ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಬೇಕಿದೆ ನಿಜವಾದ ‘ಹಸಿರು ಕ್ರಾಂತಿ’...

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ­ದಲ್ಲಿನ ಜೀವ ವೈವಿಧ್ಯ ವಿಭಾಗದಲ್ಲೊಂದು ಫಲಕ ಗಮನ ಸೆಳೆಯುವಂತಿತ್ತು. ಭಾರತದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಉತ್ಪಾದಿಸಿದ ಭತ್ತದ ಇಳುವರಿಯನ್ನು ವಿವರಿಸುವಂಥದು. ‘ಏನೆಲ್ಲ ಸುರಿ­ದರೂ ಇಳುವರಿ ಎಕರೆಗೆ 35 ಕ್ವಿಂಟಲ್ ಸಿಗೋದಿಲ್ಲ. ಅಂಥದ್ದರಲ್ಲಿ ಇಷ್ಟು ಉತ್ಪಾದನೆ ಆಗ್ತಿತ್ತಲ್ಲ! ಗ್ರೇಟ್!’ ಎಂದು ಉದ್ಗರಿಸಿದ ಆಂಧ್ರದ ಕೃಷಿಕನೊಬ್ಬ.

ಟ್ರ್ಯಾಕ್ಟರ್‌ ಲೋಡ್‌ಗಟ್ಟಲೇ ರಾಸಾಯನಿಕ ಸುರಿದು, ತಲೆ ಮೇಲೆ ಮೂಟೆ ಹೊರುವಷ್ಟು ಭತ್ತ ತರುವ ಇಂದಿನ ಸಮಯದಲ್ಲಿ ತಮಿಳು­ನಾಡಿನ ಶಾಸನಗಳು ಬೆರಗಾಗುವಂಥ ಮಾಹಿತಿ­ಯನ್ನು ನೀಡುತ್ತವೆ. ರಾಮನಾಥಪುರಂ ಪ್ರದೇಶ­ದಲ್ಲಿ ಎಕರೆಗೆ ಎಂಬತ್ತು ಕ್ವಿಂಟಲ್‌, ತಂಜಾವೂರಿ­ನಲ್ಲಿ 60 ಕ್ವಿಂಟಲ್‌ ಭತ್ತ ಇಳುವರಿ ಪಡೆದ ಮಾಹಿತಿ ಅದರಲ್ಲಿದೆ. ‘ಅದೆಲ್ಲ ಶಿಲಾಶಾಸನದ ಮಾಹಿತಿ...’ ಎಂದು ಮೂಗು ಮುರಿಯುವ­ವ­ರಿಗೆ 19ನೇ ಶತಮಾನದಲ್ಲಿ ಬ್ರಿಟಿಷ್ ಗೆಝೆ­ಟಿ­ಯರ್‌ನಲ್ಲಿ ದಾಖಲಾದ ಸಂಗತಿಯೂ ಕಾಣಿ­ಸು­ತ್ತದೆ: ‘ಭತ್ತದ ಇಳುವರಿ ಎಕರೆಗೆ 52 ಕ್ವಿಂಟಲ್’!

ಇಂಥ ಸಮೃದ್ಧ ಕೃಷಿ ಇತಿಹಾಸವನ್ನು ಇಂದಿನ ಕೃಷಿಗೆ ಹೋಲಿಸಿ ನೋಡಿದಾಗ, ಎಲ್ಲವನ್ನೂ ಕಳೆದುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸು­ತ್ತದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಹೊಸ ತಳಿಗಳನ್ನು ಬಿಡುಗಡೆ ಮಾಡಿದ್ದೇವೆಂದು ಕೃಷಿ ವಿಜ್ಞಾನಿಗಳು ಬೀಗುತ್ತಾರಾದರೂ, ಆ ತಳಿಗಳು ಹಳೆಯ ಕಾಲದ ತಳಿಗಳ ಇಳುವರಿ ಸಮೀಪಕ್ಕೆ ಕೂಡ ಹೋಗುವುದಿಲ್ಲ! ಹಸಿರು ಕ್ರಾಂತಿಯನ್ನು ಸದಾ ಜಪಿಸುತ್ತಿರುವ­ವರ ಕಣ್ಣಿಗೆ ಕಾಣಿಸದ ಇನ್ನೊಂದು ಭಾಗವಿದೆ.

ಒಂದು ಪ್ರದೇಶದ ಹವಾಗುಣಕ್ಕೆ ಪೂರಕವಾಗಿ ಅಲ್ಲಿನ ಆಹಾರ ಪದ್ಧತಿಯೂ ಬದಲಾಗುತ್ತ ಹೋಗುತ್ತದೆ. ಈ ಆಹಾರ ಪದ್ಧತಿಗೆ ಅನುಗುಣ­ವಾಗಿ ಕೃಷಿ ವಿಧಾನ ರೂಪುಗೊಂಡಿರುತ್ತದೆ. ಭತ್ತ ಹಾಗೂ ಗೋಧಿಯನ್ನು ಮಾತ್ರ ಕೇಂದ್ರವಾಗಿಟ್ಟು­ಕೊಂಡ ಹಸಿರು ಕ್ರಾಂತಿ ಕೆಲವೇ ದಶಕಗಳಲ್ಲಿ ಆಹಾರ ವೈವಿಧ್ಯವನ್ನೂ, ಕೃಷಿ ವಿಧಾನವನ್ನೂ ಪಕ್ಕಕ್ಕೆ ಸರಿಸಿದೆ. ‘ಬರಗಾಲದ ಮಿತ್ರ’ ಎಂದು ಹೆಸ­ರಾದ ಸಿರಿಧಾನ್ಯಗಳು ಎಂಥದೇ ವಾತಾವರ­ಣ­ದಲ್ಲೂ ಬೆಳೆಯಬಲ್ಲಂಥವು.

ಅಕ್ಕಿ, ಗೋಧಿ ಭರಾಟೆ­ಯಲ್ಲಿ ನವಣೆ, ಸಜ್ಜೆ, ಹಾರಕ, ಸಾಮೆ­ಯಂಥ ಧಾನ್ಯಗಳನ್ನು ಮೂಲೆಗುಂಪು ಮಾಡ­ಲಾ­ಯಿತು. ಪೌಷ್ಟಿಕಾಂಶಭರಿತ ಸಿರಿಧಾನ್ಯಗಳನ್ನು ‘ತೃಣಧಾನ್ಯ,’ ‘ಕಿರುಧಾನ್ಯ’ಗಳೆಂದು ಜರಿದ ಆಧುನಿಕ ಕೃಷಿ ವಿಜ್ಞಾನದ ಮಹಾನುಭಾವರು, ಈಗ ‘ಹವಾಮಾನ ಬದಲಾವಣೆಯನ್ನು ಎದುರಿ­ಸುವ ಸಾಮರ್ಥ್ಯವುಳ್ಳ ಸಿರಿಧಾನ್ಯ ಬೆಳೆಯಿರಿ’ ಎಂದು ರೈತರಿಗೆ ಸಲಹೆ ನೀಡುತ್ತಿದ್ದಾರೆ. ಇದು ನಮ್ಮ ಆಧುನಿಕ ಕೃಷಿ ವಿಜ್ಞಾನದ ವಿಪರ್ಯಾಸ!

ಅಕ್ಕಿ– ಗೋಧಿಯನ್ನು ವೋಟ್‌ಬ್ಯಾಂಕ್‌ ಮಾಡಿ­ಕೊಂಡ ರಾಜಕೀಯ ಪಕ್ಷಗಳು, ಅಗ್ಗದ ದರದಲ್ಲಿ ಪಡಿತರ ವ್ಯವಸ್ಥೆಯಡಿ ಈ ಧಾನ್ಯ ವಿತರಿಸಲು ಪೈಪೋಟಿ ನಡೆಸಿವೆ. ಇಂಥ ಜನಪ್ರಿಯ ಯೋಜನೆಗಳಿಗೆ ಹೆಚ್ಚೆಚ್ಚು ಉತ್ಪಾದನೆಯಾಗ­ಬೇಕು. ಹೀಗಾಗಿ ಎಲ್ಲರೂ ಇಳುವರಿ ಹೆಚ್ಚಳದತ್ತ ಗಮನ ಹರಿಸುತ್ತಾರೆಯೇ ಹೊರತು ಆರೋಗ್ಯ­ದತ್ತ ಅಲ್ಲ. ಸ್ಥಳೀಯ ಆಹಾರ ಪದ್ಧತಿಗೆ ಅನು­ಗುಣ­ವಾಗಿ ಸ್ಥಳೀಯವಾಗಿ ಬೆಳೆದ ಧಾನ್ಯ ವಿತ­ರಿ­ಸು­ವುದನ್ನು ಬಿಟ್ಟು, ದೂರದ ರಾಜ್ಯಗಳಿಂದ ತರಿ­ಸುವ ಅಕ್ಕಿ ಹಾಗೂ ಗೋಧಿಯನ್ನು ಕೊಡುತ್ತಿವೆ.

‘ಸರ್ಕಾರ ಆಹಾರಧಾನ್ಯ ಕೊಡುತ್ತಿದೆ ಎಂದರೆ ಅದೊಂದು ಸುಳ್ಳು ಹೇಳಿಕೆ ಅಷ್ಟೇ. ಪಡಿತರ ವ್ಯವಸ್ಥೆ ಹೆಸರಿನಲ್ಲಿ ಕೊಡುತ್ತಿರುವುದು ಮೌಂಟೇನ್‌ ಆಫ್‌ ಸ್ಟಾರ್ಚ್, ಅಂದರೆ ಪಿಷ್ಟದ ಬೆಟ್ಟ! ಹೀಗಾಗಿ, ನಗರದ ಕಾಯಿಲೆಗಳೆನಿಸಿದ ಮಧು­ಮೇಹ, ರಕ್ತದೊತ್ತಡ ಈಗ ಹಳ್ಳಿಗೂ ಕಾಲಿ­ಟ್ಟಿವೆ’ ಎನ್ನುತ್ತಾರೆ ಆಹಾರ ತಜ್ಞ ಡಾ. ಕೆ.ಸಿ. ರಘು.

ಹೆಚ್ಚೇನೂ ಅಲ್ಲ; ಐದಾರು ದಶಕದ ಹಿಂದಿನ ದಿನಗಳನ್ನು ನೆನಪಿಸಿಕೊಂಡರೆ ಸಾಕು. ಆಗ ಹೊಲ­ದಲ್ಲಿ ಸಿಗುತ್ತಿದ್ದ ಬಗೆಬಗೆಯ ತರಕಾರಿ, ಹಣ್ಣು, ಸೊಪ್ಪುಗಳು ಶರೀರದ ಪೋಷಕಾಂಶ ಅಗತ್ಯ ಪೂರೈಸುತ್ತಿದ್ದವು. ಹಸಿರು ಕ್ರಾಂತಿ ಚಾಲ್ತಿಗೆ ಬಂದ ಬಳಿಕ ಆದ ಬದಲಾವಣೆಯಲ್ಲಿ ಈ ಸಹಜ ತರಕಾರಿಗಳು ಹೇಳಹೆಸರಿಲ್ಲದಂತೆ ಕಾಣೆಯಾ­ದವು. ಎಲ್ಲಿ ನೋಡಿದರೂ ಏಕಬೆಳೆ... ಏಕಬೆಳೆ. ಆಹಾರ ಉತ್ಪಾದನೆ ಹೆಚ್ಚಿಸಿದ ಹಸಿರು ಕ್ರಾಂತಿ­ಯನ್ನು ಸಾಕಷ್ಟು ಮಂದಿ ಹೊಗಳುತ್ತಾರೆ.

ಅದು ನಿಜ. ಆದರೆ ಈ ಮಹನೀಯರು ಮರೆಯುವ ಸಂಗತಿ ಎಂದರೆ, ಏನೇನೂ ವೆಚ್ಚವಿಲ್ಲದೇ ಸಹಜ­ವಾಗಿ ಬೆಳೆಗಳ ಮಧ್ಯೆ ಕಳೆಯಾಗಿ ಬೆಳೆಯುತ್ತಿದ್ದ ಬೆರಕೆಸೊಪ್ಪು, ಅಣ್ಣೆಸೊಪ್ಪು, ಕಿರಕಸಾಲಿ, ಬೇಲಿಯ ಸಾಲಿನಲ್ಲಿ ಬೆಳೆಯುತ್ತಿದ್ದ ಬಿದಿರು­ಕಳಲೆ, ಸೀಗೇ ಸೊಪ್ಪು, ಗೊಟ್ಟೆಗೆಡ್ಡೆ ಇವೆಲ್ಲ ಹಸಿರು­ಕ್ರಾಂತಿ ಪರಿಧಿಗೆ ಬರಲೇ ಇಲ್ಲ.

ಕನ್ನಡ ನಾಡಿನ ವಿಶಿಷ್ಟ ‘ಅಕ್ಕಡಿ ಪದ್ಧತಿ’ ಮನೆಗೆ ಬೇಕಾದ ಎಲ್ಲ ಬಗೆಯ ಆಹಾರ ಧಾನ್ಯ, ಎಣ್ಣೆ, ಬೇಳೆಕಾಳು, ಜಾನುವಾರುಗಳಿಗೆ ಮೇವು ಬೆಳೆದು­ಕೊಳ್ಳುವ ಅಪರೂಪದ ವಿಧಾನ. ಅದು ರೈತನ ಕುಟುಂಬದ ಆಹಾರಭದ್ರತೆಯೂ ಆಗಿತ್ತು. ಅಂಥ ವಿಧಾನಗಳನ್ನು ಆಚೆ ಸರಿಸಿ, ಏಕಬೆಳೆ­ಯೊಂದನ್ನೇ ಮುಖ್ಯವಾಗಿಟ್ಟುಕೊಂಡ ಹಸಿರು ಕ್ರಾಂತಿ ಏನೇನೆಲ್ಲ ಕಸಿದುಕೊಂಡುಬಿಟ್ಟಿತಲ್ಲ! ಹಸಿದ ಹೊಟ್ಟೆಗೆ ಪೌಷ್ಟಿಕಾಂಶಭರಿತ, ಸವಿಯಾದ ಆಹಾರ ಕೊಡ-ಬೇಕೇ ಹೊರತು, ತಿಂದರೆ ದೇಹವು ರೋಗಗಳ ಗೂಡಾಗುವಂಥ ಆಹಾರ ಉತ್ಪಾದಿ-ಸುವುದು ಎಂಥ ಸಾಧನೆ!

ಹಸಿರು ಕ್ರಾಂತಿಯ ಭಾರ ಹೊತ್ತು, ಮೈ­ಮುದುರಿಕೊಂಡು ಸಬ್ಸಿಡಿಯಲ್ಲಿ ಸಿಗುವ ಬೀಜ, ಗೊಬ್ಬರಕ್ಕಾಗಿ ಅಂಗಲಾಚುತ್ತ ಕೊನೆಗೆ ಪೊಲೀ­ಸರ ಗುಂಡೇಟು ತಿಂದು ಜೀವ ಬಿಡುವ ಸ್ಥಿತಿ ನಮ್ಮ ಅನ್ನದಾತನದು. ಈಚಿನ ಸಮೀಕ್ಷೆಯೊಂದರ ಪ್ರಕಾರ, ಅವಕಾಶ ಸಿಕ್ಕರೆ ಕೃಷಿಗೆ ವಿದಾಯ ಹೇಳಿ, ನಗರಗಳತ್ತ ಗುಳೇ ಹೋಗಲು ಶೇ 60ರಷ್ಟು ರೈತರು ಸಿದ್ಧವಾಗಿದ್ದಾರೆ. ‘ಹಸಿರುಕ್ರಾಂತಿ’ ಪಿತಾಮಹ ನಾರ್ಮನ್ ಬೊರ್ಲಾಗ್‌ ಕಂಡ ಕನಸು ಖಂಡಿತ ಇದಾಗಿರ­ಲಿಲ್ಲವೇನೋ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT