ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ 5ರಿಂದ ಬಿ–ಫಾರ್ಮ್‌ ವಿತರಣೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ: ಕಾಂಗ್ರೆಸ್‌ ಪಾಳೆಯದಲ್ಲಿ ಭರದ ಸಿದ್ಧತೆ
Last Updated 1 ಆಗಸ್ಟ್ 2015, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್‌ ಪಾಳೆಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ  ಅಧ್ಯಕ್ಷ ಜಿ.ಪರಮೇಶ್ವರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಭವನದಲ್ಲಿ ಶನಿವಾರ ಕಾಂಗ್ರೆಸ್‌ ಮುಖಂಡರ ಸಭೆ ನಡೆಯಿತು.

ಚುನಾವಣೆಯನ್ನು ಎದುರಿಸುವ ತಂತ್ರಗಾರಿಕೆ ಬಗ್ಗೆ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು. ಹಿರಿಯ ಮುಖಂಡರಾದ ಧರ್ಮಸಿಂಗ್‌, ಮಾರ್ಗರೆಟ್‌ ಆಳ್ವಾ, ನಗರದ ಸಚಿವರು, ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.

ಸಮರೋಪಾದಿಯಲ್ಲಿ ಸಿದ್ಧತೆ: ಪಕ್ಷವು ಈಗಾಗಲೇ ಪ್ರತಿ ವಿಧಾನ ಸಭಾ ಕ್ಷೇತ್ರ ಮಟ್ಟದಲ್ಲಿ ಚುನಾವಣಾ ಉಸ್ತುವಾರಿ ಸಮಿತಿಯನ್ನು ರಚಿಸಿದೆ. 28 ವಿಧಾನಸಭಾ ಕ್ಷೇತ್ರಗಳ   ಹೊಣೆಯನ್ನು ಒಬ್ಬೊಬ್ಬರು ಸಚಿವರಿಗೆ ವಹಿಸಿದೆ.  ಆ ಕ್ಷೇತ್ರ ವ್ಯಾಪ್ತಿಯ ಶಾಸಕರು ಸಮಿತಿಯಲ್ಲಿದ್ದಾರೆ. ಸಮಿತಿಯು ಭಾನುವಾರದಿಂದಲೇ ಸಂಬಂಧಪಟ್ಟ ಬ್ಲಾಕ್‌ ಮಟ್ಟದಲ್ಲಿ  ಅಭ್ಯರ್ಥಿ ಆಯ್ಕೆಯ ಬಗ್ಗೆ ಅಂತಿಮ ಸುತ್ತಿನ ಪರಿಶೀಲನೆ ನಡೆಸುವಂತೆ ವರಿಷ್ಠರು ಸೂಚಿಸಿದ್ದಾರೆ.

ವಿಳಂಬಕ್ಕೆ ಅವಕಾಶ ಇಲ್ಲ: ಚುನಾವಣೆಗೆ ಇನ್ನು ಬೆರಳೆಣಿಕೆಯ ದಿನಗಳು ಉಳಿದಿವೆ.  ಪ್ರತಿ ಕ್ಷಣವೂ ಅಮೂಲ್ಯವಾದುದು. ಹಾಗಾಗಿ ಎಲ್ಲಾ ನಾಯಕರೂ ತಕ್ಷಣದಿಂದಲೇ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ವರಿಷ್ಠರು ಸೂಚನೆ ನೀಡಿದ್ದಾರೆ.

‘ಬಿಬಿಎಂಪಿ ಚುನಾವಣೆಗೆ ಟಿಕೆಟ್‌ ಬಯಸಿ ಕೆಪಿಸಿಸಿಗೆ 600ಕ್ಕೂ ಅಧಿಕ ಅರ್ಜಿಗಳು ಬಂದಿವೆ. ವಾರ್ಡ್‌ ಸಮಿತಿಯವರು ಆಗಸ್ಟ್‌ 3ರ
ಒಳಗಾಗಿ ಅರ್ಜಿಯನ್ನು ಕೆಪಿಸಿಸಿಗೆ ಸಲ್ಲಿಸಬೇಕು.  ಪರಿಶೀಲನಾ ಸಮಿತಿಯಲ್ಲಿ ಚರ್ಚಿಸಿ ‌ 5ರಿಂದಲೇ ಬಿ–ಫಾರ್ಮ್ ವಿತರಣೆ ಆರಂಭಿಸುತ್ತೇವೆ’ ಎಂದು ಪರಮೇಶ್ವರ್‌ ತಿಳಿಸಿದರು.

ಹೊಸ ಮುಖಗಳಿಗೆ ಮಣೆ: ‘ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ. ಹಾಗಾಗಿ,  ನಿಕಟ ಪೂರ್ವ ಕಾರ್ಪೊರೇಟರ್‌ಗಳಿಗೆ ಈ ಬಾರಿ ಮತ್ತೆ ಟಿಕೆಟ್‌ ಸಿಗುತ್ತದೆ ಎಂಬ ವಿಶ್ವಾಸ ಇಲ್ಲ. ಗೆಲ್ಲುವ ಅವಕಾಶ ಇರುವ  ಮಾಜಿ ಕಾರ್ಪೊರೇಟರ್‌ಗಳ ಪಟ್ಟಿಯನ್ನು  ಕೆಪಿಸಿಸಿ ಈಗಾಗಲೇ ಸಿದ್ಧಪಡಿಸಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಈ ಹಿಂದಿನ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಟಿಕೆಟ್‌ ನೀಡಬಾರದು. ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಲು ಪಕ್ಷ ತೀರ್ಮಾನಿಸಿದೆ’ ಎಂದು ಮೂಲಗಳು ತಿಳಿಸಿವೆ.

  ಗುಂಪುಗಾರಿಕೆಗೆ ಅವಕಾಶ ಇಲ್ಲ: ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ‘ಕಳೆದ ಎರಡು ವರ್ಷಗಳಲ್ಲಿ ನೀವು ಕೇಳಿದಷ್ಟು ಅನುದಾನವನ್ನು ನಗರದ ಅಭಿವೃದ್ಧಿಗೆ ನೀಡಿದ್ದೇನೆ. ಈಗ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ  ನಗರ ವ್ಯಾಪ್ತಿಯ ಸಚಿವರು ಹಾಗೂ ಶಾಸಕರದು.  ಪಕ್ಷದ ಅಭ್ಯರ್ಥಿಗಳು ಸೋತರೆ ಅದಕ್ಕೆ ಸಂಬಂಧಪಟ್ಟ ಸಚಿವರು ಹಾಗೂ ಶಾಸಕರನ್ನೇ ಹೊಣೆ ಮಾಡಲಾಗುವುದು. ಈ ಬಗ್ಗೆ ಹೈಕಮಾಂಡ್‌ಗೆಿ ವರದಿ ಸಲ್ಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಚುನಾವಣೆಯ ಸಂದರ್ಭದಲ್ಲಿ ಗುಂಪುಗಾರಿಕೆ ನಡೆಸುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.

‘ಟಿಕೆಟ್‌ ಹಂಚಿಕೆ  ಬಗ್ಗೆ ಭಿನ್ನಾಭಿಪ್ರಾಯಗಳೇನೇ ಇದ್ದರೂ ವಿಧಾನಸಭಾ ಕ್ಷೇತ್ರದ ಹೊಣೆ ಹೊತ್ತಿರುವ ಸಚಿವರು ಹಾಗೂ ಶಾಸಕರು ಮಾತುಕತೆ ಮೂಲಕ ಬಗೆಹರಿಸಬೇಕು’ ಎಂದು ಅವರು ಸೂಚಿಸಿದರು. ‘ಅಗತ್ಯ ಇರುವ ಕಡೆಗೆ ನಾನೂ ಪ್ರಚಾರಕ್ಕೆ ಬರುತ್ತೇನೆ’ ಎಂದರು.

ಕೆಲವು ಸಚಿವರಿಗೆ ವಿನಾಯಿತಿ: ಚುನಾವಣೆಯ ಹೊಣೆಯಿಂದ ಕೆಲವು ಸಚಿವರಿಗೆ ವಿನಾಯಿತಿ ನೀಡಲಾಗಿದೆ. ನಗರ ವ್ಯಾಪ್ತಿಯ ಸಚಿವರಿಗೆ ಒಂದಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಹೊಣೆ ವಹಿಸಲಾಗಿದೆ. ಸಚಿವರಾದ ಶಾಮನೂರು ಶಿವಶಂಕರಪ್ಪ, ಅಂಬರೀಷ್‌, ಬಾಬೂರಾವ್ ಚಿಂಚನಸೂರು, ಶ್ರೀನಿವಾಸ ಪ್ರಸಾದ್‌, ಖಮರುಲ್ ಇಸ್ಲಾಂ ಅವರಿಗೆ ಯಾವುದೇ ಕ್ಷೇತ್ರಗಳ ಹೊಣೆ ವಹಿಸಿಲ್ಲ.

ಪ್ರಣಾಳಿಕೆಗೆ ಅಂತಿಮ ಸ್ಪರ್ಶ: ಕೆಪಿಸಿಸಿ ನೇಮಿಸಿರುವ ಪ್ರಣಾಳಿಕೆ ಸಮಿತಿ ಶನಿವಾರ ಸಭೆ ನಡೆಸಿ, ಪ್ರಣಾಳಿಕೆಗೆ ಅಂತಿಮ ರೂಪ ನೀಡಿತು. ಸಮಿತಿಯ ಸಂಚಾಲಕರಾದ ಡಾ.ಕೆ.ಇ.ರಾಧಾಕೃಷ್ಣ, ಬಿ.ಎಲ್‌.ಶಂಕರ್‌, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹಾಗೂ ನಗರ ವ್ಯಾಪ್ತಿಯ ಸಚಿವರು, ಶಾಸಕರು ಹಾಗೂ ಮಾಜಿ ಮೇಯರ್‌ಗಳು ಪ್ರಣಾಳಿಕೆಯಲ್ಲಿರಬೇಕಾದ ಅಂಶಗಳ ಬಗ್ಗೆ ಚರ್ಚೆ ನಡೆಸಿದರು.

‘ಸಾಲ ಪಡೆಯದ ರೈತರಿಂದಲೂ ಆತ್ಮಹತ್ಯೆ’
‘ಸಾಲ ಪಡೆಯದ 12 ಮಂದಿ ರೈತರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ವೈಯಕ್ತಿಕ ಕಾರಣಗಳಿಂದಲೂ ಕೆಲವರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ತಿಳಿಸಿದರು. 

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಕಡಿಮೆ ವಯಸ್ಸಿನವರು ಹಾಗೂ  ಕಡಿಮೆ ಸಾಲ ತೆಗೆದುಕೊಂಡ ರೈತರ ಪ್ರಮಾಣ ಹೆಚ್ಚು ಇದೆ’ ಎಂದು ಅವರು ತಿಳಿಸಿದರು.

‘ಮುಖಂಡರ ಸಭೆಯಲ್ಲಿ ಆತ್ಮಹತ್ಯೆ ಪ್ರಕರಣಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಆತ್ಮಹತ್ಯೆ ತಡೆಯಲು ಸರ್ಕಾರ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದೆ. ಕಬ್ಬು ಬೆಳೆಗಾರರಿಗೆ ಬೇರೆ ಯಾವ ರಾಜ್ಯವೂ ನೀಡದಷ್ಟು ಸೌಲಭ್ಯ ಗಳನ್ನು ರಾಜ್ಯ ಸರ್ಕಾರ ಕಲ್ಪಿಸಿದೆ.  ₨ 3 ಲಕ್ಷವರೆಗೆ ಬಡ್ಡಿರಹಿತವಾಗಿ ಸಾಲ ನೀಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT