ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಸ್‌ಫರ್ಡ್‌ ನವನವೀನ ಪದಕೋಶ

Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

* ಒಂಬತ್ತನೇ ಆವೃತ್ತಿಯ ಕುರಿತು ವಿವರಿಸಿ
ಎಂಟನೇ ಆವೃತ್ತಿಯಲ್ಲಿ ಬರೆಯುವುದಕ್ಕೆ ಹೆಚ್ಚಿನ ಒತ್ತು ಕೊಡಲಾಗಿತ್ತು. ಈ ಆವೃತ್ತಿಯಲ್ಲಿ ಮಾತನಾಡುವುದಕ್ಕೆ ಪ್ರಾಮುಖ್ಯತೆ ನೀಡಿದ್ದೇವೆ. ಬೋಧಿಸುವವರು ಮತ್ತು ಕಲಿಯುವವರಿಗೆ ಇದರಿಂದ ಸಹಾಯವಾಗಲಿದೆ. ಈ ಕಾರಣಕ್ಕಾಗಿಯೇ ಮೊದಲ ಬಾರಿಗೆ ಡಿವಿಡಿ ಮತ್ತು ಆನ್‌ಲೈನ್‌ನಲ್ಲಿ ಬ್ರಿಟಿಷ್‌ ಮತ್ತು ಅಮೆರಿಕನ್‌ ಇಂಗ್ಲಿಷ್‌ ಉಚ್ಚಾರಣೆಗೆ ಸಂಬಂಧಿಸಿದ 20 ವಿಡಿಯೊಗಳನ್ನು ಸೇರಿಸಿದ್ದೇವೆ.

ಇದು ಹೊಸದಾಗಿ ಸಂದರ್ಶನ ಕೊಡಲು ಹೋಗುವವರಿಗೆ ಬಹಳ ಪ್ರಯೋಜನವಾಗಲಿದೆ. ಇಂದಿನ ದಿನಗಳಲ್ಲಿ ನಾವು ಯಾವ ರೀತಿಯಲ್ಲಿ ಮಾತನಾಡುತ್ತೇವೆ ಎನ್ನುವುದೇ ಮುಖ್ಯವಾಗಿದೆ. ಇವುಗಳನ್ನೆಲ್ಲ ಗುರುತಿಸಿಯೇ ವಿಡಿಯೊ ತಯಾರಿಸಿದ್ದೇವೆ. ಕೆಲವು ಶಿಕ್ಷಕರು ನಿಘಂಟಿನ ಸಹಾಯದಿಂದ ಬೋಧಿಸಲು ಪ್ರಯತ್ನಿಸುತ್ತಾರೆ. ಅದಕ್ಕೆ ಸೂಕ್ತ ಸಾಮಗ್ರಿ ಇರುವುದಿಲ್ಲ. ಆದರೆ, ನಾವು ಬೋಧಿಸುವವರಿಗೆ ಸಹಾಯವಾಗಲೆಂದು ಸಾಕಷ್ಟು ಸಾಮಗ್ರಿಯನ್ನು ಒದಗಿಸಿದ್ದೇವೆ. ಪಾಠದ ಯೋಜನೆ, ವಿಡಿಯೊಗಳು ಇದರಲ್ಲಿ ಸೇರಿವೆ.

* ನಿಘಂಟಿನ ನಿರ್ವಹಣೆಗೆ ಯಾವುದಾದರೂ ನಿರ್ದಿಷ್ಟವಾದ ತಜ್ಞರ ಸಮಿತಿ ಇದೆಯೇ?
ಹೌದು, ಇದನ್ನು ನೋಡಿಕೊಳ್ಳಲು ಆರು ಜನ ಶಿಕ್ಷಣ ಕ್ಷೇತ್ರದ ಪರಿಣತರ ಸಲಹಾ ಸಮಿತಿ ಇದೆ. ಇವರ ಸಲಹೆಯ ಮೇರೆಗೆ ಹೊಸ ನಿಘಂಟು ಅಥವಾ ಅದನ್ನು ಪರಿಷ್ಕರಣೆ ಮಾಡುತ್ತೇವೆ. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರ ಕ್ಷೇತ್ರದವರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದ ಬಳಿಕವಷ್ಟೇ ಹೊಸ ಶಬ್ದಗಳನ್ನು ನಿಘಂಟಿಗೆ ಸೇರಿಸಲಾಗುತ್ತದೆ.

ಕಲಿಯುವವರನ್ನು ಗಮನದಲ್ಲಿಟ್ಟುಕೊಂಡೆ ಮುಂದುವರೆಯುತ್ತೇವೆ. ಭಾಷಾ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಸಲಹೆಯೂ ಪಡೆಯುತ್ತೇವೆ. ಕಲಿಯುವವರಿಗೆ ನಿಜವಾಗಲೂ ಏನು ಬೇಕು ಎನ್ನುವುದು ಮುಖ್ಯವಾಗಿರುತ್ತದೆ. ಅದರ ಆಧಾರದ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಇದು ತಜ್ಞರಿಗಿಂತಲೂ ಮುಖ್ಯವಾಗಿರುವ ವಿಷಯ ಎಂದು ನಾನು ಅಂದುಕೊಂಡಿದ್ದೇನೆ.

* ಸಲಹಾ ಸಮಿತಿಯಲ್ಲಿ ಅನ್ಯ ದೇಶದ ಭಾಷಾ ತಜ್ಞರು ಇದ್ದಾರೆಯೇ?
ಭಾರತ ಸೇರಿದಂತೆ ಹಲವು ದೇಶದ ಭಾಷಾ ವಿದ್ವಾಂಸರು ಸಲಹಾ ಸಮಿತಿಯಲ್ಲಿ ಇದ್ದಾರೆ. ಅವರೆಲ್ಲರ ಸಲಹೆ ಪಡೆದ ಬಳಿಕವಷ್ಟೇ ನಿರ್ದಿಷ್ಟವಾದ ಶಬ್ದಗಳನ್ನು ನಿಘಂಟಿಗೆ ಸೇರಿಸುವ ಕಾರ್ಯ ನಡೆಯುತ್ತದೆ.

* ಭಾರತದ ಶಬ್ದಗಳನ್ನು ಸೇರಿಸಲು ಯಾವ ವಿಧಾನ ಬಳಸಿದ್ದೀರಿ?
ಕಳೆದ ಮೂರು ಆವೃತ್ತಿಗಳಲ್ಲಿ ನಮ್ಮೊಂದಿಗೆ ಕೆಲಸ ನಿರ್ವಹಿಸಿರುವ ಭಾರತದ ಪ್ರೊ. ಪಾಲ್‌ ಗುಣಶೇಖರ್‌ ಅವರ ಸಹಾಯದಿಂದ ಸ್ಥಳೀಯವಾಗಿ ಹೆಚ್ಚು ಪ್ರಚಲಿತವಾಗಿರುವ ಮತ್ತು ಮುಖ್ಯವಾಹಿನಿಯಲ್ಲಿರುವ ಶಬ್ದಗಳನ್ನು ನಿಘಂಟಿಗೆ ಸೇರಿಸಲಾಗಿದೆ. ಇವರು ಹೈದರಾಬಾದ್‌ನಲ್ಲಿ ಇದ್ದುಕೊಂಡು ಕೆಲಸ ನಿರ್ವಹಿಸುತ್ತಾರೆ.

ಇಂಗ್ಲಿಷ್‌ ಅಂಡ್‌ ಫಾರೆನ್‌ ಲಾಂಗ್ವೆಜೆಸ್‌ ಯೂನಿವರ್ಸಿಟಿಯಲ್ಲಿ ಪ್ರಾಕ್ಟರ್‌ ಮತ್ತು ಡೀನ್‌ ಆಗಿ ಕೆಲಸ ನಿರ್ವಹಿಸಿದ ಅನುಭವ ಇವರಿಗಿದೆ. ಪ್ರತಿಯೊಂದು ಪದಗಳನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದ ಬಳಿಕವಷ್ಟೇ ಸೇರಿಸಲಾಗುತ್ತದೆ.

* ಪ್ರದೇಶದಿಂದ ಪ್ರದೇಶಕ್ಕೆ ಜನರ ಉಚ್ಚಾರಣೆಯಲ್ಲಿ ವ್ಯತ್ಯಾಸ ಕಾಣುತ್ತೇವೆ. ಆಯಾ ಸ್ಥಳದ ಒಂದು ನಿರ್ದಿಷ್ಟ ಪದ ಸೇರಿಸುವಾಗ ನಿಖರವಾದ ಉಚ್ಚಾರಣೆ ಯಾವುದು ಎಂದು ಹೇಗೆ ಗುರುತಿಸುತ್ತೀರಿ?
ನಮ್ಮ ನಿಘಂಟಿನಲ್ಲಿ ಬ್ರಿಟಿಷ್‌ ಮತ್ತು ಅಮೆರಿಕನ್‌ ಇಂಗ್ಲಿಷ್‌ ಉಚ್ಚಾರಣೆ ಯಾವ ರೀತಿ ಮಾಡಬೇಕು ಎನ್ನುವುದನ್ನು ವಿವರಿಸಿದ್ದೇವೆ. ಈ ಎರಡೂ ಮಾದರಿಯಲ್ಲಿ ಆಂಗ್ಲ ಭಾಷೆಯಲ್ಲಿ ಆಯಾ ಪ್ರದೇಶಕ್ಕೆ ಹತ್ತಿರವಾಗುವ ಉಚ್ಚಾರಣೆಯನ್ನು ಸೂಚಿಸಿದ್ದೇವೆ. ಎಲ್ಲ ಪ್ರದೇಶದ ಉಚ್ಚಾರಣೆಯನ್ನು ಸೇರಿಸುವುದು ಅಸಾಧ್ಯ.

* ಇದು ಎಸ್‌ಎಂಎಸ್‌/ಟೆಕ್ಸ್ಟ್‌ ಮೆಸೇಜ್‌ ಜಮಾನಾ. ಇದಕ್ಕಾಗಿ ಬೇಕಾದ ಪದಗಳನ್ನೂ ನಿಘಂಟಿನಲ್ಲಿ ಸೇರಿಸಿದ್ದೀರಾ?
ನಮ್ಮ ನಿಘಂಟಿನಲ್ಲಿ ಈಗಾಗಲೇ ಇಂತಹ ಕೆಲ ಶಬ್ದಗಳಿವೆ. ಸ್ಮಾರ್ಟ್‌ಫೋನ್‌ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಇಂದು ಹೆಚ್ಚಾಗಿರುವುದರಿಂದ ಹೊಸದಾಗಿ ಮತ್ತೆ 25 ಶಬ್ದಗಳನ್ನು ಸೇರಿಸಿದ್ದೇವೆ.

* ಹೊಸದಾಗಿ ಎಷ್ಟು ಶಬ್ದಗಳನ್ನು ನಿಘಂಟಿಗೆ ಸೇರಿಸಲಾಗಿದೆ?
ಮುದ್ರಣ ಪ್ರತಿಯಲ್ಲಿ 700 ಮತ್ತು ಡಿಜಿಟಲ್‌ನಲ್ಲಿ 900 ಹೊಸ ಶಬ್ದಗಳನ್ನು ಸೇರಿಸಲಾಗಿದೆ. ಇದರಲ್ಲಿ ಕೇವಲ ಭಾರತವೊಂದರದ್ದೇ 2* 0 ಪದಗಳಿರುವುದು ವಿಶೇಷ.

* ಇಂದು ಆನ್‌ಲೈನ್‌ನಲ್ಲಿ ಸಾಕಷ್ಟು ಉಚಿತ ನಿಘಂಟುಗಳು ದೊರೆಯುತ್ತವೆ. ಅವುಗಳ ಸ್ಪರ್ಧೆ ಎದುರಿಸಲು ಯಾವ ರೀತಿಯ ತಯಾರಿ ಮಾಡಿಕೊಂಡಿದ್ದೀರಿ?
ನಿಜ, ನೀವು ಹೇಳಿದಂತೆ ಆನ್‌ಲೈನ್‌ನಲ್ಲಿ ಪುಕ್ಕಟೆಯಾಗಿ ಹಲವು ನಿಘಂಟುಗಳು ಸಿಗುತ್ತವೆ. ಆದರೆ, ಅವುಗಳ ಗುಣಮಟ್ಟ ಅಷ್ಟಕಷ್ಟೇ. ಇಂದಿಗೂ ಸಾಕಷ್ಟು ಜನರಿಗೆ ಅಂತರ್ಜಾಲ ಸೌಲಭ್ಯ ಇಲ್ಲ. ಅಲ್ಲದೇ ಈಗಲೂ ಹೆಚ್ಚಿನವರು ಮುದ್ರಣ ಪ್ರತಿ ಇಟ್ಟುಕೊಳ್ಳಲು ಬಯಸುತ್ತಾರೆ. ಇಷ್ಟಾಗಿಯೂ ನಾವು ಆನ್‌ಲೈನ್‌ನಲ್ಲಿ ಆಕ್ಸಫರ್ಡ್‌ ಡಿಕ್ಷನರಿಯಿಂದ ಅರ್ಥ ತಿಳಿಯಲು ವ್ಯವಸ್ಥೆ ಮಾಡಿದ್ದೇವೆ. ಇದನ್ನು ಕಾಲಕಾಲಕ್ಕೆ ಅಪ್‌ಡೇಟ್‌ ಕೂಡ ಮಾಡಲಾಗುತ್ತಿದೆ. ಜನರಿಗೆ ಯಾವುದು ಬೇಕೋ ಅದನ್ನು ಉಪಯೋಗಿಸಬಹುದು.

* ಆಂಗ್ಲ ಭಾಷೆಯಲ್ಲಿ ಯಾವ ನಿಘಂಟು ಖರೀದಿಸಬೇಕು?
ಆಕ್ಸ್‌ಫರ್ಡ್‌ ಡಿಕ್ಷನರಿ ಕೊಂಡುಕೊಳ್ಳಲು ಸಲಹೆ ಮಾಡುತ್ತೇನೆ. ಇತರ ನಿಘಂಟುಗಳಿಗೆ ಹೋಲಿಸಿದರೆ ಇದು ಸಾಕಷ್ಟು ಹೊಸ ಪದದ ಅರ್ಥಗಳನ್ನು ಹೊಂದಿದೆ. ಉತ್ತಮ ಗುಣಮಟ್ಟದ್ದು. ವಿಶ್ವದ ಎಲ್ಲ ಕಡೆಗಳಲ್ಲಿ ಬಳಸುವ ಬಹುತೇಕ ಶಬ್ದಗಳನ್ನು ಇದು ಒಳಗೊಂಡಿದೆ.

* ಬ್ರಿಟಿಷ್‌ ಮತ್ತು ಅಮೆರಿಕನ್‌ ಇಂಗ್ಲಿಷ್‌ ಶಬ್ದಗಳೆರಡರ ಉಚ್ಚಾರಣೆಯೂ ಇದೆ. ಯಾವುದು ಬಳಸುವುದು ಸೂಕ್ತ?
ಯಾವುದಾದರೂ ಒಂದನ್ನು ಅನುಸರಿಸುವುದು ಸೂಕ್ತ. ಬರೆಯಲು ಒಂದು ಮಾತನಾಡಲು ಇನ್ನೊಂದು ಬಳಸಬಾರದು. ಇಂದು ಬಹುತೇಕ ಇಂಗ್ಲಿಷ್‌ ಪದಗಳು ಬ್ರಿಟಿಷ್‌ ಶಬ್ದಗಳಾಗಿ ಮಾರ್ಪಟ್ಟಿವೆ.

ಒಂಬತ್ತನೇ ಆವೃತ್ತಿಯ ಪ್ರಮುಖ ಲಕ್ಷಣಗಳು

* ಮಾತನಾಡಲು, ಶಿಕ್ಷಕರ ಸಂಪನ್ಮೂಲ ಮತ್ತು ಶಬ್ದಭಂಡಾರ ವೃದ್ಧಿಸಲು ಒಂಬತ್ತನೇ ಆವೃತ್ತಿಯಲ್ಲಿ ಹೆಚ್ಚಿನ ಒತ್ತು
* ಮಾತನಾಡಲು ಮತ್ತು ಬರೆಯಲು ಸಹಕಾರಿಯಾಗಲು ಆನ್‌ಲೈನ್‌ನಲ್ಲಿ ಐ–ಸ್ಪೀಕರ್‌ ಹಾಗೂ ಐ-–ರೈಟರ್‌ ಸೇರ್ಪಡೆ.
* ನಮ್ಮದೇ ಸ್ವಂತ ಶಬ್ದಗಳ ಪಟ್ಟಿ ತಯಾರಿಸಬಹುದು
* ಬ್ರಿಟಿಷ್‌ ಮತ್ತು ಅಮೆರಿಕನ್‌ ಇಂಗ್ಲಿಷ್‌ ಉಚ್ಚಾರಣೆಗೆ ಸಂಬಂಧಿಸಿದ 20 ವಿಡಿಯೊಗಳು
* 700 ಹೊಸ ಪದ ಮತ್ತು ಅವುಗಳ ಅರ್ಥ ಸೇರ್ಪಡೆ

* ಡಿವಿಡಿ ಮತ್ತು ಆನ್‌ಲೈನ್‌ನಲ್ಲಿ 200 ಹೆಚ್ಚುವರಿ ಶಬ್ದ ಸೇರ್ಪಡೆ
* ಆನ್‌ಲೈನ್‌ನಲ್ಲಿ ಪ್ರತಿಯೊಬ್ಬರ ಶಬ್ದ ಉಚ್ಚಾರಣೆಯ ಪರೀಕ್ಷೆಗೆ ಅವಕಾಶ, ಪಾಠದ ಯೋಜನೆ
* ಪೇಪರ್‌ಬ್ಯಾಕ್‌ ಪ್ಲಸ್‌ ಡಿವಿಡಿ, ಹಾರ್ಡ್‌ಬ್ಯಾಕ್‌ ಪ್ಲಸ್‌ ಡಿವಿಡಿ, ಪೇಪರ್‌ಬ್ಯಾಕ್‌ ಪ್ಲಸ್‌
ಆನ್‌ಲೈನ್‌ನಲ್ಲಿ ಲಭ್ಯ
* ಆಕ್ಸ್‌ಫರ್ಡ್‌ 3000 ಆ್ಯಪ್‌ ಸಹಾಯದಿಂದಲೂ ಶಬ್ದಗಳ ಅರ್ಥ ತಿಳಿಯಬಹುದು
* ಬೆಂಗಳೂರಿನಲ್ಲಿ ಬಿಡುಗಡೆ

ಇತರ ಹೊಸ ಶಬ್ದಗಳು
* ಬ್ರೇನ್‌ ಕ್ಯಾಂಡಿ * ಫ್ಲಿಪ್ಡ್‌ ಕ್ಲಾಸ್‌ರೂಂ
* ಫಾಲೋವಿ * ಸಾಫ್ಟ್ ಸ್ಕಿಲ್ಸ್
* ಕ್ರಿಟಿಕಲ್ ಥಿಂಕಿಂಗ್ * ಚಿಲ್ ಪಿಲ್

ನಿಘಂಟಿನಲ್ಲಿ ಸೇರಿದ ಭಾರತದ ಶಬ್ದಗಳು
*ಕೀಮಾ, ಪಾಪ್ಪಡ್‌, ಕರಿ ಲೀಫ್‌, ಮೇಲಾ, ಮಿಕ್ಸಿ, ವಿದೇಶಿ, ಕಿಟ್ಟಿ ಪಾರ್ಟಿ, ಬಯೊಡೇಟಾ, ಜುಗ್ಗಡ್‌, ಬೂತ್‌ ಕ್ಯಾಪ್ಚರಿಂಗ್‌, ಟೈಮ್‌ಪಾಸ್‌.

*ಭಾರತದ 240 ಹೊಸ ಶಬ್ದ ಸೇರಿಸಲಾಗಿದ್ದು, ಇದರಲ್ಲಿ ಶೇ 60ರಷ್ಟು ಶಬ್ದಗಳು ಹಿಂದಿ ಭಾಷೆಗೆ ಸೇರಿವೆ 

ಸಾಮಾಜಿಕ ಜಾಲತಾಣಗಳನ್ನು ಗಮನದಲ್ಲಿಟ್ಟುಕೊಂಡು ಸೇರಿಸಿದ ಹೊಸ ಶಬ್ದಗಳು
*ಕ್ಯಾಟ್‌ಫಿಶ್‌, ಟ್ರಾಲ್‌, ಟ್ವಿಟ್ಟರ್‌ಟಿ, ರೀಟ್ವೀಟ್‌, ಟ್ವಿಟೇಬಲ್‌, ಟ್ವಿಟ್‌ಹಾರ್ಟ್‌, ಟ್ವಿಟರ್‌ವರ್ಸ್‌, ಡಿಫ್ರೆಂಡ್‌, ಸ್ಪೈವೇರ್‌, ಸ್ಕೇರ್‌ವೇರ್‌, ಕ್ಲಿಕ್‌ಜಾಕಿಂಗ್‌, ಟೇಕ್‌ ಎ ಚಿಲ್‌ ಪಿಲ್‌.

ಕೀನ್ಯಾದಲ್ಲಿ ಅತಿಹೆಚ್ಚು ಬೇಡಿಕೆ
ಆಕ್ಸ್‌ಫರ್ಡ್‌ ಅಡ್ವಾನ್ಸ್ಡ್‌ ಲರ್ನರ್‌್ಸ ಡಿಕ್ಷನರಿ ಅತಿ ಹೆಚ್ಚು ಮಾರಾಟ ವಾಗುವ ರಾಷ್ಟ್ರಗಳ ಪಟ್ಟಿಯಲ್ಲಿ ಆಫ್ರಿಕಾದ ಪುಟ್ಟ ರಾಷ್ಟ್ರ ಕೀನ್ಯಾ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಭಾರತ ಇದೆ.

ನಿಘಂಟಿನ ರೂವಾರಿ
1948ರಲ್ಲಿ ಎ.ಎಸ್‌. ಹಾರ್ನ್‌ಬಿ ಅವರು ಆಕ್ಸ್‌ಫರ್ಡ್‌ ಇಂಗ್ಲಿಷ್‌ ಲರ್ನರ್‌ ಡಿಕ್ಷನರಿಯನ್ನು ಮೊದಲ ಬಾರಿಗೆ ಪರಿಚಯಿಸಿದ್ದರು. ಅದರಲ್ಲಿ ಕಾಲಕಾಲಕ್ಕೆ ಹೊಸ ಹೊಸ ಶಬ್ದಗಳು ಸೇರುವುದರೊಂದಿಗೆ ಒಟ್ಟು ಒಂಬತ್ತು ಮುದ್ರಣಗಳನ್ನು ಕಂಡಿದೆ. ಸುಮಾರು 38 ದಶಲಕ್ಷ ಜನರಿಗೆ ತಲುಪಿದ ಹೆಗ್ಗಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT