ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶವೇ ವಿಶಾಲವಾಗಿರುವಾಗ ಎಡ ಬಲದ ಚಿಂತೆ ಏಕೆ?

ಅಕ್ಷರ ಗಾತ್ರ

ಮಹಾ ನಗರ ಬೆಂಗಳೂರಿನಲ್ಲಿ ನಿವೇಶನಗಳ ಬೆಲೆಯನ್ನು ಅಡಿಗಳಲ್ಲಿಯೇ ಕೇಳಿ ತಿಳಿಯಬೇಕು. ರಾಜಧಾನಿಯ ವಾಣಿಜ್ಯ ಪ್ರದೇಶಗಳಲ್ಲಿ, ಕೆಲವು ಪ್ರಮುಖ ಬಡಾವಣೆಗಳಲ್ಲಿಯಂತೂ ಒಂದು ಅಡಿ ನಿವೇಶನದ ಬೆಲೆ ಅರ್ಧ ಲಕ್ಷ ರೂಪಾಯಿ ವರೆಗೂ ಇದೆ. ಮೈಸೂರು, ಮಂಗಳೂರು ಮೊದಲಾದ ನಗರಗಳಲ್ಲಿಯೂ ಸಹ ನಿವೇಶನಕ್ಕೆ ಚಿನ್ನದಷ್ಟೇ ಬೆಲೆ.

ಹಾಗಾಗಿ 20 ಅಡಿ ಅಗಲ, 30 ಅಡಿ ಉದ್ದ ದ ಅಥವಾ 30 ಅಡಿ ಅಗಲ, 40 ಅಡಿ ಉದ್ದ  ಆಕಾರದ ಚಿಕ್ಕ ನಿವೇಶನಗಳಲ್ಲಿ ಎಡಬಲ ಪಾರ್ಶ್ವಗಳಲ್ಲಿ ಗಾಳಿ ಬೆಳಕಿಗೆ ಎಂದು ಜಾಗ ಬಿಡುವುದೇ ಕಡಿಮೆ ಆಗಿದೆ. ಆದಷ್ಟೂ ನಿವೇಶನದ ಅಂಚಿಗೇ ಮನೆಯನ್ನು ಒತ್ತರಿಸಿಕೊಂಡು ಕಟ್ಟಿಬಿಡುತ್ತಾರೆ. ಆನಂತರ ಮನೆಯೊಳಗೆ ಗಾಳಿ ಬೆಳಕಿನ ಕೊರತೆಯಾಗಿರುವುದನ್ನು ಕಂಡು ಪರಿತಪಿಸುತ್ತಾರೆ.

ಮೊದಲು ಮನೆ ಕಟ್ಟಿದ ಪಕ್ಕದ ನಿವೇಶನದವರು ಎಡಬಲದಲ್ಲಿ ನಿಯಮ ಪ್ರಕಾರ ಬಿಡಬೇಕಾಗದಷ್ಟು ಖಾಲಿ ಜಾಗವನ್ನೂ ಉಳಿಸಿರುವುದಿಲ್ಲ. ನಿವೇಶನ ಚಿಕ್ಕದಾಗಿದ್ದರೂ ಮನೆಯ ಒಳಭಾಗ ದೊಡ್ಡದಾಗಿರಬೇಕು ಎಂಬ ಅತಿಯಾದ ಆಸೆಯಿಂದ ಮನೆಯ ಹೊರಂಚಿನ ಗೋಡೆಗಳನ್ನು ಆದಷ್ಟೂ ಪಕ್ಕದ ನಿವೇಶನಕ್ಕೆ ತಾಗಿಕೊಂಡಂತೆಯೇ ನಿರ್ಮಿಸಿರುತ್ತಾರೆ.

ಇವರು ಹೀಗೆ ಮಾಡಿದ ಮೇಲೆ ಪಕ್ಕದ ಮನೆಯಾತನಾದರೂ ಅದು ಹೇಗೆ ಪಾರ್ಶ್ವಗಳಲ್ಲಿ ಖಾಲಿ ಜಾಗ ಬಿಡುತ್ತಾನೆ? ಆತನ ಮನೆಯ ಹೊರ ಭಾಗದ ಗೋಡೆಗಳೂ ನಿವೇಶನದ ಅಂಚಿನವರೆಗೂ ಚಾಚಿಕೊಂಡೇ ಬಿಡುತ್ತವೆ!

ಮನೆಯನ್ನೇನೋ ಪೈಪೋಟಿಯ ಮೇಲೆ ಒತ್ತರಿಸಿ ಕಟ್ಟಿಬಿಡುತ್ತಾರೆ. ಗೃಹಪ್ರವೇಶ ಮಾಡಿ ಒಳಹೊಕ್ಕನಂತರವೇ ಅವರಿಗೆ ತಾವು ಮಾಡಿದ ತಪ್ಪಿನ ಅರಿವಾಗುವುದು. ಅದರಲ್ಲೂ ಬೇಸಿಗೆ ಕಾಲದಲ್ಲಿ ಮನೆಯೊಳಕ್ಕೆ ಹೊರಗಿನಿಂದ ಗಾಳಿಯ ಸಂಚಾರವೇ ಆಗದೇ ಮೈಬೆವರು ಧಾರಾಕಾರವಾಗಿ ಹರಿಯುತ್ತದೆ. ಪಶ್ಚಾತ್ತಾಪದ ಕಣ್ಣೀರು ಮಾತ್ರ ಒಂದು ಹನಿಯಷ್ಟೂ ಹರಿಯುವುದಿಲ್ಲ ಬಿಡಿ.

ಆದರೆ, ಅಷ್ಟರಲ್ಲಾಗಲೇ ಪ್ರಮಾದವಾಗಿರುತ್ತದೆ. ಸರಿಪಡಿಸಿಕೊಳ್ಳಲು ಆಗದಂತಹ ಪರಿಸ್ಥಿತಿ. ಎಡಗಡೆ ಕಿಟಕಿ ತೆಗೆದರೆ ಪಕ್ಕದ ಮನೆಯವರ ಮಲಗುವ ಕೋಣೆಯೇ ದಿಗ್ಗನೆ ಎದಿರಾಗುತ್ತದೆ. ಬಲ ಬದಿಯ ಕಿಟಕಿಯನ್ನಾದರೂ ತೆಗೆಯೋಣ ಎಂದರೆ ಆ ಭಾಗದ ಮನೆಯ ಅಡುಗೆ ಕೋಣೆಯ ಘಾಟು, ಬಿಸಿಯೆಲ್ಲಾ ಮನೆಯೊಳಕ್ಕೆ ನುಗ್ಗುತ್ತದೆ.

ಸೂರ್ಯನ ಕಿರಣವೂ ಬಾರದು
ಇದು ತಾಜಾ ಗಾಳಿಯ ಕೊರತೆಯ ಕಥೆಯಾದರೆ, ಹಗಲಿನ ವೇಳೆಯಲ್ಲೂ ಸೂರ್ಯ ಕಿರಣಗಳು ಮನೆಯೊಳಕ್ಕೆ ಪ್ರವೇಶಿಸುವುದೇ ಇಲ್ಲ. ನೈಸರ್ಗಿಕ ಬೆಳಕು ಎಂಬುದು ನಗರ ಪ್ರದೇಶದ ಚಿಕ್ಕ ಮನೆಗಳಿಗೆ ಕನಸಿನ ಮಾತೇ ಸರಿ. ಹಗಲಿನಲ್ಲೂ ಬೆಳಕಿನ ಸಮಸ್ಯೆ. ಎಡಬಲ ಪಾರ್ಶ್ವಗಳಲ್ಲಿ ಕಿಟಕಿಗಳಲ್ಲಿದ್ದರೂ ಅಕ್ಕಪಕ್ಕದ ಮನೆಗಳು ಒಂದಕ್ಕೊಂದು ಅಂಟಿಕೊಂಡಂತೆ ಇರುವುದರಿಂದ ಬೆಳಕಿನ ಪ್ರವೇಶ ಅಸಾಧ್ಯವಾಗಿರುತ್ತದೆ. ಬೆಂಗಳೂರಿನ ಮಲ್ಲೇಶ್ವರ, ಶ್ರೀನಗರ, ಹನಮಂತನಗರ ಮೊದಲಾದ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಇದರ ಅನುಭವ ಚೆನ್ನಾಗಿದೆ.

ಹೊಸ ಬಡಾವಣೆಯ ಚಿಕ್ಕ ನಿವೇಶನಗಳಲ್ಲಿ ಈಗ ನಿರ್ಮಾಣಗೊಳ್ಳುವ ಮನೆಗಳ ಲ್ಲಿಯೂ ಇದು ಮರುಕಳಿಸುತ್ತಿದೆ. ಹಜಾರ, ಕೊಠಡಿ ದೊಡ್ಡದಾಗಿರಲಿ ಎಂಬ ಹಂಬ ಲಿಸುವವರು, ಮನೆ ಹೊರಭಾಗದಲ್ಲಿ ಖಾಲಿ ಜಾಗ ಬಿಡುವ ವಿಚಾರದಲ್ಲಿ ಜಿಪುಣತನ ತೋರುತ್ತಾರೆ. ಪರಿಣಾಮ ತಾಜಾ ಗಾಳಿಯೂ ಇಲ್ಲ, ನೈಸರ್ಗಿಕ ಬೆಳಕೂ ಇಲ್ಲ.

ಮನೆಯಲ್ಲಿ ಓದುವ ಮಕ್ಕಳಿದ್ದರೆ, ಗೃಹಿಣಿಯರು ಮನೆಗೆಲಸ ಮಾಡಲು ಹಗಲು ಹೊತ್ತಿನಲ್ಲೂ ವಿದ್ಯುದ್ದೀಪ ಉರಿಸಲೇಬೇಕು. ಕರೆಂಟ್‌ ಇದ್ದರೇನೋ ಸರಿ, ವಿದ್ಯುತ್ ಕಡಿತದ ಸಂದರ್ಭಗಳಲ್ಲಿ ಇಂತಹ ಮನೆಗಳಲ್ಲಿ ಇರುವುದೆಂದರೆ ಕತ್ತಲ ಗುಹೆಯಲ್ಲಿ ಇದ್ದಂತಹ ಅನುಭವ. ಗಾಳಿ ಬೆಳಕಿಗೆ ಆಸ್ಪದವೇ ಇಲ್ಲದಂತೆ ಮನೆ ಕಟ್ಟಿಸಿದ ಯಜಮಾನರನ್ನು ಒಂದಲ್ಲಾ ಒಂದು ಸಂದರ್ಭದಲ್ಲಿ ಮನೆ ಮಂದಿಯೆಲ್ಲಾ ಶಪಿಸಲು ಆರಂಭಿಸುತ್ತಾರೆ. ಯಜಮಾನರು ಕಿವುಡರಂತೆ ನಟಿಸುತ್ತಾ, ಕೈವಸ್ತ್ರದಲ್ಲಿ ಮೈಬೆವರು ಒರೆಸಿಕೊಳ್ಳುತ್ತಾ ಆಕಾಶ ನೋಡುತ್ತಾರೆ.

ತಾರಸಿಯಲ್ಲಿ ಆಕಾಶ
ಅರೆ, ಹೌದಲ್ಲಾ. ಎಡ ಬಲ ದಿಕ್ಕುಗಳಲ್ಲಿ ಎಡೆಯಿಲ್ಲದಿದ್ದರೇನು. ಆಕಾಶ ಮಾರ್ಗ ದಲ್ಲಿದೆಯಲ್ಲಾ ಪರಿಹಾರ ಎಂಬ ಐಡಿಯಾ ಥಟ್ಟನೆ ಹೊಳೆಯುತ್ತದೆ. ಹೌದು, ಇತ್ತೀಚಿನ ದಿನಗಳಲ್ಲಿ ನಿರ್ಮಾಣಗೊಳ್ಳುವ ಮನೆಗಳಲ್ಲಿ ‘ಸ್ಕೈಲೈಟ್‌’ ಎಂಬ ಹೊಸ ಪರಿಕಲ್ಪನೆ ಚಾಲ್ತಿಗೆ ಬಂದಿದೆ. ಬಹುತೇಕ ನಗರಗಳಲ್ಲಿ ಇತ್ತೀಚೆಗೆ ಮನೆ ಕಟ್ಟಿಸುತ್ತಿರುವವರಲ್ಲಿ ಕೆಲವರಾದರೂ ಸ್ಕೈಲೈಟ್‌ನತ್ತ ಮುಖ ಮಾಡಿದ್ದಾರೆ.

ನಿವೇಶನ ಚಿಕ್ಕದಿರಲಿ, ದೊಡ್ಡದೇ ಇರಲಿ ಮನೆಗಳನ್ನು ಅಳತೆ ಮೀರಿ ಹಿಗ್ಗಿಸಲು ಮುಂದಾಗುವವರಿಗೆಲ್ಲಾ ಮನೆಯೊಳಕ್ಕೆ ಸಹಜ ಬೆಳಕಿನ ಕಿರಣಗಳನ್ನು ಬರಮಾಡಿಕೊಳ್ಳಲು ಸುಲಭ ದಾರಿಯೆಂದರೆ ಸ್ಕೈಲೈಟ್‌.
ಒಂದೇ ಅಂತಸ್ತಿನ ಮನೆಯಾಗಿರಲಿ, ಎರಡನೇ ಅಂತಸ್ತು ಇರುವ ಕಟ್ಟಡವೇ ಆಗಿರಲಿ ನಿರ್ಮಾಣ ಹಂತದಲ್ಲಿಯೇ ಈ ಸ್ಕೈಲೈಟ್‌ (ಆಕಾಶಕ್ಕೇ ಬೆಳಕಿಂಡಿ) ಇರಿಸುವ ಆಲೋಚನೆ ಮಾಡಬಹುದು.

ಈ ಸ್ಕೈಲೈಟ್‌ ವಿನ್ಯಾಸಕ್ಕೆ ಹೆಚ್ಚೇನೂ ವೆಚ್ಚವಾಗುವುದಿಲ್ಲ. ಏನಿದ್ದರೂ ಮನೆಗೆ ಕಾಂಕ್ರೀಟ್‌ ತಾರಸಿ ಹಾಕುವಾಗಲೇ ಎಲ್ಲಿ ಸೂಕ್ತ ಎನಿಸುವುದೋ ಅಲ್ಲೆಲ್ಲಾ ಗಾಜಿನ ಇಟ್ಟಿಗೆಗಳನ್ನು ಅಳವಡಿಸಿದರೆ ಹಗಲಿನಲ್ಲಿ ಸೂರ್ಯನ ಕಿರಣಗಳು, ಇರುಳಿನಲ್ಲಿ ಚಂದಮಾನನ ತುಂಟ ನೋಟವೂ ಇಣುಕದೇ ಇರಲಾರದು.
ಹಾಗೆಂದು ಈ ಸ್ಕೈಲೈಟ್‌ಗಳನ್ನು ಎಲ್ಲೆಂದರಲ್ಲಿ ಅಳವಡಿಸಿಕೊಳ್ಳಲಾಗುವುದಿಲ್ಲ. ತುಂಬಾ ದೊಡ್ಡ ಆಕಾರದಲ್ಲಿಯೂ ವಿನ್ಯಾಸಗೊಳಿಸಲು ಬರುವುದಿಲ್ಲ.

ಕಾಂಕ್ರೀಟ್‌ ತಾರಸಿಯಲ್ಲೇ ಜಾಗ ಪಡೆದುಕೊಳ್ಳುವ ಈ ಸ್ಕೈಲೈಟ್‌ಗಳ ಅಗಲ ಹೆಚ್ಚೆಂದರೆ ಆರೇಳು ಇಂಚುಗಳಿರಬೇಕು ಅಷ್ಟೆ. ಕಳ್ಳರು, ದುಷ್ಕರ್ಮಿಗಳ ದೇಹ ನುಸುಳಲು ಆಗದಷ್ಟು ಕಡಿಮೆ ಅಗಲ ಇದ್ದರೆ ಒಳಿತು. ಉದ್ದವನ್ನು ಬೇಕಾದರ ಹಜಾರ ಅಥವಾ ಅಡುಗೆ ಕೋಣೆ, ಸ್ಟೋರ್‌ ರೂಂನ ತಾರಸಿ ಇರುವಷ್ಟು ಉದ್ದಕ್ಕೂ ಇರಿಸಿಕೊಳ್ಳಬಹುದು.

ಆದರೆ, ಈ ಸ್ಕೈಲೈಟ್‌ಗಳ ಸಹವಾಸ ಮಲಗುವ ಕೋಣೆಗಾಗಲೀ, ಸ್ನಾನದ ಮನೆಯಲ್ಲಾಗಲೀ ಸಲ್ಲದು. ಅದರಿಂದ ಅನುಕೂಲಕ್ಕಿಂತ ಅಪಾಯವೇ ಹೆಚ್ಚು ಎಂಬುದನ್ನು ಬಿಡಿಸಿ ಹೇಳಬೇಕಾಗಿಯೇ ಇಲ್ಲ.
ತಾರಸಿಯಲ್ಲಿ ಸ್ಕೈಲೈಟ್‌ಗೆ ಸ್ಥಳಾವಕಾಶ ಬಿಡುವಾಗ ಘನಾಕೃತಿಯ ಗಾಜಿನ ಇಟ್ಟಿಗೆಗಳನ್ನು ಉದ್ದಕ್ಕೂ ಬಳಸಬಹುದು. ಅಥವಾ ತಾರಸಿ ಮಧ್ಯೆ ಮಧ್ಯೆ ಅಲ್ಲಲ್ಲಿ ಮಾತ್ರವೇ ಬರುವಂತೆ ಗಾಜಿನ ಇಟ್ಟಿಗೆಗಳನ್ನು ಅಳವಡಿಸಿಕೊಳ್ಳಬಹುದು.

ಹಳ್ಳಿಗಾಡಿನಲ್ಲಿ ಮಂಗಳೂರು ಹೆಚ್ಚಿನ ಮನೆಗಳಲ್ಲಿ ಮಧ್ಯೆ ಮಧ್ಯೆ ಗಾಜಿನದೇ ಹೆಂಚುಗಳನ್ನು ಅಳವಡಿಸಿರುವುದನ್ನು ಕಂಡಿದ್ದೀರಲ್ಲಾ, ಇದೂ ಅದೇ ಬಗೆಯ ಉಪಾಯ ಅಷ್ಟೆ. ಹೊಸತೇನೂ ಅಲ್ಲ.
ಗಾಜಿನ ಇಟ್ಟಿಗೆಗಳಿಗೆ ಬದಲಾಗಿ ಸ್ಕೈಲೈಟ್‌ ಜಾಗದಲ್ಲಿ ಉಕ್ಕಿನ ಸರಳುಗಳನ್ನು ಜೋಡಿಸಿದರೆ ಸ್ವಲ್ಪ ದಪ್ಪದಾದ ಫೈಬರ್‌ ಹಾಳೆಗಳನ್ನೂ ಅಳವಡಿಸಿಕೊಳ್ಳಬಹುದು. ಈಗಾಗಲೇ ಕಟ್ಟಿ ಮುಗಿಸಿರುವ ಮನೆಗಳಲ್ಲಿಯಾದರೆ ತಾರಸಿಯನ್ನು ಕುಟ್ಟಿ ಜಾಗ ಮಾಡಿದರೆ ಈ ವಿಧಾನದಲ್ಲಿಯೇ ಸ್ಕೈಲೈಟ್‌ ಅಳವಡಿಸಲೂ ಸಾಧ್ಯವಿದೆ.

ವಾಸ್ತುಶಿಲ್ಪಿಗಳನ್ನು ಭೇಟಿ ಮಾಡಿದರೆ ಇನ್ನೂ ಉತ್ತಮ ಸ್ಕೈಲೈಟ್‌ಗಳ ಐಡಿಯಾ ಕೊಡುತ್ತಾರೆ. ಮನೆಯಲ್ಲಿ ಕಂಪ್ಯೂಟರ್‌, ಇಂಟರ್ನೆಟ್‌ ಸಂಪರ್ಕವಿದ್ದರೆ ಅಂತರ್ಜಾಲ ದಲ್ಲಿಯೂ ಜಾಲಾಡಿ ಹೊಸ ಹೊಸ ಉಪಾಯಗಳನ್ನು ಕಂಡುಕೊಳ್ಳಬಹುದು. ಹಾಗಾದರೆ, ಎಡ ಬಲ ಚಿಂತೆಯ ಮಾತೇಕೆ? ಆಕಾಶದತ್ತಲೂ ನೋಡಬಹುದಲ್ಲಾ.... ಒಮ್ಮೆ ಪ್ರಯತ್ನಿಸಿ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT