ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರೇ ವಿಷಯ ತಿಳಿಸಿದರು !

ಅಸ್ಸಾಂ ತಂಡದ ಕೋಚ್‌ ಸ್ಥಾನದಿಂದ ಸನತ್ ನಿರ್ಗಮನ
Last Updated 18 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಕೋಚ್‌ ಆಗಿದ್ದ ಅವಧಿಯಲ್ಲಿ ಅಸ್ಸಾಂ ತಂಡ ಅನೇಕ ಪಂದ್ಯಗಳಲ್ಲಿ ಗೆಲುವು ಪಡೆದಿದೆ. ದೇಶಿ ಟೂರ್ನಿಗಳಲ್ಲಿ ಈಗಷ್ಟೇ ಗಮನ ಸೆಳೆಯುತ್ತಿರುವ ತಂಡ  ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ಅನೇಕ ಬಲಿಷ್ಠ ತಂಡಗಳನ್ನು ಮಣಿಸಿದೆ. ತಂಡದ ಯಶಸ್ಸಿನಲ್ಲಿ ನಾನೂ ಪಾಲುದಾರ.

ಆದರೂ ಕೋಚ್‌ ಸ್ಥಾನದಿಂದ ತೆಗೆದು ಹಾಕುವ ಬಗ್ಗೆ ಅಲ್ಲಿನ ಕ್ರಿಕೆಟ್‌ ಸಂಸ್ಥೆ ಏನೂ ಹೇಳಲಿಲ್ಲ. ಆಟಗಾರರ ಮೂಲಕವೇ ಮೊದಲು ವಿಷಯ ಗೊತ್ತಾಯಿತು’
–ಹೀಗೆ ಬೇಸರ ವ್ಯಕ್ತಪಡಿಸಿದ್ದು ಅಸ್ಸಾಂ ತಂಡದ ಯಶಸ್ಸಿಗೆ ಎರಡು ವರ್ಷ ಶ್ರಮಿಸಿದ ಕರ್ನಾಟಕದ ಸನತ್ ಕುಮಾರ್‌.

ಸನತ್‌ ಅವರು ಆ ತಂಡದ ಕೋಚ್‌ ಆಗಿ ಹೋಗುವುದಕ್ಕಿಂತಲೂ ಮೊದಲು ಅಸ್ಸಾ ತಂಡ ‘ಪ್ಲೇಟ್‌’ ಡಿವಿಷನ್‌ನಲ್ಲಿ ಆಡುತ್ತಿತ್ತು. ಈ ತಂಡದವರು 2013–14ರ ರಣಜಿ ಟೂರ್ನಿಯಲ್ಲಿ ‘ಸಿ’ ಗುಂಪಿನಲ್ಲಿದ್ದರು. ಆಡಿದ ಎಂಟು ಪಂದ್ಯಗಳಲ್ಲಿ ಗೆಲುವು ಪಡೆದಿದ್ದು ಒಂದರಲ್ಲಿ ಮಾತ್ರ.

ನಂತರದ ಋತುವಿನಿಂದ ಅಸ್ಸಾಂ ಅಮೋಘ ಪ್ರದರ್ಶನ ನೀಡಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. 2015–16ರ ಋತುವಿನಲ್ಲಿ  ಸೆಮಿಫೈನಲ್‌ ತಲುಪಿತ್ತು.  ತಂಡ ರಣಜಿ ಟೂರ್ನಿಯಲ್ಲಿ ನಾಲ್ಕರ ಘಟ್ಟ ತಲುಪಿದ್ದು ಅದೇ ಮೊದಲು. ಈ ಎರಡೂ ವರ್ಷ ಕನ್ನಡಿಗ ಸನತ್ ಅವರು ಅಸ್ಸಾಂನ ಕೋಚ್‌ ಆಗಿದ್ದರು. 
ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮತನಾಡಿದ ಸನತ್‌ ‘ನನ್ನನ್ನು ತೆಗೆದು ಹಾಕುವ ಬಗ್ಗೆ ಅಸ್ಸಾಂ ಕ್ರಿಕೆಟ್‌ ಸಂಸ್ಥೆ ಮೊದಲು ನನಗೆ ಏನನ್ನೂ ಹೇಳಿರಲಿಲ್ಲ. ಆಟಗಾರರ ಮೂಲಕ ವಿಷಯ ಗೊತ್ತಾಯಿತು. ನಂತರ ಸಂಸ್ಥೆ ಹಣಕಾಸಿನ ಕಾರಣ ಹೇಳಿತು’ ಎಂದಿದ್ದಾರೆ.

‘ಅದೇನೇ ಇರಲಿ.   ಎರಡು ವರ್ಷ ಆ ತಂಡದ ಉತ್ಸಾಹಿ ಆಟಗಾರರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದರಿಂದ ಸಂತೋಷವಾಗಿದೆ. ಆಟಗಾರರು ಹೊಂದಿರುವ ಬದ್ಧತೆ ಬಗ್ಗೆ ಹೆಮ್ಮೆಯಿದೆ. ವೇಗದ ಬೌಲಿಂಗ್‌ನಲ್ಲಿ ತಂಡ ತುಂಬಾ ಚುರುಕಾಗಿದೆ. ಕಡಿಮೆ ಅವಧಿಯಲ್ಲಿ ತಂಡವನ್ನು ಬಲಿಷ್ಠವಾಗಿ ಕಟ್ಟಲು ಯತ್ನಿಸಿದ್ದೇನೆ’ ಎಂದು ಸನತ್ ನುಡಿದರು.

‘ಕರ್ನಾಟಕ ತಂಡ ಎರಡು ಮೂರು ವರ್ಷಗಳಿಂದ ರಣಜಿ ಟೂರ್ನಿಯಲ್ಲಿ ಹೇಗೆ ಪ್ರದರ್ಶನ ನೀಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅಂಥ ಬಲಿಷ್ಠ ತಂಡದ ಎದುರು ನಾವು ಇನಿಂಗ್ಸ್‌ ಮುನ್ನಡೆ ಗಳಿಸಿದ್ದೆವು. ಚಾಂಪಿಯನ್‌ ತಂಡವನ್ನು ಪರದಾಡುವಂತೆ ಮಾಡಿದ್ದೆವು. ಈ ಎಲ್ಲಾ ಸಾಧನೆಗಳು ಆಟಗಾರರಲ್ಲಿ ಸಾಕಷ್ಟು ವಿಶ್ವಾಸ ತುಂಬಿದ್ದವು. ಆದ್ದರಿಂದಲೇ ಸತತ ಎರಡು ವರ್ಷ ನಾಕೌಟ್‌ ಪ್ರವೇಶಿಸಲು ನಮಗೆ ಸಾಧ್ಯವಾಯಿತು. ಆಟಗಾರರಿಗೆ ಒಳ್ಳೆಯದಾಗಲಿ’ ಎಂದೂ ಅವರು ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT