ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಮನೆಗಳಲ್ಲಿ ‘ಅಟ್ಟ’ಹಾಸ!

ಅಕ್ಷರ ಗಾತ್ರ

ಹಳ್ಳಿಯ ಹಳೆಯ ಮನೆಗಳಲ್ಲಿ  ಅಟ್ಟ ಇವೆ. ಅಡಕೆಯ ಮರವನ್ನು ಸೀಳಿ ಮಾಡಿದ ದಬ್ಬೆಯಿಂದಲೋ, ಹಳಸಿನ ಮರದ ಹಲಗೆಯನ್ನು ಬಳಸಿಯೋ ಮನೆಗಳಲ್ಲಿ ಅಟ್ಟ ನಿರ್ಮಿಸಿಕೊಳ್ಳುತ್ತಿದ್ದರು ನಮ್ಮ ಹಿರಿಯರು. ಈಗ ಕೆಲವು ಆಧುನಿಕ ಮನೆಗಳಲ್ಲಿಯೂ ಅಟ್ಟ ಮತ್ತೆ ಕಾಣಿಸಿಕೊಳ್ಳುತ್ತಿದೆ. ಆದರೆ, ಅದರ ಆಕಾರ, ನೋಟದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಕಾಲಕ್ಕೆ ತಕ್ಕಂತೆಯೇ ಅಟ್ಟದ ಆಟವೂ ಬದಲಾಗಿದೆ ಎನ್ನಬಹುದು!

ಲಾಫ್ಟ್... ಹೊಸತೇನೂ ಅಲ್ಲ.
ಹಳೆಯದೇ ಐಡಿಯಾ.
ಸ್ವರೂಪ ಮತ್ತು ಅದರ ಚೆಂದದ ನೋಟ ಹೊಸತಷ್ಟೇ!
ನಿಮಗೆ ಅಟ್ಟ ಗೊತ್ತಿಲ್ಲವೇ?
ಈಗಲೂ ಕೆಲವೆಡೆ ಹಳ್ಳಿಯ ಹಳೆಯ ಮನೆಗಳಲ್ಲಿ  ಅಟ್ಟ ಇವೆ.
ಅಡಕೆಯ ಮರವನ್ನು ಸೀಳಿ ಮಾಡಿದ ದಬ್ಬೆಯಿಂದಲೋ,
ಹಳಸಿನ ಮರದ ಹಲಗೆಯನ್ನು ಬಳಸಿಯೋ
ಮನೆಗಳಲ್ಲಿ ಅಟ್ಟ ನಿರ್ಮಿಸಿಕೊಳ್ಳುತ್ತಿದ್ದರು ನಮ್ಮ ಹಿರಿಯರು.

ಈಗ ಕೆಲವೇ ಆಧುನಿಕ ಮನೆಗಳಲ್ಲಿ ಅಟ್ಟ ಮತ್ತೆ ಕಾಣಿಸಿ ಕೊಳ್ಳುತ್ತಿದೆ. ಆದರೆ, ಅದರ ಆಕಾರ, ನೋಟದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಕಾಲಕ್ಕೆ ತಕ್ಕಂತೆಯೇ ಅಟ್ಟದ ಆಟವೂ ಬದಲಾಗಿದೆ ಎನ್ನಬಹುದು! ವರ್ಷಗಳ ಹಿಂದೆ ಅಟ್ಟ ಎನ್ನುವುದು ಸಾಮಾನ್ಯವಾಗಿ ನಿತ್ಯ ಬಳಕೆಗೆ ಅಗತ್ಯವಿಲ್ಲದ ಸಾಮಗ್ರಿಗಳನ್ನು, ವರ್ಷಕ್ಕೆ ಆಗುವ ಧಾನ್ಯಗಳನ್ನು ಜೋಪಾನುವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವ ಜಾಗವಾಗಿಯೇ ಬಳಕೆಯಾಗುತ್ತಿತ್ತು. ಚಿಕ್ಕದಾದ ನಿವೇಶನದಲ್ಲಿ ಕಟ್ಟಿಸಿದ ಕೆಲವು ಮನೆಗಳಲ್ಲಿ ಅಟ್ಟವನ್ನು ತುಸು ಎತ್ತರಿಸಿಯೇ ನಿರ್ಮಿಸಿ ಮಲಗಲೂ ಅವಕಾಶವಾಗುವಂತೆ ಸ್ಥಳಾವಕಾಶ ಮಾಡಿಕೊಳ್ಳಲಾಗುತ್ತಿತ್ತು.

ದೇಶ ವಿದೇಶದಲ್ಲಿನ ಪುರಾತನ ವಾಸ್ತುಶಿಲ್ಪದಲ್ಲಿಯೂ ಅಟ್ಟ ಅರ್ಥಾತ್‌ ಲಾಫ್ಟ್‌ಗೆ ಸಾಕಷ್ಟು ಬೆಲೆ ಮತ್ತು ಸ್ಥಳಾವಕಾಶ ಎರಡೂ ಸಿಕ್ಕಿವೆ. ದೇಗುಲಗಳಲ್ಲಿ, ಚರ್ಚ್‌ಗಳಲ್ಲಿ, ರಂಗಮಂದಿರಗಳಲ್ಲಿ, ಹಳೆಯ ಕಾಲದ ಸಿನಿಮಾ ಮಂದಿರಗಳಲ್ಲಿಯೂ ಅಟ್ಟವನ್ನೇ ಹೋಲುವ ನಿರ್ಮಾಣ ಇದ್ದುದನ್ನು ನಾವೆಲ್ಲರೂ ವರ್ಷಗಳ ಕಾಲದಿಂದಲೂ ಗಮನಿಸುತ್ತಾ ಬಂದಿದ್ದೇವೆ.

ಕೈಗಾರಿಕಾ ವಲಯದಲ್ಲಿಯೂ, ಕಚೇರಿಗಳಲ್ಲಿಯೂ ಅಟ್ಟದ ಬಳಕೆ ಇದೆ. ಹಳೆಯ ಕಾಲದಲ್ಲಿಯೂ ಈ ಎಲ್ಲ ಸ್ಥಳ, ಕಟ್ಟಡಗಳಲ್ಲಿ ಅಟ್ಟ ಇತ್ತು. ಅಷ್ಟೇ ಅಲ್ಲ, ಮುಂದೆಯೂ ಇರಲಿದೆ ಎನ್ನುವುದಕ್ಕೆ ಈಗಿನ ಲಾಫ್ಟ್‌ನ ಪುನರುತ್ತಾನವೇ ಸಾಕ್ಷಿಯಾಗಿದೆ.

ಒಂದೊಂದು ಅಡಿಗೂ ಭಾರಿ ಬೆಲೆ ತೆರಬೇಕಾದ ಮಹಾ ನಗರಗಳಲ್ಲಿ, ವಾಣಿಜ್ಯ ವಹಿವಾಟಿನ ಹೃದಯ ಭಾಗದಲ್ಲಿ, ಎಲ್ಲೆಲ್ಲಿಯೂ ಇರುವ ಪುಟ್ಟ ಪುಟ್ಟ ಅಂಗಡಿ ಮಳಿಗೆಗಳು ಅಟ್ಟವನ್ನು ಹೊಂದಿಯೇ ಇರುತ್ತವೆ. 10 ಅಡಿ ಅಗಲ, 10 ಅಡಿ ಉದ್ದ 10 ಅಡಿಯಷ್ಟೆ ಎತ್ತರವಿರುವ ವಾಣಿಜ್ಯ ಮಳಿಗೆಗಳಲ್ಲಿ ಎತ್ತರವನ್ನು ಆರು ಮತ್ತು ನಾಲ್ಕು ಅಡಿಗೆ ವಿಂಗಡಿಸಿ ಅಟ್ಟ ಮಾಡಿಕೊಂಡಿರುವುದು ಬಹಳಷ್ಟು ಕಡೆಗಳಲ್ಲಿ ಕಾಣಸಿಗುತ್ತದೆ.

ಇದು ಇರುವ ಚಿಕ್ಕ ಜಾಗವನ್ನೇ ಸಮರ್ಥವಾಗಿ ಬಳಸಿ ಕೊಳ್ಳುವ ಅನಿವಾರ್ಯ ವಿಧಾನವಷ್ಟೆ ಅಲ್ಲ, ಮಳಿಗೆಯ ವಿನ್ಯಾಸ ವನ್ನೂ ಬದಲಿಸಿಕೊಳ್ಳಲು ಅವಕಾಶ ಮಾಡಿಕೊಡುವ ಸರಳ ವಾಸ್ತುಶಿಲ್ಪ ಶೈಲಿಯೇ ಆಗಿದೆ.

ಸಾಮಾನ್ಯವಾಗಿ ಎಲ್ಲ ಮನೆಗಳಲ್ಲಿಯೂ ತಾರಸಿಯನ್ನು 10 ಅಡಿ ಎತ್ತರದಲ್ಲಿ ನಿರ್ಮಿಸಲಾಗುತ್ತದೆ. 20/30 ಅಡಿ ಅಥವಾ 30/40 ಅಡಿ ನಿವೇಶನದ ಮನೆಗಳಲ್ಲಿಯಾದರೆ ಅಡುಗೆ ಕೋಣೆ ಯಲ್ಲಿಯೋ ಅಥವಾ ಸ್ನಾನದ ಮನೆಯಲ್ಲಿಯೋ ಚಿಕ್ಕದಾಗಿ ಅಂದರೆ ಎರಡರಿಂದ ಎರಡೂವರೆ  ಅಡಿಗಳಷ್ಟು ಎತ್ತರದ ಸ್ಥಳಾವಕಾಶ (ಸಜ್ಜಾ) ಬಿಟ್ಟುಕೊಂಡು ನಿತ್ಯ ಬಳಕೆಗೆ ಬೇಡವಾದ ಸಾಮಗ್ರಿಗಳನ್ನು ತುಂಬಿಸಿಡಲು ಬಳಸಿಕೊಳ್ಳಲಾಗುತ್ತದೆ.

ಈ ಪುಟ್ಟ ಆಕಾರದ ಮನೆಗಳಲ್ಲಿ ಸಾಮಾನ್ಯವಾಗಿ ಚಿಕ್ಕದಾದ ಹಜಾರ, ಎರಡು ಚಿಕ್ಕ ಆಕಾರದ ಕೊಠಡಿಗಳು, ಬಹಳ ಕಿರಿದಾದ ಅಡುಗೆ ಕೋಣೆ, ಅದಕ್ಕಿಂತಲೂ ಕಿರಿದಾದ ಸ್ನಾನದ ಮನೆ ನಿರ್ಮಿಸಿಕೊಂಡು, ಅದಿಷ್ಟೂ ಜಾಗದಲ್ಲಿಯೇ ಸಂಸಾರಕ್ಕೆ ಬೇಕಾದ, ಬೇಡವಾದ ಎಲ್ಲ ಸಾಮಾನುಗಳನ್ನೂ ತುಂಬಿಕೊಂಡು, ಕೈಕಾಲಿಗೆಲ್ಲಾ ತಾಗಿಸಿಕೊಂಡಂತೆ ಓಡಾಡುತ್ತಾ ಗೊಣಗುತ್ತಲೇ ಕಾಲ ಕಳೆದುಬಿಡುತ್ತಾರೆ.
ಅದಕ್ಕೆ ಬದಲಾಗಿ, ತಾರಸಿಯನ್ನು ಎರಡು ಮೂರು ಅಡಿ ಎತ್ತರಿಸಿಕೊಂಡರೆ (ಚಿತ್ರಗಳಲ್ಲಿ ತೋರಿಸಿರುವಂತೆ) ಅದರಲ್ಲೇ ಮಧ್ಯದಲ್ಲೊಂದು ‘ಲಾಫ್ಟ್‌’ ನಿರ್ಮಿಸಿಕೊಂಡರೆ ಹೆಚ್ಚುವರಿಯಾಗಿ ಅದೆಷ್ಟೊಂದು ಸ್ಥಳಾವಕಾಶ ಸಿಗುತ್ತದೆ ಅಲ್ಲವೇ? ಯೋಚಿಸಿ.

ಆಗ ಆ ಅಟ್ಟದಲ್ಲಿಯೇ ಮಕ್ಕಳ ವ್ಯಾಸಂಗಕ್ಕೆ ತಕ್ಕಷ್ಟು ಜಾಗವೂ ಸಿಗುತ್ತದೆ. ನೆಂಟರು ಮನೆಗೆ ಬಂದರೆ ಮನೆ ಮಂದಿಗೆಲ್ಲಾ ಮಲಗಲು ಎಲ್ಲಿ ವ್ಯವಸ್ಥೆ ಮಾಡುವುದಪ್ಪಾ ಎಂಬ ಚಿಂತೆಯೂ ಆಗ ಕಾಡುವುದಿಲ್ಲ. ಮನೆಗೆ ಅಪರೂಪದ ಅತಿಥಿ ಬಂದರೆ ಅವರನ್ನು ಹಜಾರ ದಲ್ಲಿ ಕುಳ್ಳಿರಿಸಿ ಮಾತುಕತೆ ನಡೆಸಿದ್ದಾಗಲೇ, ಕುಟುಂಬದ ಸದಸ್ಯರ ಬಲು ಮೆಚ್ಚಿನ ಧಾರಾವಾಹಿಯ ಪ್ರಸಾರ ಟಿ.ವಿಯಲ್ಲಿ ಆರಂಭ ಗೊಂಡರೆ ಎಂತಹ ಪಜೀತಿ ಅಲ್ಲವೇ? ಟಿ.ವಿ ನೋಡಲೂ ಆಗದೇ, ಅಪರೂಪದ ಅತಿಥಿಯೊಡನೆ ಮನಃಪೂರ್ವಕವಾಗಿ ಮಾತನಾಡಲೂ ಆಗದೇ ಪರಿತಪಿಸುವುದು ಇದ್ದದ್ದೇ..

ಒಂದೊಮ್ಮೆ ಲಾಫ್ಟ್ ಎಂಬುದು ಇದ್ದಿದ್ದರೆ ಈ ಪಜೀತಿ ತಪ್ಪುತ್ತದೆ, ಅಲ್ಲವೇ? ಅಟ್ಟವನ್ನು ಸ್ವಲ್ಪ ಕಲಾತ್ಮಕವಾಗಿ ನಿರ್ಮಿಸಿ ಕೊಂಡರೆ ಅದನ್ನೇ ಟಿ.ವಿ ವೀಕ್ಷಣೆಗೆ ಪ್ರತ್ಯೇಕ ಜಾಗವಾಗಿ ಮೀಸಲಿಟ್ಟುಕೊಳ್ಳಬಹುದು.

ಈ ಲಾಫ್ಟ್‌ ಅರ್ಥಾತ್‌ ಆಧುನಿಕ ಅಟ್ಟವನ್ನು ಎರಡು ಮೂರು ರೀತಿಗಳಲ್ಲಿ ನಿರ್ಮಿಸಿಕೊಳ್ಳಬಹುದು. ಮನೆಯ ನೀಲನಕ್ಷೆ ಸಿದ್ಧ ವಾಗುವಾಗಲೇ ಎಲ್ಲಿ ತಾರಸಿಯನ್ನು 10 ಅಡಿಗೆ ಬದಲಾಗಿ 12 ಅಥವಾ 13 ಅಡಿವರೆಗೂ ಎತ್ತರಿಸಿ ಅಟ್ಟಕ್ಕೆ ಜಾಗ ಮಾಡಿಕೊಳ್ಳ ಬಹುದು. ಮುಂಚಿತವಾಗಿ ನಿರ್ಧರಿಸಿದರೆ ಅಚ್ಚುಕಟ್ಟಾಗಿ ಅಟ್ಟ ನಿರ್ಮಿಸಿಕೊಳ್ಳಬಹುದು. ಆಗಲಾದರೆ ಸಿಮೆಂಟ್‌, ಜಲ್ಲಿ, ಮರಳು, ಉಕ್ಕಿನ ಸರಳು ಬಳಸಿಯೇ ಭದ್ರವಾಗಿಯೇ ಶಾಶ್ವತವಾದ ಅಟ್ಟವನ್ನು ಮಾಡಿಕೊಳ್ಳಬಹುದು. ಜತೆಗೆ ಮೆಟ್ಟಿಲನ್ನೂ ಸಹ...

ಈಗಾಗಲೇ ನಿರ್ಮಾಣವಾಗಿರುವ ಮನೆಗಳಲ್ಲಿಯಾದರೆ, ಮರ ಅಥವಾ ಉಕ್ಕಿನ ಅಡ್ಡ ತೊಲೆಗಳನ್ನು ಗೋಡೆಗಳಿಗೆ ಒಳಹೋಗುವಂತೆ ಅಳವಡಿಸಿ, ಆ ತೊಲೆಗಳ ಮೇಲೆ ಮರದ ಹಲಗೆಗಳನ್ನೋ, ದಪ್ಪದಾದ ಉಕ್ಕಿನ ಹಾಳೆಗಳನ್ನೋ ಹಾಸಿದಂತೆ ಜೋಡಿಸಿ ತಾತ್ಕಾಲಿಕವಾದ ಅಟ್ಟವನ್ನು ನಿರ್ಮಾಣ ಮಾಡಿ ಕೊಳ್ಳಲು ಅವಕಾಶವಿದೆ.

ಇಂತಹ ಮನೆಗಳಲ್ಲಿ ಅಟ್ಟದ ಎತ್ತರ ಹೆಚ್ಚೆಂದರೆ ಎರಡರಿಂದ ಮೂರು ಅಡಿಗಳಷ್ಟೇ ಇರಲು ಸಾಧ್ಯ. ಅಲ್ಲಿ ಮಕ್ಕಳಿಗೆ ಸರಾಗ ಓಡಾಡಲು ಸಾಧ್ಯವಾದರೂ ದೊಡ್ಡವರು ನಡುಬಗ್ಗಿಸಿಯೇ ಒಳಹೋಗಬೇಕು. ಹಾಗಾಗಿ ಈ ಅಟ್ಟವನ್ನು ಮಕ್ಕಳಿಗೆ ಓದಲು, ಮಲಗಲು ಸ್ಥಳಾವಕಾಶ ಮಾಡಿಕೊಡಲು ಬಳಸಿಕೊಳ್ಳುವುದು ಜಾಣತನದ ನಿರ್ಧಾರವಾಗುತ್ತದೆ.

ಈಗಷ್ಟೇ ನಿರ್ಮಿಸುತ್ತಿರುವ ಮನೆಗಳಲ್ಲಿ ಲಾಫ್ಟ್‌ಗೆ ಮಾತ್ರ ಹೇರಳ ಅವಕಾಶಗಳಿವೆ. ಅದನ್ನು ಕೇವಲ ಪುಟ್ಟ ಅಟ್ಟವಾಗಿಸದೇ ಮನೆಯ ಒಂದು ಪ್ರಮುಖ ಭಾಗವಾಗಿಯೇ ಮಾಡಿಕೊಳ್ಳಬ ಹುದು. ಮನೆಯ ವಾಸ್ತುಶಿಲ್ಪಕ್ಕೆ, ಒಳಾಂಗಣ ವಿನ್ಯಾಸಕ್ಕೆ ಸಾಕಷ್ಟು ಅವಕಾಶಗಳು ಲಾಫ್ಟ್‌ನಲ್ಲಿವೆ. ಅದೆಲ್ಲವೂ ವಿನೂತನ ಕಲ್ಪನೆಗಳಿಗೆ ಬಿಟ್ಟಿದ್ದು....

ಚಿಕ್ಕದ ನಿವೇಶನದ ಮನೆಯವರಷ್ಟೇ ಅಲ್ಲ, ಬಹಳ ವಿಶಾಲ ವಾದ ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಳ್ಳುವವರೂ ಲಾಫ್ಟ್‌ಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದು ಇತ್ತೀಚೆಗೆ ಹೆಚ್ಚುತ್ತಿದೆ. ಮನೆಯಲ್ಲಿಯೂ ಒಂದು ಕಚೇರಿ ಇರಲಿ ಎಂದು ಬಯಸು ವವರಿಗಂತೂ ಈ ಆಧುನಿಕ ಅಟ್ಟವೇ ಒಳಾಂಗಣ ಅಲಂಕಾರಕ್ಕೆ ಪುಟವಿಟ್ಟಂತೆ ಇರುತ್ತದೆ.

ಒಟ್ಟಿನಲ್ಲಿ ಈ ಲಾಫ್ಟ್‌ ಮಿತಿಯೇ ಇಲ್ಲದ ಅವಕಾಶಗಳನ್ನು, ಅನುಕೂಲಗಳನ್ನು ಹೊಂದಿರುವ ನಿರ್ಮಾಣ ಪರಿಕಲ್ಪನೆ. ಸ್ಥಳಾ ವಕಾಶವನ್ನು, ಬುದ್ಧಿವಂತಿಕೆಯನ್ನು ಸರಿಯಾಗಿ ಬಳಸಿಕೊಂಡು ಅಟ್ಟವನ್ನು ನಿರ್ಮಿಸಿಕೊಳ್ಳಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT