ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಆಸ್ತಿ ನೋಂದಣಿಯಲ್ಲೂ ವಂಚನೆ

ಒಂದೇ ಆಸ್ತಿ 8 ಕಡೆ ನೋಂದಾಯಿಸಬಹುದು!
Last Updated 12 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಮತ್ತು ಮೋಸವನ್ನು ತಡೆಯಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆನ್‌ಲೈನ್ ಆಸ್ತಿ ನೋಂದಣಿ ಪದ್ಧತಿಯಲ್ಲಿಯೂ ಮೋಸ ನಡೆಯುತ್ತಿರುವುದು ಈಗ ಬಹಿರಂಗವಾಗಿದೆ.

ಆಸ್ತಿ ನೋಂದಣಿ ದಾಖಲೆಗಳ ಕೋಡ್ ನಂಬರ್‌ಗಳನ್ನು ಬದಲಾಯಿಸಿ ಒಂದೇ ಆಸ್ತಿಯನ್ನು ಬೇರೆ ಬೇರೆ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿ ಮಾಡಿಸುವ ಪರಿಪಾಠ ನಗರದಲ್ಲಿ ಆರಂಭವಾಗಿದೆ. ಆಸ್ತಿ ನೋಂದಣಿಯಾಗಿದ್ದರೂ ಅದೇ ಆಸ್ತಿಯನ್ನು ಇನ್ನೊಬ್ಬರು ನೋಂದಣಿ ಮಾಡಿಸಿಕೊಂಡಿರುವುದು ಪತ್ತೆಯಾಗಿ ಹಲವಾರು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಒಂದೇ ಆಸ್ತಿಯನ್ನು ಇಬ್ಬರಿಗೆ ಮಾರಾಟ ಮಾಡಿ ಇಬ್ಬರಿಗೂ ನೋಂದಣಿ ಮಾಡಿಸಿಕೊಟ್ಟ ಅಧ್ಯಾಪಕರೊಬ್ಬರನ್ನು ರಾಮಮೂರ್ತಿ ನಗರದ ಪೊಲೀಸರು ಬಂಧಿಸಿದ ಘಟನೆಯೂ ನಡೆದಿದೆ.

ಮೊದಲಿನ ಪದ್ಧತಿಯಲ್ಲಿ ಆಸ್ತಿಯನ್ನು ಆಯಾ ಪ್ರದೇಶದ ವ್ಯಾಪ್ತಿಯ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿಯೇ ನೋಂದಣಿ ಮಾಡಬೇಕಾಗಿತ್ತು. ಆದರೆ ಆನ್‌ಲೈನ್ ನೋಂದಣಿ ಪದ್ಧತಿ ಜಾರಿಗೆ ಬಂದ ನಂತರ ಯಾವುದೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿಯೂ ಅಸ್ತಿಯನ್ನು ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಯಿತು.

ಬೆಂಗಳೂರಿನಲ್ಲಿ 43 ಸಬ್ ರಿಜಿಸ್ಟ್ರಾರ್ ಕಚೇರಿಗಳಿವೆ. ಯಾವುದೇ ಕಚೇರಿಯಲ್ಲಿ ಆಸ್ತಿಯೊಂದು ನೋಂದಣಿಯಾದರೆ ಅದರ ವಿವರ ಎಲ್ಲ ಕಚೇರಿಯಲ್ಲಿ ಲಭ್ಯವಾಗುತ್ತದೆ. ಆದರೆ ಇಲ್ಲಿಯೂ ಕೂಡ ಕೋಡ್ ನಂಬರ್‌ಗಳನ್ನು ಬದಲಾಯಿಸಿ ಈ ವ್ಯವಸ್ಥೆಯನ್ನೂ ಬುಡಮೇಲು ಮಾಡುವ ಕೃತ್ಯಗಳು ನಡೆಯುತ್ತಿವೆ. ಇದರಿಂದ ಒಂದೇ ಆಸ್ತಿಯನ್ನು ಕನಿಷ್ಠ 8 ಮಂದಿಗೆ ಮಾರಾಟ ಮಾಡಬಹುದು!

ಜಿಕೆವಿಕೆಯಲ್ಲಿ ಅಧ್ಯಾಪಕರಾಗಿರುವ ಪ್ರೊ.ಎನ್.ಇಂದ್ರಕುಮಾರ್ ಅವರು ರಾಮಮೂರ್ತಿ ನಗರದ ಇಂದ್ರಪ್ರಸ್ಥ ಬಡಾವಣೆಯಲ್ಲಿ ಆಸ್ತಿಯನ್ನು ಹೊಂದಿದ್ದರು. ಅವರು ತಮ್ಮ ಜಾಗದಲ್ಲಿ ಅಪಾರ್ಟ್‌ಮೆಂಟ್ ಕಟ್ಟಿಸಲು ಪದ್ಮಯ್ಯ ವೆಪ್ಪು  ಎಂಬುವವರ ಜತೆ ಜಂಟಿ ಒಪ್ಪಂದ ಮಾಡಿಕೊಂಡರು. ಇದು ಕೆ.ಆರ್.ಪುರಂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿದೆ. ಇಂದ್ರಕುಮಾರ್ ತಮ್ಮ ಹೆಸರಿನಲ್ಲಿದ್ದ 17.08 ಗುಂಟೆ (ಸರ್ವೆ ನಂಬರ್ 44/3) ಭೂಮಿಯನ್ನು ಕೃಷಿಯೇತರ ಬಳಕೆಗಾಗಿ 2008ರಲ್ಲಿ ಬದಲಾವಣೆ ಮಾಡಿಕೊಂಡರು. ನಂತರ 2010ರ ಅಕ್ಟೋಬರ್ 21ರಂದು ಇಂದ್ರಕುಮಾರ್ ಮತ್ತು ಪದ್ಮಯ್ಯ ಅವರು ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡರು.

ಅದರ ಪ್ರಕಾರ ಶೇ 25.5ರಷ್ಟು ಫ್ಲ್ಯಾಟ್‌ಗಳು ಇಂದ್ರಕುಮಾರ್ ಅವರಿಗೆ ಹಾಗೂ ಶೇ 74.5 ರಷ್ಟು ಫ್ಲ್ಯಾಟ್‌ಗಳು ಬಿಲ್ಡರ್‌ಗೆ ಎಂಬ ಷರತ್ತು ವಿಧಿಸಲಾಗಿತ್ತು. ಈ ಒಪ್ಪಂದ ಮತ್ತು ಇಬ್ಬರ ನಡುವೆ ನಡೆದ ಪವರ್ ಆಫ್ ಅಟಾರ್ನಿ ಕೂಡ ಬಾಣಸವಾಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾದವು. ಅದರಂತೆ `ಫಾರ್ಚೂನ್ ಮೇಘ' ಎಂಬ ಅಪಾರ್ಟ್‌ಮೆಂಟ್ ಸಿದ್ಧವಾಯಿತು.

ನಂತರ ಇಂದ್ರಕುಮಾರ್ ತಮ್ಮ ಪಾಲಿಗೆ ಬಂದ ಫ್ಲ್ಯಾಟ್‌ಗಳನ್ನು ಹಾಗೂ ನಿವೇಶನಗಳನ್ನು ಪತ್ನಿ ಉಮಾ ಇಂದ್ರಕುಮಾರ್ ಅವರಿಗೆ ಉಡುಗೊರೆ ಪತ್ರದ (ಗಿಫ್ಟ್ ಡೀಡ್) ರೂಪದಲ್ಲಿ ನೀಡಿದರು. ಇವು ಕೂಡ 26-9-2011ರಂದು ಬಾಣಸವಾಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿವೆ. 2011ರ ನವೆಂಬರ್ 10ರಂದು ಇಂದ್ರಕುಮಾರ್ 108 ನಂಬರಿನ ಫ್ಲ್ಯಾಟನ್ನು ಬಿಂದು ಮಂಜುನಾಥ್ ಅವರಿಗೆ ಮಾರಾಟ ಮಾಡಿದರು. ಇದು ಶಿವಾಜಿನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಯಿತು. ಬಿಂದು ಮಂಜುನಾಥ್ ಅವರು ಈ ಫ್ಲ್ಯಾಟ್‌ನ್ನು ಸೌಮ್ಯ ಶ್ರೀನಿವಾಸ ಎಂಬುವವರಿಗೆ 2012ರಲ್ಲಿ ಮಾರಿದರು. ಅದೂ ಕೂಡ ಶಿವಾಜಿನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿಯೇ ನೋಂದಣಿಯಾಯಿತು.

ಬಿಂದು ಮಂಜುನಾಥ್ ಅವರಿಂದ ಫ್ಲ್ಯಾಟ್ ಖರೀದಿ ಮಾಡಿದ ಸೌಮ್ಯ ಶ್ರೀನಿವಾಸ್ ಅವರು ಫ್ಲ್ಯಾಟ್ ತಮ್ಮ ವಶಕ್ಕೆ ತೆಗೆದುಕೊಳ್ಳಲು ಹೋದಾಗ ಅಲ್ಲಿ ಬೇರೊಬ್ಬರು ವಾಸಿಸುತ್ತಿದ್ದರು. `ನಾನು ಈ ಫ್ಲ್ಯಾಟ್ ಖರೀದಿ ಮಾಡಿದ್ದೇನೆ. ನೀವು ಖಾಲಿ ಮಾಡಿ' ಎಂದು ಸೌಮ್ಯ ಹೇಳಿದಾಗ ಮನೆಯಲ್ಲಿದ್ದವರು, `ಇದನ್ನು ನಮಗೆ ಉಮಾ ಇಂದ್ರಕುಮಾರ್ ಅವರು ಬಾಡಿಗೆಗೆ ನೀಡಿದ್ದಾರೆ. ನೀವು ಅವರನ್ನೇ ಕೇಳಿ' ಎಂದು ಕಳುಹಿಸಿದರು. ಈ ಬಗ್ಗೆ ಸೌಮ್ಯ ಮತ್ತು ಬಿಂದು ಮಂಜುನಾಥ್ ಅವರು ಉಮಾ ಇಂದ್ರಕುಮಾರ್ ಅವರನ್ನು ಪ್ರಶ್ನೆ ಮಾಡಿದಾಗ, ಈ ಫ್ಲ್ಯಾಟನ್ನು ತಮ್ಮ ಪತಿ ಉಡುಗೊರೆ ನೀಡಿದ್ದು ತಾವು ಅದನ್ನು ಬಾಡಿಗೆಗೆ ಕೊಟ್ಟಿರುವುದರಿಂದ ಅದರ ತಂಟೆಗೆ ಯಾವುದೇ ಕಾರಣಕ್ಕೂ ಬರಬಾರದು ಎಂದು ತಿಳಿಸಿದರು. ಅಲ್ಲದೆ ಹೆಚ್ಚಿನ ವಾದ ಏನಾದರೂ ಇದ್ದರೆ ನಾಗರಾಜ ರೆಡ್ಡಿ ಎಂಬುವವರ ಜೊತೆ ಮಾತನಾಡಿ ಎಂದು ಅವರ ದೂರವಾಣಿ ಸಂಖ್ಯೆ ನೀಡಿದರು.

ನಾಗರಾಜ ರೆಡ್ಡಿ ಯಾರು ಮತ್ತು ಅವರ ಜೊತೆ ಯಾಕೆ ಮಾತನಾಡಬೇಕು ಎನ್ನುವುದಕ್ಕೆ ಅವರು ವಿವರಣೆ ನೀಡಲೇ ಇಲ್ಲ.
ಈ ನಡುವೆ ಇಂದ್ರಕುಮಾರ್ ಅವರು ಇದೇ 108 ನಂಬರಿನ ಫ್ಲ್ಯಾಟ್‌ನ್ನು ರಾಘವೇಂದ್ರ ಎಂಬುವವರಿಗೆ ಮಾರಾಟ ಮಾಡಿದರು. ಅದು 4-9-2012ರಲ್ಲಿ ಬಾಣಸವಾಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿದೆ.

ಇದಲ್ಲದೆ ಇಂದ್ರಕುಮಾರ್ ಅವರು ಫ್ಲ್ಯಾಟ್ ನಂಬರ್ 308ರನ್ನು ರಕ್ಷಿತ್ ಭಾಸ್ಕರ್ ಮತ್ತು ಮನ್ಸೂರ್ ಸಲೀಮ್ ಎನ್ನುವವರಿಗೆ ಮಾರಿದರು. ಅದನ್ನು  2011ರ ನವೆಂಬರ್ 10ರಂದು ಶಿವಾಜಿನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಟ್ಟರು. ರಕ್ಷಿತ್ ಭಾಸ್ಕರ್ ಮತ್ತು ಮನ್ಸೂರ್ ಸಲೀಮ್ ಅವರು ಈ ಫ್ಲ್ಯಾಟನ್ನು ಶ್ರೀನಿವಾಸ ರಾಮಮೂರ್ತಿ ಅವರಿಗೆ ಮಾರಾಟ ಮಾಡಿದರು. ಅದು 2012ರ ಮಾರ್ಚ್ 30ರಂದು ಶಿವಾಜಿನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿದೆ. ಶ್ರೀನಿವಾಸ್ ಅವರು ಫ್ಲ್ಯಾಟನ್ನು ತಮ್ಮ ವಶಕ್ಕೆ ಪಡೆಯಲು ಫಾರ್ಚೂನ್ ಮೇಘಾ ಅಪಾರ್ಟ್‌ಮೆಂಟ್‌ಗೆ ಹೋದಾಗ ಅಲ್ಲಿ ಮತ್ತೊಬ್ಬರು ವಾಸವಾಗಿದ್ದರು. ಈ ಫ್ಲ್ಯಾಟ್‌ನ್ನೂ ಇಂದ್ರಕುಮಾರ್ ಅವರು ಉಮಾ ಅವರಿಗೆ ಗಿಫ್ಟ್ ಡೀಡ್ ಮಾಡಿದ್ದರು. ಸೌಮ್ಯ ಅವರನ್ನು ಬೆದರಿಸಿದಂತೆ ಶ್ರೀನಿವಾಸ ಅವರನ್ನೂ ಉಮಾ ಬೆದರಿಸಿ ನಾಗರಾಜ್ ರೆಡ್ಡಿಯ ದೂರವಾಣಿ ಸಂಖ್ಯೆ ಕೊಟ್ಟರು.

ಸೌಮ್ಯ ಹಾಗೂ ಶ್ರೀನಿವಾಸ್ ಅವರು ಈ ಬಗ್ಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಂದ್ರಕುಮಾರ್ ಅವರನ್ನು ಬಂಧಿಸಿದರು. ಅವರು ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಉಮಾ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಪೊಲೀಸರು ಇನ್ನೂ ವಿಚಾರಣೆ ನಡೆಸುತ್ತಲೇ ಇದ್ದಾರೆ. ಸೌಮ್ಯ ಮತ್ತು ಶ್ರೀನಿವಾಸ್ ಅವರು `ಅತ್ತ ಹಣವೂ ಇಲ್ಲದೆ ಇತ್ತ ಫ್ಲ್ಯಾಟೂ ಇಲ್ಲದೆ' ಕಂಗಾಲಾಗಿದ್ದಾರೆ.

`ಸಾಲ ಮಾಡಿ ಫ್ಲ್ಯಾಟ್ ಖರೀದಿ ಮಾಡಿದರೆ ಹೀಗೆ ಆಗಿದೆ. ತನಿಖೆ ಪೂರ್ಣಗೊಳಿಸಿ ಎಂದು ಪೊಲೀಸ್ ಆಯಕ್ತರಿಗೂ ಮನವಿ ಮಾಡಿದ್ದೇವೆ. ಈ ರೀತಿ ಆನ್‌ಲೈನ್ ನೋಂದಣಿಯಲ್ಲಿ ಇನ್ನಷ್ಟು ಪ್ರಕರಣಗಳು ಆಗಿರಬಹುದು. ಎಲ್ಲದರ ಬಗ್ಗೆ ತನಿಖೆ ನಡೆಸಬೇಕು ಎಂದೂ ಕೇಳಿಕೊಂಡಿದ್ದೇವೆ' ಎಂದು ಸೌಮ್ಯ ಮತ್ತು ಶ್ರೀನಿವಾಸ್ ಹೇಳುತ್ತಾರೆ.

`ಆನ್‌ಲೈನ್ ನೋಂದಣಿಯಲ್ಲಿ ಇದು ಸಾಧ್ಯವೇ ಇಲ್ಲ. ಯಾವುದೇ ಆಸ್ತಿ ನೋಂದಣಿಯಾದರೆ ಅದರ ಮಾಹಿತಿ ಇತರ ಸಬ್ ರಿಜಿಸ್ಟ್ರಾರ್ ಅವರಿಗೂ ಗೊತ್ತಾಗುತ್ತದೆ. ಆದರೂ ಯಾವುದಾದರೂ ತಂತ್ರ ಬಳಸಿ ಮೋಸ ನಡೆದಿದ್ದು ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಲತಾ ಕೃಷ್ಣರಾವ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT