ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ: ಸರ್ಕಾರದ ವರ್ಚಸ್ಸಿಗೆ ಧಕ್ಕೆ

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್‌ ಮುಖಂಡ ಸಿ.ಎಂ.ಲಿಂಗಪ್ಪ ಆಗ್ರಹ
Last Updated 30 ಜೂನ್ 2015, 11:16 IST
ಅಕ್ಷರ ಗಾತ್ರ

ರಾಮನಗರ: ‘ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿರುವುದು ನೋವಿನ ಸಂಗತಿ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬುದನ್ನು ಅಲ್ಲಗಳೆಯಲು ಆಗದು’ ಎಂದು ಮಾಜಿ ಶಾಸಕರೂ ಆಗಿರುವ ಕಾಂಗ್ರೆಸ್‌ ಮುಖಂಡ ಸಿ.ಎಂ.ಲಿಂಗಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬಿಳಗುಂಬ ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳಿಗೆ ಹೆದರಿ ಮಾಮೂಲಿ ಕೊಡುವುದು ನಡೆದುಕೊಂಡು ಬಂದಿದೆ. ಲೋಕಾಯುಕ್ತರ ಮನೆಯಿಂದಲೇ ಭ್ರಷ್ಟಾಚಾರದ ವ್ಯವಹಾರದ ಮಾತುಕತೆ ನಡೆದಿರುವುದು ಬಹಿರಂಗವಾಗಿರುವುದು ಒಂದು ಸಣ್ಣ ತುಣುಕು ಅಷ್ಟೇ. ಸತ್ಯ ಯಾವಾಗಲೂ ಕಟುವಾಗಿ ಇರುತ್ತದೆ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಉತ್ತರಿಸಿದರು.

ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಪ್ರಕರಣಗಳನ್ನು ಹಾಕುತ್ತಾರೆ ಎಂಬುದನ್ನು ತಿಳಿದ ಅಧಿಕಾರಿಗಳು, ಅವರಿಗೆ ಮಾಮೂಲಿ ತಲುಪಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಹೇಗಿದ್ದರೂ ಮಾಮೂಲಿ ತಲುಪಿಸುತ್ತೇವಲ್ಲಾ ಎಂಬ ಧಿಮಾಕಿನಿಂದ ಭ್ರಷ್ಟ ಅಧಿಕಾರಿಗಳು ಇನ್ನಷ್ಟು ರಾಜಾರೋಷವಾಗಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದರು.

ರೇಷ್ಮೆ ಕೃಷಿಕರ ಸಂಕಷ್ಟ ಅರಿತ ಸರ್ಕಾರ ತಾಂತ್ರಿಕ ಸಮಿತಿ ರಚಿಸಿರುವುದು ಉತ್ತಮ ಬೆಳವಣಿಗೆ. ಆದರೆ ಈ ಸಮಿತಿ ಕೇವಲ ಅಧಿಕಾರಿ ವರ್ಗದಿಂದಲೇ ಕೂಡಿದೆ. ರೇಷ್ಮೆ ಬೆಳೆಗಾರರಾಗಲಿ, ನೂಲು ಬಿಚ್ಚಾಣಿಕೆದಾರರಾಗಲಿ, ನೇಕಾರರಾಗಲಿ ಸಮಿತಿಯಲ್ಲಿ ಇಲ್ಲದಿರುವುದು ಬೇಸರದ ಸಂಗತಿ. ಸರ್ಕಾರ ಸಮಿತಿಯಲ್ಲಿ ಪ್ರಮುಖವಾಗಿ ಬೆಳೆಗಾರರ ಪ್ರತಿನಿಧಿಯನ್ನಾದರೂ ನೇಮಿಸಬೇಕಿತ್ತು ಎಂದರು.

ಗ್ರಾಮ ಪಂಚಾಯಿತಿಗಳಲ್ಲಿ ಶೇ 50ರಷ್ಟು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಮಹಿಳಾ ಸದಸ್ಯರ ಬದಲಿಗೆ ಅವರ ಪತಿಯಂದಿರೇ ಅಧಿಕಾರ ಚಲಾಯಿಸುವವರಾಗಿದ್ದಾರೆ. ಒಂದು ರೀತಿಯಲ್ಲಿ ಸದಸ್ಯೆಯ ಪತಿಯು ಈ ಹುದ್ದೆಯ ಜಿಪಿಎ ಹಕ್ಕುದಾರ ಎಂಬಂತಾಗಿ ಬಿಟ್ಟಿದೆ. ಮಹಿಳಾ ಸಬಲೀಕರಣ ಇನ್ನೂ ಆಗಿಲ್ಲ ಎಂಬುದಕ್ಕೆ ಇದು ನಿದರ್ಶನ. ಇನ್ನೂ 10ರಿಂದ 15 ವರ್ಷದ ನಂತರ ಸರ್ಕಾರ ಶೇ 50ರಷ್ಟು ಸ್ಥಾನಗಳನ್ನು ಮೀಸಲಿಟ್ಟಿದ್ದರೆ ಅದರ ಆಶಯ ಈಡೇರುತ್ತಿತ್ತು ಅನ್ನಿಸುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ ಬೆಂಬಲಿಗರ ಆಡಳಿತ
ಬಿಳಗುಂಬ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್‌ ಬೆಂಬಲಿತರಾಗಿ ಅಯ್ಕೆಯಾಗಿದ್ದ ರಾಜೀವ್‌ ಗಾಂಧಿಪುರದ ಲಕ್ಷ್ಮಮ್ಮ, ಚಿಕ್ಕತಾಯಮ್ಮ ಅವರು ಸೋಮವಾರ ಕಾಂಗ್ರೆಸ್‌ ಸೇರ್ಪಡೆಯಾದರು.

ಬಿಳಗುಂಬದಲ್ಲಿ ಒಟ್ಟು 18 ಸದಸ್ಯರ ಪೈಕಿ ಜೆಡಿಎಸ್‌ ಬೆಂಬಲಿತ 13 ಹಾಗೂ ಕಾಂಗ್ರೆಸ್‌ ಬೆಂಬಲಿತ ಐವರು ಸದಸ್ಯರು ಆಯ್ಕೆಯಾಗಿದ್ದರು. ಜೆಡಿಎಸ್‌ನ ಇಬ್ಬರು ಬೆಂಬಲಿತರು ಕಾಂಗ್ರೆಸ್‌ ಸೇರಿದ್ದರಿಂದ ಕಾಂಗ್ರೆಸ್‌ ಬೆಂಬಲಿತರ ಸಂಖ್ಯೆ 7ಕ್ಕೆ ಏರಿದ್ದರೆ, ಜೆಡಿಎಸ್‌ ಬೆಂಬಲಿತರ ಸಂಖ್ಯೆ 11ಕ್ಕೆ ಕುಸಿಯಿತು.

‘ಅಧ್ಯಕ್ಷ ಸ್ಥಾನದ ಮೀಸಲಾತಿಯ ಲಾಭ ಕಾಂಗ್ರೆಸ್‌ ಪಕ್ಷಕ್ಕೆ ದೊರೆತಂತಾಗಿದೆ. ಅಧ್ಯಕ್ಷ ಸ್ಥಾನ ಬಿಸಿಎಂ (ಎ) ಪ್ರವರ್ಗಕ್ಕೆ ಮೀಸಲಾಗಿದ್ದು, ಪಂಚಾಯಿತಿಯ 18 ಸ್ಥಾನಗಳ ಪೈಕಿ ಚಿಕ್ಕತಾಯಮ್ಮ ಅವರು ಮಾತ್ರ ಬಿಸಿಎಂ (ಎ) ಪ್ರವರ್ಗಕ್ಕೆ ಸೇರಿದವರಾಗಿದ್ದಾರೆ. ಅವರು ಜೆಡಿಎಸ್‌ ಬೆಂಬಲಿತರ ಗುಂಪಿನಿಂದ ಕಾಂಗ್ರೆಸ್‌ ಬೆಂಬಲಿತರ ಗುಂಪು ಸೇರಿದ್ದರಿಂದ ಇದೀಗ ಮೀಸಲಾತಿಯ ಲಾಭದಿಂದ ಕಾಂಗ್ರೆಸ್‌ ಬೆಂಬಲಿಗರಿಗೆ ಅಧಿಕಾರ ದೊರೆಯಲಿದೆ. ಚಿಕ್ಕತಾಯಮ್ಮ ಐದು ವರ್ಷ ಅಧ್ಯಕ್ಷರಾಗುತ್ತಾರೆ’ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ವಿವರಿಸಿದರು.

ರಾಜ್ಯದಲ್ಲಿ ರೈತರ ಸ್ಥಿತಿ ಶೋಚನೀಯವಾಗಿದೆ. ಅದರಲ್ಲೂ ಕಬ್ಬು ಬೆಳೆಗಾರರ ಸ್ಥಿತಿಗತಿಯಂತೂ ಇನ್ನೂ ಹದಗೆಟ್ಟಿದೆ
ಸಿ.ಎಂ. ಲಿಂಗಪ್ಪ,
ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT