೆಳಕಿನ ಒಂದು ಭಾಗ ನೀಲಿ. ಹಾಗಾದರೆ ಉಳಿದ ಭಾಗ ಏನಾಯಿತು? ಇದನ್ನು ಅರ್ಥಮಾಡಿಕೊಳ್ಳಲು ಉದಾಹರಣೆಯೊಂದನ್ನು ಪರಿಗಣಿಸಬೇಕಾಗುತ್ತದೆ. ಬಿಳಿಮೋಡ ಮತ್ತು ನೀಲಿ ಆಕಾಶವನ್ನು, ಪಾಕೆಟ್ಟಿನಲ್ಲಿಡಬಹುದಾದ ರೋಹಿತ ದರ್ಶನದ (ಸ್ಪೆಕ್ರ್ಟೋಸ್ಕೋಪ್) ಮೂಲಕ ಗಮನಿಸಿ, ತೋರಿಕೆಗೆ ಅಂಥ ವ್ಯತ್ಯಾಸವೇನೂ ಕಾಣದು. ಈಗ ನೀಲಿ ಆಕಾಶದ ಬಗ್ಗೆ– ರೋಹಿತದಲ್ಲಿ ನೀಲಿಗಿಂತಲೂ ಹತ್ತುಪಟ್ಟು ಹೆಚ್ಚು ಉಜ್ವಲವಾಗಿ ಕಾಣುವುದು ಹಸುರು, ಹಳದಿ ಮತ್ತು ಕೆಂಪು. ಆದರೂ ಆಕಾಶ ಏಕೆ ನೀಲಿಯಾಗಿ ಕಾಣಬೇಕು? ಕೆಲವು ನಿರ್ದಿಷ್ಟ ಸ್ಥಿತಿಯಲ್ಲಿ ರೋಹಿತದ ನೀಲಿ ದುರ್ಬಲವಾಗಿರುತ್ತದೆ, ಅದು ಇರಬೇಕಾದ ತೀವ್ರತೆಗಿಂತ ಹೆಚ್ಚು ತೀವ್ರವಾಗಿರುತ್ತದೆ.

ಇದು ಸಾಧ್ಯವಾಗುವುದು ಚದರಿಕೆಯಿಂದಾಗಿ. ನೀಲಿಯ ತರಂಗಾಂತರ ಉಳಿದ ಬಣ್ಣಗಳಿಗಿಂತ ಕಡಿಮೆ. ಹೀಗಾಗಿ ಅದು ಹೆಚ್ಚು ಚದುರುತ್ತದೆ. ನಮ್ಮ ಕಣ್ಣು ನೀಲಿ ಬಣ್ಣವನ್ನು ಸುಲಭವಾಗಿ ಗ್ರಹಿಸುವಂತೆ ರೂಪಿತವಾಗಿದೆ.

ಈಗ ಇನ್ನೊಂದು ಪ್ರಶ್ನೆ. ವಾಯುಗೋಳದಲ್ಲಿ ಗಾಳಿಯ ಅನಿಲಗಳೇಕೆ ಬೆಳಕನ್ನು ಚದರಿಸಬೇಕು. ರೋಹಿತದಲ್ಲಿನ ಕೆಂಪು, ಹಳದಿ ಮತ್ತು ಹಸುರುಗಳ ಅಲೆಯುದ್ದ ಹೆಚ್ಚು. ಹಾಗಾಗಿ ಅವು ಚದರುವುದಿಲ್ಲ. ಇದನ್ನು ಒಂದು ಉದಾಹರಣೆಯಿಂದ ಅರ್ಥಮಾಡಿಕೊಳ್ಳಬಹುದು. ವಾಯುಗೋಳದಲ್ಲಿನ ಅಣುಗಳ ಗಾತ್ರ ತುಂಬ ಚಿಕ್ಕದು. ಒಂದು ದೊಡ್ಡ ಕೊಳ ನೋಡುತ್ತಿದ್ದೀರಿ ಎನ್ನೋಣ. ಅದರಲ್ಲಿ ಒಂದು ಬಿರುಡೆ ತೇಲುತ್ತಿದೆ ಎನ್ನೋಣ.

ಗಾಳಿ ಬೀಸಿದಾಗ ಆ ಬಿರುಡೆ ಅಲೆಯ ಹೊಡೆತಕ್ಕೆ ಅಲುಗಾಡುತ್ತದೆ. ಏಕೆಂದರೆ ಬಿರುಡೆ ಮತ್ತು ಅಲೆಗಳ ಗಾತ್ರವನ್ನು ಹೋಲಿಸಬಹುದು. ಇದರ ಬದಲು ಅದೇ ಕೊಳದಲ್ಲಿ ದೊಡ್ಡ ದೋಣಿಯೊಂದು ಸಾಗುತ್ತಿದೆ ಎನ್ನಿ. ಆಗ ಅವೇ ಅಲೆಗಳು ಅದನ್ನು ಅಲುಗಾಡಿಸುವುದಿಲ್ಲ. ಇದರ ಅರ್ಥವಿಷ್ಟು. ಅಲೆಯ ಗಾತ್ರ ಮತ್ತು ವಸ್ತುವಿನ ಗಾತ್ರ ಇಲ್ಲಿ ಮುಖ್ಯವಾಗುತ್ತದೆ. ಕಡಿಮೆ ಅಲೆಯುದ್ದದವು ಬೇಗ ಚದರುತ್ತವೆ ಎಂಬುದಕ್ಕೆ ಇದೊಂದು ಹೋಲಿಕೆ ಅಷ್ಟೇ. ನಿಜವಾದ ಗಾಢ ನೀಲಿ ಆಕಾಶವನ್ನು ನೋಡಬೇಕೆಂದರೆ ಅಣುಗಳ ಗಾತ್ರ ಅತಿ ಚಿಕ್ಕದಾಗಿರಬೇಕು. ಆಗ ಹೆಚ್ಚು ಚದರಿಕೆಯಾಗುತ್ತದೆ. ಇದಕ್ಕಿಂತಲೂ ಮುಖ್ಯ ಬೆಳಕಿನ ಪ್ರಖರತೆ ಕೂಡ ಹೆಚ್ಚಾಗಿರಬೇಕು. ವಾಸ್ತವವಾಗಿ ಆಕಾಶವೇಕೆ ನೀಲಿಯಾಗಿರುತ್ತದೆ ಎಂಬುದಕ್ಕೆ ಮೊದಲು ಸಮರ್ಪಕವಾದ ವೈಜ್ಞಾನಿಕ ಉತ್ತರವನ್ನು ಕೊಟ್ಟವನು ಲಾರ್ಡ್ ರ್‍್ಯಾಲಿ.

ಕನಸುಗಳಿರಬೇಕು. ಅವು ನನಸಾಗುತ್ತವೋ ಇಲ್ಲವೋ ಅದು ಬೇರೆ ಮಾತು. ಅವನ್ನು ನಿರೀಕ್ಷಿಸಬಹುದಲ್ಲ. ನಾನು ನಾಳೆ ಏನೋ ಒಂದನ್ನು ಆವಿಷ್ಕರಿಸುತ್ತೇನೆ, ಅದನ್ನು ಬೆಂಬತ್ತಿದ ವ್ಯಕ್ತಿ ಹೊಸತಾಗಿ ಇನ್ನೇನನ್ನಾದರೂ ಆವಿಸ್ಕರಿಸುತ್ತಾನೋ ಇಲ್ಲವೋ ಶ್ರಮವನ್ನಂತೂ ಪಡುತ್ತಾನೆ. ಇದನ್ನು ಮತ್ತೆ ಹೇಳುತ್ತೇನೆ. ವಿಜ್ಞಾನ ಮುಖ್ಯವಾಗಿ ಮನುಷ್ಯನ ಆಂತರ್ಯದ ಚೈತನ್ಯ. ಕವಿ ಮಾಡುವುದೇನು? ಕಲಾವಿದ ಮಾಡುವುದೇನು? ಮಹಾಶಿಲ್ಪಿ ಮಾಡುವುದೇನು? ಶಿಲ್ಪಿ ದೊಡ್ಡ ಅಮೃತಶಿಲೆಯ ತುಂಡನ್ನು ಆಯ್ದುಕೊಳ್ಳುತ್ತಾನೆ, ಕೆತ್ತುತ್ತಾ ಹೋಗುತ್ತಾನೆ.

ಅಂತಿಮವಾಗಿ ಮೂರ್ತಿ ಸಿದ್ಧವಾದಾಗ ಅವನ ಕನಸು ನನಸಾಗುತ್ತದೆ. ಅದೆಷ್ಟು ಶ್ರಮ ಅದಕ್ಕಾಗಿ ಹಾಕಿರುತ್ತಾನೆನ್ನುವುದನ್ನು ನಾವು ಮರೆಯಬಾರದು. ಇದನ್ನು ಮಾಡೇ ಮಾಡುತ್ತೇನೆ ಎಂಬ ಭರವಸೆಯಿಂದ ತಾನೆ ಅವನು ಶ್ರಮಹಾಕುವುದು? ವಿಜ್ಞಾನ ಕ್ಷೇತ್ರದಲ್ಲೂ ಅಷ್ಟೇ. ಇಲ್ಲಿ ಜ್ಞಾನದ ಅನ್ವೇಷಣೆಯೇ ಗುರಿ. ಸಾಧಿಸಬೇಕೆಂಬ ಛಲವಿಲ್ಲದಿದ್ದರೆ ಅವನು ವಿಜ್ಞಾನಿಯಾಗಲಾರ. ಯಾವುದೋ ಇಲಾಖೆಯಲ್ಲಿ ಕೆಲಸ ಸಿಗುತ್ತದೆ, ತಿಂಗಳ ಪಗಾರ ಸಿಗುತ್ತದೆ. ಆದರೆ ಅದು ವಿಜ್ಞಾನವಲ್ಲ. ವಾಸ್ತವವಾಗಿ ಆಕಾಶವೇಕೆ ನೀಲಿ ಎಂಬುದನ್ನು ಕುರಿತು ನಾನು ಮಾತನಾಡಿದೆನಾದರೂ ಅದು ನನ್ನ ನಿಜವಾದ ಉದ್ದೇಶವಾಗಿರಲಿಲ್ಲ.

ವಿಜ್ಞಾನದ ಚೈತನ್ಯ ಸ್ವರೂಪವನ್ನು ನಿಮಗೆ ತಿಳಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ವಿಜ್ಞಾನದಲ್ಲಿ ಈ ದೇಶದಲ್ಲಿ ನಾವು ಹೇಗೆ ಮುಂದುವರಿಯಬೇಕು, ನಮ್ಮ ಹಿಂದಿನವರ ಸಮಸಮಕ್ಕೆ ಬರಲು ನಾವು ಮಾಡಬೇಕಾದ್ದೇನು? ಅದು ನನ್ನ ಉಪನ್ಯಾಸದ ಆಂತರ್ಯ. ಬೆಳಕು ಅಣುಗಳೊಂದಿಗೆ ವರ್ತಿಸುವುದು ಹೇಗೆ? ಅಣುಗಳಿಗೆ ಏನಾಗುತ್ತದೆ? ಅಣುಗಳೆಂದರೆ ಏನು? ಇವು ನಿಖರವಾಗಿ ಚರ್ಚಿಸಬೇಕಾದ ವಿಚಾರ. ವಿಜ್ಞಾನ ಇಲ್ಲಿಗೇ ಸ್ಥಗಿತವಾಗುವುದಿಲ್ಲ.

ಬೆದಕಿದಷ್ಟೂ ಇನ್ನೂ ಬೆಂಬತ್ತಿಹೋಗುವಂತೆ ಪ್ರೇರೇಪಿಸುತ್ತದೆ. ವಿಜ್ಞಾನದ ಆಕರ್ಷಣೆ ಇರುವುದೇ ಇಲ್ಲಿ. ಇತರರೊಡನೆ ನೀವು ಎಂದೂ ಹೋಲಿಸಿಕೊಳ್ಳಬಾರದು. ಹೊಸ ಪ್ರಶ್ನೆಗಳು ಹುಟ್ಟುತ್ತವೆ, ಅವಕ್ಕೆ ಹೊಸ ಉತ್ತರಗಳೂ ಬರಬೇಕು.

ನನ್ನ ಉಪನ್ಯಾಸದಲ್ಲಿ ಪ್ರಸ್ತಾಪಿಸಿದ ಅಂಶಗಳು ಪವನವಿಜ್ಞಾನಕ್ಕೆ (ಮೀಟಿಯೊರಾಲಜಿ) ಸಂಬಂಧಿಸಿವೆ ಎಂಬ ವಿಚಾರವನ್ನು ಹೇಳದೆ ಮುಂದುವರಿಯಲು ಆಗುವುದಿಲ್ಲ. ಆದರೆ ನನ್ನ ನಿಜವಾದ ಆಸಕ್ತಿ ಪವನವಿಜ್ಞಾನವೂ ಅಲ್ಲ, ಅದು ಬೆಳಕಿನ ಚದರಿಕೆಯ ಬಗ್ಗೆ. ಗಾಳಿಯಲ್ಲಿ ಅಣುಗಳ ಅಂತಿಮ ಸ್ವಭಾವ ಕುರಿತು. ಇದು ಇಂದಿನ ಸಂದರ್ಭದಲ್ಲಿ ನಮಗೆ ಸಿಕ್ಕಿರುವ ಪ್ರಬಲ ಅಸ್ತ್ರ. ಅಣುಗಳನ್ನು ನೀವು ಎಣಿಸಬಹುದು. ಪ್ರಯೋಗಾಲಯದಲ್ಲಿ ಪರೀಕ್ಷಿಸಬಹುದು. ಪ್ರತಿ ವಿದ್ಯಾರ್ಥಿಯೂ ಈ ಪ್ರಯೋಗವನ್ನು ನೋಡಿರಲೇಬೇಕು. ಒಂದು ಬಾಟಲಿಯನ್ನೋ ಅಥವಾ ಪ್ಲಾಸ್ಕನ್ನೋ ತೆಗೆದುಕೊಳ್ಳಿ. ಅದಕ್ಕೆ ಬಿರುಡೆ ಇರಲಿ.

ಅದರಲ್ಲಿರುವ ದೂಳನ್ನೆಲ್ಲ ಕೊಡವಿಬಿಡಿ. ಅದರ ಆಳಕ್ಕೆ ಬೆಳಕಿನ ದಂಡ ಬೀಳುವಂತೆ ಮಾಡಿ. ಅದು ಗಾಳಿಯನ್ನು ತೂರಿಹೋಗುವಂತಿರಬೇಕು. ಗಾಳಿಯನ್ನು ನೀವು ಕಾಣಬಹುದು. ಗಾಳಿಯೇನೂ ಪಾರದರ್ಶಕ, ನಿರ್ವರ್ಣದ ಅನಿಲವಲ್ಲ. ಕಾಣದೆ ಇರುವಂಥದ್ದೂ ಅಲ್ಲ. ಬೆಳಕಿನ ಚದರಿಕೆಯಿಂದ ಗಾಳಿ ಕಾಣುವಂತಾಗುತ್ತದೆ. ಈ ಸರಳ ಪ್ರಯೋಗವನ್ನು ವಿದ್ಯಾರ್ಥಿಗಳು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ನೋಡಿರಬೇಕು. ಯಾವ ಅನಿಲವಾದರೂ ಸರಿ, ಬಾಷ್ಪವಾದರೂ ಸರಿ, ಕಣಗಳಿಂದ ಬೆಳಕು ಯಾವ ಮಟ್ಟದಲ್ಲಿ ವಿಸರಣವಾಗುತ್ತದೆ ಎಂಬುದು ಮುಖ್ಯ. ಹೆಚ್ಚು ಕಣಗಳಿದ್ದರೆ ವಿಸರಣವೂ ಹೆಚ್ಚು.

ಇದನ್ನಾಧರಿಸಿ ಅಣುಗಳ ಸಂಖ್ಯೆಯನ್ನು ಲೆಕ್ಕಹಾಕಬಹುದು. ಇಲ್ಲಿ ನಾನು ಸಂಖ್ಯೆ ಎಂದದ್ದು 1, 2, 3ಇತ್ಯಾದಿ ಅಲ್ಲ. ಅದಕ್ಕೆ ಬೇರೆಯದೇ ಆದ ಅರ್ಥವುಂಟು. ನಾನು ಕರೆನ್ಸಿ ಕಚೇರಿಯಲ್ಲಿದ್ದಾಗ ಅಲ್ಲಿ ರೂಪಾಯಿ ಎಣಿಸಬೇಕಾಗಿತ್ತು, ಅಂದರೆ ಬಿಡಿ ಬಿಡಿ ರೂಪಾಯಿ ಅಲ್ಲ, ರೂಪಾಯಿ ತುಂಬಿದ ಚೀಲವನ್ನು ಎಣಿಸುವುದು. ಪ್ರತಿ ಚೀಲದಲ್ಲೂ ಸುಮಾರು ೨,೦೦೦ ರೂಪಾಯಿ ಇರುತ್ತಿತ್ತು– ಅದು ನಂಬಿಕೆಯ ಪ್ರಶ್ನೆ. ಚೀಲಗಳ ಗುಣಾಕಾರ ಮಾಡಿದರೆ ಸಾಕು, ಎಷ್ಟು ಕೋಟಿ ರುಪಾಯಿ ಇದೆ ಎನ್ನುವುದನ್ನು ಹೇಳಬಹುದಾಗಿತ್ತು. ಈ ಲೆಕ್ಕದಲ್ಲಿ ವಾಯುಗೋಳದ ಅಣುಗಳನ್ನು ಎಣಿಸಬೇಕು– ಒಂದು ಅಂದಾಜು ಎನ್ನಿ.

ಇದಕ್ಕಿಂತಲೂ ಮುಖ್ಯ ಉಪಕರಣದ ಮೂಲಕ ವಿಸರಣವನ್ನು ನೀವೂ ಗಮನಿಸಬಹುದು. ಅಣು ಚಿಕ್ಕದೇ ದೊಡ್ಡದೇ, ಗುಂಡಾಗಿದೆಯೇ, ಚೌಕವಾಗಿದೆಯೇ ಎಂಬುದೂ ಕಾಣುತ್ತದೆ. ನೀಲಿ ಆಕಾಶವನ್ನು ಅಧ್ಯಯನ ಮಾಡುವುದು ಸಂಶೋಧನೆಯ ದೊಡ್ಡ ಕ್ಷೇತ್ರ. ಅದಕ್ಕೆ ಮಿತಿ ಎಂಬುದಿಲ್ಲ. ಈಗಲೂ ಅಲ್ಲಿ ಕೆಲಸವಾಗುತ್ತಿದೆ. ಕಣ್ಣು ತೆರೆದಿರಲಿ, ಆಸಕ್ತಿ ಇಂಗದಿರಲಿ, ಸಮಸ್ಯೆಯನ್ನು ಬಿಡಿಸುವ ಬಗ್ಗೆ ನಿರಂತರ ಆಸ್ಥೆ ಇರಬೇಕು.

ಇದನ್ನೇ ತರುಣರಿಗೆ ನಾನು ಹೇಳುವುದು. ಅದು ಸರಿ, ಇದರಿಂದ ಏನು ಪ್ರಯೋಜನ? ನಾನು ನಂಬಿರುವ ತತ್ತ್ವವನ್ನು ಹೇಳುತ್ತೇನೆ. ಇವೆಲ್ಲದರಿಂದ ಏನು ಪ್ರಯೋಜನ ಎಂಬುದನ್ನು ಮಾತ್ರ ಯಾವಾಗಲೂ ಕೇಳಬಾರದು; ಬದಲು ಕಾರ್ಯೋನ್ಮುಖವಾಗುವುದು ಒಳ್ಳೆಯದು. ಏಕೆಂದರೆ ಮನುಷ್ಯ ಸ್ವಭಾವಕ್ಕೆ ಸಹಜವಾಗಿ ಬಂದಿರುವ ಎರಡು ಗುಣಗಳೆಂದರೆ ವೀಕ್ಷಣೆ ಮತ್ತು ಚಿಂತನೆ. ಅವನ್ನು ನಾವು ಬಳಸಿಕೊಳ್ಳಬೇಕು. ಬಳಸಿದಷ್ಟೂ ಬುದ್ಧಿ ತೀಕ್ಷ್ಣವಾಗುತ್ತದೆ.

ಅದರಿಂದ ಹೊಸತು ಹುಟ್ಟಿ ಕೊನೆಗೆ ಅದು ಮನುಕುಲಕ್ಕೆ ನೆರವಾಗಬಹುದು. ವಿಜ್ಞಾನಕ್ಕೂ ಒಳ್ಳೆಯದಾಗಬಹುದು. ವಾಸ್ತವವಾಗಿ ನಿಜವಾದ ವಿಜ್ಞಾನದ ಗುರಿ ಇದೇ. ನಾವು ಬಗೆಹರಿಸಬಲ್ಲ ಸಮಸ್ಯೆಗಳು ನಮಗೆ ಎಂದೂ ಸನಿಹದಲ್ಲೇ ಇರುತ್ತವೆ. ಅವು ನಮ್ಮ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳು. ನಮ್ಮ ಸುತ್ತಣ ಜಗತ್ತಿನ ಸಮಸ್ಯೆಗಳೂ ಅವು ಆಗಿರುವುದರಿಂದ ಅವನ್ನು ಅಪ್ರಯೋಜನ ಎಂದು ಜರಿಯಲಾಗದು.

ಬಹು ಮುಖ್ಯವಾಗಿ ಮೂಲಭೂತ ಶೋಧನೆ ಮಾಡುವ ವಸ್ತು ಪ್ರಕೃತಿಯಲ್ಲಿ ಅಮೂರ್ತವಾಗಿರಬಹುದು. ಅವೇ ಮುಂದೆ ಮನುಷ್ಯನ ಜೀವನವನ್ನೂ ಚಟುವಟಿಕೆಯನ್ನೂ ದೊಡ್ಡದಾಗಿ ಬಾಧಿಸುತ್ತವೆ. ವೈಜ್ಞಾನಿಕ ಕೆಲಸಗಳು ಎಂದೂ ಮೌಲ್ಯಯುತವಾಗಿಯೇ ಇರುತ್ತವೆ. ಇದನ್ನು ಆಧುನಿಕ ವಿಜ್ಞಾನ ಚರಿತ್ರೆಯೇ ಸಾರುತ್ತದೆ. ವಿಜ್ಞಾನ ನಮ್ಮ ಸುತ್ತಣ ಜಗತ್ತನ್ನು ಬದಲಾಯಿಸಿದೆ. ಯಾವ ನಿಶ್ಚಿತ ಗುರಿಯೂ ಇಲ್ಲದೆ ಸಾಗುವುದು ವಿಜ್ಞಾನಿಗಳ ಕೆಲಸದ ಪರಿ ಅಲ್ಲ. ಕೇವಲ ಜ್ಞಾನ ಪಡೆಯಲೆಂದೇ ಕೆಲಸ ಮಾಡುವ ಏಕೈಕ ಗುರಿ ಇರುವ ವಿಜ್ಞಾನಿಗಳಿಂದ ಮನುಕುಲಕ್ಕೆ ಎಂದೂ ಉಪಕಾರವೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT