ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ ಕೇಳುವ ಕಿವಿ ಬೇಕಾಗಿದೆ

Last Updated 17 ಜೂನ್ 2016, 19:30 IST
ಅಕ್ಷರ ಗಾತ್ರ

ನಮ್ಮಲ್ಲಿರುವುದು ಜ್ಞಾನ ಆಧಾರಿತ ಅರ್ಥ ವ್ಯವಸ್ಥೆ. ಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸುವ, ಬೆಳವಣಿಗೆ ಹೊಂದುವ ವ್ಯವಸ್ಥೆ ಇದು. ಜ್ಞಾನವನ್ನು ಹಣವನ್ನಾಗಿ ಪರಿವರ್ತಿಸಲು ಬಳಸಿಕೊಳ್ಳುವುದು ಭಾರತೀಯರಿಗೆ ಹೊಸದು.

ಆದರೆ, ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಾಯ್ದುಕೊಳ್ಳುವ ಈ ಕಾಲಘಟ್ಟಕ್ಕೆ ನಮ್ಮ ಮನಸ್ಥಿತಿ ಅಷ್ಟೊಂದು ಸೂಕ್ತವಲ್ಲ. ಜ್ಞಾನವನ್ನು ನಾವು ಹೇಗೆ ನೋಡುತ್ತೇವೆ, ಅದಕ್ಕೆ ಯಾವ ಬೆಲೆ ಕಟ್ಟುತ್ತೇವೆ ಎಂಬ ವಿಚಾರದಲ್ಲಿ ಮೂಲಭೂತ ಬದಲಾವಣೆ ಆಗಬೇಕು...

ಹೀಗೆ ಸಾಗುತ್ತವೆ ಕೇಂದ್ರ ಸರ್ಕಾರದ ಹೊಸ ‘ಬೌದ್ಧಿಕ ಆಸ್ತಿ ಹಕ್ಕು ನೀತಿ’ಯಲ್ಲಿನ ಸಾಲುಗಳು. ಹೊಸತನದ ಹುಡುಕಾಟಕ್ಕೆ ಉತ್ತೇಜನ, ಆ ಮೂಲಕ ಉದ್ಯಮಶೀಲತೆಗೆ ಪ್ರೋತ್ಸಾಹ ಕೊಡುವುದು, ಸಾಮಾಜಿಕ–ಆರ್ಥಿಕ, ಸಾಂಸ್ಕೃತಿಕ ಬೆಳವಣಿಗೆಗೆ ಕಾರಣವಾಗುವುದು ಈ ನೀತಿಯ ಉದ್ದೇಶ ಎಂದು ಕೇಂದ್ರ ಹೇಳಿದೆ.

ಆರೋಗ್ಯ ಸೇವೆಗಳು ಜನರಿಗೆ ಸುಲಭವಾಗಿ ಸಿಗುವಂತೆ ಆಗಬೇಕು, ದೇಶದ ಆಹಾರ ಭದ್ರತೆ ಕಾಯ್ದುಕೊಳ್ಳಬೇಕು, ಪರಿಸರ ಸಂರಕ್ಷಣೆ ಬಗ್ಗೆ ನಿಗಾ ಇಡಬೇಕು ಎಂಬುದೂ ಈ ನೀತಿಯ ಮೂಲ ಆಶಯಗಳಲ್ಲಿ ಸೇರಿವೆ. ಆದರೆ ನೀತಿಯ ಆಶಯವು ವಾಸ್ತವದಲ್ಲಿ ಸಾಕಾರಗೊಳ್ಳಬಹುದೇ? ಇದನ್ನು ಪರಿಶೀಲಿಸುವ ಮುನ್ನ, ಪೇಟೆಂಟ್‌ ವ್ಯವಸ್ಥೆಯ ಬಗ್ಗೆ ಅರೆಕ್ಷಣ ಬೇರೆಯದೊಂದು ನೋಟ ಹರಿಸುವುದು ಅಸಂಗತ ಆಗದಿರದು.

ಪೇಟೆಂಟ್‌ ವ್ಯವಸ್ಥೆ, ಅದಕ್ಕೆ ಸಂಬಂಧಿಸಿದ ಕಾನೂನುಗಳ ಕುರಿತಂತೆ 2015ರ ಆಗಸ್ಟ್‌ನಲ್ಲಿ ಒಂದು ಲೇಖನ ಪ್ರಕಟಿಸಿದ ‘ದಿ ಎಕನಾಮಿಸ್ಟ್‌’ ಪತ್ರಿಕೆ, ‘ಈ ವ್ಯವಸ್ಥೆ, ಕಾನೂನು ಪ್ರಗತಿಯ ಹೆಸರಿನಲ್ಲಿ ಕೆಲಸ ಮಾಡುತ್ತದೆ. ಆದರೆ, ಅದು ಹೊಸತನದ ಹುಡುಕಾಟಕ್ಕೆ ತಡೆಯಾಗಿ ನಿಂತಿದೆ. ಇಂಥ ವ್ಯವಸ್ಥೆಯನ್ನು ಸರಿಪಡಿಸಲು ಇದು ಕಾಲ’ ಎಂದು ಬರೆಯಿತು.

ಪೇಟೆಂಟ್‌ ವ್ಯವಸ್ಥೆಯ ಬಗ್ಗೆ ತೀವ್ರವಾದಿ ನಿಲುವು ಪ್ರತಿಪಾದಿಸಿದ ಪತ್ರಿಕೆ, ‘ಇಂಥ ವ್ಯವಸ್ಥೆಯನ್ನೇ ರದ್ದು ಮಾಡಬೇಕು. ನೀವು ಕಟ್ಟಿದ ಮನೆಯಲ್ಲಿ ಇನ್ನೊಬ್ಬ ಪಾಲು ಕೇಳಿದರೆ ನಿಮಗೆ ನೋವಾಗುವುದು ಸಹಜ.

ಆದರೆ, ನಿಮ್ಮ ಆಲೋಚನೆಯನ್ನು ನಿಮಗೆ ತೊಂದರೆ, ಅನ್ಯಾಯ ಆಗದ ರೀತಿ ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಅವಕಾಶ ಇದೆ. ಆಲೋಚನೆಗಳನ್ನು ಹಂಚಿಕೊಂಡಾಗ ಸಮಾಜಕ್ಕೆ ಬಹುದೊಡ್ಡ ಲಾಭ ಸಿಗುತ್ತದೆ. ಹಾಗಾಗಿ, ಇಂಥ ಕೆಲಸಕ್ಕೆ ಪ್ರಭುತ್ವವೇ ಮುಂದಾಗಬೇಕು’ ಎಂದು ಪ್ರತಿಪಾದಿಸಿತು.

ಐಪಿಆರ್‌ ಬಗ್ಗೆ ‘ದಿ ಎಕನಾಮಿಸ್ಟ್‌’ ಆಡಿರುವ ಮಾತುಗಳು, ಹೊಸ ನೀತಿಯ ಬಗ್ಗೆ ಕೇಂದ್ರ ಸರ್ಕಾರ ಹೇಳಿರುವ ಭರವಸೆಯ ಮಾತುಗಳನ್ನು ಮೆಲುಕು ಹಾಕುತ್ತಲೇ, ಈ ನೀತಿಯ ನಿರ್ದಿಷ್ಟ ಆಯಾಮಗಳ ಬಗ್ಗೆ ನೋಟ ಹರಿಸುವ ಅಗತ್ಯ ಇದೆ. ಕೇಂದ್ರದ ಐಪಿಆರ್‌ ನೀತಿಯಲ್ಲಿ ಆರೋಗ್ಯ ರಕ್ಷಣ ಔಷಧಗಳ ಬಗ್ಗೆ ಕೆಲವು ಮಾತುಗಳು ಬರುತ್ತವೆ.

ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ), ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ನಡುವೆ ಸಮನ್ವಯ ಸಾಧಿಸಿ ಕೈಗೆಟುಕುವ ದರದಲ್ಲಿ ಔಷಧ ಅಭಿವೃದ್ಧಿಪಡಿಸಬೇಕು, ಔಷಧ ಪರವಾನಗಿಗೆ ಹೊಸ ಮಾದರಿಗಳನ್ನು ರೂಪಿಸಬೇಕು ಎಂದು ನೀತಿ ಹೇಳುತ್ತದೆ.

ಕ್ಯಾನ್ಸರ್‌, ಹೃದ್ರೋಗದಂತಹ ಗಂಭೀರ ಕಾಯಿಲೆಗಳಿಗೆ ತುತ್ತಾದವರಿಗೆ ನೀಡುವ ಔಷಧಿಗಳಿಗೆ ಬೇಕಿರುವ ವಸ್ತುಗಳ ಆಮದು ಕಡಿಮೆಯಾಗಬೇಕು, ಅವುಗಳನ್ನು ದೇಶದಲ್ಲೇ ತಯಾರಿಸಲು ಉತ್ತೇಜನ ನೀಡಬೇಕು ಎಂದು ಹೇಳಲಾಗಿದೆ.

ಆದರೆ, ಈ ಆಶಯ ಈಡೇರಿಸುವಂತಹ ಅಂಶಗಳು ನೀತಿಯಲ್ಲಿ ಇಲ್ಲ ಎಂದು ಕೆಲವು ತಜ್ಞರು ಹೇಳುತ್ತಾರೆ. ‘ಈ ಅಂಶವೇ ಇಲ್ಲದಿದ್ದರೆ, ಭಾರತೀಯ ಔಷಧ ಉದ್ಯಮ ಇದರ ಬಗ್ಗೆ ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ಬಹು ರಾಷ್ಟ್ರಗಳಲ್ಲಿ ನೆಲೆ ಹೊಂದಿರುವ ಔಷಧ ಕಂಪೆನಿಗಳಿಗೆ ಮಾತ್ರ ಈ ನೀತಿಯಿಂದ ಪ್ರಯೋಜನ ಇದ್ದಂತಿದೆ’ ಎನ್ನುತ್ತಾರೆ ಮುಂಬೈ ಮೂಲದ ಐಪಿಆರ್‌ ಕಾರ್ಯಕರ್ತ ಕೆ.ಎಂ.ಗೋಪಕುಮಾರ್.

ಬೌದ್ಧಿಕ ಉತ್ಪನ್ನಗಳು ಸಾರ್ವಜನಿಕರ ಒಳಿತಿಗಾಗಿಯೂ ಬಳಕೆಯಾಗಬೇಕು, ಆ ಉತ್ಪನ್ನಗಳಿಗೊಂದು ರೂಪ ನೀಡುವವರಿಗೆ ಲಾಭ ಆಗುವಂತೆ ಐಪಿಆರ್‌ ನೀತಿ ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿಕೊಂಡಿದ್ದಾರೆ.

ಆದರೆ, ಈ ಮಾತನ್ನು ಒಪ್ಪಲು ಐಪಿಆರ್ ಕಾರ್ಯಕರ್ತರು ಸಿದ್ಧರಿಲ್ಲ. ಈ ನೀತಿಯು ಔಷಧೋದ್ಯಮಕ್ಕೆ ಸ್ಪಷ್ಟ ದಿಕ್ಕನ್ನೇ ತೋರಿಸಿಲ್ಲ. ಇದರಿಂದ ಉದ್ಯಮಕ್ಕೆ ಪ್ರಯೋಜನ ಇಲ್ಲ. ಹೊಸ ಔಷಧಗಳ ಲಭ್ಯತೆಯ ಮೇಲೆ ಇದು ದೂರಗಾಮಿ ಪರಿಣಾಮ ಬೀರುವುದು ಖಚಿತ ಎಂಬುದು ತಜ್ಞರ ಅಭಿಮತ.

ಐಪಿಆರ್‌ ನೀತಿಯು ಕಡಿಮೆ ವೆಚ್ಚದ, ಬ್ರ್ಯಾಂಡ್‌ ಇಲ್ಲದ ಔಷಧ ಉತ್ಪಾದನೆಯ ಬಗ್ಗೆ ಮಾತನಾಡುತ್ತದೆ. ಔಷಧ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆಗಳು ಆಗಬೇಕು ಎಂಬುದು ನೀತಿಯ ಆದ್ಯತೆಗಳಲ್ಲಿ ಒಂದು.

‘ಆದರೆ ಹೊಸ ನೀತಿಯು ದೇಶದ ಔಷಧ ಸಂಶೋಧನೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ದೇಶವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು, ಸಮಸ್ಯೆಯ ಭಾಗವಾಗುವ ಅಪಾಯವಿದೆ’ ಎಂದು ಐಪಿಆರ್‌ ಕಾರ್ಯಕರ್ತೆ ಲೀನಾ ಮೆಂಘಾನಿ  ಆತಂಕ ವ್ಯಕ್ತಪಡಿಸುತ್ತಾರೆ.

ಐಪಿಆರ್‌ ನೀತಿಯು ಈಗಿನ ಸ್ವರೂಪದಲ್ಲೇ ಅನುಷ್ಠಾನಕ್ಕೆ ಬಂದರೆ, ಹೊಸ ವೈದ್ಯಕೀಯ ಸಂಶೋಧನೆ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತದ ಪಾತ್ರ ಕುಗ್ಗಿಹೋಗುವ ಆತಂಕ ಇದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಐಪಿಆರ್‌ ಬಗ್ಗೆ ಭಾರತದ ಉದ್ಯಮ ವಲಯ ಮೇಲ್ನೋಟಕ್ಕೆ ಉತ್ಸಾಹದ ಪ್ರತಿಕ್ರಿಯೆ ನೀಡಿದೆ. ಆದರೆ ಇಲ್ಲಿ ಕೆಲವು ಸೂಕ್ಷ್ಮಗಳನ್ನು ಉದ್ಯಮ ವಲಯವೇ ಕಡೆಗಣಿಸಿದಂತಿದೆ.

‘ಪೇಟೆಂಟ್‌ ನೀಡುವಿಕೆ ಹೆಚ್ಚಾದರೆ, ಹೊಸತನದ ಹುಡುಕಾಟವೂ  ಹೆಚ್ಚಾಗುತ್ತದೆ ಎಂಬ ತಪ್ಪು ಗ್ರಹಿಕೆಯ ಆಧಾರದಲ್ಲಿ ಇಡೀ ನೀತಿಯನ್ನು ರೂಪಿಸಲಾಗಿದೆ. ಈ ಗ್ರಹಿಕೆ ಖಂಡಿತ ಸರಿಯಲ್ಲ ಎಂಬುದನ್ನು ಹಲವಾರು ಅಧ್ಯಯನಗಳು ಸ್ಪಷ್ಟಪಡಿಸಿವೆ.

ಐಪಿಆರ್‌ ಕರಡು ನೀತಿ ಪ್ರಕಟಿಸಿದಾಗ ಇದರ ಬಗ್ಗೆ ಸರ್ಕಾರದ ಗಮನಸೆಳೆಯುವ ಪ್ರಯತ್ನ ನಡೆಯಿತು. ಆದರೆ, ಸರ್ಕಾರ ತನ್ನ ಗ್ರಹಿಕೆ ಬದಲಿಸಿಕೊಳ್ಳಲಿಲ್ಲ’ ಎನ್ನುತ್ತಾರೆ ಸೆಂಟರ್‌ ಫಾರ್ ಇಂಟರ್‌ನೆಟ್‌ ಅಂಡ್‌ ಸೊಸೈಟಿಯ (ಸಿಐಎಸ್‌) ನೀತಿ ನಿರ್ದೇಶಕ ಪ್ರಾಣೇಶ್ ಪ್ರಕಾಶ್.

ದೇಶದಲ್ಲಿ ಗಣನೀಯ ಪ್ರಮಾಣದ ಸಂಶೋಧನೆಗಳು ಆಗುತ್ತಿರುವುದು ಸಾರ್ವಜನಿಕರ ಹಣದಿಂದ ನಡೆಯುತ್ತಿರುವ ಸಂಸ್ಥೆಗಳಲ್ಲಿ. ಬೌದ್ಧಿಕ ಆಸ್ತಿಯ ಹಕ್ಕುಸ್ವಾಮ್ಯ ಸ್ಥಾಪಿಸಲು ಐಪಿಆರ್‌ ಅನ್ನು ಹೆಚ್ಚೆಚ್ಚು ಬಳಸಿದಂತೆಲ್ಲ, ಅಂತಹ ಸಂಶೋಧನೆಗಳು ಸಾರ್ವಜನಿಕರಿಗೆ ದುರ್ಲಭಆಗುತ್ತವೆ. ಸಾರ್ವಜನಿಕರ ದುಡ್ಡಿನಿಂದ ನಡೆದ ಸಂಶೋಧನೆಯ ಅತ್ಯುತ್ತಮ ಉತ್ಪನ್ನಗಳು ಸಾರ್ವಜನಿಕರಿಗೇ ಲಭ್ಯವಾಗದಂತೆ ಆಗಬಹುದು.

ಹಾಗಾಗಿ, ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ನಡೆದ ಸಂಶೋಧನೆಯಿಂದ ಅಭಿವೃದ್ಧಿಪಡಿಸಿದ ಬೌದ್ಧಿಕ ಆಸ್ತಿಯ ಸ್ವಾಮಿತ್ವವು ಆ ಸಂಶೋಧನೆಗೆ ಹಣ ನೀಡಿದವರಿಗೇ (ಅಂದರೆ ಸರ್ಕಾರಕ್ಕೆ) ಸೇರಬೇಕು. ಆಗ ಸಾರ್ವಜನಿಕ ಹಿತ ಕಾಯ್ದಂತೆ ಆಗುತ್ತದೆ ಎಂದು ಸಿಐಎಸ್‌ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಈ ಅಂಶವನ್ನು ನೀತಿ ನಿರೂಪಕರು ಪರಿಗಣಿಸಿಲ್ಲ.

ಪಾರಂಪರಿಕ ವೈದ್ಯ ಪದ್ಧತಿ ನಮ್ಮಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಇದರ ಬಗ್ಗೆ ಎರಡು ಮಾತು ಇಲ್ಲ. ಈ ವೈದ್ಯಪದ್ಧತಿಗಳಲ್ಲಿ ಹಲವು, ಮೌಖಿಕ ಪರಂಪರೆಯ ಮೂಲಕ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹರಿದುಬಂದಿವೆ.

ಆಯುರ್ವೇದ, ಯೋಗ, ಯುನಾನಿ, ಪ್ರಕೃತಿ ಚಿಕಿತ್ಸೆಯಂತಹ ಪದ್ಧತಿಗಳು ಈಗ ಪುಸ್ತಕ ರೂಪದಲ್ಲಿ ದಾಖಲಾಗಿವೆ. ಆದರೆ ಇನ್ನೂ ಮೌಖಿಕ ರೂಪದಲ್ಲೇ ಇರುವ ವೈದ್ಯಪದ್ಧತಿಗಳೂ ಇವೆ ಎಂಬುದನ್ನು ಅಲ್ಲಗಳೆಯಲಾಗದು. ಇವೆಲ್ಲವನ್ನೂ ಸಂರಕ್ಷಿಸಬೇಕು, ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಐಪಿಆರ್‌  ಪ್ರತಿಪಾದಿಸಿರುವುದು ಸ್ವಾಗತಾರ್ಹ.

ಮನೆಬಾಗಿಲಿನಲ್ಲಿ ದೊರೆಯುವ ತುಳಸಿ, ಯೋಗದ ಕೆಲವು ನಿರ್ದಿಷ್ಟ ಆಸನಗಳು, ಧಾರ್ಮಿಕ ವಿಧಿ–ವಿಧಾನಗಳಲ್ಲಿ ಬಳಕೆಯಾಗುವ ಔಷಧೀಯ ಮಹತ್ವದ ವಸ್ತುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಹೊಸ ನೀತಿ ದಾಪುಗಾಲಾಗಿ ಕೆಲಸ ಮಾಡಬೇಕು. ಹಾಗಾದರೆ, ಸರ್ಕಾರದ್ದು ಸ್ತುತ್ಯರ್ಹ ಕೆಲಸವಾಗುತ್ತದೆ.

ನೀತಿಯ ಬಗ್ಗೆ ಸಾಕಷ್ಟು ಟೀಕೆಗಳನ್ನು ಪಟ್ಟಿ ಮಾಡಬಹುದು. ಹೊಗಳಿಕೆಗಳನ್ನೂ ಉಲ್ಲೇಖಿಸಬಹುದು. ಆದರೆ, ಇದು ಕಾರ್ಯರೂಪಕ್ಕೆ ಬರಬೇಕು ಎಂದಾದರೆ ದೇಶದ ಅನೇಕ ಕಾನೂನುಗಳಿಗೆ ತಿದ್ದುಪಡಿ ಆಗಬೇಕು. ಅದಕ್ಕೆ  ಮೊದಲು, ದೇಶದ ವಿವಿಧ ಕ್ಷೇತ್ರಗಳು ವ್ಯಕ್ತಪಡಿಸಿರುವ ಆತಂಕಗಳಿಗೆ ಕೇಂದ್ರ ಕಿವಿಗೊಡಬೇಕು.

ಜ್ಞಾನವನ್ನು ವಾಣಿಜ್ಯ ಉದ್ದೇಶದ ಆಸ್ತಿಯೆಂದು ಪರಿಗಣಿಸದ ಅಥವಾ ಹಾಗೆ ಪರಿಗಣಿಸುವ ಮನಸ್ಸು ಇಲ್ಲದ ದೇಶ ನಮ್ಮದು. ಇಲ್ಲಿ ಬೌದ್ಧಿಕ ಆಸ್ತಿ ಹಕ್ಕು ಎಂಬುದೇ ಹೊರಗಿನಿಂದ ಬಂದಿರುವ ಪರಿಕಲ್ಪನೆ. ಆದರೆ, ಕಾಲನ ಜೊತೆ ಹೆಜ್ಜೆ ಹಾಕದಿರಲು ಸಾಧ್ಯವಿಲ್ಲ.

ಹಾಗಾಗಿ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ನೀತಿ, ಕಾನೂನುಗಳು ಬೇಕೇಬೇಕು. ಇದನ್ನು ಗಮನದಲ್ಲಿಟ್ಟು, ಉದ್ಯಮ, ಬೌದ್ಧಿಕ ವಲಯದ ಅನಿಸಿಕೆಗಳನ್ನು ಆಲಿಸಿ, ಕಾನೂನುಗಳಿಗೆ ಸಮಗ್ರ ತಿದ್ದುಪಡಿ ಆಗಬೇಕು.

ನಡೆದುಬಂದ ದಾರಿ

2014 ಸೆಪ್ಟೆಂಬರ್:
ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ನೂತನ ‘ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕು’ ನೀತಿ ಕುರಿತು ಘೋಷಿಸಿದ್ದರು. ಮುಂಬರುವ ಆರು ತಿಂಗಳ ಒಳಗೆ ಇಂಥದ್ದೊಂದು ನೀತಿ ಜಾರಿಗೊಳ್ಳಲಿದೆ ಎಂದು ತಿಳಿಸಿದ್ದರು.

2014 ಅಕ್ಟೋಬರ್: ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ (ಡಿಐಪಿಪಿ) ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ಐಪಿಆರ್ ತಜ್ಞರ  ಸಮಿತಿಯನ್ನು ರಚಿಸಿತು.

2014 ಡಿಸೆಂಬರ್, 30: ವಾಣಿಜ್ಯ ಸಚಿವಾಲಯವು ಡಿಐಪಿಪಿಯ ಮೂಲಕ ರಾಷ್ಟ್ರೀಯ ಬೌದ್ಧಿಕ ಹಕ್ಕು ಕಾಯ್ದೆಯ ಮೊದಲ ಕರಡನ್ನು ಘೋಷಿಸಿ, ಇದರ ಕುರಿತು ಟೀಕೆ ಟಿಪ್ಪಣಿಗಳಿಗೆ 2015ರ ಜನವರಿ 30ರ ದಿನವನ್ನು ನಿಗದಿ ಮಾಡಿತು.

2015 ಏಪ್ರಿಲ್: ಐಪಿಆರ್‌ ತಜ್ಞರ ತಂಡವು ಅಂತಿಮ ಕರಡನ್ನು ಡಿಐಪಿಪಿಗೆ ಒಪ್ಪಿಸಿತು.

2016 ಮೇ: ಕೇಂದ್ರ ಸಂಪುಟದ ಅನುಮೋದನೆ ಪಡೆದ ಅಂತಿಮ ಪ್ರತಿಯನ್ನು ಸಾರ್ವಜನಿಕಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT