ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದಲಿಂಗೇಶ್ವರ ಗುಡ್ಡಕ್ಕೆ ಪಾಲಿಕೆ ಟಿಡಿಆರ್‌!

ಆನಂದಲಿಂಗೇಶ್ವರ ಗುಡ್ಡಕ್ಕೆ ಪಾಲಿಕೆ ಟಿಡಿಆರ್‌!
Last Updated 23 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಬೆಂಗಳೂರು ಉತ್ತರ ತಾಲ್ಲೂಕಿನ ಹೆಬ್ಬಾಳ ಸಮೀಪದ ಗುಡ್ಡದಹಳ್ಳಿ ಸರ್ವೆ ಸಂಖ್ಯೆ 1ರಲ್ಲಿರುವ ಆನಂದಲಿಂಗೇಶ್ವರ ಗುಡ್ಡಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಅಕ್ರಮವಾಗಿ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಸಾರ್ವಜನಿಕ ಉದ್ದೇಶದ ಯೋಜನೆಗಳಿಗೆ ಸ್ವಾಧೀನಪಡಿಸಿಕೊಳ್ಳುವ ಖಾಸಗಿ ಜಮೀನುಗಳಿಗೆ ಪರಿಹಾರ ರೂಪದಲ್ಲಿ ಟಿಡಿಆರ್‌ ನೀಡಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಟಿಡಿಆರ್‌ ನೀಡುವ ಸಲುವಾಗಿ ಸರ್ಕಾರಿ ಜಾಗವನ್ನು ಖಾಸಗಿ ಜಾಗವಾಗಿ ಬದಲಾಯಿಸಲಾಗಿದೆ!

ಸರ್ಕಾರಿ ಆಸ್ಪತ್ರೆ,  ಸರ್ಕಾರಿ ಪ್ರೌಢಶಾಲೆ ಹಾಗೂ ಬಿಎಂಟಿಸಿ ಬಸ್‌ ನಿಲ್ದಾಣ ನಿರ್ಮಿಸಲು ಉದ್ದೇಶಿಸಿ ಬಿಬಿಎಂಪಿ  ಟಿಡಿಆರ್‌ ನೀಡಿತ್ತು.  ಆದರೆ, ಇದಾಗಿ  ಏಳು ವರ್ಷ ಕಳೆದರೂ ಇಲ್ಲಿ ಯಾವುದೇ ಕೆಲಸ ಆಗಿಲ್ಲ. ನಿಯಮಗಳನ್ನು ಗಾಳಿಗೆ ತೂರಿ ಟಿಡಿಆರ್ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಏನಿದು ಪ್ರಕರಣ:  ಸರ್ವೆ ಸಂಖ್ಯೆ 1ರಲ್ಲಿ ಒಟ್ಟು 7 ಎಕರೆ 15 ಗುಂಟೆ ಜಮೀನು ಇದೆ. ಇದರಲ್ಲಿ 3  ಎಕರೆ 25 ಗುಂಟೆ ಜಾಗವನ್ನು ಹಕ್ಕಿಪಿಕ್ಕಿ ಕಾಲೊನಿ ಹಾಗೂ ಕುಂತಿಗ್ರಾಮ ಕೊಳಚೆ ಪ್ರದೇಶಕ್ಕೆ ಮೀಸಲಿಟ್ಟು ನಗರ ಜಿಲ್ಲಾಧಿಕಾರಿ ಅವರು 1997ರ ಆಗಸ್ಟ್‌ 22ರಂದು ಅಂತಿಮ ಅಧಿಸೂಚನೆ ಹೊರಡಿಸಿದ್ದರು. ಈ ಜಾಗದ ದಕ್ಷಿಣಕ್ಕೆ ಗಣೇಶ ಈಶ್ವರ ದೇವಸ್ಥಾನ ಗುಡ್ಡ ಇದೆ ಎಂದೂ ಉಲ್ಲೇಖಿಸಿದ್ದರು.

ಕೆಲವು ವರ್ಷಗಳ ಬಳಿಕ ಗುಡ್ಡದಹಳ್ಳಿ, ಕುಂತಿ ಗ್ರಾಮ ಹಾಗೂ ಚೋಳನಾಯಕನಹಳ್ಳಿ ಗ್ರಾಮಸ್ಥರು ಸರ್ಕಾರಿ ಆಸ್ಪತ್ರೆ, ಪ್ರೌಢಶಾಲೆ ಹಾಗೂ ಬಸ್‌ ನಿಲ್ದಾಣ ನಿರ್ಮಿಸಿಕೊಡಬೇಕು ಎಂದು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. ಈ ಮೂಲಸೌಕರ್ಯಗಳನ್ನು ಕಲ್ಪಿಸಲು ಸುತ್ತಮುತ್ತ ಸರ್ಕಾರಿ ಜಮೀನು ಲಭ್ಯವಿಲ್ಲ ಎಂಬ ಕಾರಣ ನೀಡಿ ಖಾಸಗಿ ಜಾಗಕ್ಕೆ ಟಿಡಿಆರ್‌ ನೀಡಿ ವಶಪಡಿಸಿಕೊಳ್ಳಲು ಬಿಬಿಎಂಪಿ ನಿರ್ಣಯಿಸಿತ್ತು.

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ 2009ರ ಆಗಸ್ಟ್‌ ಏಳರಂದು ಸಭೆ ನಡೆಯಿತು. ‘ಸರ್ವೆ ಸಂಖ್ಯೆ ಒಂದರ ಜಾಗ ಸರ್ಕಾರಿ ಜಾಗ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದ್ದು, ಇದಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ಅಥವಾ ಟಿಡಿಆರ್‌ ನೀಡಲು ಸಾಧ್ಯವಿಲ್ಲ’ ಎಂದು ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದರು.

ಇಲ್ಲಿರುವ ಖಾಲಿ ಜಾಗ ಹಾಗೂ ಮಾಲೀಕತ್ವದ ಬಗ್ಗೆ ವಿಶೇಷ ಜಿಲ್ಲಾಧಿಕಾರಿ, ಬಿಡಿಎ, ಬಿಬಿಎಂಪಿ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಜಂಟಿ ಸ್ಥಳ ತನಿಖೆ ನಡೆಸಿ ವರದಿ ನೀಡಬೇಕು ಎಂದು ಸಭೆಯಲ್ಲಿ ನಿರ್ಣಯ  ತೆಗೆದುಕೊಳ್ಳಲಾಗಿತ್ತು.

‘ನಿಯಮಾವಳಿ ಪ್ರಕಾರ ಘೋಷಿತ ಖಾಸಗಿ ಕೊಳಚೆ ಪ್ರದೇಶಗಳಿಗೆ ಕೇವಲ ಪರಿಹಾರ ನೀಡಲು ಸಾಧ್ಯವಿದೆ. ಇಂತಹ ಪ್ರದೇಶಕ್ಕೆ ಟಿಡಿಆರ್‌ ನೀಡಲು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಪರಿಶೀಲಿಸಿ ನಿಯಮದಲ್ಲಿ ಅಳವಡಿಸಿಕೊಳ್ಳಬೇಕಿದೆ’ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು.

ಸರ್ಕಾರಿ ಕೊಳೆಗೇರಿ ಖಾಸಗಿಗೆ:  ಅಬಕಾರಿ, ವಾರ್ತಾ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಕಟ್ಟಾ  ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ 2009ರ ಆಗಸ್ಟ್‌ 24ರಂದು ಅಧಿಕಾರಿಗಳ ಸಭೆ ಜರುಗಿತು. ‘ಸರ್ವೆ ಸಂಖ್ಯೆ 1ರ ಖಾಸಗಿ ಭೂಮಿಯಲ್ಲಿರುವ ಕೊಳಚೆ ಪ್ರದೇಶಕ್ಕೆ ಸಂಬಂಧಿಸಿ ಸಾಕಷ್ಟು ಸಮಸ್ಯೆಗಳು ತಲೆದೋರಿವೆ.

ಹೀಗಾಗಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿಲ್ಲ. ಭೂಮಾಲೀಕರಿಗೆ ಟಿಡಿಆರ್‌ ನೀಡಿದರೆ ಸಮಸ್ಯೆ ಬಗೆಹರಿಸಲು ಅನುಕೂಲವಾಗುತ್ತದೆ’ ಎಂದು ಸಚಿವರು ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಟಿಡಿಆರ್‌ ನೀಡುವ ಬಗ್ಗೆ ನೀತಿಯೊಂದನ್ನು ರೂಪಿಸಲು ಸಭೆಯಲ್ಲಿ ನಿರ್ಣಯಿಸಲಾಗಿತ್ತು. 

ಈ ಜಾಗದ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ವಿಶೇಷ ಜಿಲ್ಲಾಧಿಕಾರಿ ಅವರಿಗೆ ಬಿಬಿಎಂಪಿ ಆಯುಕ್ತರು ಅಕ್ಟೋಬರ್‌ 13ರಂದು ಪತ್ರ ಬರೆದಿದ್ದರು.  ‘ಸರ್ವೆ ಸಂಖ್ಯೆ 1ರಲ್ಲಿ 3 ಎಕರೆ 15 ಗುಂಟೆ ಖರಾಬು ಜಾಗದಲ್ಲಿ ಕಲ್ಲುಗುಡ್ಡ ಇದ್ದು, ಆನಂದ ಲಿಂಗೇಶ್ವರ ದೇವಸ್ಥಾನವೂ ಇದೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

ಈ ನಡುವೆ, ಈ ಜಾಗಕ್ಕೆ ಸಂಬಂಧಪಟ್ಟದಂತೆ ಹೆಬ್ಬಾಳ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಬಿಬಿಎಂಪಿಗೆ ವರದಿ ಸಲ್ಲಿಸಿದ್ದರು. 2 ಎಕರೆ 25 ಗುಂಟೆ ಜಾಗದಲ್ಲಿ ಆನಂದ ಲಿಂಗೇಶ್ವರ ದೇವಸ್ಥಾನ ಹಾಗೂ 4 ಎಕರೆ 30 ಗುಂಟೆ ಜಾಗದಲ್ಲಿ 200 ಮನೆಗಳು ಇವೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದ್ದರು.

ಮೊದಲು ಸರ್ಕಾರಿ–ಬಳಿಕ ಖಾಸಗಿ: ‘ಈ ಜಾಗ ಕಲ್ಲು ಬಂಡೆಯಿಂದ ಕೂಡಿದ್ದು, ಇದನ್ನು ಭೂ ಪರಿವರ್ತನೆ ಮಾಡಿಲ್ಲ. ಉಳಿದ 3 ಎಕರೆ 25 ಗುಂಟೆಯಲ್ಲಿ ಕೊಳೆಗೇರಿ ಇದೆ’ ಎಂದು ವಿಶೇಷ ಜಿಲ್ಲಾಧಿಕಾರಿ ಅವರು ಅಕ್ಟೋಬರ್‌ 29ರಂದು ಆಯುಕ್ತರಿಗೆ ಉತ್ತರ ನೀಡಿದ್ದರು.

ಭೂಮಾಲೀಕರಿಗೆ ಟಿಡಿಆರ್‌ ನೀಡುವ ವಿಷಯದ ಬಗ್ಗೆ ಚರ್ಚಿಸಲು ಬಿಬಿಎಂಪಿ ಆಡಳಿತಾಧಿಕಾರಿ ನೇತೃತ್ವದಲ್ಲಿ ನವೆಂಬರ್‌ 9ರಂದು ನಗರ ಯೋಜನೆ  ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಸಭೆ ಜರುಗಿತ್ತು. 4 ಎಕರೆ 30 ಗುಂಟೆಯಲ್ಲಿ ಕೊಳಚೆ ಪ್ರದೇಶ ಹಾಗೂ 2 ಎಕರೆ 25 ಗುಂಟೆಯಲ್ಲಿ ದೇವಸ್ಥಾನ ಇರುವುದನ್ನು ಸಭೆಯಲ್ಲಿ ಒಪ್ಪಿಕೊಳ್ಳಲಾಗಿತ್ತು. 

ಸರ್ಕಾರಿ ಭೂಮಿ, ಅದರಲ್ಲಿರುವ ಖರಾಬು ಹಾಗೂ ಖಾಸಗಿ ಜಾಗ ಯಾವುದನ್ನು ಪತ್ತೆ ಹಚ್ಚಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.   ಅದರ ಜೊತೆಗೆ ಇಲ್ಲಿರುವ ನಿವಾಸಿಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿಯು ತುರ್ತಾಗಿ ಪುನರ್ವಸತಿ ಕಲ್ಪಿಸಬೇಕು ಎಂದೂ ಬಿಬಿಎಂಪಿ ಆಡಳಿತಾಧಿಕಾರಿ ನಿರ್ದೇಶನ ನೀಡಿದ್ದರು.

‘3 ಎಕರೆ 15 ಗುಂಟೆಯನ್ನು 1997ರಲ್ಲಿ ಸರ್ಕಾರಿ ಭೂಮಿ ಎಂದು ನಮೂದಿಸಲಾಗಿತ್ತು. ಇದನ್ನು ಖಾಸಗಿ ಭೂಮಿ ಎಂದು ತಿದ್ದುಪಡಿ ಮಾಡಿ ಆದೇಶ ಹೊರಡಿಸಬಹುದು ಎಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದನ್ನು ಖಾಸಗಿ ಭೂಮಿ ಎಂದು ಪರಿಗಣಿಸಲಾಗಿದೆ’ ಎಂದು ವಿಶೇಷ ಜಿಲ್ಲಾಧಿಕಾರಿ ಅವರು ನವೆಂಬರ್‌ 20ರಂದು ಆದೇಶಿಸಿದ್ದರು.

ಕೊಳಚೆ ಪ್ರದೇಶ ಹೊರತುಪಡಿಸಿ ಉಳಿದ ಜಾಗಕ್ಕೆ ಟಿಡಿಆರ್‌ ನೀಡಿ ಭೂಸ್ವಾಧೀನ ಮಾಡಿಕೊಳ್ಳಬೇಕು ಎಂದು  ನಗರಾಭಿವೃದ್ಧಿ ಇಲಾಖೆ ನವೆಂಬರ್‌ 30ರಂದು ಆದೇಶ ಹೊರಡಿಸಿತ್ತು. ಬಳಿಕ ಮೂವರು ಭೂಮಾಲೀಕರಿಗೆ ಬಿಬಿಎಂಪಿ ಟಿಡಿಆರ್‌ ನೀಡಿತು.

ಕಾನೂನು ಉಲ್ಲಂಘನೆ
‘ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಟಿಡಿಆರ್‌ ನೀಡುವ ಸಲುವಾಗಿಯೇ ಸಚಿವರು 2 ತಿಂಗಳಲ್ಲೇ 3–4 ಸಭೆ ನಡೆಸಿದ್ದಾರೆ. ಕಾನೂನು ಉಲ್ಲಂಘಿಸಿ ಟಿಡಿಆರ್‌ ನೀಡಲಾಗಿದೆ. ಗುಡ್ಡದಹಳ್ಳಿಯಲ್ಲಿ ಖಾಲಿ ಜಾಗವೇ ಇಲ್ಲ. ಹೀಗಿದ್ದಾಗ ಅಭಿವೃದ್ಧಿ ಕೆಲಸ ಮಾಡುವುದು ಹೇಗೆ. ಮೊದಲು ಟಿಡಿಆರ್‌ ಕೊಟ್ಟ ಜಾಗ ತೋರಿಸಿ’ ಎಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪಿ.ಆರ್‌. ರಮೇಶ್‌ ಸವಾಲು ಹಾಕುತ್ತಾರೆ.

‘ಈ ಜಾಗದ ಬಗ್ಗೆ ಜಂಟಿ ಸಮೀಕ್ಷೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆಯ  ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದರು. ಆದರೆ, ಸಮೀಕ್ಷೆ ನಡೆಸದೆ ತರಾತುರಿಯಲ್ಲಿ ಟಿಡಿಆರ್‌ ನೀಡಲಾಗಿದೆ. ಸರ್ಕಾರಿ ಜಾಗವನ್ನು ತನ್ನಿಂದ ತಾನೆ ಖಾಸಗಿ ಎಂದು ಬದಲಾಯಿಸಲು ಸಾಧ್ಯವೇ?’ ಎಂದು ಅವರು ಪ್ರಶ್ನಿಸುತ್ತಾರೆ.

‘ಇಲ್ಲಿ ಶಾಲೆ, ಆಸ್ಪತ್ರೆ ಹಾಗೂ ಬಸ್‌ ನಿಲ್ದಾಣ ನಿರ್ಮಿಸುವಂತೆ ಸ್ಥಳೀಯರು ಬೇಡಿಕೆ ಸಲ್ಲಿಸಿಯೇ ಇಲ್ಲ. ಇವೆಲ್ಲವನ್ನು ಸೃಷ್ಟಿಸಲಾಗಿದೆ’ ಎಂದು ಅವರು ಆರೋಪಿಸುತ್ತಾರೆ. 

‘ಕೊಳೆಗೇರಿಯಲ್ಲಿ 30 ವರ್ಷಗಳಿಂದ ನೆಲೆಸಿದ್ದೇನೆ. ಈ ಸರ್ವೆ ಸಂಖ್ಯೆಯಲ್ಲಿ ಬೆಟ್ಟ ಹಾಗೂ ಕೊಳೆಗೇರಿಗಳು ಇವೆ. ಇಲ್ಲಿ ಯಾವುದೇ ಶಾಲೆ, ಆಸ್ಪತ್ರೆ ಹಾಗೂ ಬಸ್‌ ನಿಲ್ದಾಣ ನಿರ್ಮಾಣ ಆಗಿಲ್ಲ. ಇವುಗಳನ್ನು ನಿರ್ಮಿಸಲು ಜಾಗ ಎಲ್ಲಿದೆ ಸ್ವಾಮಿ’ ಎಂದು ಪ್ರಶ್ನಿಸುತ್ತಾರೆ ಸ್ಥಳೀಯ ನಿವಾಸಿ ಆಂಜನಾಮೂರ್ತಿ.

***
ಈ ಜಾಗಕ್ಕೆ ಟಿಡಿಆರ್‌ ನೀಡುವ ವಿಷಯದಲ್ಲಿ ಭ್ರಷ್ಟಾಚಾರ ನಡೆದಿದೆ. ₹22 ಕೋಟಿ ಹಗರಣವಿದು. ಇದನ್ನು ಸಿಐಡಿಗೆ ಒಪ್ಪಿಸಿ ಸಮಗ್ರ ತನಿಖೆ ನಡೆಸಬೇಕು.
-ಪಿ.ಆರ್‌. ರಮೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT