ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ಇಲಾಖೆಯಿಂದ ವಾರದೊಳಗೆ ನೋಟಿಸ್ ಜಾರಿ

ಪ್ಯಾನ್‌ ನಮೂದಿಸದೇ ಭಾರಿ ವಹಿವಾಟು
Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌ ) ನಮೂದಿಸದೆ ಭಾರಿ ಮೊತ್ತದ ಹಣಕಾಸಿನ ವಹಿವಾಟು ನಡೆದಿರುವ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಸಂಗ್ರಹಿಸಿದೆ.

ಇಂತಹ 7 ಲಕ್ಷ ಪ್ರಕರಣಗಳಿಗೆ ಸಂಬಂಧಿಸಿದಂತೆ, ಪ್ಯಾನ್‌ ನೀಡುವಂತೆ ಸೂಚಿಸಿ   ಶೀಘ್ರದಲ್ಲೇ ನೋಟಿಸ್‌ ಕಳುಹಿಸಲಾಗುವುದು’ ಎಂದು ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತರಾದ ನೂತನ ಒಡೆಯರ್‌ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹ 10 ಲಕ್ಷಕ್ಕಿಂತ ಹೆಚ್ಚಿನ ನಗದು ಜಮಾ ಮಾಡಿರುವುದು ಹಾಗೂ ₹ 30 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಸ್ಥಿರಾಸ್ತಿಯ ಮಾರಾಟ ಅಥವಾ ಖರೀದಿ ಮಾಡಿದ ಪ್ರಕರಣಗಳ ಬಗ್ಗೆ ಇಲಾಖೆ ನಿಗಾ ಇಟ್ಟಿದೆ.

2009–10ನೇ ಸಾಲಿನಿಂದ ಇಂದಿನವರೆಗೆ ಇಂತಹ 90 ಲಕ್ಷ ವಹಿವಾಟುಗಳ ವಿವರಗಳನ್ನು ತಂತ್ರಜ್ಞಾನದ ನೆರವಿನಿಂದ ಕಲೆಹಾಕಲಾಗಿದೆ.  ಇವುಗಳಲ್ಲಿ ಅತಿ ಹೆಚ್ಚು ಹಣದ ವಹಿವಾಟು ನಡೆದ 7 ಲಕ್ಷ ಪ್ರಕರಣಗಳನ್ನು ಮೊದಲ ಹಂತದಲ್ಲಿ ಪರಿಗಣಿಸಿದ್ದೇವೆ. ಈ ಪ್ರಕರಣಗಳಲ್ಲಿ ಒಟ್ಟು 14 ಲಕ್ಷ ಪ್ಯಾನ್‌ರಹಿತ ವಹಿವಾಟುಗಳು ನಡೆದಿವೆ’ ಎಂದು ಅವರು ವಿವರಿಸಿದರು.

‘ಇ–ಫೈಲಿಂಗ್‌ ವೆಬ್‌ಸೈಟ್‌ ಮೂಲಕವೇ ಪ್ಯಾನ್‌ ವಿವರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.  ನೋಟಿಸ್‌ ತಲುಪಿದ ಬಳಿಕವೂ ಪ್ರತಿಕ್ರಿಯೆ ನೀಡದಿದ್ದಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ವಿವರ ಸಲ್ಲಿಸಿದವರ ಮಾಹಿತಿಯನ್ನು ಗುಪ್ತವಾಗಿಡಲಾಗುವುದು’  ಎಂದರು.

‘ವಾರದೊಳಗೆ ನೋಟಿಸ್‌ ರವಾನೆ ಆಗಲಿದೆ.  ನೋಟಿಸ್‌ ಪಡೆಯುವವರು   ಪೂರಕ ಮಾಹಿತಿ ನೀಡಿ ಇಲಾಖೆ ಜತೆ ಸಹಕರಿಸಬೇಕು. ಆದಾಯ ತೆರಿಗೆ ಅಧಿಕಾರಿಗಳು ಎಂದು ಹೇಳಿಕೊಂಡು ತಪ್ಪು ಮಾಹಿತಿ ನೀಡಲು ಪ್ರಯತ್ನಿಸುವ ವ್ಯಕ್ತಿಗಳ ಬಗ್ಗೆಯೂ ಎಚ್ಚರ ವಹಿಸಬೇಕು’ ಎಂದು ಅವರು ಮನವಿ ಮಾಡಿದರು. 

‘ಕೆಲವರು ಪ್ಯಾನ್‌ ಸಂಖ್ಯೆ ಹೊಂದಿಲ್ಲದ ಕಾರಣಕ್ಕೆ ನಗದು ವಹಿವಾಟಿನ ಸಂದರ್ಭದಲ್ಲಿ ಅದನ್ನು ನಮೂದಿಸದಿರುವ ಸಾಧ್ಯತೆ ಇದೆ. ಆದಾಯವನ್ನು ಮುಚ್ಚಿಡುವ ಸಲುವಾಗಿ  ಪ್ಯಾನ್‌ ಸಂಖ್ಯೆಯನ್ನು ನಮೂದಿಸದ ವರ್ಗವೂ ಇದೆ. ಅವರನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ’ ಎಂದರು.

ಪ್ರಧಾನ ಆಯುಕ್ತರಾದ ಪಿ.ಶ್ರೀಧರ , ‘ನಗದು ಠೇವಣಿ, ಒಂದು ವರ್ಷದಲ್ಲಿ ಕ್ರೆಡಿಟ್‌ ಕಾರ್ಡ್‌ ಮೂಲಕ ₹ 2 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿದವರು,   ಮ್ಯೂಚುವಲ್‌ ಫಂಡ್‌ಗಳಲ್ಲಿ ₹ 2 ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡಿದವರು, ಬಾಂಡ್‌ ಹಾಗೂ ಡಿಬೆಂಚರ್‌ಗಳಲ್ಲಿ ₹ 5 ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡಿದ ಬಗ್ಗೆಯೂ ನಾವು ಈಗಾಗಲೇ ಮಾಹಿತಿ ಕಲೆ ಹಾಕಿದ್ದೇವೆ’ ಎಂದರು.

‘ಪ್ರಾಜೆಕ್ಟ್‌ ಇನ್‌ಸೈಟ್‌’ ಅಭಿಯಾನದ ಅಡಿ ಅಕ್ರಮ ಆಸ್ತಿಗಳನ್ನು ಹೊಂದಿರುವವರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಅಘೋಷಿತ ಆದಾಯವನ್ನು  ಘೋಷಿಸಿಕೊಳ್ಳಲು ಸರ್ಕಾರ ನಾಲ್ಕು ತಿಂಗಳ ಕಾಲಾವಕಾಶ ನೀಡಿದೆ.

ಇದಕ್ಕೆ ವಿಧಿಸುವ ಶೇ 45ರಷ್ಟು ತೆರಿಗೆಯನ್ನು ನಾಲ್ಕು ಕಂತುಗಳಲ್ಲಿ ಕಟ್ಟಬಹುದು.  ಕೊನೆಯ ದಿನಾಂಕದ ಬಳಿಕ  ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಆದಾಯ  ಮುಚ್ಚಿಡಲು   ಸಹಕಾರ ಬ್ಯಾಂಕ್‌ ನೆರವು’
‘ಯಾವುದೇ ಬ್ಯಾಂಕ್‌ ಭಾರಿ ಮೊತ್ತದ ಹಣದ ವಹಿವಾಟು ನಡೆಸುವಾಗ ಹಾಗೂ ಠೇವಣಿಯನ್ನು ಸಂಗ್ರಹಿಸುವಾಗ  ಗ್ರಾಹಕರ ಪ್ಯಾನ್‌ ಸಂಖ್ಯೆಯನ್ನು   ಪಡೆಯುವುದು ಕಡ್ಡಾಯ.  

ವಹಿವಾಟಿನ ಕುರಿತು ಆದಾಯ ತೆರಿಗೆ ಇಲಾಖೆಗೂ ಮಾಹಿತಿ ನೀಡಬೇಕು. ಆದರೆ ಕೆಲವು ಸಹಕಾರ ಬ್ಯಾಂಕ್‌ಗಳು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಈ ನಿಯಮವನ್ನು ಪಾಲಿಸುತ್ತಿಲ್ಲ’ ಎಂದು ಇಲಾಖೆಯ ಮಾಹಿತಿ ತಂತ್ರಜ್ಞಾನ ಮತ್ತು ಗುಪ್ತಚರ  ವಿಭಾಗದ ನಿರ್ದೇಶಕ ಪಿ.ರವಿಚಂದರ್‌ ಅವರು  ತಿಳಿಸಿದರು.

‘ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಒಟ್ಟು 3,500 ವಹಿವಾಟುಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಿಲ್ಲ ಎಂಬ ಅಂಶ ತನಿಖೆ ಸಂದರ್ಭದಲ್ಲಿ ಪತ್ತೆಯಾಗಿದೆ’ ಎಂದು ಅವರು ತಿಳಿಸಿದರು.

‘ಅಧಿಕಾರಿಗಳ ವಿರುದ್ಧವೂ ಕ್ರಮ’
‘ಕೆಲವು ಅಧಿಕಾರಿಗಳೇ ಆದಾಯ ತೆರಿಗೆ ವಂಚಿಸುವ ಮಾರ್ಗೋಪಾಯಗಳನ್ನು ಹೇಳಿಕೊಡುತ್ತಾರೆ. ರಾಜ್ಯದಲ್ಲಿ ಸ್ಥಿರಾಸ್ತಿ ನೋಂದಣಿ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಪ್ಯಾನ್‌ ನಮೂದಿಸದ ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಸಂಬಂಧ ಕರ್ನಾಟಕದಲ್ಲಿ 200 ಉಪನೊಂದಣಾಧಿಕಾರಿಗಳಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ. ಇಂತಹ ತಪ್ಪೆಸಗಿದ ಅಧಿಕಾರಿಗಳಿಗೆ ದಿನಕ್ಕೆ ₹ 500ರಂತೆ ದಂಡ ವಿಧಿಸಲು ಅವಕಾಶ ಇದೆ’ ಎಂದು ನೂತನ ಒಡೆಯರ್‌ ತಿಳಿಸಿದರು.

ಪ್ಯಾನ್‌ರಹಿತ ವಹಿವಾಟು– ಬೆಂಗಳೂರು ಮುಂದೆ: ‘ಬೆಂಗಳೂರಿನಲ್ಲಿ  ಪ್ಯಾನ್‌ರಹಿತ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದೆ. ದೇಶದಲ್ಲಿ ಪತ್ತೆಯಾದ 7 ಲಕ್ಷ ಪ್ರಕರಣಗಳ ಪೈಕಿ  2 ಲಕ್ಷ ಪ್ರಕರಣಗಳು ಬೆಂಗಳೂರಿಗೆ ಸಂಬಂಧಿಸಿದವು’ ಎಂದು ಇಲಾಖೆಯ ಪ್ರಧಾನ ಆಯುಕ್ತರಾದ  ಹೇಮಂತ್‌ ಕುಮಾರ್‌ ಸಾರಂಗ್‌ ತಿಳಿಸಿದರು.

‘ದೇಶದ ಉಳಿದ ನಗರಗಳಿಗೆ ಹೋಲಿಸಿದಲ್ಲಿ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ವಹಿವಾಟು ನಡೆಯುತ್ತಿರುವುದು ಇದಕ್ಕೆ ಕಾರಣ ಇರಬಹುದು.

ರಿಯಲ್‌ ಎಸ್ಟೇಟ್‌ ಉದ್ದಿಮೆ ಮುಂಚೂಣಿಯಲ್ಲಿರುವ ದೇಶದ ಮೊದಲ ಮೂರು ನಗರಗಳ ಪೈಕಿ ಬೆಂಗಳೂರು ಕೂಡಾ ಸೇರಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT