ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸದಿಂದ ಬೆಳ್ಳಿತೆರೆಗೆ...

Last Updated 21 ಮೇ 2015, 19:55 IST
ಅಕ್ಷರ ಗಾತ್ರ

ಅಪ್ಪ ಗುಜರಾತಿ. ಅಮ್ಮ ಬೆಂಗಾಲಿ. ಮಗಳು ಬೆಂಗಳೂರಿನವಳು! ಇದು ಹೇಗೆಂದರೆ, ಆಕೆ ಬೆಂಗಳೂರಲ್ಲಿ ನೆಲೆಸಿ ಐದು ವರ್ಷಗಳೇ ಆಗಿವೆ. ಈಗ ಆಕೆಗೆ ಕನ್ನಡವೂ ಸುಸೂತ್ರ. ಅಲ್ಲದೇ ಆಕೆ ಭವಿಷ್ಯ ಕಟ್ಟಿಕೊಳ್ಳುತ್ತಿರುವುದೂ ಬೆಂಗಳೂರಿನಲ್ಲಿ. ಅದೂ ಚಂದನವನದಲ್ಲಿ. ಇಷ್ಟೆಲ್ಲ ಪೀಠಿಕೆ ಇಟ್ಟಿದ್ದು ‘ಆರ್ಎಕ್ಸ್ ಸೂರಿ’ ಚಿತ್ರದ ನಾಯಕಿ ಆಕಾಂಕ್ಷಾ ಬಗೆಗೆ.

ಆಕಾಂಕ್ಷಾ ಕಾಲೇಜು ಶಿಕ್ಷಣ ಪೂರೈಸಿದ್ದು ಬೆಂಗಳೂರಿನಲ್ಲೇ. ಆ ಕಾರಣಕ್ಕೆ ಅವರು ಕನ್ನಡವನ್ನೂ ಕಲಿತವರು. ಹಾಗೆಂದು ಅವರು ಕನ್ನಡ ಕಲಿತಿದ್ದು ಯಾವುದೇ ತರಗತಿಯಲ್ಲಿ ಅಲ್ಲ. ‘ಸ್ವಯಂ ಆಸಕ್ತಿ ಇದ್ದರೆ ಯಾವ ಭಾಷೆಯನ್ನಾದರೂ ಕಲಿಯುವುದು ಸಾಧ್ಯ. ನನಗೆ ನನ್ನ ಭಾಷೆಯ ಜೊತೆಗೆ ಬೇರೆ ಭಾಷೆ ಕಲಿಯುವುದೆಂದರೆ ಇಷ್ಟ’ ಎನ್ನುವ ಅವರು, ಕನ್ನಡ ಸಿನಿಮಾ, ಕನ್ನಡ ವಾಹಿನಿಗಳನ್ನು ನೋಡುತ್ತಲೇ ಭಾಷೆಯನ್ನು ಹರಿತ ಮಾಡಿಕೊಂಡವರು. ಇದು, ತಾನು ಇರುವ ನೆಲೆಯ ಭಾಷೆಯ ಮೇಲೆ ಅವರಿಗಿರುವ ಪ್ರೀತಿ ಎನ್ನಬಹುದೇನೋ.

ಶಿಕ್ಷಣ ಮುಗಿಸಿ ಮೂರು ತಿಂಗಳು ಗಗನಸಖಿಯಾಗಿ ಹಲವಾರು ದೇಶಗಳನ್ನು ಸುತ್ತಿದ ಆಕಾಂಕ್ಷಾಗೆ ಯಾಕೋ ಆ ಕೆಲಸ ಒಗ್ಗಲಿಲ್ಲ. ಬಿಡುವಿಲ್ಲದ ಕೆಲಸ, ದಿನಕ್ಕೆ ಹದಿನೆಂಟು ಗಂಟೆಗಳ ಪ್ರಯಾಣ, ನಿದ್ದೆಯಿಲ್ಲದ ಜೀವನ; ಇವೆಲ್ಲ ಒತ್ತಡಗಳು ಅವರನ್ನು ಹೈರಾಣಾಗಿಸಿದ್ದವಂತೆ. ಅದೇ ಸಂದರ್ಭಕ್ಕೆ, ಚೆನ್ನಾಗಿ ಕನ್ನಡ ಮಾತನಾಡುವ ನೀನು ಯಾಕೆ ಸಿನಿಮಾಕ್ಕೆ ಪ್ರಯತ್ನಿಸಬಾರದು ಎಂಬ ಸಲಹೆಯನ್ನು ಯಾರೋ ನೀಡಿದರಂತೆ. ಸಲಹೆಯನ್ನು ಆರಂಭದಲ್ಲಿ ಗಂಭೀರವಾಗಿ ಪರಿಗಣಿಸದ ಆಕಾಂಕ್ಷ ಆನಂತರ ಒಮ್ಮೆ ಅದೃಷ್ಟ ಪರೀಕ್ಷಿಸಿ ಬಿಡೋಣವೆಂದು ಹೊಸ ಸಿನಿಮಾ ತಂಡಕ್ಕೆ ತಮ್ಮ ಫೊಟೊಗಳನ್ನು ಕಳುಹಿಸಿದ್ದೂ ಆಯ್ತು. ಆಡಿಷನ್‌ಗೆ ಕರೆಯೂ ಬಂತು. ಅದು ‘ಆರ್ಎಕ್ಸ್ ಸೂರಿ’ ನಿರ್ದೇಶಕ ಶ್ರೀಜೈನ್ ನಡೆಸಿದ್ದ ಆಡಿಷನ್.

ಇವೆಲ್ಲಾ ಅದೃಷ್ಟದಾಟ
ಆಡಿಷನ್‌ನಿಂದ ಅತಿಯಾದ ನಿರೀಕ್ಷೆಯನ್ನೇನೂ ಇಟ್ಟುಕೊಂಡಿರದಿದ್ದ ಆಕಾಂಕ್ಷ, ಒಂದೊಳ್ಳೆಯ ಬ್ಯಾನರ್ ಮತ್ತು ಜನಪ್ರಿಯ ನಾಯಕ ಇರುವ ಚಿತ್ರ ಕೈಗೂಡಿದರೆ ಸರಿ, ಇಲ್ಲದಿದ್ದಲ್ಲಿ ಏನೂ ನಷ್ಟವಿಲ್ಲ ಎಂಬ ಮನೋಭಾವದಿಂದಲೇ ಆಡಿಷನ್ ಕೊಟ್ಟಿದ್ದು. ಕನ್ನಡ ಓದಲು ಬಾರದ ಕಾರಣ ಆಡಿಷನ್‌ನಲ್ಲಿ ಕನ್ನಡದ ಸಂಭಾಷಣೆಗಳನ್ನು ಹಿಂದಿಯಲ್ಲಿ ಬರೆದುಕೊಂಡು ಡೈಲಾಗ್ ಡೆಲಿವರಿ ಮಾಡಿದರು. ‘ಭಾವನಾತ್ಮಕ ಸನ್ನಿವೇಶದಲ್ಲಿ ಅತ್ತಿದ್ದು ನನ್ನ ನಟನೆಯಾಗಿರಲಿಲ್ಲ. ಅದು ನನ್ನ ಸ್ವಭಾವವಾಗಿತ್ತು. ಅದೇ ಆಯ್ಕೆಗೆ ಪೂರಕವಾದಂತೆ ಕಾಣಿಸುತ್ತದೆ’ ಎಂದು ಆಡಿಷನ್ ಅನುಭವ ಹೇಳುತ್ತಾರವರು. ಅವರ ಮುಖದಲ್ಲಿನ ಮುಗ್ಧತೆ ಮತ್ತು ಅಭಿನಯದಲ್ಲಿನ ಭಾವ ತೀವ್ರತೆ ಕಂಡ ಶ್ರೀಜೈನ್ ತಮ್ಮ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು.

ಅತಿಯಾದ ಆಕಾಂಕ್ಷೆ ಇಲ್ಲ
‘ಆರ್‌ಎಕ್ಸ್ ಸೂರಿ’ ಚಿತ್ರದಲ್ಲಿನ ಸಂದೇಶ ಆಕಾಂಕ್ಷಾ ಅವರ ಮನಸಿಗೆ ಮೆಚ್ಚುಗೆಯಾಗಿರುವ ಅಂಶ. ಕಮರ್ಷಿಯಲ್ ಸಿನಿಮಾದಲ್ಲಿ ಮನರಂಜನೆಯ ಜೊತೆಗೆ ಸಂದೇಶವನ್ನು ಸಮರ್ಥವಾಗಿ ನೀಡುವ ಚಿತ್ರ ಇದು ಎಂಬ ಕಾರಣಕ್ಕೆ ಅವರು ಪಾತ್ರಕ್ಕೆ ‘ಹೂಂ’ ಎಂದರಂತೆ. ತಮ್ಮ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ ಮತ್ತು ಅಭಿನಯಕ್ಕೆ ಆದ್ಯತೆ ಇದೆ ಎಂಬುದು ಅವರು ಚಿತ್ರವನ್ನು ಒಪ್ಪಿಕೊಳ್ಳಲು ಮತ್ತೊಂದು ಕಾರಣ.
ಇಲ್ಲಿ ಆಕಾಂಕ್ಷಾ ಪಾತ್ರಕ್ಕೆ ಗ್ಲಾಮರ್ ಟಚ್ ಇಲ್ಲ. ಸಾಮಾನ್ಯ ಮಧ್ಯಮ ವರ್ಗದ ಕಾಲೇಜಿಗೆ ಹೋಗುವ ನಾಯಕಿ ಅವರು. ಆದರೆ, ‘ಕಲಾವಿದೆ ಎಂದ ಮೇಲೆ ಗ್ಲಾಮರ್ ಇಲ್ಲದ ಪಾತ್ರಗಳನ್ನು ಮಾಡುವುದಿಲ್ಲ ಅಥವಾ ಗ್ಲಾಮರ್ ಇರುವ ಪಾತ್ರಗಳನ್ನು ಮಾತ್ರ ಮಾಡುತ್ತೇನೆ ಎಂಬ ಭಾವನೆ ಇರಬಾರದು. ಪಾತ್ರಕ್ಕೆ ಅವಶ್ಯವಿರುವ ಎಲ್ಲವನ್ನು ತನ್ನದಾಗಿಸಿಕೊಂಡು ಅಭಿನಯಿಸಬೇಕು’ ಎನ್ನುವ ಅವರು, ‘ಅದಕ್ಕೂ ಒಂದು ಮಿತಿ ಎಂಬುದಿದೆ’ ಎನ್ನುತ್ತಾರೆ.

ಗಂಭೀರ, ಪ್ರಬುದ್ಧ ಪಾತ್ರಗಳನ್ನು ಗಿಟ್ಟಿಸಿಕೊಳ್ಳಬೇಕೆಂಬುದು ಆಕಾಂಕ್ಷ ಆಶಯ. ಪಾತ್ರಗಳು ಕಷ್ಟವಾಗುತ್ತ ಹೋದಂತೆ ಅದರ ಮೌಲ್ಯವೂ ಹೆಚ್ಚಿರುತ್ತದೆ ಎಂಬುದು ಅವರ ನಂಬಿಕೆ. ಆದರೆ ತೀರಾ ದೂರಾಲೋಚನೆ ಮಾಡದ ಅವರು ಚಿತ್ರೋದ್ಯಮದಿಂದ ಅತಿಯಾದ ಆಕಾಂಕ್ಷೆ ಹೊಂದಿಲ್ಲ. ಶ್ರಮ ವಹಿಸಿ ಕೆಲಸ ಮಾಡುವುದಷ್ಟೇ ತನ್ನ ಕೈಲಿರುವುದು ಎಂದುಕೊಂಡು ಉಳಿದುದೆಲ್ಲ ಅದೃಷ್ಟಕ್ಕೆ ಬಿಟ್ಟು ಬಿಡುತ್ತಾರಂತೆ. ತಾನು ಏನಾಗಬೇಕು ಎಂದು ಬರೆದಿದೆಯೋ ಅದು ಆಗಿಯೇ ಆಗುತ್ತೇನೆ ಎನ್ನುವುದು ಅವರ ನುಡಿ.

ಸದ್ಯ ಕನ್ನಡದಲ್ಲೇ ಮೂರು ಚಿತ್ರಗಳ ಅವಕಾಶ ಬಂದಿದ್ದು, ಇನ್ನೂ ಮಾತುಕತೆಯ ಹಂತದಲ್ಲೇ ಇಟ್ಟಿದ್ದಾರೆ. ತೆಲುಗಿನಿಂದಲೂ ಒಂದು ಅವಕಾಶ ಬಂದಿದೆಯಂತೆ. ಮೊದಲ ಚಿತ್ರದಲ್ಲಿ ಒಳ್ಳೆಯ ಅವಕಾಶ ಸಿಕ್ಕಾಗ ಎರಡನೇ ಚಿತ್ರದಲ್ಲಿ ಇನ್ನೂ ಒಂದು ಗುಂಜಿ ಮೇಲ್ಮಟ್ಟದ ಪಾತ್ರ ಸಿಗಬೇಕು ಎನ್ನುವ ಅವರು ‘ಆರ್ ಎಕ್ಸ್ ಸೂರಿ’ ಬಿಡುಗಡೆಯಾಗುವುದನ್ನೇ ಎದುರುನೋಡುತ್ತಿದ್ದಾರೆ. ಆನಂತರವಷ್ಟೇ ಹೊಸ ಅವಕಾಶಗಳನ್ನು ಬರಮಾಡಿಕೊಳ್ಳುವ ನಿರ್ಧಾರ ಅವರದು. ಏಕೆಂದರೆ ಈ ಚಿತ್ರದಲ್ಲಿ ತನ್ನ ಅಭಿನಯವನ್ನು ನೋಡಿದ ನಂತರ ಬರುವ ಅವಕಾಶಗಳು ಹೆಚ್ಚಿನ ತೂಕದ್ದಾಗಿರುತ್ತವೆ ಎನ್ನುವ ನಂಬಿಕೆಯೂ ಅವರಿಗಿದೆ. ಹಾಂ, ಕಲಾತ್ಮಕ ಚಿತ್ರಗಳ ನಿರ್ದೇಶಕರೂ ತಮ್ಮನ್ನು ಸಂಪರ್ಕಿಸಬಹುದು ಎಂಬ ಸೂಚನೆಯನ್ನೂ ಅವರು ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT