ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡುತ್ತ ಹಾಡುತ್ತ ಎಪ್ಪತ್ತು!

Last Updated 23 ಜುಲೈ 2016, 19:30 IST
ಅಕ್ಷರ ಗಾತ್ರ

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ ನಿರ್ದೇಶಕರಾಗಿ ಹಲವು ಮಹತ್ವದ ಯೋಜನೆಗಳಿಗೆ ಕಾರಣರಾದ ವೈ.ಕೆ. ಮುದ್ದುಕೃಷ್ಣ, ಸುಗಮ ಸಂಗೀತ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದವರು. ಇತ್ತೀಚೆಗಷ್ಟೇ ‘ಎಪ್ಪತ್ತರ ಸಂಭ್ರಮ’ ಆಚರಿಸಿಕೊಂಡಿರುವ ಅವರಿಗೆ ‘ನಾಡು–ಹಾಡು’ ಕುರಿತ ಮಾತು ಬಂತೆಂದರೆ ಇಪ್ಪತ್ತರ ಉತ್ಸಾಹ. ‘ಮುಕ್ತಛಂದ’ ಪುರವಣಿಗಾಗಿ ಮುದ್ದುಕೃಷ್ಣ ಅವರೊಂದಿಗೆ ಪ್ರವೀಣ ಕುಲಕರ್ಣಿ ಅವರು ಆಪ್ತ ಮಾತುಕತೆ ನಡೆಸಿದ್ದಾರೆ.

‘ಜವರಾಯ ಬಂದಾರೆ ಬರಿಗೈಲಿ ಬರಲಿಲ್ಲ...’ ಹಾಡು ಯಾವುದೇ ಹಿಮ್ಮೇಳದ ಹಂಗಿಲ್ಲದೆ ಅಲೆ–ಅಲೆಯಾಗಿ ತೇಲಿ ಬರುತ್ತಿತ್ತು. ಹೌದು, ತಲೆಗೆ ನವರತ್ನ ತೈಲ ಹಾಕಿಕೊಂಡಿದ್ದ ಯಡಕೆರೆ ಕೃಷ್ಣೇಗೌಡ (ವೈ.ಕೆ.) ಮುದ್ದುಕೃಷ್ಣ ಈ ಹಾಡನ್ನು ಗುನಗುನಿಸುತ್ತಾ ಮನೆ ಅಂಗಳದಲ್ಲಿ ವಿಹಾರ ನಡೆಸಿದ್ದರು.

ಆಲಾಪವನ್ನು ಅರ್ಧಕ್ಕೆ ನಿಲ್ಲಿಸಿ ಮುಂಜಾವಿನ ನೆಮ್ಮದಿಗೆ ಭಂಗ ತಂದ ಅತಿಥಿಗಳನ್ನು ಸ್ವಾಗತಿಸುತ್ತಾ, ‘ಇನ್ನೇನು ಸ್ನಾನ ಮುಗಿಸಿ ಬಂದು ಬಿಡುತ್ತೇನೆ’ ಎನ್ನುತ್ತಾ ಬಚ್ಚಲಿನತ್ತ ಓಡಿದರು.

ಸ್ನಾನ ಮುಗಿಸಿ, ತೋಳುಗಳ ಮೂಲಕ ಜುಬ್ಬಾ ಏರಿಸುತ್ತಾ ಬಂದಾಗ ಮುದ್ದುಕೃಷ್ಣ ಅದಾಗಲೇ ಮಲೆನಾಡಿನ ಜ್ಞಾಪಕ ಚಿತ್ರಶಾಲೆಯೊಳಗೆ ಜಾರಿ ಬಿದ್ದಿದ್ದರು. ‘ನೀವು ಏನೇ ಹೇಳಿ, ನಮ್ಮೂರಿನ ಒಲೆಯ ಮೇಲಿನ ಹಂಡೆಯಿಂದ ಕುದಿಯುತ್ತಿದ್ದ ನೀರನ್ನು ಮೊಗೆದುಕೊಂಡು ಮಾಡುತ್ತಿದ್ದ ಆ ಅಭ್ಯಂಜನದ ಸುಖವನ್ನು ಈ ಬಾತ್‌ರೂಮ್‌ನ ಗೀಸರ್‌ಗೆ ಕೊಡಲು ಸಾಧ್ಯವೇ ಇಲ್ಲ’ ಎಂದರು.

‘ಯಾವುದೋ ಹಾಡು ಹೇಳ್ತಿದ್ದಿರಲ್ಲ’ ಎಂದು ಪ್ರಶ್ನಿಸಿದಾಗ, ಬಾಲ್ಯದ ಕಥೆಯೊಂದನ್ನು ಹೆಕ್ಕಿ ತೆಗೆಯುವ ಮೂಲಕ ಎದುರಿಗೆ ಇದ್ದವರನ್ನೆಲ್ಲ ಧುತ್ತೆಂದು ಮಲೆಗಳ ನಾಡಿಗೆ ಕರೆದೊಯ್ದುಬಿಟ್ಟರು. ‘ನಮ್ಮೂರು ಗೊತ್ತೆ? ಸಕಲೇಶಪುರ ತಾಲ್ಲೂಕಿನ ಯಡಕೆರೆ.

ಸುತ್ತಲೂ ಮುಗಿಲೆತ್ತರಕ್ಕೆ ಬೆಳೆದು ನಿಂತ ಗಿರಿಶ್ರೇಣಿ. ಮೋಡಗಳ ಚೆಲ್ಲಾಟದಲ್ಲಿ ಸರಿಸುಮಾರು ಆರು ತಿಂಗಳು ಸೂರ್ಯನ ಮುಖದರ್ಶನವೇ ಇಲ್ಲದ ತಾಣ. ಸದಾ ಭೋರ್ಗರೆಯುವ ನದಿ–ತೊರೆಗಳು. ಸಾರಿಗೆ ಸಂಪರ್ಕದ ಸುಳಿವೇ ಇರಲಿಲ್ಲ. ಇಂತಹ ಕುಗ್ರಾಮವಾಗಿತ್ತು ನಮ್ಮೂರು’ ಎಂದು ಹೇಳಿದರು.

‘ಸಾರಿಗೆ ಸಾಧನಗಳು ಇಲ್ಲದಿದ್ದರೂ ಜಾನಪದ ಗಾರುಡಿಗ ಎಸ್‌.ಕೆ. ಕರೀಂಖಾನ್‌ ಅವರು ನದಿ–ತೊರೆಗಳನ್ನು ದಾಟಿಕೊಂಡು ನಮ್ಮೂರಿಗೆ ಬರುತ್ತಿದ್ದರು. ಕಲ್ಲಚ್ಚಿನಲ್ಲಿ ಮುದ್ರಿತವಾಗಿದ್ದ ಹಾಡಿನ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದರು. ಹಾಗೊಮ್ಮೆ ಬಂದಾಗ ನನ್ನನ್ನು ತೊಡೆಯ ಮೇಲೆ ಕೂರಿಸಿಕೊಂಡು ಹೇಳಿಸಿದ ಹಾಡು ‘ಜವರಾಯ ಬಂದಾರೆ..’ ಎಂದೆನ್ನುವಾಗ ಮುದ್ದುಕೃಷ್ಣ ಅವರ ಕಣ್ಣುಗಳು ಹೊಳೆಯುತ್ತಿದ್ದವು.

ಜಾನಪದ ಗಾರುಡಿಗನಿಂದ ಹಾಗೆ ಸಿಕ್ಕ ಸಂಗೀತ ದೀಕ್ಷೆ ನನ್ನನ್ನು ಇಲ್ಲಿಯವರೆಗೆ ಕೈಹಿಡಿದು ಮುನ್ನಡೆಸಿದೆ ಎಂದು ವಿನೀತರಾಗಿ ನೆನೆದರು. ‘ಹಾಗಾದರೆ ಬಾಲ್ಯದಲ್ಲೇ ಸಂಗೀತ ಶಿಕ್ಷಣ ಆರಂಭವಾಯಿತು ಎನ್ನಿ’ ಎಂದಾಗ ಜೋರಾಗಿ ನಕ್ಕುಬಿಟ್ಟರು. ‘ನಮ್ಮೂರು ಕುಗ್ರಾಮವಾಗಿತ್ತು ಎಂದು ಮೊದಲೇ ಹೇಳಿದೆನಲ್ಲ, ಅಲ್ಲೆಲ್ಲಿ ಸಂಗೀತದ ಶಿಕ್ಷಣ ಸ್ವಾಮಿ’ ಎಂದು ಮರುಪ್ರಶ್ನೆ ಹಾಕಿದರು.

‘ಬೇಸಿಗೆ ರಜೆಯ ಸಂದರ್ಭದಲ್ಲಿ ನಮ್ಮ ತಂದೆ ಘಟ್ಟದ ಕೆಳಗಿನ ಭಾಗವತರನ್ನು ಕರೆಸಿ ಯಕ್ಷಗಾನದ ಪ್ರಸಂಗಗಳನ್ನು ಆಡಿಸುತ್ತಿದ್ದರು. ಸ್ವತಃ ಪಾತ್ರವನ್ನೂ ಮಾಡುತ್ತಿದ್ದರು. ಹೀಗಾಗಿ ಯಕ್ಷಗಾನದ ಹಾಡುಗಳು ನಮಗೂ ಕಂಠಪಾಠ ಆಗಿದ್ದವು.

ಜಾತ್ರೆ ಸಂದರ್ಭದಲ್ಲಿ ರಾತ್ರಿ ಇಡೀ ನಡೆಯುತ್ತಿದ್ದ ನಾಟಕದ ತಾಲೀಮನ್ನು ನಾವು ಕದ್ದು ನೋಡುತ್ತಿದ್ದೆವು. ಹಾರ್ಮೋನಿಯಂ ಮಾಸ್ತರರು ರಾಗಬದ್ಧವಾಗಿ ಹಾಡುವಾಗ ಅವರೊಂದಿಗೆ ನಾವೂ ದನಿಗೂಡಿಸುತ್ತಿದ್ದೆವು. ಹಗಲು ದನ ಮೇಯಿಸಲು, ಕಟ್ಟಿಗೆ ಆಯಲು ಕಾಡಿನ ಕಡೆಗೆ ಹೋದಾಗ ನದಿ ದಡದ ಮೇಲೆ ಕುಳಿತು ಆ ಹಾಡುಗಳನ್ನು ಮತ್ತೆ ಹಾಡುತ್ತಿದ್ದೆವು’ ಎಂದು ವಿವರಿಸಿದರು.

ಸಹ್ಯಾದ್ರಿಯ ತಪ್ಪಲಲ್ಲಿ ದೂರ–ದೂರದ ಗುಡ್ಡಗಳಲ್ಲಿ ಇರುತ್ತಿದ್ದ ಗೋಪಾಲಕರ ದಂಡು ಪರಸ್ಪರ ಸಂಪರ್ಕದಲ್ಲಿ ಇರಲು ಜೋರಾಗಿ ಪದಗಳನ್ನು ಹಾಡುವುದು ರೂಢಿ. ಯಾವ ತಂಡ ಎಲ್ಲಿದೆ ಎಂಬುದನ್ನು ಗುರ್ತಿಸಲು ಇದೇ ದಾರಿ. ಊಟಕ್ಕೆ ಒಂದೆಡೆ ಸೇರಲು ಈ ಸಂಪರ್ಕ ನೆರವಿಗೆ ಬರುತ್ತಿತ್ತು. ನಿಶ್ಶಬ್ದವಾಗಿರುತ್ತಿದ್ದ ಮಲೆನಾಡಿನಲ್ಲಿ ಮೈಲುಗಟ್ಟಲೆ ದೂರದವರೆಗೆ ಕೇಳುವಂತೆ ಹಾಡುವ ಕಲೆ ಮುದ್ದುಕೃಷ್ಣ ಅವರಿಗೆ ಬಾಲ್ಯದಲ್ಲೇ ಸಿದ್ಧಿಸಿತ್ತು.

ಹಳ್ಳಿಗಳಲ್ಲಿ ಮೈದುಂಬಿದ್ದ ಜಾನಪದ ವಾತಾವರಣದ ಮೂಲಕ ಸಂಗೀತ ಪ್ರತಿಭೆಗಳು ಸಹಜವಾಗಿಯೇ ಅರಳುತ್ತಿದ್ದ ಕಾಲವದು. ಉತ್ತುವಾಗ, ಬಿತ್ತುವಾಗ, ನಾಟಿ ಮಾಡುವಾಗ, ಕಳೆ ಕೀಳುವಾಗ, ಬೆಳೆ ಒಕ್ಕಲಾಟ ಮಾಡುವಾಗ, ಹೇಮಾವತಿಯ ಈ ಕಣಿವೆ ಪ್ರದೇಶದಲ್ಲಿ ಸಂಗೀತದ ಗಂಧರ್ವ ಲೋಕವೇ ಸೃಷ್ಟಿಯಾಗುತ್ತಿತ್ತು. ಆ ಹಾಡುಗಳು ಮುದ್ದುಕೃಷ್ಣ ಅವರ ಮನದಂಗಳದಲ್ಲಿ ಅಚ್ಚಳಿಯದೇ ಉಳಿದವು.

ಮನೆಯಿಂದ ಆರು ಕಿಲೋಮೀಟರ್‌ ದೂರದಲ್ಲಿದ್ದ ಶಾಲೆಗೆ ಯಡಕೆರೆ ಮಕ್ಕಳು ನಡೆದುಕೊಂಡೇ ಹೋಗಬೇಕಿತ್ತು. ಮಳೆಗಾಲದಲ್ಲಿ ಕಂಬಳಿಕೊಪ್ಪೆ ಹೊದ್ದುಕೊಂಡು, ದೋಣಿಗಳಲ್ಲಿ ನದಿ ದಾಟಬೇಕಿತ್ತು. ಹಾದಿಯುದ್ದಕ್ಕೂ ಜಾನಪದ ಗೀತೆಗಳ ಸಾಥ್‌! ಪ್ರೌಢಶಾಲೆ ಸೇರುವ ವೇಳೆಗೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವ ಹುಮ್ಮಸ್ಸು ಮುದ್ದುಕೃಷ್ಣ ಅವರಲ್ಲಿತ್ತು.

‘ಪೋಲಿ ಬಿದ್ದು ಹೋಗುತ್ತಾನೇನೊ’ ಎಂಬ ಭೀತಿಯನ್ನು ಕುಟುಂಬದ ಸದಸ್ಯರಲ್ಲಿ ಅವರು ಉಂಟು ಮಾಡಿದ್ದರು. ‘ಆ ದಿನಗಳಿಂದಲೂ ಹಾಡಿನ ಹವ್ಯಾಸ ನನ್ನ ಬದುಕಿನ ಅವಿಭಾಜ್ಯ ಅಂಗವಾಗಿ ಪ್ರಯಾಣ ಮಾಡುತ್ತಾ ಬಂತು’ ಎಂದು ಹೇಳಿದರು.

ಕೋಲಾರದಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದ ಸಂದರ್ಭ. ಕಾಲೇಜಿನ ಸಾಂಸ್ಕೃತಿಕ ಉತ್ಸವಕ್ಕೆ ಆಗ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ. ದೇ. ಜವರೇಗೌಡ, ಗಾಯಕ ಪಾಂಡೇಶ್ವರ ಕಾಳಿಂಗರಾವ್‌ ಹಾಗೂ ಕವಿ ಜಿ.ಪಿ. ರಾಜರತ್ನಂ ಅತಿಥಿಗಳು.

ರಾಜರತ್ನಂ ಅವರ ‘ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ್ ಕೈನ’ ಹಾಡನ್ನು ಮಜ್ಜಿಗೆ ಬಾಟಲಿ ಹಿಡಿದು ಕುಡಿಯುವವನಂತೆ ನಟಿಸುತ್ತಾ ಹಾಡಿದ್ದರು ಮುದ್ದುಕೃಷ್ಣ. ತಾವೇ ಹಾಡಿ ಜನಪ್ರಿಯಗೊಳಿಸಿದ್ದ ಗೀತೆಯನ್ನು ಅಷ್ಟೇ ಸೊಗಸಾಗಿ ಪ್ರಸ್ತುತಪಡಿಸಿದ ಹುಡುಗನ ಮೇಲೆ ಪ್ರೀತಿಯ ಸೋನೆ ಸುರಿಸಿದರು ಕಾಳಿಂಗರಾವ್‌.

‘ಕರ್ನಾಟಕ ಲೋಕಸೇವಾ ಆಯೋಗ’ದಿಂದ ರಾಜ್ಯದ ನಾಗರಿಕ ಸೇವೆಗೆ (ಕೆಎಎಸ್‌) ಆಯ್ಕೆಯಾದ ಮೇಲೂ ಮುದ್ದುಕೃಷ್ಣ ಅವರು ಹಾಡಿನ ಸಂಗ ಬಿಡಲಿಲ್ಲ. ಕಚೇರಿ ಅವಧಿ ಮುಗಿದ ಮೇಲೆ ಸಂಗೀತ ಕಛೇರಿ! ಅವರಿಗೆ ಮೊದಲ ಪೋಸ್ಟಿಂಗ್‌ ಹೊನ್ನಾಳಿಯಲ್ಲಿ ಸಿಕ್ಕಿತ್ತು. ಮುದ್ದುಕೃಷ್ಣ ಅವರ ಪ್ರತಿಭೆ ಕುರಿತು ತಿಳಿದಿದ್ದ ಪಕ್ಕದ ಚನ್ನಗಿರಿ ಕ್ಷೇತ್ರದ ಆಗಿನ ಶಾಸಕ ಜೆ.ಎಚ್‌. ಪಟೇಲ್‌ ಅವರು, ಒಮ್ಮೆ ರಾತ್ರಿ ಇಡೀ ಅವರಿಂದ ಹಾಡು ಹೇಳಿಸಿದ್ದರಂತೆ.

ಮಾತು ಸುಗಮ ಸಂಗೀತ ಕ್ಷೇತ್ರದ ಕಡೆ ಹೊರಳಿತು. ‘ಕಾಳಿಂಗರಾವ್‌ ಅವರೇ ಕನ್ನಡದ ಭಾವಗೀತೆಗಳಿಗೆ ರಾಗ ಸಂಯೋಜಿಸಿ ಹಾಡಿದ ಮೊದಲಿಗರು. ನಂತರದ ದಿನಗಳಲ್ಲಿ ಎಚ್‌.ಆರ್‌. ಲೀಲಾವತಿ, ಪದ್ಮಚರಣ್‌, ಎಚ್‌.ಕೆ. ನಾರಾಯಣ, ಬಾಳಪ್ಪ ಹುಕ್ಕೇರಿ, ಜೋಳದರಾಶಿ ದೊಡ್ಡನಗೌಡ ಮೊದಲಾದವರು ಜಾನಪದ ಹಾಗೂ ಭಾವಗೀತೆಗಳಿಗೆ ಜೀವ ತುಂಬಿದರು. ಕಾಳಿಂಗರಾವ್‌ ಅವರ ಕಂಠಸಿರಿ ಹೊತ್ತು ತರುತ್ತಿದ್ದ ‘ಎಚ್‌ಎಂವಿ’ ಸಂಸ್ಥೆಯ ಗ್ರಾಮೋಫೋನ್‌ ಧ್ವನಿಮುದ್ರಿಕೆಗಳಿಗೆ ಭಾರಿ ಬೇಡಿಕೆ ಇತ್ತು.

ವಾದ್ಯಗಳ ಬಳಕೆಯಲ್ಲಿ ಹೊಸತನ ತೋರಿದ ಮೈಸೂರು ಅನಂತಸ್ವಾಮಿ ಅವರು ‘ನಿತ್ಯೋತ್ಸವ’ ಹೆಸರಿನ ಕ್ಯಾಸೆಟ್‌ ತಂದರು. ಅದೇ ಕಾಲಘಟ್ಟದಲ್ಲಿ ಪ್ರವರ್ಧಮಾನಕ್ಕೆ ಬಂದವರು ಸಿ. ಅಶ್ವತ್ಥ. ಈ ಗಾಯಕರ ನೇತೃತ್ವದಲ್ಲೇ ಧ್ವನಿಸುರುಳಿ ಚಳವಳಿ ದೊಡ್ಡದಾಗಿ ರೂಪುಗೊಂಡಿತು’ ಎಂದು ಮುದ್ದುಕೃಷ್ಣ ಚರಿತ್ರೆಯನ್ನು ಕಟ್ಟಿಕೊಟ್ಟರು.

‘ಭಾವಗೀತೆಗಳ ಧ್ವನಿಸುರುಳಿಗಳೇನೋ ಒಂದರ ಬೆನ್ನಹಿಂದೆ ಮತ್ತೊಂದರಂತೆ ಬಂದವು. ಆದರೆ, ರಾಜ್ಯದಲ್ಲಿ ಎಲ್ಲೂ ಸುಗಮ ಸಂಗೀತಕ್ಕೆ ಸಂಬಂಧಿಸಿದ ವೇದಿಕೆ ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ. ವಾದ್ಯಗೋಷ್ಠಿ ತಂಡಗಳು ಆಗ ಸಿನಿಮಾ ಹಾಡುಗಳನ್ನು ಮಾತ್ರ ಪ್ರಸ್ತುತಪಡಿಸುತ್ತಿದ್ದವು.

ಈ ಸವಾಲನ್ನು ಮೆಟ್ಟಿನಿಲ್ಲಲು ಭಾವಗೀತೆ ಯಾನ ಆರಂಭಿಸುವ ಉಮೇದಿ ಹೆಚ್ಚಾಯಿತು. ಬಿಡಿಬಿಡಿಯಾಗಿ ಹರಿಯುತ್ತಿದ್ದ ಸುಗಮ ಸಂಗೀತದ ತೊರೆಗಳನ್ನು ಒಂದುಗೂಡಿಸುವ ಉದ್ದೇಶದಿಂದ ಬೆಂಗಳೂರಿನ ‘ಎಡಿಎ ರಂಗಮಂದಿರ’ದಲ್ಲಿ ‘ಜಾನಪದ ಹಾಗೂ ಸುಗಮ ಸಂಗೀತ ಸೌರಭ’ ಏರ್ಪಡಿಸಿ (1987) ಎಲ್ಲ ಗಾಯಕರನ್ನೂ ಒಗ್ಗೂಡಿಸಿದೆವು’ ಎಂದು ಅವರು ವಿವರಿಸಿದರು.

ಸರ್ಕಾರಿ ಸೇವೆಯ ನಡುವೆಯೇ ಬಿಡುವು ಮಾಡಿಕೊಂಡು ಸುಗಮ ಸಂಗೀತದ ಕಲಾವಿದರ ತಂಡ ಕಟ್ಟಿಕೊಂಡು ಅಮೆರಿಕದ 18 ನಗರಗಳಲ್ಲಿ ಕಾರ್ಯಕ್ರಮ ನೀಡಿಬಂದಿದ್ದು ಮುದ್ದುಕೃಷ್ಣ ಅವರ ಹೆಗ್ಗಳಿಕೆ. ಆ ಮೂಲಕ ಸುಗಮ ಸಂಗೀತದ ಸೀಮೋಲ್ಲಂಘನಕ್ಕೆ ಅವರು ಕಾರಣರಾದರು.

‘ನಾವು 1985ರಲ್ಲಿ ಅಮೆರಿಕ ಯಾತ್ರೆ ಕೈಗೊಂಡು ಬಂದಮೇಲೆ ಸಾವಿರಾರು ಕಲಾವಿದರು ಸುಗಮ ಸಂಗೀತದ ಕಂಪನ್ನು ವಿದೇಶಿ ನೆಲದಲ್ಲಿ ಪಸರಿಸಿದರು. ‘ಅಕ್ಕ’ ಹಾಗೂ ‘ನಾವಿಕ’ ಸಮ್ಮೇಳನಗಳಲ್ಲೂ ಭಾವಗೀತೆಗಳ ಗೋಷ್ಠಿ ಅವಿಭಾಜ್ಯ ಅಂಗವಾಯಿತು’ ಎಂದು ಸ್ಮರಿಸಿದರು.

ಸುಗಮ ಸಂಗೀತದ ಗಾಯಕರಿಗೆ ಒಂದು ವ್ಯವಸ್ಥಿತವಾದ ವೇದಿಕೆ ಒದಗಿಸಲು ಅಶ್ವತ್ಥ ಅವರ ಜತೆಯಲ್ಲಿ ಮುದ್ದುಕೃಷ್ಣ ಅವರು ಹುಟ್ಟುಹಾಕಿದ ಸಂಸ್ಥೆ ‘ಧ್ವನಿ’. ಈ ಸಂಸ್ಥೆಯ ನೆರಳಿನಲ್ಲಿ ಒಂದಾದ ಗಾಯಕರು ರಾಜ್ಯದ ತುಂಬಾ ಗಾನಯಾತ್ರೆ ನಡೆಸಿದರು.

ಎರಡು ವ್ಯಾನ್‌ಗಳಲ್ಲಿ ಹೊರಟ ಈ ಯಾತ್ರೆಯಲ್ಲಿ ಗಾಯಕರ ಜತೆ ಕವಿಗಳು ಸೇರಿದ್ದರು. ಪಕ್ಕವಾದ್ಯಗಳ ಕಲಾವಿದರು ಇದ್ದರು. ಧ್ವನಿವರ್ಧಕ ವ್ಯವಸ್ಥೆ ಇತ್ತು. ಬಿಎಂಶ್ರೀ, ಕುವೆಂಪು, ದ.ರಾ. ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಜಿ.ಎಸ್‌. ಶಿವರುದ್ರಪ್ಪ ಅವರಂತಹ ಕವಿಗಳ ಸಾಹಿತ್ಯಸಿರಿ ಕನ್ನಡದ ಶ್ರೋತೃಗಳ ಎದೆ ತುಂಬಿತು. ‘ಮೈಸೂರ ಮಲ್ಲಿಗೆ’ಯ ಪರಿಮಳವೂ ನಾಡಿನಾದ್ಯಂತ ಪಸರಿಸಿತು.

ಲಾರಿಯೊಂದನ್ನು ರಥವಾಗಿಸಿ ಕಾಸರಗೋಡು ಜಿಲ್ಲೆಯ 18 ಕೇಂದ್ರಗಳಲ್ಲಿ ಸುಗಮ ಸಂಗೀತದ ರಸದೌತಣ ಉಣಬಡಿಸಿದ ಸಂಗೀತರಥವನ್ನು ಮುಂದೆ ನಿಂತು ಎಳೆದವರೂ ಮುದ್ದುಕೃಷ್ಣ. ದೊಡ್ಡ ದೊಡ್ಡ ಗಾಯಕರ ದಂಡೇ ಈ ರಥಯಾತ್ರೆಯಲ್ಲಿ ಒಂದಾಗಿತ್ತು.

‘ನಾಡಿನ ಪ್ರಸಿದ್ಧ ಕಲಾವಿದರೆಲ್ಲ ಯಾವುದೋ ಮನೆಗಳಲ್ಲಿ ಉಂಡು, ಸಿಕ್ಕ ಜಾಗದಲ್ಲಿ ಮಲಗಿ ನಡೆಸಿದ ಸಂಗೀತ ಉತ್ಸವ ಕನ್ನಡದ ಸಂದರ್ಭದಲ್ಲಿ ಬಲು ವಿಶಿಷ್ಟವಾದುದು. ಅದೊಂದು ಮರೆಯಲಾರದ ಅನುಭವ’ ಎಂದು ಸ್ಮರಿಸಿದರು.

ಮುದ್ದುಕೃಷ್ಣ ಅವರ ಅಟ್ಟದ ಮನೆಯಲ್ಲಿ ಒಂದು ಪುಟ್ಟ ಗ್ರಂಥಾಲಯ ಇದೆ. ಅದರ ಪಕ್ಕವೇ ಸಂಗೀತದ ಅಭ್ಯಾಸಕ್ಕಾಗಿ ಪಡಸಾಲೆ ಇದೆ. ತಂಬೂರಿ, ಹಾರ್ಮೋನಿಯಂ ಮೊದಲಾದ ಪಕ್ಕವಾದ್ಯಗಳು ಆ ಕೋಣೆಗೆ ಕಳೆ ತುಂಬಿವೆ. ಜಿ.ಎಸ್‌. ಶಿವರುದ್ರಪ್ಪ, ಎಚ್‌.ಎಸ್‌. ವೆಂಕಟೇಶಮೂರ್ತಿ, ಬಿ.ಆರ್‌. ಲಕ್ಷ್ಮಣರಾವ್‌ ಅವರಂತಹ ಕವಿಗಳು ಆ ಪಡಸಾಲೆಯಲ್ಲಿ ಕುಳಿತು ಹರಟಿದ ಕ್ಷಣಗಳಿಗೆ ಲೆಕ್ಕವೇ ಇಲ್ಲ.

ಕುವೆಂಪು ಅವರ ಹಸ್ತಪ್ರತಿಯನ್ನೇ ಪಡಿಯಚ್ಚು ಹಾಕಿದ ‘ಶ್ರೀರಾಮಾಯಣ ದರ್ಶನಂ’ ಕೃತಿ ಆ ಗ್ರಂಥಾಲಯದಲ್ಲಿ ಶಿಖರಸದೃಶವಾಗಿ ಕುಳಿತಿದೆ. ಮುದ್ದುಕೃಷ್ಣ ಅವರು ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ಯ ನಿರ್ದೇಶಕರಾಗಿದ್ದಾಗ ಕುವೆಂಪು ಅವರ ಹಸ್ತಪ್ರತಿಯನ್ನು ಯಥಾವತ್ತಾಗಿ ಪುಸ್ತಕ ರೂಪದಲ್ಲಿ ತರಲು ಕಾರಣರಾಗಿದ್ದರು.

‘ಬೆರಳ್‌ಗೆ ಕೊರಳ್‌’ ಸಿನಿಮಾಕ್ಕೆ ಹಿನ್ನೆಲೆ ಗಾಯಕರಾಗಿದ್ದ ಮುದ್ದುಕೃಷ್ಣ, ರೆಕಾರ್ಡಿಂಗ್‌ಗೆ ಹೋಗುವ ಮುನ್ನ ಕುವೆಂಪು ಅವರ ಮುಂದೆ ಹಾಡಿ ತೋರಿಸಿದ್ದರು. ಸಿನಿಮಾ ಬಿಡುಗಡೆಯಾದಾಗ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಮೊದಲ ಪ್ರದರ್ಶನವನ್ನು ಎಲ್ಲ ಕಲಾವಿದರೊಟ್ಟಿಗೆ ಕುವೆಂಪು ಸಹ ವೀಕ್ಷಿಸಿದ್ದರು.

‘ಓಕುಳಿ’ ಧ್ವನಿಸುರುಳಿಗೆ ತಮ್ಮ ಕವಿತೆಗಳನ್ನು ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದ ಕುವೆಂಪು ಅವರ ಪತ್ರವನ್ನು ಮುದ್ದುಕೃಷ್ಣ ಫ್ರೇಮ್‌ ಹಾಕಿಸಿಟ್ಟಿದ್ದಾರೆ. ಈ ಪ್ರೀತಿಯ ಕವಿಯ ಜತೆಗೆ ರಾಜರತ್ನಂ ಹಾಗೂ ನರಸಿಂಹಸ್ವಾಮಿ ಅವರ ಗೀತೆಗಳು ಅವರಿಗೆ ತುಂಬಾ ಅಚ್ಚುಮೆಚ್ಚಂತೆ.

ಸಾಹಿತ್ಯ ಸಮ್ಮೇಳನದಲ್ಲೂ ಸುಗಮ ಸಂಗೀತಕ್ಕೆ ನೆಲೆ ಒದಗಿಸಿಕೊಟ್ಟ ಹೆಮ್ಮೆ ಮುದ್ದುಕೃಷ್ಣ ಅವರದು. ಕವಿಗಳಿಂದ ಕಾವ್ಯವಾಚನದ ಜತೆ–ಜತೆಯಲ್ಲಿ ಆ ಕಾವ್ಯಗಳಿಗೆ ಸ್ಥಳದಲ್ಲೇ ರಾಗ ಸಂಯೋಜನೆ ಮಾಡಿ, ಗಾಯಕ–ಗಾಯಕಿಯರು ಹಾಡುವ ವಿಶಿಷ್ಟ ಪ್ರಯೋಗವನ್ನು ಮುದ್ದುಕೃಷ್ಣ ಹಾಗೂ ಅಶ್ವತ್ಥ ಅವರ ಜೋಡಿ ಕೊಪ್ಪಳ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿ ತೋರಿಸಿತು.

ಮೈಸೂರಿನ ದಸರಾ ದರ್ಬಾರ್‌ನಲ್ಲೂ ಈ ಜೋಡಿಯಿಂದ ಸುಗಮ ಸಂಗೀತಕ್ಕೆ ವೇದಿಕೆ ಸಿಕ್ಕಿತು. ಅಲ್ಲಿಂದ ನಂತರ ಭಾವಗೀತೆಗಳ ಗಾಯನ ಈ ಎರಡೂ ಉತ್ಸವಗಳ ಅವಿಭಾಜ್ಯ ಅಂಗವಾಗಿ ಬೆಳೆದುಬಿಟ್ಟಿದೆ.

‘ಸುಗಮ ಸಂಗೀತ ಕ್ಷೇತ್ರದಲ್ಲಿ ಹೊಸ ಪೀಳಿಗೆಯನ್ನು ಹುಟ್ಟುಹಾಕಲು ಸಮಾನಮನಸ್ಕರು ಸೇರಿ 2003ರಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್‌ ಆರಂಭಿಸಿದೆವು. ಜಿಎಸ್‌ಎಸ್‌, ಎಂ.ಎನ್‌. ವ್ಯಾಸರಾವ್‌, ಲಕ್ಷ್ಮಣರಾವ್‌, ವೆಂಕಟೇಶಮೂರ್ತಿ ಮೊದಲಾದವರ ದೊಡ್ಡ ಬೆಂಬಲ ನಮಗಿತ್ತು.

ಪ್ರತಿವರ್ಷವೂ ತಪ್ಪದೆ ಸುಗಮ ಸಂಗೀತ ಸಮ್ಮೇಳನವನ್ನು  ನಡೆಸಿಕೊಂಡು ಬಂದೆವು. ಅದರೊಟ್ಟಿಗೆ ಯುವ ಪೀಳಿಗೆಗೆ ತರಬೇತಿಯನ್ನೂ ಕೊಟ್ಟೆವು. ನಾವು ನಡೆಸಿದ ಶಿಬಿರಗಳಲ್ಲಿ ಇದುವರೆಗೆ 35 ಸಾವಿರಕ್ಕೂ ಅಧಿಕ ಜನ ತರಬೇತಿ ಪಡೆದಿದ್ದಾರೆ. ಅದರಲ್ಲಿ ಮೂರುಸಾವಿರ ಜನ ಪ್ರಬುದ್ಧ ಕಲಾವಿದರಾಗಿ ಹೊರಹೊಮ್ಮಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿದರು ಮುದ್ದುಕೃಷ್ಣ.

ಏಳು ವರ್ಷ ಕಾಲ ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ಯ ನಿರ್ದೇಶಕರಾಗಿದ್ದ ಅವರು, ‘ಕನ್ನಡ ಭವನ’ದ ನಿರ್ಮಾಣದಲ್ಲೂ ಮುಖ್ಯಪಾತ್ರ ವಹಿಸಿದರು. ಹಂಪಿ, ಕಿತ್ತೂರು, ಕರಾವಳಿ, ನವರಸಪುರ, ಹೊಯ್ಸಳ, ಕದಂಬ ಹಾಗೂ ಜಿಲ್ಲಾ ಉತ್ಸವಗಳನ್ನು ಆರಂಭಿಸಿದರು. ‘ತುಂಬಾ ವೇಗದಿಂದ ಕೆಲಸ ಮಾಡಬೇಕು ಎನ್ನುವ ಉತ್ಸಾಹದಲ್ಲಿದ್ದ ನನಗೆ ಟೀಕೆ–ಟಿಪ್ಪಣಿಗಳು, ಅಡ್ಡಿ–ಆತಂಕಗಳು ಹೆಚ್ಚಾಗಿದ್ದವು.

ಕೆಲವು ಪತ್ರಿಕೆಗಳು ಅನಗತ್ಯವಾಗಿ ವಿವಾದ ಎಬ್ಬಿಸಿದವು. ಉನ್ನತ ಅಧಿಕಾರಿಗಳು ಸಹಕಾರ ನೀಡಲಿಲ್ಲ. ಆದರೆ, ಅದ್ಯಾವುದನ್ನೂ ನಾನು ಗಣನೆಗೆ ತೆಗೆದುಕೊಳ್ಳಲಿಲ್ಲ. ಜೆ.ಎಚ್‌. ಪಟೇಲ್‌, ಎಂ.ಪಿ. ಪ್ರಕಾಶ್‌, ರಾಣಿ ಸತೀಶ್‌ ಹಾಗೂ ಲೀಲಾದೇವಿ ಪ್ರಸಾದ್‌ ಅವರಿಂದ ನನಗೆ ಬೆಂಬಲವಿತ್ತು’ ಎಂದು ನೆನಪಿಸಿಕೊಂಡರು.

‘ಬಾಳಿನ ಉದ್ದಕ್ಕೂ ಜತೆಯಾಗಿ ಹೆಜ್ಜೆಹಾಕಿದ ಪತ್ನಿ ನಂದಿನಿ ಈಗಿಲ್ಲ. ಆದರೆ, ಪುತ್ರಿಯರಾದ ವರ್ಷ, ಗ್ರೀಷ್ಮ ನನ್ನ ಎಲ್ಲ ಬೇಕು–ಬೇಡಗಳನ್ನು ನೋಡಿಕೊಳ್ಳುತ್ತಾರೆ’ ಎಂದು ಭಾವುಕರಾದರು ಮುದ್ದುಕೃಷ್ಣ. ಅವರ ಚಿಕ್ಕಮಗಳ ಪತಿ ರಿಕ್ಕಿ ಕೇಜ್‌ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತರು. ಜಗತ್ತಿನ ಹಲವು ದೇಶಗಳಲ್ಲಿ ಬಲು ಬೇಡಿಕೆ ಗಿಟ್ಟಿಸಿರುವ ಕಲಾವಿದ ಅವರು.

ನಿವೃತ್ತಿಯ ನಂತರ ಮುದ್ದುಕೃಷ್ಣ ಅವರ ಚಟುವಟಿಕೆ ಹೆಚ್ಚಿದೆ. ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿಗೆ ‘ಸಮನ್ವಯ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ‘ಸದಾ ಸಂಗೀತ, ಸಮಾಜ ಅಂತ ಓಡಾಡ್ತಾರೆ’ ಎಂದು ಅವರ ಪುತ್ರಿಯರು ತಂದೆಯ ವಿರುದ್ಧ ದೂರುಕೊಟ್ಟರು!

‘ತಿಟ್ಟತ್ತಿ ಈಗ ತಿರುಗಿ ನೋಡಿದಾಗ ನನ್ನೊಳಗಿನ ಕಲಾವಿದನೇ ಅಧಿಕಾರಿಯಾಗಿ ಎಲ್ಲ ಕೆಲಸ ಮಾಡಿಸಿದ ಅನಿಸುತ್ತದೆ’ ಎಂದು ಸ್ವಯಂ ವಿಶ್ಲೇಷಣೆಗೆ ಒಳಪಡಿಸಿಕೊಂಡರು. ‘ಹೋಗಲಿ ಈಗ ನಿಮ್ಮ ಹಳ್ಳಿ ಹೇಗಿದೆ’ ಎಂದು ಕೇಳಿದರೆ, ‘ನಮ್ಮೂರಿಗೆ ರಸ್ತೆ ಬಂದಿದೆ, ಬಸ್‌ಗಳೂ ಬರುತ್ತಿವೆ. ಆದರೆ, ನಮ್ಮೂರಿನಂತಹ ಹಳ್ಳಿಗಳ ಕಲೆ–ಸಂಸ್ಕೃತಿ ಅದೇ ರಸ್ತೆ–ವಾಹನಗಳ ಪರಿಣಾಮವಾಗಿ ನಗರಕ್ಕೆ ವಲಸೆ ಹೋಗಿದೆ.

ನಗರಕ್ಕೆ ವಲಸೆ ಬಂದ ಕಲೆಗಳು ರೂಪಾಂತರ ಹೊಂದಿ, ವಾಣಿಜ್ಯದ ಸ್ವರೂಪ ಪಡೆದುಕೊಂಡಿವೆ. ಮೂಲ ಸೊಗಡು ಉಳಿದಿಲ್ಲ. ಮೊದಲಿನ ಪಾವಿತ್ರ್ಯ ಸಹ ಹೊರಟುಹೋಗಿದೆ ಎಂದು ನಿಡುಸುಯ್ದರು ಮುದ್ದುಕೃಷ್ಣ.

*
‘‘ನಮ್ಮೂರಿಗೆ ರಸ್ತೆ, ಬಸ್‌ಗಳೆಲ್ಲ ಬರುತ್ತಿವೆ. ಆದರೆ, ನಮ್ಮೂರಿನಂತಹ ಹಳ್ಳಿಗಳ ಕಲೆ–ಸಂಸ್ಕೃತಿ ಅದೇ ರಸ್ತೆ–ವಾಹನಗಳ ಪರಿಣಾಮವಾಗಿ ನಗರಕ್ಕೆ ವಲಸೆ ಹೋಗಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT