ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದ್ಯತೆ ಮರೆಯದಿರಲಿ

Last Updated 23 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕಳೆದ ಅನೇಕ ದಿನಗಳಿಂದ ಮತಾಂತರ ವಿವಾದ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸುತ್ತಿದೆ.  ‘ಮರಳಿ ಮನೆಗೆ’ ( ‘ಘರ್‌ ವಾಪಸಿ’ ) ಹೆಸರಲ್ಲಿ  ಸಂಘ ಪರಿವಾರ  ಹುಟ್ಟುಹಾಕಿದ ಮರು ಮತಾಂತರ  ವಿಚಾರ ದೊಡ್ಡ ವಿವಾದವಾಗಿ ಬೆಳೆಯುತ್ತಿದೆ.

ಆಗ್ರಾದಲ್ಲಿ ಕೆಲವು ದಿನಗಳ ಹಿಂದೆ    ಮುಸ್ಲಿಂ ಸಮುದಾಯದವರನ್ನು ಹಿಂದೂ ಧರ್ಮಕ್ಕೆ ಸಂಘ ಪರಿವಾರ ಸಾಮೂ­ಹಿಕ­ವಾಗಿ ಮತಾಂತರ­ಗೊಳಿಸಿತು. ಸಾಮೂಹಿಕ ಮತಾಂತರ ಕಾರ್ಯ­­ಕ್ರಮ­ದಲ್ಲಿ ಹಣೆಯ ಮೇಲೆ ತಿಲಕವಿಟ್ಟು­ಕೊಂಡು ಹೋಮ, ಹವನ­ದಲ್ಲಿ ಭಾಗಿಯಾಗಿದ್ದ ಅದೇ ಜನ ಮರುದಿನ ಯಥಾ­ರೀತಿ ನಮಾಜ್‌ನಲ್ಲೂ ಪಾಲ್ಗೊಂಡಿದ್ದರು. ಪ್ರಕರಣ ವಿವಾದಕ್ಕೆ ತಿರುಗಿದ ಮೇಲೆ ಮರು­ಮತಾಂತರ­ಗೊಂಡವರು ತಮಗೆ ಈ ಕುರಿತು ಏನೂ ತಿಳಿದಿಲ್ಲ ಎಂದಿದ್ದಾರೆ. 

ಮುಗ್ಧ ಮುಸ್ಲಿಮರನ್ನು ಬಲವಂತವಾಗಿ ಹಿಂದೂ ಧರ್ಮಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಜರಂಗ ದಳ ಮತಾಂತರ ಮಾಡಿವೆ ಎಂದು ಕಾಂಗ್ರೆಸ್‌, ಬಿಎಸ್‌ಪಿ ಸೇರಿದಂತೆ ಪ್ರತಿಪಕ್ಷಗಳು ಸಂಸತ್ತಿನಲ್ಲಿ ತೀವ್ರ ಆಕ್ರೋಶ ವ್ಯಕ್ತ­ಪಡಿಸಿ, ಕಲಾಪಕ್ಕೆ ತಡೆ ಒಡ್ಡಿವೆ.   ಈ ನಡುವೆ, ಹಿಂದುತ್ವ ಪರ ಸಂಘಟ­ನೆ­­ಗಳು ಇದೇ 25ರಂದು ಮತೀಯ ಸೂಕ್ಷ್ಮ ಪ್ರದೇಶವೆಂದು ಗುರುತಿಸ­ಲಾ­ಗಿರುವ ಅಲೀಗಡದಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ಸುಮಾರು ಐದು ಸಾವಿರ ಜನರನ್ನು ಮರು ಮತಾಂತರಗೊಳಿಸುವುದಾಗಿ ಹೇಳಿವೆ.

ವಿಶ್ವಹಿಂದೂ ಪರಿಷತ್‌ (ವಿಹೆಚ್‌ಪಿ) ಮತ್ತು ಕೇಂದ್ರ ಸರ್ಕಾರ ಮತಾಂತರ  ಕುರಿತಂತೆ ಭಿನ್ನ ದನಿಗಳಲ್ಲಿ ಮಾತನಾಡುತ್ತಿರುವುದು ವಿವಾದವನ್ನು ಇನ್ನಷ್ಟು ತೀವ್ರವಾಗಿಸುತ್ತಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ­ನಾಯ್ಡು ಅವರು,   ಮತಾಂತರ ಅಥವಾ ಮರುಮತಾಂತರದಲ್ಲಿ ಸರ್ಕಾ­ರದ ಪಾತ್ರವಿಲ್ಲ ಎಂದು ಸಂಸತ್ತಿನಲ್ಲಿ ಹೇಳಿದ್ದಾರೆ. ಮತಾಂತರಗಳಿಗೆ ಬಲಾ­ತ್ಕಾರ ಅಥವಾ ಆಮಿಷ ಒಡ್ಡಿದ್ದಲ್ಲಿ ಅದನ್ನು ನ್ಯಾಯಾಲಯಗಳು ತೀರ್ಮಾ­ನಿಸುತ್ತವೆ ಎಂದೂ ಅವರು  ಹೇಳಿದ್ದಾರೆ. ಆದರೆ  ಶೇ 82 ರಷ್ಟಿರುವ ಹಿಂದೂ ಜನಸಂಖ್ಯೆಯನ್ನು ಶೇ 100ಕ್ಕೆ ಏರಿಸುವುದಾಗಿ ವಿಎಚ್‌ಪಿ ತಿಳಿಸಿದೆ. ಮತಾಂತರ ಮುಂದುವರಿಯಲಿದೆ ಎಂದು ವಿಎಚ್‌ಪಿ ನಾಯಕ ಅಶೋಕ್ ಸಿಂಘಾಲ್ ಘೋಷಿಸಿದರೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಮತಾಂತರಕ್ಕೆ ಬೆಂಬಲ  ಸೂಚಿಸಿದ್ದಾರೆ.

ಮತಾಂತರ ತಡೆ ಮಸೂದೆಗೆ ಜಾತ್ಯ­ತೀತ ಪಕ್ಷಗಳು ಬೆಂಬಲ ಸೂಚಿಸಲಿ ಎಂದು ಈ ಮಧ್ಯೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರೂ ಸವಾಲು ಹಾಕಿದ್ದಾರೆ.  ಈ ಎಲ್ಲಾ ವಾಗ್ವಾದಗಳಿಗೆ ಪ್ರತಿಕ್ರಿಯಿಸದೆ  ಪ್ರಧಾನಿಯವರು ಮೌನ ವಹಿಸಿರುವುದು ಎದ್ದುಕಾಣಿಸುವ ಸಂಗತಿ. ಅಭಿವೃದ್ಧಿ ಮಂತ್ರದ ಭರವಸೆ ಮೇಲೆ ಅಧಿಕಾರ ಹಿಡಿದಿರುವ ಮೋದಿಯವರ ವರ್ಚಸ್ಸಿಗೆ ಈ ವಿವಾದ ಕಳಂಕ ತರುವಂತಹದ್ದು ಎಂಬು­ದನ್ನು ಅವರು ಅರಿಯಬೇಕು.

ಸಂವಿಧಾನದ 25 ನೇ ವಿಧಿ ಪ್ರಕಾರ,  ಸಮಸ್ತ ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಇದೆ. ಮತಾಂತರ ನಿಷೇಧ ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು ಎಂಬುದನ್ನು ಅರಿತು­ಕೊಳ್ಳ-­ಬೇಕು. ವಾಸ್ತವವಾಗಿ ಸಂಸತ್ತಿನಲ್ಲಿ ಹಲವು ಮಸೂದೆಗಳು ಚರ್ಚೆಯಾಗಿ ಅನುಮೋದನೆಗೊಳ್ಳಬೇಕಾದ ತುರ್ತು ಇದೆ. ಇಂತಹ ಸಂದರ್ಭದಲ್ಲಿ ಮತಾಂತರ ವಿವಾದ ಅನಗತ್ಯ ಗೊಂದಲಗಳನ್ನು ಜನರಲ್ಲಿ ಹುಟ್ಟು­ಹಾಕು­ತ್ತಿದೆ. ಇಂಥ ಸೂಕ್ಷ್ಮ ಮತ್ತು ಖಾಸಗಿ ವಿಷಯಗಳನ್ನು ರಾಜಕೀಯ ದಾಳ­ಗಳಾಗಿ ರಾಜಕೀಯ ಪಕ್ಷಗಳು ಮಾಡಿಕೊಳ್ಳುವುದು ಸರ್ವಥಾ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT