ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ, ಅಸಮಾಧಾನಗಳ ನಡುವೆ...

ಹೆಣ್ಣೊಬ್ಬಳ ಒಡಲಾಳದ ದನಿ
Last Updated 19 ಜುಲೈ 2014, 19:30 IST
ಅಕ್ಷರ ಗಾತ್ರ

‘ಏನುಂಡು... ಮೈನೆರೆದೆ... ಗೌರಿ...’
ಅಂತ ಕೀರಲು ಧ್ವನಿಯೊಳಗ ಕಮಲಮ್ಮತ್ತಿ ತಾರಕದೊಳಗ ಹಾಡ್ತಿದ್ರ ಹಿಂದಕ ಅವರ ಗುಂಪು ಸೋ ಅಂತಿತ್ತು.
ನಾನು ಹಣಿಗೆ ಗಂಟು ಹಾಕ್ಕೊಂಡು, ಅಮ್ಮನ ಕಡೆ ಸಿಟ್ಟಿಗೆದ್ದು ನೋಡ್ತಿದ್ದೆ. ನನ್ನಪ್ಪ ನನ್ನಣ್ಣಂದ್ರು ಎಲ್ಲಾರೂ  ಪಡಸಾಲಿಗೆ ಕಾಲಿಡ್ತಿರಲಿಲ್ಲ.
ಆರು ಮಂದಿ ಹುಡುಗರು ನಡೂ ಬೆಳೀತಿದ್ದ ನನಗ ಮೊದಲ ‘ಆ ದಿನಗಳು’ ದಿಗಿಲು ಹುಟ್ಟಿಸಿದ್ದು ಈ ಹಾಡಿನಿಂದಾಗಿ.   ಹಾಡೂದು ಹೆಂಗರೆ ಆಗ್ಲಿ, (ಯಾಕಂದ್ರ ಪ್ರತಿ ಹಾಡಿಗೂ ಒಂದು ಚಾಕ್ಲೇಟ್‌ ಬಾರ್‌ ಅನ್ನೂ ಒಪ್ಪಂದ ಇರ್ತಿತ್ತು.) ಆ ಮೇಕಪ್‌ನಿಂದಾಗಿ. ಆದ್ರ ಅದಕ್ಕಿಂತ ಮೊದಲು ಒಂದಷ್ಟು ಸುಣ್ಣ, ಬಣ್ಣ ಮೆತ್ತೂ ಹಂಗ ಮುಖಕ್ಕ ಮೇಕಪ್‌ ಮಾಡ್ತಿದ್ರಲ್ಲ, ಅದು ಬ್ಯಾಸರ ಹುಟ್ಟಸ್ತಿತ್ತು. ಇನ್ನ ಪ್ರತಿ ತಿಂಗಳೂ ಇದೇ ಹಾಡ? ಇದೇ ಪಾಡ? ಅನ್ನೂದೆ ದಿಗಿಲಾಗಿತ್ತು.

ಖಿಡಕಿಯಿಂದ ನಕ್ಕೊಂತ ಹೋಗುವ ನಮ್ಮಣ್ಣದ್ಯಾರಿಗೆ ನೋಡಿದ್ರ, ಹೋಗಿ ಬೆನ್ನಾಗ ಗುದ್ದ ಬೇಕು ಅನ್ನಸ್ತಿತ್ತು. ಆದ್ರ ಹಿಂದಾಗಡೆ ಅಮ್ಮನಿಗೆ ‘ಎಷ್ಟು ಹಾಡು ಹಾಡಸ್ತಿ?’ ಅಂತ ಬೈಯ್ದಾಗ ಅವರೇ ಆಪ್ತ ಅನ್ನಸ್ತಿದ್ರು. ಅಮ್ಮನಿಗಿಂತ.

ಅಮ್ಮನ ಜೋಡಿ ಅವರಮ್ಮನೂ ಬಂದು ಕೂಡಿದ್ರಂತೂ ಇದು, ಗೀತ್‌ ಮಾಲಾ ಆಗ್ತಿತ್ತು. ಮೂರು ಹಾಡು ಅಂದೋರು, ಐದಕ್ಕೇರೋರು. ಐದಕ್ಕೇ ಮುಗಸಬಾರದು ಅನ್ನೋರು ಏಳಕ್ಕ. ಏಳಕ್ಕ ಆರತಿ ಪದ ಬ್ಯಾಡನ್ನೋರು ಒಂಬತ್ತಕ್ಕ ಹೆಂಗರೆ ಮುಗಸೋರು.

ನಂಗರೆ ಮಾರಿ ತೊಳಕೊಂಡು, ಆ ಸೀರಿ, ಅಲಂಕಾರ ಎಲ್ಲಾ ತಗದೊಗದು, ಅಂಗಿ ಏರಸ್ಕೊಂಡು ನಮ್ಮಣ್ಣಂದ್ರ ಜೊತಿಗೆ ಆಡೂ ತವಕ.
ಆ ಹಲ್ಲಿಲ್ಲದ ಮುದಕ್ಯಾರು ಹಾಡೂದು ಕೇಳಬೇಕಂದ್ರ ಯಾಕರೆ ಹುಡುಗಿಯಾದ್ನೋ ಅಂತ ಒಂದಿಪ್ಪತ್ತು ಸಲ ಅನ್ನಸ್ತಿತ್ತು. ಕಣ್ಣಾನ ನೀರು ದಳದಳ ಇಳೀತಿದ್ವು. ಸಂಕೋಚ, ಅಸಹ್ಯ ಅನ್ನಸೂದರ ಜೊತಿಗೆ ಸಂಕಟಾನೂ ಸೇರಕೊಂಡು ಇಂಥ ನಿಟ್ಟುಸುರು ಬಿಕ್ಕಳಕಿಯಾಗಿ ಹೊರಗ ಬರ್ತಿದ್ವು. ‘ಹಸೀಮೈ ಹುಡುಗಿ, ಅಳ್ತದ, ಜರಾ ಹಾಡು ನಿಲ್ಲಸ್ರಿ’ ಅಂತ್ಹೇಳಿ ಆರತಿ ಪದ ಹೇಳಸೂದ್ರೊಳಗ ಸಮಾಧಾನ ಆಗ್ತಿತ್ತು.
ಅಷ್ಟರೊಳಗ ನನ್ನ ತಮ್ಮ ಫರ್ದಿನ್‌ ಬಂದು ಇಪ್ಪತ್ತ ಸಲೆ ಕೇಳಂವ. ‘ದೀದಿಕಾ ಹ್ಯಾಪ್ಪಿ ಬಡ್ಡೇ?’ ‘ಇಲ್ಲಾ, ಪುಟ್ಟಿ ದೊಡ್ಡಕಿ ಆಗ್ಯಾಳ’ ಅಂದ್ರ, ನನ್ನ ಮಗ್ಗಲ್ದಾಗ ನಿಂತು, ಭುಜಕ್ಕ ಭುಜ ಸಮಾ ಅದಾವಿಲ್ಲ ನೋಡಿ, ‘ಅಷ್ಟೇ ಅದಾಳ... ನಿನ್ನೀಯಷ್ಟೆ?’ ಅಂತ ಕೇಳ್ತಿದ್ದ.
ಹಂಗಹಿಂಗ ಹದಿಮೂರು ದಿನ ಕಳದು ಹೋಗಿದ್ವು.

ನಂಗೇನಾಗೇದ ಅನ್ನೂದು ನಂಗ ಗೊತ್ತಾಗೂದ್ರೊಳಗ ಒಂದು ವರ್ಷ ಕಳದು ಹೋಗಿತ್ತು. ಅಲ್ಲೀ ತನಾನೂ ‘ಅಮ್ಮಾ, ಮತ್ತ ಹಂಗ ಆಗೇದ’ ಅನ್ನೂದೊಂದೇ ಮಾತು ಹೊರಗ ಬರ್ತಿತ್ತು. ಹಾಡು, ಆರ್ತಿ, ಕರದಂಟು, ಅನ್ನ ತುಪ್ಪ ಮೆಂತ್ಯ ಹಿಟ್ಟು, ಅಂದ್ರ ಸಾಕು ಓಡಿ ಹೋಗಂಗ ಆಗಿತ್ತು.

ಯಾಕಂದ್ರ ಏನೇನೂ ಮಾಹಿತಿ ಇರಲಿಲ್ಲ. ಮಾಹಿತಿ ಬಿಡ್ರಿ, ಆ ಬಗ್ಗೆ ಮಾತೇ ಇರಲಿಲ್ಲ.  ಇನ್ನ ತಿಳಿಯೂದರೆ ಹೆಂಗ? ನಮ್ಮ ಚಿಕ್ಕಮ್ಮ ಅವಾಗ ಜೊತಿಗೆ ಇದ್ದಿದ್ದು ನಮಗನುಕೂಲವಾಗಿತ್ತು. ಇಲ್ಲಾಂದ್ರ ಅಮ್ಮನೊಟ್ಟಿಗೆ ಯವಾಗಲೂ ಜಗಳಾ ಮದ್ಲ. ಮಾತು ಆಮೇಲೆ ಅನ್ನೂ ಹಂಗಿತ್ತು. ನಂಗ ನೋವಾಗಿ ಅಳ್ತಿದ್ರ ನಮ್ಮವ್ವಾ ಖುಷಿಯಿಂದ ನಗ್ತಾಳ ಅನ್ನೂದೆ ಸಿಟ್ಟಿನ ಕಾರಣ ಆಗಿತ್ತು.

ಇದೆಲ್ಲ ಆಗಿ ಒಂದೆರಡು ದಶಕಗಳೇ ಕಳ್ದಾವ.  ಅದೇ ಚಿಕ್ಕಮ್ಮನ ಮಗಳು, ನಮ್ಮಕ್ಕ ಮೊನ್ನೆ ಮಗಳ ಕಪಾಟು ಸ್ವಚ್ಛ ಮಾಡೂ ಮುಂದ ಸ್ಯಾನಿಟರಿ ನ್ಯಾಪ್ಕಿನ್‌ ನೋಡಿ, ಗಾಬರಿಯಾಗಿ ಎಲ್ಲಾರಿಗೆ ಫೋನ್‌ ಮಾಡಿದ್ಲು. ಮಗಳು ಸಾಲಿಯಿಂದ ಹೊಳ್ಳಿ ಬರೂತನಾನೂ ಅಕಿಗೆ ಸಮಾಧಾನ ಇರಲಿಲ್ಲ. ‘ಯವಾಗಿಂದ ಬಳಸ್ತಾಳ? ಯಾರು ಹೇಳಿಕೊಟ್ಟರು? ಒಬ್ಬಕಿನೆ ಮಗಳು, ಒಂದು ಆರತಿ ಇಲ್ಲ, ಔತಣ ಇಲ್ಲ. ಹಸಿ ಮೈಯ್ಯಾಗ ಎಲ್ಲೆಲ್ಲಿ ಅಡ್ಡಾಡತೋ  ಕೂಸು’ ಅಂತ ಗಾಬರಿ ಮಾಡ್ಕೊಂಡಿದ್ಲು.

ಮನೀಗೆ ಬಂದ ಕೂಡಲೆ ಮಗಳಿಗೆ ಒಳಗ ದರದರ ಎಳಕೊಂಡು ಹೋಗಿ, ‘ಇವೇನು? ಯಾಕ ಬಂದಾವ’ ಅಂತ ಕೇಳಿದ ಕೂಡಲೆ, ಅಕ್ಕನ ಮಗಳು ಅಗ್ದಿ ನಿರ್ಲಕ್ಷ್ಯದಿಂದ ‘ನನ್ನೂವೆ. ಮೆನ್ಸ್ಟ್ರುವೇಶನ್‌ ಸೈಕಲ್‌ ಸುರು ಆಗೇತಿ.’  ಅಂತ ತಣ್ಣಗ ಹೇಳಿದ್ಲು. ‘ನಿಂಗ ಹೆದ್ರಿಕಿ ಆಗ್ಲಿಲ್ಲ? ನಂಗ್ಯಾಕ ಹೇಳಲಿಲ್ಲ?’ ಅಂತ ಕೇಳ್ಕೊಂತ ಅಳಾಕ ಸುರು ಮಾಡಿದ್ಲು.ಈ ಪುಟ್ಟ ಗೌರಿ, ಎಲ್ಲಾರಿಗೆ ಫೋನು ಮಾಡಿ, ‘ಅಮ್ಮಾಗ ಸಮಾಧಾನ ಮಾಡ್ರಿ. ಏನೋ ದೊಡ್ಡ ಅನಾಹುತ ಆಗೈತಿ ಅನ್ನೂಹಂಗ ಅಳ್ತಾಳ’ ಅಂತ ಹೇಳಿದ್ಲು.

ಆಮೇಲೆ ತಾನೇ ತನ್ನಮ್ಮಗ, ‘ನಮ್ಮ ಸಾಲ್ಯಾಗ ಐದು, ಆರನೆತ್ತೆಗೆ ಬಂದ ಕೂಡ್ಲೆ, ಗರ್ಲ್‌್ಸ ಕ್ಲಬ್‌ ಅಂತ ಮಾಡ್ತಾರ. ಈ ಮೆನ್ಸ್ಟ್ರುವೇಶನ್‌ ಸೈಕಲ್‌ ಬಗ್ಗೆ ತಿಳಿ ಹೇಳ್ತಾರ. ಹೈಜಿನಿಟಿ ಬಗ್ಗೆನೂ ಹೇಳ್ತಾರ. ನಾ ಗಟ್ಟಿ ಅದೇನಿ. ಅದಕ್ಕ ಹೊಟ್ಟಿ ಬ್ಯಾನಿ, ಸೊಂಟ ಬ್ಯಾನಿ ಅದೇನೂ ಆಗಲಿಲ್ಲ. ನಿಂಗೇನು ಹೇಳುವಂಥ ದೊಡ್ಡ ಮಾತು ಅನ್ನಸ್ಲಿಲ್ಲ. ನಿಂಗೇನು ಆಗ್ತೈತಿ, ಅದೇ ನನಗೂ ಆಗೈತಿ’ ಅಂತ ಒಂದೇ ಉಸರಿನಾಗ ಹೇಳಿ ಸುಮ್ಮನಾಗ್ಯಾಳ.

ನಮ್ಮಕ್ಕ ಅಕಿನ ತಿಳವಳಿಕಿಗೆ ಭೇಷ್‌ ಅನ್ಬೇಕೋ, ತನ್ನ ಸಂಪ್ರದಾಯದ ಮೂಲಗಳನ್ನು ಅಲುಗಾಡಿಸಿದ ಆಘಾತಕ್ಕ ಏನು ಅನ್ನಬೇಕೋ ತಿಳೀದೇ ಸುಮ್ನಾಗಿದ್ಲು. ಮುಂದೇನು ಮಾಡಬೇಕು? ಈ ಹುಡುಗಿ ನಕ್ಕಿ ಆರತಿ ಮಾಡಸ್ಕೊಳ್ಳೂದಿಲ್ಲ. ಮನೀ ಮೈಲಗಿ, ದೇವರ ಮೈಲಗಿ, ಪರಿಹಾರ ಹೆಂಗ ಹುಡುಕೂದು? ಯವಾಗ ಮೊದಲ ಆಗೈತಿ ಅಂತ ಕೇಳಿದ್ರ ಇನ್ನೊಂದಿಷ್ಟು ಗುರ್‌ ಅಂತಾಳ ಅಂದ್ಕೊಂಡು ನಮ್ಮಕ್ಕ ಅವತ್ತು ಸುಮ್ಮನಾದಳು.

ಮಗಳು ಸಾಲಿಗೆ ಹೋದ ಕೂಡಲೇ ಮತ್ತ ಸಾಲು ಹಿಡಿದು ಎಲ್ಲಾರಿಗೂ ಫೋನು. ಅಮ್ಮಗ, ಚಿಕ್ಕಮ್ಮಗ, ಏನು ಮಾಡಬೇಕು? ಏನು ಪರಿಹಾರ? 
ನೈಯೆಣ್ಣಿ ಸ್ನಾನಿಲ್ಲ. ಕರದಂಟಿನೂಟಿಲ್ಲ. ಅರಿಶಿನ ಹಚ್ಲಿಲ್ಲ. ಮದರಂಗಿ ಹಚ್ಗೊಲಿಲ್ಲ, ಹೆಂಗ ಎಲ್ಲಾ ತಾನೇ ತಿಳ್ಕೊಂತು ಈ ಹುಡುಗಿ ಅಂತ ಒಂದಿಪ್ಪತ್ತು ಸಲ, ವಿಚಾರ ಮಾಡೂದ್ರೊಳಗ, ಅಕಿ ಸಣ್ಣ ಮಗಾ, ‘ಅಕ್ಕಾ ಡೈಪರ್‌ ಹಾಕ್ಕೋತಾಳ’ ಅಂತ ಹೇಳೂದ. ಒನ್ನೆತ್ತೆ ಬಿನ್ನೆತ್ತೆ ಹುಡುಗ ಇಷ್ಟೆಲ್ಲ ಮಾತಾಡೂ ಮುಂದ ನಮಗ ನಾವೆಷ್ಟು ಮುಗ್ಧರಿದ್ವಿ ಅಥವಾ ವ್ಯವಸ್ಥೆ ಈಗೆಷ್ಟು ಮುಕ್ತ ಆಗೇದ ಅಂತ ಅನ್ನಸ್ದೇ ಇರಲಿಲ್ಲ.
ಒಂದು ಸಮಾಧಾನೇನಂದ್ರ, ಆ ದಿನಗಳ ಆತಂಕದೊಳಗ ನಮ್ಮ ಮಕ್ಳು ಇಲ್ಲ. ಅವರಿಗೆ ಆ ಸಂಕೋಚ, ಅಸಹ್ಯ ಎನಿಸುವ ಯಾವ ವಾತಾವರಣವೂ ಅವರೊಟ್ಟಿಗೆ ಇಲ್ಲ. ತಮ್ಮೊಳಗಿನ ಬದಲಾವಣೆ ಬರೀ ಒಂದು ಚಕ್ರ ಅಂತ ಸರಳಗೆ ಒಪ್ಗೊಳ್ಳುವ ಅವರ ಧಾಟಿ ಭಾಳ ಇಷ್ಟಾತು.

ಆದ್ರ, ನಮ್ಮಕ್ಕನ ಅಸಮಾಧಾನ ಒಂದಾರತಿ ಇಲ್ಲ, ಕರದಂಟಿಲ್ಲ, ಇಷ್ಟ... ಆತು. ಅನ್ನೂದೊಂದು ಕೊರತಿ ಅಕೀ ಮನಸನಾಗ ಉಳಕೊಂತು.
ಕೂಸಿನ ಮನಸಿನಾಗ ಉಳಿಯುವ ಆತಂಕಕ್ಕಿಂತ ಈ ಅಸಮಾಧಾನ ಶಾಶ್ವತವಲ್ಲ. ಆದ್ರ ಮಾತಿರದ, ಮಾಹಿತಿ ಇರದ ಆತಂಕ ಮಾತ್ರ ಕೊನೀ ತನಾನೂ ಉಳೀತದ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT