ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್: ರಾಜಕೀಯ ಸಾಕು

Last Updated 27 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ  ‘ಆಧಾರ್’ ಗುರುತು ಚೀಟಿ ಈಗ ಭಾರಿ ವಿವಾದದಲ್ಲಿ ಸಿಲುಕಿ ನರಳುತ್ತಿದೆ. ರಾಜ­ಕಾರ­ಣಿಗಳಿಗಂತೂ ಇದು ಎದು­ರಾಳಿಗಳನ್ನು ಹಣಿಯುವ ದಾಳವಾಗಿದೆ. ಆರಂಭದ ದಿನದಿಂದ ಅನೇಕರು ಆಧಾರ್ ವಿರೋಧಿಸುತ್ತಿದ್ದಾರೆ. ಅವರ ಅನುಮಾನಗಳಲ್ಲಿ ಹುರು­ಳಿರಲೂಬಹುದು. ಆದರೆ ರಾಜಕೀಯ ಉದ್ದೇಶ­ದಿಂದ ಬಿಜೆಪಿ ಈಗ ಇದನ್ನು ಟೀಕಿಸುತ್ತಿರುವುದು ಸಮರ್ಥ­ನೀಯವಲ್ಲ.

ಆಧಾರ್ ಯೋಜನೆ ಮುಖ್ಯಸ್ಥರಾಗಿದ್ದ ನಂದನ್ ನಿಲೇಕಣಿ ಕಾಂಗ್ರೆಸ್‌ನಿಂದ  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕೆ ಇಳಿ­ಯು­ತ್ತಿದ್ದಂತೇ ಏಕಾಏಕಿ ಬಿಜೆಪಿಗೆ ಆಧಾರ್‌ನಲ್ಲಿ ಬರೀ ತಪ್ಪುಗಳೇ ಕಾಣಿಸುತ್ತಿರುವುದು ಆಕಸ್ಮಿಕ ಎಂದು ಹೇಳುವಂತಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೆ ಆಧಾರ್ ರದ್ದು ಮಾಡುವುದಾಗಿ ನಿಲೇಕಣಿ ಅವರ ಎದು­ರಾಳಿ ಅನಂತ­ಕುಮಾರ್‌ ಹೇಳಿದ್ದಾರೆ.

ತಮಾಷೆ ಎಂದರೆ ಇಷ್ಟು ದಿನ ಅವರು ಮತ್ತು ಅವರ ಪಕ್ಷದ ಅನೇಕ ಮುಖಂಡರು ಆಧಾರ್ ಪರ ಪ್ರಚಾರ ಫಲ­ಕ­ಗಳಲ್ಲಿ ಕಾಣಿಸಿಕೊಂಡಿದ್ದರು. ಆಧಾರ್ ನೋಂದಣಿ ಕೇಂದ್ರ ತೆರೆಸಲು ಮುತು­ವರ್ಜಿ ವಹಿಸಿದ್ದರು. ಅದು ತಮ್ಮ ಸಾಧನೆ ಎಂಬಂತೆ ಬಿಂಬಿಸಿ­ಕೊಂಡಿ­ದ್ದರು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿಯೇ ಶೇ 60ಕ್ಕೂ ಹೆಚ್ಚು ಜನರಿಗೆ ಆಧಾರ್ ಸಂಖ್ಯೆ ನೀಡಲಾಗಿದೆ. ಹಾಗಿದ್ದರೆ ಆ ರಾಜ್ಯಗಳು ವಿರೋಧಿಸಲಿಲ್ಲ ಏಕೆ?

ಆಧಾರ್‌ನಲ್ಲೂ  ಲೋಪದೋಷ ಇರಬಹುದು. ಅದಕ್ಕಾಗಿಯೇ ಸುಪ್ರೀಂ ಕೋರ್ಟ್‌ ಅನೇಕ ಸಲ ‘ಸರ್ಕಾರದ ಯೋಜನೆಗಳ ಲಾಭ ಪಡೆಯಲು ಆಧಾರ್ ಕಡ್ಡಾಯ ಮಾಡುವಂತಿಲ್ಲ; ಒಂದು ವೇಳೆ ಅಂಥ ಆದೇಶ ಹೊರಡಿಸಿದ್ದರೆ ವಾಪಸ್ ಪಡೆಯಬೇಕು’ ಎಂದು ಕೇಂದ್ರಕ್ಕೆ ಸೂಚಿಸಿತ್ತು. ಮೊನ್ನೆ ಸೋಮವಾರ ಕೂಡ ಇದನ್ನು ಪುನರುಚ್ಚರಿಸಿದೆ. ಆಧಾರ್‌ಗೋಸ್ಕರ ಸಂಗ್ರಹಿಸಿದ ಬೆರಳಚ್ಚು ಮತ್ತು ಕಣ್ಣಿನ ಪಾಪೆಯ ಗುರುತನ್ನು ಆ ವ್ಯಕ್ತಿಯ ಸಮ್ಮತಿಯಿಲ್ಲದೆ ಬೇರೆ ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ತಾಕೀತು ಮಾಡಿದೆ. ಈ ಮೂಲಕ ವೈಯಕ್ತಿಕ ಹಕ್ಕುಗಳನ್ನು ಎತ್ತಿಹಿಡಿದಿದೆ.

ಆದರೆ ಕೇಂದ್ರ ಸರ್ಕಾರದ ನಿಲುವು ಮಾತ್ರ ಎಡಬಿಡಂಗಿಯಾಗಿದೆ. ‘ಸರ್ಕಾರಿ ಯೋಜನೆಗಳಲ್ಲಿನ ಅಪವ್ಯಯ, ಹಣ ದುರುಪಯೋಗ, ಅನರ್ಹರಿಗೆ ಅನುಕೂಲ ಆಗುವುದನ್ನು ತಡೆಯಲು ಆಧಾರ್ ಪರಿಣಾಮಕಾರಿ’ ಎಂದು ಹೇಳುತ್ತ, ಅದೇ ಉಸಿರಿನಲ್ಲಿ ‘ಆಧಾರ್‌ ಕಡ್ಡಾಯವಲ್ಲ’ ಎನ್ನುತ್ತಿದೆ. ಹಾಗಿದ್ದ ಮೇಲೆ ವಿವಿಧ ಯೋಜನೆಗಳಿಗೆ ಅದನ್ನು ತಳಕು ಹಾಕುವುದು ಏಕೆ? ಪ್ರಜೆಗಳ ರೂ.3800 ಕೋಟಿಗೂ ಹೆಚ್ಚು ತೆರಿಗೆ ಹಣ ಖರ್ಚು ಮಾಡಿ 60 ಕೋಟಿ ಕಾರ್ಡ್‌ ವಿತರಿಸಿದ್ದೇಕೆ? ಆಧಾರ್‌ಗೋಸ್ಕರ ಸಂಗ್ರಹಿಸಿದ ವ್ಯಕ್ತಿಗತ ಮಾಹಿತಿ­ಗಳು ಸೋರಿಕೆಯಾಗಿ ದೇಶದ ಭದ್ರತೆಗೆ ಧಕ್ಕೆ ಬಂದೀತು ಎಂಬುದು ಅದನ್ನು ವಿರೋಧಿಸುವವರ ಆತಂಕ.

ಅಮೆರಿಕ ಸೇರಿದಂತೆ ಅನೇಕ ದೇಶಗಳು ವೀಸಾ ಮಂಜೂರಾತಿಗೆ ವಿದೇಶಿ ಅರ್ಜಿದಾರರಿಂದ ಬೆರಳಚ್ಚು, ಕಣ್ಣು ಪಾಪೆ ಮಾಹಿತಿ ಸಂಗ್ರಹಿಸುತ್ತಿವೆ. ಈ ಪ್ರಕ್ರಿಯೆಯಿಂದ ಭಾರತೀಯರಿಗೇನೂ ವಿನಾಯ್ತಿ ಇಲ್ಲ­ವಲ್ಲ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಳ್ಳಬೇಕು. ಈಗಾಗಲೆ ಆಧಾರ್ ವಿಷಯ­ದಲ್ಲಿ ಸಾಕಷ್ಟು ದೂರ ಬಂದಿದ್ದೇವೆ. ಈಗಿರುವುದು ಒಂದೇ ದಾರಿ. ಅದಕ್ಕೆ ಕಾನೂನಿನ ಬಲ ಕೊಡುವುದು, ನ್ಯೂನತೆ ಸರಿಪಡಿಸುವುದು ಮತ್ತು ರಾಜಕೀಯ ಕೆಸರೆರಚಾಟ ನಿಲ್ಲಿಸುವುದು. ಇಲ್ಲವಾದರೆ ತೆರಿಗೆದಾರರ ಸಹಸ್ರಾರು ಕೋಟಿ ಹಣ ನೀರಲ್ಲಿ ಹೋಮವಾದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT