ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಿಥೇಯರಿಗೆ ಸರಣಿ ಜಯದ ಕನಸು

ಕ್ರಿಕೆಟ್‌: ಜಮ್ತಾ ‘ಸ್ಪಿನ್ ಸುಳಿ’ಯ ಭೀತಿಯಲ್ಲಿ ಆಮ್ಲಾ ಬಳಗ; ಸ್ಟೇಯ್ನ್ ಅಲಭ್ಯ
Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ನಾಗಪುರ: ‘ಸ್ಪಿನ್ ಸುಳಿ’ಯಲ್ಲಿ ಎದುರಾಳಿ ಗಳನ್ನು ಮುಳುಗಿಸಿ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ವಿರಾಟ್ ಬಳಗ ಇದ್ದರೆ, ಎಂಟು ವರ್ಷಗಳ ನಂತರ ‘ಸರಣಿ ಸೋಲು’ ಕಾಣುವ ಭಯದಲ್ಲಿ ದಕ್ಷಿಣ ಆಫ್ರಿಕಾ ಇದೆ.

ಜಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆ ಅಂಗಳದಲ್ಲಿ ಬುಧವಾರ ಆರಂಭವಾಗ ಲಿರುವ ಮಹಾತ್ಮಾ ಗಾಂಧಿ–ನೆಲ್ಸನ್ ಮಂಡೇಲಾ ಕ್ರಿಕೆಟ್ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಕುತೂಹಲ ಕೆರಳಿಸಿರುವ ಪ್ರಮುಖ ಅಂಶವಿದು.

2007–08ನೇ ಸಾಲಿನಿಂದ ಇಲ್ಲಿಯವರೆಗೆ ಹರಿಣಗಳ ನಾಡಿನ ಬಳಗವು ಎಲ್ಲ ದೇಶಗಳನ್ನೂ ಸುತ್ತಿ ಬಂದಿದೆ. ಅಲ್ಲಿ ಆಡಿದ ಟೆಸ್ಟ್‌ ಸರಣಿಗಳಲ್ಲಿ ಕೆಲವು ಪಂದ್ಯಗಳನ್ನು ಸೋತಿದೆ. ಕೆಲವು ಡ್ರಾ ಆಗಿವೆ. ಅದರೆ, ಸರಣಿ ಸೋತಿಲ್ಲ.

ಭಾರತಕ್ಕೆ 2007–08 ಮತ್ತು 2009–10ರಲ್ಲಿ ಎರಡೂ ಬಾರಿ ಸರಣಿಯನ್ನು ಸಮ ಮಾಡಿಕೊಂಡು ಹೋಗಿದೆ. ಆದರೆ, ಈ ಬಾರಿ ಹಾಶೀಮ್ ಆಮ್ಲಾ ನಾಯಕತ್ವದ ಬಳಗಕ್ಕೆ ಅಂತಹ ಅವಕಾಶ ನೀಡಲು ಆತಿಥೇಯರು ಸಿದ್ಧರಿಲ್ಲ.  ಕ್ರಿಕೆಟ್‌ ಜಗತ್ತಿನ ‘ಅತ್ಯುತ್ತಮ ಪ್ರವಾಸಿ ತಂಡ’ ಎಂಬ ದಕ್ಷಿಣ ಆಫ್ರಿಕಾ ತಂಡದ ಹೆಗ್ಗಳಿಕೆಯನ್ನು ಮಣ್ಣು ಮುಕ್ಕಿಸಲು ನಾಗಪುರ ಅಂಗಳ ಸಿದ್ಧ ವಾಗಿದೆ.

ಮಂಗಳವಾರ ಬೆಳಿಗ್ಗೆ ಭಾರತದ ‘ಸ್ಪಿನ್ ತ್ರಿವಳಿ’ ಆರ್. ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಮಿತ್ ಮಿಶ್ರಾ ಭರ್ತಿ ತಾಲೀಮು ನಡೆಸಿ ತಮ್ಮ ಅಸ್ತ್ರಗಳಿಗೆ ಸಾಣೆ ಹಿಡಿದರು. ಇತ್ತ  ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ ಮತ್ತು  ಪೂಜಾರ ಸ್ಲಿಪ್ ಕ್ಯಾಚಿಂಗ್ ಮತ್ತು ಡೈವಿಂಗ್ ಅಭ್ಯಾಸದಲ್ಲಿ ತಲ್ಲೀನರಾಗಿದ್ದರು.

ಆತಿಥೇಯರ ಸ್ಪಿನ್  ಮತ್ತು  ಚುರುಕಿನ ಕ್ಷೇತ್ರರಕ್ಷಣೆಯೇ ಇಲ್ಲಿಯ ವರೆಗೆ ಅಮ್ಲಾ  ಪಡೆಗೆ  ತಲೆನೋವಾಗಿದೆ.  ಮೊಹಾಲಿ ಟೆಸ್ಟ್‌ನಲ್ಲಿ ಮೂರೇ ದಿನದಲ್ಲಿ ಆಟ ಮುಗಿದಿತ್ತು. ಸ್ಪಿನ್‌ತ್ರಯರು  ಎದುರಾಳಿ ತಂಡವನ್ನು ದೂಳೀಪಟ ಮಾಡಿದ್ದರು.
ಬೆಂಗಳೂರಿನಲ್ಲಿ ಮಳೆಯಿಂದಾಗಿ ನಾಲ್ಕು ದಿನಗಳ ಪಂದ್ಯವು ನಡೆಯಲಿಲ್ಲ.

ಅಮಿತ್ ಮಿಶ್ರಾ ಇರದಿದ್ದ ಆ ಪಂದ್ಯದಲ್ಲಿ ಅಶ್ವಿನ್ ಮತ್ತು ಜಡೇಜಾ ಇಬ್ಬರೇ ಮೊದಲ ದಿನ ತಲಾ ನಾಲ್ಕು ವಿಕೆಟ್ ಪಡೆ ದಿದ್ದರು.  ಮಳೆ ಬರದೇ ಹೋಗಿದ್ದರೆ, ಭಾರತ 2–0 ಮುನ್ನಡೆ ಸಾಧಿಸುವ ಅವಕಾಶ ಇತ್ತು. ಆಗ ಮೂರನೇ ಪಂದ್ಯದಲ್ಲಿ ಭಾರತಕ್ಕೆ ಹೆಚ್ಚು ಒತ್ತಡ ಇರುತ್ತಿರಲಿಲ್ಲ. ಆದರೆ, ಈಗ ಸ್ವಲ್ಪ ಒತ್ತಡ ಬಿದ್ದಿದೆ.  ಅದಕ್ಕೆ ಕಾರಣ ನಾಗಪುರ ಅಂಗಳದ ಅಂಕಿ ಅಂಶಗಳು.

ಅದೃಷ್ಟದಂಗಳ: ವಿಸಿಎ ಮೈದಾನ ದಲ್ಲಿ ಭಾರತವು ಇದುವರೆಗೆ ನಾಲ್ಕು ಟೆಸ್ಟ್‌ಗಳನ್ನು ಆಡಿದೆ. ಅದರಲ್ಲಿ ಎರಡರಲ್ಲಿ (2008ರಲ್ಲಿ ಆಸ್ಟ್ರೇಲಿಯಾ ಹಾಗೂ 2010ರಲ್ಲಿ ನ್ಯೂಜಿಲೆಂಡ್ ಎದುರು) ಗೆಲುವು ಸಾಧಿಸಿದೆ.  ಐದು ವರ್ಷಗಳ ಹಿಂದೆ ಇಲ್ಲಿ ಗ್ರೆಮ್ ಸ್ಮಿತ್ ನಾಯಕತ್ವದ ದಕ್ಷಿಣ ಆಫ್ರಿಕಾ ಗೆದ್ದಿತ್ತು. ಆಗ  ದ್ವಿಶತಕದ ಮಿಂಚು ಹರಿಸಿದ್ದ ಹಾಶೀಮ್ ಆಮ್ಲಾ ಈಗ ತಂಡದ ನಾಯಕರಾಗಿ ಇಲ್ಲಿಗೆ ಮರಳಿದ್ದಾರೆ.

ಈ ಬಾರಿಯೂ ಅವರಿಗೆ ಈ ಅಂಗಳವು ಕೈಹಿಡಿಯುವುದೇ ಎಂಬುದನ್ನು ಕಾದು ನೋಡಬೇಕು. ಏಕೆಂದರೆ, ಅಂದು ತಮ್ಮ ಬಿರುಗಾಳಿ ವೇಗದ ಬೌಲಿಂಗ್ ಮೂಲಕ ಮಹೇಂದ್ರ ಸಿಂಗ್ ದೋನಿ ಬಳಗವನ್ನು ಹೆಡೆಮುರಿ ಕಟ್ಟಿ ಒಗೆದಿದ್ದ ಡೇಲ್ ಸ್ಟೇಯ್ನ್ (ಒಟ್ಟು 10 ವಿಕೆಟ್) ಗಾಯದಿಂದ ಚೇತರಿಸಿ ಕೊಂಡಿಲ್ಲ. ಮೊಹಾಲಿ ಪಂದ್ಯದಲ್ಲಿ ಗಾಯಗೊಂಡಿದ್ದ ಅವರು ಬೆಂಗಳೂರಿನಲ್ಲಿಯೂ ಕಣಕ್ಕಿಳಿ ದಿರಲಿಲ್ಲ.

ಇಲ್ಲಿಯೂ ಆಡುವ ಸಾಧ್ಯತೆ ಯಿಲ್ಲ. ವೆರ್ನಾನ್ ಫಿಲ್ಯಾಂಡರ್ ಕೂಡ ಗಾಯಗೊಂಡು ಸ್ವದೇಶಕ್ಕೆ ಮರಳಿದ್ದಾರೆ. ಮಾರ್ನೆ ಮಾರ್ಕೆಲ್. ಕಗಿಸೊ ರಬಾಡ ಅವರ ಮೇಲೆ ಜವಾಬ್ದಾರಿಯಿದೆ. ಆದರೆ, ಸ್ಪಿನ್ನರ್‌ಗಳ ಆಡುಂಬೋಲವಾಗುವ ಲಕ್ಷಣಗಳು ಇರುವ ವಿಸಿಎದಲ್ಲಿ ಸೈಮನ್ ಹಾರ್ಮರ್ ಮತ್ತು ತಾಹೀರ್ ಮೇಲೆ ಹೆಚ್ಚು ಒತ್ತಡವಿದೆ. ಸಾಂದರ್ಭಿಕ ಸ್ಪಿನ್ನರ್‌ ಗಳಾದ ಡೀನ್ ಎಲ್ಗರ್, ಜೆ.ಪಿ. ಡುಮಿನಿ ಅವರ ಪಾತ್ರವೂ ಮುಖ್ಯವಾಗಲಿದೆ.

ಆದರೆ, ಪ್ರವಾಸಿ ಬಳಗದ ಬ್ಯಾಟಿಂಗ್ ಪಡೆ ಭಾರತದ ಸ್ಪಿನ್ ಎದುರಿಸಲು ಮಾನಸಿಕವಾಗಿ ಸಿದ್ಧರಾದರೆ, ಪಂದ್ಯಕ್ಕೆ ಮಹತ್ವದ ತಿರುವು ಸಿಗುವುದು ಖಚಿತ. ಬೆಂಗಳೂರಿನಲ್ಲಿ 100ನೇ ಟೆಸ್ಟ್ ಆಡಿದ್ದ ಎ.ಬಿ. ಡಿವಿಲಿಯರ್ಸ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಡೀನ್ ಎಲ್ಗರ್, ಜಿ.ಪಿ. ಡುಮಿನಿ ಹೊರತುಪಡಿಸಿದರೆ ಉಳಿದ ವರು ದಿಟ್ಟ ಆಟ ತೋರಿಸಿಲ್ಲ. ಹೆಚ್ಚು ತಿರುವು ಇರದ ಎಸೆತಗಳನ್ನು ತಪ್ಪು ಹೊಡೆತಗಳಿಂದ ಆಡಲು ಹೋಗಿ ವಿಕೆಟ್ ಒಪ್ಪಿಸಿದ್ದಾರೆ. ಫಾಫ್ ಡು ಪ್ಲೆಸಿ, ಆಮ್ಲಾ, ಡೇನ್ ವಿಲಾಸ್,  ವಾನ್ ಜಿಲ್ ಫಾರ್ಮ್ ಕಂಡುಕೊಂಡರೆ ಭಾರತಕ್ಕೆ ತಿರುಗೇಟು ನೀಡಬಹುದು..

ಮೊಹಾಲಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಅತಿಥೇಯರು ಬೆಂಗ ಳೂರಿನಲ್ಲಿ ಭರವಸೆ ಮೂಡಿಸಿದ್ದರು. ಶಿಖರ್ ಧವನ್ ಫಾರ್ಮ್‌ಗೆ ಮರಳಿದ್ದರು. ಮುರಳಿ ವಿಜಯ್, ಚೇತೇಶ್ವರ್ ಪೂಜಾರ ಎರಡೂ ಪಂದ್ಯಗಳಲ್ಲಿಯೂ ಕಲಾತ್ಮಕ ಆಟದ ಅಹ್ವಾದತೆಯನ್ನು ಪಸರಿಸಿದ್ದರು. ವಿಕೆಟ್‌ ಕೀಪರ್ ವೃದ್ಧಿಮಾನ್ ಸಹಾ  ಬ್ಯಾಟಿಂಗ್‌ನಲ್ಲಿ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ.

ಆದರೆ, ನಾಯಕ ಕೊಹ್ಲಿ ಫಾರ್ಮ್‌ಗೆ ಮರಳಲು ಇದು ಸೂಕ್ತ ವೇದಿಕೆ. 2012ರಲ್ಲಿ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಶತಕ ಬಾರಿಸಿ ದ್ದನ್ನು ಇಲ್ಲಿಯ ಜನ ಮರೆತಿಲ್ಲ. ಮೂರು ಸ್ಪಿನ್ನರ್‌ ಮತ್ತು ಇಬ್ಬರು ವೇಗಿಗಳೊಂದಿಗೆ ತಂಡ ಕಣಕ್ಕಿಳಿದರೆ, ಕರ್ನಾಟಕದ ಸ್ಟುವರ್ಟ್‌ ಬಿನ್ನಿ ಅಡುವುದು ಸಂದೇಹ. ಕೆ.ಎಲ್. ರಾಹುಲ್‌ ಪ್ಯಾಡ್ ಕಟ್ಟುವುದೂ ಅನುಮಾನ. ಮಧ್ಯಮವೇಗಿ ಉಮೇಶ್ ಯಾದವ್‌ ತವರಿನಲ್ಲಿ ಟೆಸ್ಟ್ ಅಡುವ ಆಸೆ ಈಡೇರುವುದು ಖಚಿತವಿಲ್ಲ.

ಸಂಭವನೀಯ ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಅಮಿತ್ ಮಿಶ್ರಾ, ರವಿಚಂದ್ರನ್ ಅಶ್ವಿನ್, ಸ್ಟುವರ್ಟ್ ಬಿನ್ನಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಕೆ.ಎಲ್. ರಾಹುಲ್, ಭುವನೇಶ್ವರ್ ಕುಮಾರ್, ರೋಹಿತ್‌ ಶರ್ಮಾ, ಗುರುಕೀರತ್ ಸಿಂಗ್ ಮಾನ್.
ದಕ್ಷಿಣ ಆಫ್ರಿಕಾ: ಹಾಶೀಮ್ ಆಮ್ಲಾ (ನಾಯಕ), ಡೀನ್ ಎಲ್ಗರ್, ಸ್ಟಿಯಾನ್ ವಾನ್ ಜಿಲ್,ವೇ ಎ.ಬಿ. ಡಿವಿಲಿಯರ್ಸ್, ಫಾಫ್ ಡು ಪ್ಲೆಸಿ, ಜೆ.ಪಿ. ಡುಮಿನಿ, ಡೇನ್ ವಿಲಾಸ್, ಕೈಲ್ ಅಬಾಟ್, ಕಗಿಸೊ ರಬಾಡ, ಮಾರ್ನೆ ಮಾರ್ಕೆಲ್., ಇಮ್ರಾನ್ ತಾಹೀರ್, ಬವೂಮಾ ತೇಂಬಾ, ಮರ್ಚಂಟ್ ಡಿ ಲೇಂಜ್, ಸೈಮನ್ ಹಾರ್ಮರ್, ಡೇನ್ ಪಿಯೆಡ್ತ್, ಡೇಲ್  ಸ್ಟೇಯ್ನ್.
ಅಂಪೈರ್‌ಗಳು ಇಯಾನ್ ಗೌಲ್ಡ್ (ಇಂಗ್ಲೆಂಡ್), ಬ್ರೂಸ್ ಓವೆನ್‌ಫೀಲ್ಡ್ (ಆಸ್ಟ್ರೇಲಿಯಾ), ಮೂರನೇ ಅಂಪೈರ್: ಅನಿಲ್ ಚೌಧರಿ, ಮ್ಯಾಚ್ ರೆಫರಿ: ಜೆಫ್‌ ಕ್ರೋವ್ (ನ್ಯೂಜಿಲೆಂಡ್)
ಪಂದ್ಯದ ಆರಂಭ: ಬೆಳಿಗ್ಗೆ 9.30
ನೇರಪ್ರಸಾರ : ಸ್ಟಾರ್ ಸ್ಪೋರ್ಟ್ಸ್ 1,2, 3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT