ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಿಥೇಯರಿಗೆ ಹರಿಣಗಳ ತಂಡದ ಸವಾಲು

ಕ್ರಿಕೆಟ್‌: ಇಂದು ಭಾರತ–ದಕ್ಷಿಣ ಆಫ್ರಿಕಾ ಅಭ್ಯಾಸ ಪಂದ್ಯ, ವಿಶ್ವಾಸದಲ್ಲಿ ದೋನಿ ಪಡೆ
Last Updated 11 ಮಾರ್ಚ್ 2016, 19:55 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ತವರಿನ ನೆಲದಲ್ಲಿ ವಿಶ್ವ ಟ್ವೆಂಟಿ–20 ಟ್ರೋಫಿ ಎತ್ತಿ ಹಿಡಿಯುವ ಮಹಾದಾಸೆ ಹೊತ್ತಿರುವ ಭಾರತ ತಂಡಕ್ಕೆ ಈಗ ಮತ್ತೊಂದು ಸವಾಲು ಎದುರಾಗಿದೆ.

ಶನಿವಾರ ನಡೆಯುವ ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲಿ ಮಹೇಂದ್ರ ಸಿಂಗ್‌ ದೋನಿ ಬಳಗ ಬಲಿಷ್ಠ ದಕ್ಷಿಣ ಆಫ್ರಿಕಾದ ವಿರುದ್ಧ ಪೈಪೋಟಿ ನಡೆಸಲಿದ್ದು ಜಯದ ಮಂತ್ರ ಜಪಿಸುತ್ತಿದೆ.

ಗುರುವಾರ ನಡೆದಿದ್ದ ಮೊದಲ ಅಭ್ಯಾಸ ಪಂದ್ಯದಲ್ಲಿ ಅಷ್ಟೇನು ಬಲಿಷ್ಠವಲ್ಲದ ವೆಸ್ಟ್‌ ಇಂಡೀಸ್‌ ಎದುರು ಸುಲಭ ಗೆಲುವು ಗಳಿಸಿದ್ದ ಮಹಿ ಪಡೆಗೆ ಹರಿಣಗಳ ನಾಡಿನ ಎದುರಿನ ಪಂದ್ಯ ಅಗ್ನಿ ಪರೀಕ್ಷೆ ಎನಿಸಿದೆ.

ಈ ಪಂದ್ಯದ ಬಳಿಕ ಭಾರತ ತಂಡ ಮಾರ್ಚ್‌ 15 ರಂದು ನಡೆಯುವ ಸೂಪರ್‌–10 ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. ಕಿವೀಸ್‌ ನಾಡಿನ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡದ ಸಾಮರ್ಥ್ಯವನ್ನು ಒರೆಗೆ ಹಚ್ಚಲು ದೋನಿ ಬಳಗಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ವೇದಿಕೆ ಎನಿಸಿದೆ.

ಮಹತ್ವದ ಟೂರ್ನಿಗೂ ಮುನ್ನ ಆಯೋಜನೆಯಾಗಿದ್ದ ಆಸ್ಟ್ರೇಲಿಯಾ ಮತ್ತು ಲಂಕಾ ವಿರುದ್ಧದ ಸರಣಿ ಹಾಗೂ ಏಷ್ಯಾಕಪ್‌ನಲ್ಲಿ ಭಾರತ ತಂಡ ಅಮೋಘ ಸಾಮರ್ಥ್ಯ ತೋರಿ ಪ್ರಶಸ್ತಿ ಗೆದ್ದಿದೆ.  ಹಿಂದಿನ ಈ ಗೆಲುವುಗಳ ಬಲದೊಂದಿಗೆ ಶನಿವಾರ ತಂಡ ಕಣಕ್ಕಿಳಿಯಲಿದೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಯುವರಾಜ್‌ ಸಿಂಗ್‌, ಶಿಖರ್‌ ಧವನ್‌  ಸುರೇಶ್‌ ರೈನಾ ಮತ್ತು ನಾಯಕ ದೋನಿ ಬ್ಯಾಟಿಂಗ್‌ನಲ್ಲಿ ಆತಿಥೇಯರ ಬಲ ಎನಿಸಿದ್ದಾರೆ.

ವಿಂಡೀಸ್‌ ವಿರುದ್ಧದ  ಪಂದ್ಯದಲ್ಲಿ ರೋಹಿತ್‌ ಅಕ್ಷರಶಃ ಅಬ್ಬರಿಸಿದ್ದರು. ಮುಂಬೈನ ಆಟಗಾರ 57 ಎಸೆತಗಳಲ್ಲಿ ಅಜೇಯ 98ರನ್‌ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಧವನ್‌ ಮತ್ತು ಯುವರಾಜ್‌ ಕೂಡಾ ತಮ್ಮ ಸ್ಫೋಟಕ ಆಟದ ಮೂಲಕ ಕೆರಿಬಿಯನ್‌ ನಾಡಿನ ಬೌಲರ್‌ಗಳನ್ನು ಕಾಡಿದ್ದರು.

ಈ ಬ್ಯಾಟ್ಸ್‌ಮನ್‌ಗಳು ಹಿಂದಿನ ಲಯವನ್ನು ಮುಂದುವರಿಸಿದ್ದೇ ಆದಲ್ಲಿ ವಾಂಖೆಡೆ ಮೈದಾನದಲ್ಲಿ ಶನಿವಾರ ರನ್‌ ಮಳೆ ಸುರಿಯುವುದಂತೂ ನಿಜ. ಅಜಿಂಕ್ಯ ರಹಾನೆ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಬ್ಯಾಟಿಂಗ್‌ ವೈಫಲ್ಯ ದೋನಿ ಚಿಂತೆಗೆ ಕಾರಣವಾಗಿದೆ. ವಿಂಡೀಸ್‌ ವಿರುದ್ಧ ದೋನಿ, ಕೊಹ್ಲಿಗೆ ಬ್ಯಾಟಿಂಗ್‌ ಅವಕಾಶ ನೀಡಿರಲಿಲ್ಲ.  ಅವರ ಬದಲಿಗೆ ರಹಾನೆಗೆ ಮೂರನೇ ಕ್ರಮಾಂಕದಲ್ಲಿ ಆಡಲು ಅನುವು ಮಾಡಿಕೊಟ್ಟಿದ್ದರು. ಆದರೆ ರಹಾನೆ  ಕೇವಲ 7ರನ್‌ ಗಳಿಸಿ ನಿರಾಸೆ ಮೂಡಿಸಿದ್ದರು ಪಾಂಡ್ಯ ಕೂಡಾ ಶೂನ್ಯಕ್ಕೆ ಔಟಾಗಿದ್ದರು.

ನ್ಯೂಜಿಲೆಂಡ್‌ ಪಂದ್ಯಕ್ಕೂ ಮುನ್ನ ಲಯ ಕಂಡುಕೊಳ್ಳಲು ಇವರಿಬ್ಬರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಮಹತ್ವದ್ದೆನಿಸಿದೆ.  ಬೌಲಿಂಗ್‌ನಲ್ಲಿ ತಂಡ ಬಲಿಷ್ಠ ವಾಗಿದೆ. ಗಾಯಕ್ಕೊಳಗಾಗಿದ್ದ ಮೊಹಮ್ಮದ್‌ ಶಮಿ ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಎರಡು ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದರು. ಜಸ್‌ಪ್ರೀತ್‌ ಬೂಮ್ರಾ, ಪವನ್‌ ನೇಗಿ, ರವೀಂದ್ರ ಜಡೇಜ ಮತ್ತು ಹಾರ್ದಿಕ್‌ ಪಾಂಡ್ಯ ಅವರೂ ತಲಾ ಎರಡು ವಿಕೆಟ್‌ ಉರುಳಿಸಿ ಮಿಂಚಿದ್ದರು.  ಇವರು ಹರಿಣಗಳ ನಾಡಿನ ಬ್ಯಾಟ್ಸ್‌ಮನ್‌ ಗಳನ್ನು ಬೇಗನೆ ಕಟ್ಟಿಹಾಕುವ ಉತ್ಸಾಹದಲ್ಲಿದ್ದಾರೆ.

ವಿಶ್ವಾಸದಲ್ಲಿ ದ. ಆಫ್ರಿಕಾ:  ಭಾರತಕ್ಕೆ ಬರುವ ಮುನ್ನ ದಕ್ಷಿಣ ಆಫ್ರಿಕಾ ತಂಡ 1–2ರಿಂದ ಆಸ್ಟ್ರೇಲಿಯಾ ಎದುರಿನ ಸರಣಿ ಸೋತಿತ್ತು. ಈ ಸೋಲು ಆಟಗಾರರ ವಿಶ್ವಾಸಕ್ಕೆ ಪೆಟ್ಟು ನೀಡಿರುವುದು ಸುಳ್ಳಲ್ಲ. ಈ ನಿರಾಸೆಯಿಂದ ಹೊರಬರಬೇಕಾ ದರೆ ಭಾರತ ವಿರುದ್ಧ ಗೆಲುವು ಗಳಿಸುವುದು ಪ್ರವಾಸಿ ತಂಡಕ್ಕೆ ಬಹಳ ಅಗತ್ಯ.

‘ಚೋಕರ್ಸ್‌’ ಹಣೆಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ಏಕದಿನ ವಿಶ್ವಕಪ್‌ ಮತ್ತು ವಿಶ್ವ ಟ್ವೆಂಟಿ–20 ಟೂರ್ನಿಗಳಲ್ಲಿ ಒಮ್ಮೆಯೂ ಫೈನಲ್‌ ಪ್ರವೇಶಿಸಿಲ್ಲ. ನಾಯಕ ಫಾಫ್‌ ಡು ಪ್ಲೆಸಿಸ್‌, ಡೇವಿಡ್‌ ಮಿಲ್ಲರ್‌, ಕ್ವಿಂಟನ್‌ ಡಿ ಕಾಕ್‌ ಮತ್ತು ಜೆ.ಪಿ. ಡುಮಿನಿ ತಂಡದ ಬ್ಯಾಟಿಂಗ್‌ ಶಕ್ತಿ ಎನಿಸಿದ್ದಾರೆ. ಇವರೆಲ್ಲಾ ಈ ಹಿಂದೆ ಐಪಿಎಲ್‌ನಲ್ಲೂ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಭಾರತದ ವಾತಾ ವರಣಕ್ಕೆ ಬೇಗನೆ ಹೊಂದಿಕೊಳ್ಳುವುದು ಇವರಿಗೆ ಕಷ್ಟವಾಗಲಾರದು.

ಹಾಶಿಮ್‌ ಆಮ್ಲಾ, ಕ್ರಿಸ್‌ ಮೊರಿಸ್‌ ಮತ್ತು ಡೇವಿಡ್‌ ವೈಸಿ ಅವರೂ ಉತ್ತಮ ಲಯದಲ್ಲಿದ್ದು ಭಾರತದ ಬೌಲರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. ಡೇಲ್‌ ಸ್ಟೇಯ್ನ್‌, ಕಗಿಸೊ ರಬಾಡ, ಕೈಲ್‌ ಅಬಾಟ್‌ ಮತ್ತು ಕ್ರಿಸ್‌ ಮೊರಿಸ್‌ ಅವರನ್ನು ಹೊಂದಿರುವ ಬೌಲಿಂಗ್‌ ಪಡೆ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗುವುದರಲ್ಲಿ ಅನುಮಾನವಿಲ್ಲ. ಇಮ್ರಾನ್‌ ತಾಹಿರ್‌ ಮತ್ತು ಆ್ಯರನ್‌ ಫಂಗಿಸೊ ಪ್ರವಾಸಿ ತಂಡದ ಸ್ಪಿನ್‌ ಅಸ್ತ್ರವಾಗಿದ್ದಾರೆ.

ಪಂದ್ಯದ ಆರಂಭ: ರಾತ್ರಿ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT