ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕಗಳ ನೆರಳಲ್ಲಿ ಅಂಟಾರ್ಕ್ಟಿಕಾ

ವಿಜ್ಞಾನ ವಿಶೇಷ
Last Updated 16 ಜುಲೈ 2016, 19:30 IST
ಅಕ್ಷರ ಗಾತ್ರ

‘ಅಂಟಾರ್ಕ್ಟಿಕಾ’– ಅದು ಧರೆಯ ಅತ್ಯಂತ ವಿಚಿತ್ರ, ಅತ್ಯಂತ ವಿಭಿನ್ನ, ಅತ್ಯಂತ ವಿಶಿಷ್ಟ ಭೂಖಂಡ. ಧರೆಯ ತಳದಲ್ಲಿ ಉಳಿದೆಲ್ಲ ಭೂಖಂಡಗಳಿಂದ ಪ್ರತ್ಯೇಕವಾಗಿ ಏಕಾಂಗಿಯಾಗಿರುವ ಈ ಖಂಡ (ಚಿತ್ರ–1) ಸಂಪೂರ್ಣ ಸದಾ ಶಾಶ್ವತ ಹಿಮಾವೃತ ಚಿತ್ರ–2. ಕಳೆದ ‘ಹಿಮಯುಗ’ದ ಹಿಮರಾಶಿಯನ್ನೇ ಹೊದ್ದು (ಚಿತ್ರ–3) ಧರೆಯ ‘ದಕ್ಷಿಣ ಧ್ರುವ’ವನ್ನು ಧರಿಸಿರುವ ಅಂಟಾರ್ಕ್ಟಿಕಾ ಯಾವ ರಾಷ್ಟ್ರಕ್ಕೂ ಸೇರದೆ ಇಡೀ ಪೃಥ್ವಿಯ ಏಕೈಕ ‘ಸಾರ್ವಜನಿಕ ಆಸ್ತಿ’ಯಾಗಿ ಉಳಿದಿದೆ. ಯಾರಿಗೂ ಸೇರಿಲ್ಲದೆ ‘ಧರೆಯ ಹಿತ್ತಿಲು’ ಎಂಬ ಅಭಿಧಾನವನ್ನೂ ಪಡೆದಿದೆ.

ಹಾಗೆಂದು ಅಂಟಾರ್ಕ್ಟಿಕಾ ಅಂಗೈ ಅಗಲದ ಭೂಖಂಡವೇನಲ್ಲ. ಅದರ ವಿಸ್ತಾರ ಹದಿನಾಲ್ಕು ದಶಲಕ್ಷ ಚದರ ಕಿಲೋಮೀಟರ್‌ (ಇದು ಸುಮಾರು ನಮ್ಮ ದೇಶದ ಮೂರುವರೆ ಪಟ್ಟು ವಿಸ್ತೀರ್ಣ). ಇಪ್ಪತ್ತು ದಶಲಕ್ಷ ಚದರ ಕಿ.ಮೀ. ವಿಸ್ತಾರದ ಒಂದು ಮಹಾಸಾಗರದಿಂದ– ಅದೇ ‘ದಕ್ಷಿಣ ಸಾಗರ’– ಪರಿವರಿಸಲ್ಪಟ್ಟಿದೆ. ಬೆಟ್ಟ ಗುಡ್ಡ ಬಯಲು ಕಣಿವೆ ಹಿಮನದಿ, ಅಗ್ನಿಪರ್ವತ ಚಿತ್ರ–5... ಹಾಗೆಲ್ಲ ವೈವಿಧ್ಯಮಯ ಲಕ್ಷಣಗಳ ನೆಲಾವಾರದ ಅಂಟಾರ್ಕ್ಟಿಕಾದಲ್ಲಿ ಹಿಮ ಹಾಸುನದೇ ಸರ್ವ ಸಾಮ್ರಾಜ್ಯ. ಸರಾಸರಿ ಎರಡು ಕಿ.ಮೀ., ಮತ್ತು ಗರಿಷ್ಠ ನಾಲ್ಕೂವರೆ ಕಿ.ಮೀ. ದಪ್ಪದ ಗಟ್ಟಿ ಹಿಮಹಾಸಿನಿಂದ ಮುಚ್ಚಿಹೋಗಿರುವ ಅಂಟಾರ್ಕ್ಟಿಕಾದಲ್ಲಿ ಜಗತ್ತಿನ ಶೇಕಡ ಎಪ್ಪತ್ತುರಷ್ಟು ಶುದ್ಧ ನೀರು ಹಿಮರೂಪದಲ್ಲಿ ಸಂಗ್ರಹಗೊಂಡಿದೆ. ಭೂ ತಳದ ನೆಲೆ ಮತ್ತು ಭೂ ಅಕ್ಷದ ವಾಲುವಿಕೆ– ಈ ಎರಡೂ ಕಾರಣಗಳಿಂದ ಈ ಭೂಖಂಡದಲ್ಲಿ ಆರು ತಿಂಗಳು ನಿರಂತರ ಹಗಲು, ಇನ್ನು ಆರು ತಿಂಗಳು ಶಾಶ್ವತ ಇರುಳು.

ಅಂಟಾರ್ಕ್ಟಿಕಾದ ವಿಶ್ವ ದಾಖಲೆಗಳೂ ಹಲವಾರು: ಸಾಗರ ಮಟ್ಟದಿಂದ ಅತ್ಯಧಿಕ ಎತ್ತರದ ನೆಲ (ಸರಾಸರಿ 6560 ಅಡಿ ಉನ್ನತಿ), ಅತ್ಯಂತ ವೇಗದ ಬೀಸುಗಾಳಿ (ತಾಸಿಗೆ 250 ಕಿ.ಮೀ. ವೇಗ), ಅತ್ಯಂತ ಶೀತಲ ತಾಪಮಾನ (ಶೂನ್ಯಕ್ಕಿಂತ 89 ಡಿಗ್ರಿ ಸೆಲ್ಷಿಯಸ್‌ ಕಡಿಮೆ)... ಇವು ಕೆಲ ಉದಾಹರಣೆಗಳು.

ಅಂಟಾರ್ಕ್ಟಿಕಾ ಸುತ್ತಲಿನ ಕಡಲಿನಾವಾರದಲ್ಲಿ ಸದಾ ತೇಲುತ್ತಿರುವ ಚಿಕ್ಕ, ದೊಡ್ಡ, ಬೆಟ್ಟ ಗಾತ್ರದ, ಚಿತ್ರ–ವಿಚಿತ್ರ ಆಕಾರಗಳ ‘ಐಸ್‌ ಬರ್ಗ್‌’ಗಳು ಅಸಂಖ್ಯ (ಚಿತ್ರ–9,10,12). ಉಳಿದೆಲ್ಲ ಪ್ರದೇಶ ಹಿಮ ಹಾಳೆಗಳಿಂದ ಆವೃತ (ಚಿತ್ರ–8, 14). ಇನ್ನೂ ಒಂದು ವಿಸ್ಮಯ ಏನೆಂದರೆ, ಅಂಟಾರ್ಕ್ಟಿಕಾದಲ್ಲಿ ವರ್ಷಕ್ಕೆ ಒಂದು ಸೆ.ಮೀ. ನಷ್ಟೂ ಮಳೆ ಬೀಳುವುದಿಲ್ಲ (ಅಲ್ಲಿನ ಕೆಲ ಕಣಿವೆ ಪ್ರದೇಶಗಳಲ್ಲಿ ಎರಡು ದಶಲಕ್ಷ ವರ್ಷಗಳಿಂದ ಒಮ್ಮೆಯೂ ಮಳೆಯಾಗಿಲ್ಲ). ಹಾಗಾಗಿ ಧರೆಯ ಅತ್ಯಂತ ವಿಶಾಲ ‘ಶೀತಲ ಮರುಭೂಮಿ’ ಆಗಿರುವುದೂ ಈ ಖಡದ್ದೇ ಮತ್ತೊಂದು ವಿಶ್ವದಾಖಲೆ. ಸೋಜಿಗದ ವರ್ಣವೈಭವದ ಕ್ಷಣ ಭಂಗುರದ ‘ಧ್ರುವ ಪ್ರಭೆ’ಗಳಷ್ಟೇ ಅಲ್ಲಿನ ನಿರಭ್ರ ಆಗಸದ ಆಕರ್ಷಣ–ಅಲಂಕರಣ.

ಹೀಗೆಲ್ಲ ಇದ್ದರೂ ಅಂಟಾರ್ಕ್ಟಿಕಾ ಜೀವಿರಹಿತವಲ್ಲ. ಕೆಲವಾರು ಪ್ರಭೇದಗಳ ‘ಪೆಂಗ್ವಿನ್‌’ಗಳು (ಚಿತ್ರ–4, 6) ಮತ್ತು ಇತರ ಸುಮಾರು ಇಪ್ಪತ್ತು ಪಕ್ಷಿ ವಿಧಗಳು ಅಂಟಾರ್ಕ್ಟಿಕಾವನ್ನು ಆಶ್ರಯಿಸಿವೆ (ಚಿತ್ರ–13). ಸೀಲ್‌, ಶಾರ್ಕ್‌, ತಿಮಿಂಗಿಲಗಳಂತಹ ಭಾರೀ ಪ್ರಾಣಿಗಳೂ ಅಂಟಾರ್ಕ್ಟಿಕಾದ ಕರಾವಳಿಗೆ ಆಹಾರ ಅನ್ವೇಷಿಸಿ ಆಗಮಿಸುತ್ತವೆ. ಅಂಟಾರ್ಕ್ಟಿಕಾದಲ್ಲಿ ಸಸ್ಯಾಚ್ಛಾದನೆ ಇಲ್ಲ. ಶೈವಲ, ಲೈಕೆನ್‌ಗಳದೇ (ಚಿತ್ರ–11). ಅಲ್ಲಿ ಧಾರಾಳವಾಸ್ತವ್ಯ ಅಂಟಾರ್ಕ್ಟಿಕಾದಲ್ಲಿ–ಅಲ್ಲಿನ ಶಾಶ್ವತ ಅಸಹನೀಯ ಶೀತಲ ಪರಿಸ್ಥಿತಿಯಿಂದಾಗಿ– ಶಾಶ್ವತ ಜನವಸತಿಗಳಿಲ್ಲ. ಜನರ ಊರು–ಕೇರಿ ಒಂದೂ ಅಲಿಲ್ಲ. ಮುವ್ವತ್ತು ರಾಷ್ಟ್ರಗಳ ಒಟ್ಟು ನಲವತ್ತೆರಡು ವೈಜ್ಞಾನಿಕ ಸಂಶೋಧನಾ ಸ್ಟೇಷನ್‌ಗಳು ಅಲ್ಲಿವೆ. ನಮ್ಮ ದೇಶದ ಮೂರು ಅಂಥ ಕೇಂದ್ರಗಳೂ ಸೇರಿ ಒಟ್ಟು ಸುಮಾರು ಒಂದು ಸಾವಿರ ವಿಜ್ಞಾನಿ–ಸಂಶೋಧಕರದೇ ಅಲ್ಲಿನ ಜನಸಂಖ್ಯೆ. ಇತ್ತೀಚೆಗೆ ಈ ಭೂಖಂಡವನ್ನು ವೀಕ್ಷಿಸ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದು ಜನಸಂಪರ್ಕದ ಹೊಸ ಬೆಳವಣಿಗೆ.

ಪೃಥ್ವಿಯ ಸ್ವಾಸ್ಥ್ಯದಲ್ಲಿ ಅಂಟಾರ್ಕ್ಟಿಕಾಗೆ ಬಹಳ ಮಹತ್ವ. ಧರೆಯ ವಾಯುಪರಿಚಲನೆಯಲ್ಲಿ, ಮಾರುತ ವ್ಯವಸ್ಥೆಯಲ್ಲಿ ಈ ಭೂಖಂಡ ನಿರ್ಣಾಯಕ ಪಾತ್ರ ಹೊಂದಿದೆ. ಇಡೀ ಸಾಗರ ಸಾಮ್ರಾಜ್ಯದ ಸಮತೋಲನದ ಮೂಲಾಧಾರವಾಗಿರುವ ಉಷ್ಣೋದಕ– ಶೀತೋದಕ ‘ಸಾಗರ ಪ್ರವಾಹ’ಗಳ ಜನನ–ಸಂಚಲನಗಳಲ್ಲೂ ಅಂಟಾರ್ಕ್ಟಿಕಾದ ಪಾತ್ರ ತುಂಬ ಪ್ರಧಾನ. ಸ್ಪಷ್ಟವಾಗಿಯೇ, ಅಂಟಾರ್ಕ್ಟಿಕಾದ ಪರಿಸರ ವ್ಯತ್ಯಯಗೊಂಡರೆ, ಅಲ್ಲಿನ ಹಿಮಸಾಮ್ರಾಜ್ಯ ಕುಗ್ಗಿದರೆ ಇಡೀ ಧರೆಗೇ ಅಪಾಯ ನಿಶ್ಚಿತೆ.

ಆತಂಕ ಏನೆಂದರೆ ಪ್ರಸ್ತುತ ಕಾಲಿಡುತ್ತಿರುವ ಪರಿಸ್ಥಿತಿ ಇದೇ. ಒಂದು ನೇರ ಮತ್ತೊಂದು ಪರೋಕ್ಷ ಮನುಷ್ಯ ಮೂಲ ಕಾರಣಗಳಿಂದ ಅಂಟಾರ್ಕ್ಟಿಕಾ ಇಬ್ಬಗೆಯ ತಳಮಳಗಳಿಗೆ ಸಿಲುಕಿದೆ. ನೀವೇ ಗಮನಿಸಿ:

1. ಹಿಮನದಿಗಳ ಹಿಂಜರಿತ
ಸದ್ಯದ ಅತ್ಯಂತ ಗಂಭೀರ ಪಾರಿಸರಿಕ ಸಮಸ್ಯೆಯಾಗಿರುವ ‘ತಾಪ ಹೆಚ್ಚಳ’ ಅಂಟಾರ್ಕ್ಟಿಕಾದಲ್ಲಿ ತೀವ್ರ ಪ್ರಭಾವ ಬೀರುತ್ತಿದೆ. ಕಳೆದ ನಲವತ್ತು ವರ್ಷಗಳಲ್ಲಿ ಅಂಟಾರ್ಕ್ಟಿಕಾದ ತಾಪಮಾನ ಎರಡೂವರೆ ಡಿಗ್ರಿ ಸೆಲ್ಷಿಯಸ್‌ನಷ್ಟು ಹೆಚ್ಚಿದೆ. ಅದರ ಪರಿಣಾಮವಾಗಿ–

* ಅಂಟಾರ್ಕ್ಟಿಕಾದ ಪಶ್ಚಿಮ ಭಾಗದ ಕಡಲಂಚಿನುದ್ದಕ್ಕೂ ಅಸ್ತಿತ್ವದಲ್ಲಿರುವ ಹಿಮನದಿಗಳ ಪ್ರತಿ ಹತ್ತರಲ್ಲಿ ಒಂಬತ್ತು ಹಿಂದೆ ಸರಿಯುತ್ತಿವೆ. ಹನ್ನೆರಡು ವರ್ಷಗಳಿಂದ ಈಚೆಗೆ ಈ ಹಿಂಜರಿತದ ವೇಗ ಹೆಚ್ಚುತ್ತಲೂ ಇದೆ. ಉದಾಹರಣೆಗೆ ಜಾಗತಿಕವಾಗಿ ಸಾಗರ ಮಟ್ಟವನ್ನು ನಾಲ್ಕು ಅಡಿ ಹೆಚ್ಚಿಸಬಲ್ಲ ‘ಥ್ವೈಟ್‌್ಸ ಹಿಮನದಿ’ ಮತ್ತು ಸಾಗರ ಮಟ್ಟವನ್ನು ಇಪ್ಪತ್ತು ಅಡಿ ಏರಿಸಬಲ್ಲಷ್ಟು ಜಲದಾಸ್ತಾನಿನ ‘ಟೋಟ್ಟೆನ್‌ ಹಿಮನದಿ’ – ಈ ಪ್ರತಿಯೊಂದೂ ಲಕ್ಷಾಂತರ ಚದರ ಕಿ.ಮೀ. ವಿಸ್ತಾರ ಕಡಿಮೆಗೊಂಡಿವೆ.

* ಈ ಭೂಖಂಡದ ಸುಪ್ರಸಿದ್ಧ ‘ಲಾರ್ಸೆನ್‌ ಐಸ್‌ ಶೆಲ್ಫ್‌’ ಪ್ರಸ್ತುತ ಶೇಕಡ ನಲವತ್ತು ಭಾಗ ಕರಗಿದೆ. 220 ಮೀಟರ್‌ ದಪ್ಪದ ಆ ‘ಐಸ್‌ ಶೆಲ್ಫ್‌’ನ (ಹಾಗೆಂದರೆ ನೆಲದಿಂದ ಕಡಲಿಗೂ ಚಾಚಿ ಹರಡಿದ ಹಿಮಹಾಸು) 3250 ಚದರ ಕಿ.ಮೀ.ನಷ್ಟು ಭಾಗ ಕಣ್ಮರೆಯಾಗಿದೆ. ಹಾಗೆ ಏಳು ಪ್ರಮುಖ ಐಸ್‌ ಶೇಲ್ಫ್‌ಗಳ ಒಟ್ಟು ಸಮೀಪ 13500 ಚದರ ಕಿ.ಮೀ. ವಿಸ್ತಾರ ಕರಗಿ ನೀರಾಗಿ ಕಡಲಿಗಿಳಿದಿದೆ (ಚಿತ್ರ–7).

* ಅಂಟಾರ್ಕ್ಟಿಕಾದ ಹಿಮಹಾಸುಗಳು, ಹಿಮನದಿಗಳು ಮತ್ತು ಹಿಮಚಾಚುಗಳನ್ನು ಅಭ್ಯಸಿಸುತ್ತಿರುವ ತಜ್ಞರು ವಿವರಿಸುವಂತೆ ಇವುಗಳ ಕರಗುವ ಕುಸಿಯುವ ಕುಗ್ಗುವ ವೇಗ ಮುಂದಿನ ಹತ್ತು ವರ್ಷಗಳಲ್ಲಿ ದುಪ್ಪಟ್ಟಾಗಲಿದೆ.

ಕರಗುವ ಅಂಟಾರ್ಕ್ಟಿಕಾದಿಂದ ಸಾಗರ ಮಟ್ಟ ಏರಿ ಜಗದಾದ್ಯಂತ ನೆಲ–ಕಡಲುಗಳ ಸಕಲ ಜೀವಾವಾರಗಳೂ ಇಡೀ ಭೂ ಜೀವಜಾಲವೂ ಸಂಕಷ್ಟಕ್ಕೆ ಸಿಲುಕುವುದು ಸ್ಪಷ್ಟ ತಾನೇ?

2. ಪ್ರವಾಸಿಗಳ ದಾಳಿ–ಹಾವಳಿ
ಕಳೆದ ಕೆಲವು ದಶಕಗಳಿಂದ ಈ ಅಕ್ಷತ ಹಿಮಲೋಕ ಪ್ರವಾಸೀ ಜನರ ಹಾವಳಿಗೂ ಸಿಲುಕಿದೆ. ಅಂಟಾರ್ಕ್ಟಿಕಾದ ‘ಅಲೌಕಿಕ’ ಎನಿಸುವ ಅತ್ಯದ್ಭುತ ಹಿಮಸಾಮ್ರಾಜ್ಯವನ್ನು, ಅಲ್ಲಿನ ಅನನ್ಯ ಪರಿಸರವನ್ನು, ಅಲ್ಲಿನ ಜೀವ ವಿಸ್ಮಯಗಳನ್ನು ವೀಕ್ಷಿಸಲೆಂದು ಹೋಗುತ್ತಿರುವ ಪ್ರವಾಸಿಗರ ಸಂಖ್ಯೆ ಕ್ಷಿಪ್ರ ಹೆಚ್ಚುತ್ತಿದೆ. 1990ರ ದಶಕದಲ್ಲಿ ಸರಾಸರಿ ವಾರ್ಷಿಕ ಐದು ಸಾವಿರ ಇದ್ದ ಪ್ರವಾಸಿಗಳ ಸಂಖ್ಯೆ ಈಗ ವರ್ಷಕ್ಕೆ ಸಮೀಪ ನಲವತ್ತು ಸಾವಿರ ಮುಟ್ಟಿದೆ. ಹಡಗು, ವಿಮಾನ, ಹೆಲಿಕಾಪ್ಟರ್‌ಗಳ ಮೂಲಕ ಬಂದು ಹೋಗುವ ಇಷ್ಟೊಂದು ಪ್ರವಾಸಿಗರಿಂದ ಅಂಟಾರ್ಕ್ಟಿಕಾ ಅಪಾಯಕ್ಕೆ ಸಿಲುಕಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡುತ್ತಿದ್ದಾರೆ.

ಏಕೆಂದರೆ ಅಂಟಾರ್ಕ್ಟಿಕಾದ ಪ್ರವಾಸ ಯೋಗ್ಯ ಅವಧಿಯಾದ ‘ನವೆಂಬರ್‌ನಿಂದ ಮಾರ್ಚ್‌’ವರೆಗಿನ ಐದು ತಿಂಗಳ ಕಾಲದಲ್ಲೇ ಗರಿಷ್ಠವಾಗುವ ಪ್ರವಾಸ ಕಾರ್ಯಕ್ರಮಗಳು ಅದೇ ಅವಧಿಯಲ್ಲೇ ‘ಸಂತಾನ ಜಾತ್ರೆ’ ನಡೆಸುವ ಪೆಂಗ್ವಿನ್‌ಗಳಿಗೆ (ಚಿತ್ರ–4, 6) ತುಂಬ ಹಾನಿಕರ. ಜನಸಂದಣಿಯನ್ನು ಕಂಡು ಗಾಬರಿಗೊಳ್ಳುವ ಇಂಥ ಜೀವಿಗಳು ತಮ್ಮ ಮೊಟ್ಟೆ ಮರಿಗಳನ್ನು ತ್ಯಜಿಸಿ ದೂರಹೋಗುವ ಸಂದರ್ಭಗಳು ಒದಗುತ್ತವೆ. ಪ್ರವಾಸಿಗರ ಜೊತೆಗೆ ಅಜ್ಞಾತವಾಗಿ ರವಾನೆಗೊಳ್ಳುವ ಅನ್ಯಪ್ರಾಣಿಗಳು ಕಳೆಸಸ್ಯಗಳು ರೋಗಕಾರಕಗಳು ಅಲ್ಲೇ ಉಳಿದು ವರ್ಧಿಸಿ ಸ್ಥಳೀಯ ಜೀವಿಗಳಿಗೆ ಮಾರಕವಾಗುತ್ತವೆ. ಪ್ರವಾಸಿಗರ ಬಿಸಾಕುವಸ್ತುಗಳು ಅಂಟಾರ್ಕ್ಟಿಕಾ ಪರಿಸರಕ್ಕೆ ಹಾನಿಮಾಡುತ್ತವೆ. ಆದ್ದರಿಂದಲೇ ಅನಿಯಂತ್ರಿತ ಪ್ರವಾಸಕೂಡ ಅತ್ಯಂತ ಆತಂಕಕಾರಿಯೇ ಹೌದು– ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT