ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶ ಮಾರ್ಗದಲ್ಲಿ ಹುಲಿ ಸವಾರಿ!

Last Updated 26 ಮೇ 2015, 19:30 IST
ಅಕ್ಷರ ಗಾತ್ರ

ಪರ್ಯಾಯವೇ ಇಲ್ಲದ ಸಂದರ್ಭದಲ್ಲಿ ಎದುರಿಸಲೇಬೇಕಾದ ಸಾಹಸಮಯ ಸಂಕಟಕ್ಕೆ ಒದಗಿ ಬರುವ ರೂಪಕ ‘ಹುಲಿ ಸವಾರಿ’. ಕೆಲವು ವಿಮಾನಯಾನ ಕಂಪನಿಗಳದು ಅಕ್ಷರಶಃ ಹುಲಿ ಸವಾರಿ ಪರಿಸ್ಥಿತಿಯೇ. ಗ್ರಾಹಕರಿಗೆ ಉತ್ತಮ ಸೇವೆಯನ್ನೂ ಒದಗಿಸಬೇಕು, ಆ ಸೇವೆ ಕಡಿಮೆ ವೆಚ್ಚದಲ್ಲೂ ದೊರೆಯಬೇಕು- ಈ ಇಬ್ಬಗೆಯ ಸವಾಲುಗಳನ್ನು ಎದರಿಸುತ್ತಲೇ ತಮ್ಮ ಅಸ್ತಿತ್ವವನ್ನೂ ಉಳಿಸಿಕೊಳ್ಳಬೇಕಾದ ಸವಾಲು ವಿಮಾನಯಾನ ಸಂಸ್ಥೆಗಳದು. ಈ ಸವಾಲುಗಳನ್ನು ಎದುರಿಸುತ್ತಲೇ ವಿಮಾನಯಾನ ಕ್ಷೇತ್ರದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಅಗ್ಗಳಿಕೆ ‘ಟೈಗರ್‌ಏರ್’ ಸಂಸ್ಥೆಯದು.

2004ರಲ್ಲಿ ಪ್ರಾರಂಭವಾದ ‘ಟೈಗರ್‌ಏರ್’ ಸಂಸ್ಥೆ ಒಂದು ದಶಕದ ಹಾದಿಯನ್ನು ಸವೆಸಿರುವ ಅನುಭವಿ ಸಂಸ್ಥೆ. ಸದ್ಯಕ್ಕೆ ಏಷ್ಯಾದ ವಿವಿಧ ನಗರಗಳಿಗೆ ಪ್ರಯಾಣಿಕರನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಸಂಸ್ಥೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಭಾರತ, ಚೀನಾ, ಬಾಂಗ್ಲಾ, ಇಂಡೋನೇಷ್ಯಾ, ಮಲೇಷಿಯಾ ಸೇರಿದಂತೆ ಏಷ್ಯಾದ ಹನ್ನೆರಡು ದೇಶಗಳ, ಪ್ರಮುಖ 37 ನಗರಗಳಿಗೆ ‘ಟೈಗರ್‌ ಏರ್’ ವಿಮಾನಗಳು ಸಂಚರಿಸುತ್ತಿವೆ.

ಜನಪ್ರಿಯ ನಗರಗಳ ಜೊತೆಗೆ- ಹೆಚ್ಚು ಪ್ರಖ್ಯಾತವಲ್ಲದ, ಆದರೆ ಪ್ರವಾಸೋದ್ಯಮದ ದೃಷ್ಟಿಯಿಂದ ಮಹತ್ವ ಪಡೆದಿರುವ ಸ್ಥಳಗಳನ್ನು ತನ್ನ ಸೇವಾನಕ್ಷೆಯಲ್ಲಿ ಗುರ್ತಿಸಿಕೊಳ್ಳುವ ನಿಟ್ಟಿನಲ್ಲಿ ‘ಟೈಗರ್‌ ಏರ್’ ಹಲವು ಪ್ರಯತ್ನಗಳನ್ನು ನಡೆಸುತ್ತಿದೆ. ವಿಯೆಟ್ನಾಂ, ತೈವಾನ್, ಇಂಡೋನೇಷ್ಯಾಗಳಂಥ ದೇಶಗಳ ವಿವಿಧ ನಗರಗಳಿಗೆ ಸಂಸ್ಥೆಯ ಚಟುವಟಿಕೆಗಳು ವಿಸ್ತಾರಗೊಂಡಿವೆ. ಕಳೆದ ಹಣಕಾಸಿನ ವರ್ಷದಲ್ಲಿ 50 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದೆ.

ರಿಯಾಯಿತಿ ದರಗಳಲ್ಲಿ ವಿಶೇಷ ಪ್ಯಾಕೇಜ್‌ಗಳನ್ನು ಕೂಡ ಪ್ರವಾಸಿಗರಿಗೆ ಒದಗಿಸುತ್ತಿದೆ. ‘ಟೈಗರ್ ಏರ್ ಹಾಲಿಡೆ’ ಹೆಸರಿನಲ್ಲಿ ಏಷ್ಯಾದ ವಿವಿಧ ಪ್ರವಾಸಿ ತಾಣಗಳನ್ನು ಕೈಗೆಟಕುವ ದರದಲ್ಲಿ ಪ್ರವಾಸಿಗಳಿಗೆ ಒದಗಿಸುವುದು ಈ ಪ್ಯಾಕೇಜ್‌ಗಳ ಉದ್ದೇಶ. ಉದಾಹರಣೆಗೆ, ಇಂಡೋನೇಷ್ಯಾದ ದ್ವೀಪ ಪ್ರದೇಶ ಬಾಲಿಗೆ ‘ಟೈಗರ್‌ ಏರ್’ ವಿಶೇಷ ಪ್ಯಾಕೇಜ್ ಒದಗಿಸುತ್ತಿದೆ. ವಿಶ್ವದ ಅತ್ಯಂತ ಸುಂದರ ಪ್ರದೇಶಗಳಲ್ಲಿ ಒಂದಾದ ಬಾಲಿ– ಪ್ರಾಕೃತಿಕ ಸೌಂದರ್ಯದ ಜೊತೆಗೆ ಸಾಹಸ ಕ್ರೀಡೆಗಳಿಗೂ ಹೆಸರುವಾಸಿ. ಅಲ್ಲಿಗೆ ಹೋಗಿಬರುವ ವಿಮಾನ ಪ್ರಯಾಣದ ಸವಲತ್ತಷ್ಟೇ ಅಲ್ಲ, ಬಾಲಿಯಲ್ಲಿ ಉಳಿದುಕೊಳ್ಳಲು ವಸತಿ ವ್ಯವಸ್ಥೆ, ಓಡಾಡಲು ವಾಹನ ವ್ಯವಸ್ಥೆಯನ್ನೂ ಟೈಗರ್‌ ಏರ್ ಮೂಲಕ ಮಾಡಿಕೊಳ್ಳಬಹುದು. ಹೀಗಾಗಿ ಪ್ರವಾಸ ಎನ್ನುವುದು ಪ್ರಯಾಸವಾಗದೇ ಹಿತಕರ ಅನುಭವವಾಗಿ ಪರಿಣಮಿಸುತ್ತದೆ.

ಏಷ್ಯಾದ ಬಹುತೇಕ ದೇಶಗಳಿಗೆ ಬೆಂಗಳೂರಿನಿಂದ ಹೋಗಬೇಕಾದರೆ ಸಿಂಗಪುರ ಸಂಪರ್ಕ ಕೇಂದ್ರ. ಬಾಲಿಗೆ ಹೋಗಬೇಕಾದರೂ ಸಿಂಗಪುರ ಮಾರ್ಗವಾಗಿಯೇ ಹೋಗಬೇಕು. ಸಿಂಗಪುರದಿಂದ ಮತ್ತೊಂದು ವಿಮಾನಕ್ಕೆ ಕಾಯಬೇಕಾದ ನಾಲ್ಕೈದು ತಾಸುಗಳನ್ನು ಸಹನೀಯಗೊಳಿಸಲು ‘ಟೈಗರ್ ಪ್ಲಸ್’ ಎನ್ನುವ ವಿಶೇಷ ಸವಲತ್ತನ್ನು ಟೈಗರ್‌ ಏರ್ ಒದಗಿಸಿದೆ. ಸಿಂಗಪುರದ ‘ಚಾಂಗಿ’ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ಏರ್‌ನ ವಿಶೇಷ ಲಾಂಜ್ ಇದ್ದು, ಅಲ್ಲಿ ಪ್ರಯಾಣಿಕರು ತಮ್ಮ ಬಿಡುವಿನ ಸಮಯ ಕಳೆಯಬಹುದಾಗಿದೆ. ವಿಶ್ರಾಂತಿ ಪಡೆಯಲು ಹಾಗೂ ಹೊಟ್ಟೆ ತುಂಬಿಸಿಕೊಳ್ಳಲು ಈ ಲಾಂಜ್ ಅನುಕೂಲಕರವಾಗಿದೆ.

ಬೆಂಗಳೂರಿನಿಂದ ಬಾಲಿಗೆ ಹೋಗುವವರು ಸಿಂಗಪುರದಲ್ಲಿ ವಿಮಾನ ಬದಲಿಸುವುದು ಅನಿವಾರ್ಯವಾದರೂ, ಲಗೇಜ್ ಹೊತ್ತು ಓಡಾಡುವ ರಗಳೆಯಿಲ್ಲ. ಲಗೇಜ್ ನೇರವಾಗಿ ಬಾಲಿ ತಲುಪುವುದರಿಂದ ಸಿಂಗಪುರ ವಿಮಾನ ನಿಲ್ದಾಣದಲ್ಲಿ ಮತ್ತೆ ಲಗೇಜ್ ತಪಾಸಣೆ, ಸರತಿ ಸಾಲಿನ ಕಿರಿಕಿರಿಗಳನ್ನು ತಪ್ಪಿಸಿಕೊಳ್ಳಬಹುದು. ಐದು ತಾಸಿಗೂ ಹೆಚ್ಚಿನ ಸಮಯ ಇದ್ದರೆ ಮುಂಚಿತವಾಗಿ ಟಿಕೆಟ್ ಕಾದಿರಿಸುವ ಪ್ರಯಾಣಿಕರಿಗೆ ಟೈಗರ್‌ ಏರ್ ವಿಶೇಷ ರಿಯಾಯಿತಿಯನ್ನೂ ನೀಡುತ್ತಿದೆ. ಸಂಸ್ಥೆಯ ಇತರ ಸೇವೆ ಹಾಗೂ ಸವಲತ್ತಿನ ವಿವರಗಳನ್ನು www.tigerair.com  ಜಾಲತಾಣದಲ್ಲಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT