ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತುರ ಅತಿಯಾಯ್ತು

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೇಂದ್ರದ ಯುಪಿಎ ಸರ್ಕಾರಕ್ಕೆ ಏಕಾಏಕಿ ಹುರುಪು ಬಂದಂತಿದೆ. ಎಷ್ಟೋ ಕಾಲದಿಂದ ಖಾಲಿ ಇದ್ದ ಉನ್ನತ ಹುದ್ದೆಗಳನ್ನು ತುಂಬಲು ಈಗ ಎಲ್ಲಿಲ್ಲದ ಆತುರ ತೋರುತ್ತಿದೆ. ಸಬ್‌ಮೆರಿನ್‌ ದುರಂತದ ಹೊಣೆ ಹೊತ್ತು ಅಡ್ಮಿರಲ್ ಡಿ.ಕೆ. ಜೋಷಿ ನೀಡಿದ ರಾಜೀನಾಮೆಯಿಂದಾಗಿ ಎರಡು ತಿಂಗಳಿಂದಲೂ ಖಾಲಿ ಬಿದ್ದಿದ್ದ ನೌಕಾಪಡೆ ಮುಖ್ಯಸ್ಥರ ಹುದ್ದೆಯನ್ನು ಕಳೆದ ವಾರ ದಿಢೀರನೆ ಭರ್ತಿ ಮಾಡಿದೆ.

ತಮ್ಮ ಸೇವಾ ಹಿರಿತನ ಕಡೆಗಣಿಸಿ ತಮಗಿಂತ ಕಿರಿಯನನ್ನು ನೌಕಾಪಡೆ ಮುಖ್ಯಸ್ಥರ ಹುದ್ದೆಗೆ ನೇಮಕ ಮಾಡಿ­ದ್ದಕ್ಕಾಗಿ ಪಶ್ಚಿಮ ಕಮಾಂಡ್‌ನ ಮುಖ್ಯಸ್ಥ ಶೇಖರ್‌ ಸಿಂಗ್ ಅವಧಿ ಪೂರ್ವ ನಿವೃತ್ತಿ ಬಯಸಿದ್ದಾರೆ. ಇದರಿಂದಲೂ ವಿಚಲಿತಗೊಳ್ಳದ ಮನಮೋಹನ್ ಸಿಂಗ್ ಸರ್ಕಾರ ಈಗ ಭೂಸೇನಾ ಮುಖ್ಯಸ್ಥರ ಸ್ಥಾನಕ್ಕೆ ಹೊಸಬರನ್ನು ಹೆಸರಿಸಲು ಮುಂದಾಗಿದೆ. ಇವೆಲ್ಲ ಸಾಕಷ್ಟು ವಿವಾದಕ್ಕೂ ಕಾರಣವಾಗಿವೆ. ಆದರೆ ಎಲ್ಲಕ್ಕಿಂತಲೂ ಹೆಚ್ಚಿನ ಆಕ್ಷೇಪದ ಕಿಡಿ ಎದ್ದಿರುವುದು ಲೋಕಪಾಲರ ನೇಮಕದ ಬಗ್ಗೆ ಈ ಸರ್ಕಾರ ತೋರುತ್ತಿರುವ ಅವಸರಕ್ಕೆ. ಲೋಕಪಾಲರ ನೇಮಕಾತಿಗೆ ಮುಂದಿನ ವಾರ ‘ಆಯ್ಕೆ ಸಮಿತಿ’ ಸಭೆ ಕರೆಯಲು ಪ್ರಧಾನಿ ಸಿಂಗ್ ಕಾತರರಾಗಿದ್ದಾರೆ ಎನ್ನಲಾಗುತ್ತಿದೆ.

ನೇಮಕಾತಿ ವಿಧಾನದಲ್ಲೇ ದೋಷವಿದೆ ಎಂಬುದು ಅರಿವಾಗಿ ಕಳೆದ ತಿಂಗಳು ಲೋಕಪಾಲರ ನೇಮಕ ಪ್ರಕ್ರಿಯೆಯನ್ನು ಇದೇ ಸರ್ಕಾರ ಮುಂದೂಡಿತ್ತು. ಲೋಕಪಾಲ ಕಾನೂನಿನ ಅಡಿ ರೂಪಿಸಲಾದ  ನಿಯಮಗಳು ದೋಷಪೂರಿತವಾಗಿವೆ ಎಂದು ಕಾನೂನು ತಜ್ಞರು ಸರ್ಕಾರದ ಗಮನಕ್ಕೆ ತಂದಿದ್ದರು. ಆಯ್ಕೆ ಸಮಿತಿಗೆ ಸೂಕ್ತ ಹೆಸರುಗಳನ್ನು ಶಿಫಾರಸು ಮಾಡಬೇಕಾದ ವಿಧಾನವೇ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ನಿವೃತ್ತ ನ್ಯಾಯಮೂರ್ತಿ ಕೆ.ಟಿ. ಥಾಮಸ್ ಅವರು ‘ಶೋಧನಾ ಸಮಿತಿ’ ಅಧ್ಯಕ್ಷರಾಗಲು ಮತ್ತು  ಮತ್ತು ಹೆಸರಾಂತ ವಕೀಲ ಫಾಲಿ ನಾರಿಮನ್‌ ಅವರು ಸದಸ್ಯರಾಗಲು ನಿರಾಕರಿಸಿದ್ದರು. ಈ ಒಂದು ತಿಂಗಳಲ್ಲಿ ಲೋಪ ಸರಿಪಡಿಸುವ ಕೆಲಸವೇನೂ ಆಗಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ರಾಜಕೀಯ ನೈತಿಕತೆ, ಶಿಷ್ಟಾಚಾರಗಳನ್ನು ಗಾಳಿಗೆ ತೂರಿ ಹೊಸ ಲೋಕಪಾಲರ ನೇಮಕಕ್ಕೆ ಸರ್ಕಾರ ಮುಂದಾಗುವುದು ಎಳ್ಳಷ್ಟೂ ಸರಿಯಲ್ಲ.

ಈಗಾಗಲೇ ಲೋಕಸಭೆಯ   ಅರ್ಧಭಾಗ ಚುನಾವಣೆ ಮುಗಿದಿದೆ. ಮೇ ಮೂರನೇ ವಾರದೊಳಗೆ ಫಲಿತಾಂಶ ಹೊರ ಬಿದ್ದು ಹೊಸ ಸರ್ಕಾರದ ಸ್ಪಷ್ಟ ಚಿತ್ರ ಸಿಗಲಿದೆ. ಅಲ್ಲಿಯವರೆಗೆ ಲೋಕಪಾಲರ ನೇಮಕ ಮಾಡದಿದ್ದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ. ಉನ್ನತ ಹುದ್ದೆಗಳ ನೇಮಕಾತಿಯನ್ನು ಮುಂದಿನ ಸರ್ಕಾರಕ್ಕೆ ಬಿಡುವುದು ವಿವೇಕಯುತವಾದ ಮಾರ್ಗ. ಇಲ್ಲದೇ ಹೋದರೆ ಈ ಹುದ್ದೆಗಳು ರಾಜಕೀಯ ವಿವಾದಕ್ಕೆ ಆಹಾರವಾಗಿ ತಮ್ಮ ಘನತೆ ಕಳೆದುಕೊಳ್ಳಲೂಬಹುದು. ಅರ್ಹರೇ ನೇಮಕಗೊಂಡರೂ ಮುಜು­ಗರ ಎದುರಿಸಬೇಕಾಗಬಹುದು. ಅದಕ್ಕೆಲ್ಲ ಅವಕಾಶ ಕೊಡಬಾರದು. ನೇಮ­ಕಾತಿ ಬಗ್ಗೆ ಯುಪಿಎ ಸರ್ಕಾರದ ಆತುರದ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ. ಫಲಿತಾಂಶ ಹೊರ ಬೀಳುವವರೆಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂಬುದನ್ನು ಸರ್ಕಾರ ಗಮನದಲ್ಲಿ ಇಟ್ಟುಕೊಳ್ಳಬೇಕು. ಇಂಥ ವಿಷಯದಲ್ಲಿ ಸ್ವಯಂ ಸಂಯಮ ವಹಿಸುವುದೇ ಸರಿಯಾದ ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT