ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ ತರುವ ಸ್ಖಲನ

ಅಂಕುರ -20
Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಾನು 24 ವರ್ಷದ ಯುವಕ. ಮೂತ್ರ ವಿಸರ್ಜನೆಗೆ ಹೋದಾಗಲೆಲ್ಲ, ಬಿಳಿ ಬಣ್ಣದ ಅಂಟುಅಂಟಾದ ದ್ರವ ಸ್ರವಿಸುತ್ತದೆ. ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳುವ ಲಕ್ಷಣವೇ? ಮದುವೆಗೆ ಅನರ್ಹನೇ? ಇಂಥ ಹತ್ತು ಹಲವು ಪ್ರಶ್ನೆಗಳು ಇ–ಮೇಲ್‌ನಲ್ಲಿ ಓದುಗರಿಂದ ಬಂದಿವೆ. ಇದಕ್ಕೇನು ಕಾರಣವೆಂದು ಈ ವಾರ ಅರಿಯುವ.

ಪುರುಷನ ಜನನಾಂಗ ನೈಸರ್ಗಿಕವಾಗಿಯೇ ಸೋಜಿಗದ ಅಂಗವಾಗಿದೆ. ಇದರಲ್ಲಿ ಹಲವಾರು ಗ್ರಂಥಿಗಳು, ಹಲವಾರು ನರಗಳು ಒಟ್ಟಾಗಿ ಕಾರ್ಯ ನಿರ್ವಹಿಸುತ್ತವೆ. ಈ  ಹಾರ್ಮೋನು ಸ್ರವಿಸುವ ಗ್ರಂಥಿಗಳು, ನರಗಳು ಒಟ್ಟೊಟ್ಟಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಒಂದು ಪರಿಪೂರ್ಣ ಮಿಲನ ಮತ್ತು ಸಂತಾನೋತ್ಪತ್ತಿ ಸಾಧ್ಯ.

‘ಸ್ಪರ್ಮೋಟೊರಿಯಾ’ ಎಂಬ ಪರಿಸ್ಥಿತಿಯಲ್ಲಿ ಮೂತ್ರ  ಅಥವಾ ಮಲ ವಿಸರ್ಜಿಸುವಾಗ ವೀರ್ಯವು ಹೊರಬರುತ್ತದೆ. ಹೀಗೆ ನಿಯಂತ್ರಣವಿರದ ವೀರ್ಯ ಸ್ರವಿಸುವುದು ಪುರುಷರಲ್ಲಿ ಆತಂಕವನ್ನು ಸೃಷ್ಟಿಸುತ್ತದೆ. ಕೆಲವು ಸಂದರ್ಭದಲ್ಲಿ ಪ್ರೊಸ್ಟೇಟೊರಿಯಾ ಉಂಟಾದಾಗ ಮೂತ್ರ ಮತ್ತು ಮಲವಿಸರ್ಜನೆಯಾಗುವಾಗ ಬಿಳಿ ಅಂಟು ದ್ರವ ಸ್ರಾವವಾಗುತ್ತದೆ. ಇದರಲ್ಲಿ ವೀರ್ಯಾಣುಗಳಿರುವುದಿಲ್ಲ ಎನ್ನುವುದು ಗಮನೀಯ.

ಸಾಮಾನ್ಯವಾಗಿ ವೈದ್ಯಕೀಯ ಸಂದರ್ಭದಲ್ಲಿ ಪ್ರೊಸ್ಟೊಟೋರಿಯಾ, ಸ್ಪರ್ಮೋಟೆರಿಯಾ ನಂತರ ಕಾಣಿಸಿಕೊಳ್ಳುವ ಸಂದರ್ಭವಾಗಿದೆ. ಇದಕ್ಕೆ ಡಿಎಚ್‌ಎಟಿ ಸಿಂಡ್ರೋಮ್‌ (DHAT syndrome) ಎಂದೂ ಕರೆಯಲಾಗುತ್ತದೆ. ಈ ಪರಿಸ್ಥಿತಿಯು ಪುರುಷನನ್ನು ಅತೀವ ಆತಂಕಕ್ಕೆ ಎಡೆ ಮಾಡಿಕೊಡುತ್ತದೆ. ಬಹುತೇಕ ಯುವಕರಿಗೆ ಇದು ಮಿತಿಮೀರಿದ ಹಸ್ತಮೈಥುನದ ಪ್ರಭಾವ ಎಂದೂ ಮನವರಿಕೆ ಮಾಡಿಕೊಡುವ ಯತ್ನಗಳು ನಡೆಯುತ್ತವೆ. ಇದರಿಂದಾಗಿ ಆ ಯುವಕರು ಇನ್ನಷ್ಟು ಆತಂಕಕ್ಕೆ ಒಳಗಾಗುತ್ತಾರೆ. ಈ ನಿಯಂತ್ರಣವಿಲ್ಲದ ಸ್ರಾವಕ್ಕೆ ನಿಶ್ಯಕ್ತಿ ಅಥವಾ ತಮ್ಮ ದೇಹವನ್ನು ನಿಯಂತ್ರಿಸುವ ಶಕ್ತಿ ಇಲ್ಲದವರು, ಅಥವಾ ಹಸ್ತಮೈಥುನ ಮಾಡಿಕೊಳ್ಳುವ ಯುವಕರ ಸಾಂಸ್ಕೃತಿಕ ಹಿನ್ನೆಲೆಯೂ ಕಾರಣವಾಗಿರುತ್ತದೆ.

ರಾತ್ರಿಯ ಸ್ರಾವ, ಹೆಸರೇ ಸೂಚಿಸಿದಂತೆ ರಾತ್ರಿ ವೇಳೆಯಲ್ಲಿ ಮಾತ್ರವಾಗುತ್ತದೆ. ಈ ಸಂದರ್ಭದಲ್ಲಿ ಪುರುಷನು ನಿದ್ದೆಯಲ್ಲಿಯೇ ಉದ್ರೇಕಕ್ಕೆ ಒಳಗಾಗಿರುತ್ತಾನೆ. ಆಗ ಸಹಜವಾಗಿಯೇ ವೀರ್ಯ ಸ್ಖಲಿಸುತ್ತಾನೆ. ಕೆಲವೊಮ್ಮೆ ಪುರುಷನ ಒಳ ಉಡುಪುಗಳು, ಹಾಸಿಗೆಯೂ ಒದ್ದೆಯಾಗುವಷ್ಟು ಸ್ಖಲಿಸುತ್ತಾನೆ. ಇನ್ನು ಕೆಲವೊಮ್ಮೆ ಕೆಲವೇ ಹನಿಗಳಿಗೂ ಸೀಮಿತವಾಗಿರುತ್ತದೆ. ಹದಿಹರೆಯದ ಯುವಕರಲ್ಲಿ ಇಂಥ ಸ್ವಪ್ನ ಸ್ಖಲನ ಅಥವಾ ರಾತ್ರಿವೇಳೆಯ ಸ್ಖಲನಗಳು ಸಹಜವಾಗಿರುತ್ತವೆ. ಕೆಲವೊಮ್ಮೆ ಯಾವುದೇ ಕನಸುಗಳಿರದಿದ್ದರೂ, ಉದ್ರೇಕಕ್ಕೆ ಒಳಗಾಗದಿದ್ದರೂ ವೀರ್ಯ ಸ್ಖಲನವಾಗುತ್ತದೆ. ಇದು ವೀರ್ಯ ಸಂಗ್ರಹ ನಿರ್ವಹಣೆಯ ಒಂದು ವಿಧವೆಂದೂ ಹೇಳಬಹುದು.

ಕಾರಣಗಳು: ಭಾರತವು ಉಷ್ಣವಲಯದಲ್ಲಿರುವ ಪ್ರದೇಶವಾಗಿದೆ. ಸಾಮಾನ್ಯವಾಗಿ ದೇಹದ ತಾಪಮಾನ ಕಾಪಾಡಲು ಇಲ್ಲಿಯವರು ಮಸಾಲೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಆಹಾರ ಅಭ್ಯಾಸದಿಂದಾಗಿ ಸಾಮಾನ್ಯವಾಗಿ ಮಲಬದ್ಧತೆಯಿಂದ ನರಳುವವರ ಸಂಖ್ಯೆ ಹೆಚ್ಚಾಗಿದೆ. ಪೂರ್ವಾತ್ಯ ಪ್ರದೇಶಗಳಲ್ಲಿ ಪಾಶ್ಚಿಮಾತ್ಯ ಶೈಲಿಯ ಶೌಚಾಲಯಗಳಿರುವುದಿಲ್ಲ. ನೆಲಕ್ಕೆ ಅಂಟಿಕೊಂಡಿರುವಂಥ ಶೌಚಾಲಯಗಳಲ್ಲಿ ಪುರುಷರು ಕುಕ್ಕರುಕಾಲಿನ ಮೇಲೆ ಕೂರುವುದು ಅನಿವಾರ್ಯ. ಈ ಭಂಗಿಯಲ್ಲಿ ಕುಳಿತು, ಮಲವಿಸರ್ಜನೆಗೆಂದು ತಿಣುಕಿದಾಗ, ವೀರ್ಯ ಸ್ಖಲನವಾಗುವುದು ಸಹಜವಾಗಿದೆ. 

ಕೆಲವೊಮ್ಮೆ, ಮಲಬದ್ಧತೆಯಿಂದಾಗಿ ಪ್ರತಿದಿನದ ಶೌಚ ಮುಗಿಸುವುದರಲ್ಲಿಯೇ ಪುರುಷರು ನಿತ್ರಾಣಗೊಳ್ಳುತ್ತಾರೆ. ಒಂದುವೇಳೆ ನಿಯಂತ್ರಣವಿರದ ಸ್ಖಲನ ಪ್ರತಿನಿತ್ಯವೂ ಕಾಣಿಸಿಕೊಂಡರೆ ಅದನ್ನು ಸಮಸ್ಯೆಯ ಸ್ವರೂಪ ಪಡೆದಂತೆ. ಮಲಬದ್ಧತೆಗೆ ಔಷಧಿ ನೀಡುವುದರಿಂದಲೂ ಸ್ಪರ್ಮೋಟೋರಿಯಾ ಸಮಸ್ಯೆಯನ್ನು ಪರಿಹರಿಸಬಹುದು. ಕೆಲವು ಔಷಧಿಗಳಿಂದ ಇದಕ್ಕೆ ಚಿಕಿತ್ಸೆ ನೀಡಬಹುದಾಗಿದೆ.

ಲಕ್ಷಣಗಳು: ನಿಯಂತ್ರಣವಿರದ ವೀರ್ಯ ಸ್ಖಲನವು ಮೇಲಿಂದ ಮೇಲೆ ಆಗುತ್ತಿದ್ದರೆ ಅದು ಸ್ಪರ್ಮೋಟೊರಿಯಾದ ಲಕ್ಷಣವೆಂದೇ ಹೇಳಬೇಕು. ಇದರೊಂದಿಗೆ ಇತರ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಕಾಮಾಸಕ್ತಿ ಕ್ಷೀಣಿಸುತ್ತದೆ. ಉದ್ರೇಕದ ಮಟ್ಟದಲ್ಲಿ ಕಡಿಮೆಯಾಗುತ್ತದೆ. ಜನನಾಂಗದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಶೀಘ್ರಸ್ಖಲನವಾಗುತ್ತದೆ. ಮಲವಿಸರ್ಜನೆಯ ನಂತರ ಗುದದ್ವಾರದಲ್ಲಿ ಉರಿತ ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ತಲೆನೋವು, ಬೆನ್ನು ನೋವು, ನಿಶ್ಯಕ್ತಿ, ದೃಷ್ಟಿ ಮಂದವಾಗುತ್ತದೆ. ವಿಪರೀತ ಮೈ ಬೆವರುತ್ತದೆ. ನಿದ್ರಾಹೀನರಾಗುತ್ತಾರೆ. ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಕಾಮಾಸಕ್ತಿ ಕ್ಷೀಣಿಸುತ್ತದೆ. ದೈಹಿಕ ನಿಶ್ಯಕ್ತಿಗೆ ಒಳಗಾಗುತ್ತಾರೆ.

ಚಿಕಿತ್ಸೆ (Treatment)
ನರವ್ಯೂಹ ವ್ಯವಸ್ಥೆಯಲ್ಲಿ ಅಥವಾ ಬೆನ್ನು ಹುರಿಯಲ್ಲಿ ಸಮಸ್ಯೆ ಇದ್ದರೂ ಸ್ಪರ್ಮೋಟೋರಿಯಾದಿಂದ ಬಳಲಬಹುದಾಗಿದೆ. ಕೆಗೆಲ್ಸ್‌ ವ್ಯಾಯಾಮವನ್ನು ಕಲಿಸಿಕೊಡಲಾಗುತ್ತದೆ. ಇದರಿಂದ ಪುರುಷರು ತಮ್ಮ ಸ್ನಾಯುಗಳನ್ನು ಬಲಗೊಳ್ಳಿಸಬಹುದು. ಸ್ನಾಯುಗಳ ಮೇಲೆ ನಿಯಂತ್ರಣ ಸಾಧಿಸಬಲ್ಲವು.

ಮಲಬದ್ಧತೆಗೆ ಔಷಧಿಗಳನ್ನು ಬರೆದುಕೊಡಲಾಗುವುದು. ಆಹಾರ ಪದ್ಧತಿಯಲ್ಲಿ ಬದಲಾವಣೆ ತರಬೇಕಿರುವುದು ಅತ್ಯವಶ್ಯ. ಸ್ನಾಯುಗಳ ಆರೋಗ್ಯಕ್ಕೆ ವ್ಯಾಯಾಮ ಮಾಡಲು, ದೇಹದಂಡನೆಯಲ್ಲಿ ತೊಡಗಿಸಲು ಸೂಚಿಸಲಾಗುವುದು. ಪ್ರಾಸ್ಟೇಟ್‌ ಸಂಬಂಧಿ ಸಮಸ್ಯೆಗಳಿವೆಯೇ ಎಂದು ತಪಾಸಣೆ ಮಾಡಲಾಗುವುದು. ಕೌಪರ್ಸ್‌ ಗ್ಲಾಂಡ್‌ ಬಗ್ಗೆಯೂ ತಪಾಸಣೆ ಮಾಡಲಾಗುವುದು.

ಮುನ್ನೆಚ್ಚರಿಕೆ ಕ್ರಮ
*ಮದ್ಯಪಾನ ಮತ್ತು ಮಸಾಲೆಯುಕ್ತ ಆಹಾರದಿಂದ ದೂರ ಇರಬೇಕು.
*ಮಲಬದ್ಧತೆಯಾಗದಂತೆ ಎಚ್ಚರವಹಿಸಬೇಕು.
*ರಾತ್ರಿ ಊಟವನ್ನು ಕಡಿಮೆ ಮಾಡಬೇಕು. ಊಟದ ನಂತರ ಕಡ್ಡಾಯವಾಗಿ ಎರಡು ಗ್ಲಾಸು ನೀರು ಕುಡಿಯಬೇಕು. ಉಗುರು ಬಿಸಿ ನೀರಾಗಿದ್ದರೆ ಇನ್ನೂ ಒಳಿತು.

ಇವನ್ನು ಹೇರಳವಾಗಿ ಸೇವಿಸಿ
ಬೆಳ್ಳುಳ್ಳಿ:
ಬೆಳ್ಳುಳ್ಳಿಯಲ್ಲಿರುವ ಅಲ್ಲಿಸಿನ್‌ ಎನ್ನುವ ಅಂಶವು ಜನನಾಂಗಕ್ಕೆ ಹೆಚ್ಚು ರಕ್ತ ಸರಬರಾಜು ಮಾಡುವಂತೆ ಮಾಡುತ್ತದೆ. ಕಾಮಾಸಕ್ತಿ ಕ್ಷೀಣಿಸದು. ಮತ್ತು ವೀರ್ಯವೃದ್ಧಿಯಾಗುತ್ತದೆ.

* ಬೆಟ್ಟದ ಸೊಪ್ಪು ಎಂದು ಕರೆಯಲಾಗುವ ಸೆಲೆರಿಯನ್ನು ಸೇವಿಸಬೇಕು. ಇದರಲ್ಲಿರುವ ಆ್ಯಂಡ್ರೋಸ್ಟೆರೋನ್‌ ಅಂಶವನ್ನು ಹೊಂದಿದೆ. ಇದು ಪುರುಷರ ವಾಸನಾರಹಿತ ಬೆವರಿನ ಮೂಲಕ ಸ್ರವಿಸುತ್ತಿರುತ್ತದೆ.

ಬಾಳೆಹಣ್ಣು: ಬಾಳೆಹಣ್ಣಿನಲ್ಲಿರುವ ಬ್ರೊಮಿಲೈನ್‌ ಹಾಗೂ ಪೊಟ್ಯಾಶಿಯಮ್‌ ಅಂಶವು ಕಾಮಾಸಕ್ತಿ ಕ್ಷೀಣಿಸದಂತೆ ಕಾಪಾಡುತ್ತದೆ.
ಕಲ್ಲಂಗಡಿ: ಕಲ್ಲಂಗಡಿಯಲ್ಲಿ ಸಿಟ್ರುಲೈನ್‌ ಎಂದು ಕರೆಯಲಾಗುವ ಫೈಟೊನ್ಯುಟ್ರಿಯಂಟ್ಸ್‌ ಅಂಶ ಹೇರಳವಾಗಿದೆ. ಇದು ನೈಟ್ರಿಕ್‌ ಆಕ್ಸೈಡ್‌ ಜೊತೆಗೆ ಬೆರೆತು ರಕ್ತನಾಳಗಳಿಗೆ ಅರಾಮದಾಯಕ ಅನುಭವ ನೀಡುವ ಕೆಲಸ ಮಾಡುತ್ತವೆ. ರಕ್ತವನ್ನು ತಿಳಿಗೊಳಿಸಿ, ಸರಾಗವಾದ ಸರಬರಾಜಿಗೆ ಸಹಾಯಕವಾಗುತ್ತವೆ. ಇದರಿಂದ ಜನನಾಂಗಕ್ಕೆ ಹೆಚ್ಚು ರಕ್ತ ಪೂರೈಕೆಯಾಗಿ ಪೂರ್ಣ ಪ್ರಮಾಣದ ಉದ್ರೇಕ ಕಂಡು ಬರುತ್ತದೆ.

ಅವೊಕ್ಯಾಡೊ: ಈ ಹಣ್ಣುಗಳಲ್ಲಿ ಫೋಲಿಕ್‌ ಆ್ಯಸಿಡ್‌ ಅಂಶ ಹೆಚ್ಚಾಗಿದ್ದು, ಚಯಾಪಚಯ ಕ್ರಿಯೆಗೆ ಉದ್ದೀಪಿಸುತ್ತದೆ. ವಿಟಾಮಿನ್‌ ಬಿ6 ಸಹ ಹೆಚ್ಚಾಗಿರುವುದರಿಂದ ಟೆಸ್ಟೊಸ್ಟೆರಾನ್‌ ಅಂಶದ ಉತ್ಪತ್ತಿ ಹೆಚ್ಚಾಗುತ್ತದೆ.
ಮಾಹಿತಿಗೆ: info@manipalankur.com 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT