ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ಕಡ್ಡಾಯವಲ್ಲ: ಸರ್ಕಾರ ಸ್ಪಷ್ಟನೆ

Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ನವದೆಹಲಿ:  ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಲು ಆಧಾರ್‌ ಕಡ್ಡಾಯವಲ್ಲ ಎಂದು ರಾಜ್ಯಸಭೆಯಲ್ಲಿ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಆಧಾರ್‌  ಮೂಲಕವೂ ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಿ ಸಂಸತ್ತಿನಲ್ಲಿ ಕಾನೂನು ಅಂಗೀಕರಿಸಲಾಗಿದೆ. ಆದರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್‌ ಕಡ್ಡಾಯವಲ್ಲ. ಆಧಾರ್ ಸಂಖ್ಯೆ ನೀಡುವಂತೆ ಫಲಾನುಭವಿಗಳ ಮೇಲೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದರೆ ಹಾಗೆ ಮಾಡದಂತೆ ಅಗತ್ಯ ನಿರ್ದೇಶನ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಆಧಾರ್ ಕಾರ್ಡನ್ನು ಕಡ್ಡಾಯ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಕೇಂದ್ರ ಸರ್ಕಾರ ಅದನ್ನು ಕಡ್ಡಾಯ ಮಾಡಿರುವ ಬಗ್ಗೆ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಭಾರಿ ವಿರೋಧ ವ್ಯಕ್ತಪಡಿಸಿದವು.

ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಜು ಜನತಾ ದಳ ಪಕ್ಷದ ಸದಸ್ಯರು ಈ ವಿಷಯ ಪ್ರಸ್ತಾಪಿಸಿ  ಸಭಾಧ್ಯಕ್ಷರ ಪೀಠದ ಮುಂದೆ ನಿಂತು ಗದ್ದಲವೆಬ್ಬಿಸಿದರು. ಕಾಂಗ್ರೆಸ್ ಮತ್ತು ಎಡಪಕ್ಷಗಳ ಸದಸ್ಯರು ಇದಕ್ಕೆ ಬೆಂಬಲ ಸೂಚಿಸಿದ್ದರಿಂದ ಉಪ ಸಭಾಪತಿ ಪಿ. ಜೆ. ಕುರಿಯನ್ ಅವರು ದಿನದ ಪೂರ್ವಾರ್ಧ ಭಾಗದಲ್ಲಿ ಕಲಾಪವನ್ನು ಮೂರು ಬಾರಿ ಮುಂದೂಡಿದರು.

ಮೊದಲಿಗೆ ಮಧ್ಯಾಹ್ನದವರೆಗೆ ಕಲಾಪವನ್ನು ಮುಂದೂಡಲಾಯಿತು. ನಂತರ ಎರಡನೇ ಬಾರಿ 15 ನಿಮಿಷಗಳ ಕಾಲ ಮುಂದೂಡಲಾಯಿತು. ಮೂರನೇ ಬಾರಿ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.

ಫಲಾನುಭವಿಗಳಿಗೆ ಆಧಾರ್ ಸಂಖ್ಯೆ ನೀಡುವಂತೆ ಒತ್ತಾಯಿಸಬಾರದು ಎಂದು ಅಧಿಕಾರಿಗಳಿಗೆ ಆದೇಶ ನೀಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ದು ಮತ್ತು ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ ಪದೇ ಪದೇ ಹೇಳಿದರೂ ವಿರೋಧ ಪಕ್ಷಗಳ ಸದಸ್ಯರು ಗದ್ದಲ ನಿಲ್ಲಿಸಲಿಲ್ಲ.

ಸಹಕಾರ ತತ್ವದ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುವ ಬಿಜೆಪಿ ನೇತೃತ್ವದ ಸರ್ಕಾರವು ರಾಜ್ಯಗಳ ಜತೆ ಚರ್ಚಿಸದೆ ನಿರ್ಧಾರ ತೆಗೆದುಕೊಳ್ಳುತ್ತಿದೆ. ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಿದ್ದರಿಂದ ಜನರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಾಯನ್‌ ಹೇಳಿದರು.

ಆಧಾರ್ ಕಾರ್ಡ್ ಹೊಂದದ ಪಡಿ ತರ ಚೀಟಿದಾರರಿಗೆ ಪಡಿತರ ನೀಡಬಾರದು, ಸಬ್ಸಿಡಿ ಸಹಿತ ಎಲ್‌ಪಿಜಿ ನಿಲ್ಲಿಸಬೇಕು ಎಂದು ಸೂಚಿಸಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಮೂರು ಆದೇಶ ಕಳುಹಿಸಿದೆ ಎಂಬ ವಿಚಾರವನ್ನು ಸಮಾಜ ವಾದಿ ಪಕ್ಷದ ರಾಂ ಗೋಪಾಲ್ ಯಾದವ್ ಮತ್ತು ನರೇಶ್ ಅಗರ್‌ವಾಲ್ ಸದನದ ಗಮನಕ್ಕೆ ತಂದರು.

ದೇಶದ ಶೇಕಡ 40ರಷ್ಟು ಜನರ ಬಳಿ ಆಧಾರ್ ಕಾರ್ಡ್ ಇಲ್ಲ. ಆದ್ದರಿಂದ ಅದನ್ನು ಕಡ್ಡಾಯಗೊಳಿಸಿದರೆ ಜನರಿಗೆ ತೊಂದರೆ ಆಗುತ್ತದೆ ಎಂದು ಯಾದವ್ ಹೇಳಿದರು.

ಆಧಾರ್ ಸಂಖ್ಯೆ ನೀಡುವುದು ಜನರ ಆಯ್ಕೆಯಾಗಬೇಕೇ ವಿನಾ ಕಡ್ಡಾಯಗೊ ಳಿಸಬಾರದು ಎಂದು ಸುಪ್ರೀಂಕೋರ್ಟ್ 2015ರ ಅಕ್ಟೋಬರ್‌ನಲ್ಲಿ ಹೊರಡಿಸಿ ರುವ ಆದೇಶದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ಇಲ್ಲವೇ ಎಂದು ತೃಣಮೂಲ ಕಾಂಗ್ರೆಸ್‌ನ ಸುಖೇಂದು ಶೇಖರ್ ರಾಯ್ ಪ್ರಶ್ನಿಸಿದರು. ಸದಸ್ಯರು ವ್ಯಕ್ತಪಡಿಸಿರುವ ಆತಂಕ ಸರ್ಕಾರದ ಗಮನಕ್ಕೆ ಬಂದಿದೆ. ಅಧಿಕಾರಿ ಗಳಿಗೆ ಸೂಚನೆ ನೀಡಲಾಗು ತ್ತದೆ ಎಂದು ಸಚಿವ ನಾಯ್ಡು ಹೇಳಿದರು.

* ಸಹಕಾರ ತತ್ವದ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುವ ಬಿಜೆಪಿ ನೇತೃತ್ವದ ಸರ್ಕಾರವು ರಾಜ್ಯಗಳ ಜತೆ ಚರ್ಚಿಸದೆ ನಿರ್ಧಾರ ತೆಗೆದುಕೊಳ್ಳುತ್ತಿದೆ.

–ಡೆರೆಕ್ ಒಬ್ರಾಯನ್‌
ಟಿಎಂಸಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT