ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಳ ಮೂಲಕ ಅಧ್ಯಯನ

Last Updated 25 ಮೇ 2015, 19:30 IST
ಅಕ್ಷರ ಗಾತ್ರ

ಮೈಸೂರು ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಚಿನ್ನೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತರಗತಿಯ ಒಳಗೆ ಕಲಿಸುವುದಕ್ಕಿಂತ ಹಸಿರು ಪರಿಸರದಲ್ಲಿಯೇ ಪಾಠ ನಡೆಯುವುದು ಹೆಚ್ಚು. ಆಟಗಳ ಮೂಲಕ ಗಣಿತ, ವಿಜ್ಞಾನ, ಪರಿಸರ, ಕನ್ನಡ ವಿಷಯಗಳ ಬೋಧನೆ ನಡೆಯುತ್ತದೆ.  ಶಾಲೆ ಚಿಕ್ಕದಾದರೂ ಕಲಿಕೆಯ ಮಟ್ಟ ಉತ್ತಮವಾಗಿರುವುದರಿಂದ ಈ ಊರಿನ ಯಾವೊಬ್ಬ ಪೋಷಕರೂ ಖಾಸಗಿ ಶಾಲೆಯ ಮೋಹಕ್ಕೆ ಒಳಗಾಗಿಲ್ಲ.

ಇಲ್ಲಿನ ಶಾಲಾ ವನದಲ್ಲಿ ಹಸಿರು ತುಂಬಿ ತುಳುಕಿದೆ. ಹಣ್ಣಿನ ಗಿಡಗಳಾದ ಬಾಳೆ, ಪಪ್ಪಾಯ, ಟೊಮೆಟೊ ಫಲ ಕೊಡುತ್ತಿವೆ. ಬದನೆ, ಹೀರೆ, ನುಗ್ಗೆ, ಸೀಮೆ ಬದನೆ ಗಿಡಗಳು ಹಬ್ಬಿ ನಿಂತಿವೆ. ಕೀರೆ, ಕಿಲಕೀರೆ, ದಂಟು, ಕೊತ್ತಂಬರಿ, ಮೆಂತ್ಯ ಸೊಪ್ಪು ಬೆಳೆಯಲಾಗುತ್ತಿದೆ. ಕಾಕಡ, ಕನಕಾಂಬರ, ಕಣಗಿಲೆ, ಗುಲಾಬಿ ಗಿಡಗಳು ಹೂ ಮುಡಿದು ನಿಂತಿವೆ. ಶಾಲಾ ಆವರಣದಲ್ಲಿ 16 ತೆಂಗಿನ ಮರಗಳಿದ್ದು, 6ರಲ್ಲಿ ಗೊನೆ ತೂಗುತ್ತಿವೆ. ಬೆಲೆ ಬಾಳುವ ತೇಗ, ಬೀಟೆ, ಬೇವು, ಸುರಗಿ ನೆರಳು ಕೊಡುವ ಹೊಂಗೆ ಗಿಡಗಳು ನಳನಳಿಸುತ್ತಿದ್ದು ತಂಪೆರೆಯುತ್ತಿವೆ. ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯವಾದ ಕಾಯಿ ಪಲ್ಯೆಗಳನ್ನು ಶಾಲೆ ಕೈ ತೋಟದಲ್ಲಿಯೇ ಬೆಳೆಯಲಾಗುತ್ತದೆ.

ವಿದ್ಯಾರ್ಥಿಗಳೇ ಕೃಷಿಕರು
ಶಾಲಾ ಕೈ ತೋಟವನ್ನು ವಿದ್ಯಾರ್ಥಿಗಳೇ ಬೆಳೆಸಿರು ವುದು ಇಲ್ಲಿನ ವಿಶೇಷ. ಒಬ್ಬೊಬ್ಬ ವಿದ್ಯಾರ್ಥಿ ಇಂತಿಷ್ಟು ಗಿಡಗಳನ್ನು ನೋಡಿಕೊಳ್ಳಬೇಕು ಎಂದು ನಿಯಮ ವಿದೆ. ಆಯಾ ಗಿಡಕ್ಕೆ ಗೊಬ್ಬರ ಹಾಕುವುದು, ನೀರೆರೆಯುವುದು, ಕಳೆ ಕೀಳುವುದು ಎಲ್ಲವನ್ನೂ ನಿಯೋಜಿತ ವಿದ್ಯಾರ್ಥಿ ಮನಸ್ಸಿಟ್ಟು ಮಾಡುತ್ತಾನೆ. ಗುದ್ದಲಿ, ಪಿಕಾಸಿ ಹಿಡಿದು ನೆಲವನ್ನು ಅಗೆದು ಮೆದುಗೊಳಿಸಿ ಬಿತ್ತನೆ ಮಾಡುವುದನ್ನು ಮಕ್ಕಳಿಗೆ ಹೇಳಿಕೊಡಲಾಗಿದೆ. ಈ ಶಾಲೆಯಲ್ಲಿ ರೈತರ ಮಕ್ಕಳೇ ಹೆಚ್ಚು ಇರುವುದರಿಂದ ಬಿತ್ತನೆ ಕಾರ್ಯದಿಂದ ಫಸಲು ಕೊಯ್ಲು ಮಾಡುವವರೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ತರಕಾರಿ, ಹೂ ಗಿಡ ಸೇರಿದಂತೆ ಯಾವುದಕ್ಕೂ ಕ್ರಿಮಿನಾಶಕ ಬಳಸುವುದಿಲ್ಲ. ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಗಿಡಗಳ ಆರೈಕೆ ನಡೆಯುತ್ತದೆ. ತಮಗೆ ವಹಿಸಿದ ಜವಾಬ್ದಾರಿಯನ್ನು ಮಕ್ಕಳು ಕಕ್ಕುಲತೆಯಿಂದ ಮಾಡುತ್ತಾರೆ. ಯಾವ ಗಿಡಗಳು ಯಾವ ಸಸ್ಯ ಜಾತೀಯ ಕುಟುಂಬಕ್ಕೆ ಸೇರುತ್ತವೆ ಎಂಬುದನ್ನು ಕಲಿಸಲಾಗುತ್ತದೆ.

ಗಿಡಗಳ ಆಯಸ್ಸು, ಪೋಷಣೆಯ ವಿಧಾನ, ಫಲ ಕೊಡುವ ಅವಧಿ, ಸಿಗಬಹುದಾದ ಇಳುವರಿ, ರೋಗ ಮತ್ತು ಅದರ ಪರಿಹಾರ ಮಾರ್ಗವನ್ನು ಶಿಕ್ಷಕರು ಹೇಳಿಕೊಡುತ್ತಾರೆ.

ಶಾಲೆಯ ಕಾಂಪೌಂಡ್‌ ಮೇಲೆ ರಾಷ್ಟ್ರ ನಾಯಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ರಾಷ್ಟ್ರ ಲಾಂಛನ, ರಾಷ್ಟ್ರೀಯ ಪ್ರಾಣಿ, ಪಕ್ಷಿ, ಕನ್ನಡ ರಾಜೇಶ್ವರಿ ಚಿತ್ರಗಳು ರಾರಾಜಿಸುತ್ತವೆ. ಇವು ಕಲಿಕಾ ಸಂಪನ್ಮೂಲವಾಗಿದ್ದು, ಶಾಲೆಯ ಅಂದವನ್ನು ಇಮ್ಮಡಿಗೊಳಿಸಿವೆ. ‘ಪುನರ್ಬಲನ ಕಲಿಕೆಯ ತತ್ವ’ದ ಅಡಿಯಲ್ಲಿ ಶಾಲಾ ಕಟ್ಟಡದ ಬಿತ್ತಿಯಲ್ಲಿ ಸೌರ ವಿದ್ಯಮಾನ, ವೈಜ್ಞಾನಿಕ ಸಂಶೋಧನೆಗಳು, ಒತ್ತಕ್ಷರ, ಗುಣಿತಾಕ್ಷರ, ಮಗ್ಗಿ ಇತರ ಕಲಿಕಾ ವಿಷಯಗಳನ್ನು ಬರೆಸಲಾಗಿದೆ. ವಿದ್ಯಾರ್ಥಿಗಳ ಸುಲಭ ಗ್ರಹಿಕೆಗೆ ಈ ಕ್ರಮ ಪೂರಕ ಎಂಬುದು ಶಿಕ್ಷಕರ ಅಂಬೋಣ.

ಶಿಕ್ಷಕರ ಜೇಬಿನ ಹಣ
ಶಾಲೆಯ ಮುಖ್ಯ ಶಿಕ್ಷಕ ವಿ. ಅಶೋಕಕುಮಾರ್‌ ತಮ್ಮ ಶಾಲೆಗಾಗಿ ₹50 ಸಾವಿರಕ್ಕೂ ಹೆಚ್ಚು ಹಣವನ್ನು ತಮ್ಮ ಜೇಬಿನಿಂದ ಖರ್ಚು ಮಾಡಿದ್ದಾರೆ. ನೀರಿನ ಚಿಲುಮೆ, ಸ್ವಾಗತ ಕಮಾನು, ಕೈ ತೋಟ ಹಾಗೂ ಭಿತ್ತಿಚಿತ್ರಗಳನ್ನು ಬರೆಸಲು ಹಣ ವ್ಯಯಿಸಿದ್ದಾರೆ. ಅಚ್ಚುಕಟ್ಟಾದ ಶೌಚಾಲಯ, ಸಮಪರ್ಕ ನೀರು, ಕಲಿಕಾ ಸಾಮಗ್ರಿಗಳನ್ನು ಒದಗಿಸಲು ಸ್ವಂತ ಹಣ ಖರ್ಚು ಮಾಡಿದ್ದಾರೆ. ಶಾಲಾ ಆವರಣದಲ್ಲಿರುವ ಉಯ್ಯಾಲೆ, ಜಾರುಗುಪ್ಪೆ, ಚಕ್ರವ್ಯೂಹ, ಬಳೆ ಬಂಡಿ ಇತರ ಆಟದ ಪರಿಕರಗಳು ಮಕ್ಕಳ ಮನೋಲ್ಲಾಸಕ್ಕೆ ಪ್ರೇರಕವಾಗಿವೆ.

ಕನ್ನಡ ನುಡಿ ಹಬ್ಬ
ಪ್ರತಿ ವರ್ಷ ಕನ್ನಡ ನುಡಿ ಹಬ್ಬ ಆಚರಿಸುವುದು ಈ ಶಾಲೆಯ ವಿಶೇಷ. ಕನ್ನಡ ಸಾಹಿತ್ಯ ಸಮ್ಮೇಳನ ಮಾದರಿಯಲ್ಲಿ ನಡೆಯುವ ಈ ನುಡಿ ಹಬ್ಬವನ್ನು ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿ ಊರ ಹಬ್ಬದಂತೆ ಆಚರಿಸುತ್ತಾರೆ. ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಯನ್ನು ಈ ನುಡಿ ಹಬ್ಬದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿ ಎತ್ತಿನ ಬಂಡಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ಗ್ರಾಮದ ಬೀದಿಗಳಲ್ಲಿ ನಡೆಯುವ ಮೆರವಣಿಗೆಗೆ ಜಾನಪದ ಕಲಾತಂಡಗಳು ಮೆರುಗು ನೀಡುತ್ತವೆ.

‘ನಮ್ಮ ಶಾಲೆಯಲ್ಲಿ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ತೋಟಗಾರಿಕೆ ಸುಲಭ. ಹತ್ತಾರು ಬಗೆಯ ಸಸಿಗಳನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಬೆಳೆದಿದ್ದಾರೆ. ಅಪ್ಪಟ ಕೃಷಿಕರಂತೆ ಕೆಲಸ ಮಾಡುವುದರಿಂದ ಮಾರ್ಗದರ್ಶನ ಮಾಡುವುದು ಸುಲಭ. ಶಾಲಾ ವನ ಸೊಂಪಾಗಿರುವುದರಿಂದ ಹವಾಗುಣ ಕೂಡ ತಂಪಾಗಿದೆ. ಕಲಿಕೋತ್ಸವದಂದು ನಾಟಕ, ವಿವಿಧ ನೃತ್ಯ ಪ್ರದರ್ಶನ ಏರ್ಪಡಿಸಲಾಗುತ್ತದೆ.

ಪ್ರತಿ ತಿಂಗಳ ಕೊನೆಯಲ್ಲಿ ರಸ ಪ್ರಶ್ನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತವೆ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಗೆದ್ದು ಹತ್ತು ಹಲವು ಬಹುಮಾನಗಳನ್ನು ತಂದಿದ್ದಾರೆ. ವಾರ್ಷಿಕ ಪರೀಕ್ಷೆ ಮುಗಿಯುತ್ತಿದ್ದಂತೆಯೇ ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕಾಗಿ 15 ದಿನಗಳ ಕಾಲ ಬೇಸಿಗೆ ಶಿಬಿರ ನಡೆಸುತ್ತೇವೆ’ ಎನ್ನುತ್ತಾರೆ  ಶಾಲೆಯ ಸಹ ಶಿಕ್ಷಕಿ ಎಚ್‌.ವಿ. ವಿಜಯಲಕ್ಷ್ಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT