ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧ್ಯಾತ್ಮಿಕ ಮಹೋನ್ನತಿಯ ಯುಗ

Last Updated 25 ಜನವರಿ 2015, 16:40 IST
ಅಕ್ಷರ ಗಾತ್ರ

ಹಿರಿಯ ಸಂಶೋಧಕ ಷ. ಶೆಟ್ಟರ್ ಅವರಿಗೆ 80 ವರ್ಷ ತುಂಬಿದ ಸಂದರ್ಭದಲ್ಲಿ ‘ಅಭಿನವ’ ಪ್ರಕಾಶನವು ಅವರ ಎರಡು ಪುಸ್ತಕಗಳನ್ನು ಪ್ರಕಟಿಸಿದೆ. ‘ಸಾವನ್ನು ಅರಸಿ’ (ಇಚ್ಛಾಮರಣದ ಜೈನಸಿದ್ಧಾಂತ ಮತ್ತು ಚಾರಿತ್ರಿಕ ಸಾದೃಶ್ಯಗಳು, ಅನುವಾದ: ಓ ಎಲ್. ನಾಗಭೂಷಣಸ್ವಾಮಿ) ಹಾಗೂ ‘ಸಾವನ್ನು ಸ್ವಾಗತಿಸಿ’ (ಶ್ರವಣಬೆಳಗೊಳ ಇತಿಹಾಸದ ಹಿನ್ನೆಲೆಯಲ್ಲಿ ಇಚ್ಛಾಮರಣ ಪ್ರಕ್ರಿಯೆ, ಅನುವಾದ: ಸದಾನಂದ ಕನವಳ್ಳಿ, ಶೆಟ್ಟರ್) ಎಂಬ ಈ ಪುಸ್ತಕಗಳು ಬೆಂಗಳೂರಿನ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಜ. 29ರಂದು ಸಂಜೆ 6ಕ್ಕೆ ಬಿಡುಗಡೆಯಾಗಲಿವೆ. ‘ಸಾವನ್ನು ಸ್ವಾಗತಿಸಿ’ ಪುಸ್ತಕದ ಒಂದು ಅಧ್ಯಾಯ ಇಲ್ಲಿದೆ.

ಮರಣದಿಂದ ಇತಿಹಾಸದಾರಂಭ: ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ಪುಟ್ಟ ಪಟ್ಟಣವಾದ ಶ್ರವಣಬೆಳ್ಗೊಳವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದೆ. ದಿಗಂಬರ ಜೈನ ಕೇಂದ್ರಗಳಲ್ಲಿ ಮುಖ್ಯವೆನಿಸಿದ ಈ ಪಟ್ಟಣವು ನಮ್ಮ ದೇಶದ ಇತಿಹಾಸದಲ್ಲಿ ಅನನ್ಯ ಸ್ಥಾನವನ್ನು ಪಡೆದಿರುವುದನ್ನು ಇಲ್ಲಿಯ ಅತ್ಯಧಿಕ ಸಂಖ್ಯೆಯ ಜೈನ ಶಾಸನಗಳು ಪುಷ್ಟೀಕರಿಸುವವು. ಅತಿ ಎತ್ತರವಾದ ಏಕಶಿಲಾ ಮಹಾವಿಗ್ರಹ, ಒಂದೂವರೆ ಸಹಸ್ರಮಾನಕಾಲದ ಅವಿಚ್ಛಿನ್ನ ಜೈನ ಇತಿಹಾಸ, ಮತ್ತೆಲ್ಲೂ ಕಾಣಸಿಗದಷ್ಟು ಸಂಖ್ಯೆಯ ದಿಗಂಬರ ಜೈನ ದೇವಾಲಯಗಳಲ್ಲದೆ ಅಧಿಕ ಸಂಖ್ಯೆಯ ನಿಸಿಧಿ ಅಥವಾ ಸ್ಮಾರಕಸ್ತಂಭಗಳೂ ಇಲ್ಲಿ ಸಾಂದ್ರಗೊಂಡಿವೆ.

ಮುನಿ ಭದ್ರಬಾಹು ಮತ್ತು ಮೌರ್ಯಸಾಮ್ರಾಟ ಚಂದ್ರಗುಪ್ತರು ಸಾವಿರಾರು ಅನುಯಾಯಿಗಳೊಂದಿಗೆ ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಇಲ್ಲಿಗೆ ಬಂದದ್ದನ್ನು ಸುಮಾರು ಅರ್ಧ ಡಜನ್ ಶಾಸನಗಳಲ್ಲಿ ನೆನಪಿಸಿಕೊಳ್ಳಲಾಗಿದೆ. ಈ ಘಟನೆಯಿಂದ ಶ್ರವಣಬೆಳ್ಗೊಳದ ಐತಿಹ್ಯ ಹಾಗೂ ಇತಿಹಾಸ ಪ್ರಾರಂಭವಾಗುವವು. ಈ ಸಂಕೀರ್ಣವು ಎರಡು ಬೆಟ್ಟಗಳನ್ನು, ಕೊಳ್ಳದಲ್ಲಿ ಹಬ್ಬಿರುವ ಪಟ್ಟಣವನ್ನು, ಬೆಟ್ಟದ ಅಂಚಿನಲ್ಲಿರುವ ಉಪಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿರುವ ಎರಡು ಬೆಟ್ಟಗಳಲ್ಲಿ ಇತಿಹಾಸವನ್ನು ಮೊದಲು ಪ್ರವೇಶಿಸಿದ್ದು ಚಿಕ್ಕಬೆಟ್ಟ.

ಈ ಬೆಟ್ಟದ ಶಿಲೆಯೊಂದರ ಮೇಲೆ ಕೊರೆದ ಸು. 600ರ ಶಾಸನದಿಂದ ಶ್ರವಣಬೆಳ್ಗೊಳದ ಲಿಖಿತ ಇತಿಹಾಸವು ಪ್ರಾರಂಭವಾಗುವುದು. ಚಂದ್ರಗಿರಿ ಅಥವಾ ಚಿಕ್ಕಬೆಟ್ಟದ ಪಾರ್ಶ್ವನಾಥ ಬಸದಿಯ ಬಲಬದಿಯಲ್ಲಿ ಹಾಸುಬಂಡೆಯ ಮೇಲಿರುವ ಈ ಶಾಸನವು ಸಕಲ ಸಂಘದೊಂದಿಗೆ ಉಜ್ಜೈನಿಯಿಂದ ವಲಸೆ ಬಂದ ಭದ್ರಬಾಹುಮುನಿಯ ಕುತೂಹಲಕಾರಿ ಕತೆಯನ್ನು ನಿರೂಪಿಸುವುದಲ್ಲದೆ, ‘ಸಮ್ಯಕ್ ಚಾರಿತ್ರ್ಯದಿಂದೊಡಗೂಡಿದ ತಪಸ್ಸಿನ ಗುರಿಯಾದ ಸಮಾಧಿಯನ್ನು ಸಾಧಿಸಲಿಚ್ಛಿಸಿದ’ ಪ್ರಭಾಚಂದ್ರ ಆಚಾರ್ಯನು ತನ್ನ ಜೀವನವನ್ನು ಕೊನೆಗೊಳಿಸಲು ಈ ಪರ್ವತಶಿಖರವನ್ನು ಆಯ್ಕೆಮಾಡಿಕೊಂಡದ್ದನ್ನೂ ತಿಳಿಸುವುದು. ಅಂದರೆ ಶ್ರವಣಬೆಳ್ಗೊಳದ ಇತಿಹಾಸವು ಆರಂಭಗೊಳ್ಳುವುದು ಶ್ರಮಣನೊಬ್ಬನ ಇಚ್ಛಾಮರಣದಿಂದ.

ಚಂದ್ರಗಿರಿ (ಚಿಕ್ಕಬೆಟ್ಟ) ಮತ್ತು ವಿಂಧ್ಯಗಿರಿ (ದೊಡ್ಡಬೆಟ್ಟ)ಗಳ ಕೊಳ್ಳಪ್ರದೇಶವನ್ನು ಶ್ರವಣಬೆಳ್ಗೊಳ ಪಟ್ಟಣ ವ್ಯಾಪಿಸಿದೆ. ಆದರೆ ಈ ಎರಡೂ ಬೆಟ್ಟಗಳ ಪ್ರಸಕ್ತ ಹೆಸರುಗಳಿಗೆ ಐತಿಹಾಸಿಕ ಪ್ರಾಚೀನತೆಯಿಲ್ಲ. ಇವುಗಳಲ್ಲಿ ಪವಿತ್ರವಾದ ಚಿಕ್ಕಬೆಟ್ಟವನ್ನು ಆರಂಭಕಾಲದ ಶಾಸನಗಳಲ್ಲಿ ಕಟವಪ್ರ ಅಥವಾ ಕೞ್ಬಪ್ಪು ಎಂದು ಕರೆಯಲಾಗಿದ್ದು ಈ ಹೆಸರುಗಳನ್ನು ಅನೇಕ ಬಗೆಯಲ್ಲಿ ಕಾಗುಣಿಸಿ, ಪ್ರತ್ಯಯಗಳನ್ನು ಜೋಡಿಸಿ, ಕೆಲಕಾಲ ಬಳಸಲಾದರೂ 12ನೆಯ ಶತಮಾನದ ನಂತರ ಅವು ಶಾಸನ ಕವಿಗಳ ಸ್ಮರಣೆಯಿಂದ ಮಾಯವಾಗುವವು. 12ನೆಯ ಶತಮಾನದಲ್ಲಿ ಚಿಕ್ಕಬೆಟ್ಟವನ್ನು ವಪ್ರ (ಬೆಟ್ಟದ ಪಾರ್ಶ್ವಭಾಗ), ಶೈಲ (ತಳಬಂಡೆ), ಗಿರಿ (ದಿನ್ನೆ), ಶೈಲಶಿಖರ (ತಳಬಂಡೆಯ ಶಿಖರ), ತೀರ್ಥ (ಪುಣ್ಯಭೂಮಿ), ಬೆಟ್ಟ, ದುರ್ಗ, ಪರ್ವತ ಮತ್ತು ನಾಡು (ಜಿಲ್ಲಾ ಕೇಂದ್ರಸ್ಥಳ), ಎಂಬ ಪ್ರತ್ಯಯಗಳಿಂದ ಗುರುತಿಸಲಾಗಿದೆ. ಅಲ್ಲದೆ ಅಪರೂಪವಾಗಿ ಋಷಿಗಿರಿ ಮತ್ತು ತೀರ್ಥಗಿರಿ ಎಂದೂ ಇದನ್ನು ಸಂಬೋಧಿಸಲಾಗಿದೆ.

ಚಿಕ್ಕಬೆಟ್ಟದ ಮೇಲೆ ಅಥವಾ ಕೊಳ್ಳದಲ್ಲಿದ್ದ ಒಂದು ಕೊಳದಿಂದ ಈ ಕೇಂದ್ರಕ್ಕೆ ವೆಳ್ಗೊಳ ಎಂಬ ಹೆಸರು ಬಂತು. ಇದರ ಪ್ರಥಮ ಉಲ್ಲೇಖವು ಎಂಟನೆಯ ಶತಮಾನದ ಶಾಸನಗಳಲ್ಲಿ ಬರುವುದಾದರೂ 12ನೆಯ ಶತಮಾನದ ನಂತರವೇ ಈ ಹೆಸರು ಹೆಚ್ಚು ಜನಪ್ರಿಯಗೊಂಡದ್ದು. ಬೆಳ್ಗೊಳ (ಕನ್ನಡ) ಮತ್ತು ಧವಳ ಸರಸ್, ಧವಳ ಸರೋವರ, ಶ್ವೇತ ಸರೋವರ (ಸಂಸ್ಕೃತ) ಮುಂತಾದ ರೂಪಾಂತರಗಳೆಲ್ಲವೂ ‘ಬಿಳಿ’ ಅಥವಾ ‘ಶುದ್ಧ’ ಕೊಳವನ್ನು ಸೂಚಿಸುತ್ತವೆ. 12ನೆಯ ಶತಮಾನದ ಮತ್ತು ಆ ನಂತರಕಾಲದ ಕೆಲವು ಶಾಸನಗಳು ಬೆಳ್ಗೊಳವನ್ನು ‘ತೀರ್ಥ’ ಎಂದು, 14ನೆಯ ಶತಮಾನದಂಚಿನ ಕೆಲವು ಶಾಸನಗಳು ‘ನಗರ’ ಎಂದು, 15ನೆಯ ಶತಮಾನದ ಶಾಸನಗಳು ‘ನಾಡು’ ಎಂದು ಇದನ್ನು ಗುರುತಿಸಿವೆ.

ಹತ್ತನೆಯ ಶತಮಾನದಲ್ಲಿ ಕೊರೆದ ಗೊಮ್ಮಟ ಮಹಾವಿಗ್ರಹದಿಂದ ಮತ್ತೊಂದು ಹೆಸರನ್ನು ಈ ಕೇಂದ್ರ ಪಡೆದುಕೊಂಡಿತು. ಪೆರ್ಗ್ಗಳ್ವಪ್ಪು ಎಂದು ಎಂಟನೆಯ ಶತಮಾನದ ಶಾಸನಗಳಲ್ಲಿ ಹೆಸರಿಸಲಾದ ದೊಡ್ಡಬೆಟ್ಟವನ್ನು ಮಹಾ ವಿಗ್ರಹ ನಿರ್ಮಾಣವಾದ ನಂತರ, ಗೊಮ್ಮಟತೀರ್ಥ ಅಥವಾ ಗೊಮ್ಮಟಪುರ ಎಂದು ಸಂಬೋಧಿಸಲಾಯಿತು. 19ನೆಯ ಶತಮಾನದ ಕೆಲವು ಶಾಸನಗಳಲ್ಲಿ ಅದನ್ನು ದಕ್ಷಿಣ ಕಾಶಿಯೆಂದೂ ಕನ್ನಡ ಕವಿಗಳಾದ ದೇವರಾಜ (ಸುಮಾರು 15ನೆಯ ಶತಮಾನ), ಪಂಚಬಾಣ (1614) ಮತ್ತು ಚಿದಾನಂದ (1680) ಈ ಕೇಂದ್ರವನ್ನು ಅನುಕ್ರಮವಾಗಿ ಸೀತಾತಟಾಕ, ಅಭಿನವ ಪೌದನಪುರ ಮತ್ತು ಜಿನಗಿರಿ ಎಂದೂ ಕರೆದಿರುವರು.

ಈ ಪವಿತ್ರ ಕ್ಷೇತ್ರದ ಬೇರೆ ಬೇರೆ ಕೇಂದ್ರಗಳು ಗಳಿಸಿಕೊಂಡ ಮಹತ್ವದಿಂದ ಬೆಳ್ಗೊಳದ ಇತಿಹಾಸವು ವಿಸ್ತರಿಸುತ್ತಾ ಸಾಗಿತು. ಈಗ ಚಂದ್ರಗಿರಿ ಎಂದು ಕರೆಯಲಾಗುವ ಕಟವಪ್ರವು ಇಲ್ಲಿಯ ಎರಡು ಬೆಟ್ಟಗಳಲ್ಲಿ ಚಿಕ್ಕದಾಗಿರುವುದರಿಂದ ಇದಕ್ಕೆ ಚಿಕ್ಕಬೆಟ್ಟವೆಂಬ ಜನಪ್ರಿಯ ಹೆಸರು ಬಂತು. ಪ್ರಾಚೀನ ಕಾಲದ ಮುನಿಗಳ ಮತ್ತು ಸ್ವಯಂಪ್ರೇರಿತ ದೇಹ ದಂಡನೆಕಾರರ 1139ರ ಶಾಸನವೊಂದು ಈ ನೆರೆಹೊರೆಯನ್ನು ಕಬ್ಬಪ್ಪುನಾಡು ಎಂದು ಕರೆದಿದ್ದರೂ ಅಂದಿನ ಕಟವಪ್ರವು ಸಾಮಾನ್ಯರಿಗೆ ವಾಸಯೋಗ್ಯವಾಗಿರಲಿಲ್ಲ್ಲ. ಬೆಟ್ಟದ ಮೇಲೆ ಇಲ್ಲವೆ ಕೊಳ್ಳದಲ್ಲಿದ್ದ ಒಂದು ಕೊಳದಿಂದಾಗಿ ಇದು ವೆಳ್ಗೊಳ ಅಥವಾ ಬೆಳ್ಗೊಳ, ಶ್ವೇತ ಸರೋವರ, ಧವಳ ಸರಸ್, ಇತ್ಯಾದಿ ಹೆಸರು ಪಡೆದುಕೊಂಡದ್ದು ನಿಜ; ಆದರೆ ಈ ಕೊಳದ ಸುತ್ತ ಬೆಳೆದ ವಸತಿಸ್ಥಾನವು ಮಹತ್ವ ಪಡೆದುಕೊಂಡದ್ದು 12ನೆಯ ಶತಮಾನದಲ್ಲಿ.

15ನೆಯ ಶತಮಾನದ ಒಂದು ಶಾಸನದಲ್ಲಿ ಇದನ್ನು ‘ಧವಳ ಸರೋವರ ನಗರ’ ಎಂದು ಕರೆಯಲಾಗಿದೆ. ಎಂಟನೆಯ ಶತಮಾನದ ಶಾಸನಗಳಲ್ಲಿ ಬರುವ ಬೆಳ್ಗೊಳವೇ 12ನೆಯ ಶತಮಾನದ ನಂತರ ಕೊಳ್ಳದಲ್ಲಿ ಅಭಿವೃದ್ಧಿಗೊಂಡದ್ದೆಂದು ಭ್ರಮಿಸಲಾಗದು, ಏಕೆಂದರೆ, ಬೆಳ್ಗೊಳನಗರ ಎಂಬ ಹೆಸರು 14ನೆಯ ಶತಮಾನದಿಂದ ಮಾತ್ರ ಪ್ರಸಾರಕ್ಕೆ ಬಂದಿರುವುದು. 12ನೆಯ ಶತಮಾನದ ಆದಿಯಲ್ಲಿ ತೀರ್ಥ ಎಂದು ಗುರುತಿಸಲಾಗಿದ್ದ ಈ ಕ್ಷೇತ್ರವು 12-14ನೆಯ ಶತಮಾನಗಳಲ್ಲಿ ಪಟ್ಟಣವಾಗಿ ಅಭಿವೃದ್ಧಿಗೊಂಡು, 15ನೆಯ ಶತಮಾನದಲ್ಲಿ ನಗರವಾಗಿ ಮತ್ತು ನಾಡಕೇಂದ್ರವಾಗಿ ಪರಿವರ್ತನೆಗೊಂಡಿತು.

ಈ ಪಟ್ಟಣ ಸ್ಥಾಪನೆಯ ಕಾಲದ ಸ್ಪಷ್ಟ ದಿನಾಂಕ ದೊರೆಯದಿದ್ದರೂ ಸುಮಾರು 12ನೆಯ ಶತಮಾನದಲ್ಲಿ ಈ ತೀರ್ಥದಲ್ಲಿ ಯಾತ್ರಿಕರು ನೆಲೆ ನಿಲ್ಲಲು ಪ್ರಾರಂಭಿಸಿದರೆಂಬ ಸುಳಿವು ಸಿಗುವುದು. ಹತ್ತನೆಯ ಶತಮಾನದಲ್ಲಿ ದೊಡ್ಡಬೆಟ್ಟದ ಮೇಲೆ ಕೊರೆಸಿದ ಗೊಮ್ಮಟ ಮಹಾವಿಗ್ರಹವು ಯಾತ್ರಿಗಳ ಮತ್ತು ಭಕ್ತರ ಚಿತ್ತಾಕರ್ಷಕ ಕೇಂದ್ರವಾದುದರಿಂದ ಈ ಸಂಕೀರ್ಣಕ್ಕೆ ಹೊಸ ಹೆಸರುಗಳು ಪ್ರಾಪ್ತವಾಗತೊಡಗಿದವು. 1173ರಿಂದ ಆರಂಭಗೊಂಡ ಗೊಮ್ಮಟತೀರ್ಥ ಅಥವಾ ಗೊಮ್ಮಟಪುರ ಎಂಬ ಹೆಸರು ಹೆಚ್ಚುಕಾಲ ಮುಂದುವರೆಯಲಿಲ್ಲ. ಲಕ್ಷಾಂತರ ಪ್ರವಾಸಿಗಳನ್ನು ಆಕರ್ಷಿಸುತ್ತಿರುವ ಮಹಾವಿಗ್ರಹವು ಇಂದಿಗೂ ಪ್ರಮುಖ ಕೇಂದ್ರಬಿಂದುವಾಗಿದೆ ಆದರೆ, ಶ್ರವಣಬೆಳ್ಗೊಳದ ಇತಿಹಾಸದುದ್ದಕ್ಕೂ ಮಹತ್ವವನ್ನು ಪಡೆದಿರುವುದು ಸಮಾಧಿಬೆಟ್ಟವೆಂದು ಖ್ಯಾತಗೊಂಡ ಚಿಕ್ಕಬೆಟ್ಟ.

ಸಮಾಧಿಬೆಟ್ಟ ಭುವಿಗೊಂದು ಆಭರಣ: ಒಂದೂವರೆ ಸಹಸ್ರಮಾನ ಕಾಲ ದಿಗಂಬರ ಜೈನರ ಏಕಸ್ವಾಮ್ಯದಲ್ಲಿರುವ ಶ್ರವಣಬೆಳ್ಗೊಳದ ದಾಖಲಿತ ಇತಿಹಾಸವು ತುಂಬಾ ಸ್ವಾರಸ್ಯಕರವಾಗಿದೆ. ಸುಮಾರು 600ಕ್ಕಿಂತ ಮುಂಚಿನ ಇದರ ವಿವರಗಳು ಐತಿಹ್ಯದಲ್ಲಿ ಐಕ್ಯವಾಗಿವೆ. ಭದ್ರಬಾಹು ಈ ಸ್ಥಳವನ್ನು ತಲುಪಿದಾಗ (ಕ್ರಿ.ಪೂ. ಮೂರನೆಯ ಶತಮಾನ) ಅಥವಾ ಆ ಘಟನೆಯನ್ನು ಪುನಃ ಸ್ಮರಿಸಿದಾಗ (ಕ್ರಿ. ಶ. 600) ಶ್ರವಣಬೆಳ್ಗೊಳವು ಅಷ್ಟೇನೂ ವಾಸಯೋಗ್ಯವಾಗಿರಲಿಲ್ಲ ಎಂಬುದನ್ನು ಈಗಾಗಲೇ ಗಮನಿಸಿದ್ದೇವೆ. ‘ಸುತ್ತೆಂಟುನೂರು ಹಳ್ಳಿಗಳಿಂದ, ಸಂತೃಪ್ತ ಸಂಪದ್ಭರಿತ ಪ್ರಜೆಗಳಿಂದ, ಸುವರ್ಣ, ಧಾನ್ಯ ಮತ್ತು ಪಶು (ಹಸು, ಮಹಿಷ, ಆಡು, ಕುರಿ) ಸಂಪತ್ತಿನಿಂದ ತುಂಬಿದ್ದ’ ಈ ನಾಡು ಉಜ್ಜೈನಿ ಸುತ್ತಲಿನ ಚಂದ್ರಗುಪ್ತನ ಕ್ಷಾಮಪೀಡಿತ ಬರಡು ಪ್ರದೇಶಕ್ಕಿಂತ ತೀರ ಭಿನ್ನವಾಗಿತ್ತೇನೂ ನಿಜ; ಆದರೆ ‘ವಿಸ್ತೃತ ಕಣಿವೆ, ಕೊಳ್ಳ, ಕಂದರ ಹಾಗೂ ಗುಹೆಗಳ’ ನಡುವೆ ಇದ್ದ ‘ಉನ್ನತ ಶಿಖರಗಳ’ ಈ ಕಟವಪ್ರವು ಬಹುತೇಕ ದುರ್ಗಮ ಪ್ರದೇಶವಾಗಿತ್ತು.

ಈ ‘ಬೆಟ್ಟದ ಕಪ್ಪುಶಿಲೆಗಳು ದೈತ್ಯಾಕಾರದ ಕಾರ್ಮೋಡಗಳನ್ನು ಹೋಲುತ್ತಿದ್ದು, ಬಗೆ ಬಗೆಯ ಫಲಪುಷ್ಪ ವೃಕ್ಷಗಳಿಂದ ಆವೃತವಾಗಿದ್ದವು; ಕಗ್ಗಾಡು, ದುರ್ಗಮ ಗುಹೆ ಹಾಗೂ ಕಂದರ ಕೊರಕಲುಗಳಿಂದೊಡಗೂಡಿದ ಈ ಪ್ರದೇಶವು ಹಿಂಡು ಹಿಂಡು ಕಾಡು ಹಂದಿ, ಚಿರತೆ, ಕತ್ತೆಕಿರುಬ, ಸರ್ಪ, ಜಿಂಕೆಗಳ ತಾಣಮಾತ್ರವಾಗಿತ್ತು; ಜೀವದಂಜಿಕೆಯುಳ್ಳ ಯಾರನ್ನಾದರೂ ವಿಕರ್ಷಿಸುವ ಈ ಭಯವಿಸ್ಮಯಕಾರಕ ಪರಿಸರವು ‘ಶೀತಲಶಿಲೆಯ ವಿಸ್ತಾರದ ಮೇಲೆ ದೇಹ’ವನ್ನು ದಂಡಿಸಿ, ಮರಣವನ್ನು ಆಹ್ವಾನಿಸುವವರಿಗೆ ಮಾತ್ರ ‘ಭುವಿಗೊಂದು ಆಭರಣ’ವಾಗಿ ಕಾಣುತ್ತಿತ್ತು! ಎಂದು ಸಮಕಾಲೀನ ಶಾಸನಕವಿಗಳು ಇದನ್ನು ವರ್ಣಿಸಿರುವರು.

ಮರಣವೇ ಮಹಾನವಮಿ
ಏಳನೆಯ ಶತಮಾನದ ಅಂತ್ಯದ ಸುಮಾರಿಗಾಗಲೇ ಏಳುನೂರು ಪುಣ್ಯಪುರುಷರು ಕಟವಪ್ರದ ಶೀತಲಶಿಲೆಯ ಮೇಲೆ ಮರಣವನ್ನು ಬರಮಾಡಿಕೊಂಡಿದ್ದರು. ಅವರ ಹೆಸರನ್ನಾಗಲಿ ಅವರ ಗೌರವಾರ್ಥ ಮಾಡಿಸಿದ ಸ್ಮಾರಕಗಳನ್ನಾಗಲಿ ದಾಖಲಿಸದಿದ್ದರೂ ಸ್ವಯಂಪ್ರೇರಣೆಯಿಂದ ಸಾವನ್ನು ಆಹ್ವಾನಿಸುವವರಿಗೆ ಈ ಸಮಾಧಿಬೆಟ್ಟವು ಅತ್ಯಂತ ನೆಚ್ಚಿನ ತಾಣವಾಗಿತ್ತೆಂಬುದರಲ್ಲಿ ಅನುಮಾನವಿಲ್ಲ. ದೇಹದಂಡನೆಕಾರರೇ ಇತಿಹಾಸ ನಿರ್ಮಿಸಿದ ಇಂತಹ ಮತ್ತೊಂದು ಕೇಂದ್ರವು ಪ್ರಪಂಚದಲ್ಲೆಲ್ಲೂ ಇಲ್ಲ; ಈ ಎಲ್ಲಾ ಘಟನೆಗಳನ್ನು ಶಾಸನಗಳಲ್ಲಿ ಹುದುಗಿಸಿಟ್ಟಿರುವ ಚಿಕ್ಕಬೆಟ್ಟದಂತಹ ಇನ್ನೊಂದು ಬೆಟ್ಟವೂ ನಮ್ಮ ನಾಡಿನಲ್ಲಿ ಮತ್ತೊಂದು ಸಿಗದು. ಸಮಾಧಿ ಮರಣವನ್ನು ಸ್ಮರಿಸುವ ಒಂದು ನೂರಕ್ಕೂ ಹೆಚ್ಚು ಶಾಸನಗಳು ಚಿಕ್ಕಬೆಟ್ಟದ ಮೇಲೆ ಇಂದಿಗೂ ಉಳಿದುಕೊಂಡಿವೆ. ದೇಹದಂಡನೆ ವ್ರತಾಚರಣೆಯ ವೈವಿಧ್ಯ ಹಾಗೂ ವಿಪುಲತೆಯಿಂದಾಗಿ ಇದು ಮಾನವ ಇತಿಹಾಸದ ಅದ್ಭುತ ಹಾಗೂ ಅತಿಶಯ ಕೇಂದ್ರವೆನಿಸಿದೆ.

ಹತ್ತನೆಯ ಶತಮಾನದ ಅಂತ್ಯದಲ್ಲಿ ದೊಡ್ಡಬೆಟ್ಟದ ಮೇಲೆ ಸಂಭವಿಸಿದ ಒಂದು ಘಟನೆಯನ್ನು ಹೊರತುಪಡಿಸಿದರೆ, ಮೊದಲ ಸಹಸ್ರಮಾನದ ದ್ವಿತೀಯಾರ್ಧದುದ್ದಕ್ಕೂ (600-1100) ಇತಿಹಾಸವನ್ನು ನಿರ್ಮಾಣ ಮಾಡಿದ್ದು ಕಟವಪ್ರವೇ. ಈ ಇತಿಹಾಸವನ್ನು ರೂಪಿಸಿದವರು ಅಸಾಮಾನ್ಯ ಶೂರರಾದ ಆಳರಸರಲ್ಲ, ಅಸಹಾಯಕರಾದ ಅಜ್ಞಾತ ಶ್ರಮಣರು ಮತ್ತು ಕಂತಿಯರು.

ದೇಹದಂಡನೆಯನ್ನೇ ಸಾಧನವನ್ನಾಗಿಸಿಕೊಂಡು, ಲೌಕಿಕ ಆಸೆ-ಆಮಿಷಗಳ ವಿರುದ್ಧ ಸೆಣಸಿ, ಸಾವಿನ ಮಾರ್ಗವನ್ನು ಸಿದ್ಧಿಸಿಕೊಂಡು, ಇತಿಹಾಸವನ್ನು ಇವರು ನಿರ್ಮಿಸಿದರು. ಇವರೆಲ್ಲರೂ ಅನಾಮಧೇಯ ವ್ಯಕ್ತಿಗಳಾಗಿದ್ದು, ಇಹಲೋಕದ ಯಾವ ಸಾಧನೆಯೂ ಸ್ಮರಣಾರ್ಹವಲ್ಲ ಎಂದು ನಂಬಿದ್ದರು. ಹೀಗಾಗಿ, ಅವರು ತಮ್ಮ ಬಗ್ಗೆ ಏನನ್ನೂ ಹೇಳಿಕೊಂಡಿಲ್ಲ. ಇವರಲ್ಲಿ ಬಹುತೇಕರು ಸಮಾಜದೊಡನಾಗಲಿ ಸಂಘದೊಡನಾಗಲಿ ನಿಕಟ ಸಂಪರ್ಕವನ್ನು ಇಟ್ಟುಕೊಂಡಿರಲಿಲ್ಲ. ತಮ್ಮ ಉನ್ನತ ಆಧ್ಯಾತ್ಮಿಕ ವಂಶಾವಳಿಯನ್ನಾಗಲಿ ಸುದೀರ್ಘವಾದ ಶಿಷ್ಯ ಪರಂಪರೆಯನ್ನಾಗಲಿ ಅವರು ಬಣ್ಣಿಸಿಕೊಳ್ಳಲು ಬಯಸಲಿಲ್ಲ. ಕಟವಪ್ರದ ಭೀಕರ ಪರಿಸರವನ್ನು ಎದುರಿಸಿ, ಹಸಿವು, ಪ್ರಕೃತಿ ವಿಕೋಪ ಮತ್ತು ಹಿಂಸ್ರ ಪಶುಗಳ ದಾಳಿಗಳನ್ನು ಸರಾಗವಾಗಿ ಸಹಿಸಿದ ಇವರಿಗೆ ಮರಣವನ್ನು ಆಹ್ವಾನಿಸುವದರಲ್ಲಿಯೇ ಅತಿ ಹೆಚ್ಚಿನ ಆನಂದ ಸಿಗುತ್ತಿತ್ತು. ಇದರಿಂದಾಗಿ ಅವರು ಯಾವುದಕ್ಕೂ, ಯಾರಿಗೂ ಅಂಜುವ ಕಾರಣವಿಲ್ಲದವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT