ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚಾರವೇ ಸ್ವರ್ಗ

ಅಕ್ಷರ ಗಾತ್ರ

ವ್ಯಕ್ತಿಯ ಬದುಕನ್ನು ಸುವ್ಯವಸ್ಥಿತವಾಗಿ ಮುನ್ನಡೆಸಲು ರೂಪಿಸಿಕೊಂಡ ನೈತಿಕ ನಿಯಮಗಳನ್ನು ಸಾಮಾನ್ಯವಾಗಿ ‘ಆಚಾರಗಳು’ ಎಂದು ಕರೆಯುತ್ತೇವೆ. ಶರಣರ ಸಂತರ ವಚನಗಳಲ್ಲಿ, ದಾಸರ ಪದಗಳಲ್ಲಿ ಮತ್ತು ಸ್ಮೃತಿ, ಸಂಹಿತೆ ಮುಂತಾದ ಶಾಸ್ತ್ರಗ್ರಂಥಗಳಲ್ಲಿ ಇಂತಹ ನೈತಿಕ ನಿಯಮಗಳನ್ನು ಸಮೃದ್ಧವಾಗಿ ಕಾಣುತ್ತೇವೆ.

ಇಂತಹ ನೈತಿಕ ನಿಯಮಗಳ ಪರಿಪಾಲನೆಯಿಂದ ವ್ಯಕ್ತಿಯ ಬದುಕು ಪರಿಶುದ್ಧವಾಗುತ್ತದೆ. ಆಗ ವ್ಯಕ್ತಿಯು ಇಹಲೋಕದಲ್ಲಿದ್ದರೂ ಅಲ್ಲಿಯೇ ಸ್ವರ್ಗವನ್ನು ಸೃಷ್ಟಿಸಿಕೊಳ್ಳುತ್ತಾನೆ. ಈ ಹಿನ್ನೆಲೆಯಲ್ಲಿಯೇ ಬಸವಣ್ಣನವರು ‘ಆಚಾರವೇ ಸ್ವರ್ಗ’ ಎಂಬ ಮಾತನ್ನು ಬಹುಸ್ಪಷ್ಟವಾಗಿ ಹೇಳಿದ್ದಾರೆ.

ಅನೇಕ ಸಂದರ್ಭಗಳಲ್ಲಿ ಆಚಾರವನ್ನು ನಡತೆ (conduct), ಕರ್ತವ್ಯ (duty)  ಮತ್ತು ಸತ್ಕರ್ಮಗಳು ಎಂಬ ಅರ್ಥದಲ್ಲಿ ಬಳಸುತ್ತೇವೆ. ಆದರೆ ಸ್ಥೂಲವಾಗಿ ನಡೆ ಮತ್ತು ನುಡಿಯ ಪರಿಶುದ್ಧಿಯನ್ನು ಆಚಾರವೆಂದು ಹೇಳುತ್ತೇವೆ. ನಡೆ ನುಡಿಗಳಲ್ಲಿ ಸಾಮರಸ್ಯವನ್ನು ತಂದುಕೊಳ್ಳುವುದು ಆಚಾರವೆನಿಸುತ್ತದೆ. ನಡೆ ನುಡಿ ಒಂದಾಗದವರು ಆಚಾರಕ್ಕೆ ಸಲ್ಲರು ಎಂಬ ಬಸವಣ್ಣನವರ ಮಾತು ಇದಕ್ಕೆ ಪುಷ್ಟಿಯನ್ನೊದಗಿಸುತ್ತದೆ.

ನಡೆ ನುಡಿ ಒಂದಾದವರು ಅಂದರೆ ಪರಿಶುದ್ಧ ನಡೆ-ನುಡಿಯುಳ್ಳವರು ಶರಣರು, ಸಂತರು ಮತ್ತು ಜ್ಞಾನಿಗಳು ಎಂಬ ಅಭಿಧಾನಕ್ಕೆ ಪಾತ್ರರಾಗುವರು. ಅವರೆಲ್ಲರೂ ವಿದ್ಯೆ, ಗುಣ, ಶೀಲ, ಜ್ಞಾನ, ಧರ್ಮ ಮತ್ತು ಆಚಾರಗಳಲ್ಲಿ ಬಹುದೊಡ್ಡ ಸಾಧನೆ ಮಾಡಿದವರು. ವ್ಯಕ್ತಿ ಮತ್ತು ಸಮಾಜವನ್ನು ಸುವ್ಯವಸ್ಥಿತವಾಗಿ­ಡುವುದಕ್ಕಾಗಿ ಅವರು ತಮ್ಮ ಬೋಧನೆಗಳಲ್ಲಿ ಸದಾಚಾರದ ನಿಯಮ­ಗಳನ್ನು ಸಮೃದ್ಧವಾಗಿ ಅಳವಡಿಸಿರು­ವುದನ್ನು ಕಾಣುತ್ತೇವೆ. ಇಂತಹ ಆಚಾರಗಳು ವ್ಯಕ್ತಿಗೆ ಸಂಸ್ಕಾರವನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ನಡೆ ನುಡಿಗಳಲ್ಲಿ ಪರಿಶುದ್ಧತೆ ಉಂಟಾಗಲು ಆಚಾರದ ಅವಶ್ಯಕತೆ ಬಹಳಷ್ಟಿದೆ. ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂಥ ನಾಲಿಗೆ’ ಎಂದು ದಾಸರು ಹಾಡಿರುವುದು ನಡೆ ನುಡಿಗಳ ಪರಿಶುದ್ಧಿಯಲ್ಲಿ ಆಚಾರದ ಪಾತ್ರವನ್ನು ಎತ್ತಿ ಹೇಳುತ್ತದೆ. ಜೊತೆಗೆ ಆಚಾರವಿಲ್ಲದ ಧರ್ಮವನ್ನೂ ಊಹಿಸಿಕೊಳ್ಳಲಾಗದು. ಆಚಾರವೇ ಶ್ರೇಷ್ಠವಾದ ಧರ್ಮ ಎಂಬುದನ್ನು ಮರೆಯಲಾಗದು. ಇನ್ನು ಅಧ್ಯಾತ್ಮ ಸಾಧಕರಿಗಂತೂ ಆಚಾರವು ಅತ್ಯವಶ್ಯವಾಗಿ ಬೇಕೇ ಬೇಕು.

‘ಆಚಾರವೇ ಭಕ್ತಂಗೆ ಅಲಂಕಾರವು, ಆಚಾರವೇ ಭಕ್ತಂಗೆ ಸರ್ವಪೂಜ್ಯವು ಇಂತೀ ಆಚಾರವುಳ್ಳವನೇ ಭಕ್ತನು, ಆಚಾರವುಳ್ಳವನೇ ಯುಕ್ತನು, ಆಚಾರವುಳ್ಳವನೇ ಮುಕ್ತನಯ್ಯಾ’ ಎಂದು ಶರಣರು ಹೇಳಿರುವುದು ಭಕ್ತರಿಗಿರುವ ಆಚಾರದ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ. ಆಚಾರವಿಲ್ಲದ ಭಕ್ತನನ್ನಾಗಲಿ, ಮುಕ್ತನನ್ನಾಗಲಿ ಕಲ್ಪಿಸಿ­ಕೊಳ್ಳುವುದು ಸಾಧ್ಯವಿಲ್ಲ. ಆಚಾರದಿಂದ ಜ್ಞಾನ, ಜ್ಞಾನದಿಂದ ಭಾವಶುದ್ಧಿ, ಭಾವಶುದ್ಧಿಯಿಂದ ಧ್ಯಾನ, ಧ್ಯಾನದಿಂದ ಪ್ರಸಾದ, ಪ್ರಸಾದದಿಂದ ಮುಕ್ತಿಯು ಸಾಧಕನಿಗೆ ಲಭ್ಯವಾಗುವುದು.

ಶರಣರು, ಸಂತರು ಬೋಧಿಸಿದ ನೈತಿಕ ನಿಯಮಗಳಲ್ಲಿ ಅಥವಾ ಆಚಾರಗಳಲ್ಲಿ ವಿಚಾರವೂ ಒಳ­ಗೊಂಡಿರುತ್ತದೆ. ವಿಚಾರವಿಲ್ಲದ ಆಚಾರ ಅರ್ಥಹೀನ ಎನಿಸುತ್ತದೆ. ವಿಚಾರವೆಂಬ ಹೂವು ಆಚಾರವೆಂಬ ಕಾಯಾ­ಗುವುದನ್ನು ಬಸವಣ್ಣನವರು ತಮ್ಮ­ದೊಂದು ವಚನದಲ್ಲಿ ಹೇಳಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು ಧಾರ್ಮಿಕ ಜೀವನದಲ್ಲಿ ಅನುಸರಿಸಬೇಕಾದ ನೈತಿಕ ನಿಯಮಗಳು ಕಾಲ ದೇಶಕ್ಕನುಗುಣವಾಗಿ ಬೇರೆ ಬೇರೆಯಾಗಿರಬಹುದು.

ಆದರೆ ಧರ್ಮದ ಸಾರ್ಥಕತೆ ಇರುವುದೇ ಆಚಾರಗಳ ಪರಿಪಾಲನೆಯಲ್ಲಿ ಎಂಬುದಂತೂ ಸ್ಪಷ್ಟ. ಆಚಾರಗಳನ್ನು ಪರಿಪಾಲಿಸುವುದೂ ಕೂಡ ಬಹುಕಷ್ಟಕರವಾದದ್ದು. ‘ಆಚಾರವೆಂಬುದು ಹಾವಸೆಗಲ್ಲು’ ಎನ್ನುತ್ತಾರೆ ಬಸವಣ್ಣನವರು. ಆಚಾರವು ಪಾಚಿಕಟ್ಟಿದ ಕಲ್ಲು ಇದ್ದಂತೆ, ಅರಿಯದೆ ಕಾಲಿಟ್ಟರೆ ಜಾರುತ್ತದೆ. ಆದ್ದರಿಂದ ಬಹು ಎಚ್ಚರಿಕೆಯಿಂದ ಕಾಲಿಡಬೇಕು. ಇದರರ್ಥ ಎಚ್ಚರಿಕೆಯಿಂದ ನಡೆಯ­ಬೇಕೆಂಬುದೇ ಆಗಿದೆ.

ಒಟ್ಟಾರೆ ನಾವು ಅನುಷ್ಠಾನ­ಗೊಳಿಸುವ ಆಚಾರಗಳು ವ್ಯಕ್ತಿ ಮತ್ತು ಸಮಾಜದ ಹಿತಸಾಧನೆಗೆ ಪೂರಕ­ವಾಗಿರಬೇಕು. ವ್ಯಕ್ತಿಯ ದೇಹದ ದುರ್ಗುಣ­ಗಳಾದ ಆಶೆ, ಆಮಿಷ, ಕಾಮ-ಕ್ರೋಧಾದಿಗಳನ್ನು ದೂರಮಾಡುವಂತಿರಬೇಕು, ಮಾನವ ಕಲ್ಯಾಣದ ಜೊತೆಗೆ ಸಕಲ ಜೀವರಾಶಿಗಳ ಕಲ್ಯಾಣವನ್ನು ಸಾಧಿಸುವಂತಿರಬೇಕು. ಆಗ ಜಗವೆಲ್ಲವೂ ಸ್ವರ್ಗವಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT