ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ಪಾವತಿ ಕರ್ತವ್ಯ

ಅಕ್ಷರ ಗಾತ್ರ

ಆದಾಯ ತೆರಿಗೆ ಇಲಾಖೆಗೆ ವಾರ್ಷಿಕ ಒಟ್ಟು ಆದಾಯ ಮತ್ತು ಉಳಿತಾಯ ಹಾಗೂ ತೆರಿಗೆ ಪಾವತಿಸಿದ ವಿವರಗಳನ್ನು ಒಳಗೊಂಡ ಲೆಕ್ಕಪತ್ರವನ್ನು ಸಲ್ಲಿಸಿ ಸ್ವೀಕೃತಿಪತ್ರವನ್ನು ಪಡೆದುಕೊಂಡಿರಾ? ಇನ್ನೂ ಇಲ್ಲವೇ?
ಉಳಿದಿರುವುದು ಇನ್ನೆರಡೇ ದಿನ (ಜುಲೈ 30, 31). ತಕ್ಷಣವೇ ತೆರಿಗೆ ರಿಟರ್ನ್‌ ಸಲ್ಲಿಸಿರಿ. ನೆಮ್ಮದಿಯ ಭಾವ ಹೊಂದಿರಿ. ರೂ5 ಲಕ್ಷಕ್ಕಿಂತ ಕಡಿಮೆ ವರಮಾನವಿರುವವರು ಮುದ್ರಿತ ಮಾದರಿ ತೆರಿಗೆ ‘ರಿಟರ್ನ್‌’ (ಲೆಕ್ಕಪತ್ರ) ಸಲ್ಲಿಸಬಹುದು. ರೂ5 ಲಕ್ಷಕ್ಕಿಂತ ಹೆಚ್ಚಿನ ವರಮಾನದವರು ‘ಇ ಫೈಲಿಂಗ್‌’ ಮಾಡುವುದು ಕಡ್ಡಾಯ.

ವೇತನದಾರರು, ಹಿಂದೂ ಅವಿಭಕ್ತ ಕುಟುಂಬಗಳು, ವಿವಿಧ ಕ್ಷೇತ್ರಗಳಲ್ಲಿ ವೃತ್ತಿನಿರತರು, ವಾಣಿಜ್ಯ, ಉದ್ಯಮ ಚಟುವಟಿಕೆಯಲ್ಲಿರುವವರು, 2013; 14ನೇ ಹಣಕಾಸು ವರ್ಷದಲ್ಲಿನ ವಿವಿಧ ಮೂಲದ ವರಮಾನಗಳ ಲೆಕ್ಕಪತ್ರವನ್ನು ಜುಲೈ 31 ಅಥವಾ ಅದಕ್ಕಿಂತ ಮುಂಚಿತವಾಗಿ ಸಲ್ಲಿಸಲೇಬೇಕು. ಈ ಗಡುವಿನ ನಂತರ ಸಲ್ಲಿಸಿದವರಿಗೆ ದಂಡ ಬೀಳಬಹುದು. ವಿಳಂಬವಾದರೂ ರಿಟರ್ನ್‌ ಸಲ್ಲಿಸದೇ ಇದ್ದವರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ಬರುವುದಂತೂ ಖಚಿತ. ಈಗಾಗಲೇ ವೇತನದಾರರು ‘ಮೂಲದಲ್ಲೇ ತೆರಿಗೆ ಕಡಿತ’ (ಟಿಡಿಎಸ್‌) ರೂಪದಲ್ಲಿ ತೆರಿಗೆ ಪಾವತಿಸಿರುತ್ತಾರೆ. ಉಳಿದವರೂ  ಮುಂಗಡ ತೆರಿಗೆ ಪಾವತಿಸಿರುತ್ತಾರೆ.

ತೆರಿಗೆ ಪಾವತಿಸಿ ಆಯಿತು. ಇನ್ನೇಕೆ ತಲೆ ಕೆಡಿಸಿಕೊಳ್ಳಬೇಕು. ರಿಟರ್ನ್‌ ಸಲ್ಲಿಸುವ ಗೋಜಲೇಕೆ? ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ. ತೆರಿಗೆ ಅಧಿಕಾರಿಗಳಿಗೆ ಹೇಗೆ ತಿಳಿಯುತ್ತದೆ ಎಂದು ಸುಳ್ಳಿನ ಲೆಕ್ಕವನ್ನೂ ಕೊಡಲಾಗುವುದಿಲ್ಲ. ಏಕೆಂದರೆ ಆಯಾ ಹಣಕಾಸು ವರ್ಷದಲ್ಲಿ ನಾವು ನಡೆಸಿದ ಪ್ರತಿಯೊಂದು (ನಿಗದಿತ ಮಿತಿ ದಾಟಿದ ಮೊತ್ತದ) ಹಣಕಾಸು ವಹಿವಾಟುಗಳ ವಿವರಗಳೆಲ್ಲವೂ ಆದಾಯ ತೆರಿಗೆ ಇಲಾಖೆಯಲ್ಲಿ ‘ಡೇಟಾ’ (ದತ್ತಾಂಶ) ರೂಪದಲ್ಲಿ ಸಂಗ್ರಹವಾಗುತ್ತಾ ಇರುತ್ತದೆ. ‘ಪ್ಯಾನ್‌’ (ಪರ್ಮನೆಂಟ್‌ ಅಕೌಂಟ್‌ ನಂಬರ್‌) ಕಾರ್ಡ್ ಇದೆಯಲ್ಲಾ. ಅದರ ಮೂಲಕವೇ ನಮ್ಮ ಎಲ್ಲ ವಹಿವಾಟಿನ ವಿವರಗಳೂ ಆದಾಯ ತೆರಿಗೆ ಇಲಾಖೆಯ ಗಣಕಯಂತ್ರವನ್ನು ಸೇರಿಕೊಳ್ಳುತ್ತಲೇ ಇರುತ್ತವೆ.

ಪ್ಯಾನ್‌ ಮಹಿಮೆ!
ವೇತನದ ವಿವರವೆಲ್ಲವನ್ನೂ ನಾವು ಕೆಲಸ ಮಾಡುವ ಸಂಸ್ಥೆಯ ಹಣಕಾಸು ವಿಭಾಗದವರು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುತ್ತಾರೆ. ಜತೆಗೆ, ಆ ಹಣಕಾಸು ವರ್ಷದಲ್ಲಿ (12 ತಿಂಗಳು) ನಾವು ಪಡೆಯಬಹುದಾದ ಒಟ್ಟು ವೇತನ, ಮನೆ ಬಾಡಿಗೆ ಭತ್ಯೆ, ವೃತ್ತಿ ತೆರಿಗೆ, ಆದಾಯ ತೆರಿಗೆ ಕಾಯ್ದೆಯ  80ಸಿ, ಸಿಸಿ, ಸಿಸಿಸಿ, ಡಿ, ಜಿ ಮೊದಲಾದ  ಸೆಕ್ಷನ್‌ಗಳಡಿ ನಾವು ಹೇಗೆಲ್ಲಾ (ಗರಿಷ್ಠ ರೂ1 ಲಕ್ಷ) ಉಳಿತಾಯ ಮಾಡುತ್ತೇವೆ ಎಂಬುದನ್ನೆಲ್ಲಾ ಪರಿಗಣಿಸಿ ಇಡೀ ವರ್ಷದ ಆದಾಯ ತೆರಿಗೆಯನ್ನು ಲೆಕ್ಕ ಹಾಕುತ್ತಾರೆ. ನಂತರ ಒಟ್ಟು ತೆರಿಗೆ ಮೊತ್ತವನ್ನು 12ರಿಂದ ಬಾಗಿಸಿ ಅದೇ ಪ್ರಕಾರವಾಗಿ ಪ್ರತಿ ತಿಂಗಳೂ ತೆರಿಗೆಯನ್ನೂ ಕಡಿತ ಮಾಡುತ್ತಾರೆ.

ಇಲ್ಲಿ, ನಮ್ಮ ಕರ್ತವ್ಯವೂ ಮುಖ್ಯವಾಗಿದೆ. ಏನೆಂದರೆ ನಾವು ಆದಾಯ ತೆರಿಗೆಯ ನಿಬಂಧನೆಗಳಿಗೆ ಒಳಪಟ್ಟು ಯಾವ ಯೋಜನೆಗಳಲ್ಲಿ ಹಣ ತೊಡಗಿಸಿ ಉಳಿತಾಯ ಮಾಡುತ್ತಿದ್ದೇವೆ, ಎಷ್ಟು ಮನೆ ಬಾಡಿಗೆ ಕಟ್ಟುತ್ತಿದ್ದೇವೆ, ಶಾಲೆ, ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳಿದ್ದರೆ ಅವರ ಶಿಕ್ಷಣ ಶುಲ್ಕವಾಗಿ ಎಷ್ಟು ಹಣ ಪಾವತಿಸುತ್ತಿದ್ದೇವೆ ಎಂಬ ವಿವರಗಳನ್ನೆಲ್ಲಾ ದಾಖಲೆಗಳ ಸಮೇತ ಪ್ರತಿ ಹಣಕಾಸು ವರ್ಷದ ಆರಂಭದಲ್ಲಿಯೇ (ಏಪ್ರಿಲ್‌) ನಾವು ಕೆಲಸ ಮಾಡುವ ಸಂಸ್ಥೆಯ ಹಣಕಾಸು ವಿಭಾಗಕ್ಕೆ ತಿಳಿಸಬೇಕಿರುತ್ತದೆ. ಇಲ್ಲವಾದರೆ ಮೂಲದಲ್ಲೇ ತೆರಿಗೆ ಕಡಿತ ಪ್ರಮಾಣ ಹೆಚ್ಚೇ ಆಗಿರುತ್ತದೆ.

ಬ್ಯಾಂಕ್‌ನಲ್ಲಿ ನಾವು ರೂ50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುವಾಗ ‘ಪ್ಯಾನ್‌’ ನಮೂದಿಸುವುದು ಕಡ್ಡಾಯ. ರೂ1 ಲಕ್ಷ ಅದಕ್ಕಿಂತ ಹೆಚ್ಚಿನ ಮೊತ್ತದ ಎಫ್‌ಡಿ ಇಡುವಾಗಲೂ ‘ಪ್ಯಾನ್‌’ ಕಡ್ಡಾಯ. ಹಾಗಾಗಿ, ನಿಗದಿತ ಮೊತ್ತದ ನಮ್ಮ ಬ್ಯಾಂಕಿಂಗ್ ವಹಿವಾಟುಗಳ ವಿವರ ತೆರಿಗೆ ಇಲಾಖೆಗೆ ಲಭ್ಯವಾಗುತ್ತಲೇ ಇರುತ್ತದೆ.

ದೊಡ್ಡ ಪ್ರಮಾಣದಲ್ಲಿ ಆಭರಣ, ಸ್ಥಿರಾಸ್ತಿ ಖರೀದಿ ಮೊದಲಾದ ವಹಿವಾಟು ಸಂದರ್ಭಗಳಲ್ಲಿನ ವಿವರಗಳೂ ಸಹ ‘ಪ್ಯಾನ್‌’ ಮೂಲಕ ತೆರಿಗೆ ಇಲಾಖೆಯ ಗಣಕಯಂತ್ರವನ್ನು ಸೇರುತ್ತವೆ. ಹಾಗಾಗಿ, ಆದಾಯ ತೆರಿಗೆ ಇಲಾಖೆಯ ಕಣ್ಣು ತಪ್ಪಿಸುವುದು ಅಷ್ಟೊಂದು ಸುಲಭವಲ್ಲ. ನಮ್ಮ ಆದಾಯ, ಉಳಿತಾಯ ಲೆಕ್ಕಕ್ಕೆ ತಕ್ಕಂತೆ ಪ್ರಾಮಾಣಿಕವಾಗಿ ಆಯಾ ಹಣಕಾಸು ವರ್ಷದಲ್ಲೇ ತೆರಿಗೆ ಪಾವತಿಸುವುದು ಹಾಗೂ ಆ ಕುರಿತ ಎಲ್ಲಾ ವಿವರಗಳನ್ನೂ ಮುಂದಿನ ವರ್ಷದ ಜುಲೈ 31ರೊಳಗೆ ಲಿಖಿತ ರೂಪದಲ್ಲಿ (ಮುದ್ರಿತ ಮಾದರಿಯಾದರೆ ಆಯಾ ವ್ಯಾಪ್ತಿಯ ಆದಾಯ ತೆರಿಗೆ ಇಲಾಖೆ ಕಚೇರಿಗೆ ಇಲ್ಲವಾದರೆ ಅಂತರ್ಜಾಲದ ಮೂಲಕ ಇ ಫೈಲಿಂಗ್‌) ಸಲ್ಲಿಸುವುದು ಸುರಕ್ಷಿತ ಕ್ರಮ.

ರಿಟರ್ನ್‌ ಪ್ರಯೋಜನ
ಹೇಳುವುದು ಮರೆತಿದ್ದೆ, ಹೀಗೆ ನೀವು ತೆರಿಗೆ ಲೆಕ್ಕಪತ್ರವನ್ನು ಕ್ರಮಬದ್ಧವಾಗಿ ಸಲ್ಲಿಸಿ ಅದರ ಸ್ವೀಕೃತಿ ಪತ್ರವನ್ನು ತೆರಿಗೆ ಇಲಾಖೆಯಿಂದ ಪಡೆದುಕೊಳ್ಳುತ್ತೀರಲ್ಲಾ ಅದನ್ನು ಜೋಪಾನವಾಗಿ ಕಾಯ್ದಿಡಿ. ಏಕೆಂದರೆ, ಬ್ಯಾಂಕಿಂಗ್‌ ವ್ಯವಹಾರಗಳಲ್ಲಿ (ವೈಯಕ್ತಿಕ ಸಾಲ, ವಾಹನ ಖರೀದಿ ಸಾಲ, ಗೃಹಸಾಲ ಪಡೆಯುವಾಗ) ಈ ಸ್ವೀಕೃತಿ ಪತ್ರ ಬಹಳವಾಗಿ ಪ್ರಯೋಜನಕ್ಕೆ ಬರುತ್ತದೆ. ನಿಮ್ಮ ಸಾಲದ ಕೋರಿಕೆ ಸಮ್ಮತಿ ಸೂಚಿಸಬೇಕಾದರೆ, ಸಾಲದ ಮೊತ್ತವನ್ನು ನಿರ್ಧರಿಸಬೇಕಾದರೆ ಬ್ಯಾಂಕಿನವರು ಮೂರು ವರ್ಷದ ನಿಮ್ಮ ‘ಐಟಿ ರಿಟರ್ನ್‌’ ಕೇಳುತ್ತಾರೆ. ಈ ಸ್ವೀಕೃತಿ ಪತ್ರ ಇಲ್ಲದೇ ಇದ್ದರೆ ನಿಮಗೆ ದೊಡ್ಡ ಮೊತ್ತದ ಸಾಲಗಳನ್ನು ಪಡೆಯುವುದೇ ಕಷ್ಟವಾಗುತ್ತದೆ. 

ಈ ವರ್ಷದ ಕತೆಯೇನು?
ಇಷ್ಟೆಲ್ಲಾ ಆದ ಮೇಲೆ 2013; 14ನೇ ಹಣಕಾಸು ವರ್ಷದ ತೆರಿಗೆ ರಿಟರ್ನ್‌ ಸಲ್ಲಿಸಿಯಾಯ್ತು. ಮುಖ್ಯವಾದ ಕೆಲಸ ಮುಗಿಯಿತು ಎಂದು ನೆಮ್ಮದಿಯ ನಿಟ್ಟುಸಿರುಬಿಟ್ಟು ಸುಮ್ಮನಾಗದಿರಿ. 2014; 15ನೇ ಹಣಕಾಸು ವರ್ಷದಲ್ಲಿ ನೀವು ಉಳಿಸಬಹುದಾದ ಆದಾಯ ತೆರಿಗೆ ಬಗ್ಗೆ ಈಗಲೇ ಗಮನ ಹರಿಸಿ.
ಪ್ರಸಕ್ತ ಹಣಕಾಸು ವರ್ಷಕ್ಕೆ ನೀವು ತೆರಿಗೆ ಉಳಿತಾಯ ಕುರಿತು ಏಪ್ರಿಲ್‌ನಲ್ಲಿಯೇ ಯೋಜನೆ ರೂಪಿಸಿರಬೇಕು. ಇಲ್ಲವಾದರೆ ಈಗಾಗಲೇ ನಾಲ್ಕು ತಿಂಗಳಷ್ಟು ತಡವಾಗಿದೆ. ತಕ್ಷಣ ಕಾರ್ಯೋನ್ಮುಖರಾಗಿ.

ಅಲ್ಲದೇ, ನೀವು ಯೋಜಿತ ರೀತಿಯಲ್ಲಿ ಪ್ರಯತ್ನಿಸಿದರೆ ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ಒಟ್ಟು ರೂ15,450 ತೆರಿಗೆ ಉಳಿತಾಯ ಮಾಡಬಹುದು!  ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಜುಲೈ 10ರಂದು ಮಂಡಿಸಿದ 2014; 15ನೇ ಹಣಕಾಸು ವರ್ಷದ ಪೂರ್ಣಾವಧಿ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು (ಸ್ಟ್ಯಾಂಡರ್ಡ್‌ ಡಿಡಕ್ಷನ್) ರೂ2 ಲಕ್ಷದಿಂದ ರೂ2.50 ಲಕ್ಷಕ್ಕೆ ಹೆಚ್ಚಿಸಿದರಲ್ಲ. ಅದರಿಂದ ಈ ವರ್ಷ ಹೆಚ್ಚುವರಿಯಾಗಿ ರೂ50 ಸಾವಿರ ಆದಾಯವು ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿಯಲಿದೆ. ಇದರಿಂದ ಪ್ರತಿ ತೆರಿಗೆದಾರರಿಗೂ ಹೆಚ್ಚುವರಿಯಾಗಿ ರೂ5,150 (ಶೇ 3ರಷ್ಟು ಶೈಕ್ಷಣಿಕ ಉಪ ತೆರಿಗೆ ಸೇರಿದಂತೆ) ತೆರಿಗೆ ಉಳಿಯುತ್ತದೆ.

ಇನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 80ಸಿ, ಸಿಸಿ, ಸಿಸಿಸಿ ಅಡಿಯಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಈ ಬಾರಿ ಹೆಚ್ಚುವರಿಯಾಗಿ ರೂ50 ಸಾವಿರದಷ್ಟು ಉಳಿತಾಯದ ಹೂಡಿಕೆ ಮಾಡಬೇಕಿದೆ. ಹಾಗೆ ಮಾಡಿದರೆ ಮತ್ತೆ ರೂ5,150 ತೆರಿಗೆ ಹೊರೆ ತಗ್ಗುತ್ತದೆ.

ಗೃಹಸಾಲದ ಅನುಕೂಲ
ಗೃಹಸಾಲ ಪಡೆದಿದ್ದವರಾದರೆ ಹೊಸದಾಗಿ ಈ ವಿಚಾರದಲ್ಲಿ ಶ್ರಮ  ತೆಗೆದುಕೊಳ್ಳುವುದು ಅನಗತ್ಯ. ಗೃಹಸಾಲದ ಅಸಲಿಗೆ ಈ ವರ್ಷ ಕಟ್ಟುವ ಕಂತಿನ ಮೊತ್ತ ರೂ1 ಲಕ್ಷದಷ್ಟಿದ್ದರೆ ಅದನ್ನೇ ಈ ಸೆಕ್ಷನ್‌ಗಳಡಿ ಪರಿಗಣಿಸಬಹುದು. ಉಳಿದಂತೆ ನೌಕರರ ಭವಿಷ್ಯ ನಿಧಿ ಮತ್ತು ಜೀವವಿಮೆ, ತೆರಿಗೆ ಉಳಿತಾಯದ ಐದು ವರ್ಷದ ಬ್ಯಾಂಕ್‌ ಠೇವಣಿಗಳಿಂದ ರೂ50 ಸಾವಿರದ ಉಳಿತಾಯ ಹೂಡಿಕೆ ತೋರಿಸಬಹುದು.

ಗೃಹಸಾಲಕ್ಕೆ ಪಾವತಿಸುವ ಬಡ್ಡಿಯನ್ನೂ (ಕಳೆದ ವರ್ಷದ ರೂ1.50 ಲಕ್ಷದವರೆಗೂ) ಲೆಕ್ಕಕ್ಕೆ ಸೇರಿಸಿ ತೆರಿಗೆ ವಿನಾಯ್ತಿ ಸೌಲಭ್ಯ ಬಳಸಿಕೊಂಡು ರೂ15,450ದಷ್ಟು ತೆರಿಗೆ ಉಳಿಸಿಕೊಳ್ಳಲು ಅವಕಾಶವಿದೆ. ಆದರೆ, ಈ ವರ್ಷ ರೂ2 ಲಕ್ಷದವರೆಗಿನ ಬಡ್ಡಿ ಮೊತ್ತಕ್ಕೆ (ರೂ50 ಸಾವಿರ ಹೆಚ್ಚುವರಿ) ತೆರಿಗೆ ವಿನಾಯ್ತಿ ಸೌಲಭ್ಯ ಲಭ್ಯವಾಗಿದೆ. ಹಾಗಾಗಿ ಗೃಹಸಾಲ ಪಡೆದಿದ್ದವರಿಗೆ ಇಲ್ಲಿಯೂ ಹೆಚ್ಚುವರಿಯಾಗಿ ರೂ5,150 ಉಳಿತಾಯವಾಗಲಿದೆ.
ಒಂದೊಮ್ಮೆ ಗೃಹಸಾಲ ಪಡೆಯದೇ ಇದ್ದವರು, ಈ ವರ್ಷವಾದರೂ ‘ಸ್ವಂತ ಮನೆ’ಯ ಕನಸನ್ನು ನನಸು ಮಾಡಿಕೊಳ್ಳಬಹುದು. ಇದು ಡಬಲ್‌ ಧಮಾಕ ತರಲಿದೆ. ಮನೆಯೂ ಆಯಿತು. ಗೃಹಸಾಲದ ಅಸಲು ಬಡ್ಡಿ ಮೂಲಕ ಕನಿಷ್ಠ ರೂ20,600ರಿಂದ ರೂ30,900ದವರೆಗೂ ತೆರಿಗೆ ಉಳಿತಾಯವೂ ಆಯಿತು.

ಹೊರೆ ಎಂದು ಕೊರಗದಿರಿ
ಒಂದು ಕೋನದಿಂದಷ್ಟೇ ನೋಡಿದರೆ ಆದಾಯ ತೆರಿಗೆ ಎಂಬುದು ನೌಕರರಿಗೆ, ವೃತ್ತಿನಿರತರಿಗೆ, ಹಿಂದೂ ಅವಿಭಕ್ತ ಕುಟುಂಬಕ್ಕೆ, ವರ್ತಕ, ಉದ್ಯಮಿಗಳಿಗೆ ಹೊರೆ ಎನಿಸಬಹುದು. ಆದರೆ, ಇದು ದೇಶದಿಂದ ನಾವು ಪಡೆದುಕೊಳ್ಳುವ ಹಲವು ಹತ್ತು ಸೌಲಭ್ಯಗಳಿಗೆ ಸಲ್ಲಿಸಲೇಬೇಕಾದ ಶುಲ್ಕ, ದೇಶದ ವಿವಿಧ ಅಭಿವೃದ್ಧಿಕಾರ್ಯಗಳಿಗೆ ನಾವು ನೀಡಬೇಕಾದ ಕೊಡುಗೆ ಎಂದೂ ಅರ್ಥಮಾಡಿಕೊಳ್ಳಬಹುದಲ್ಲವೇ?

ಜತೆಗೆ, ನಾವು ವೃದ್ಧಾಪ್ಯದ ದಿನಗಳಿಗಾಗಿ, ನಮ್ಮನ್ನು ಅವಲಂಬಿಸಿದವರ ಭವಿಷ್ಯದ ಬದುಕಿಗಾಗಿ ಕಡ್ಡಾಯವಾಗಿ ಹಣ ಉಳಿತಾಯ ಮಾಡುವಂತೆ ಪ್ರಚೋದಿಸುವ ಪ್ರಯತ್ನ ಎಂದೂ ಅರ್ಥೈಸಿಕೊಳ್ಳಬಹುದು. ಅಂದರೆ, ‘ಕಹಿಯಾದರೂ  ಆರೋಗ್ಯಕಾರಿಯಾದ ಔಷಧ’ ಎಂದೂ ಪರಿಗಣಿಸಬಹುದು, ಅಲ್ಲವೇ?

ಉಳಿತಾಯದ ಹೂಡಿಕೆ ಮತ್ತು ತೆರಿಗೆ ಹೊರೆ ಇಳಿಸಿಕೊಳ್ಳುವ ಬಗ್ಗೆ ಈಗಲೇ ಯೋಚಿಸಿರಿ. ಕ್ರಮಬದ್ಧವಾಗಿ ಯೋಜಿಸಿ, ಭವಿಷ್ಯಕ್ಕೆ ಹಣವನ್ನೂ ಕೂಡಿಡಿ, ತೆರಿಗೆಯ ಹೊರೆಯನ್ನೂ ಕಡಿಮೆ ಮಾಡಿಕೊಳ್ಳಿ. ಸಾಧ್ಯವಾದರೆ ಸ್ವಂತಕ್ಕೊಂದು ಮನೆಯನ್ನೂ ಕಟ್ಟಿಕೊಂಡು ಹೆಚ್ಚಿನ ತೆರಿಗೆ ಉಳಿತಾಯ ಮಾಡಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT