ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಹಣ ಪಾವತಿಗೆ ವಿರೋಧ

ದೊಡ್ಡಬಳ್ಳಾಪುರ: ಬೆಂಗಳೂರು ಹಾಲು ಉತ್ಪಾದಕ ಒಕ್ಕೂಟದ ಪ್ರಾದೇಶಿಕ ಸಭೆ
Last Updated 5 ಸೆಪ್ಟೆಂಬರ್ 2015, 11:08 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಹಾಲು ಉತ್ಪಾದಕರಿಗೆ ಆನ್‌ಲೈನ್‌ ಮೂಲಕ ಬ್ಯಾಂಕುಗಳಲ್ಲಿ ಹಣ ಪಾವತಿ ಮಾಡುವುದನ್ನು ಕೈಬಿಡಬೇಕು. ರೈತರು ಬ್ಯಾಂಕುಗಳಲ್ಲಿ ಹಣ ಪಡೆಯಲು ನಗರಕ್ಕೆ ಹೋಗಿ ಬರುವುದರಿಂದ ದಿನದ ಕೆಲಸ ಕೆಡುತ್ತದೆ’ ಎಂದು ಶುಕ್ರವಾರ ನಗರದಲ್ಲಿ ನಡೆದ ಒಕ್ಕೂಟದ ಪ್ರಾದೇಶಿಕ ಸಭೆಯಲ್ಲಿ ಹಾಲು ಉತ್ಪಾದಕರು ಒಕ್ಕೂರಲಿನಿಂದ ಆಗ್ರಹಿಸಿದರು.

ಸಭೆಯಲ್ಲಿ ಮಾತನಾಡಿದ ನಾಗಸಂದ್ರ ಎಂಪಿಸಿಎಸ್‌ ಅಧ್ಯಕ್ಷ ಪ್ರಸನ್ನ, ‘ಎಲ್ಲ ಬೆಲೆಗಳು ಏರಿಕೆಯಾಗುತ್ತಿರುವ ಈ ದಿನಗಳಲ್ಲಿ ಹಾಲಿನ ಬೆಲೆಯನ್ನು ₹ 24 ರಿಂದ ₹21ಕ್ಕೆ ಇಳಿಕೆ ಮಾಡಲಾಗಿದೆ. ಹಾಲಿನಲ್ಲಿ ಎಸ್‌ಎನ್‌ಎಫ್‌ ಪ್ರಮಾಣ ಕಡಿಮೆ ಬಂದಾಗ ದರ ಕಡಿಮೆ ಮಾಡಲಾಗುತಿತ್ತು. ಆದರೆ ಈಗ ದರ ಕಡಿಮೆ ಮಾಡುವುದರ ಜೊತೆಗೆ ರಾಜ್ಯ ಸರ್ಕಾರ ನೀಡುವ ₹4 ಪ್ರೋತ್ಸಾಹ ದನವನ್ನು ಕಡಿತ ಮಾಡುವುದು ಅತ್ಯಂತ ಅವೈಜ್ಞಾನಿಕ ನಿರ್ಧಾರವಾಗಿದ್ದು ₹4 ಪ್ರೋತ್ಸಾಹ ದನವನ್ನು ನೀಡಲೇಬೇಕು ಎಂದರು.

ಕೆಎಂಎಫ್‌ ಪಶು ಆಹಾರದಂತೆ ಹಸುಗಳಿಗೆ ಅಗತ್ಯ ಇರುವ ಹಿಂಡಿ, ಬೂಸವನ್ನು ಒಕ್ಕೂಟದ ವತಿಯಿಂದಲೇ ಮಾರಾಟ ಮಾಡಬೇಕು. ಒಕ್ಕೂಟದ  ಲಾಭ ಕಡಿಮೆಯಾದಾಗ ಹಾಗೂ ಹಾಲಿನ ಬೆಲೆ ಕಡಿಮೆ ಮಾಡಿದಂತೆ ಒಕ್ಕೂಟದ ಅಧಿಕಾರಿಗಳ ಸಂಬಳವನ್ನು ಕಡಿತ ಮಾಡಬೇಕು ಎಂದು ಆಗ್ರಹಿಸಿದರು.

ಬಚ್ಚಹಳ್ಳಿ ಎಂಪಿಸಿಎಸ್‌ ಕಾರ್ಯದರ್ಶಿ ಸತೀಶ್‌ ಮಾತನಾಡಿ, ಬ್ರಿಟೀಷರ ಆಡಳಿತಲ್ಲಿ ಜಾರಿಗೆ ತರಲಾಗಿದ್ದ ಲೇವಿ ಪದ್ಧತಿಯನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿರುವ ಹಾಲು ಒಕ್ಕೂಟ ಸ್ಥಳೀಯವಾಗಿ ಮಾರಾಟ ಮಾಡುವ ಹಾಲಿನ ಲಾಭದಲ್ಲಿ ಲೇವಿ ಪಡೆಯುವುದು ನಿಲ್ಲಬೇಕು. ನಗರದ ಹಾಲು ಶೀಥಲೀಕರಣ ಘಟಕದಲ್ಲಿ ಹಾಲಿನ ಅಕ್ರಮಗಳು ತಡೆಗೆ ಸಿಸಿ ಟಿವಿ ಆಳವಡಿಸಬೇಕು ಎಂದು ಒತ್ತಾಯಿಸಿದರು.

ಪ್ರಾದೇಶಿಕ ಸೆಭೆಯಲ್ಲಿ ಸಮಯಕ್ಕೆ ಸರಿಯಾಗಿ ಬಾರದ ಹಾಲಿನ ಲಾರಿ, ಹಣ ನೀಡಿ ಕೂಪನ್‌ ಪಡೆದರೂ ಸಮಯಕ್ಕೆ ಸರಿಯಾಗಿ ಬಾರದ ಒಕ್ಕೂಟದ ಪಶುವೈದ್ಯರು ಕಳಪೆ ಸೇವೆ ಮತ್ತಿತರೆ ಸಮಸ್ಯೆಗಳನ್ನು ಒಕ್ಕೂಟದ ಅಧ್ಯಕ್ಷರು, ವ್ಯವಸ್ಥಾಪಕರ ಗಮನಕ್ಕೆ ರೈತರು ತಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬಮುಲ್‌ ನಿರ್ದೇಶಕ ಎಚ್‌.ಅಪ್ಪಯ್ಯಣ್ಣ ಮಾತನಾಡಿ, ಪ್ರಾದೇಶಿಕ ಸಭೆಯಲ್ಲಿ ರೈತರು ನೀಡಿರುವ ಸಲಹೆಗಳ ಬಗ್ಗೆ ಚರ್ಚಿಸಲಾಗುವುದು. ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಕೆ.ರಮೇಶ್‌, ವ್ಯವಸ್ಥಾಪಕ ಡಿ.ಸಿ.ನಾಗರಾಜ್ಯ, ಸಹಕಾರಿ ಯೂನಿಯನ್‌ ನಿರ್ದೇಶಕ ಸುಬ್ಬರಾಯಪ್ಪ, ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷ ಪುಟ್ಟಬಸವರಾಜು, ಟಿಎಪಿಎಂಸಿಎಸ್‌ ನಿರ್ದೇಶಕ ಲಕ್ಷ್ಮೀನಾರಾಯಣ್‌, ಅಶ್ವತ್ಥ್‌ನಾರಾಯಣ್‌, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಕಾರ್ಯದರ್ಶಿ ಎಚ್‌.ನಾರಾಯಣಪ್ಪ ಮತ್ತಿತರರು ಭಾಗವಹಿಸಿದ್ದರು. 

ಹೈನುಗಾರಿಕೆಯಲ್ಲಿ ಆಧುನಿಕ ಯಂತ್ರಗಳ ಬಳಕೆ ಹೆಚ್ಚಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಒಕ್ಕೂಟ ಹಣಕಾಸಿನ ನೆರವು ನೀಡಬೇಕು
ಸಿ.ಡಿ.ಸತ್ಯನಾರಾಯಣಗೌಡ,
ಜಿ.ಪಂ.ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT