ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ದಿನಸಿ ಭರಾಟೆ

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಸಿನಿಮಾ ಟಿಕೆಟ್‌ ಕಾಯ್ದಿರಿಸುವುದು, ಟ್ಯಾಕ್ಸಿ ಬುಕ್‌ ಮಾಡುವುದು ಸೇರಿದಂತೆ ಹಲವಾರು ಸೇವೆಗಳನ್ನು  ಮೊಬೈಲ್‌ ಅಪ್ಲಿಕೇಷನ್‌ ಕ್ಲಿಕ್‌ ಮಾಡುವ ಮೂಲಕ  ಮನೆಯಲ್ಲೇ ಕುಳಿತು  ಪಡೆಯಲು ಈಗ ಸಾಧ್ಯವಾಗಿದೆ. ದಿನಸಿ ಸಾಮಗ್ರಿಗಳು ಕೂಡಾ ಈ ರೀತಿ ಮನೆಬಾಗಿಲಿಗೆ ಬಂದು ಬೀಳುವಂತೆ ಏಕೆ ಮಾಡಬಾರದು ಎನ್ನುವ ಆಲೋಚನೆಯೂ ಈಗ ಕಾರ್ಯರೂಪಕ್ಕೆ  ಬಂದಾಗಿದೆ.

ನಿಮ್ಮ ಹೆತ್ತವರು ಅಥವಾ ಮನೆಯಲ್ಲಿರುವ ಹಿರಿಯರು ಇನ್ನು ಮುಂದೆ ದಿನಸಿಗಾಗಿ ಪ್ರಯಾಸದಿಂದ ಕಿರಾಣಿ ಅಂಗಡಿಗೆ ಹೋಗಬೇಕಿಲ್ಲ. ಅದೇ ರೀತಿ ನೀವು ವಾರಾಂತ್ಯದ ಸಮಯವನ್ನು ದಿನಸಿ ಖರೀದಿಸಲೂ ವ್ಯಯಿಸಬೇಕಿಲ್ಲ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹಾಗೂ 4ಜಿ ವೇಗದ ಇಂಟರ್‌ನೆಟ್‌ ಸಂಪರ್ಕ ಈಗ ಸರ್ವವ್ಯಾಪಿಯಾಗುತ್ತಿದೆ. ಇದರಿಂದ ಆನ್‌ಲೈನ್‌ನಲ್ಲಿ ದಿನಸಿ ವ್ಯಾಪಾರಕ್ಕೆ ಶುಕ್ರದೆಸೆ ಶುರುವಾಗಿದೆ. ಇ–ದಿನಸಿ ಕಂಪೆನಿಗಳು ನಿಧಾನವಾಗಿ ಮಾರುಕಟ್ಟೆಯಲ್ಲಿ ತಳವೂರುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.

2017ರ ವೇಳೆಗೆ ಭಾರತದಲ್ಲಿ ಚಿಲ್ಲರೆ  ಮಾರುಕಟ್ಟೆಯ ವಹಿವಾಟಿನ ಗಾತ್ರ ₹ 43 ಲಕ್ಷ ಕೋಟಿಯಷ್ಟು ಆಗಲಿದೆ. ಆನ್‌ಲೈನ್‌ ದಿನಸಿ ವ್ಯಾಪಾರ ಪ್ರತಿವರ್ಷ ಶೇ 25–30 ರಷ್ಟು ಪ್ರಗತಿ ಕಾಣಲಿದೆ ಎಂದು ವರದಿಯೊಂದು ತಿಳಿಸಿದೆ.  ಹಲವು ಇ–ಕಾಮರ್ಸ್‌ ಕಂಪೆನಿಗಳು ಆನ್‌ಲೈನ್‌ ದಿನಸಿ ಮಾರುಕಟ್ಟೆಯಲ್ಲಿ  ಅಗ್ನಿಪರೀಕ್ಷೆಗೆ ಇಳಿದಿವೆ. ಆದರೆ ಕೆಲವರಿಗೆ ಮಾತ್ರ ಇಲ್ಲಿ ಯಶಸ್ಸು ದೊರೆತಿದೆ. ಇದರಲ್ಲಿ ಬಿಗ್‌ ಬ್ಯಾಸ್ಕೆಟ್‌ (Bigbasket) ಮತ್ತು ಝಾಪ್‌ನೌ (ZopNow) ಪ್ರಮುಖವಾದುವು. ಗ್ರೋಫರ್ಸ್‌ (Grofers)   ಪೆಪ್ಪರ್‌ಟ್ಯಾಪ್‌ (PepperTap) ಒಳಗೊಂಡಂತೆ ಇತರ ಕೆಲವು ಕಂಪೆನಿಗಳು ಆನ್‌ಲೈನ್‌ ದಿನಸಿ ಮಾರಾಟ ಸೇವೆಯನ್ನು ದೇಶದಾದ್ಯಂತ ವಿಸ್ತರಿಸಲು ಉತ್ಸುಕವಾಗಿವೆ.

ಹೊಸ ಎತ್ತರಕ್ಕೆ ಬಿಗ್‌ಬ್ಯಾಸ್ಕೆಟ್‌
ಆನ್‌ಲೈನ್‌ ದಿನಸಿ ಶಾಪಿಂಗ್‌ ತಾಣ ಬಿಗ್‌ಬ್ಯಾಸ್ಕೆಟ್‌ನ ಸ್ಥಾಪಕರು ನೇರವಾಗಿ ಈ ಕ್ಷೇತ್ರಕ್ಕೆ ಧುಮುಕಿಲ್ಲ. ಫ್ಯಾಬ್‌ ಮಾರ್ಟ್‌ ಮತ್ತು ಫ್ಯಾಬ್‌ಮಾಲ್‌ ಎಂಬ ಹೆಸರಿನ ಸೂಪರ್‌ಮಾರ್ಕೆಟ್‌ಗಳನ್ನು ಕ್ರಮವಾಗಿ 1999 ಮತ್ತು 2000 ಇಸವಿಯಲ್ಲಿ ಆರಂಭಿಸಿದ್ದರು. ‘2004ರ ವೇಳೆಗೆ ಒಟ್ಟು 140ರಿಂದ 150ರ ವರೆಗೆ ಶಾಖೆಗಳು   ಇದ್ದವು. 2006ರ ವೇಳೆಗೆ ದಕ್ಷಿಣ ಭಾರತದಲ್ಲಿ ಮಾತ್ರ ಶಾಖೆಗಳ ಸಂಖ್ಯೆ 204ಕ್ಕೆ ಹೆಚ್ಚಿತು. ಆ ಬಳಿಕ ಇದನ್ನು ಆದಿತ್ಯ ಬಿರ್ಲಾ ಸಮೂಹ ಕೊಂಡುಕೊಂಡಿತು. ಇದೀಗ ಈ ಸೂಪರ್‌ಮಾರ್ಕೆಟ್‌ಗಳಿಗೆ ‘ಮೋರ್‌’ ಎಂಬ ಹೆಸರು ಇಡಲಾಗಿದೆ’ ಎಂಬುದು ಬಿಗ್‌ಬ್ಯಾಸ್ಕೆಟ್‌ನ ಸಹ ಸ್ಥಾಪಕ ಹರಿ ಮೆನನ್‌ ಅವರ ಹೇಳಿಕೆ.

ಫ್ಯಾಬ್‌ ಮಾರ್ಟ್‌ನ ಸ್ಥಾಪಕರು 2011 ರಲ್ಲಿ ಬೆಂಗಳೂರಿನಲ್ಲಿ ಬಿಗ್‌ಬ್ಯಾಸ್ಕೆಟ್‌ ಎಂಬ ಆನ್‌ಲೈನ್‌ ದಿನಸಿ ಶಾಪಿಂಗ್‌ ಸೇವೆ ಆರಂಭಿಸಿದ್ದಾರೆ. ‘2012ರ ವೇಳೆ ಏಳು ನಗರಗಳಲ್ಲಿ ನಮ್ಮದೇ ಆದ ಗೋದಾಮುಗಳನ್ನು  ಹೊಂದಿದ್ದೆವು. ನಮ್ಮದೇ ದಾಸ್ತಾನು ಹೊಂದಿದ್ದ ಕಾರಣ ದಿನಸಿ ವಸ್ತುಗಳಿಗಾಗಿ ಇತರ ಸೂಪರ್‌ಮಾರ್ಕೆಟ್‌ಗಳನ್ನು ಅವಲಂಬಿಸುವ ಅಗತ್ಯ ಇರಲಿಲ್ಲ’ ಎಂದು ಮೆನನ್‌ ತಮ್ಮ ಕಂಪೆನಿಯ ಬಗ್ಗೆ ವಿವರಿಸುತ್ತಾರೆ. ಬಿಗ್‌ಬ್ಯಾಸ್ಕೆಟ್‌ ‘ಫ್ರೆಶೊ’ ಹೆಸರಿನ ಬ್ರ್ಯಾಂಡ್‌ನಡಿ ತನ್ನದೇ ಆದ ದಿನಸಿ ಸಾಮಗ್ರಿಗಳನ್ನು ಗ್ರಾಹಕರಿಗೆ ನೀಡುತ್ತಿದೆ.

ಮಾಂಸ, ಕಾಫಿ, ಬ್ರೆಡ್‌, ಪಾನಿಪುರಿ ಅಲ್ಲದೆ ಚೊಕ್ಕಾಗಿ ಹೆಚ್ಚಿಟ್ಟ ಶುದ್ಧ ತರಕಾರಿ  ಕೂಡ ಈ ಬ್ರ್ಯಾಂಡ್‌ನಡಿ ಲಭ್ಯ. ಬಿಗ್‌ಬ್ಯಾಸ್ಕೆಟ್‌, ಸರಕುಗಳನ್ನು ವಿತರಿಸಲು ನಾಲ್ಕು ಕ್ರಮಗಳನ್ನು ಅನುಸರಿಸುತ್ತಿದೆ. ಪೂರ್ಣ ರೀತಿಯ ಸೇವೆ, ಒಂದು ಗಂಟೆಯೊಳಗಿನ ಎಕ್ಸ್‌ಪ್ರೆಸ್‌ ಸೇವೆ, ಸ್ಪೆಶಾಲಿಟಿ ಸ್ಟೋರ್‌ ಮತ್ತು ಎರಡನೇ ಹಂತದ ನಗರಗಳಲ್ಲಿರುವ ಗ್ರಾಹಕರಿಗೆ ಸೇವೆ ನೀಡುವುದು. ಪೂರ್ಣಾವಧಿ ಸೇವೆ ಪ್ರಸಕ್ತ ಬೆಂಗಳೂರು ಸೇರಿದಂತೆ ದೇಶದ ಎಂಟು ನಗರಗಳಲ್ಲಿ ಲಭ್ಯ.  ಇದನ್ನೇ ಸಾಮಾನ್ಯ ಜನರ ಮಾತಿನಲ್ಲಿ ‘ತಿಂಗಳ ಶಾಪಿಂಗ್‌’ ಎನ್ನಬಹುದು.

ಒಂದು ಗಂಟೆಯೊಳಗೆ ವಸ್ತುಗಳನ್ನು ಮನೆಗೆ ತಲುಪಿಸುವ ‘ಎಕ್ಸ್‌ಪ್ರೆಸ್‌ ಡೆಲಿವರಿ’ ಗುಡಗಾಂವ್‌ನಲ್ಲಿ ಮಾತ್ರ ಲಭ್ಯ. ಕೆಲವು ಸಂದರ್ಭಗಳಲ್ಲಿ ಗ್ರಾಹಕರಿಗೆ ತುರ್ತಾಗಿ ಕೆಲವು ವಸ್ತುಗಳ ಅಗತ್ಯವಿರುತ್ತದೆ. ಆನ್‌ಲೈನ್‌ನಲ್ಲಿ ಬೇಡಿಕೆಯಿಟ್ಟ ಒಂದು ಗಂಟೆಯೊಳಗೆ ಆ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ‘ಎಕ್ಸ್‌ಪ್ರೆಸ್‌ ಡೆಲಿವರಿ ಸೇವೆಯನ್ನು ಈ ವರ್ಷದ ಕೊನೆಯೊಳಗೆ ಎಲ್ಲ ಎಂಟು ನಗರಗಳಲ್ಲಿ ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿ’ ಎಂದು ಮೆನನ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ನಮ್ಮ ಸೇವೆ ಈಗ ಬೆಂಗಳೂರು, ಮುಂಬೈ, ದೆಹಲಿ ಮತ್ತು ಚೆನ್ನೈ ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯ. ಇದನ್ನು ಎರಡನೇ ಹಂತದ ನಗರಗಳಿಗೆ ವಿಸ್ತರಿಸಲು ಬಯಸಿದ್ದೇವೆ. ಈ ವರ್ಷದ ಕೊನೆಯೊಳಗೆ 20 ನಗರಗಳಿಗೆ ವಿಸ್ತರಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಭವಿಷ್ಯದ ಯೋಜನೆಗಳ ಬಗ್ಗೆ ಅವರು ವಿವರಿಸಿದ್ದಾರೆ. ಬಿಗ್‌ಬ್ಯಾಸ್ಕೆಟ್‌ಗೆ ಈಗ ಏಳು ಲಕ್ಷ ಗ್ರಾಹಕರಿದ್ದಾರೆ. ಪ್ರತಿದಿನ ಅಂದಾಜು 26,000 ಆರ್ಡರ್‌ಗಳು ದೊರೆಯುತ್ತವೆ. ಕಂಪೆನಿ ಈ ವರ್ಷಾಂತ್ಯಕ್ಕೆ ಒಟ್ಟು ₹1,200 ಕೋಟಿಯ ವಹಿವಾಟು ನಿರೀಕ್ಷಿಸುತ್ತಿದೆ. ಹೋದ ವರ್ಷ ₹ 210 ಕೋಟಿಯ ವಹಿವಾಟು ನಡೆದಿತ್ತು.

ಝಾಪ್‌ನೌ
ಝಾಪ್‌ನೌ ಇ–ದಿನಸಿ ಕಂಪೆನಿ 2012 ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡಿತ್ತು. ಇದೀಗ ಸೇವೆಯನ್ನು ಹೈದರಾಬಾದ್‌, ಪುಣೆ, ಮುಂಬೈ ಮತ್ತು ದೆಹಲಿಗೆ ವಿಸ್ತರಿಸಿದೆ. ‘ಆರಂಭದಲ್ಲಿ ನಾವು ಸರಕುಗಳನ್ನು ದಾಸ್ತಾನು ಇಡಲು ನಮ್ಮದೇ ಆದ ಉಗ್ರಾಣ ಹೊಂದಿದ್ದೆವು. ಹಾಲು, ಗೋಧಿ, ಅಕ್ಕಿ, ಶಾಂಪೂ ಒಳಗೊಂಡಂತೆ ಎಲ್ಲವನ್ನೂ ಖರೀದಿಸಿ ಸಂಗ್ರಹಿಸಿ ಇಡುತ್ತಿದ್ದೆವು. ಆದರೆ 2014ರ ಮಧ್ಯಭಾಗದ ವೇಳೆಗೆ ಇತರ ದಿನಸಿ ಸ್ಟೋರ್‌ ಮತ್ತು ಸೂಪರ್‌ಮಾರ್ಕೆಟ್‌ಗಳಿಂದ ವಸ್ತುಗಳನ್ನು ಕೊಂಡು ಗ್ರಾಹಕರಿಗೆ ನೀಡಲು ಶುರು ಮಾಡಿದೆವು. ಈ ವರ್ಷದ ಆರಂಭದಲ್ಲಿ ನಮ್ಮ ಗೋದಾಮುಗಳನ್ನು ಮುಚ್ಚಿದೆವು.

ಕಳೆದ ಏಳೆಂಟು ತಿಂಗಳುಗಳಿಂದ ಯಾವುದೇ ವಸ್ತುಗಳನ್ನು ದಾಸ್ತಾನು ಮಾಡಿಡದೆಯೇ ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದೇವೆ’ ಎಂಬುದು ಕಂಪೆನಿಯ ಸಹ ಸ್ಥಾಪಕರಲ್ಲೊಬ್ಬರಾದ ಮುಖೇಶ್‌ ಸಿಂಗ್‌ ಹೇಳಿಕೆ. ಝಾಪ್‌ನೌ ಹೈಪರ್‌ಸಿಟಿ ಮತ್ತು ಮೋರ್‌ ಜತೆ ಒಪ್ಪಂದ ಮಾಡಿಕೊಂಡಿದೆ. ಗ್ರಾಹಕರು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡುವ ವಸ್ತುಗಳನ್ನು ಈ ಸೂಪರ್‌ಮಾರ್ಕೆಟ್‌ಗಳಿಂದ ಕೊಂಡುಕೊಂಡು ಅವರವರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಝಾಪ್‌ನೌ ದಿನಸಿ ವಸ್ತುಗಳನ್ನು ಬೆಳಿಗ್ಗೆ 7.00 ರಿಂದ ರಾತ್ರಿ 10.00 ಗಂಟೆಯವರೆಗೂ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತದೆ. ಅಕ್ಕಿ, ತರಕಾರಿ, ಹಾಲು, ಬೆಣ್ಣೆ, ಅಣಬೆ, ಹೂಕೋಸು ಒಳಗೊಂಡಂತೆ ಒಟ್ಟು 3 ಸಾವಿರ ವಸ್ತುಗಳು ಇಲ್ಲಿ ಲಭ್ಯವಿದೆ.

ಪೆಪ್ಪರ್‌ ಟ್ಯಾಪ್‌, ಗ್ರೋಫರ್ಸ್‌
ಪೆಪ್ಪರ್‌ಟ್ಯಾಪ್‌ ಕಂಪೆನಿ 2014ರ ಡಿಸೆಂಬರ್‌ನಲ್ಲಿ ಆರಂಭವಾಯಿತು. ಈ ಕಂಪೆನಿ ಎರಡು ಗಂಟೆಗಳ ಒಳಗಾಗಿ ಗ್ರಾಹಕರ ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ತಲುಪಿಸುತ್ತಿದೆ. ‘ಸ್ಥಳೀಯ 220 ಸ್ಟೋರ್‌ಗಳ ಜತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಗ್ರಾಹಕರು ಆನ್‌ಲೈನ್‌ನಲ್ಲಿ ಬೇಡಿಕೆಯಿಟ್ಟ ತಕ್ಷಣ ನಾವು ಹತ್ತಿರದ ಸ್ಟೋರ್‌ಗೆ ತೆರಳಿ ಆ ಸಾಮಗ್ರಿ ಖರೀದಿಸಿ ಮನೆ ಬಾಗಿಲಿಗೆ ತಲುಪಿಸುತ್ತೇವೆ’ ಎಂದು ಪೆಪ್ಪರ್‌ಟ್ಯಾಪ್‌ನ ಸಹ ಸ್ಥಾಪಕ ಮತ್ತು ಸಿಇಒ ನವನೀತ್‌ ಸಿಂಗ್‌ ತಮ್ಮ ಕಂಪೆನಿಯ ಸೇವೆಯ ಬಗ್ಗೆ ವಿವರಿಸುತ್ತಾರೆ.

‘ನಾವು ನೀಡುವ ದಿನಸಿ ಸಾಮಗ್ರಿಗಳ ಬಗ್ಗೆ ಗ್ರಾಹಕರು ಅತೃಪ್ತಿ ವ್ಯಕ್ತಪಡಿಸಿದರೆ ಮರುಮಾತನಾಡದೆ ಅದನ್ನು ವಾಪಸ್‌ ಕೊಂಡೊಯ್ಯುತ್ತೇವೆ’ ಎನ್ನುತ್ತಾರೆ. ಬೆಂಗಳೂರು ಅಲ್ಲದೆ, ಪುಣೆ, ದೆಹಲಿ, ಹೈದರಾಬಾದ್‌, ಜೈಪುರ, ಚೆನ್ನೈ ಮತ್ತು ಚಂಡೀಗಡದಲ್ಲಿ ಪೆಪ್ಪರ್‌ಟ್ಯಾಪ್‌ ಸೇವೆ ಲಭ್ಯ. 2013 ರಲ್ಲಿ ಸೇವೆ ಆರಂಭಿಸಿರುವ ಮತ್ತೊಂದು ಇ–ದಿನಸಿ ಕಂಪೆನಿ ಗ್ರೋಫರ್ಸ್‌ ಇದೀಗ ದೇಶದ 26 ನಗರಗಳಲ್ಲಿ ತನ್ನ ಸೇವೆ ನೀಡುತ್ತಿದೆ. ಇದು 7000 ವರ್ತಕರ ಜತೆ ಒಪ್ಪಂದ ಮಾಡಿಕೊಂಡಿದೆ. ಗ್ರೋಫರ್ಸ್‌ 90 ನಿಮಿಷಗಳ ಒಳಗಾಗಿ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುತ್ತದೆ.

ಇತರ ಆ್ಯಪ್‌ಗಳು
ಆರಾಮ್‌ ಶಾಪ್‌ (AaramShop), ಗೋದ್ರೆಜ್‌ ನೇಚರ್ಸ್‌ ಬ್ಯಾಸ್ಕೆಟ್‌ (Godrej Nature’s Basket) ಮತ್ತು ಲೋಕಲ್‌ಬನ್ಯಾ (LocalBanya) ಇತರ ಕೆಲವು ಆನ್‌ಲೈನ್‌ ದಿನಸಿ ಶಾಪಿಂಗ್‌ ಆ್ಯಪ್‌ಗಳು. ಮುಂಬೈ ಮೂಲದ ಲೋಕಲ್‌ಬನ್ಯಾ  ಮುಂಬೈ ಅಲ್ಲದೆ, ಹೈದರಾಬಾದ್‌, ಗುಡಗಾಂವ್‌, ದೆಹಲಿ, ನೊಯಿಡಾ, ಗಾಜಿಯಾಬಾದ್‌ ಮತ್ತು ಪುಣೆ ನಗರಗಳಲ್ಲಿ ತನ್ನ ಸೇವೆ ನೀಡುತ್ತಿದೆ. ಇಲ್ಲಿ 14 ಸಾವಿರಕ್ಕೂ ಅಧಿಕ ವಸ್ತುಗಳು ಲಭ್ಯ. ಆನ್‌ಲೈನ್‌ ದಿನಸಿ ಶಾಪಿಂಗ್‌ ತಾಣಗಳಲ್ಲಿ ಹಣ ಪಾವತಿಗೆ ಹಲವು ರೀತಿಯ ಆಯ್ಕೆಗಳಿವೆ. ವಸ್ತುಗಳು ಮನೆಗೆ ತಲುಪಿದ ಬಳಿಕ ಹಣ ನೀಡಬಹುದು (ಕ್ಯಾಷ್‌ ಆನ್‌ ಡೆಲಿವರಿ), ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಮೂಲಕವೂ ಪಾವತಿಸಬಹುದು. ಅಲ್ಲದೆ, ಇತರ ಆನ್‌ಲೈನ್‌ ಪಾವತಿಗೂ ಅವಕಾಶವಿದೆ.

ಸವಾಲು ಸಾಕಷ್ಟಿದೆ
ಆನ್‌ಲೈನ್‌ ದಿನಸಿ ಮಾರುಕಟ್ಟೆಗೆ ಸಾಕಷ್ಟು ಸವಾಲುಗಳು ಇವೆ ಎಂಬುದು ಪೆಪ್ಪರ್‌ಟ್ಯಾಪ್‌ ಸಿಇಒ ನವನೀತ್‌ ಅವರ ಹೇಳಿಕೆ. ‘ಸಾಕಷ್ಟು ಸವಾಲುಗಳು ನಮ್ಮ ಮುಂದಿವೆ. ಏಕೆಂದರೆ ನಾವು ಅಸಂಘಟಿತ ವಲಯದ ಜತೆ ವ್ಯವಹಾರ ನಡೆಸುತ್ತಿದ್ದೇವೆ. ಇ– ದಿನಸಿ ಮಾರುಕಟ್ಟೆ ಬಗ್ಗೆ ಅವರಿಗೆ ಮನದಟ್ಟು ಮಾಡಿಕೊಡುವುದು ಬಲುದೊಡ್ಡ ಸವಾಲು’ ಎಂದಿದ್ದಾರೆ.

‘ಸೇವೆಯನ್ನು ಇನ್ನಷ್ಟು ವಿಸ್ತರಿಸುವುದು ನಮ್ಮ ಗುರಿ. ಆದರೆ ಸರಿಯಾದ ಸಮಯದಲ್ಲಿ ಸೂಕ್ತ ಕೆಲಸಗಾರರು ಸಿಗುವುದು ಕಷ್ಟ. ಪ್ರಸಕ್ತ 50 ಸಾವಿರ ಮಂದಿಗೆ ಉದ್ಯೋಗ ನೀಡಿದ್ದೇವೆ. ಈ ವರ್ಷದ ಕೊನೆಯೊಳಗೆ ಮತ್ತೆ 7,500 ರಿಂದ 8000 ಮಂದಿಯನ್ನು ನೇಮಕ ಮಾಡಿಕೊಳ್ಳಬೇಕಿದೆ’ ಎಂದು ಬಿಗ್‌ಬ್ಯಾಸ್ಕೆಟ್‌ನ ಹರಿ ಮೆನನ್‌ ಹೇಳುತ್ತಾರೆ.

ಈ ಆ್ಯಪ್‌ಗಳನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಬಹುದು
* ಝಾಪ್‌ನೌ 
* ಆರಾಮ್‌ ಶಾಪ್‌ 
* ಗೋದ್ರೆಜ್‌ ನೇಚರ್ಸ್‌  
* ಪೆಪ್ಪರ್‌ ಟ್ಯಾಪ್‌ 
* ಬಿಗ್‌ಬ್ಯಾಸ್ಕೆಟ್‌ 
* ಲೋಕಲ್‌ಬನ್ಯಾ
* ಬ್ಯಾಸ್ಕೆಟ್‌

ಕನ್ನಡಕ್ಕೆ; ಮಹಮ್ಮದ್‌ ನೂಮಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT