ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತದ ಹೊಸ ಶಕೆ

Last Updated 27 ಮೇ 2014, 19:30 IST
ಅಕ್ಷರ ಗಾತ್ರ

45 ಸಚಿವರ ಚಿಕ್ಕ ಚೊಕ್ಕ ಸಂಪುಟದೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ವಿಭಿನ್ನವಾದ ಆಡಳಿತ ಶೈಲಿ ಸಾಧ್ಯತೆಯ ನಿರೀಕ್ಷೆಗಳನ್ನು ಮೂಡಿಸಿದೆ. ಬಲಿಷ್ಠ, ಅಭಿವೃದ್ಧಿ ಹೊಂದಿದ, ಎಲ್ಲರನ್ನೂ ಒಳಗೊಳ್ಳುವಂತಹ ಭಾರತ­ವನ್ನು ನಿರ್ಮಿಸುವ ಆಶಯವನ್ನು ವ್ಯಕ್ತಪಡಿಸಿರುವ ಮೋದಿಯವರು  ಹೊಸ ಆಶಾವಾದ, ಉತ್ಸಾಹ ತುಂಬಿದ್ದಾರೆ.

ಸಂಪುಟ ಸದಸ್ಯರ ಆಯ್ಕೆಯಲ್ಲಿ  ತಮ್ಮದೇ ಛಾಪು ಮೂಡಿಸಿರುವ ಮೋದಿ, ಆಡಳಿತರಂಗದಲ್ಲಿ ಹೊಸ ಅಧ್ಯಾಯ ತೆರೆದಿದ್ದಾರೆ. 75 ವರ್ಷ ದಾಟಿದವರಿಗೆ ಸಂಪುಟದಲ್ಲಿ ಸ್ಥಾನ ನೀಡದಿರುವ ನಿಲುವಿಗೆ ಬದ್ಧರಾಗಿದ್ದಾರೆ. ಹೀಗಾಗಿ ಬಿಜೆಪಿಯ ಪ್ರಮುಖರಾದ ಮುರಳಿ ಮನೋಹರ ಜೋಷಿ ಅವರನ್ನು ಸಂಪುಟದಿಂದ ಹೊರಗಿಡುವಂತಹ ದಿಟ್ಟತನ ಪ್ರದರ್ಶಿಸಿದ್ದಾರೆ. ನಜ್ಮಾ ಹೆಫ್ತುಲ್ಲಾ, ಕಲ್ ರಾಜ ಮಿಶ್ರಾ ಹಾಗೂ ರಾಮ್ ವಿಲಾಸ್ ಪಾಸ್ವಾನ್ ಬಿಟ್ಟರೆ ಮೋದಿ ಸಂಪುಟದಲ್ಲಿರುವವರೆಲ್ಲಾ ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಹುಟ್ಟಿ­ದವರು.

ವಿವಿಧ ಸಚಿವಾಲಯಗಳ ಕಾರ್ಯಗಳನ್ನು ಒಗ್ಗೂಡಿಸುವಂತಹ ಹೊಸ ಪ್ರಯೋಗವನ್ನೂ ಈ ಸಂಪುಟ ರಚನೆ ವೇಳೆ ಮೋದಿ­ಯವರು ಕೈಗೊಂಡಿದ್ದಾರೆ.  ‘ಆಡಳಿತ ಹೆಚ್ಚು, ಸರ್ಕಾರ ಕಡಿಮೆ’ ಎಂಬುದು ಅವರ  ಘೋಷವಾಕ್ಯ. ಇದಕ್ಕೆ ಪೂರಕವಾಗಿ ಹಲವು ಪರಸ್ಪರ ಸಂಬಂಧವಿರುವ ಖಾತೆಗಳನ್ನು ಒಗ್ಗೂಡಿಸಿ ಅನೇಕ ಸಚಿವರಿಗೆ ಹಂಚಲಾಗಿದೆ. ಈ ನಡೆ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಕುತೂಹಲಕರ. ಅರುಣ್ ಜೇಟ್ಲಿ ಅವರಿಗೆ ನೀಡಲಾಗಿರುವ ಹಣಕಾಸು ಖಾತೆ  ಜೊತೆಗೆ ಕಾರ್ಪೊರೇಟ್  ವ್ಯವಹಾರವನ್ನೂ ಸೇರಿಸಲಾಗಿದೆ. ಹಾಗೆಯೇ ಜೇಟ್ಲಿ ಅವರಿಗೆ  ಹೆಚ್ಚುವರಿ­ಯಾಗಿ ರಕ್ಷಣಾ ಖಾತೆಯನ್ನೂ ನೀಡಲಾಗಿದೆ. ಆದರೆ ಈ ಎರಡೂ ಖಾತೆಗಳು ಪೂರ್ಣಾವಧಿ ಗಮನ ಅಗತ್ಯವಾಗಿರುವಂತಹವು.  ರಾಜಕೀಯ ಕುಟುಂಬಗಳಿಂದ ಬಂದವರಿಗೆ ಹೆಚ್ಚು ಮಣೆ ಹಾಕಿಲ್ಲದಿರುವುದು  ನಿಜಕ್ಕೂ ಶುಭಾರಂಭ ಎನ್ನಬಹುದು.     

ಮಹಿಳೆಯರನ್ನು ಕುರಿತಂತೆ ಬಿಜೆಪಿಯದು ಸಾಂಪ್ರದಾಯಿಕ ದೃಷ್ಟಿ ಎಂಬುದು ಸಾಮಾನ್ಯ ಭಾವನೆ. ಆದರೆ ಈ ಪೂರ್ವಗ್ರಹವನ್ನು  ಹೋಗ­ಲಾಡಿಸುವ ರೀತಿಯಲ್ಲಿ  ಸಚಿವ ಸಂಪುಟದಲ್ಲಿ ಏಳು ಮಂದಿ ಮಹಿಳೆ­ಯರಿಗೆ ಅವಕಾಶ ನೀಡಲಾಗಿದೆ. ಅದರಲ್ಲೂ  ಆರು ಮಹಿಳೆಯರಿಗೆ ಸಂಪುಟ ದರ್ಜೆ  ಸ್ಥಾನಮಾನ ನೀಡಿ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಿರುವುದು ಮಹಿಳಾ ನಾಯಕತ್ವಕ್ಕೆ ದೊರೆತಂತಹ ದೊಡ್ಡ ಬೆಂಬಲವಾಗಿದೆ. 

ವಿದೇಶಾಂಗ ಖಾತೆಯನ್ನು ಪಡೆದುಕೊಂಡಿರುವ ಸುಷ್ಮಾ ಸ್ವರಾಜ್ ಅವರು  ಇಂದಿರಾ ಗಾಂಧಿ ನಂತರ ಭದ್ರತೆ ಕುರಿತ ಸಂಪುಟ ಸಭೆಯಲ್ಲಿ (ಸಿಸಿಎಸ್) ಪಾಲ್ಗೊಳ್ಳಲಿರುವ ಎರಡನೇ ಮಹಿಳೆಯಾಗಲಿದ್ದಾರೆ ಎಂಬುದೂ ವಿಶೇಷ. ಈ ಸಮತೋಲಿತ ಸಚಿವಸಂಪುಟದಲ್ಲಿ ಕೆಲವೊಂದು ಅಸಮತೋಲನಗಳಿವೆ.  ಎಂದರೆ ಅತಿ ಹೆಚ್ಚಿನ ಸಂಖ್ಯೆಯ ಸಚಿವರ ಪ್ರಾತಿನಿಧ್ಯವನ್ನು ಉತ್ತರಪ್ರದೇಶ, ಬಿಹಾರ ಪಡೆದುಕೊಂಡಿವೆ. ಕೆಲವು ರಾಜ್ಯಗಳಿಗೆ ಪ್ರಾತಿನಿಧ್ಯ ದಕ್ಕಿಲ್ಲ. ದಕ್ಷಿಣದ ರಾಜ್ಯಗಳಿಗೂ ಈ ಸಂಪುಟದಲ್ಲಿ ಪ್ರಾತಿನಿಧ್ಯ ಕಡಿಮೆಯಾಗಿದೆ. 

ಹೆಚ್ಚಿನ ಸೀಟುಗಳನ್ನು ಗೆದ್ದಿಲ್ಲದಿರುವುದರಿಂದ ಇದು ಅನಿವಾರ್ಯವೇ.  ಹಾಗೆ ನೋಡಿದರೆ ದಕ್ಷಿಣದ ರಾಜ್ಯಗಳ ಪೈಕಿ  ಸಂಪುಟದಲ್ಲಿ ಕರ್ನಾಟಕಕ್ಕೆ ಮೂರು ಸ್ಥಾನಗಳು ಸಿಕ್ಕಿವೆ ಎಂಬುದೇ ಸಮಾಧಾನ.  ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ 50ನೇ ಪುಣ್ಯತಿಥಿ ದಿನದಂದು ಮೋದಿ ಅವರು ರಾಷ್ಟ್ರದ ನೂತನ ಪ್ರಧಾನಿಯಾಗಿ ಕಾರ್ಯಾರಂಭ ಮಾಡುತ್ತಿರು­ವುದು ಕಾಕತಾಳೀಯ. ಬದಲಾದ ಸಿದ್ಧಾಂತಗಳು ಹಾಗೂ ಬದಲಾದ ಆಡಳಿತ ಶೈಲಿಯಿಂದ ಹೊಸ ಭರವಸೆಗಳ ನಾಳೆಗಳಿಗಾಗಿ ಕಾತರಿಸುತ್ತಿರುವ ಜನರ ನಿರೀಕ್ಷೆಗಳನ್ನು ನಿಜ ಮಾಡುವ ಸವಾಲು ಈಗ ಸರ್ಕಾರದ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT