ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿಯೇ ಆದಾಯ ಪ್ರಮಾಣ ಪತ್ರ

Last Updated 24 ಮೇ 2016, 5:11 IST
ಅಕ್ಷರ ಗಾತ್ರ

ಉಡುಪಿ: ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಆನ್‌ಲೈನ್‌ನಲ್ಲಿಯೇ ನೀಡುವ ವ್ಯವಸ್ಥೆ ಶೀಘ್ರಲ್ಲೇ ಜಾರಿಗೆ ಬರಲಿದೆ ಎಂದು ಉಡುಪಿ ತಹಶೀಲ್ದಾರ್‌ ಗುರುಪ್ರಸಾದ್‌ ಹೇಳಿದರು.

ಸೋಮವಾರ ನಡೆದ ಉಡುಪಿ ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಮನೆಗೂ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕಿ ಅದನ್ನು ಸಂಗ್ರಹಿಸಲಾಗುವುದು. ಆ ನಂತರ ಆನ್‌ಲೈನ್‌ನಲ್ಲಿಯೇ (ಒಟಿಎಸ್‌) ಪ್ರಮಾಣ ಪತ್ರ ಪಡೆದುಕೊಳ್ಳಬಹುದು. ಶಿಕ್ಷಣದ ಉದ್ದೇಶಕ್ಕೆ ಪಡೆದ ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರವನ್ನು ಐದು ವರ್ಷಗಳ ಕಾಲ ಬಳಸಬಹುದು. ಉದ್ಯೋಗದ ಉದ್ದೇಶಕ್ಕೆ ಪಡೆದ ಪ್ರಮಾಣ ಪತ್ರದ ಮಾನ್ಯತಾ ಅವಧಿ ಒಂದು ವರ್ಷ ಮಾತ್ರ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಒಮ್ಮೆ ಪ್ರಮಾಣ ಪತ್ರ ಪಡೆದರೆ ಸಾಕು ಅದನ್ನೇ ಬಳಸಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಅಪಾಯಕಾರಿ ಮರಗಳನ್ನು ಕತ್ತರಿಸಿ: ಇತ್ತೀಚೆಗೆ ಗಾಳಿ ಸಹಿತ ಮಳೆ ಸುರಿದ ಪರಿಣಾಮ ಸುಮಾರು 65 ಮನೆಗಳಿಗೆ ಭಾಗಶಃ ಹಾನಿ ಹಾಗೂ 6 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಬಹುತೇಕ ಪ್ರಕರಣಗಳಲ್ಲಿ ಮರಗಳು ಮನೆಯ ಮೇಲೆ ಬಿದ್ದಿವೆ. ಆದ್ದರಿಂದ ಪಟ್ಟಾ ಸ್ಥಳದಲ್ಲಿ ಇರುವ ಅಪಾಯಕಾರಿ ಮರಗಳನ್ನು ಗ್ರಾಮ ಪಂಚಾಯಿತಿಯವರೇ ಅರಣ್ಯ ಇಲಾಖೆಯ ಅವರ ಮೂಲಕ ತೆರವು ಮಾಡಬೇಕು. ನನಗೆ ವರದಿ ನೀಡಿದರೂ ಮರವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. 50–60 ವರ್ಷ ಹಳೆಯದಾದ ಬೀಳುವ ಸ್ಥಿತಿಯಲ್ಲಿರುವ ಮರಗಳಿಂದ ಹಾನಿ ಸಂಭವಿಸುವ ಸಾಧ್ಯತೆ ಇರುತ್ತದೆ ಎಂದರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವವರು ಅಕ್ರಮ– ಸಕ್ರಮದಲ್ಲಿ ಅರ್ಜಿ ಸಲ್ಲಿಸಿ. ಈಗಾಗಲೇ ಸಲ್ಲಿಕೆಯಾಗಿರುವ ಕೆಲವು ಅರ್ಜಿಗಳಲ್ಲಿ ನಮೂದಾಗಿರುವ ಸ್ಥಳಗಳು ನಗರ ಪ್ರದೇಶ ವ್ಯಾಪ್ತಿಯಲ್ಲಿವೆ. ಅಂತವರಿಗೆ ಹಿಂಬರಹ ನೀಡಿ ಮರು ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ. ಆಗಸ್ಟ್‌ 15ರ ವರೆಗ ಅರ್ಜಿ ಸಲ್ಲಿಸಲು ಅವಕಾಶ ಇದೆ. ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು.

ಸ್ಮಶಾನ ಹಾಗೂ ಘನತ್ಯಾಜ್ಯ ನಿರ್ವಹಣೆ ಮಾಡಲು ಅಗತ್ಯ ಇರುವ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಯವರು ಈ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಘನತ್ಯಾಜ್ಯ ನಿರ್ವಹಣೆ ಘಟಕ ಬೇಡ ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಸ್ಮಶಾನ ಹಾಗೂ ತ್ಯಾಜ್ಯ ನಿರ್ವಹಣಾ ಘಟಕ ಅಗತ್ಯವಾಗಿ ಬೇಕಾಗಿರುವುದರಿಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗದು.

ನೆರೆ ಪರಿಸ್ಥಿತಿ ನಿರ್ವಹಣೆ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದಿರುವುದರಿಂದ ಈ ಬಾರಿ ಎಲ್ಲೆಲ್ಲಿ ನೆರೆ ಬರಬಹುದು ಎಂಬುದನ್ನು ನೋಡಬೇಕಿದೆ. ಈಗಾಗಲೇ 3 ದೋಣಿಗಳನ್ನು ಖರೀದಿಸಲಾಗಿದೆ. 15 ದೋಣಿ ಮಾಲೀಕರನ್ನು ಸಂಪರ್ಕಿಸಿ ದೋಣಿ ನೀಡುವಂತೆ ಮನವಿ ಮಾಡಲಾಗಿದೆ ಎಂದರು. ನರೇಗಾ ಯೋಜನೆಯ ಫಲಾನುಭವಿಗಳಿಗೆ ಕೂಲಿ ಹಣ ಇನ್ನೂ ಬಿಡುಗಡೆಯಾಗದಿರುವ ಬಗ್ಗೆ ಸದಸ್ಯೆ ಡಾ. ಸುನಿತಾ ಶೆಟ್ಟಿ ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಅಧಿಕಾರಿ ಕೂಲಿ ಹಣವನ್ನು ಬಾಕಿ ಇಟ್ಟುಕೊಳ್ಳುವುದಿಲ್ಲ. ತಾಂತ್ರಿಕ ಸಮಸ್ಯೆ ಆಗಿದ್ದರೆ ಅದನ್ನು ಬಗೆಹಿಸಲಾಗುವುದು ಎಂದರು.

ವಾರಾಹಿ ನದಿಯಿಂದ ಕಾಡೂರು ಸುತ್ತಮುತ್ತಲಿನ ತೋಡುಗಳಿಗೆ ನೀರು ಹರಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಭುಜಂಗ ಶೆಟ್ಟಿ ಮನವಿ ಮಾಡಿದರು. ಪ್ರಾಕೃತಿಕ ವಿಕೋಪ ತಡೆಯಲು ಕ್ರಮ ಕೈಗೊಳ್ಳಿ ಎಂದು ದಿನಕರ ಪೂಜಾರಿ ಮನವಿ ಮಾಡಿದರು. ಅಧ್ಯಕ್ಷೆ ನಳಿನಿ ಪ್ರದೀಪ್‌, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT