ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ ಕರಗಿ ಸಂತಸ ಮೂಡಿದಾಗ...

Last Updated 9 ಫೆಬ್ರುವರಿ 2016, 19:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕುಂದಗೋಳ ತಾಲ್ಲೂಕಿನ ಬೆಟದೂರಿನ ಆ ಮನೆಯ ಎದುರು ಐದು ದಿನಗಳಿಂದ ಜನಜಂಗುಳಿ. ಆ ಕುಟುಂಬದ ಸದಸ್ಯರ ಮೊಗದಲ್ಲಿ ನಾಲ್ಕು ದಿನಗಳಿಂದ ಮಡುಗಟ್ಟಿದ್ದ ಆತಂಕವೆಲ್ಲ ಮಂಗಳವಾರ ಕರಗಿ ಸಂತಸವಾಗಿ ಹರಿಯಿತು. ದುಗುಡದಲ್ಲೇ ಇದ್ದ ಊರಲ್ಲೂ ಸಂಭ್ರಮದ ವಾತಾವರಣ, ಜನರು ನಿರಾಳ.

ಸಿಯಾಚಿನ್‌ ಹಿಮಪಾತದಲ್ಲಿ ಸಿಲುಕಿದ್ದ ಬೆಟದೂರಿನ ಯೋಧ ಲ್ಯಾನ್ಸ್‌ನಾಯಕ್‌ ಹನುಮಂತಪ್ಪ ಕೊಪ್ಪದ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಅವರ ಕುಟುಂಬ ಸದಸ್ಯರ ಸಡಗರ ಮುಗಿಲು ಮುಟ್ಟಿತ್ತು.

ಮಂಗಳವಾರ ಬೆಳಗಿನ ಜಾವ ಎರಡು ಗಂಟೆಯಿಂದ ಮನೆಯಲ್ಲಿ ಮೊಬೈಲ್‌ ಫೋನ್‌ಗಳು ಸದ್ದು ಮಾಡುತ್ತಲೇ, ಸಿಹಿ ಸುದ್ದಿ ತಿಳಿದ ಅವರ ಪತ್ನಿ ಮತ್ತು ತಾಯಿಗೆ ತೀರದ ಸಂಭ್ರಮ. ಮಾಧ್ಯಮದವರು, ಜನಪ್ರತಿನಿಧಿಗಳು ಎಲ್ಲರೂ ಅವರ ಮನೆಯಲ್ಲಿ ಸೇರಿದಾಗ, ಅಪರಿಚಿತರ ಮುಖ ಕಂಡು ಗಾಬರಿಯಾಗಿದ್ದ ಕೊಪ್ಪದ ಅವರ ಒಂದೂವರೆ ವರ್ಷದ ಮಗಳು ನೇತ್ರಾಳ ಕಣ್ಣಲ್ಲಿ ಮಾತ್ರ ಭಯದ ಕಣ್ಣೀರಿತ್ತು!

‘ದೇವರಲ್ಲಿ ಹರಕೆ ಹೊತ್ತುಕೊಂಡಿದ್ದೆ. ಹರಕೆ ಫಲಿಸಿತು. ನನ್ನ ನಂಬಿಕೆ ಸುಳ್ಳಾಗಲಿಲ್ಲ’ ಎಂದು ಹೇಳುವಾಗ, ಹನುಮಂತಪ್ಪ ತಾಯಿ ಬಸವ್ವ ಕೊಪ್ಪದ ಅವರ ಕಣ್ಣಲ್ಲಿ ಆನಂದಬಾಷ್ಪವಿತ್ತು.

‘ಅವನು ಒಂಬತ್ತು ತಿಂಗಳು ಮಗುವಾಗಿದ್ದಾಲೇ ಅವನ ತಂದೆ ತೀರಿಕೊಂಡರು. ಕಷ್ಟದಲ್ಲಿಯೇ ಬೆಳೆದ ಹನುಮಂತಪ್ಪ, ನಮ್ಮನ್ನು ಸಲಹುವುದರೊಂದಿಗೆ ದೇಶ ಸೇವೆಯನ್ನೂ ಮಾಡುತ್ತಿದ್ದಾನೆ. ದೇವರ ಆಶೀರ್ವಾದ ಅವನನ್ನು ಕಾಪಾಡಿದೆ’ ಎಂದು ಅವರು ಗದ್ಗದಿತರಾದರು.

‘ಅಂತಹ ವೀರಯೋಧನ ಪತ್ನಿಯಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಯಾರು ಏನೇ ಹೇಳಿದರೂ, ನನ್ನ ಗಂಡ ಬದುಕಿದ್ದಾರೆ ಎಂದು ನನಗೆ ಅನಿಸುತ್ತಿತ್ತು.  ಇದು ಅವರಿಗೆ ಪುನರ್ಜನ್ಮ’ ಎಂದು ಹನುಮಂತಪ್ಪ ಅವರ ಪತ್ನಿ ಮಹಾದೇವಿ ಹೇಳುವಾಗ ಇನ್ನಿಲ್ಲದ ಸಡಗರ ಕಾಣುತ್ತಿತ್ತು.

‘ಜಿಲ್ಲಾಡಳಿತದಿಂದಾಗಲಿ, ಯಾವುದೇ ಅಧಿಕಾರಿಗಳಿಂದಾಗಲಿ ನಮಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ, ಮಾಧ್ಯಮಗಳಲ್ಲಿ ಸುದ್ದಿ ತಿಳಿದು ಸಂತಸವಾಗಿದೆ. ಸೈನ್ಯದಲ್ಲಿ ನನ್ನ ಪತಿಯೊಂದಿಗೆ ಕೆಲಸ ಮಾಡಿದವರೂ ಕರೆ ಮಾಡಿ ವಿಷಯ ತಿಳಿಸಿದರು. ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನಾವೂ ದೆಹಲಿಗೆ ಹೊರಟಿದ್ದೇವೆ’ ಎಂದು ಅವರು ಹೇಳಿದರು.

‘ಸಾವು ಬದುಕಿನ ನಡುವೆ ಹೋರಾಡಿ ಗೆದ್ದ ಊರ ಯೋಧನ ಬಗ್ಗೆ ಹೆಮ್ಮೆ ಎನಿಸುತ್ತಿದೆ. –60 ಡಿಗ್ರಿ ಸೆಲ್ಸಿಯಸ್‌ ವಾತಾವರಣದಲ್ಲಿ ಆರು ದಿನಗಳವರೆಗೆ ಇದ್ದು, ಸಾವು ಗೆದ್ದಿರುವುದು ಪವಾಡವೇ ಸರಿ’ ಎನ್ನುವ ಗ್ರಾಮಸ್ಥರಲ್ಲಿಯೂ ಸಂತಸ ಮನೆಮಾಡಿತ್ತು.

‘ಕಣ್ಮರೆ’ ಎಂದಷ್ಟೇ ಬರೆದಿದ್ದ ‘ಪ್ರಜಾವಾಣಿ’
ಸಿಯಾಚಿನ್‌ನ ಹಿಮಕುಸಿತದಲ್ಲಿ ಹನುಮಂತ ಕೊಪ್ಪದ ಸಿಲುಕಿದ್ದಾರೆ ಎಂಬ ಸುದ್ದಿ ತಿಳಿದಾಗಿನಿಂದ, ಬೆಟದೂರ ಯೋಧ ಕಣ್ಮರೆ ಎಂದಷ್ಟೇ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಫೆ. 7 ಮತ್ತು 8ರ ಸಂಚಿಕೆಯಲ್ಲಿ ಈ ವರದಿಗಳು ಪ್ರಕಟವಾಗಿವೆ. ಪತ್ರಿಕೆಯ ಈ ನಿಲುವಿಗೆ, ಕೊಪ್ಪದ ಅವರ ಸಂಬಂಧಿ ಮಂಜುನಾಥ ತಮ್ಮಣ್ಣವರ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT