ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಕಾವ್ಯೋತ್ಸಾಹಕ್ಕೆ ಬೇಕು ನಿಕಷ

Last Updated 27 ಜನವರಿ 2016, 19:30 IST
ಅಕ್ಷರ ಗಾತ್ರ

2014ರ ಏಪ್ರಿಲ್‌ 9ರಂದು ಕವಿ ಚಾರ್ಲ್ಸ್ ಬೋದಿಲೇರ್‌ ಅವರ ಜನ್ಮದಿನಾಚರಣೆ. ಅಂದು ಕನ್ನಡ ಯುವ ಸಾಹಿತ್ಯ ಲೋಕದಲ್ಲಿ ಹೊಸತೊಂದು ಹೆಜ್ಜೆ ಮೂಡಿತು. ಬೋದಿಲೇರ್‌ ಅವರ ಕಾವ್ಯ ಪ್ರಭಾವಕ್ಕೆ ಮಾರುಹೋಗಿದ್ದ ಯುವಕವಿಗಳ ಪಡೆ ಅಂದು ‘ಬೋದಿಲೇರ್‌ ನೆನಪಲ್ಲಿ ಆನ್‌ಲೈನ್‌ ಕವಿಗೋಷ್ಠಿ’ ನಡೆಸಿತು!.

ಒಟ್ಟಿಗೆ ಸೇರಿ ಕಾರ್ಯಕ್ರಮ ಆಯೋಜನೆ ಮಾಡಲು ಸಾಧ್ಯವಾಗದೆ ತಾವು ಇದ್ದಲ್ಲಿಂದಲೇ ಕವಿತೆ ವಾಚಿಸಿ, ಅದರ ವಿಡಿಯೊ ತುಣುಕನ್ನು  ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದರು. ಇಡೀ ದಿನ ಗಂಟೆಗೆ ಒಬ್ಬರಂತೆ ಕವಿತೆಯನ್ನು ಅಪ್‌ಲೋಡ್‌ ಮಾಡಿ, ಆನ್‌ಲೈನ್‌ ಕವಿಗೋಷ್ಠಿ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು ಫೇಸ್‌ಬುಕ್‌ ಗೆಳೆಯರ ಬಳಗ.  ಎಲ್ಲರ ವಿಡಿಯೊಗಳನ್ನು  ಸಂಗ್ರಹಿಸಿ, ಆನ್‌ಲೈನ್‌ ಕವಿಗೋಷ್ಠಿ ನಿಭಾಯಿಸುವ ಜವಾಬ್ದಾರಿ ಹೊತ್ತುಕೊಂಡವರು ಮಂಡ್ಯ ಜಿಲ್ಲೆಯ ರಾಜೇಂದ್ರ ಪ್ರಸಾದ್‌.

ಮೂವತ್ತು ಯುವಕವಿಗಳು ತಮ್ಮ ಕವಿತೆಗಳನ್ನು ವಾಚಿಸಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿ, ಫೇಸ್‌ಬುಕ್‌ನಲ್ಲಿ ಹಂಚಿಕೊಂಡರು. ಯುವಕವಿಗಳ ತಾಂತ್ರಿಕ ಸೃಜನಶೀಲ ನಡೆ ಇದು. ಈ ಕಾರ್ಯಕ್ರಮಕ್ಕೆ ಸಿಕ್ಕ ಪ್ರೋತ್ಸಾಹ ಮತ್ತೆ  ಟ್ಯಾಗೋರ್ ಜನ್ಮದಿನಾಚರಣೆಯಂದು, ‘ಟ್ಯಾಗೋರ್  ಕಾವ್ಯ ಜಯಂತಿ’  ಆನ್‌ಲೈನ್‌ ಕವಿಗೋಷ್ಠಿಯನ್ನು ಆಚರಿಸಲು ಪ್ರೇರಣೆ ನೀಡಿತು.

ಇದಾದ ನಂತರ ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ ಫೇಸ್‌ಬುಕ್‌ ಬಳಕೆದಾರ ಸಾಹಿತ್ಯಾಸಕ್ತರು ಕವಿತೆ ವಾಚಿಸಿ, ಅಪ್‌ಲೋಡ್‌ ಮಾಡಿ ಹೊಸ ಸಾಧ್ಯತೆಯ ಖುಷಿ ಉಂಡರು. ಕಂಪ್ಯೂಟರ್‌ ಬಳಸಲು ಬರದೇ ಇದ್ದರೂ ಹೊಸ ಪ್ರಯತ್ನಕ್ಕೆ ಜೊತೆಯಾದವರು ವಿಮರ್ಶಕ ಟಿ.ಪಿ. ಅಶೋಕ್‌.
ಸ್ನೇಹಿತರ ಸಹಾಯದಿಂದ ತಾವು ಕೂಡ ಕವಿತೆ ವಾಚಿಸಿ ಫೇಸ್‌ಬುಕ್‌ನಲ್ಲಿ ವಿಡಿಯೊ ತುಣುಕನ್ನು  ಹಂಚಿಕೊಂಡರು.
‘poets are the unacknowledged legislators of the world’– ಇದು ಕವಿ ಪಿ.ಬಿ. ಶೆಲ್ಲಿಯ ಮಾತು.

ಸಾಹಿತಿಗಳು ತಾವು ಬದುಕಿದ ದೇಶ–ಕಾಲದ ಭಾವನಾತ್ಮಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ದಾಖಲಾತಿಯನ್ನು ತಮ್ಮ ಕಥೆ, ಕವನ ಕೃಷಿಯ ಮೂಲಕ ಮಾಡುತ್ತಾ ಬಂದಿದ್ದಾರೆ. ಬದಲಾವಣೆಗಳ ಪರಿಣಾಮ ಸಮಾಜದ ಮೇಲೆ ಆಗುತ್ತಲೇ ಬಂದಿದೆ. ಹಾಗೆಯೇ ತಂತ್ರಜ್ಞಾನ ಆವಿಷ್ಕಾರದಿಂದ  ಭಾಷಾ ಅಭಿವೃದ್ಧಿಯಾದಂತೆ, ಪಾರಂಪರಿಕ  ಸಾಂಸ್ಕೃತಿಕ ಪಲ್ಲಟಗಳಾದದ್ದೂ ಇದೆ.  ಇದರ ನಡುವೆಯೂ ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆದ ಬಗೆ ಗಮನಾರ್ಹ.

ಕನ್ನಡ ಭಾಷೆ ಬಳಕೆ, ತಲುಪುವಿಕೆಗೆ ತಾಂತ್ರಿಕ ಬೆಳವಣಿಗೆ ಕೂಡ ಪೂರಕ ಬೆಂಬಲ ನೀಡುತ್ತಿದೆ. ಇಂಥ ಕೆಲಸಗಳಲ್ಲಿ ಹೆಚ್ಚು ಸಕ್ರಿಯರಾಗಿ ತಂತ್ರಜ್ಞಾನವನ್ನು ಸಾಹಿತ್ಯ ಓದಿಗೆ ಬಳಕೆ ಮಾಡಿಕೊಳ್ಳುತ್ತಿರುವವರಲ್ಲಿ ಯುವಕರು ಮುಂದಿದ್ದಾರೆ. ಪುಸ್ತಕವನ್ನು ಮುಟ್ಟಿ ಮಾತನಾಡಿಸಿ ಓದುವುದು ಇಂದಿನ ಯುವಕರಲ್ಲಿ ಕಡಿಮೆಯಾಗಿದೆ ಎಂಬ ಆರೋಪವಿದ್ದರೂ ಇದಕ್ಕೆ ಸವಾಲಂತೆ ‘ಕಿಂಡಲ್‌’ ಮುಖಾಂತರವೇ ಕುಮಾರವ್ಯಾಸನನ್ನು ಓದಿಕೊಂಡವರಿದ್ದಾರೆ.  ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಹಿತ್ಯ ಓದುವ, ಗ್ರಹಿಸುವ, ಹರಡುವ ಕ್ರಿಯೆ ನಡೆಯುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಯುವಕವಿಗಳಾದ ಸಿದ್ದಲಿಂಗೇಶ್ವರ್ ಟಿ. ದುರ್ಗದ್,  ಸತೀಶ್ ನಾಯಕ್, ರುಕ್ಮಿಣಿ ನಾಗಣ್ಣನವರ್‌, ಸಂಜ್ಯೋತಿ.

ವಿ.ಕೆ. ಪ್ರವರ ಕೊಟ್ಟೂರು, ಗೋರವಿ, ನೌಫಲ್ ಬ್ಯಾರಿ, ಗಿರೀಶ್ ಹಂದಲಗೆರೆ, ಎಲ್.ಎಂ. ಸಂತೋಷ್, ಶರತ್ ಚಕ್ರವರ್ತಿ, ಚಿನ್ಮಯ್ ಭಟ್, ರಾಜೇಂದ್ರ ಪ್ರಸಾದ್, ದೀಪಾ ಗಿರೀಶ್, ವಾಗೀಶ್ ಜಾಜೂರ್, ಮಂಜುಳಾ ಬಬಲಾದಿ,  ಅನಿಲ್ ಚಾವಡ, ಬಿ.ವಿ. ಭಾರತಿ, ಕಾವ್ಯಾ ಸಂತೋಷ ನಾಗರಕಟ್ಟೆ, ಸುಶ್ರುತ ದೊಡ್ಡೇರಿ, ಅಕ್ಷಯ ಕಾಂತಬೈಲು, ಸಂಯುಕ್ತಾ ಪುಲಿಗಲ್, ಭಾರತಿ ಬಿ.ವಿ., ಸಂಧ್ಯಾರಾಣಿ, ರಾಜಶೇಖರ ಬಂಡೆ,  ಶಮ್ಮೀ ಸಂಜೀವ್,  ಮೋಹನ್ ವಿ. ಕೊಳ್ಳೇಗಾಲ, ಚೇತನ ಸೊಲಗಿ, ಅಕರ್ಷ ಕಮಲ, ಕಾವ್ಯಾ ಪಿ. ಕಡಮೆ ಇನ್ನೂ ಹಲವರು ಇಂತಹ ಕ್ರಿಯಾತ್ಮಕ ಆನ್‌ಲೈನ್ ಕವಿಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದಾರೆ.

ಇವರೊಂದಿಗೆ ಹಿರಿಯ ಸಾಹಿತಿಗಳಾದ ಪ್ರತಿಭಾ ನಂದಕುಮಾರ್, ವಸುಧೇಂದ್ರ, ಟಿ.ಪಿ. ಅಶೋಕ್‌, ಅಶೋಕ್‌ ಶೆಟ್ಟರ್‌, ಎಂ.ಆರ್‌ ಕಮಲಾ, ಟಿ.ಎನ್‌. ಸೀತಾರಾಮ್‌, ಸುನಂದಾ ಕಡಮೆ, ಕುಂ. ವೀರಭದ್ರಪ್ಪ ಅವರು ಕವಿತೆ ವಾಚಿಸಿ ವಿಡಿಯೊ ತುಣುಕುಗಳನ್ನು ಅಪ್‌ಲೋಡ್‌ ಮಾಡಿ ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಸಾಹಿತ್ಯ ಕಲಿಕೆಗೆ ಆನ್‌ಲೈನ್‌
ಯುವಕರಿಗೆ ಆದರ್ಶ ಬದುಕನ್ನು ಕಟ್ಟಿಕೊಡುವ ಸಾಮರ್ಥ್ಯ ಸಾಹಿತ್ಯಕ್ಕಿದೆ, ಹೊಸ ಓದು ಅರಗಿಸಿಕೊಳ್ಳುವವರು ಮತ್ತು ಗೀಳು ಬೆಳೆಸಿಕೊಳ್ಳುವವರು ಸಾಹಿತ್ಯ ಬದುಕಿನ ಚಿಂತನೆಗಳನ್ನು ಹಂಚಿಕೊಳ್ಳುವುದಕ್ಕೆ, ಚರ್ಚೆಗೆ ಇಂದು ಸಾಮಾಜಿಕ ಜಾಲತಾಣವನ್ನು ಪ್ರಮುಖವಾಗಿ ಬಳಸಿಕೊಳ್ಳುತ್ತಿದ್ದಾರೆ. ಎಲ್ಲೂ ಅವಕಾಶ ಸಿಗದ ಯುವಕವಿಗಳು ತಮ್ಮದೇ ಸ್ವತಂತ್ರ ವೇದಿಕೆಯನ್ನು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಯೂಟ್ಯೂಬ್‌, ಸೌಂಡ್‌ಕ್ಲೌಡ್‌ನಂತಹ ತಾಣಗಳಲ್ಲಿ ಕಂಡುಕೊಳ್ಳುತ್ತಿದ್ದಾರೆ.

ಯಾವುದೇ ಮೂಲೆಯಲ್ಲಿ ಇದ್ದರೂ ಪದ್ಯ ವಾಚಿಸಿ ವಿಡಿಯೊ ಹಂಚಿಕೊಳ್ಳಬಹುದು. ಇದು ಹೆಚ್ಚು ಜನರನ್ನೂ ತಲುಪುತ್ತದೆ. ತಕ್ಷಣ ಪ್ರತಿಕ್ರಿಯೆ ಸಿಗುವುದರಿಂದ ತಪ್ಪುಗಳನ್ನು ತಿದ್ದಿಕೊಳ್ಳಬಹುದು. ಹಾಗೆಯೇ ಹೆಚ್ಚು ಜನರು ಓದಿ ಚರ್ಚಿಸುವುದರಿಂದ ಪದ್ಯದ ವಿಸ್ತಾರ, ಇತರೆ ಸಾಧ್ಯತೆ ಹೊಳಹು ಹೆಚ್ಚುತ್ತದೆ.

‘ಹೊಸಬರ ಪದ್ಯಗಳು ಪತ್ರಿಕೆಯಲ್ಲಿ ಪ್ರಕಟವಾಗುವುದು ಕಡಿಮೆ.  ಆದ್ದರಿಂದ  ಪರ್ಯಾಯ ವೇದಿಕೆಯನ್ನು ಬಳಸುತ್ತಿದ್ದೇವೆ. ಆನ್‌ಲೈನ್ ಕವಿಗೋಷ್ಠಿ ಪ್ರಯತ್ನವನ್ನು ಇಷ್ಟಪಟ್ಟು ನಮ್ಮ ಜೊತೆ ಹಲವು ಹಿರಿಯರೂ ಪದ್ಯ ಓದಿದ್ದಾರೆ. ಇದು ಖುಷಿ ವಿಚಾರ’ ಎನ್ನುತ್ತಾರೆ ಕವಿ ರಾಜೇಂದ್ರ ಪ್ರಸಾದ್‌.

ವಾಟ್ಸ್‌ಆ್ಯಪ್‌, ಸೌಂಡ್‌ಕ್ಲೌಡ್‌ನಲ್ಲೂ ಕನ್ನಡ ಪದ್ಯ 
ಫೇಸ್‌ಬುಕ್‌, ಯೂಟ್ಯೂಬ್‌ ಅಲ್ಲದೆ, ಸೌಂಡ್‌ಕ್ಲೌಡ್‌ಗಳಲ್ಲೂ ತಾವು ರಚಿಸಿದ ಹಾಗೂ ಕುವೆಂಪು, ಬೇಂದ್ರೆ ಕವಿಗಳಿಂದ ಹಿಡಿದು, ಕುಮಾರವ್ಯಾಸರ ಗಮಕಗಳವರೆಗೆ ಎಲ್ಲವನ್ನು ಹಾಡಿ ಅಪ್‌ಲೋಡ್‌ ಮಾಡಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲಿ ‘ಕಾಜಾಣ’, ‘ಅನೇಕ’, ‘ಓದಿನ ಮನೆ’, ‘ಪದ್ಯದಂಗಡಿ’, ‘ದಿನಕ್ಕೊಂದು ಪದ್ಯ’, ‘ಮಹಿಳಾ ಕಾವ್ಯ’, ‘ಏನನ್ನಾದರೂ ಕುಡಿಯುತ್ತಿರು’, ‘ಫೀಲ್‌ ಹೈ ವಿತ್‌ ಪೊಯಮ್ಸ್‌’, ‘ಝುಮ್‌ಕಾವ್ಯ’, ‘ರಾತ್ರಿ ಕವಿಗಳು’, ‘ಗೋಷ್ಠಿ ಆನ್‌’, ಇಂತಹ ಹಲವು ಹೆಸರಿನ ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ನಿತ್ಯ ಹೊಸ ಪದ್ಯವನ್ನು ಬರೆದು, ವಾಚಿಸಿ ಈ ಗ್ರೂಪ್‌ಗೆ ಹಾಕುವುದು  ನಡೆಯುತ್ತಿದೆ.

ತಂತ್ರಜ್ಞಾನದ ಹಲವು ಸಾಧ್ಯತೆಗಳಿಂದಲೇ ಯುವಕರು ಸಾಹಿತ್ಯವನ್ನು  ಹೆಚ್ಚು ಅರಿಯಲು ಸಾಧ್ಯವಾಯಿತು ಎಂಬುದು ಈ ಗುಂಪುಗಳ ಅಭಿಪ್ರಾಯ.
ಹೊಸ ಬದಲಾವಣೆ ಒಪ್ಪಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಭಾಗವಹಿಸುವ ಕಿರಿಯರ ಬಗ್ಗೆ  ಕುತೂಹಲಿಗಳಾದ ಹಿರಿಯ ಕವಿಗಳು,  ಇವರ ಚಟುವಟಿಕೆಯನ್ನು ಗಮನಿಸುತ್ತಾ ಬರುತ್ತಿದ್ದಾರೆ.  ಇದು ಬರೀ ಕಿರಿಯರಿಗೆ ಸೀಮಿತವಾಗದೆ, ಹಲವು ಹಿರಿಯರು ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಇದ್ದು, ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಆದರೂ ಪುಸ್ತಕ ಸಂಸ್ಕೃತಿಯಲ್ಲಿ ಬೆಳೆದ ಹಲವರಿಗೆ, ಡಿಜಿಟಲ್‌ ಓದನ್ನು ಒಪ್ಪಿಕೊಳ್ಳುವುದಕ್ಕೆ ಕಸಿವಿಸಿಯಾಗುತ್ತಿದೆ. ಫೇಕ್‌ಬುಕ್‌ನಲ್ಲಿ ಬರೆದು ಐನೂರು ಲೈಕ್‌ ಪಡೆದವರು ಶ್ರೇಷ್ಠ ಕವಿಗಳು ಆಗಲಾರರು ಎನ್ನುವುದು ಕೂಡ ಒಪ್ಪುವಂಥ ಮಾತೇ.

ಸಾಮಾಜಿಕ ಘಟನೆಗಳಿಗೆ  ಜಾಲತಾಣಗಳಲ್ಲಿ ತಕ್ಷಣ  ಪ್ರತಿಕ್ರಿಯಿಸುತ್ತಿರುವ ಯುವಕರು, ಪ್ರೀತಿ, ನೋವು, ಹೋರಾಟ, ಖಂಡನೆ ವ್ಯಕ್ತಪಡಿಸಲು ಪದ್ಯ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ.

ಬರೀ ಕಿರಿಯರಿಗಲ್ಲ
ಹೊಸ ಪ್ರಯತ್ನವಾದ ಆನ್‌ಲೈನ್‌ ಕವಿಗೋಷ್ಠಿಯಲ್ಲಿ ಹಿರಿಯರಾದ ಎಂ.ಆರ್‌. ಕಮಲಾ ಕೂಡ ಭಾಗವಹಿಸಿ ಖುಷಿಪಟ್ಟಿದ್ದಾರೆ.
‘ಸಾಮಾಜಿಕ ಜಾಲತಾಣಗಳಿಂದ ಹೆಚ್ಚು ಕವಿಗಳು ಹೊರಹೊಮ್ಮುತ್ತಿದ್ದಾರೆ, ಅವರ ಆಲೋಚನೆಗಳನ್ನು ಹಿರಿಯಾದ ನಾವು ಈ ತಾಣಗಳ ಮೂಲಕ ತೌಲನಿಕ ಅಧ್ಯಯನ ಮಾಡಬಹುದು. ಪದ್ಯ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ತಕ್ಷಣ ಅದು ಹೆಚ್ಚು ಜನರನ್ನು ತಲುಪುತ್ತದೆ. ಸಾಕಷ್ಟು ಪ್ರತಿಕ್ರಿಯೆ, ಅಭಿಪ್ರಾಯಗಳು ಬರುವುದರಿಂದ ಉತ್ತಮ ಕವಿತೆ ಬರೆಯಲು ಅನುಕೂಲ,  ಓದಿದ ಕವಿತೆಯನ್ನು ನಾವೇ ಮತ್ತೆ ಕೇಳಿದಾಗ, ತಿದ್ದಿಕೊಳ್ಳುವ ಅವಕಾಶ ಇರುತ್ತದೆ, ಅರ್ಥವಿಸ್ತಾರ ತಿಳಿಯುತ್ತದೆ.  ಆದರೆ ಇವೆಲ್ಲ ಸಾಧ್ಯತೆಗಳ ನಡುವೆ, ಪುಸ್ತಕದ ಒಡನಾಟ ಯುವಕರಲ್ಲಿ ಕಡಿಮೆಯಾಗುತ್ತಿದೆ’ ಎನ್ನುವುದು ಎಂ.ಆರ್‌. ಕಮಲಾ ಅವರ ಅಭಿಪ್ರಾಯ.

ಹಿರಿಯರ ಟೀಕೆ ಸಲ್ಲದು: ಹೊಸ ಆಲೋಚನೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕಥೆಗಾರ ವಸುಧೇಂದ್ರ ಅವರು ಹೀಗೆನ್ನುತ್ತಾರೆ: ‘ಕನ್ನಡ ಚಟುವಟಿಕೆ ಅಂದರೆ ಖುಷಿ;  ಅದು ಯಾವ ಮಾಧ್ಯಮದಲ್ಲಿ ಆದರೂ ಸೃಜನಾತ್ಮಕವಾಗಿರಲಿ. ಸಾಮಾಜಿಕ ಜಾಲತಾಣ ಒಂದು ಅರಳಿಕಟ್ಟೆ. ಅಲ್ಲಿ ಗಂಭೀರವಾದಂಥದ್ದು ನಡೆಯುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇರುವ ಓದುಗ ವರ್ಗವೇ ಬೇರೆ.  ಯುವಕವಿಗಳು ಫೇಸ್‌ಬುಕ್‌ನಲ್ಲಿ ಪದ್ಯ ಹಾಕುವುದು, ಅದಕ್ಕೆ ತಕ್ಷಣ ಪ್ರತಿಕ್ರಿಯೆ, ಲೈಕ್‌ ಸಿಗುವುದೇ ಅಂತ್ಯವಲ್ಲ. ಜೊತೆಗೆ ಕಿರಿಯರು ಕೇವಲ ಖಾಲಿ ಚರ್ಚೆಯಲ್ಲಿ ಸಮಯ ಕಳೆಯುತ್ತಿದ್ದಾರೆ.

ಹಿರಿಯರ ಸಾಹಿತ್ಯವನ್ನು ಕೆಣಕುವ ಕೆಟ್ಟ ಸಂಸ್ಕೃತಿ ಕೂಡ ಫೇಸ್‌ಬುಕ್‌ ಮೂಲಕ ಬೆಳೆಯುತ್ತಿದೆ. ಇದು ಒಂದು ಶಕ್ತಿಯುತ ಮಾಧ್ಯಮ. ಹಾಗಂತ ಹಿರಿಯರ ಸಾಹಿತ್ಯವನ್ನು ಲೇವಡಿ ಮಾಡಿ ಬರಿಯುವುದು ಸಲ್ಲದು. ಕವಿಗಳಾಗುವ ಮೊದಲು ವಿನಯವಂತಿಕೆಯಿಂದ ಬದುಕುವುದನ್ನು ಕಲಿಯಬೇಕು’. ಕೆಲವು ಆರೋಪಗಳ ನಡುವೆಯೂ ಸಾಮಾಜಿಕ ಜಾಲತಾಣದಿಂದ ಕನ್ನಡ ಸಾಹಿತ್ಯ ಕಲಿಯುವ, ಮತ್ತಷ್ಟು ಬರೆಯುವ ಆಸಕ್ತಿ ಹೆಚ್ಚಿಸಿಕೊಳ್ಳಬೇಕು ಎನ್ನುವುದು ಯುವ ಕವಿಗಳ ಆಶಯ.

ಭೌಗೋಳಿಕವಾಗಿ ಚದುರಿದ ಕನ್ನಡಿಗರಿಗೆ ಆನ್‌ಲೈನ್‌ ಸಾಹಿತ್ಯ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಸಾಹಿತ್ಯ ಚಟುವಟಿಕೆಯಿಂದಾಗಿ ಹೊರದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೆ ಹೊಸ ಕವಿಗಳು ಪರಿಚಯವಾಗುತ್ತಿದ್ದಾರೆ. ರಾಜ್ಯದಲ್ಲಿ ಇರುವ ಕವಿಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡು, ಹೊರದೇಶದಲ್ಲಿ ಇದ್ದುಕೊಂಡು ನಿತ್ಯ ಕನ್ನಡದ ಒಡನಾಟ ಇಟ್ಟುಕೊಂಡಿದ್ದಾರೆ ಅಕರ್ಷ ಕಮಲ, ಕಾವ್ಯಾ  ಸಂತೋಷ್ ನಾಗರಕಟ್ಟೆ.

ಕಿರಿಯರೊಂದಿಗೆ ಹೆಚ್ಚು ಒಡನಾಟವಿಟ್ಟುಕೊಂಡಿರುವ ಪ್ರತಿಭಾ ನಂದಕುಮಾರ್‌ ಅವರು, ‘ಪೂರ್ವಗ್ರಹದಿಂದ ಫೇಸ್‌ಬುಕ್‌ ಕವಿಗಳನ್ನು ನೋಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಆನ್‌ಲೈನ್‌ ಕವಿಗೋಷ್ಠಿ ಪರ್ಯಾಯವಲ್ಲ, ಪೂರಕ’ ಎನ್ನುತ್ತಾರೆ.

ಆನ್‌ಲೈನ್‌ ಮುಖಾಂತರ ಕನ್ನಡ ಸಾಹಿತ್ಯ ಚರ್ಚೆಯಾಗುತ್ತಿರುತ್ತದೆ. ಕವಿತೆ, ಕಥೆ ವಾಚಿಸಿ ಅಪ್‌ಲೋಡ್‌ ಮಾಡುತ್ತೇವೆ. ಆದರೆ ಅದು ಎಷ್ಟು ದಿನ ಉಳಿದಿರುತ್ತದೆ ಎನ್ನುವ ಪ್ರಶ್ನೆಯೂ ಯುವಕವಿಗಳ ವಲಯದಲ್ಲಿ ಸುಳಿದಾಡುತ್ತಿದೆ.

‘ಯುವ ಕವಿಗಳಿಗೆ ವೇದಿಕೆ ಕೊರತೆ ಇದೆ. ಆದರೆ ಸಾಮಾಜಿಕ ಜಾಲತಾಣವೇ ಪರ್ಯಾಯವಲ್ಲ. ಫೇಸ್‌ಬುಕ್‌ನಲ್ಲಿ ಪದ್ಯಗಳು ಹಾಗೆ ಬಂದು ಹೀಗೆ ಹೊರಟುಹೋಗುತ್ತವೆ. ಶಾಶ್ವತವಾದದ್ದು ಏನೂ ನಡೆಯುತ್ತಿಲ್ಲ’ ಎನ್ನುತ್ತಾರೆ ಯುವಕವಿ ಪಂಪಾರೆಡ್ಡಿ ಆರಲಹಳ್ಳಿ.

ಆನ್‌ಲೈನ್‌ನಲ್ಲಿ ಪುಸ್ತಕ ಓದಿದರೂ, ಪುಸ್ತಕ ಪರಿಸರವನ್ನು ಕಟ್ಟಿಕೊಳ್ಳಲು ಡಿಜಿಟಲ್‌ ಮಾಧ್ಯಮದಿಂದ ಸಾಧ್ಯವಾಗಿಲ್ಲ. ಹಾಗಂತ ಅವಕಾಶಕ್ಕೆ ಕಾಯುತ್ತ ಕೂರುವ ಅನಿವಾರ್ಯತೆ ಇಂದಿನ ಯುವಕರಿಗೆ ಇಲ್ಲ. ವೇಗ ಮಾಧ್ಯಮದಿಂದ, ಭಾಷೆ ಮೇಲೆ ಪ್ರಭುತ್ವ ಕಳೆದುಕೊಳ್ಳುವ ಆತಂಕವೂ ಇದೆ.

ಸಾಹಿತ್ಯದ ಒಲವು ಬೆಳೆಸಿಕೊಂಡಿರುವ ಯುವಕರು, ಮುಂದೆಯೂ ಉಳಿದುಕೊಳ್ಳಬೇಕಾದರೆ ಸಾಹಿತ್ಯ ರಚನೆ ಮಾಡುವ ಮೊದಲು ಭಾಷೆಯ ಮೇಲೆ ಪ್ರಭುತ್ವ ಸಾಧಿಸಬೇಕಾಗಿದೆ, ಶಬ್ದ ಸಂಗ್ರಹದಿಂದ ಸಾಹಿತ್ಯಕ್ಕೆ ಇನ್ನಷ್ಟು ಶಕ್ತಿ ಬರುತ್ತದೆ. ಹೊಸ ಸೃಜನಶೀಲ ಕೆಲಸಗಳೊಂದಿಗೆ ಹಿರಿಯರ ಬರಹ ಓದಿನಿಂದ ಸಾಹಿತ್ಯದಲ್ಲಿ ಇನ್ನಷ್ಟು ಬರೆಯಬಹುದಾದ ಸಾಧ್ಯತೆಗಳು  ಹೊಳೆಯುತ್ತದೆ. ‘ಮನದ ಬಾಗಿಲು ತೆರೆದುಕೊಂಡಷ್ಟು ಬೆಳಕು ಒಳತುಂಬುತ್ತದೆ. ಶಿಷ್ಯಬುದ್ಧಿಯಿಂದ ಕ್ರಾಂತಿಯನ್ನು ಎದುರಿಸಿ’ ಎನ್ನುವ ವಿಶ್ವಕವಿ ಕುವೆಂಪು ಅವರ ಮಾತನ್ನು ನೆನೆಯಬಹುದು.

ಒರೆಗೆಹಚ್ಚುವ ಮಾರ್ಗ
ಈ ತಲೆಮಾರಿನ ಕವಿಗಳು ತಮ್ಮ ಕವಿತೆಗಳನ್ನು ಹಾಗೂ ಇತರ ಕವಿಗಳ ಕವಿತೆಗಳನ್ನು ಜಾಲತಾಣಗಳ ಮೂಲಕ ಮಂಡಿಸುವ ಈ ಬಗೆ ಕುತೂಹಲಕರ. ಆ ಮೂಲಕ ಗೆಳೆಯ–ಗೆಳತಿಯರ ಜೊತೆ ಕ್ಷಿಪ್ರ ಸಂವಾದದಲ್ಲಿ ತೊಡಗುವ, ತಕ್ಷಣ ಪ್ರತಿಕ್ರಿಯೆ ಪಡೆಯುವ ಅವಕಾಶ ಇರುತ್ತದೆ. ಇಂಥ ಕಾವ್ಯಸಂವಾದ ಇನ್ನುಳಿದ ಅನೇಕ ಬಗೆಯ ಬುರುಡೆ ಸಂವಾದಗಳಿಗಿಂತ ಅರ್ಥಪೂರ್ಣವಾಗಬಲ್ಲದು. ಆದರೆ ತಮ್ಮ ಕವಿತೆಗಳನ್ನು ಪ್ರಕಟಿಸುವವರಿಗೆ ಅವಕ್ಕೆ ಕಾವ್ಯ ಗುಣ ಇದೆಯೋ ಇಲ್ಲವೋ ಎಂಬ ವಿಮರ್ಶಾ ಗ್ರಹಿಕೆಯ ಕೊರತೆ ಇರುವಂತೆ ಕಾಣುತ್ತದೆ.

 ಅದನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಉಲ್ಲೇಖಿಸುವ ಉತ್ತಮ ಕವಿಗಳ ಕಾವ್ಯವನ್ನು ಒರೆಗಲ್ಲಿನಂತೆ ಬಳಸಿ, ತಮ್ಮ ಕವಿತೆಗಳ ಮಟ್ಟವನ್ನು ಪರೀಕ್ಷಿಸಿಕೊಳ್ಳಬಹುದು. ಆದರೂ ಕನ್ನಡ ಕಾವ್ಯದ ಮಹತ್ವದ ಘಟ್ಟಗಳು, ವಚನ ಸಾಹಿತ್ಯ ಹಾಗೂ ಕಾವ್ಯ ವಿಮರ್ಶೆಯ ಕವಿತೆಗಳನ್ನು ಅರಿಯುವ ರೀತಿ ಇವೆಲ್ಲದರ ಬಗ್ಗೆ ಆಳವಾದ ಅರಿವು ಈ ಎಲ್ಲ ಕವಿಗಳಿಗೆ ಅಗತ್ಯ. ಸಂಪಾದಕರ ಹಂಗಿಲ್ಲದ ಈ ವೇದಿಕೆಗಳಿಗೆ ವಸ್ತುನಿಷ್ಠ ವಿಮರ್ಶೆಯೇ ಉತ್ತಮ ಸಂಪಾದಕನಂತೆ ಕೆಲಸ ಮಾಡುತ್ತಿರಬೇಕಾಗುತ್ತದೆ.
–ನಟರಾಜ್ ಹುಳಿಯಾರ್, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT