ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕದ ಸುಳಿಯೊಳಗೆ ಮನುಷ್ಯತ್ವದ ನವನೀತ

ಸುಳಿ
Last Updated 27 ಮೇ 2016, 10:45 IST
ಅಕ್ಷರ ಗಾತ್ರ

ಚಿತ್ರ: ಸುಳಿ
ನಿರ್ಮಾಪಕರು: ಗೀತಾ ಶ್ರೀನಾಥ್, ಟಿ.ಎಸ್.ಸತ್ಯನಾರಾಯಣ, ನಿರ್ದೇಶಕ: ಪಿ.ಎಚ್.ವಿಶ್ವನಾಥ್, ತಾರಾಗಣ: ಶ್ರೀನಾಥ್, ಪ್ರಗತಿ, ಅದ್ವಿತಿ, ಸುಶೀಲ

ಪ್ರೇಮಕಥನಗಳ ಜೊತೆಗೆ ಸಾಮಾಜಿಕ ಪಿಡುಗುಗಳ ಬಗ್ಗೆ ತಮ್ಮ ಸಿನಿಮಾಗಳ ಮೂಲಕ ಚರ್ಚಿಸುತ್ತಿದ್ದ ನಿರ್ದೇಶಕ ಪಿ.ಎಚ್. ವಿಶ್ವನಾಥ್, ಈ ಸಲ ತುಸು ವಿಭಿನ್ನ ದಾರಿಯಲ್ಲಿ ಹೆಜ್ಜೆ ಹಾಕಿದ್ದಾರೆ. ವರ್ತಮಾನದ ಆತಂಕವೊಂದನ್ನು ಆಯ್ದುಕೊಂಡಿರುವ ಅವರು, ಮಧ್ಯಮ ವರ್ಗದ ಕುಟುಂಬ ತಮಗರಿವಿಲ್ಲದಂತೆ ‘ಸುಳಿ’ಗೆ ಸಿಲುಕುವ ಕಥಾನಕವನ್ನು ಹಿತವೆನಿಸುವ ನಿರೂಪಣೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಉಗ್ರವಾದ ಹಳ್ಳಿಗಳಿಗೂ ಕಾಲಿಟ್ಟಿದೆ. ಅದು ಮೆಲ್ಲನೇ ನುಸುಳುವ ಬಗೆ ಹೇಗೆ? ಅದರಿಂದ ಅಪಾಯಕ್ಕೆ ಸಿಲುಕುವವರು ಯಾರು? ತಪ್ಪು ಯಾರದು ಎಂಬುದನ್ನು ಸಹಜವೆನಿಸುವ ನೆಲೆಯಲ್ಲಿ ವಿಶ್ವನಾಥ್ ಚಿತ್ರಿಸಿರುವ ಪರಿ ಗಮನ ಸೆಳೆಯುತ್ತದೆ. ಅವರ ಸಿನಿಮಾಗಳಲ್ಲಿ ಕಾಣುವ ಕುಟುಂಬ, ವಾತ್ಸಲ್ಯ, ಮಮತೆ ಇಲ್ಲೂ ಇವೆ. ಅವುಗಳ ಜತೆಗೇ ಈಗ ಎಲ್ಲರಲ್ಲಿ ಭೀತಿ ಮೂಡಿಸಿರುವ ಭಯೋತ್ಪಾದನೆಯ ಕರಾಳ ಮುಖ ಕೂಡ ಗೋಚರಿಸುತ್ತದೆ.

ಮಲೆನಾಡಿನ ಪ್ರಶಾಂತ ವಾತಾವರಣದಲ್ಲಿ ಸಣ್ಣ ಹಳ್ಳಿಯೊಂದರ ಕುಟುಂಬ ‘ಸುಳಿ’ಯ ಕೇಂದ್ರಬಿಂದು. ಕತ್ತೆಗಳ ಮೇಲೆ ಪಟ್ಟಣದಿಂದ ಸರಕು-ಸಾಮಗ್ರಿ ಹೇರಿಕೊಂಡು ಬಂದು ಹಳ್ಳಿಗಳಲ್ಲಿ ಮಾರಾಟ ಮಾಡುವ ಬುಡೇನ್ ಸಾಬ್, ಮಾನವೀಯ ವ್ಯಕ್ತಿತ್ವದ ಪ್ರತಿನಿಧಿ. ಆತನ ಹಿರಿಯ ಮಗಳು ಶಬಾನಾ ಮೂಕಿ; ಆಕೆಯ ಮದುವೆಯಾಗದೇ ಉಳಿದವರ ಮದುವೆ ಮಾಡುವ ಆಸೆ ಆತನಿಗಿಲ್ಲ. ಮೌಲ್ವಿ ಜತೆಗೆ ವಾಸಿಸುವ ಅಜಮ್, ಶಬಾನಾಳನ್ನು ಮದುವೆಯಾಗುವುದಾಗಿ ಹೇಳಿದಾಗ ಬುಡೇನ್ ಸಾಬ್ ಕುಟುಂಬದಲ್ಲಿ ಹರ್ಷದ ಹೊಳೆ ಹರಿಯುತ್ತದೆ. ಆದರೆ ಅದು ಆ ಕುಟುಂಬ ಸುಳಿಗೆ ಸಿಲುಕುವ ಮೊದಲ ಹಂತವೂ ಆಗಿರುತ್ತದೆ.

ಹಳ್ಳಿಗಳಲ್ಲಿ ಕಂಡುಬರುವ ಧರ್ಮಸಾಮರಸ್ಯದ ಚಿತ್ರಣ ‘ಸುಳಿ’ಯಲ್ಲಿದೆ. ಹಾಗಿದ್ದರೂ ಅಮಾಯಕರನ್ನು ಬಳಸಿಕೊಂಡು ಭಯೋತ್ಪಾದನೆ ಹೇಗೆಲ್ಲ ಪ್ರವೇಶ ಮಾಡುತ್ತದೆ ಎಂಬುದನ್ನು ಸೂಚ್ಯವಾಗಿ ತೋರಿಸಲಾಗಿದೆ. ಉಗ್ರವಾದಕ್ಕೆ ಹಲವು ಮುಖಗಳು. ಭೀತಿ ಸೃಷ್ಟಿಸಲು ಯಾವ ಮುಖವಾಡವನ್ನು ಬೇಕಾದರೂ ಹಾಕಿಕೊಂಡು ಸಮಾಜದೊಳಗೆ ಪ್ರವೇಶಿಸಬಹುದು. ‘ಸುಳಿ’ಯಲ್ಲಿ ಆ ಸಂಗತಿ ಹೇಳಲು ಮುಂದಾದ ನಿರ್ದೇಶಕರು, ಅದಕ್ಕೊಂದು ಸುದೀರ್ಘ ಹಿನ್ನೆಲೆಯನ್ನು ಕೊಡುತ್ತಾರೆ. ಶ್ರೀನಾಥ್ ಅವರನ್ನು ಬುಡೇನ್ ಸಾಬ್ ಪಾತ್ರದಲ್ಲಿ ನೋಡುವುದೇ ಚೆಂದ. ಮಠದಯ್ಯನಾಗಿ ಚೆನ್ನಕೇಶವ ಪಾತ್ರ ಪೋಷಣೆ ಇನ್ನಷ್ಟು ಚೆಂದ! ಅಲ್ಲೊಂದು ಇಲ್ಲೊಂದು ಜನವಸತಿ ಕಾಣುವ ಮಲೆನಾಡಿನ ಹಳ್ಳಿ ನೋಟವನ್ನು ಯಥಾವತ್ತಾಗಿ ಸೆರೆಹಿಡಿಯುವಲ್ಲಿ ಛಾಯಾಗ್ರಾಹಕ ಮಂಜುನಾಥ್ ಸಫಲರಾಗಿದ್ದಾರೆ. ಉಳಿದ ತಾಂತ್ರಿಕ ಅಂಶಗಳು ಹೇಳಿಕೊಳ್ಳುವಂತೇನೂ ಇಲ್ಲ.

ಮಾನವೀಯತೆಯನ್ನೂ ವಿನಾಶದ ಸ್ವಭಾವವನ್ನೂ ಏಕಕಾಲಕ್ಕೆ ವಿಶ್ಲೇಷಿಸುವ ‘ಸುಳಿ’, ಉಗ್ರವಾದದ ಬಿಕ್ಕಟ್ಟಿಗೆ ತನ್ನದೇ ಆದ ಪರಿಹಾರವೊಂದನ್ನು ಮುಂದಿಡುತ್ತದೆ. ಆದರೆ, ಆ ದಾರಿ ಮಾತ್ರ ಪ್ರೇಕ್ಷಕನನ್ನು ಸದಾ ಕಾಡುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT