ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟದ ಅಂಗಳದಲ್ಲಿನ ಕಪ್ಪು–ಬಿಳಿ ಪಟ್ಟಿಗಳು

Last Updated 30 ಜುಲೈ 2016, 19:30 IST
ಅಕ್ಷರ ಗಾತ್ರ

‘‘ಟ್ರ್ಯಾಕ್‌ ಮೇಲಿದ್ದಾಗ ನಾನು ಟಾಮಿ ಸ್ಮಿತ್‌, ವಿಶ್ವದ ಅತ್ಯಂತ ವೇಗದ ಓಟಗಾರ. ಡ್ರೆಸ್ಸಿಂಗ್‌ ರೂಂಗೆ ಬಂದ ತಕ್ಷಣ ನಾನೊಬ್ಬ ಡರ್ಟಿ ನೀಗ್ರೊ’’.ಆಫ್ರಿಕನ್‌–ಅಮೆರಿಕನ್‌ ಅಥ್ಲೀಟ್‌ ಟಾಮಿ ಸ್ಮಿತ್‌ ಅವರ ನೋವಿನ ನುಡಿಗಳಿವು.

ಅಂದಹಾಗೆ, ವರ್ಣಭೇದದ ವಿರುದ್ಧ ಗಟ್ಟಿ ದನಿ ಎತ್ತಿದ ಈ ಸ್ಮಿತ್‌ 1968ರ ಒಲಿಂಪಿಕ್ಸ್‌ನಲ್ಲಿ ಇಡೀ ವಿಶ್ವ ತಮ್ಮೆಡೆಗೆ ತಿರುಗಿನೋಡುವಂತೆ ಮಾಡಿದ್ದರು. 200 ಮೀಟರ್ಸ್ ಓಟದ ಸ್ಪರ್ಧೆಯನ್ನು ಸ್ಮಿತ್‌ 19.30 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದಿದ್ದರು. ಅದೇ ಸ್ಪರ್ಧೆಯಲ್ಲಿ ಅವರ ಗೆಳೆಯ ಜಾನ್‌ ಕಾರ್ಲೊಸ್‌ 20.10 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಕಂಚಿನ ಪದಕ ಗೆದ್ದಿದ್ದರು. ಈ ಇಬ್ಬರೂ ಆಟಗಾರರು ಪದಕಪ್ರದಾನ ಕಾರ್ಯಕ್ರಮವನ್ನು ತಮ್ಮ ಹೆಮ್ಮೆ–ಹತಾಶೆಗಳ ಅಭಿವ್ಯಕ್ತಿಗೆ ಬಳಸಿಕೊಂಡಿದ್ದರು.

ಮೆಕ್ಸಿಕೊದ ಒಲಿಂಪಿಕ್ಸ್‌ ಸ್ಟೇಡಿಯಂನಲ್ಲಿ 1968ರ ಅ.16ರಂದು ನಡೆದ ಪದಕಪ್ರದಾನ ಕಾರ್ಯಕ್ರಮದಲ್ಲಿ ಸ್ಮಿತ್‌ ಹಾಗೂ ಕಾರ್ಲೊಸ್‌ ನಡವಳಿಕೆ ಒಲಿಂಪಿಕ್ ಆಯೋಜಕರಿಗೆ ತೀರಾ ಅನಿರೀಕ್ಷಿತವಾಗಿತ್ತು. ಅಮೆರಿಕದ ರಾಷ್ಟ್ರಗೀತೆ ಮೊಳಗುವ ಸಂದರ್ಭದಲ್ಲಿ ಇಬ್ಬರೂ ಆಟಗಾರರು ಕಪ್ಪು ಗವಸುಗಳನ್ನು ಧರಿಸಿದ್ದ ಕೈಗಳನ್ನು ಮೇಲೆತ್ತಿ ನಿಂತಿದ್ದರು.

ರಾಷ್ಟ್ರಗೀತೆ ಮುಗಿಯುವವರೆಗೂ ಅವರ ಈ ಪ್ರದರ್ಶನ ನಡೆದಿತ್ತು. ‘ಮಾನವ ಹಕ್ಕು’ಗಳನ್ನು ಕುರಿತ ಬ್ಯಾಡ್ಜ್‌ಗಳನ್ನು ಧರಿಸಿದ್ದ ಇಬ್ಬರೂ, ಅಮೆರಿಕದಲ್ಲಿನ ಕಪ್ಪು ವರ್ಣೀಯರ ಬಡತನ ಸೂಚಿಸುವ ಉದ್ದೇಶದಿಂದ ಬೂಟುಗಳನ್ನು ಹಾಕಿಕೊಂಡಿರಲಿಲ್ಲ.

ಸ್ಮಿತ್‌ ಕಪ್ಪು ಕರವಸ್ತ್ರವನ್ನು ತಮ್ಮ ಕುತ್ತಿಗೆಗೆ ಸುತ್ತಿಕೊಂಡಿದ್ದರೆ, ಕಾರ್ಲೊಸ್‌ ತಮ್ಮ ಟ್ರ್ಯಾಕ್‌ಸೂಟ್‌ನ ಅಂಗಿಯ ಜಿಪ್‌ ಹಾಕಿಕೊಂಡಿರಲಿಲ್ಲ. ಕುತ್ತಿಗೆಗೆ ಸುತ್ತಿಕೊಂಡಿದ್ದ ಕರವಸ್ತ್ರ ‘ಕಪ್ಪು ಹೆಮ್ಮೆ’ಯನ್ನು ಸೂಚಿಸುತ್ತಿತ್ತು ಎಂದು ಸ್ಮಿತ್‌ ಹೇಳಿದರೆ, ಟ್ರ್ಯಾಕ್‌ ಸೂಟ್‌ನ ಅಂಗಿಯ ಜಿಪ್‌ ಹಾಕದೆ ಇದ್ದುದನ್ನು ನೀಲಿ ಕೊರಳಪಟ್ಟಿಯ ಕಾರ್ಮಿಕರಿಗೆ ಸೂಚಿಸಿದ ಸಹಾನುಭೂತಿ ಎಂದು ಬಣ್ಣಿಸಿದ್ದರು. ಕಾರ್ಯಕ್ರಮ ವೀಕ್ಷಿಸುತ್ತಿದ್ದ ಜನರ ಅಸಮಾಧಾನದ ಕೂಗುಗಳ ನಡುವೆಯೇ ಸ್ಮಿತ್‌ ಮತ್ತು ಕಾರ್ಲೊಸ್‌ ಪೋಡಿಯಂನಿಂದ ಕೆಳಗೆ ಇಳಿದಿದ್ದರು.

ಒಲಿಂಪಿಕ್‌ನ ಆಶಯಗಳಿಗೆ ಹಾಗೂ ನೀತಿಸಂಹಿತೆಗೆ ಈ ಆಟಗಾರರ ವರ್ತನೆ ವಿರುದ್ಧವಾದುದು ಎಂದು ‘ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ’ ಖಂಡಿಸಿತು. ಇಬ್ಬರನ್ನೂ ಒಲಿಂಪಿಕ್‌ ಗ್ರಾಮದಿಂದ ಅಮೆರಿಕಗೆ ವಾಪಸ್‌ ಕಳುಹಿಸಲಾಯಿತು.

ಸ್ಮಿತ್‌ ಹಾಗೂ ಕಾರ್ಲೊಸ್‌ ಅವರ ನಡವಳಿಕೆ ವಿಶ್ವಮಾನವ ಸಂದೇಶವನ್ನು ಪ್ರತಿಪಾದಿಸುವ ಒಲಿಂಪಿಕ್‌ನ ಆಶಯಕ್ಕೆ ತಕ್ಕುದಾಗಿರಲಿಲ್ಲ ಎನ್ನುವುದು ತಾತ್ವಿಕವಾಗಿ ನಿಜ.ಆದರೆ, ಒಲಿಂಪಿಕ್‌ ಸೇರಿದಂತೆ ವಿಶ್ವದೆಲ್ಲೆಡೆ ಬೇರೆ ಬೇರೆ ರೂಪಗಳಲ್ಲಿ ಚಲಾವಣೆಯಲ್ಲಿರುವ ವರ್ಣಭೇದ ನೀತಿಯನ್ನು ಪ್ರತಿಭಟಿಸಲು ಆಟಗಾರನೊಬ್ಬನಿಗೆ ಒಲಿಂಪಿಕ್‌ಗಿಂಥ ಅತ್ಯುತ್ತಮ ವೇದಿಕೆ ಬೇರೆ ಯಾವುದಿದ್ದೀತು? ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದಾದ ಅಮೆರಿಕದಲ್ಲಿ ಚಾಲ್ತಿಯಲ್ಲಿದ್ದ ವರ್ಣಭೇದ ನೀತಿಯನ್ನು ಜಾಗತಿಕ ವೇದಿಕೆಯಲ್ಲಿ ಬಹಿರಂಗಪಡಿಸಿದ ಈ ಆಟಗಾರರ ನಡವಳಿಕೆಯ ಹಿನ್ನೆಲೆಯಲ್ಲಿ – ‘ಒಂದು ವೇಳೆ ಗೆಲುವು ಸಾಧಿಸಿದಲ್ಲಿ ನಾನೊಬ್ಬ ಅಮೆರಿಕನ್‌ ಎನ್ನಿಸಿಕೊಳ್ಳುವೆ.

ಆದರೆ ನನ್ನ ಪ್ರದರ್ಶನ ಕೆಟ್ಟದಾಗಿದ್ದಲ್ಲಿ ನೀಗ್ರೊ ಎನ್ನಿಸಿಕೊಳ್ಳಬೇಕಾಗುತ್ತದೆ’ ಎನ್ನುವ ಸ್ಮಿತ್‌ ಅವರ ಮಾತನ್ನು ಗ್ರಹಿಸಬೇಕು. ಈ ಪ್ರತಿಭಟನೆ ಘನತೆಯಿಂದ ಕೂಡಿತ್ತೇ ಹೊರತು, ಪ್ರಚಾರತಂತ್ರ ಅಥವಾ ಹುಸಿ ಭಾವುಕತೆಯ ನಡವಳಿಕೆಯಾಗಿರಲಿಲ್ಲ.

ಕ್ರೀಡಾಂಗಣದಲ್ಲಿ ಸಾಧನೆಯ ಮೂಲಕ ವರ್ಣಭೇದ ನೀತಿಯ ವಿರುದ್ಧ ಧ್ವನಿ ಎತ್ತಿದವರಲ್ಲಿ ಸ್ಮಿತ್‌–ಕಾರ್ಲೊಸ್‌ ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ. ವಿಶ್ವ ಬಾಕ್ಸಿಂಗ್‌ನ ದಂತಕಥೆಗಳಲ್ಲಿ ಒಬ್ಬರಾದ ಮಹಮ್ಮದ್‌ ಅಲಿ ಕೂಡ ವರ್ಣಭೇದದ ವಿರುದ್ಧ ಧ್ವನಿ ಎತ್ತಿದವರೇ. 1960ರ ರೋಮ್‌ ಒಲಿಂಪಿಕ್ಸ್‌ನಲ್ಲಿ, ತನ್ನ ಹದಿನೆಂಟನೇ ವಯಸ್ಸಿಗೆ ಚಿನ್ನದ ಪದಕವನ್ನು ಕೊರಳಿಗೆ ಹಾಕಿಕೊಂಡ ಅಗ್ಗಳಿಕೆ ಅಲಿ ಅವರದು.

ಅಮೆರಿಕದ ಸಮಾಜದಲ್ಲಿ ಕರಿಯರು ಅನುಭವಿಸುತ್ತಿದ್ದ ಅಪಮಾನ–ಸಂಕಟಗಳಿಂದ ನೊಂದ ಅವರು, ತಮ್ಮ ಒಲಿಂಪಿಕ್‌ ಪದಕವನ್ನು ಓಹಿಯೊ ನದಿಗೆ ಎಸೆದಿದ್ದರಂತೆ. ಇದೇ ಅಲಿ, ವಿಯೆಟ್ನಾಂ ಜೊತೆಗಿನ ಸಂಘರ್ಷದ ಸಂದರ್ಭದಲ್ಲಿ ಅಮೆರಿಕದ ಸೇನೆ ಸೇರಲು ನಿರಾಕರಿಸುವ ಮೂಲಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು.

ಕರಿಯರ ಆತ್ಮವಿಶ್ವಾಸದ ಪ್ರತೀಕದಂತೆ ಬಾಳಿದ ಅವರು, ವರ್ಣಭೇದವನ್ನು ವಿರೋಧಿಸಲಿಕ್ಕಾಗಿ ಧರ್ಮಾಂತರ ಹೊಂದಿ – ಕ್ಯಾಸ್ಸಿಯಸ್‌ ಕ್ಲೇ ಎನ್ನುವ ತಮ್ಮ ಮೂಲ ಹೆಸರನ್ನು ಮಹಮ್ಮದ್‌ ಅಲಿ ಎಂದು ಬದಲಿಸಿಕೊಂಡಿದ್ದರು. ಕ್ಯಾಸ್ಸಿಯಸ್‌ ಎನ್ನುವ ಹೆಸರು ಅವರಿಗೆ ಗುಲಾಮಿತನದ ಸಂಕೇತದಂತೆ ಕಾಣಿಸಿತ್ತು.

1936ರಲ್ಲಿ ಜರ್ಮನಿಯಲ್ಲಿ ನಡೆದ ಒಲಿಂಪಿಕ್ಸ್‌ ಪಂದ್ಯಾವಳಿ ಆಟದ ಸೊಗಸಿಗಿಂತಲೂ ಹೆಚ್ಚು ಚರ್ಚೆಗೆ ಒಳಗಾದುದು ವರ್ಣಭೇದ ನೀತಿ. ಯುರೋಪ್‌ನಲ್ಲಿ ಹಿಟ್ಲರ್‌ನ ‘ನಾಜಿ ಜರ್ಮನಿ’ಯ ಪ್ರಭಾವಳಿ ದಟ್ಟವಾಗಿದ್ದ ಸಂದರ್ಭವದು. ಹಿಟ್ಲರ್‌ನ ‘ಆರ್ಯನ್‌ ಶ್ರೇಷ್ಠತೆ’ಯ ವ್ಯಸನ ಒಲಿಂಪಿಕ್‌ನಲ್ಲೂ ಪ್ರತಿನಿಧಿಸಿತು.

ಒಲಿಂಪಿಕ್‌ಗೆ ಒಂದು ತಿಂಗಳ ಮೊದಲಷ್ಟೇ ಎತ್ತರ ಜಿಗಿತದಲ್ಲಿ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದ್ದ ಮಾರ್ಗರೆಟ್ ಬರ್ಗ್‌ಮನ್‌ ಎನ್ನುವ ಜರ್ಮನ್‌ ಆಟಗಾರ್ತಿಯನ್ನು ಒಲಿಂಪಿಕ್‌ನಿಂದ ದೂರ ಇಡಲಾಯಿತು. ’ಜೂಯಿಶ್‌’ ಎನ್ನುವುದು ಆಕೆಯ ಅನರ್ಹತೆಗೆ ಕಾರಣವಾಯಿತು.

ಜರ್ಮನಿಯ ಧೋರಣೆಯನ್ನು ವಿರೋಧಿಸಿ ಸ್ಪೇನ್‌ ಹಾಗೂ ಸೋವಿಯತ್‌ ಯೂನಿಗಳು ಕ್ರೀಡಾಹಬ್ಬವನ್ನೇ ಬಹಿಷ್ಕರಿಸಿದವು. ಕೆಲವು ಆಟಗಾರರು ವೈಯಕ್ತಿಕ ನೆಲೆಯಲ್ಲಿ ಒಲಿಂಪಿಕ್‌ನಿಂದ ದೂರವುಳಿಯುವ ನಿರ್ಧಾರ ಕೈಗೊಂಡರು. ಜರ್ಮನಿಯ ವರ್ಣಭೇದದ ಕುರಿತು ಮಾಧ್ಯಮಗಳಲ್ಲಿ ತೀವ್ರ ಪ್ರತಿರೋಧ ಎದುರಾಯಿತು.

ವಿರೋಧ–ಬೆಂಬಲಗಳ ನಡುವೆಯೇ ಅಮೆರಿಕ ಒಲಿಂಪಿಕ್‌ನಲ್ಲಿ ಭಾಗವಹಿಸಲು ಒಪ್ಪಿಕೊಂಡಿತು. ಒಲಿಂಪಿಕ್‌ಗೆ ಇನ್ನೊಂದು ದಿನವಿದೆ ಎನ್ನುವಾಗ್ಗೆ ಅಮೆರಿಕದ ರಿಲೇ ತಂಡದಿಂದ ಸ್ಯಾಮ್‌ ಸ್ಟೋಲರ್ ಮತ್ತು ಮಾರ್ಟಿ ಗ್ಲಿಕ್‌ಮನ್‌ ಎನ್ನುವ ಇಬ್ಬರು ಸ್ಪ್ರಿಂಟರ್‌ಗಳನ್ನು ಹೊರಹಾಕಲಾಯಿತು. ‘ಜೂ’ಗಳು ಚಿನ್ನದ ಪದಕ ಗೆದ್ದರೆ ಹಿಟ್ಲರ್‌ಗೆ ಮುಜುಗರವಾಗಬಹುದು ಎನ್ನುವ ಕಾರಣಕ್ಕಾಗಿ ಈ ಆಟಗಾರರು ತಂಡದಿಂದ ಹೊರಗುಳಿಯಬೇಕಾಯಿತು.

ಇದೆಲ್ಲದರ ನಡುವೆಯೂ ಜೆಸ್ಸಿ ಓವನ್ಸ್‌ ಎನ್ನುವ ಆಫ್ರಿಕನ್‌–ಅಮೆರಿಕನ್‌ ಓಟಗಾರ ನಾಲ್ಕು ಚಿನ್ನದ ಪದಕ ಗೆಲ್ಲುವ ಮೂಲಕ ಹಿಟ್ಲರ್‌ನ ಅಹಂಕಾರಕ್ಕೆ ಪೆಟ್ಟು ನೀಡಿದ್ದ. (ಆತನ ಕೈಕುಲುಕಲು ಹಾಗೂ ಪದಕಪ್ರದಾನ ಮಾಡಲು ಹಿಟ್ಲರ್‌ ನಿರಾಕರಿಸಿದ ಎನ್ನುವ ಕಥೆಯೂ ಚಾಲ್ತಿಯಲ್ಲಿದೆ).

ಹಿಟ್ಲರ್‌ ಪ್ರಭಾವಿತ ಒಲಿಂಪಿಕ್ಸ್‌ನಲ್ಲಿ ‘ಕಪ್ಪು ಧ್ವಜ’ ಹಾರಿಸುವ ಮುನ್ನ ಜೆಸ್ಸಿ ಎದುರಿಸಿದ ತೊಂದರೆಗಳು ಒಂದೆರಡಲ್ಲ. ಬಿಳಿ ಆಟಗಾರರಿಗೆ ಲಭ್ಯವಿದ್ದ ಸವಲತ್ತುಗಳು ಆತ ನಿರೀಕ್ಷಿಸುವಂತಿರಲಿಲ್ಲ. ಅಷ್ಟುಮಾತ್ರವಲ್ಲ, ಜರ್ಮನಿಗೆ ಆಗಮಿಸಿದ ಸಂದರ್ಭದಲ್ಲಿ ಆತ ಸ್ಥಳೀಯರ ಪ್ರತಿರೋಧ ಎದುರಿಸಬೇಕಾಯಿತು.

ಲಲನೆಯರ ಗುಂಪೊಂದು ಜೆಸ್ಸಿಯನ್ನು ಮುತ್ತಿಕೊಂಡು, ಕ್ರೀಡಾಕೂಟದಲ್ಲಿ ಭಾಗವಹಿಸದೆ ವಾಪಸ್‌ ಹೋಗುವಂತೆ ಒತ್ತಾಯಿಸಿ, ಆತ ಧರಿಸಿದ್ದ ಬಟ್ಟೆಗಳನ್ನು ಚಿಂದಿ ಚಿಂದಿ ಮಾಡಿತ್ತು. ಚಿನ್ನದ ಪದಕಗಳನ್ನು ಗೆದ್ದಮೇಲೆ ಜೆಸ್ಸಿಗೆ ಭದ್ರತಾ ಸಿಬ್ಬಂದಿಯ ನಡುವೆ ಮರಳಬೇಕಾಯಿತು.

ಇದೆಲ್ಲವೂ ಚರಿತ್ರೆಯ ಮಾತಾಯಿತು. ಅಂದಹಾಗೆ, ಒಲಿಂಪಿಕ್ಸ್‌ನಲ್ಲಿ ಈಗಲೂ ವರ್ಣಭೇದ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ‘ರೇಸಿಸಂ ಅಂಡ್‌ ದಿ ಒಲಿಂಪಿಕ್ಸ್‌’ ಪುಸ್ತಕದ ಲೇಖಕ ರಾಬರ್ಟ್‌ ಜಿ. ವೇಸ್‌ಬರ್ಡ್‌ ಅವರು ಪ್ರಸ್ತುತ ಒಲಿಂಪಿಕ್ಸ್‌ನಲ್ಲಿ ವರ್ಣಭೇದದ ಅನುಸರಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ವರ್ಣಭೇದದ ಹೊರತಾಗಿ ‘ಒಲಿಂಪಿಕ್ಸ್‌ ಕ್ರೀಡಾಕೂಟ’ ಎದುರಿಸಬೇಕಾದ ಹೊಸ ಸವಾಲುಗಳನ್ನು ಅವರು ಪ್ರಸ್ತಾಪಿಸುತ್ತಾರೆ.

ಒಲಿಂಪಿಕ್ಸ್‌ನಲ್ಲಿ ಸಲಿಂಗಿಗಳ ಭಾಗವಹಿಸುವಿಕೆ ಬಗ್ಗೆ ಚರ್ಚೆ ನಡೆಯಬೇಕಿದೆ ಎನ್ನುವ ಅವರು, ಮಧ್ಯಪ್ರಾಚ್ಯ ದೇಶಗಳಲ್ಲಿ ಹೆಣ್ಣುಮಕ್ಕಳಿಗೆ ಇರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಬಗ್ಗೆಯೂ ಒಲಿಂಪಿಕ್ಸ್‌ ಸಮಿತಿ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವನ್ನು ರಾಬರ್ಟ್ ಒತ್ತಿಹೇಳುತ್ತಾರೆ.

ರಾಬರ್ಟ್‌ ಅವರು ಹೇಳುವಂತೆ, ಪ್ರಸ್ತುತ ಒಲಿಂಪಿಕ್ಸ್‌ ಕ್ರೀಡಾ­ಕೂಟದಲ್ಲಿ ವರ್ಣಭೇದ ಇಲ್ಲದಿರಬಹುದು. ಆದರೆ, ಕೆಲವು ಆಟಗಾರರ ಮನಸ್ಸಿನಲ್ಲಿ ಕರಿಯರ ಕುರಿತು ಅಸಹನೆ ಇರುವುದು ಸುಳ್ಳಲ್ಲ. 2012ರ ‘ಲಂಡನ್‌ ಒಲಿಂಪಿಕ್ಸ್‌’ನಲ್ಲಿ, ಕಪ್ಪು ವರ್ಣೀಯರ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ ಕಾರಣಕ್ಕೆ ಇಬ್ಬರು ಅಥ್ಲೀಟ್‌ಗಳನ್ನು ಕ್ರೀಡಾಕೂಟದಿಂದ ಹೊರಹಾಕಲಾಗಿತ್ತು.

‘ರಿಯೊ ಒಲಿಂಪಿಕ್ಸ್‌’ ದಿನಗಣನೆ ಸಂದರ್ಭದಲ್ಲಿ ಕೂಡ ಜನಾಂಗೀಯ ನಿಂದನೆ ಕಾರಣಕ್ಕಾಗಿ ಫುಟ್‌ಬಾಲ್ ಆಟಗಾರನೊಬ್ಬನನ್ನು ‘ಸ್ವಿಸ್‌ ಒಲಿಂಪಿಕ್ ಸಮಿತಿ’ ತಂಡದಿಂದ ಹೊರಹಾಕಿದೆ. ಅಂದರೆ, ವ್ಯವಸ್ಥೆಯು ಚೌಕಟ್ಟಿನಿಂದ ವ್ಯಕ್ತಿಯ ನೆಲೆಗೆ ವರ್ಣಭೇದ ಬಂದುನಿಂತಿದೆ ಎಂದಾಯಿತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT