ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಿಥೇಯರಿಗೆ ಸರಣಿ ಜಯ

ಕ್ರಿಕೆಟ್‌: ಅಶ್ವಿನ್‌ ಸ್ಪಿನ್‌ ಮೋಡಿ, ಲಂಕಾ 82 ರನ್‌ಗೆ ಆಲೌಟ್‌
Last Updated 14 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ (ಪಿಟಿಐ/ ಐಎಎನ್‌ಎಸ್‌): ಭಾರತದ ಆಫ್‌ ಸ್‍ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರು ಭಾನುವಾರ ಬಂದರು ನಾಡಿನ ವೈ.ಎಸ್‌. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡಿದರು.

ಅವರ ಜೀವನ ಶ್ರೇಷ್ಠ ಬೌಲಿಂಗ್‌ (4–1–8–4) ಸಾಧನೆಯ ಬಲದಿಂದ ಆತಿಥೇಯ ತಂಡ  ಮೂರನೇ ಹಾಗೂ ಅಂತಿಮ ಟ್ವೆಂಟಿ–20 ಪಂದ್ಯದಲ್ಲಿ  9 ವಿಕೆಟ್‌ಗಳಿಂದ ಸಿಂಹಳೀಯ ನಾಡಿನ ತಂಡದ ಸದ್ದಡಗಿಸಿತು. ಇದರೊಂದಿಗೆ ದೋನಿ ಬಳಗ 3 ಪಂದ್ಯಗಳ ಸರಣಿಯನ್ನು 2–1ರಲ್ಲಿ ಗೆದ್ದುಕೊಂಡಿತು.

ವಿಶಾಖಪಟ್ಟಣದ ಅಂಗಳದಲ್ಲಿ ರಾತ್ರಿ ಇಬ್ಬನಿ ಬೀಳುವುದರಿಂದ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡುವುದು ಕಷ್ಟ. ಈ  ಅಂಶವನ್ನು ಅರಿತಿದ್ದ ದೋನಿ ಭಾನುವಾರ ಟಾಸ್‌ ಗೆದ್ದು ಎದುರಾಳಿ ತಂಡಕ್ಕೆ ಬ್ಯಾಟಿಂಗ್‌ ಆಹ್ವಾನ ನೀಡಿದರು.

ಸಿಂಹಳೀಯ ನಾಡಿನ ತಂಡವನ್ನು 18 ಓವರ್‌ಗಳಲ್ಲಿ 82ರನ್‌ಗಳಿಗೆ ಕಟ್ಟಿ ಹಾಕಿದ ಆತಿಥೇಯ ಬೌಲರ್‌ಗಳು ನಾಯಕನ ನಿರ್ಧಾರವನ್ನು ಸಮರ್ಥಿಸಿ ಕೊಂಡರು. ಇದು ಟ್ವೆಂಟಿ–20 ಮಾದರಿಯಲ್ಲಿ ಲಂಕಾ ಗಳಿಸಿದ ಅತಿ ಕಡಿಮೆ ಮೊತ್ತ ಎನಿಸಿದೆ.

ಎದುರಾಳಿಗಳನ್ನು ಬೇಗನೆ ಆಲೌಟ್‌ ಮಾಡಿದ ಖುಷಿಯೊಂದಿಗೆ ಕಣಕ್ಕಿಳಿದ ಮಹಿ ಪಡೆ  13.5 ಓವರ್‌ಗಳಲ್ಲಿ   1 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

ಅಶ್ವಿನ್‌ ವಿಕೆಟ್‌ ಬೇಟೆ: ಪ್ರತಿ ಪಂದ್ಯದಲ್ಲಿ ಒಂದಿಲ್ಲೊಂದು ಪ್ರಯೋಗಕ್ಕೆ ಮುಂದಾಗುವ ದೋನಿ ಹೊಸ ಚೆಂಡನ್ನು ಅಶ್ವಿನ್‌ ಕೈಗಿತ್ತರು. ಅವರ ಈ ತಂತ್ರ ಮೊದಲ ಓವರ್‌ನಲ್ಲೇ ಫಲ ನೀಡಿತು. ಅಶ್ವಿನ್‌ ಓವರ್‌ನ ಮೂರು ಮತ್ತು ಆರನೇ ಎಸೆತಗಳಲ್ಲಿ ಕ್ರಮವಾಗಿ ನಿರೋಷನ್‌ ಡಿಕ್ವೆಲ್ಲಾ (1) ಮತ್ತು ತಿಲಕರತ್ನೆ ದಿಲ್ಶಾನ್‌ (1) ಅವರನ್ನು ಪೆವಿಲಿಯನ್‌ಗಟ್ಟಿದರು.

ತಮ್ಮ ಮರು ಓವರ್‌ನಲ್ಲಿ ಅವರು ಲಂಕಾ ತಂಡಕ್ಕೆ ಮತ್ತೊಂದು ಆಘಾತ ನೀಡಿದರು. ಆಟಕ್ಕೆ ಕುದುರಿಕೊಳ್ಳುವ ಹಾದಿಯಲ್ಲಿದ್ದ ದಿನೇಶ್‌ ಚಾಂಡಿಮಲ್‌ (8) ಹಾರ್ದಿಕ್‌ ಪಾಂಡ್ಯ ಹಿಡಿದ ಸುಲಭ ಕ್ಯಾಚ್‌ಗೆ ಬಲಿಯಾದರು.

ಆ ಬಳಿಕ ತಂಡ ಕುಸಿತದ ಹಾದಿ ಹಿಡಿಯಿತು. ಅಸೆಲ ಗುಣರತ್ನೆ (4) ಹೀಗೆ ಬಂದು ಹಾಗೆ ಹೋದರು. ಇವರು ನಾಲ್ಕನೇ ವಿಕೆಟ್‌ ರೂಪದಲ್ಲಿ ಅಶ್ವಿನ್‌ಗೆ ಬಲಿಯಾದರು. ಮಿಲಿಂದಾ ಸಿರಿವರ್ಧನ (4) ಅವರನ್ನು ಅನುಭವಿ ನೆಹ್ರಾ ಬೌಲ್ಡ್‌ ಮಾಡಿದರು.  ಆಗ ತಂಡದ ಮೊತ್ತ 5 ವಿಕೆಟ್‌ಗೆ 21ರನ್‌ . ಆ ಬಳಿಕ ದಸುನ್‌ ಶನಕ (19; 24ಎ, 1ಬೌಂ, 2ಸಿ) ಮತ್ತು ತಿಸಾರ ಪೆರೆರಾ (12; 20ಎ, 1ಬೌಂ) ಆತಿಥೇಯರ ಬೌಲಿಂಗ್‌ ದಾಳಿಯನ್ನು ಎದುರಿಸಿ ನಿಲ್ಲುವ ಸೂಚನೆ ನೀಡಿದ್ದರು.

ಯುವರಾಜ್‌ ಸಿಂಗ್  ಹಾಕಿದ 8ನೇ ಓವರ್‌ನಲ್ಲಿ ದಸುನ್‌ ಎರಡು ಸಿಕ್ಸರ್‌ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ  ಜಡೇಜ ತಾವೆಸೆದ ವೈಯಕ್ತಿಕ ಮೂರನೇ ಓವರ್‌ನಲ್ಲಿ ದಸುನ್‌  ವಿಕೆಟ್‌ ಎಗರಿಸಿ ದರು.

ದಿಟ್ಟ ಆರಂಭ:  ಗುರಿ ಬೆನ್ನಟ್ಟಿದ ಭಾರತಕ್ಕೆ ರೋಹಿತ್‌ ಶರ್ಮಾ (13; 13ಎ, 1ಬೌಂ, 1ಸಿ) ಮತ್ತು ಶಿಖರ್‌ ಧವನ್‌ (ಔಟಾಗದೆ 46; 46ಎ, 5ಬೌಂ, 1ಸಿ) ದಿಟ್ಟ ಆರಂಭ ಒದಗಿಸಿದರು.  ತಂಡದ ಮೊತ್ತ 29ರನ್‌ ಆಗಿದ್ದಾಗ ರೋಹಿತ್‌,  ದುಷ್ಮಂತ ಚಾಮೀರಾಗೆ ವಿಕೆಟ್‌ ಒಪ್ಪಿಸಿದರು.
ಬಳಿಕ ಧವನ್‌ ಮತ್ತು ಅಜಿಂಕ್ಯ ರಹಾನೆ (ಔಟಾಗದೆ 22; 24ಎ, 1ಬೌಂ) ಯಾವುದೇ ಅಪಾಯಕ್ಕೆ ಆಸ್ಪದ ನೀಡದೆ ತಂಡವನ್ನು ಗೆಲುವಿನ ರೇಖೆ ಮುಟ್ಟಿಸಿದರು.

ಸ್ಕೋರ್‌ಕಾರ್ಡ್‌
ಶ್ರೀಲಂಕಾ  82  (18 ಓವರ್‌ಗಳಲ್ಲಿ)

ನಿರೋಷನ್‌ ಡಿಕ್ವೆಲ್ಲಾ  ಸ್ಟಂಪ್ಡ್‌ ದೋನಿ ಸಿ ಆರ್‌. ಅಶ್ವಿನ್‌  01
ತಿಲಕರತ್ನೆ ದಿಲ್ಶಾನ್‌ ಎಲ್‌ಬಿಡಬ್ಲ್ಯು ಬಿ ಆರ್‌. ಅಶ್ವಿನ್‌  01
ದಿನೇಶ್‌ ಚಾಂಡಿಮಲ್‌ ಸಿ ಹಾರ್ದಿಕ್‌ ಪಾಂಡ್ಯ ಬಿ ಆರ್‌. ಅಶ್ವಿನ್‌  08
ಅಸೆಲ ಗುಣರತ್ನೆ ಸಿ ಸುರೇಶ್‌ ರೈನಾ ಬಿ ಆರ್‌. ಅಶ್ವಿನ್‌  04
ಮಿಲಿಂದಾ ಸಿರಿವರ್ಧನ ಬಿ ಆಶಿಶ್‌ ನೆಹ್ರಾ  04
ದಸುನ್‌ ಶನಕ ಬಿ ರವೀಂದ್ರ ಜಡೇಜ  19
ಸೀಕುಗೆ ಪ್ರಸನ್ನ ರನ್‌ಔಟ್‌ (ರವೀಂದ್ರ ಜಡೇಜ)  09
ತಿಸಾರ ಪೆರೆರಾ ಸಿ ರವೀಂದ್ರ ಜಡೇಜ ಬಿ ಸುರೇಶ್‌್ ರೈನಾ  12
ಸಚಿತ್ರ ಸೇನನಾಯಕೆ ಸಿ ದೋನಿ ಬಿ ಸುರೇಶ್‌ ರೈನಾ  08
ದುಷ್ಮಂತ ಚಾಮೀರ ಔಟಾಗದೆ  09
ದಿಲ್‌ಹರಾ ಫರ್ನಾಂಡೊ ಬಿ ಜಸ್‌ಪ್ರೀತ್‌ ಬೂಮ್ರಾ  01

ಇತರೆ: (ಲೆಗ್‌ ಬೈ –2, ವೈಡ್‌–3, ನೋಬಾಲ್‌–1)  06
ವಿಕೆಟ್‌ ಪತನ: 1–2 (ಡಿಕ್ವೆಲ್ಲಾ; 0.3), 2–3 (ದಿಲ್ಶಾನ್‌; 0.6), 3–12 (ಚಾಂಡಿಮಲ್‌; 2.1), 4–20 (ಗುಣರತ್ನೆ; 4.2), 5–21 (ಸಿರಿವರ್ಧನ; 5.1), 6–48 (ಪ್ರಸನ್ನ; 7.5), 7–54 (ಶನಕ; 10.3), 8–72 (ಸೇನನಾಯಕೆ; 15.2), 9–73 (ಪೆರೆರಾ; 15.4), 10–82 (ಫರ್ನಾಂಡೊ; 17.6).
ಬೌಲಿಂಗ್‌: ಆರ್‌. ಅಶ್ವಿನ್‌ 4–1–8–4, ಆಶಿಶ್‌ ನೆಹ್ರಾ 2–0–17–1, ಜಸ್‌ಪ್ರೀತ್ ಬೂಮ್ರಾ 3–0–10–1, ರವೀಂದ್ರ ಜಡೇಜ 4–1–11–1, ಯುವರಾಜ್‌ ಸಿಂಗ್‌ 1–0–15–0, ಹಾರ್ದಿಕ್‌ ಪಾಂಡ್ಯ 2–0–13–0, ಸುರೇಶ್‌ ರೈನಾ 2–0–6–2.


ಭಾರತ 1 ಕ್ಕೆ 84  (13.5 ಓವರ್‌ಗಳಲ್ಲಿ)
ರೋಹಿತ್‌ ಶರ್ಮಾ ಎಲ್‌ಬಿಡಬ್ಲ್ಯು ಬಿ. ದುಷ್ಮಂತ ಚಾಮೀರ 13
ಶಿಖರ್ ಧವನ್‌ ಔಟಾಗದೆ   46
ಅಜಿಂಕ್ಯ ರಹಾನೆ ಔಟಾಗದೆ 22

ಇತರೆ: (ಲೆಗ್‌ ಬೈ–3) 03
ವಿಕೆಟ್‌ ಪತನ:  1–29 (ರೋಹಿತ್‌; 5.2).
ಬೌಲಿಂಗ್‌: ಸಚಿತ್ರ ಸೇನನಾಯಕೆ 4–0–22–0, ದಿಲ್‌ಹರಾ ಫರ್ನಾಂಡೊ        2–0–7–0, ದುಷ್ಮಂತ ಚಾಮೀರ  2–0–14–1, ಸೀಕುಗೆ ಪ್ರಸನ್ನ  1–0–3–0, ಮಿಲಿಂದಾ ಸಿರಿವರ್ಧನ  1–0–9–0, ಅಸೆಲ ಗುಣರತ್ನೆ  2.5–0–22–0, ತಿಲಕರತ್ನೆ ದಿಲ್ಶಾನ್‌ 1–0–4–0.

ಫಲಿತಾಂಶ:   ಭಾರತಕ್ಕೆ 9 ವಿಕೆಟ್‌ ಗೆಲುವು.

ಪಂದ್ಯಶ್ರೇಷ್ಠ: ಆರ್‌. ಅಶ್ವಿನ್‌
ಸರಣಿ ಶ್ರೇಷ್ಠ : ಆರ್‌. ಅಶ್ವಿನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT