ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ನಡೆದ ಹಾದಿಯಲಿ...

Last Updated 13 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಆನೆಗಳು ಹೊಲ- ಗದ್ದೆಗಳಿಗೆ ದಾಳಿ ಇಟ್ಟರೆ ಕೃಷಿಕರ ಪಾಡು ಏನಾಗುತ್ತದೆಂದು ಹೊಸದಾಗಿ ಹೇಳಬೇಕಿಲ್ಲ. ಈ ಗೋಳು ಮೈಲನಹಳ್ಳಿಯನ್ನೂ ಬಿಟ್ಟಿಲ್ಲ. ಆದರೆ ಈ ದಾಳಿ ಇಲ್ಲಿ ಅದ್ಭುತವನ್ನೂ ಸೃಷ್ಟಿಸಿದೆ. ಆನೆಯಿಂದ ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಆಗಿರುವುದಲ್ಲದೇ ಹಸಿರು ಚಿಮ್ಮಿ ನೀರಿನ ಸೆಲೆಯೂ ಕಾಣುತ್ತಿದೆ!

ರಾಜಧಾನಿ ಬೆಂಗಳೂರಿನ ಕೂಗಳತೆಯಲ್ಲಿರುವ ಈ ಗ್ರಾಮದ ಹೆಣ್ಣುಮಕ್ಕಳಿಗೀಗ ಶುಕ್ರದೆಸೆ. ಮೂಲಸೌಕರ್ಯವಿಲ್ಲದೆ, ಬಯಲನ್ನೇ ಶೌಚಕ್ಕೆ ಅವಲಂಬಿಸಿದ್ದ ಈ ಊರಲ್ಲಿ ಈಗ ಶೌಚಾಲಯಗಳು ನಿರ್ಮಾಣಗೊಳ್ಳುತ್ತಿವೆ. ಇನ್ನೊಂದೆಡೆ, ಕಾಡಿನ ಬೋಳು ಬಯಲಿನಲ್ಲಿ ಕಂಬಗಳು ಎದ್ದು ನಿಂತಂತೆ ಕಾಣುತ್ತಿದ್ದ ನೀಲಗಿರಿ ಮರಗಳ ಬುಡದಲ್ಲಿ ಚಿಗುರಿದ ಬೇಲಿ ಗಿಡಗಳು, ಪೊರಕೆ ಹೂಗಳು, ಕಳ್ಳಿ ಮೆಳೆಗಳು ನೀಲಗಿರಿಗಳನ್ನೇ ದಟ್ಟೈಸಿ ಇಲ್ಲಿ ಕೋಟೆ ಕಟ್ಟಿವೆ. ಒಳಹೊಕ್ಕಲು ಹತ್ತು ಬಾರಿ ಯೋಚಿಸಿದರೂ ದಿಗಿಲು ಹುಟ್ಟಿಸುವಂತೆ ಹಬ್ಬಿರುವ ಪೊದೆಗಳು, ಹೆಬ್ಬಂಡೆ­­ಗಳೂ ಕಾಣದಂತೆ ಹಬ್ಬಿದ ಕಾಡು­ಬಳ್ಳಿಗಳು ನಗುತ್ತಾ ನಿಂತಿವೆ.

ಕಾಡು ಬೆಳೆದಂತೆ ಹಳ್ಳಗಳಲ್ಲಿ, ಸುತ್ತಲಿನ ಊರುಗಳ ಬಾವಿಗಳಲ್ಲಿ ನೀರಿನ ಪಸೆ ಕಾಣಿಸಿದೆ. ಕಾಡ ಮಧ್ಯೆ ಹರಡಿ ನಿಂತ ಮೈಲನಹಳ್ಳಿ ಕೆರೆಯ ನೀರು ಅಂಚಿನ ಗದ್ದೆಗಳಿಗೂ ನುಗ್ಗಿದೆ. ಕೆರೆಯ ನೀರಲ್ಲಿ ಮಿಂಚುಳ್ಳಿಗಳು ಮತ್ತೆ ಗುಳುಕು ಹಾಕುತ್ತಿವೆ. ಅತ್ತ ಕಾಡಿನಲ್ಲಿ ಕೇಳುತ್ತಿದ್ದ ನವಿಲ ಕೇಕೆ ಊರಿಗೂ ಬಂದಿದೆ.

ಇತ್ತ ಅಂಡೆಕಲ್ಲಿನ ಗುಡಿಸಿಲಿನೊಳಗೆ ಕೂತ ಪುಟ್ಟಕ್ಕಜ್ಜಿಯ ಕೊರಳಿಂದ ಹೊರಟ...
ಕಗ್ಗಲ್ಲಪ್ಪನ ಕಣಿವೇ ಒಳಗೆ
ಕಂಚಿನ ಗುಡುಗೇ ಗುಡುಗೀತು
ಕಂಚಿನ ಗುಡುಗೇ ಗುಡುಗಿದ ಕಂಡು
ಮಾಯದ ಮಳೆಯೇ ಸುರಿಯೀತು
ಮಾಯದ ಮಳೆಯೇ ಸುರಿದಿದ ಕಂಡು...

...ಪದ ಸುತ್ತಲಿನ ಹತ್ತಳ್ಳಿಯಲ್ಲೂ ಮಾರ್ದನಿಸುತ್ತಿದೆ. ಇಂಥದ್ದೊಂದು ಹೊಸ ಪರ್ವಕ್ಕೆ ನಾಂದಿ ಹಾಡಿರುವುದು ಆನೆಗಳ ದಾಳಿ!

ತಪ್ಪು  ಯಾರದ್ದು?
ಇದು ಮಾಗಡಿ, ನೆಲಮಂಗಲ ಮತ್ತು ತುಮಕೂರು ತಾಲ್ಲೂಕುಗಳು ಕೂಡುವ ಆಯಕಟ್ಟಿನ ಜಾಗ. ನಾಕಾರು ಬೆಟ್ಟಗಳು, ಸೊಂಪಾದ ಕಾಡು, ಬೇಕೆನಿಸುವಷ್ಟು ನೀರು. ನಾಲ್ಕು ವರ್ಷಗಳ ಹಿಂದೆ ಬರ ಬಂದಾಗ ಸಾವನದುರ್ಗ ಮತ್ತು ಸುತ್ತಮುತ್ತಲಿನ ಕಾಡಿನಲ್ಲಿ ನೀರು ಬತ್ತಿದ್ದರೂ ಅದರಂಗಿ ಕಾಡಿನಲ್ಲಿ ನೀರಿತ್ತು. ಆಗಲೇ ಆನೆಗಳು ಇಲ್ಲಿಗೆ ಬಂದದ್ದು. ಈಗಲೂ ಬರುತ್ತಿವೆ.
‘ಬರಪೀಡಿತ ತುಮಕೂರು ತಾಲ್ಲೂಕಿನತ್ತ ಆನೆಗಳನ್ನು ಓಡಿಸಬಾರದು ಎಂಬ ನಿರ್ದೇಶನವಿದ್ದರೂ, ಆನೆಗಳನ್ನು ಇತ್ತಲೇ ಓಡಿಸುತ್ತಾರೆ. ಮತ್ತೆ ನಾವು ಆನೆಗಳನ್ನು ಅತ್ತ ಓಡಿಸಬೇಕು. ಇದು ಆನೆ ಮತ್ತು ಮಾನವ ಸಂಘರ್ಷಕ್ಕೆ ಎಡೆಮಾಡಿಕೊಡದಂತೆ, ಒಂದು ಪರಿಹಾರ ತಂತ್ರವನ್ನು ಕಂಡುಕೊಳ್ಳುವುದು ಈವರೆಗೂ ಸಾಧ್ಯವಾಗಿಲ್ಲ’ ಎನ್ನುತ್ತಾರೆ ತುಮಕೂರು ಜಿಲ್ಲಾ ಅರಣ್ಯ ಇಲಾಖೆ ಸಿಬ್ಬಂದಿ

ಹೌದು. ಇದು ಅಚ್ಚರಿ ಎನಿಸಿದರೂ ಸತ್ಯ! ಆನೆಗಳ ದಾಳಿಯಿಂದ ಬೆಳೆ ನಾಶವಾಗಿ ಸೋತು ಹೈರಾಣಾಗುವ ಹಳ್ಳಿಗರ ಬದುಕು ಒಂದು ಮುಖವಾದರೆ ಇದು ಆನೆ ದಾಳಿಯ ಇನ್ನೊಂದು ಮುಖ. ಇದರ ಪರಿಚಯ ಆಗುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದ ತಪ್ಪಲಿನ ಮೈಲನಹಳ್ಳಿ. ರಾಮನಗರ ಜಿಲ್ಲೆಯ, ಮಾಗಡಿ ತಾಲ್ಲೂಕಿನ ಅಂಚಿನ ಹಳ್ಳಿ ಇದು. ಮೈಲನಹಳ್ಳಿ­ಯಲ್ಲಿರುವುದು 80 ಮನೆ, ಸುಮಾರು 500 ಜನ. ಹಲವು ಮಂದಿ ವ್ಯವಸಾಯ ಬಿಟ್ಟು ಚಿಕ್ಕಪುಟ್ಟ ಉದ್ಯೋಗ ಕಂಡುಕೊಂಡಿದ್ದಾರೆ. ಆದರೂ ಊರಿನ ಹಳೆ ತಲೆಗಳು ಹೊಲ ಉತ್ತುತ್ತಾ, ಕುರಿ-ಮೇಕೆ ಕಾಯುವ ಕಾಯಕ ಮಾಡುತ್ತಲೇ ಇವೆ.

ಗ್ರಾಮಕ್ಕೆ ಹೊಂದಿಕೊಂಡಂತೆ ಕೌಚುಗಲ್ ಮುನೇಶ್ವರನ ಬೆಟ್ಟ ಇದೆ. ಅದರ ಪಕ್ಕಕ್ಕೆ ತೂತು ಕಲ್ಲುಬೆಟ್ಟ ಇದೆ. ಈ ಮೂರೂ ಬೆಟ್ಟಗಳ ನಡುವೆ ಏಳೆಂಟು ಸಣ್ಣ ಗುಡ್ಡಗಳಿವೆ. ಬೆಟ್ಟಗಳ ನಡುವಿನ ಕಣಿವೆಗಳಲ್ಲಿ ಸೊಂಪಾದ ಕಾಡಿದೆ. ಮೊಲ, ಕಾಡುಪಾಪ, ಕಾಡುಹಂದಿ, ಕರಡಿ, ಕಿರುಬ, ಚಿರತೆಗಳಿಗೆ ಆಶ್ರಯ ನೀಡಿರುವ ಈ ಕಾಡಿಗೆ ‘ಅದರಂಗಿ’ ಎಂದು ಹೆಸರು. ಈ ಕಾಡು, ಬೆಟ್ಟಗಳ ಸುತ್ತ ಇರುವ ಏಳೆಂಟು ಹಳ್ಳಿ­ಗಳಲ್ಲಿ ಈ ಪ್ರಾಣಿ­ಗಳೆಲ್ಲಾ ತಡರಾತ್ರಿ ಪರೇಡ್ ಹೊರಡುವುದು ಇಲ್ಲಿನ ಜನಕ್ಕೆ ಮಾಮೂಲು.

ಈ ಪ್ರಾಣಿಗಳ ಸಾಲಿಗೆ ನಾಲ್ಕೈದು ವರ್ಷಗಳಿಂದ ಆನೆ ಸೇರ್ಪಡೆಗೊಂಡಿದೆ! ಮನೆ ಹಿತ್ತಿಲುಗಳನ್ನೇ ತುಳಿದು ಹಾಕಿದ ಮೇಲೆ, ಈ ಊರುಗಳ ಹೆಣ್ಣು ಮಕ್ಕಳು ಬೆಳಿಗ್ಗೆ ಎದ್ದು ಶೌಚಕ್ಕೆ ಕಾಡಿನತ್ತ ಹೋಗುವುದಾದರೂ ಹೇಗೆ? ಅದಕ್ಕಾಗಿಯೇ ಊರಲ್ಲಿ ಹೆಚ್ಚುಹೆಚ್ಚು ಶೌಚಾಲಯ ನಿರ್ಮಾಣವಾಗುತ್ತಿವೆ. ಇನ್ನೊಂದೆಡೆ, ಆನೆಗಳು ಕಾಡಿನಲ್ಲಿರುವಷ್ಟೂ ದಿನ ಅಪ್ಪಿತಪ್ಪಿಯೂ ಈ ಜನ ಅತ್ತ ತಲೆ ಹಾಕುವುದಿಲ್ಲ. ಈ ಬಾರಿ ಬಂದ ಆನೆ­ಗಳು ನಡೆಸಿರುವ ದಾಂದಲೆಗೆ ಬೆದರಿ­ರುವ ಊರ ಮಂದಿ ಕುರಿ, ದನ ಮೇಯಿಸಲು ಕಾಡಿನತ್ತ ಹೋಗುವು­ದನ್ನು ಬಿಟ್ಟಿದ್ದಾರೆ. ತಡರಾತ್ರಿಯಲ್ಲಿ ಹೊಲಗಳತ್ತ ಹೋಗುವುದನ್ನೂ ಬಿಟ್ಟಿದ್ದಾರೆ. ಅತ್ತ ದನ ಕುರಿ ಮೇಕೆಗಳೂ ಕಾಡ ಜೀವಸೆಲೆಯನ್ನು ಬುಡಮಟ್ಟ ಮೇಯುವುದು ನಿಂತಿದೆ. ಇದರಿಂದಾಗಿ ಅಲ್ಲೆಲ್ಲಾ ಹಸಿರು ಉಕ್ಕಿ ನಿಂತಿದೆ.

ನಿದ್ದೆಯನ್ನೂ ಕೆಡಿಸಿದೆ
ಹಾಗಂತ, ಆನೆ ದಾಳಿ ಇಲ್ಲಿಯ ಗ್ರಾಮಸ್ಥರ ನಿದ್ದೆ ಕೆಡಿಸುತ್ತಿಲ್ಲ ಎಂದೇನಲ್ಲ.  ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡಿ ಹೋಗುವುದೂ ಇಲ್ಲಿ ಮಾಮೂಲು.

‘ನಾನ್ ಆಡೋ ಹುಡುಗಾ ಇದ್ದಾಗಿಂದಲೂ ಇದೇ ಕಾಡ್ನಾಗೇ ಕುರಿ ಮೇಯ್ಸೋದು. ಈಗ ನಂಗೆ 80 ವರ್ಷ. ಒಂದ್‍ ಸಾರಿನೂ ಆನೆ ಬಂದಿರ್ಲಿಲ್ಲ. ಮೊದಲ ಬಾರಿ ಆನೆ ಬಂದಾಗ ‘ಓ ನಮ್ಮೂರ್‌್ಗೂ ಆನೆ ಬಂದ್ವೋ’ ಅಂತ ಖುಸಿ ಇತ್ತು. ಈಗ ಹೊಲಗಳನ್ನು ಹಾಳು ಮಾಡಿದ ಮೇಲೆ ಯಾಕಾದ್ರೂ ಆನೆ ಬಂದ್ವೊ ಅನಿಸ್ತದೆ’ ಎನ್ನುತ್ತಾರೆ ನಾರಾಯಣಪುರದ ದಾಸಪ್ಪ.

‘ನಾಲ್ಕೈದು ವರ್ಷದ ಹಿಂದಿನ ಮಾತು. ಅವತ್ತು ಗದ್ದೆ ಕಡೆ ಹೋದಾಗ ಗುಂಡ್‌ಕಲ್‌ನಷ್ಟು ದೊಡ್ಡದಾಗಿರೋ ಲದ್ದಿ ಬಿದ್ದಿತ್ತು. ಐದಾರ್ ಮಂಕ್ರಿಯಷ್ಟಿತ್ತು. ಯಾವ್‍ದುದ್ರು ಅಂತ ಗೊತ್ತಾಗ್ಲಿಲ್ಲ. ಸಂಜೆ ಮನೇ ಕಡೇಕ್ ಹೊರಟೆ. ರಾತ್ರಿ ಒಂದ್ ಹೊತ್‌ನಲ್ಲಿ ಊರಿನ್ ನಾಯೆಲ್ಲಾ ವೋ ಅಂತ ಬೊಗ್ಳಕ್ಕೆ ಶುರು ಮಾಡುದ್ವೊ... ಬೊಗ್ಳೋದ್ ಜಾಸ್ತಿ ಮಾಡುದ್ಮೇಲೆ ಈಚೆ ಬಂದ್ ನೋಡ್ತೀವಿ ಹೊಲ್ದಾಗೆ ಏಳೆಂಟು ಆನೆ ಸೇರ್‍ಕಂಡವೆ. ಇನ್ನೂ ಆನೆ ಬರ್ತಾನೇ ಅವೆ...’ ಎಂದು ಮೊದಲ ಬಾರಿ ಆನೆಗಳು ಬಂದದ್ದನ್ನು ವಿವರಿಸುತ್ತಾರೆ ಮೈಲನಹಳ್ಳಿಯ ಗಂಗಣ್ಣ .

‘ಸಾಮಾನ್ಯವಾಗಿ ಸಾವನ­ದುರ್ಗ ಬೆಟ್ಟ ದಾಟಿ ಈ ಕಡೆಗೆ ಆನೆಗಳು ಬರುತ್ತಿರಲಿಲ್ಲ. ಶಿವಗಂಗೆ ಸುತ್ತಮುತ್ತ­ಲಿನಲ್ಲಿ ಕಾಡು, ನೀರು ಚೆನ್ನಾಗಿದೆ. ಬಿದಿರು ಸೊಂಪಾಗಿ ಬೆಳೆದಿದೆ. ಒಂದು ಬಾರಿ ಅವುಗಳ ರುಚಿ ನೋಡಿದ ಆನೆಗಳು ಬರುತ್ತಲೇ ಇವೆ. ಮೊದಲ ಬಾರಿ ಬಂದಾಗ 9 ಆನೆ ಇದ್ವು. ಈ ಸಲ ಬಂದ ಗುಂಪಿನಲ್ಲಿ 11 ಆನೆ ಇವೆ’ ಎನ್ನು­ತ್ತಾರೆ ಅರಣ್ಯ ಇಲಾಖೆಯ ಅಧಿಕಾರಿ.

ಬೆಂಗಳೂರಿನ ಕಾರ್ಖಾನೆಗೆ ಹೊರಡುವ ಉಡುಕುಂಟೆಯ ಹೇಮಂತ, ಬೆಳಿಗ್ಗೆ 6.15­ಕ್ಕೆಲ್ಲಾ ಊರಾಚೆ ಇರುವ ಬಸ್‌ ನಿಲ್ದಾಣಕ್ಕೆ ಬರುವ ಕೆಎಸ್‍ಆರ್‌ಟಿಸಿ ಬಸ್ ಹಿಡಿಯ­ಬೇಕು. ಮನೆಯಿಂದ ಬಸ್‍ ನಿಲ್ದಾಣದ ನಡುವಣ ಒಂದು ಕಿ.ಮೀ ಹಾದಿಯ ಮಧ್ಯೆ ಇರುವ ಗುಂಡು­ ತೋಪಿ­ಲ್ಲಿ ಆನೆಗಳಿದ್ದರೆ ಏನು ಗತಿ ಎಂಬ ಭಯ ದಿಂದಲೇ ಆತನ ದಿನಚರಿ ಆರಂಭ. ಮೈಲನಹಳ್ಳಿಯಿಂದ ಬರುವ ಅವನ ಸಹೋದ್ಯೋಗಿಗಳಿಗೂ ಈ ಗುಂಡು­ತೋಪಿನದ್ದೇ ಚಿಂತೆ.

‘ಅರಣ್ಯ ಇಲಾಖೆ ನಡೆಸುವ ಆನೆ ಡ್ರೈವ್‌ಗಳನ್ನು ನೋಡಿದರೆ, ಅದರಲ್ಲಿ ಜನರ ಕಣ್ಣೊರೆಸುವ ತಂತ್ರ ಮಾತ್ರ ಕಾಣುತ್ತದೆ. ಆನೆಗಳು ತಮ್ಮ ವ್ಯಾಪ್ತಿಯ ಗಡಿ ದಾಟುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕೈತೊಳೆದುಕೊಳ್ಳುತ್ತಾರೆ. ಆದರೆ ಆನೆ ಡ್ರೈವ್ ಮಾಡಿದಾಗ ಆನೆಗಳು ಹೋದಲೆಲ್ಲಾ ಗಿಡಗಂಟೆಗಳು, ಹೊಲಗದ್ದೆಗಳು ಹಾಳಾಗುತ್ತವೆ. ಅದಕ್ಕೆಲ್ಲಾ ಪರಿಹಾರ ಕೊಡುವವರು ಯಾರು’ ಎಂದು ಪ್ರಶ್ನಿಸುತ್ತಾರೆ ಸಂಶೋಧನಾ ವಿದ್ಯಾರ್ಥಿ ದಿನೇಶ್‌.

ಕೌಚುಗಲ್ ಮುನೇಶ್ವರನ ಬೆಟ್ಟ ಮತ್ತು ಅದರಂಗಿ ಕಾಡಿಗೆ ಚಾರಣಕ್ಕೆಂದು ತಿಂಗಳಿಗೆ ಒಂದು ಗುಂಪು ಬಂದರೂ ಹೆಚ್ಚೇ. ಹೀಗೆ ದೂರದ ಹಾವೇರಿಯಿಂದ ಚಾರಣಕ್ಕೆ ಬಂದ ಶ್ರೀಕಾಂತ್, ಅಂದು ಅಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸುತ್ತಿದ್ದ ಆನೆ ಓಡಿಸುವ ಕಾರ್ಯಾಚರಣೆ ವೈಖರಿಯನ್ನು ಬಿಚ್ಚಿಟ್ಟಿದ್ದಾರೆ.

‘ನಾವೆಲ್ಲ ಸ್ನೇಹಿತರಿಲ್ಲಿ ಚಾರಣಕ್ಕೆ ಬಂದಾಗ ಕೌಚುಗಲ್ ಬೆಟ್ಟದ ಹಿಂದಿರುವ ಕಾಡಿನಲ್ಲಿ ಆನೆಗಳಿವೆ ಎಂಬುದು ತಿಳಿದಿತ್ತು. ಇಲ್ಲಿಯವನೇ ಆದ ಗೆಳೆಯ ಶಂಕರನ ಮುಂದಾಳತ್ವದಲ್ಲಿ ಚಾರಣ ಆರಂಭಿಸಿದೆವು. ಊರಿಂದ 2 ಕಿ.ಮೀ ನಡೆದ ಮೇಲೆ ಬೆಟ್ಟದ ತಪ್ಪಲಿನಲ್ಲಿದ್ದೆವು. ಅರಣ್ಯ ಇಲಾಖೆಯ ಜೀಪಿನಲ್ಲಿ ಕುಳಿತಿದ್ದ ಅರಣ್ಯಾಧಿಕಾರಿ ತರಾತುರಿಯಲ್ಲಿ ‘ಎಲಿಫೆಂಟ್ ಡ್ರೈವ್ ಮಾಡುತ್ತಿದ್ದೇವೆ. ಯಾರೂ ಇರಬೇಡಿ, ಹೊರಡಿ ಹೊರಡಿ’ ಎಂದರು. ಮತ್ತೊಂದು ಜೀಪಿನಲ್ಲಿದ್ದ ಸಿಬ್ಬಂದಿಗೆ, ‘ಆನೆಗಳು ಊರ್‌ಕಡೆ ತಿರುಗಿವೆ, ಬನ್ನಿ’ ಎಂದು ಸೂಚಿಸಿದರು.

ಎರಡೂ ಜೀಪುಗಳು ಕಾಡಿನ ಅಂಚಿ ನ­ಲ್ಲಿದ್ದ ಬೈರಸಂದ್ರದ ಕಡೆ ದೂಳೆಬ್ಬಿಸುತ್ತಾ ದೌಡಾಯಿಸಿದವು. ಅವರು ನಿರಾಕರಿಸಿದರೂ ಅವರು ಅತ್ತ ಹೋದಮೇಲೆ ಬೆಟ್ಟ ಹತ್ತಲು ಶುರು ಮಾಡಿದೆವು. ಬೆಟ್ಟದ ಪೂರ್ವ ಭಾಗದ ಇಳಿಜಾರನ್ನು ಏರುತ್ತಿದ್ದೆವು. ಬೆಟ್ಟದ ಪಶ್ಚಿಮ ಭಾಗದ ಆಚೆಗಿದ್ದ ಕಾಡಿ­ನ­ಲ್ಲಿದ್ದ ಆನೆಗಳನ್ನು ಓಡಿಸಲು, ಅರಣ್ಯ ಇಲಾಖೆ ಸಿಬ್ಬಂದಿ ಕುಶಾಲು ತೋಪು ಮತ್ತು ಪಟಾಕಿ ಸಿಡಿಸ ತೊಡಗಿದರು. ಅದಾಗಲೇ ಕತ್ತಲಾವರಿಸಿತ್ತು. ಬೆಟ್ಟದ ತುದಿ ತಲುಪಿದ್ದೆವು. ಗುಂಡುಗಳ ಸದ್ದು ಕೇಳುತ್ತಲೇ ಇತ್ತು. ಶಂಕರ್‌ ಹೇಳಿದಂತೆ ಉಡುಕುಂಟೆ ಕೆರೆ ದಾಟಿದ ಆನೆಗಳು ನಂತರ ಮೈಲನಹಳ್ಳಿ, ಅಂಡೆಕಲ್ಲು, ನಾರಾಯಣಪುರ, ಹುರಿಯಪ್ಪನಪಾಳ್ಯಗಳ ಸರಹದ್ದನ್ನು ದಾಟಿ ಕೌಚುಗಲ್ ಬೆಟ್ಟದ ಪಶ್ಚಿಮ ಭಾಗಕ್ಕಿದ್ದ ಅದರಂಗಿ ಕಾಡಿಗೆ ಬಂದವು. ಅಷ್ಟರಲ್ಲಾಗಲೇ ರಾತ್ರಿ 10.30 ಕಳೆದಿತ್ತು. ಸಂಜೆ ಮೊದಲ ಗುಂಡು ಸಿಡಿದ ಸ್ಥಳ­ದಲ್ಲೇ ಕೊನೆ ಗುಂಡು ಗಳೂ ಕೇಳು­ತ್ತಿ­ದ್ದವು. ಆನೆಗಳು ಕೌಚುಗಲ್ ಮುನೇ­ಶ್ವರನ ಬೆಟ್ಟವನ್ನು ಪ್ರದಕ್ಷಿಣೆ ಹಾಕಿದ್ದವು. ಅರಣ್ಯ ಇಲಾಖೆ ಸಿಬ್ಬಂದಿಯೂ ಅವುಗಳ ಹಿಂದೆ ಗುಂಡು ಹಾರಿಸುತ್ತಾ ಓಡಿಬಂದಿ­ದ್ದರು. ಕಾಡಿನೊಳಗೆ ನುಗ್ಗಲು ಸಾಧ್ಯವಿಲ್ಲ­ದ್ದರಿಂದ ಎರಡೂ ಜೀಪುಗಳು ಆನಂತರ ಹಿಂದಿರುಗಿದವು.

‘ಆನೆ ಹೋದ ಜಾಗದಲ್ಲೆಲ್ಲಾ ಹೊಲ, ಬಣವೆ ಹಾಳು ಮಾಡಿರ್ತಾವೆ. ಈ ಅರಣ್ಯ ಇಲಾಖೆ ಸಿಬ್ಬಂದಿ ಎಲ್ಲಾ ಹಾಳ್ ಮಾಡಿ ಮನೀ ಕಡೀಕ್ ಹೊಂಟ್ರು’ ಎಂದು ಶಂಕರ ಶಾಪ ಹಾಕಿದ. ನಸುಕಿನಲ್ಲಿ ಎದ್ದಾಗ ಬೆಟ್ಟದ ಪೂರ್ವಭಾಗಕ್ಕಿದ್ದ ಕಣಿವೆಯಲ್ಲಿ ಏಳು ಆನೆ ಗಳು ಅಲೆ­ಯುತ್ತಿದ್ದುದು ಕಂಡಿತು. ಬೆಟ್ಟ ದಿಂದ 2 ಕಿ.ಮೀ ನಷ್ಟು ದೂರವಿದ್ದ ಕೆರೆಯತ್ತ ಅವು ದಾಪುಗಾಲಾಕುತ್ತಿದ್ದವು. ‘ ನಾನ್‌ ಹೇಳ್ಲಿಲ್ವಾ ಆನೆಗಳು ಮತ್ತೆ ಕಾಡಿಗೇ ಬಂದವೇ’ ಎನ್ನುತ್ತಾ ಶಂಕರ ಬ್ಯಾಗನ್ನು ಹೆಗಲಿಗೇರಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT