ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯದ ಕ್ಷೇತ್ರ: ಸೌಕರ್ಯ ಮರೀಚಿಕೆ!

ಕ್ಷೇತ್ರ ಪರಿಚಯ: ಗಾಂಧಿ ನಗರ
Last Updated 3 ಆಗಸ್ಟ್ 2015, 20:19 IST
ಅಕ್ಷರ ಗಾತ್ರ

ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರ ನಗರದಲ್ಲಿ ಅತಿ ಹೆಚ್ಚು ಜನದಟ್ಟಣೆಯಿಂದ ಕೂಡಿರುವ ಪ್ರದೇಶ. ನಿತ್ಯ ಸುಮಾರು 10ರಿಂದ 12 ಲಕ್ಷ ಜನ ಇಲ್ಲಿಗೆ ಬಂದು ಹೋಗುತ್ತಾರೆ.

ದತ್ತಾತ್ರೇಯ ದೇವಸ್ಥಾನ, ಗಾಂಧಿ ನಗರ, ಸುಭಾಷ್‌ ನಗರ, ಓಕಳಿಪುರ, ಚಿಕ್ಕಪೇಟೆ, ಕಾಟನ್‌ಪೇಟೆ ಮತ್ತು ಬಿನ್ನಿಪೇಟೆ ಏಳು ವಾರ್ಡ್‌ಗಳನ್ನು ಈ ಕ್ಷೇತ್ರ ಒಳಗೊಂಡಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಹಾಗೂ ಸಿಟಿ ರೈಲು ನಿಲ್ದಾಣ ಸುಭಾಷ್‌ ನಗರ  ವ್ಯಾಪ್ತಿಗೆ ಬರುತ್ತವೆ.

ಚಿಕ್ಕಪೇಟೆ, ಕಾಟನ್‌ಪೇಟೆ ಮತ್ತು ಬಿನ್ನಿಪೇಟೆ ವ್ಯಾಪಾರ ವಹಿವಾಟಿನ ಪ್ರಮುಖ ತಾಣಗಳಾಗಿವೆ. ಕಾಗದದಿಂದ ಚಿನ್ನದವರೆಗೆ ಇಲ್ಲಿ ಖರೀದಿಸಬಹುದು.

ಗಾಂಧಿ ನಗರ ಚಿತ್ರರಂಗದ ಚಟುವಟಿಕೆಯ ಕೇಂದ್ರವಾಗಿದೆ.  ಇನ್ನು ಓಕಳಿಪುರ ಸಣ್ಣ ಉದ್ದಿಮೆಗಳಿಂದ ಕೂಡಿರುವ ಪ್ರದೇಶವಾಗಿದೆ.
ನಗರದ ಪ್ರತಿಷ್ಠಿತ ಬಡಾವಣೆಗಳಾದ ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ, ಕೋರಮಂಗಲ ಮತ್ತು ಇಂದಿರಾ ನಗರಗಳಿಗಿಂತ ಹೆಚ್ಚಿನ ಆದಾಯ ಸರ್ಕಾರಕ್ಕೆ ಚಿಕ್ಕಪೇಟೆ, ಕಾಟನ್‌ಪೇಟೆ, ಬಿನ್ನಿಪೇಟೆ ಮತ್ತು ಗಾಂಧಿ ನಗರದಿಂದ ಬರುತ್ತದೆ. ಆದರೂ ಈ ವಾರ್ಡ್‌ಗಳು ಸೇರಿದಂತೆ ಇಡೀ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಮೂಲಸೌಕರ್ಯಗಳು ಇಲ್ಲ.

ಜೊತೆಗೆ ಎಲ್ಲ ಕಡೆ ಕಿರಿದಾದ ರಸ್ತೆಗಳಿವೆ. ಮೇಲಿಂದ ದ್ವಿಮುಖ ಸಂಚಾರ ಬೇರೆ. ಇದರಿಂದ ಜನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಹರಸಾಹಸ ಪಡಬೇಕಾಗುತ್ತದೆ. ಪಾದಚಾರಿ ಮಾರ್ಗವನ್ನು ಮಳಿಗೆಯವರು ಅತಿಕ್ರಮಿಸಿರುವುದರಿಂದ ಜನ ಅನಿವಾರ್ಯವಾಗಿ ರಸ್ತೆ ಮೇಲೆ ಓಡಾಡುತ್ತಾರೆ. ಇದು ಮತ್ತಷ್ಟು ವಾಹನ ದಟ್ಟಣೆಗೆ ಕಾರಣವಾಗಿದೆ. ಸೂಕ್ತ ಪಾರ್ಕಿಂಗ್‌ ವ್ಯವಸ್ಥೆಯೂ ಇಲ್ಲ.
ಕಸ ಹಾಕಲು ತೊಟ್ಟಿಗಳೂ ಇಲ್ಲ. ಇದರಿಂದ ರಸ್ತೆ ಮೇಲೆ ಕಸ ಹರಡಿಕೊಂಡಿರುತ್ತದೆ. ಓಕಳಿಪುರ ನಗರದ ಹೃದಯ ಭಾಗದಲ್ಲಿದ್ದರೂ ಅನೇಕ ಸೌಕರ್ಯಗಳಿಂದ ವಂಚಿತವಾಗಿದೆ. ಅದರಲ್ಲೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ವಾರಕ್ಕೊಮ್ಮೆ ನೀರು ಬಿಡುವುದರಿಂದ ಜನ ದೂರದ ಭಾಗಗಳಿಗೆ ಹೋಗಿ ನೀರು ತರುತ್ತಾರೆ. ಹಲವು ಕಡೆ ತೆರೆದ ಚರಂಡಿಗಳು ಇರುವುದರಿಂದ ಎಲ್ಲೆಡೆ ದುರ್ಗಂಧ ಹರಡಿದೆ. ಇದು ಸೊಳ್ಳೆ ಕಾಟಕ್ಕೂ ಕಾರಣ ವಾಗಿದೆ.

‘ಚರಂಡಿಗಳೂ ಸರಿಯಿಲ್ಲ. ಇದರಿಂದ ಚರಂಡಿ ತುಂಬಿಕೊಂಡು ರಸ್ತೆ ಮೇಲೆ ಹೊಲಸು ನಿಲ್ಲುತ್ತದೆ. ಬಿಬಿಎಂಪಿಯವರಿಗೆ ತಿಳಿಸಿದರೆ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ನಾವೇ ದುಡ್ಡು ಸಂಗ್ರಹಿಸಿ ಚರಂಡಿಯಲ್ಲಿ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಓಕಳಿಪುರದ ಐದನೇ ಮುಖ್ಯರಸ್ತೆಯ ನಿವಾಸಿ ಬಾಲು ಕುಮಾರ್‌ ತಿಳಿಸಿದರು.

‘ಪೈಪ್‌ಲೈನ್‌ಗಾಗಿ ಮೂರು ತಿಂಗಳ ಹಿಂದೆ ರಸ್ತೆ ಅಗೆದಿದ್ದರು. ಕಾಮಗಾರಿ ಮುಗಿದ ನಂತರ ರಸ್ತೆ ಡಾಂಬರೀಕರಣ ಮಾಡಿಲ್ಲ. ವಾಹನ ಸಂಚರಿಸಿದರೆ ಎಲ್ಲೆಡೆ ದೂಳು ಆವರಿಸಿಕೊಳ್ಳುತ್ತದೆ’ ಎಂದು ಗೋಳು ತೋಡಿಕೊಂಡರು.

ಕಾಟನ್‌ಪೇಟೆಯಲ್ಲೂ ಕುಡಿಯುವ  ನೀರಿನ ಸಮಸ್ಯೆ ತೀವ್ರವಾಗಿದೆ. ಜೊತೆಗೆ ಸಾರ್ವಜನಿಕ ಶೌಚಾಲಯಗಳೂ ಇಲ್ಲ. ಇದರಿಂದ ಜನ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದು ಎಲ್ಲೆಡೆ ದುರ್ಗಂಧಕ್ಕೆ ಕಾರಣವಾಗಿದೆ.

‘ಕಾವೇರಿ ನೀರು ಬರುವುದೇ ಇಲ್ಲ. ಬಂದರೂ  ಯಾವಾಗ ಬರುತ್ತದೆ ಗೊತ್ತಾಗುವುದಿಲ್ಲ. ಏಕೆಂದರೆ ನಿಶ್ಚಿತವಾದ ಸಮಯಕ್ಕೆ ನೀರು ಬಿಡುವುದಿಲ್ಲ. ಇದರಿಂದ ದುಡ್ಡು ಕೊಟ್ಟು ನೀರು ಕುಡಿಯಬೇಕಾದ ಪರಿಸ್ಥಿತಿ ಇದೆ’ ಎಂದು ಸ್ಥಳೀಯ ನಿವಾಸಿ ಷರೀಫ್‌ ತಿಳಿಸಿದರು.
‘ಇಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯ ಇಲ್ಲ. ಜನ ತಮಗೆ ತೋಚಿದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಮೂಗು ಮುಚ್ಚಿಕೊಂಡು ಓಡಾಡಬೇಕಾಗುತ್ತದೆ. ಒ.ಟಿ.ಸಿ. ರಸ್ತೆಯಲ್ಲಿ ದರ್ಗಾ ಇದೆ. ಶುಕ್ರವಾರ ಪ್ರಾರ್ಥನೆಗೆ ಬರುವವರು ಬೇಕಾಬಿಟ್ಟಿ ವಾಹನ ನಿಲ್ಲಿಸುತ್ತಾರೆ. ಇದರಿಂದ ಇಡೀ ದಿನ ವಾಹನ ದಟ್ಟಣೆ ಉಂಟಾಗುತ್ತದೆ’ ಎಂದು ಹೇಳಿದರು.

‘ಶ್ರೀಮಂತರು ನಲ್ಲಿಗಳಿಗೆ ಮೋಟಾರ್‌ ಕೂಡಿಸುತ್ತಾರೆ. ಇದರಿಂದ ನಮ್ಮ ಮನೆಗಳ ನಲ್ಲಿಗಳಿಗೆ ಕಾವೇರಿ ನೀರು ಬರುವುದಿಲ್ಲ’ ಎಂದು ಬಿನ್ನಿಪೇಟೆ ಎರಡನೇ ಕ್ರಾಸ್‌ ನಿವಾಸಿ ಜಯಮ್ಮ ತಿಳಿಸಿದರು.

ಚಿಕ್ಕಪೇಟೆಯಲ್ಲೂ ಪಾರ್ಕಿಂಗ್‌, ಶೌಚಾಲಯ ಸಮಸ್ಯೆ ತೀವ್ರವಾಗಿದೆ. ಸಂಜೆ ಜೇಬುಗಳ್ಳರ ಕಾಟ ಹೆಚ್ಚಾಗುತ್ತದೆ.


‘ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಮೂಲೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಗಬ್ಬು ವಾಸನೆ ಬರುತ್ತದೆ. ಅನಿವಾರ್ಯವಾಗಿ ಮಳಿಗೆಯಲ್ಲಿ ಕೂಡಬೇಕಾಗಿದೆ’ ಎಂದು ಚಿಕ್ಕಪೇಟೆಯಲ್ಲಿ ಮಳಿಗೆ ಹೊಂದಿರುವ ಅಬ್ದುಲ್‌ ಮತಿನ್‌ ತಿಳಿಸಿದರು.

‘ಒಳ ರಸ್ತೆಗಳು ಬಹಳ ಕಿರಿದಾಗಿವೆ. ದ್ವಿಚಕ್ರ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸುತ್ತಾರೆ. ಜೊತೆಗೆ ದೊಡ್ಡ ವಾಹನಗಳನ್ನು ನಿಲ್ಲಿಸಿದರೆ ಸಂಚಾರ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ದೂರಿದರು.

ಗಾಂಧಿನಗರ, ದತ್ತಾತ್ರೇಯ ದೇವಸ್ಥಾನ ಪ್ರದೇಶದಲ್ಲೂ ಕಸ ಹಾಗೂ ಸೊಳ್ಳೆ ಕಾಟ ವಿಪರೀತವಾಗಿದೆ. ಅಲ್ಲದೆ ಇಲ್ಲಿ ಸದಾ ವಾಹನದಟ್ಟಣೆ, ಜನದಟ್ಟಣೆ ಇರುತ್ತದೆ. ಇದರಿಂದ ನಿತ್ಯ ಅಪಘಾತಗಳು ಸಾಮಾನ್ಯ. ನಗರದ ಮಧ್ಯಭಾಗದಲ್ಲಿದ್ದರೂ ಗಾಂಧಿನಗರದ ಅನೇಕ ಕಡೆ ರಸ್ತೆಗಳು ಹಾಳಾಗಿವೆ. ಮಳೆ ಬಂದರೆ ನೀರು ಸರಿಯಾಗಿ ಹರಿದು ಹೋಗುವುದಿಲ್ಲ.  ವಾಹನಗಳು ಕಿ.ಮೀ ಗಟ್ಟಲೇ ನಿಲ್ಲುತ್ತವೆ.

ಸ್ಥಳೀಯರು ಏನೆಂತಾರೆ...
ಕುಡಿಯುವ ನೀರಿನ ಸಮಸ್ಯೆ ತೀವ್ರ ವಾಗಿದೆ. ದುಡ್ಡು ಕೊಟ್ಟು ನೀರು ತರು ವಂತಾಗಿದೆ. ಸ್ಥಳೀಯರ ಸಮಸ್ಯೆ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿಲ್ಲ.
-ಬಾಲುಕುಮಾರ್‌, ಓಕಳಿಪುರ ನಿವಾಸಿ

ಮಕ್ಕಳು ಆಟವಾಡಲು, ಹಿರಿಯರು ವಾಯುವಿಹಾರ ಮಾಡಲು ಒಂದೇ ಒಂದು ಉದ್ಯಾನ ಇಲ್ಲ. ನಾವು ಕೂಡ ಇತರರಂತೆ ತೆರಿಗೆ ಕಟ್ಟುತ್ತೇವೆ. ನಮಗೂ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಬೇಕು.
-ಜಯಮ್ಮ, ಬಿನ್ನಿಪೇಟೆ ನಿವಾಸಿ

ಸಂಜೆಯಾದರೆ ಸಾಕು ಜೇಬುಗಳ್ಳರ ಹಾವಳಿ ಹೆಚ್ಚಾಗುತ್ತದೆ. ಮಳಿಗೆಯಲ್ಲಿ ಒಬ್ಬರೇ ಇದ್ದರೆ ಹೆದರಿಸಿ ಹಣ ವಸೂಲಿ ಮಾಡುತ್ತಾರೆ. ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
-ಅಬ್ದುಲ್‌ ಮತಿನ್‌, ಚಿಕ್ಕಪೇಟೆಯ  ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT