ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ ತಡೆ ದುಸ್ತರವಲ್ಲ

Last Updated 11 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ವಿಶ್ವದ ಆತ್ಮಹತ್ಯಾ ರಾಜಧಾನಿ ಎಂಬ ಕುಖ್ಯಾತಿಗೆ ಭಾರತ ಪಾತ್ರ­ವಾಗಿದೆ. ದೇಶದಾದ್ಯಂತ ನೂರಾರು ಮಂದಿ ದಿನನಿತ್ಯ ಆತ್ಮಹತ್ಯೆಗೆ ಶರ­ಣಾ­ಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಘಟನೆಯ ‘ಆತ್ಮಹತ್ಯೆ ತಡೆ: ಜಾಗತಿಕ ಕರ್ತವ್ಯ’ ಎಂಬ ವರದಿಯ ಪ್ರಕಾರ, ಜಗತ್ತಿನಲ್ಲಿ ಪ್ರತಿ 40 ಸೆಕೆಂಡುಗಳಿಗೆ ಒಬ್ಬರು ತಮ್ಮನ್ನು ಕೊಂದುಕೊಳ್ಳುತ್ತಿದ್ದಾರೆ. ಭಾರತ ಸೇರಿದಂತೆ ಬಹು­ಪಾಲು ಎಲ್ಲೆಡೆ ಮಹಿಳೆ­ಯರಿಗಿಂತ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಆದರೆ  ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿ­ಸ್ತಾನ­ದಂತಹ ದೇಶಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವ­ರಲ್ಲಿ ಮಹಿಳೆ­ಯರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಯುವಜನರಲ್ಲಿ ಆತ್ಮಹತ್ಯಾ ಪ್ರವೃತ್ತಿ ಹೆಚ್ಚಾ­ಗು­ತ್ತಿರುವುದು ಆತಂಕ ಹುಟ್ಟಿಸಿದೆ.  2013ರಲ್ಲಿ ದೇಶದಲ್ಲಿ 1.35 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಲ್ಲಿ 11,600 ಮಂದಿ ಕರ್ನಾಟಕ­ದವರು ಎಂಬ ವರದಿಯ ಬಗ್ಗೆ ಗಂಭೀರ ಪರಿಶೀಲನೆ ಅಗತ್ಯ.

ವಿಶ್ವ ಆರೋಗ್ಯ ಸಂಘಟನೆ ಮತ್ತು ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆ ಸಂಘಟನೆ ಸೆಪ್ಟೆಂಬರ್‌ 10ಅನ್ನು ‘ವಿಶ್ವ ಆತ್ಮಹತ್ಯೆ ತಡೆ ದಿನ’ವನ್ನಾಗಿ ಘೋಷಿಸಿ ಜನಜಾಗೃತಿ ಮೂಡಿಸುತ್ತಿವೆ. ನಿಮ್ಹಾನ್ಸ್ ನಂತಹ ಸ್ಥಳೀಯ ಸಂಸ್ಥೆ­ಗಳು ಸಹ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಆದರೂ ನಿರೀಕ್ಷಿತ ಯಶಸ್ಸು ಸಾಧ್ಯವಾಗಿಲ್ಲ. ಆತ್ಮಹತ್ಯೆ ಕುರಿತ ಅಂಕಿಸಂಖ್ಯೆಗಳು ಅದರ ಹಿಂದಿನ ಕಾರಣಗಳನ್ನೂ ಸ್ಪಷ್ಟವಾಗಿ ತೆರೆದಿಟ್ಟಿವೆ. ಆರ್ಥಿಕ, ಸಾಮಾಜಿಕ ಸಮಸ್ಯೆ, ಮಾನ­ಸಿಕ ದ್ವಂದ್ವ, ಸಡಿಲಗೊಳ್ಳುತ್ತಿರುವ ಕೌಟುಂಬಿಕ ವ್ಯವಸ್ಥೆ, ಹದಗೆಡುವ ಸಂಬಂಧ, ಹೊಂದಾಣಿಕೆ ಮನೋಭಾವದ ಕೊರತೆ, ಆಧುನಿಕ ಬದುಕಿನ ಅತಿ­ಯಾದ ಒತ್ತಡ, ಅನಾರೋಗ್ಯಕರ ಸ್ಪರ್ಧೆ, ನಕಾರಾತ್ಮಕ ಮನೋಭಾವ, ಬದ­ಲಾದ ಜೀವನಶೈಲಿ ತಂದೊಡ್ಡುತ್ತಿರುವ ಆರೋಗ್ಯ ಸಮಸ್ಯೆಗಳು ಆತ್ಮಹತ್ಯೆ ಪ್ರವೃತ್ತಿಗೆ ಮುಖ್ಯ ಕಾರಣಗಳೆಂದು ಗುರುತಿಸಲಾಗಿದೆ.

15-–29 ವರ್ಷ­ದೊ­ಳ­­ಗಿನವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂಖ್ಯೆಯಲ್ಲಿ ಭಾರತ ವಿಶ್ವ­ದಲ್ಲೇ ಮೊದಲ ಸ್ಥಾನದಲ್ಲಿದೆ. ಈ ವಯೋಮಾನದ ಒಂದು ಲಕ್ಷ ಮಂದಿ­ಯಲ್ಲಿ 35 ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.  ಬದುಕಿನ ಒತ್ತಡಗಳನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸದ ಕೊರತೆ ಸಾವಿನಲ್ಲಿ ಪರಿಹಾರ ಕಂಡು­ಕೊಳ್ಳುವ ಮನೋಭಾವವನ್ನು ಹೆಚ್ಚಿಸುತ್ತಿದೆ. ಮಾನಸಿಕ ನೋವು ದೈಹಿಕ ಕಾಯಿಲೆಗಿಂತ ಅತಿ ಭಿನ್ನ ಹಾಗೂ ಸಂಕೀರ್ಣವಾದ ಸಮಸ್ಯೆ. ಸಣ್ಣಪುಟ್ಟ ದೈಹಿಕ ಕಾಯಿಲೆಗಳಿಗೂ ಆಸ್ಪತ್ರೆಗೆ ಎಡತಾಕುವ ಜನ, ಬದುಕನ್ನೇ ಕೊನೆ­ಗಾಣಿ­ಸಬಲ್ಲ ಖಿನ್ನತೆ, ತೀವ್ರ ಒತ್ತಡದಂತಹ ಸಮಸ್ಯೆಗಳನ್ನು ಸಾಮಾಜಿಕ ಕಾರಣಗಳ ಸಲುವಾಗಿ ನಿರ್ಲಕ್ಷಿಸುತ್ತಾರೆ.

ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮುಖ್ಯ ನೀಡಿ ಹಿರಿಯರಿಗೆ ಆಪ್ತಸಲಹೆ, ಮಕ್ಕಳಲ್ಲಿ ವಿಶಾಲ ದೃಷ್ಟಿಕೋನ, ದೃಢಚಿತ್ತ, ಸಕಾರಾತ್ಮಕ ಮನೋಭಾವ, ಆರೋಗ್ಯಕರ ಸ್ಪರ್ಧೆ ಹುಟ್ಟುಹಾಕಲು ಸಾಧ್ಯ­ವಾದರೆ ಆತ್ಮಹತ್ಯೆಯಂತಹ ತೀವ್ರ ಹತಾಶ ಮನೋಭಾವಕ್ಕೆ ಕಡಿವಾಣ ಹಾಕು­­ವುದು ದುಸ್ತರವೇನೂ ಅಲ್ಲ. ಆತ್ಮಹತ್ಯೆ ಯತ್ನವನ್ನು ಅಪರಾಧ ಎಂದು ಪರಿಗಣಿಸುವುದನ್ನು ಕೈಬಿಡುವುದೂ ಈ ಸಮಸ್ಯೆ ಪರಿಹಾರ ಯತ್ನದಲ್ಲಿ ಮುಖ್ಯ ಹೆಜ್ಜೆ. ಇದರಿಂದ ವ್ಯಕ್ತಿಗಳು ಅನುಭವಿಸುವ ಸಮಸ್ಯೆಗಳ ಕುರಿತಂತೆ ಮುಕ್ತ ಸಂವಾದ ಸಾಧ್ಯವಾಗುತ್ತದೆ. ಸಮಾಜದಲ್ಲಿ ಈ ಕುರಿತಂತೆ ಸಂವೇದ­ನಾ­ಶೀಲತೆ ಮೂಡುವುದು ಅತ್ಯವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT