ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕದ ಮಡಿಲಲ್ಲಿ ‘ಧರೆಯ ಶಿರ’

ವಿಜ್ಞಾನ ವಿಶೇಷ
Last Updated 16 ಜನವರಿ 2016, 19:40 IST
ಅಕ್ಷರ ಗಾತ್ರ

ಅದು ನಮ್ಮ ಧರೆಯ ಶಿರದಂತಿರುವ ಪ್ರದೇಶ (ಚಿತ್ರ–1) ಧರೆಯ ತಳದಂತಿರುವ ಅಂಟಾರ್ಕ್ಟಿಕಾದಂತಲ್ಲದೆ ಆರ್ಕ್‌ಟಿಕ್‌ ‘ನೆಲ ಮತ್ತು ಕಡಬು’ ಎರಡನ್ನೂ ಒಳಗೊಂಡಿರುವ ಏಕೈಕ ಪ್ರದೇಶ. ಭೂಮಿಯ ‘ಉತ್ತರ ಧ್ರುವ’ ಈ ಪ್ರದೇಶದಲ್ಲೇ ಇದೆ.

ಭೌಗೋಳಿಕವಾಗಿ 66 ಡಿಗ್ರಿ 32 ನಿಮಿಷ ಉತ್ತರ ಅಕ್ಷಾಂಶದಿಂದ ಉತ್ತರ ಧ್ರುವದವರೆಗಿನ ಎಲ್ಲ ನೆಲೆ–ಜಲ ಪ್ರದೇಶಗಳೂ ಆರ್ಕ್‌ಟಿಕ್‌ಗೆ ಸೇರಿವೆ. ಸ್ಪಷ್ಟವಾಗಿಯೇ ಆರ್ಕ್‌ಟಿಕ್‌ನ ಪ್ರಧಾನ ಭಾಗ– ಅದೊಂದು ಮಹಾಸಾಗರ. ‘ಆರ್ಕ್‌ಟಿಕ್‌ ಸಾಗರ’ಎಂದೇ ಅದರ ಹೆಸರು. ಯೂರೋಪ್‌, ಉತ್ತರ ಅಮೆರಿಕ ಮತ್ತು ಏಷಿಯ ಖಂಡಗಳ ಉತ್ತರ ತುದಿ ಭಾಗಗಳಿಂದಲೂ, ಹೇರಳ ದ್ವೀಪಗಳಿಂದಲೂ ಪರಿವರಿಸಲ್ಪಟ್ಟಿರುವ ಈ ಮಹಾಸಾಗರದ ವಿಸ್ತಾರ ಒಂದು ಕೋಟಿ ನಲವತ್ತೆರಡು ಲಕ್ಷ ಚದರ ಕಿಲೋಮೀಟರ್‌ ಸರಾಸರಿ ಹತ್ತು ಸಾವಿರ ಅಡಿ ಆಳ ಇರುವ ಆರ್ಕ್‌ಟಿಕ್‌ ಸಾಗರ ಮೇಲ್ಮೈನ ಬಹುಪಾಲು ಇಡೀ ವರ್ಷ ಹತ್ತರಿಂದ ಹದಿಮೂರು ಅಡಿ ದಪ್ಪದ ಹಿಮ ಪದರದಿಂದ ಮುಚ್ಚಲ್ಪಟ್ಟು ನೀರ್ಗಲ್ಲ ನೆಲದಂತಿದ್ದು ಬೆಳಕಿನಲ್ಲಿ ಕನ್ನಡಿಯಂತೆ ಕಂಗೊಳಿಸುತ್ತದೆ.

ಕಳೆದ ‘ಹಿಮಯುಗ’ದಲ್ಲಿ ಧರೆಯನ್ನಾವರಿಸಿದ್ದ ಹಿಮರಾಶಿಯ (ಚಿತ್ರ–2) ಅವಶೇಷಗಳೇ ಈಗಲೂ ಆರ್ಕ್‌ಟಿಕ್‌ನ ನೆಲಭಾಗಗಳಲ್ಲಿ ಬೆಟ್ಟ–ಗುಡ್ಡಗಳೋಪಾದಿಯಲ್ಲಿ ಉಳಿದು ನಿಂತಿವೆ (ಚಿತ್ರ 3,4). ಉದಾಹರಣೆಗೆ ಆರ್ಕ್‌ಟಿಕ್‌ಗೇ ಸೇರಿರುವ ‘ಧರೆಯ ಅತ್ಯಂತ ವಿಸ್ತಾರದ ದ್ವೀಪ’ (ಅದರ ವೈಶಾಲ್ಯ ಹದಿನೆಂಟೂವರೆ ಲಕ್ಷ ಚದರ ಕಿ.ಮೀ.) ‘ಗ್ರೀನ್‌ ಲ್ಯಾಂಡ್‌’ ಸಂಪೂರ್ಣವಾಗಿ ಎರಡು ಕಿ.ಮೀ. ದಪ್ಪದ ಹಿಮಹಾಸನ್ನು ಹಿದ್ದಿದೆ!

ಹಾಗಾಗಿ ಸಹಜವಾಗಿಯೇ ಆರ್ಕ್‌ಟಿಕ್‌ ಒಂದು ಶೀತಲ ಲೋಕ. ಅಲ್ಲಿನ ಬೇಸಿಗೆಯ ಗರಿಷ್ಠ ತಾಪಮಾನವೇ ಶೂನ್ಯಕ್ಕಿಂತ ಒಂದು ಡಿಗ್ರಿ ಸೆಲ್ಷಿಯಸ್‌ ಕಡಿಮೆ! ಅಲ್ಲಿನ ಚಳಿಗಾಲದ ಸರಾಸರಿ ಉಷ್ಣತೆಯಂತೂ ಶೂನ್ಯಕ್ಕಿಂತ ಮುವ್ವತ್ತೈದು ಡಿಗ್ರಿ ಕಡಿಮೆ! ಆದರೇನು? ದುಸ್ತರ ಎನಿಸುವ ಪರಿಸರ ಇದ್ದರೂ ಆರ್ಕ್‌ಟಿಕ್‌ನಲ್ಲಿ– ಅಲ್ಲಿನ ನೆಲ–ಕಡಲ ಪ್ರದೇಶಗಳಲ್ಲಿ–ವಿಶಿಷ್ಟ ಪ್ರಾಣಿಗಳ ಸಸ್ಯಗಳ ಜೀವಜಾಲ ಹರಡಿದೆ. ಧ್ರುವ ಕರಡಿ (ಚಿತ್ರ 8,9), ಸೀಲ್‌ (ಚಿತ್ರ–10) ವಾಲ್ರಸ್‌, ಹಿಮನರಿ, ಕ್ಯಾರಿಬೂ, ಬೋ ಹೆಡ್‌ ತಿಮಿಂಗಿಲ, ನಾರ್ವಾಲ್‌, ಮೂಸ್‌ ಇತ್ಯಾದಿಗಳಿಂದ ಹೇರಳ ವಿಧ ಹುಲ್ಲು ಗಿಡ, ಹೂ ಗಿಡ, ಫೈಟೋ ಪ್ಲಾಂಕ್ಟನ್‌, ಕೋಪೆಪಾಡ್‌, ಆಂಫಿಪಾಡ್‌ ಮತ್ತು ನಾನಾ ವಿಧ ಮತ್ಸ್ಯಗಳವರೆಗೆ ಆರ್ಕ್‌ಟಿಕ್‌ನ ಸಾಗರ ಪ್ರದೇಶದಲ್ಲಿ, ಹಿಮ ಸಾಮ್ರಾಜ್ಯದಲ್ಲಿ ಮತ್ತು ತಂಡ್ರಾ ಪ್ರದೇಶದಲ್ಲಿ ವಿಶಿಷ್ಟ ದಟ್ಟ ಜೀವಜಾಲ ಹಬ್ಬಿದೆ; ನೂರಾರು ಜೀವ ಸರಪಳಿಗಳು ಹೆಣೆದುಕೊಂಡಿವೆ.

ಅಷ್ಟೇ ಅಲ್ಲದೆ ಆರ್ಕ್‌ಟಿಕ್‌ನಲ್ಲಿ ಮನುಷ್ಯರೂ ಇದ್ದಾರೆ. ಆರ್ಕ್‌ಟಿಕ್‌ಗೆ ಸೇರಿದ ಗ್ರೀನ್‌ಲ್ಯಾಂಡ್‌ನ ಪ್ರದೇಶದಲ್ಲಿ ‘ಎಸ್ಕಿಮೋ’ಗಳು, ಅಲಾಸ್ಕಾದಲ್ಲಿ ‘ಅಲ್ಯೂಟ್‌’ ಜನ, ಸ್ಕ್ಯಾಂಡಿನೇವಿಯಾದಲ್ಲಿ ‘ಲ್ಯಾಪ್‌’ ಜನ ಹಾಗೂ ಈಶಾನ್ಯ ಸೈಬೀರಿಯಾದಲ್ಲಿ ‘ಚುಕ್ಟಿ’ ಜನ ಶತಮಾನಗಳಿಂದ ನೆಲೆಸಿದ್ದಾರೆ. ಅಲ್ಲಿನ ಪ್ರಾಣಿಗಳನ್ನೇ ಬೇಟೆಯಾಡುತ್ತ, ಆ ಶೀತಲ ಲೋಕದಲ್ಲೇ ನೆಮ್ಮದಿಯಿಂದ ಬಾಳುತ್ತಿದ್ದಾರೆ.

ಆದರೆ ಪ್ರಸ್ತುತ ಸ್ಥಿತಿ ಏನೆಂದರೆ ಆರ್ಕ್‌ಟಿಕ್‌ನ ಜನರಿಗೂ,  ಅಲ್ಲಿನ ಜೀವಲೋಕಕ್ಕೂ, ಇಡೀ ಪೃಥ್ವಿಗೂ ಆ ನೆಮ್ಮದಿ ಕೆಟ್ಟು ನಿಂತಿದೆ. ಆದಕ್ಕೆ ಜಗದಾದ್ಯಂತ ಮಾನವ ಮೂಲ ವಾಯುಮಾಲಿನ್ಯದಿಂದ ಭೂತಾಪ ಹೆಚ್ಚಾಗುತ್ತಿರುವುದೇ ಪ್ರಧಾನ ಕಾರಣ. ಅದರ ಪರಿಣಾಮವಾಗಿ ಆರ್ಕ್‌ಟಿಕ್‌ನ ಎಂಥ ಆತಂಕಕರ, ಅಪಾಯಕರ ಪರಿಸ್ಥಿತಿಯತ್ತ ಸಾಗಿದೆ ನೀವೇ ನೋಡಿ:

ಇಸವಿ 1979 ರಿಂದ– ಕೃತಕ ಉಪಗ್ರಹಗಳ ಮೂಲಕ ನಿರಂತರ ವೀಕ್ಷಣೆ–ಅಧ್ಯಯನ ಆರಂಭವಾದ ಆ ವರ್ಷದಿಂದ– ಈ ವರೆಗೆ ಲಭಿಸಿರುವ ಮಾಹಿತಿಗಳು ನಿಚ್ಚಳಗೊಳಿಸಿರುವ ಪ್ರಕಾರ 1980ರ ದಶಕದಲ್ಲಿ ಆರ್ಕ್‌ಟಿಕ್‌ನಲ್ಲಿ ಸಂಗ್ರಹವಾಗಿದ್ದ ಒಟ್ಟೂ ಹಿಮರಾಶಿಯ ದಪ್ಪ ಮತ್ತು ವಿಸ್ತಾರ ಎರಡೂ ಈಗ ಶೇಕಡ ಐವತ್ತರಷ್ಟು ಕಡಿಮೆಯಾಗಿದೆ.

ಕಳೆದ ಮುವ್ವತ್ತು ವರ್ಷಗಳಲ್ಲಿ ಆರ್ಕ್‌ಟಿಕ್‌ ಸಾಗರವನ್ನಾವರಿಸಿದ್ದ ‘ಸಾಗರ ಹಿಮ’ ಶೇಕಡ ನಲವತ್ತರಷ್ಟು ಕರಗಿಹೋಗಿದೆ. ಕಡಲ ಜಲದ ಮೇಲೆ 10–13 ಅಡಿ ದಪ್ಪಕ್ಕೆ ಗಟ್ಟಿ ನೆಲದಂತೆ ಹರಡಿರುತ್ತಿದ್ದ ಹಿಮಹಾಸು (ಚಿತ್ರ–12) ಛಿದ್ರವಾಗಿ, ಸೀಳಿಹೋಗಿ, ಕರಗಿಹೋಗಿ, ತೆಳುವಾಗಿ... (ಚಿತ್ರ–13) ಹಾಗಾಗಿ ನೀರಿನಾವಾರವೇ ಅಧಿಕಾಧಿಕ ತೆರೆದುಕೊಳ್ಳುತ್ತಿದೆ. ಆರ್ಕ್‌ಟಿಕ್‌ನ ಹಿಮಸಾಮ್ರಾಜ್ಯದ ಕುಸಿತದ ವರ್ತಮಾನದ ಮತ್ತು ಭವಿಷ್ಯದ ಸ್ಥಿತಿಗಳನ್ನು (ಚಿತ್ರ–4) ರಲ್ಲಿ ಗಮನಿಸಿ.

ಆರ್ಕ್‌ಟಿಕ್‌ನ ಹಿಮಸಾಮ್ರಾಜ್ಯದ ಕುಸಿತಕ್ಕೆ ಅಲ್ಲಿ ಕ್ರಮೇಣ ಏರುತ್ತಿರುವ ತಾಪಮಾನವೇ ಕಾರಣ. ಪ್ರತಿಷ್ಠಿತ ವಿಶ್ವಮಾನ್ಯ ಸಂಸ್ಥೆ ‘ನ್ಯಾಶನಲ್‌ ಓಷನೋಗ್ರಾಫಿಕ್‌ ಆ್ಯಂಡ್‌ ಅಟ್ಮಾಸ್ಫೆರಿಕ್ ಅಡ್‌ಮಿನಿಸ್ಟ್ರೇಶನ್‌’ (ನೋವಾ)ದ ಅತ್ಯಂತ ಇತ್ತೀಚಿನ ವರದಿಯ ಪ್ರಕಾರ ಆರ್ಕ್‌ಟಿಕ್‌ನ ಈಗಿನ ತಾಪಮಾನ ಇಸವಿ 1900 ರಿಂದ ಈ ವರೆಗಿನ ಸರಾಸರಿಗಿಂತ 1.3 ಡಿಗ್ರಿ ಸೆಲ್ಷಿಯಸ್‌ ಅಧಿಕ ಇದೆ. ಆರ್ಕ್‌ಟಿಕ್‌ನ ಕೆಲವು ಪ್ರದೇಶಗಳಲ್ಲಂತೂ ಈ ಹೆಚ್ಚಳ ಸರಾಸರಿಗಿಂತ 3 ಡಿಗ್ರಿ ಅಧಿಕ! ಇದು ಇಡೀ ಧರೆಯ ವಾಯುಮಂಡಲದ ತಾಪದ ಏರಿಕೆಯ ಎರಡರಷ್ಟಕ್ಕೆ ಸಮ!

ಭೀತಿ ತರುವ ವಿಷಯ ಏನೆಂದರೆ ವೈಜ್ಞಾನಿಕ ಲೆಕ್ಕಾಚಾರಗಳ ಪ್ರಕಾರ ಇಸವಿ 2050ರ ಸುಮಾರಿಗೆ ಆರ್ಕ್‌ಟಿಕ್‌ನ ತಾಪಮಾನ ಕನಿಷ್ಟ ನಾಲ್ಕು ಡಿಗ್ರಿಯಷ್ಟು ಹೆಚ್ಚುವುದು ನಿಶ್ಚಿತ! ಹಾಗಾದಾಗ ಆರ್ಕ್‌ಟಿಕ್‌ನಲ್ಲಿ ಸಂಭವಿಸುವ ಹಿಮನಷ್ಟ ಹೇಗಿರುತ್ತದೆಂದರೆ ಆರ್ಕ್‌ಟಿಕ್‌ ‘ಮಣ್ಣಿಲ್ಲದ ತೋಟ’ದಂತಾಗುತ್ತದೆ!

ಹೀಗೆ ತಾಪ ಹೆಚ್ಚಳದಿಂದಾಗಿ ಆರ್ಕ್‌ಟಿಕ್‌ನಲ್ಲಿ ಕರಗುತ್ತಿರುವ ಹಿಮಸಾಮ್ರಾಜ್ಯದಿಂದಾಗಿ ಆರ್ಕ್‌ಟಿಕ್‌ ಪ್ರದೇಶದಲ್ಲೂ ಇಡೀ ಪೃಥ್ವಿಯಲ್ಲೂ ಏನೇನು ಘೋರ, ಗಂಭೀರ, ಆತಂಕಕರ ದುಷ್ಪರಿಣಾಮಗಳು ಒಡಮೂಡಲಿವೆ– ನೀವೇ ಗಮನಿಸಿ:

ಕಡಲಿನಾವಾರವನ್ನು ಆವರಿಸಿರುವ ಹಿಮಪದರ ಕರಗಿದಂತೆಲ್ಲ ಸಹಜವಾಗಿಯೇ ಅಧಿಕಾಧಿಕ ಜಲಾವಾರ ಸೂರ್ಯರಶ್ಮಿಗೆ ತೆರೆದುಕೊಳ್ಳುತ್ತದೆ. ಹಾಗಾದಂತೆಲ್ಲ ಆರ್ಕ್‌ಟಿಕ್‌ನ ತಾಪಮಾನವೂ ಏರುತ್ತದೆ. ಏಕೆಂದರೆ ಹಿಮಹಾಸು ಮತ್ತು ಮಂಜು ಸೂರ್ಯರಶ್ಮಿಯ ಶೇಕಡ 15 ರಷ್ಟೇ ಭಾಗವನ್ನು ಹೀರಿ ಶೇಕಡ 85 ಭಾಗವನ್ನು ಪ್ರತಿಫಲಿಸಿಬಿಡುತ್ತವೆ. ತದ್ವಿರುದ್ಧವಾಗಿ ಜಲಾವಾರ ಸೂರ್ಯರಶ್ಮಿಯ ಶೇಕಡ 93 ಭಾಗವನ್ನು ಹೀರಿ ಶೇಕಡ ಏಳು ಭಾಗವನ್ನಷ್ಟೇ ಪ್ರತಿಫಲಿಸುತ್ತದೆ. ಆರ್ಕ್‌ಟಿಕ್‌ನಲ್ಲಿ ಸಂಭವಿಸುತ್ತಿರುವ ಇದೇ ವಿದ್ಯಮಾನದಿಂದಾಗಿಯೇ ಅಲ್ಲಿನ ನೆಲದ ಮತ್ತು ಕಡಲ ಜಲದ ತಾಪಮಾನ ಏರುತ್ತಿದೆ.

ತತ್ಪರಿಣಾಮವಾಗಿಆರ್ಕ್‌ಟಿಕ್‌ನ ಹಿಮಸಂಗ್ರಹ ಕುಸಿದುಬೀಳುತ್ತಿದೆ (ಚಿತ್ರ–5); ಅಲ್ಲಿನ ಹಿಮನದಿಗಳು (ಚಿತ್ರ 6, 11) ಕಣ್ಮರೆಯಾಗುತ್ತಿವೆ. ಅವೆಲ್ಲದರ ಫಲಿತವಾಗಿ ಆರ್ಕ್‌ಟಿಕ್‌ನ ತಾಪ ಮತ್ತಷ್ಟು ಏರುತ್ತಿದೆ. ಅಂಥದೊಂದು ‘ವಿಷ ವರ್ತುಲ’ಕ್ಕೆ ಆರ್ಕ್‌ಟಿಕ್‌ ಸಿಲುಕಿದೆ.

ಆರ್ಕ್‌ಟಿಕ್‌ನಲ್ಲಿ ಕರಗುತ್ತಿರುವುದು, ಕ್ಷೀಣಿಸುತ್ತಿರುವುದು ಕೇವಲ ಅಲ್ಲಿನ ಹಿಮಲೋಕವಲ್ಲ; ಜೊತೆಗೇ ಅಲ್ಲಿನ ಜೀವಲೋಕ ಕೂಡ. ವೈಜ್ಞಾನಿಕ ಲೆಕ್ಕಾಚಾರಗಳ ಪ್ರಕಾರ ಆರ್ಕ್‌ಟಿಕ್‌ನಲ್ಲಿ ಈಗಿನ ಪರಿಸ್ಥಿತಿಯೇ ಮುನ್ನಡೆದರೆ ಅಲ್ಲಿನ ನೆಲಾವಾರ–ಕಡಲಿನಾವಾರಗಳ ಬಹುಪಾಲು ಜೀವಿಗಳು ಈ ಶತಮಾನದ ಅಂತ್ಯದೊಳಗೆ ನಿರ್ನಾಮಗೊಳ್ಳುತ್ತವೆ.

ಆರ್ಕ್‌ಟಿಕ್‌ನ ಸಾಗರ ಪ್ರದೇಶದ ಹಿಮಪದರ ಕರಗಿ ಕರಗಿ ಜಲಾವಾರ ತೆರೆದುಕೊಂಡಂತೆಲ್ಲ ಮೊದಲು ಆರ್ಕ್‌ಟಿಕ್‌ ಸಾಗರದ ‘ಆಮ್ಲೀಯತೆ’ ಹೆಚ್ಚುತ್ತ ಹೋಗಿ ನಂತರ ಅದೇ ಅಪಾಯ ಧರೆಯ ಇಡೀ ಸಾಗರಾವಾರಕ್ಕೆ ಹಬ್ಬುತ್ತದೆ. ಏಕೆಂದರೆ ಆರ್ಕ್‌ಟಿಕ್‌ ಸಾಗರದ ಶೀತಲ ಜಲ ಇತರ ಸಾಗರಗಳ ಬೆಚ್ಚನೆಯ ನೀರಿಗಿಂತ ಹೆಚ್ಚು ಪ್ರಮಾಣದಲ್ಲಿ ವಾಯುಮಂಡಲದ ಇಂಗಾಲದ ಡೈ ಆಕ್ಸೈಡ್‌ ಅನ್ನು ಹೀರಿಕೊಳ್ಳುತ್ತದೆ. ಕಡಲ ನೀರಿನ ಆಮ್ಲೀಯತೆ ಅಧಿಕಗೊಂಡಂತೆಲ್ಲ ಸಾಗರ ಜಲದ ಕಾರ್ಬನೇಟ್‌ಗಳು ಕರಗಿಹೋಗುತ್ತವೆ. ಹಾಗಾದಾಗ ಮೃದ್ವಂಗಿಗಳು ಚಿಪ್ಪು ನಿರ್ಮಿಸಿಕೊಳ್ಳುವ, ಹವಳಗಳು ತಮ್ಮ ಅಸ್ಥಿಗಳನ್ನು ನಿರ್ಮಿಸಿಕೊಳ್ಳುವ ಕ್ರಿಯೆ ಅಸಾಧ್ಯವಾಗುಗುತ್ತದೆ.

ಆರ್ಕ್‌ಟಿಕ್‌ನ ನೆಲದ–ವಾಯುಪದರದ ತಾಪ ಏರಿದಂತೆಲ್ಲ ಇಡೀ ಪೃಥ್ವಿಯ ವಾಯುಮಂಡಲದ ಪರಿಚಲನೆ ವ್ಯತ್ಯಯಗೊಳ್ಳುತ್ತದೆ. ಋತುಮಾನಗಳ, ಮಳೆ ಮಾರುತಗಳ ತೀವ್ರತೆ ಮತ್ತು ವೇಳಾಪಟ್ಟಿ ಏರುಪೇರುಗೊಳ್ಳುತ್ತದೆ. ಆರ್ಕ್‌ಟಿಕ್‌ ಸಾಗರ ಪ್ರದೇಶದ ತಾಪ ಹೆಚ್ಚಳ ‘ಸಾಗರ ಪ್ರವಾಹಗಳ ಪರಿಚಲನೆ’ಯನ್ನು ಏಳುಬೀಳುಗೊಳಿಸಿ ಭೂ ಮಂಡಲದ ಸಾಗರ ಜೀವಜಾಲದಲ್ಲಿ ತೀವ್ರ ತಲ್ಲಣ–ತಳಮಳಗಳನ್ನು ಮೂಡಿಸುತ್ತದೆ. ಆರ್ಕ್‌ಟಿಕ್‌ ನೆಲವನ್ನಾವರಿಸಿರುವ ಹಿಮರಾಶಿ ತಾಪ ಹೆಚ್ಚಳದಿಂದ ಕರಗಿ ನೀರಾಗಿ, ಕಡಲಿಗಿಳಿದು ಇಡೀ ಜಗದ ಸಾಗರ ಮಟ್ಟವನ್ನು ಹತ್ತಾರು ಅಡಿ ಮೇಲೇರಿಸಿ ಕಡಲಂಚಿನ ಮಹಾನಗರಗಳನ್ನೂ (ಚಿತ್ರ–14) ಹತ್ತಾರು ಕಿ.ಮೀ. ವರೆಗಿನ ಎಲ್ಲ ನೆಲ ಪ್ರದೇಶಗಳನ್ನೂ ಜಲಸಮಾಧಿಗೊಳಿಸುತ್ತದೆ.

ಇಲ್ಲೊಂದು ಮಹಾ ವಿರ್ಯಾಸ ಕೂಡ. ಕರಗುತ್ತಿರುವ ಆರ್ಕ್‌ಟಿಕ್‌ ಅನ್ನು ಕಂಡು, ಅದರ ದುಷ್ಪರಿಣಾಮಗಳನ್ನು ಅರಿತು, ಅದನ್ನೆಲ್ಲ ತಪ್ಪಿಸುವ ಹಾದಿಗಳನ್ನು ಹುಡುಕುತ್ತ ಚಿಂತಾಕ್ರಾಂತರಾಗಿರುವ ಇಳೆಯ ಗೆಳೆಯರು ಒಂದೆಡೆ ಇದ್ದರೆ ಅದಕ್ಕೆ ವಿರುದ್ಧವಾಗಿ ಈ ಆತಂಕಕಾರೀ ಪರಿಸ್ಥಿತಿಯ ದುರ್ಲಾಭ ಪಡೆಯಲು ಆತುರಪಡುತ್ತಿರುವ ದುರ್ಜನರ ಗುಂಪು ಮತ್ತೊಂದೆಡೆ ಕಾದು ಕುಳಿತಿದೆ! ಆರ್ಕ್‌ಟಿಕ್‌ನಲ್ಲೂ ಹರಡಿರುವ ಎಂಟೂ ರಾಷ್ಟ್ರಗಳ (ಯು.ಎಸ್‌.ಎ., ಕೆನಡ, ಐಸ್‌ಲ್ಯಾಂಡ್‌, ಡೆನ್ಮಾರ್ಕ್‌, ನಾರ್ವೆ, ಸ್ವೀಡನ್‌, ಫಿನ್‌ಲ್ಯಾಂಡ್‌ ಮತ್ತು ರಷಿಯ) ಭಾರೀ ಉದ್ಯಮಶೀಲರು ಹಿಮರಹಿತ ಆರ್ಕ್‌ಟಿಕ್‌ ನೆಲದಲ್ಲಿ ಅಡಗಿರುವ ನಿಧಿ–ನಿಕ್ಷೇಪಗಳನ್ನು ಹೊರತೆಗೆವ ಚಿಂತನೆ ನಡೆಸಿದ್ದಾರೆ; ಅಲ್ಲಿನ ಅಪಾರ ತೈಲ, ಖನಿಜ ನಿಕ್ಷೇಪಗಳ ಮೇಲೆ ಕಣ್ಣಿಟ್ಟಿದ್ದಾರೆ.

ಹಾಗೇನಾದರೂ ಆರ್ಕ್‌ಟಿಕ್‌ನಲ್ಲಿ ತೈಲಭಾವಿಗಳನ್ನು ಕೊರೆದು, ಗಣಿಗಳನ್ನು ತೋಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದರೆ ಆರ್ಕ್‌ಟಿಕ್‌ ಎಂಬ ಅಕ್ಷತ ಪ್ರದೇಶದ ಸರ್ವನಾಶ ನಿಶ್ಚಿತ. ಅದು ಈಗಿನ ಮತ್ತೊಂದು ಮಹಾ ಆತಂಕ. ಎಂಥ ಪರಿಸ್ಥಿತಿ! ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT