ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ತ ಸಮಾಲೋಚನೆ ಒಂದು ನೋಟ

Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ಆಧುನಿಕ ಜೀವನದಲ್ಲಿ ಎಲ್ಲವೂ ಫಾಸ್ಟ್, ಯಾರಿಗೂ ಯಾವುದಕ್ಕೂ ವ್ಯವಧಾನವಿರುವುದಿಲ್ಲ. ಎಲ್ಲವನ್ನೂ ಮುಗಿಸಿಬಿಡಬೇಕೆಂಬ ತವಕ. ಹಾಗಾಗಿ ಸದಾ ಮನದಲ್ಲಿ ಆತಂಕ ಮನೆ ಮಾಡಿಯೇ ಇರುತ್ತದೆ. ಏಕೆ ಹೀಗೆ? ಹಿಂದೆ ಹೀಗಿರುತ್ತಿರಲಿಲ್ಲವೇ? ಈಗೇಕೆ ಇಷ್ಟೊಂದು ಗಡಿಬಿಡಿ, ರಸ್ತೆಯಲ್ಲಿ ವಾಹನವನ್ನು ಚಲಿಸುವುದರಿಂದ ಹಿಡಿದು ಬಾಲ್ಯದಲ್ಲಿ ಆನಂದವಾಗಿರಬೇಕಾದ ಮಕ್ಕಳಲ್ಲೂ ನಿರಾಳವಿಲ್ಲ.

ನಮ್ಮ ಬಾಲ್ಯವನ್ನು ನೆನೆಸಿಕೊಂಡಾಗ ನಾವು ಶಾಲೆಗೆ ನಡೆದೇ ಹೋಗುತ್ತಿದ್ದೆವು. ಶಾಲೆಯಿಂದ ಬಂದು ಸ್ವಲ್ಪ ಹೊತ್ತು ಆಟವಾಡಿ ಕತ್ತಲಾಗುವ ಹೊತ್ತಿಗೆ ಮನೆಗೆ ಬಂದು ಓದಲು ಕುಳಿತುಕೊಳ್ಳುತ್ತಿದ್ದೆವು. ಅನೇಕ ಬಾರಿ ಅಮ್ಮನ ಕೆಲಸದಲ್ಲಿ ಸಹಾಯ ಮಾಡಿದ್ದೂ ಉಂಟು. ಈಗ ಜೀವನದ ಚಿತ್ರಣವೇ ಬದಲಾಗಿದೆ. ನಾವೆಲ್ಲಾ ಒಟ್ಟಿಗೆ ಕುಳಿತು ಸಂತಸದಿಂದ ಮಾಡುತ್ತಿದ್ದ ಊಟ ಮರೆಯಾಗಿದೆ ಎಲ್ಲರೂ ತಟ್ಟೆಗಳನ್ನು ಕೈನಲ್ಲಿಟ್ಟುಕೊಂಡು ಟಿ.ವಿ.ಯ ಮುಂದೆ ಕೂರುತ್ತಾರೆ.

ಪರಸ್ಪರ ಮಾತುಕತೆಗೆ ಅವಕಾಶವೇ ಇಲ್ಲ. ಹಬ್ಬಗಳ ಆಚರಣೆ ಸಂಪ್ರದಾಯದೊಂದಿಗೆ ಎಲ್ಲರನ್ನೂ ಒಂದುಗೂಡಿಸುವ ಸಾಧನವಾಗಿತ್ತು. ಈಗ ಹಬ್ಬಕ್ಕೆ ರಜ ಬಂದಿತೆಂದರೆ ಚಿಕ್ಕದೊಂದು ಪ್ರವಾಸ ಸಿದ್ಧವಾಗಿಯೇ ಇರುತ್ತದೆ. ಕೈಲಾಗದ ಅಥವಾ ಬೇಡವಾದ ವಯಸ್ಸಾದವರು ಮಾತ್ರವೇ ಮನೆಯಲ್ಲಿದ್ದು ಹಬ್ಬ ಆಚರಿಸ ಬೇಕು. ಹಬ್ಬಗಳ ಮೂಲ ಉದ್ದೇಶವೇ ಇಲ್ಲಿ ಮರೆಯಾಗಿ ಬಿಡುತ್ತದೆ.

ಒಟ್ಟಿನಲ್ಲಿ ಮಾನವೀಯ ಸಂಬಂಧಗಳು ಕ್ಷೀಣವಾಗುತ್ತಿವೆ. ಮನಸಿನ ತಲ್ಲಣಗಳನ್ನು ಹೇಳಿಕೊಳ್ಳುವ ತವಕವಿದ್ದರೂ ಯಾರೂ ಹತ್ತಿರದವರೆನಿಸುವುದಿಲ್ಲ. ಹಿಂದೆ ಅವಿಭಕ್ತ ಕುಟುಂಬಗಳಲ್ಲಿದ್ದ ಅಷ್ಟೊಂದು ಜನರಲ್ಲಿ ಮನಸ್ಸಿಗೆ ಆಪ್ತರಾದವರೊಬ್ಬರಿರುತ್ತಿದ್ದರು. ಆದರೆ ಈಗಿನ ಕುಟುಂಬದ ಪರಿಭಾಷೆ ಬದಲಾಗಿದೆ. ಗಂಡ ಹೆಂಡತಿಯರಿಬ್ಬರೂ ಕೆಲಸಕ್ಕೆ ಹೋದರೆ ಅವರ ಮಕ್ಕಳಿಗೆ ನೀಡುವುದಕ್ಕೇ ಅವರಿಗೆ ಸಮಯವಿರುವುದಿಲ್ಲ ಇನ್ನು ಮನೆಯಲ್ಲಿರುವ ಹಿರಿಯರ ಕತೆಗಳನ್ನು ಕೇಳುವವರಾದರೂ ಯಾರು? ಪರಿಣಾಮ ಖಿನ್ನತೆ ಹೆಚ್ಚಾಗುತ್ತಿದೆ.

ಆಧುನಿಕ ಯುಗದಲ್ಲಿ ತಾಂತ್ರಿಕ ಸೌಲಭ್ಯಗಳು ಹೆಚ್ಚಾಗಿದ್ದರೂ ಮನಸ್ಸು ಸೂಕ್ಷ್ಮವಾಗುತ್ತಿದೆ. ಹಾಗಾದರೆ ತಮ್ಮ ಮನಸಿನ ತವಕ ತಲ್ಲಣಗಳನ್ನು ಹೇಳಿಕೊಳ್ಳುವುದಾದರೂ ಯಾರಲ್ಲಿ ಎನ್ನುವ ಪ್ರಶ್ನೆ ಮೂಡುತ್ತದೆ. ಇಂತಹ ಸಮಯಗಳಲ್ಲಿ ನೆನಪಾಗುವುದು ಆಪ್ತ ಸಮಾಲೋಚಕರು. 

ನಮ್ಮ ದೇಶದಲ್ಲಿ ಎಲ್ಲಕ್ಕೂ ಕೊರತೆ ಇರುವಂತೆ ಮನೋವೈದ್ಯರ ಕೊರತೆಯೂ ಸಾಕಷ್ಟಿದೆ. ನಮ್ಮ ದೇಶದಲ್ಲಿ ಕೇವಲ ನಾಲ್ಕು ಸಾವಿರ ಮನೋವೈದ್ಯರಿದ್ದಾರೆ. ಒಂದು ಲಕ್ಷ ಮನೋವೈದ್ಯರ ಕೊರತೆಯನ್ನು ನಮ್ಮ ದೇಶ ಅನುಭವಿಸುತ್ತಿದೆ. 1987ರ ಮಾನಸಿಕ ಕಾಯಿಲೆ ಕಾಯ್ದೆ ಪ್ರಕಾರ ಮಾನಸಿಕ ಆರೋಗ್ಯ ಪ್ರಜೆಗಳ ಹಕ್ಕು. ಆದರೆ  ಅವರಿಗೆ ಅಗತ್ಯವಾದ ಚಿಕಿತ್ಸೆ ಸುಲಭವಾಗಿ ದೊರಕುತ್ತಿಲ್ಲ, ಎಲ್ಲರಿಗೂ ತಲುಪುತ್ತಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಸರಿ. ಖಾಸಗಿ ಚಿಕಿತ್ಸಾಲಯಗಳಲ್ಲಿ ದುಬಾರಿ, ಜೊತೆಗೆ ಅನೇಕ ಬಾರಿ ಎಲ್ಲಿಗೆ ಹೋಗಬೇಕೆನ್ನುವ ವಿಷಯ ಸಹಾ ಗೊತ್ತಿರುವುದಿಲ್ಲ.

ಮಾನವ ಸಂಬಂಧಗಳು ಕ್ಷೀಣಿಸುತ್ತಿವೆ. ಕುಟುಂಬದಿಂದ ಸಿಗಬೇಕಾದ ಮಾನಸಿಕ ರಕ್ಷಣೆ ದೊರಕುತ್ತಿಲ್ಲ, ಆದರೆ ಎಲ್ಲಕ್ಕೂ ಮನಃಶಾಸ್ರಜ್ಞರ ಹತ್ತಿರವೇ ಹೋಗಬೇಕಾಗಿಲ್ಲ ಆಪ್ತ ಸಮಾಲೋಚನೆಯಿಂದಲೇ ಬಹಳಷ್ಟು ಸಮಸ್ಯೆಗಳ ಪರಿಹಾರವಾಗುತ್ತದೆ. ಆದ್ದರಿಂದ ಮಾನಸಿಕ ವೈದ್ಯರ ಕೊರತೆಯನ್ನು ಆಪ್ತ ಸಲಹಾ ಕೇಂದ್ರಗಳು ನೀಗಿಸಬಹುದು.

ಆಪ್ತ ಸಮಾಲೋಚಕರಾಗಲು..
ಮೊದಲಿಗೆ ಆಪ್ತ ಸಮಾಲೋಚಕರಾಗುವವರು ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ. ನಿಮ್ಮ ಹತ್ತಿರ ಬಂದವರು ತಮ್ಮೆಲ್ಲಾ ಸಮಸ್ಯೆಗಳನ್ನು ಹೇಳಿಕೊಂಡಾಗ ಅದು ನಿಮ್ಮಲ್ಲಿಯೇ ಇರಬೇಕಷ್ಟೆ ಹೊರತು ಅದನ್ನು ನಿಮ್ಮ ಚರ್ಚೆಯ ವಿಷಯವಾಗಿ ಬಳಸಬಾರದು.
ಆಪ್ತ ಸಮಾಲೋಚಕರಾಗುವವರಲ್ಲಿ ಕೇಳಿಸಿಕೊಳ್ಳುವ ಅನುಭೂತಿ ಇರಬೇಕು. ಅನೇಕ ಬಾರಿ ತಮ್ಮ ಕಷ್ಟಗಳನ್ನು ಹೇಳಿಕೊಂಡಾಗಲೇ ಅವರ ಮನಸು ಅರ್ಧ ಹಗುರಾಗುತ್ತದೆ. ನೀವು ಅವರಿಗೆ ಹೇಳುವುದಕ್ಕಿಂತ ಕೇಳಿಸಿಕೊಳ್ಳುವುದು ಹೆಚ್ಚಾಗಿರಬೇಕು.

ಯಾರ ಬಗ್ಗೆಯೂ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಸಲಹೆಗಳನ್ನು ನೀಡುವ ಅಗತ್ಯವಿಲ್ಲ. ಅವರೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕರಿಸಬೇಕಷ್ಟೇ ಹೊರತು ಅವರ ಮೇಲೆ ನಿಮ್ಮ ಅಭಿಪ್ರಾಯಗಳನ್ನು ಹೇರುವ ಅಗತ್ಯವಿಲ್ಲ. ಎಲ್ಲವನ್ನೂ ನಾನೇ ಮಾಡುತ್ತೇನೆಂಬ ಭಾವನೆ ಬೇಡ. ಅಗತ್ಯವೆನಿಸಿದಾಗ ವೈದ್ಯಕೀಯ ಸಲಹೆಗಾಗಿ ಸೂಕ್ತ ವೈದ್ಯರ ಹತ್ತಿರ ಕಳುಹಿಸಬೇಕಾಗುತ್ತದೆ. ಬೆಂಗಳೂರು ನಗರದಲ್ಲಿ ಸಾಕಷ್ಟು ಆಪ್ತಸಮಾಲೋಚನಾ ಕೇಂದ್ರಗಳಿವೆ. ಅಲ್ಲಿ ಆಗಾಗ ತರಬೇತಿ ಶಿಬಿರಗಳು ನಡೆಯುತ್ತವೆ.

ಉದ್ಯೋಗಾವಕಾಶ
ಈಗ ಸಾಫ್ಟ್‌ವೇರ್ ಕಂಪೆನಿಗಳಿಂದ ಹಿಡಿದು ಶಾಲಾ ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ, ಚಿಕಿತ್ಸಾಲಯಗಳಲ್ಲಿ, ಎನ್.ಜಿ.ಒ.ಗಳಲ್ಲಿ, ಮಾದಕ ವ್ಯಸನಿಗಳ ಮತ್ತು ಏಡ್ಸ್ ಸಲಹಾ ಕೇಂದ್ರಗಳಲ್ಲಿ, ಆಪ್ತ ಸಮಾಲೋಚಕರ ಅಗತ್ಯವಿರುವುದರಿಂದ ಒಳ್ಳೆಯ ಉದ್ಯೋಗಾವಕಾಶಗಳಿವೆ.

ಇವುಗಳಲ್ಲದೆ ಪ್ರತ್ಯೇಕವಾಗಿ ಸಲಹಾ ಕೇಂದ್ರಗಳನ್ನು ತೆರೆಯಬಹುದು. ಇಲ್ಲಿ ಬಹಳಷ್ಟು ವಿಭಾಗಗಳಿವೆ. ಉದ್ಯೋಗ, ಮದುವೆ, ಮಕ್ಕಳ ಮಾನಸಿಕ ಸಮಸ್ಯೆಗಳು ಈ ರೀತಿ ಒಂದೇ ಎರಡೇ, ನಿಮಗೆ ಆಸಕ್ತಿ ಇರುವ ವಿಭಾಗವನ್ನು ಆರಿಸಿಕೊಳ್ಳಬಹುದು. ಅಂತರ್ಜಾಲದಲ್ಲೂ ಬೇರೆಲ್ಲಾ ವಿಷಯಗಳಿಗೆ ಅವಕಾಶವಿದ್ದಂತೆ ಆಪ್ತ ಸಮಾಲೋಚಕರಿಗೂ ಅವಕಾಶ ವಿಫುಲವಾಗಿದೆ. ಉದ್ಯೋಗದ ಹಾದಿಯಲ್ಲಿ, ಸಂದರ್ಶನ ಎದುರಿಸುವುದರಿಂದ ಹಿಡಿದು ಉದ್ಯೋಗ ಆರಿಸಿ ಕೊಳ್ಳುವ ತನಕ ಸಹಕಾರ ದೊರಕುತ್ತದೆ. ಇಂದಿನ ಹುಚ್ಚು ಕುದುರೆಯ ಓಟದ ಸ್ಪರ್ಧಾ ಯುಗದಲ್ಲಿ ಎಷ್ಟು ಸಾಧಿಸಿದರೂ ಕಡಿಮೆ, ಅಂತೆಯೇ ಮಾನಸಿಕ ಒತ್ತಡವೂ ಹೆಚ್ಚುತ್ತದೆ, ಇಂತಹ ಸಂದರ್ಭಗಳಲ್ಲಿ ಆಪ್ತ ಸಮಾಲೋಚಕರು ನಿಮ್ಮ ಖಿನ್ನತೆಯನ್ನು ದೂರಮಾಡಲು ಸಹಕಾರ ನೀಡಬಹುದು.

ಅರ್ಹತೆ...
ಯಾವುದೇ ಕೋರ್ಸಿಗಾದರೂ ಇರುವಂತೆ ಕನಿಷ್ಟ ಪದವಿ ಅಗತ್ಯ. ಸೈಕಾಲಜಿಯ ಹಿನ್ನಲೆ ಇದ್ದಲ್ಲಿ ಮಾನವ ಸ್ವಭಾವಗಳನ್ನು ಅರ್ಥೈಸುವುದು ಸುಲಭವಾಗಬಹುದು. ಯಾವುದೇ ಪದವಿ ಅರ್ಹತೆಗಳಿಗಿಂತ ಕೌನ್ಸಿಲರ್ಸ್ ಮಾನಸಿಕವಾಗಿ ಸಬಲರಾಗಿರಬೇಕಾಗಿರುವುದು ಅಗತ್ಯ.  ಮುಖ್ಯವಾಗಿ ಸಂವೇದನಾಶೀಲರಾಗಿರಬೇಕು. ಅನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಸಮಸ್ಯೆಗಳನ್ನು ಆಲಿಸುವ ಸಹನೆ ಇದ್ದು, ಅದನ್ನು ಅರ್ಥಮಾಡಿಕೊಳ್ಳುವ ಅನುಭೂತಿ ಮುಖ್ಯವಾದುದು. ನಿಮ್ಮ ಆಲಿಕೆಯೇ ಅವರ ಸಮಸ್ಯೆಗೆ ಬಹಳಷ್ಟು ಪರಿಹಾರವಾಗಬಹುದು. ಈ ಒತ್ತಡದ ಜೀವನದಲ್ಲಿ ನೊಂದವರ ಕಣ್ಣೊರೆಸುವ ಕೆಲಸ ನಿಮ್ಮದಾಗಬಹುದು.

ಆಪ್ತಸಲಹಾ ಕೌಶಲ ಕಲಿಯಲು ...
ಪ್ರಸನ್ನ ಆಪ್ತ ಸಲಹಾ ಕೇಂದ್ರ, ಮಲ್ಲೇಶ್ವರ ಶಾಖೆಯು ಪ್ರತಿ ವರ್ಷದಂತೆ ಈ ವರ್ಷವೂ ಆಪ್ತ ಸಲಹಾ ಕೋರ್ಸ್ ಅನ್ನು ಜುಲೈ 20ರಿಂದ ಪ್ರಾರಂಭಿಸಲಿದೆ. ಮಾನಸಿಕ ಒತ್ತಡ, ಖಿನ್ನತೆಗಳನ್ನು ನಿವಾರಿಸಿಕೊಳ್ಳಲು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಈ ತರಬೇತಿ ಬಹಳ ಉಪಯುಕ್ತವಾಗಿರುತ್ತದೆ. ಶಾಲಾ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು, ಗೃಹಿಣಿಯರು ಎಲ್ಲರಿಗೂ ಈ ಕೋರ್ಸಿಗೆ ಸೇರಲು ಅವಕಾಶವಿದೆ. ನಿಮ್ಹಾನ್ಸ್‌ನ ನುರಿತ ವೈದ್ಯರು, ವಿವಿಧ ಸಂಸ್ಥೆಗಳ ಆಪ್ತ ಸಮಾಲೋಚಕರು, ಯೋಗ ಹಾಗೂ ಸಂಗೀತ ಕ್ಷೇತ್ರಗಳ ತಜ್ಞರು ತರಗತಿಗಳನ್ನು ನಡೆಸಿಕೊಡುತ್ತಾರೆ. ಈ ಕೋರ್ಸಿಗೆ ಸೇರಲು ಇಚ್ಚಿಸುವವರು ಈ ಕೆಳಕಂಡ ದೂರವಾಣಿಯ ಮೂಲಕ ಸಂಪರ್ಕಿಸಬಹುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ.
ಅರುಣ ಚೇತನ ಶಾಲೆ ಮಾಹಿತಿಗೆ: 080–23312908.
ಭಾರತಿ-080–23342219

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT